ಕಳೆ.....ಕೀಳುವವರು...!!

ಕಳೆ.....ಕೀಳುವವರು...!!

ಕವನ

     ಮುಂಜಾನೆ  ಫ್ರೆಶ್ ಆಗಿ  ಹೊರಟವನಿಗೆ

     ದಾರಿಯಲಿ  ಪರಿಚಯದ  ಮುಖದ  ಪ್ರಶ್ನೆ....!

     " ಯಾಕೆ ಸೊರಗಿರುವಿರಿ...ಕ್ಷೇಮ ತಾನೆ ?

     ಮನದಲ್ಲೇ ಗೊಣಗುತ್ತಾ.....ಅಂದುಕೊಳ್ಳುತ್ತೇನೆ

     ಇವರು.......

     "ಮುಖದ  ಕಳೆ  ಕೀಳುವವರು !"

     

     ಆ  ದಿನವಿಡೀ ...ಆರೋಗ್ಯದ ಚಿಂತೆಯಲ್ಲೇ...

     ಸೋತ ಮುಖ...ಹೊತ್ತು

     ಮನೆ ಸೇರಿ  ಹೆಂಡತಿಗೆ ಮೊದಲ ಪ್ರಶ್ನೆ..

     "ನಾನು  ಸೊರಗಿದಂತೆ ಕಾಣುವೆನೆ ?"

     ನಲ್ಲೆಯ ಸಾಂತ್ವನದ ಮಾತಿಗೆ ಪುನಃ  ಲವಲವಿಕೆ

     ಇವಳು...

     " ಮನದ  'ಕಳೆ' ಕೀಳುವವಳು

 

      ವಾರದ ಕೊನೆಯವರೆಗೆ  ಗಲ್ಲದ ತುಂಬ ಬೆಳೆದ

      ತಂತಿಯಂತಹ ಗಡ್ಡ...

      ಕ್ಷೌರಿಕನ ಕೈಯಲ್ಲಿ  ಮುಖಕೊಟ್ಟು..!

      ಮನದಲ್ಲೇ ನಸು ನಕ್ಕು ಕುಳಿತು ಬಿಡುತ್ತೇನೆ !

      ಇವನು....

      ಮುಖದ 'ಕಳೆ " ಕೀಳುವವನು

      

      ಜೀವನ ಫಸಲು ಸಮೃದ್ಧವಾಗಲು

      ಬದುಕಿನಲಿ ಕೀಳುತ್ತಿರಬೇಕು...

      ನಮ್ಮ  ಮನದ ಕಳೆ ,ಮುಖದ ಕೊಳೆ

      ಇನ್ನೊಬ್ಬರ ಮನದ ಕೊಳೆ....ಆದರೆ ಮುಖದ ಕಳೆಯನ್ನಲ್ಲ..!!

     

     

    

 

Comments