ವ್ಯಾಲಂಟೈನ್ಸ್ ಡೇ
.. ಪ್ರೇಮ ಜ್ವರ, ಯಾವುದೇ ಹಬ್ಬಕ್ಕೆ ಇಲ್ಲದ ಖರೀದಿ ಭರಾಟೆ ವ್ಯಾಲಂಟೈನ್ಸ್ ಡೇ ಗೆ.ಇದು ವಿಶ್ವವ್ಯಾಪಿ. ಓಹ್ ಫೆಬ್ರವರಿ ಈಸ್ "ಮಂತ್ ಆಫ್ ಲವ್" ಅಂದಳು, ನನ್ನ ಕಾಲೇಜಿನ ಓರ್ವ ಹುಡುಗಿ.
ಈ ಪ್ರೇಮಿಗಳ ದಿನ ಉತ್ತರ ಕೊರಿಯಾದಲ್ಲಿ ಏಪ್ರಿಲ್ ೧೪ ರಂದು, ಚೀನಾದಲ್ಲಿ ಅವರ ಚಾಂದ್ರಮಾನ ಪಂಚಾಂಗದ ಪ್ರಕಾರ ಏಳನೇ ತಿಂಗಳ ಏಳನೇ ದಿನ, ದಕ್ಷಿಣ ಕೊರಿಯಾದಲ್ಲಿ ನವೆಂಬರ್ ೧೧ ರಂದು ಆಚರಿಸುತ್ತಾರೆ. ಹೃದಯದ ಜೊತೆಗೆ, ಗ್ರೀಟಿಂಗ್ ಕಾರ್ಡ್, ಟೆಡ್ಡಿ ಬೇರ್ ವಿನಿಮಯ ಎಲ್ಲೆಡೆಯಲ್ಲೂ ಮಾಮೂಲು.
ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ ಎಂದು ಹಲುಬುವ ಬದಲು ಪ್ರೇಮಿಗಳು ತಮ್ಮ ಪ್ರೇಮದ ಪರಿಯನ್ನು ತಿಳಿಸಲು ಕಾತುರತೆಯಿಂದ ಕಾಯುವ ದಿನವಿದು. ನಿರ್ಭೀತಿಯಿಂದ ವಿಲ್ ಯು ಬಿ ಮೈ ವ್ಯಾಲಂಟೈನ್ ಎಂದು ಕೇಳುವ ಕಾಲವಿದು. ಮೆಚ್ಚಿದ ನಲ್ಲ/ನಲ್ಲೆಯರು ಐ ಲವ್ ಯೂ ಎಂದು ಕೆಂಪು ಗುಲಾಬಿ ಹೂವಿನ ವಿನಿಮಯದೊಂದಿಗೆ ತನು-ಮನಗಳ ಸಮ್ಮಿಲನದ ಕಾಲವಿದು. ಅಂದು ಪ್ರತಿಯೊಬ್ಬ ಪ್ರೇಮಿಯೂ ರೋಮಿಯೋ-ಜೂಲಿಯೆಟ್, ದೇವದಾಸ್-ಪಾರೂ, ಲೈಲಾ-ಮಜ್ನುರ ಪ್ರೇಮದಂತೆ ನಮ್ಮ ಪ್ರೇಮವೂ ಅಮರ ಎಂದು ಅಂದುಕೊಳ್ಳುವ ಯುವ ಪ್ರೇಮಿಗಳಿಗೆ ಕೊರತೆ ಏನಿಲ್ಲ ಬಿಡಿ. ಅದ್ಯಾಕೆ ಇದೇ ದಿನಕ್ಕಾಗಿ ಕಾಯಬೇಕು ಎಂದು ಕೇಳಿದ ನನ್ನ ಪ್ರಶ್ನೆಗೆ ಸಿಕ್ಕ ಉತ್ತರ " ಅವತ್ತು ಪ್ರೀತಿಸುತ್ತೇವೆ ಎಂದು ಹೇಳಿಕೊಂಡರೆ ಅದು ಸಕ್ಸಸ್ ಆಗುತ್ತೆ", ಸಂತ ವಾಲೆಂಟೈನ್ ಹರಸುತ್ತಾನೆ ಎಂಬ ನಂಬಿಕೆ.
ಹೂವು ಪ್ರೇಮದ ಸಂಕೇತ ಅದು ಸರಿ. ಗುಲಾಬಿಯೇ ಏಕೆ, ಮಲ್ಲಿಗೆ, ಸಂಪಿಗೆ ಏಕೆ ಆಗಬಾರದು ಎಂಬ ಪ್ರಶ್ನೆಗೆ " ಉದ್ದ ಜಡೆಯವಳೇ, ಮಲ್ಲಿಗೆ ಮುಡಿದವಳೇ" ನಿಮ್ಮ ಕಾಲ. ಮಲ್ಲಿಗೆ ಹೂವು ಔಟ್ ಡೇಟೆಡ್, ಸಂಬಳ ಬಂದ ದಿನ ಅಪ್ಪ ಒಂದು ಮೊಳ ಮಲ್ಲಿಗೆ ಅಮ್ಮನಿಗಾಗಿ ತರುತ್ತಿದ್ದ ಕಾಲ -ಹಳೆಯ ಕಾಲ. ಈಗ ಬಾಬ್ಕಟ್ ಕಾಲ, ಹೂವು ಮುಡಿಗೇರದ ಕಾಲ. ಮಾರುದ್ದ ಹೂವು ಮುಡಿದರೆ ಹಸು ಹಿಂದೆ ಬಂದೀತು, ಕೂದಲು ಉದುರೀತು ಎಂಬ ಚಾಟಿ ಏಟಿನ ಉತ್ತರ ಸಿಕ್ಕಿತು. ಆಗ ನನಗೆ ಅರ್ಥವಾಯಿತು ನಾವು ಹಳೆಯ ಕಾಲಕ್ಕೆ ಸಲ್ಲ-ಹೊಸ ಕಾಲಕ್ಕೆ ಒಲ್ಲ ಎಂದು. ಎಡಬಿಡಂಗಿಗಳು ಸಾರ್, ನಾವು ಎಡಬಿಡಂಗಿಗಳು ಎಂದು.
>
ಪ್ರೀತಿಗೆ ಬಣ್ಣ ಇದೆಯೇ ಎಂಬ ಪ್ರಶ್ನೆ ಮೂಡಿತೇನೋ ನಿಜ, ಕೆಂಪು ಗುಲಾಬಿ ಪ್ರೇಮದ ಸಂಕೇತ, ಹಳದಿ ಗುಲಾಬಿ ಸ್ನೇಹದ ಸಂಕೇತ, ನೀಲಿ ಗುಲಾಬಿ ಕಾಮವಾಂಛೆಗೆ, ಪಿಂಕ್ ಗುಲಾಬಿ ಪ್ರೇಮಭಿಕ್ಷೆ ಇನ್ನು ಬಿಳಿಯ ಗುಲಾಬಿ ಪ್ರೀತಿ ಬೇಡ, ಶಾಂತಿ ಇರಲಿ, ಮುಂದೆ ನೋಡೋಣ ಎಂದರ್ಥವಂತೆ.
ಪ್ರೀತಿ ಎಂಬ ಎರಡಕ್ಷರ ಅವರವರ ಭಾವದ್ದು. ಅದು ಸಂಪೂರ್ಣ ಸ್ವಯಂಪ್ರೇರಿತ ಪ್ರತಿಕ್ರಿಯೆ. ಮತ್ತೊಬ್ಬ ವ್ಯಕ್ತಿಯ ಪರೋಕ್ಷ, ಅಪರೋಕ್ಷ ಬೇಡಿಕೆಗಳಿಗೆ ನೀಡುವ ಪ್ರತಿಕ್ರಿಯೆ. ಪ್ರೀತಿಯ ಅರಿವು ಹೊರವಲಯದ್ದಲ್ಲ. ತಾನು ತನ್ನ ಬಗೆಗಿನ ಆಸಕ್ತಿಯನ್ನು ಮೀರಿ ಇನ್ನೊಬ್ಬನ ನಿಜವಾದ ಗುಣ, ಸ್ವಭಾವಗಳನ್ನು ಅರಿತುಕೊಳ್ಳುವುದು. ಪ್ರೇಮಕ್ಕೆ ಕಾಲ, ದೇಶ, ಭಾಷೆ, ವಯಸ್ಸಿನ ದಿಗ್ಬಂಧವಿಲ್ಲ. ಪ್ರೀತಿ, ಪ್ರೇಮ ಎಂಬುದು ಏಕ ಮುಖವೂ ಅಲ್ಲ. ಅದು ಜೀವನದಿ ಜೊತೆಗೂಡಿ ನಡೆಯುವ ಸಂಗಾತಿ.
ಖ್ಯಾತ ಸಮಾಜಶಾಸ್ತ್ರಜ್ಞ ಎರಿಕ್ ಫ್ರಾಮ್ ಅವರ ಪ್ರಕಾರ ಪ್ರೀತಿ ಭಾವುಕ ಸಂಗತಿಯಲ್ಲ. ಮನುಷ್ಯ ತನ್ನ ಸಮಗ್ರ ವ್ಯಕ್ತಿತ್ವ ಬೆಳೆಸಿಕೊಳ್ಳಲು ಕ್ರಿಯಾಶೀಲನಾಗಿ ಪ್ರಯತ್ನಿಸದೇ ಇದ್ದರೆ ಪ್ರೀತಿಯಲ್ಲಿ ಇಡುವ ಪ್ರತಿ ಹೆಜ್ಜೆ ವಿಫಲ. ಪ್ರೀತಿ ಕೊಡುವುದೇ ಹೊರತು ತೆಗೆದುಕೊಳ್ಳುವುದಲ್ಲ. ಕೊಡುವುದು ಎಂದಾಕ್ಷಣ ತ್ಯಾಗ, ದಾನ, ಹಂಚಿಕೊಳ್ಳುವುದಲ್ಲ. ತನ್ನ ಸಾಮರ್ಥ್ಯದ ಅಭಿವ್ಯಕ್ತಿ ಕೊಡುವ ಕ್ರಿಯೆಯಲ್ಲಿ ಜೀವಂತಿಕೆ ಕಂಡುಕೊಳ್ಳುವುದು.
ಪ್ರೀತಿಯ ಬಗ್ಗೆ ಮಾತನಾಡುವಾಗ ಕೃಷ್ಣ-ರಾಧೆಯ ಉದಾಹರಣೆ ಬರುತ್ತದೆ. ಲೋಕೋದ್ಧಾರಕ, ಭಗವದ್ಗೀತೆಯನ್ನು ಬೋಧಿಸಿದ ಶ್ರೀಕೃಷ್ಣ ಪರಮಾತ್ಮನ ಪ್ರೀತಿ ಆರಾಧಿಸಲ್ಪಡುತ್ತದೆ. ಪ್ರೀತಿ-ಪ್ರೇಮ-ಪ್ರಣಯ ಅಂದಾಗ ಪುರಾಣದ ದುಶ್ಯಂತ-ಶಾಕುಂತಲೆ ಗೋಚರವಾಗುತ್ತಾರೆ. ತನ್ನ ಪ್ರೀತಿಯ ಕುರುಹಾಗಿ ಮುಮ್ತಾಜ್ ಕಟ್ಟಿಸಿದ, ಜಗತ್ತಿನ ಅಚ್ಚರಿಯಾಗಿ ನಿಂತಿರುವ ಭವ್ಯವಾದ, ಅತಿ ಸುಂದರವಾದ ತಾಜ್ ಮಹಲ್ ಶಹಜಹಾನ್-ಮುಮ್ತಾಜ್ ಪ್ರೇಮವನ್ನು ಸಾರುತ್ತಿದೆ. ಉದಯನ-ವಾಸವದತ್ತ ನೆನಪಾಗುತ್ತಾರೆ.
-->
Comments
ಉ: ವ್ಯಾಲಂಟೈನ್ಸ್ ಡೇ
In reply to ಉ: ವ್ಯಾಲಂಟೈನ್ಸ್ ಡೇ by sunilkgb
ಉ: ವ್ಯಾಲಂಟೈನ್ಸ್ ಡೇ
ಉ: ವ್ಯಾಲಂಟೈನ್ಸ್ ಡೇ
In reply to ಉ: ವ್ಯಾಲಂಟೈನ್ಸ್ ಡೇ by abdul
ಉ: ವ್ಯಾಲಂಟೈನ್ಸ್ ಡೇ
ಉ: ವ್ಯಾಲಂಟೈನ್ಸ್ ಡೇ
In reply to ಉ: ವ್ಯಾಲಂಟೈನ್ಸ್ ಡೇ by ಸೀಮಾ.
ಉ: ವ್ಯಾಲಂಟೈನ್ಸ್ ಡೇ