ಸಾರ್ಥಕ ಪಯಣ ( ಕವನ )

ಸಾರ್ಥಕ ಪಯಣ ( ಕವನ )

ಕವನ

ಸಾಗಿದೆ ಪಯಣ ಹಾಗೆಯೆ ಸುಮ್ಮನೆ

ಕಡುಗತ್ತಲಲಿ ನಡೆದು ಹೋದಂತೆ

ಹೆಜ್ಜೆ ಗುರುತುಗಳಿಲ್ಲದ

ದಾರಿಯಲಿ ಸುಮ್ಮನೆ ಸಾಗಿ ಹೋದಂತೆ

ಗಿಜಿಗುಟ್ಟುವ ಜನ ಜಂಗುಳಿಯ ಮಧ್ಯೆ

ಸಾಗಿರುವ ಅನಾಮಿಕನಂತೆ

 

ಹೇಗಿತ್ತು ಪಯಣ ? ಅಮಾಯಕ ಮಗು 

ಅಂಬೆಗಾಲಿಕ್ಕಿ ಸಾಗಿ ಹೋದಂತೆ

ಪದಗಳ ರೂಹೇ ಇಲ್ಲದೆ 

ಕವನ ರಚನೆಗೊಂಡಂತೆ 

ಕುರುಡುಗಂಗಳು ಪ್ರಕೃತಿ ಸೌಂದರ್ಯ

ಅನುಭವಿಸಿದಂತೆ ಎದೆಯಾಳದಲಿ 

ಮೂಡಿದ ಸೂಕ್ಷ್ಮ ಬಿಂಬದಂತೆ

 

ಸಾಗಿದ ಪಯಣ ವ್ಯರ್ಥವಲ್ಲ 

ವ್ಯಾಪಿಸಲಿದೆ ಬೆಳಕು ಕತ್ತಲನು

ಮೆಟ್ಟಿ ದಿಗ್ದಿಗಂತದಾಚೆ ಈಚೆ 

ನನಸಾಗಲಿವೆ ಕಂಡ  ಕನಸುಗಳು 

                 ***

Comments