' ಅಪರಿಚಿತ '(ಕಥೆ) ಭಾಗ 8

' ಅಪರಿಚಿತ '(ಕಥೆ) ಭಾಗ 8

 



         ಮುನಿಸ್ವಾಮಿಯ ಹುಡುಗರ ಜೊತೆಗೆ ಕುಮರಿಗೆ ಬಂದ. ಆಂಜನೇಯ ಕುಮರಿ ಬಾಗೋಡಿ ರಸ್ತೆಯಲ್ಲಿರುವ ಬಸ್ಸುಗಳು ಬಂದು ನಿಲ್ಲುವ ತಾಣದ ಹತ್ತಿರ ಬಂದವನು ಸ್ವಲ್ಪ ಮುಂದೆ ಪ್ರಭುಗಳ ಅಂಗಡಿಯ ಮುಂದಿನ ವಾರಚಾಟ್ ನಲ್ಲಿ ನಿಂತಿದ್ದ ದಫೆದಾರ್ ನುಸ್ರತ್ ಅಲಿ ಕಾಣಿಸಿದರು. ಅವರಲ್ಲಿಗೆ ಹೋದ ಆಂಜನೇಯ ಮೃತನ ಶವ ಸಂಸ್ಕಾರ ಜರುಗಿಸಿ ಬಂದ ಬಗ್ಗೆ ವಿವರಿಸಿದ. ಮುನಿಸ್ವಾಮಿಯ ಹುಡುಗರು ತಮ್ಮ ಬಿಡಾರದೆಡೆಗೆ ತೆರಳಿದರು. ರಾತ್ರಿ ಸರಿಯುತ್ತಿತ್ತು. ರಾತ್ರಿ ಮೂರು ಮೂರು ಕಾಲು ಗಂಟೆಯ ಸಮಯ ರಫಿಕ್ ನ ಕಾರು ಬಂದು ನಿಂತಿತು, ಕಾರಿನ ಬಳಿ ಅಲಿ ಮತ್ತು ಆಂಜನೇಯ ತೆರಳಿದರು.


     ಕಾರಿನಲ್ಲಿ ಕುಳಿತಿದ್ದ ಪಿಎಸ್ಐ ಮಂಜಪ್ಪ ಗೌಡ ' ಆಂಜನೇಯ ಶವವನ್ನು ಸರಿಯಾಗಿ ಸುಟ್ಟು ಬಂದಿಯೋ ಹೇಗೆ ? ಇಲ್ಲದಿದ್ದರೆ ನಾಯಿ ನರಿಗಳು ಎಳೆದಾಡಿ ರಂಪಾಟ ವಾಗಬಾರದು ಎಂದರು.
    
     ' ಇಲ್ಲ ಸಾರ್ ಶವ ಸರಿಯಾಗಿ ದಹನವಾದ ನಂತರವೆ ನಾವು ಇಲ್ಲಿಗೆ ಬಂದದ್ದು, ನಾವಿಲ್ಲಿಗೆ ಬಂದಾಗ ರಾತ್ರಿ ಎರಡು ಗಂಟೆಯಾಗಿತ್ತು, ಆದರೆ ಮಳೆ ಗಾಳಿಯಿಂದಾಗಿ ಸ್ವಲ್ಪ ಆತಂಕವಾಗಿತ್ತು ' ಎಂದ ಆಂಜನೇಯ.


     ಅಲ್ಲಿಯೆ ಸನಿಹದಲ್ಲಿದ್ದ ನುಸ್ರತ್ ಅಲಿ ' ಚುರ್ಚಗುಂಡಿಯ ಅರ್ಜಿಯ ವಿಚಾರಣೆ ಏನಾಯಿತು ಸಾರ್ ' ಎಂದರು.


     ' ಏ ಅವೆಲ್ಲ ಬಗೆಹರಿಯೋ ಕೇಸೇನೋ ? ಇಬ್ಬರೂ ತಮ್ಮ ತಮ್ಮದೆ ನಿಲುವು ಸರಿ ಎನ್ನುವವರು ಪರಸ್ಪರರ ಹೊಂದಾಣಿಕೆಗೆ ಇಬ್ಬರೂ ಬರೋಲ್ಲ. ಸಿವಿಲ್ ಕೋರ್ಟನಲ್ಲಿ ನಿಮ್ಮ ಕೇಸು ಬಗೆಹರಿಸಿಕೊಳ್ಳಿ, ಮತ್ತೇನಾದರೂ ಹೊಡೆದಾಟ ಮಾಡಿಕೊಂಡರೆ ಯಾವ ಮುಲಾಜೂ ಇಲ್ಲದೆ ಕೇಸು ಹಾಕುತ್ತೇನೆ ಎಂದು ತಿಳಿಸಿ ಹೆಳಿಕೆ ಪಡೆದು ಬಂದಿದ್ದೆನೆ ' ಎಂದರು ಮಂಜಪ್ಪ ಗೌಡ.


     ' ಅಯ್ಯೋ ಬಿಡಿ ಸಾರ್ ಅವರಿಗೆ ಅರ್ಜಿ, ವಿಚಾರಣೆ, ಹೇಳಿಕೆ, ಕೋರ್ಟು ಕಛೇರಿ ಕೇಸುಗಳೇನೂ ಹೊಸವಲ್ಲ ' ಎಂದರು ಅಲಿ.


     ' ಮತ್ತೇನು ಮಾಡೋದೋ ಅಲಿ ಈ ನನ್ನ ಮಕ್ಕಳಿಗೆ ಮೊದಲಿನ ಹಾಗೆ ಹೊಡೆಯೊ ಹಾಗೂ ಇಲ್ಲ, ಒಳ್ಳೆ ಮಾತಿಗೆ ಇವರು ಕೇಳೋವರೂ ಅಲ್ಲ, ರಾಜಕಾರಣಿಗಳ ಒತ್ತಡ ಬೇರೆ .ಒಬ್ಬರ ಪರವಾಗಿ ಒಂದು ಪಾರ್ಟಿಯವರು ಬಂದರ ಇನ್ನೊಬ್ಬರ ಪರವಾಗಿ ಇನ್ನೊಂದು ಪಾರ್ಟಿಯವರು ಬರತಾರ, "ಹಗ್ಗ ಹರಿಯೋ ಹಂಗಿಲ್ಲ ಕೋಲು ಮುರಿಯೋ ಹಂಗಿಲ್ಲ ಹೀಂಗಾದರ ಜನರ ಸಮಸ್ಯೆ ಬಗೆಹರಿಸೊದು ಹೇಗೆ '? ಎಂದರು ಮಂಜಪ್ಪ ಗೌಡ.


     ' ಇವೆಲ್ಲ ಬಗೆಹರಿಯೋ ಹಂಗಿಲ್ಲ, ಗಡಿ ಸಮಸ್ಯೆ ನೀರಿನ ಸಮಸ್ಯೆ ಬರಿ ನಮ್ಮ ರಾಷ್ಟ್ರದೊಳಗ ಮಾತ್ರ ಅಲ್ಲ ಊರೂರೊಳಗೂ ಅದಾವ, ಕೆರದಷ್ಟು ತುರಿಸಿಕೊಂಡು ಹಂಗ ಹೋಗತಿರಬೆಕು ' ಎಂದರು ಅಲಿ.


     ' ನಿನಗೇನಪ ಹಂಗ ಮಾತಾಡತಿ, ಇತ್ಲಾಗ ಅಧಿಕಾರಿಗಳಿಗೂ ಉತ್ತರ ಕೊಡಬೇಕು, ಅತ್ಲಾಗ ಜನಕ್ಕೂ ಮತ್ತು ಜನಪ್ರತಿನಿಧಿಗಳಿಗೂ ಉತ್ತರ ಕೊಡಬೇಕು, ಒಂದೊಂದು ಸಲ ಈ ಕೆಲಸಾನ ಬಿಟ್ಟು ಹೋಗಬೇಕು ಅನಸ್ತದ ' ಎಂದರು ಮಂಜಪ್ಪ ಗೌಡ.


     ' ಸಾರ್ ನಾನು ನೀವು ಅಂತ ಅಲ್ಲ ಯಾರಾದರೂ ಬಂದ ಸಮಸ್ಯೆಗಳ್ನ ಬಂದ್ಹಂಗ ಎದುರಿಸಬೇಕು, ನಿಮ್ಮ ಕಷ್ಟ ಯಾರು ಕೇಳ್ತಾರ ? ಇಲ್ಲಾಂದ್ರ ನೌಕರಿ ಬಿಟ್ಟು ಹೋಗಬೇಕು ಅಷ್ಟ ' ಎಂದರು ಅಲಿ.


     ' ನೇಮಯ್ಯನ ಮನಿಯೊಳಗ ಇಷ್ಪೀಟು ಆಡ್ಸೊ ಬಗ್ಗೆ ಬಂದ ಅರ್ಜಿ ವಿಷಯ ಏನಾತು ಸಾರ್ ' ಎಂದು ಮರು ಪ್ರಶ್ನಿಸಿದರು ಅಲಿ.


     ' ಏ ಮನಿಗೆ ಬೀಗಾ ಜಡ್ಕೊಂಡು ಹೋಗಿ ಬಿಟ್ಟಾನ, ಅವನ ತೋಟಾನೆಲ್ಲ ಸುತ್ತಿ ನೋಡೀದ್ವಿ, ಎಲ್ಲೂ ಅವನ ಸುಳಿವು ಸಿಗಲಿಲ್ಲ ' ಎಂದರು ಮಂಜಪ್ಪ ಗೌಡ. ಸುಳಗೋಡು ದಾಟಿ ಕಾರು ಮೂಗುರು ಘಾಟಿಯೆಡೆಗೆ ಸಾಗುತ್ತಿತ್ತು.


     ' ಏ ರಫಿಕ್ ಕಾರು ನಿಲ್ಸು, ಈ ದುರ್ವಾಸನೆ ಸಹಿಸೋಕೆ ಆಗಲ್ಲ ಮಾರಾಯ, ಏನೋ ಅದು ದುರ್ವಾಸನೆ ' ಎಂದರು ಮಂಜಪ್ಪ ಗೌಡ.


     ' ಮತ್ತೆಂಥಾ ವಾಸನೆ ಸಾರ್ ! ಕೊಳೆತ ಹೆಣ ಮೈಮೇಲಿನ ಬಟ್ಟೆ ಬರೆ ವಾಸನೆ ' ಎಂದರು ಅಲಿ.


     ' ಆಂಜನೇಯ ಆ ಬಟ್ಟೆ ತುಗೊಂಡು ನೀನು ಕೆಳಗೆ ಇಳಿ, ಓ.ಪಿಗೆ ಹೋಗಿ ಬೆಳಿಗ್ಗೆ ಮೊದಲನೆ ಬಸ್ಸಿಗೆ ಬಾ ' ಎಂದರು ಮಂಜಪ್ಪ ಗೌಡ. ಆಂಜನೇಯ ಬಟ್ಟೆ ಬರೆ ಸಮೇತ ಕೆಳಗಿಳಿದ, ರಫಿಕ್ನ ಕಾರು ಮುಂದೆ ಚಲಿಸಿತು.


     ಕಾರಿನಿಂದ ಕೆಲಗಿಳಿದ ಆಂಜನೇಯ ಒಂದು ಕ್ಷಣ ನಿಂತ. ದಟ್ಟ ರಾತ್ರಿ ಕಣ್ಣುಗಳಿಗೆ ಏನೂ ಸ್ಪಷ್ಟವಾಗಿ ಕಾಣುತ್ತಿಲ್ಲ, ಸ್ವಲ್ಪ ಹೊತ್ತು ಹಾಗೆಯೆ ಕಣ್ಣುಗಳು ಕತ್ತಲೆಗೆ ಹೊಂದಿಕೊಳ್ಳುವವರೆಗೆ ಒಂದೈದು ನಿಮಷ ಕಾಲ ನಿಂತ. ದಾರಿ ಅಸ್ಪಷ್ಟವಾಗಿ ಕಾಣ ತೊಡಗಿದಂತೆ ಯಾವ ಕಡೆಗೆ ಹೋಗುವುದು ಎಂದು ಒಂದು ಕ್ಷಣ ಯೋಚಿಸಿದ. ತನ್ನನ್ನು ಬರುವಾಗ ಸುಳಗೋಡು ಉಪ ಠಾಣೆಯ ಹತ್ತಿರ ಇಳಿಸಿದ್ದರೆ ಬೆಳಿಗ್ಗೆ ಬರಬಹುದಿತ್ತು. ತಾನೀಗ ಅತ್ತ ಉಪ ಠಾಣೆ ಮತ್ತು ಇತ್ತ ಮೂಗೂರು ಘಾಟಯ ಮಧ್ಯ ಇದ್ದೇನೆ, ಯಾವ ಕಡೆಗೆ ಹೋದರೂ ಒಂದೇ ಅಂತರದ ದೂರವನ್ನು ಕ್ರಮಿಸ ಬೇಕು ಎಂದು ಯೋಚಿಸಿದ ಆಂಜನೇಯ ಮೂಗೂರು ಘಾಟಿ ತಲುಪಿದರೆ ಯಾವುದಾದರೂ ಒಂದು ವಾಹನ ಹಿಡಿದು ಊರು ತಲುಪ ಬಹುದು ಎಂದು ಯೋಚಿಸಿ ಮೂಗೂರು ಘಾಟಿಯ ಕಡೆಗೆ ನಡೆಯಲು ಪ್ರಾರಂಭಿಸಿದ.


                                                               *


     ಮುಂದೆ ಕಾರು ಚಲಿಸುತ್ತಿದ್ದಂತೆ ಡ್ರೈವರ್ ರಫಿಕ್  ' ಅಲ್ಲ ಸಾರ್ ಆ ಪೋಲೀಸಿನವರನ್ನು ನೀವು ಸುಳಗೋಡಿ ನಲ್ಲಿಯೆ ಬಿಟ್ಟು ಬಂದಿದ್ದರೆ, ಅವರು ಬೆಳಿಗ್ಗೆ ಅಲ್ಲಿಂದ ಬರಬಹುದಿತ್ತು, ನೀವು ಅವರನ್ನು ಮುಂದೆ ಕರೆತಂದು ಅರ್ಧ ದಾರಿಯಲ್ಲಿಯೆ ಬಿಟ್ಟು ಬಂದಿರಿ, ಅವರನ್ನು ಇಲ್ಲಿಂದ ಮುಂದೆ ಮೂಗೂರು ಘಾಟಿ ರಸ್ತೆಗೆ ತಂದು ಬಿಟ್ಟಿದ್ದರೆ ಯಾವುದಾದರೂ ವಾಹನವನ್ನು ಹಿಡಿದು ಊರು ತಲುಪುತ್ತಿದ್ದರು ' ಎಂದ.


     ' ಅವನಾದರೂ ಕೇಳ ಬಾರದಿತ್ತೇನೋ, ಬಹಳ ದಿಮಾಕು ಅವ್ನಿಗೆ ನಡಕೊಂಡು ಬರಲಿ ನನ ಮಗ ' ಎಂದರು ಮಜಪ್ಪ ಗೌಡ.


     ' ಅದಕ್ ಹೇಳೊದು ಸಾರ್ ಒಳ್ಳೆಯವರಿಗೆ ಇದು ಕಾಲ ಅಲ್ಲ ಅಂತ, ನಿಮ್ಮ ಜೊತೆಗೆ ಇವತ್ತು ಪರಸಪ್ಪನೆ ಬರಬೇಕಿತ್ತು, ನಿಮ್ಮನ್ನ ಹ್ಯಾಂಗ ಆಟಾ ಅಡಸ್ತಿದ್ದಾ ಅನ್ನೋದು ತಿಳಿತಿತ್ತು, ಅವನ್ನ್ ಹೀಂಗ ಕಾಡನ್ಯಾಗ ಮಧ್ಯದ ದಾರ್ಯಾಗ ಇಳಿಸಿದ್ರ ನಿಮ್ಮ ಕಾರು ಮುಂದ ಹೋಗೋಕ ಬಿಡ್ತಿರಲಿಲ್ಲ ' ಎಂದರು ಅಲಿ.


     ' ಅವನೇನೋ ನನ್ನ ಆಟ ಆಡ್ಸೋದು ? ಏನೋ ಹೋಗಲಿ ನೌಕರಿಗೆ ಬಂದಾನ ನಾವ್ಯಾಕ ಅವನ ಹೊಟ್ಟಿಮ್ಯಾಲ ಹೊಡಿಯೋದು ಅಂತ ಸುಮ್ಮನಿರತೀನಿ ಅಷ್ಟ, ಇದರರ್ಥ ಅವನಿಗೆ ನಾನು ಹೆದರಿ ಕೊಂಡೇನಿ ಅಂತ ಅಲ್ಲ. ' ಎಂದರು ಮಂಜಪ್ಪ ಗೌಡ.


     ' ಇಲ್ಲೂ ಅಷ್ಟ ಈ ಒಣ ವೇದಾಂತದ ಮಾತ ಹೇಳಿ ಅವನ್ನ ಕರ್ಕೊಂಡು ಹೋಗ್ತಿದ್ರಿ, ಅಂಜನೇಯನ್ನ ಮಧ್ಯದ ದಾರ್ಯಾಗ ಇಳಿಸಿದ್ಹಾಂಗ ಇಳಿಸಿ ಹೊಗ್ಲಿಕ್ಕೆ ಅಗ್ತಿರಲಿಲ್ಲ ' ಎಂದರು ಅಲಿ. ಹೀಗೆ ಸಾಗುತ್ತಿದ್ದಂತೆ ಬಹಳ ಕ್ಲೀಷ್ಟವಾದ ಯೂ ಟರ್ನ ವೊಂದರ ಹತ್ತಿರ ರಫಿಕ್ ಕಾರನ್ನು ಗಕ್ಕನೆ ನಿಲ್ಲಿಸಿದ.


     ' ಏನೋ ರಫಿಕ್ ನಿದ್ದೆ ಗಿದ್ದಿ ಮಾಡ್ತಿದಿಯೇನೋ ? ' ಎಂದರು ಮಂಜಪ್ಪ ಗೌಡ.


     ' ನಿದ್ದೆ ಗಿದ್ದಿ ಏನೂ ಇಲ್ಲ ಸ್ವಲ್ಪ ಎದುರುಗಡೆ ನೋಡಿ ಸಾರ್ ' ಎಂದ ರಫಿಕ್. ಅತ್ತ ಕಣ್ಣು ಹಾಯಿಸುತ್ತಿದ್ದಂತೆ ರಸ್ತೆಯ ಎಡ ಬದಿಯಿಂದ ಕಾಡು ಕೋಣಗಳ ಹಿಂಡೊಂದು ರಸ್ತೆಯ ಮೇಲೆ ನೆಗೆದು ಆ ಬದಿಯ ಕಾಡಿಗೆ ನುಗ್ಗು ತ್ತಿದ್ದವು. ಒದರ ಹಿಂದೊಂದರಂತೆ ಸಾಲಾಗಿ ಹತ್ತಿಪ್ಪತ್ತು ಕಾಡುಕೋಣಗಳು ನೆಗೆದು ದಾಟಿ ಹೋದವು. ಕಾರನ್ನು ಗಕ್ಕನೆ ನಿಲ್ಲಿಸದ ರಭಸಕ್ಕೆ ರಸ್ತೆಯಂಚಿನ ಕಲ್ಲೊಂದು ತಾಗಿ ಹಿಂದಿನ ಬಲಭಾಗದ ಚಕ್ರದ ಟೈರಿಗೆ ತಗುಲಿ ಅದು ಪಂಕ್ಚರ್ ಆಗಿತ್ತು. ರಫಿಕ್ ಇದನ್ನು ಗಮನಿಸಿ ಸ್ಟೆಪ್ನಿ ಬದಲಿಸಲು ನಿಂತುಕೊಂಡ. ಸ್ಟೆಪ್ನಿ ಬದಲಿಸಿ ಪಂಕ್ಚರ್ ಆದ ಟಯರನ್ನು ಢಿಕ್ಕಿಗೆ ಹಾಕಿ ಬಂದ್ ಮಾಡಿ ಅಕಸ್ಮಾತ್ತಾಗಿ ದೃಷ್ಟಿ ರಸ್ತೆಯೆಡೆಗೆ ಹರಿದು ಆ ದಾರಿಗುಂಟ ದೂರದಲ್ಲಿ ಯಾರೋ ನಡೆದು ಬರುತ್ತಿರುವುದು ಕಾಣಿಸಿತು.


     ಅದನ್ನು ಕಂಡು ' ಸಾರ್ ಯಾರೋ ಈ ಕಡೆಗೆ ನಡೆದು ಬರುತ್ತಿರುವಂತೆ ಕಾಣಿಸುತ್ತಿದೆ ' ಎಂದ ರಫಿಕ್.


     ' ಏಯ್ ಇಷ್ಟೊತ್ತನ್ಯಾಗ ಈ ಕಾಡು ದಾರ್ಯಾಗ ಯಾರು ಬರ್ತಾರೋ ನಮಗ ಬಿಡದ ಕರ್ಮ ಬಂದೆವಿ, ಎಲ್ಲೊ ನೀನು ದೆವ್ವ ಗಿವ್ವ ನೋಡಿರಬೆಕು, ಇಲ್ಲೆ ಹತ್ತರದಾಗ ಒಂದು ಕ್ವಾಟಿ ಅದ ಅಲ್ಲ, ಅಲ್ಲೆ ಸುಮಾರು ಮುನ್ನೂರು ವರ್ಷದ ಹಿಂದ ಯಾವನೋ ಜೈನ ದೊರೆ ಕಾಲದಾಗ ಯುದ್ಧ ನಡದು ಅನೇಕ ಸೈನಿಕರು ಸತ್ತ ಹೋದರಂತ, ಅವರ ದೆವ್ವಾನ ಆವಾಗಾವಾಗ ಇಲ್ಲೆ ಸರಿ ರಾತ್ರಿ ವೇಳೆ ಕಾಣಿಸಿಕೋತಾವಂತ ಅಂತ ಪದಮಗೋಡಿನ ಪದ್ಮಯ್ಯ ಬಂದಾಗ ಹೇಳ ತಿರತಾನಪ ' ಎಂದರು ಮಂಜಪ್ಪ ಗೌಡರು.


     ' ಆ ಬೊಕಾಳಿ ಪದ್ಮಯ್ಯನ ಮಾತು ನೀವು ನಂಬ್ರಿ, ದೆವ್ವಾನೂ ಇಲ್ಲ ಗಿವ್ವಾನೂ ಇಲ್ಲ ಯಾರೋ ನಮ್ಹಂಗ ಹೊಂಟಿರಬೇಕು ' ಎಂದರು ಅಲಿ.


     ' ಸಾಬರಿಗೆ ದೆವ್ವ ಕಾಣೋದು ಜಾಸ್ತಿ ಅಂತ, ನಾನು ಇಬ್ಬರು ಸಾಬರ ಜೊತೆ ಹೊಂಟೇನಿ ನಾನು ಇವತ್ತ ಊರು ಸೇರಿದ್ಹಂಗ ' ಎಂದು ಗೊಣಗಿಕೊಂಡರು ಮಂಜಪ್ಪ ಗೌಡ.


     ' ಇದನ್ನೂ ಆ ಪದ್ಮಯ್ಯ ಹೇಳೆದ್ನೇನು ನಿಮಗ ' ಎಂದ ಅಲಿ, ರಸ್ತೆಗುಂಟ ಸಾಗಿ ಬರುತ್ತಿದ್ದ ಆ ವ್ಯಕ್ತಿಯನ್ನು ಗಮನಿಸಿದರು. ಆ ವ್ಯಕ್ತಿ ಸನಿಹಕ್ಕೆ ಬರುತ್ತಿದ್ದಂತೆ ಅವನನ್ನು ಗಮನಿಸಿದ ಅವರು ' ಸಾರ್ ಇಂವ ಬೇರೆ ಯಾರೂ ಅಲ್ಲ ನಮ್ಮ ಆಂಜನೇಯ ' ಎಂದರು.


     ' ಅಂವಗ ಸುಳಗೋಡಿಗೆ ಹೋಗಿ ಬೆಳಿಗ್ಗೆ ಬರಲಿಕ್ಕೆ ಹೇಳಿದ್ದೆ, ಈ ಕಡೆ ಅಂವ ಹ್ಯಾಂಗ ಬಂದ ' ಎಂದರು ಮಂಜಪ್ಪ ಗೌಡರು. ಕಾರಿನ ಹತ್ತಿರಕ್ಕೆ ಬಂದ ಅವನನ್ನುದ್ದೇಶಿಸಿ ' ಅಲ್ಲಾಡಿಸಿಕೊಂಡು ಮಾವನ ಮನಿಗೆ ಬಂದ್ಹಂಗ ಬರಲಿಕ್ಕೆ ಹತ್ಯಾನ ಮಗ, ಲಗೂ ಲಗೂ ಬಾ ನಿನಗೋಸ್ಕರ ನಾವಿಲ್ಲಿ ಕಾಯ್ತಾ ಇದೀವಿ, ಹೌದು  ನಿನಗ ಸುಳಗೋಡಿಗೆ ಹೋಗಿ ಬೆಳಿಗ್ಗೆ ಬರಲಿಕ್ಕೆ ಹೇಳಿದ್ದೆ ಮತ್ತ ನೀ ಈ ರಸ್ತೆ ಹಿಡದು ಯಾಕ ಬಂದಿ ' ಎಂದರು.


     ' ಈ ದಾರಿಲೆ ಹೋಗಿ ಮೂಗೂರು ಘಾಟಿ ಕ್ರಾಸಿಗೆ ಹೋದ್ರ ಯಾವದಾದರೂ ಲಾರಿ ಹಿಡಕೊಂಡು ಬೇಗ ಊರಿಗೆ ಹೋಗಿ ಮುಟ್ಟ ಬಹುದು ಅಂತ ಯೋಚನೆ ಮಾಡಿ ಈ ಕಡಿಗೆ ಬಂದೆ ಸಾರ್ ' ಎಂದ ಆಂಜನೇಯ.


     ' ಇಂಥಾ ಕಾಡ್ನ್ಯಾಗ ಒಬ್ಬನ ಬರಾಕ ಹತ್ತಿಯಲ್ಲ ದೆವ್ವ ಗಿವ್ವದ ಹೆದರಿಕಿ ಇಲ್ಲನು ನಿನಗ ' ಎಂದರು ಮಂಜಪ್ಪ ಗೌಡ.


     ' ನಾನ ಒಂದು ದೆವ್ವ ಹೊಂಟ್ಹಾಂಗ ಹೊಂಟೇನಿ ನನಗ ಯಾ ದೆವ್ವ ಏನ ಮಾಡ್ತದ ಸಾರ್ ' ಎಂದ ಆಂಜನೇಯ.


     ' ಕಾಡ್ನ್ಯಾಗ ನಡು ದಾರ್ಯಾಗ ಇಳಿಸಿ ಬಂದ್ರಿ ಈ ದಾರ್ಯಾಗ ಮಾತ್ರ ದೆವ್ವ ಕಾಣಿಸಿಕೋತಾವ, ಆ ದಾರ್ಯಾಗ ದೆವ್ವ ಕಾಣಸೋದಿಲ್ಲನು, ನೀವೂ ಸಹ ಒಂಥರಾ ಅನುಕೂಲಸಿಂಧು ಮಾತ ಮಾತಾಡ್ತೀರಿ ' ಎಂದರು ಅಲಿ.


     ' ಎಲ್ಲಾರೂ ಭಾಳ ಮಾತಾಡಾಕ ಕಲ್ತೀರಿ ನೋಡು, ನಾನೂ ಎಲ್ಲಾರ ಹಂಗ ರಿಪೋರ್ಟ ಗಿಪೋರ್ಟ ಹಾಕಿ  ಪನಿಶ್ಮೆಂಟ್ ಮಾಡಸ್ತಾ ಇದ್ರ ನೀವು ಸರಿಯಾಗಿ ಇರ್ತಿದ್ರಿ ' ಎಂದು ಸಿಟ್ಟಾದರು ಮಂಜಪ್ಪ ಗೌಡರು.


     ' ಅಷ್ಟ ಮಾಡಿ ಪುಣ್ಯ ಕಟ್ಕೊಳ್ಳಿ ಸಾರ್ ಒಂದಾರು ತಿಂಗಳು ಆರಾಮಾದರೂ ಇರತೇವಿ ' ಎಂದರು ಅಲಿ.


     ' ನೀವೆಲ್ಲ ಅರಾಮಾಗಿ ಮನ್ಯಾಗ ಇರ್ರಿ ನಾನು ಆ ಪರಶ್ಯಾ ನಂಥವ್ರನ್ನ ಕಟಗೊಂಡು ಸ್ಠೇಶನ್ನಿಗೆ ಜೋತು ಬೀಳ್ತಿನಿ, ನಡಿ ನಡಿ ಅದೆಲ್ಲ ಅಗಿ ಹೋಗೋ ಮಾತಲ್ಲ, ಆಂಜನೇಯ ಆ ಹೆಣದ ಬಟ್ಟಿಬರಿನೆಲ್ಲ ಕಾರಿನ ಡಿಕ್ಕಿ ಯೊಳಗ ಹಾಕಿ ಕಾರ್ ಹತ್ತು ನಡಿ ಹೋಗೋಣ ' ಎಂದರು ಮಂಜಪ್ಪ ಗೌಡ


                                                                                   ( ಮುಂದುವರಿದುದು )


 ' ಅಪರಿಚಿತ 'ಕಥೆಯ ಭಾಗ 1 ರಿಂದ ಭಾಗ 4 ರ ವರೆಗೆ ಲಿಂಕ್ :-sampada.net/blog/h-patil


 


 ' ಅಪರಿಚಿತ ' ಕಥೆಯ ಭಾಗ 5 ರಿಂದ ಭಾಗ 7 ರ ವರೆಗೆ ಲಿಂಕ್ :-sampada.net/blog/h-patil
 

Rating
No votes yet

Comments