" ಅಪರಿಚಿತ "(ಕಥೆ) ಅಂತಿಮ ಭಾಗ

" ಅಪರಿಚಿತ "(ಕಥೆ) ಅಂತಿಮ ಭಾಗ

                        



      ದಿನಗಳು ಗತಿಸುತ್ತ ಹೋದವು, ಈ ಪ್ರಕರಣಕ್ಕೆ ಸಮ್ಮಂಧ ಪಟ್ಟಂತೆ ನಿರ್ಗುಂಡಿ ಪೋಲೀಸ್ ಠಾಣೆಯ ಅಧಿಕಾರಿ ಮಂಜಪ್ಪಗೌಡರ ಎರಡು ಮೂರು ಸಲ ಕುಮರಿ ಸೀಮೆಗೆ ಹೋಗಿ ಬಂದರು. ಸುಳಗೋಡು ಹೊರ ಠಾಣೆಯ ವೆಂಕಟಯ್ಯ ರವರು ಮಾಡಿದ ಎಲ್ಲ ಪ್ರಯತ್ನಗಳ ಹೊರತಾಗಿಯೂ ಆ ' ಅಪರಿಚಿತ ' ಯಾರೆನ್ನುವುದು ಪತ್ತೆಯಾಗಲಿಲ್ಲ. ಆತ ತಾನು ನೇಣು ಹಾಕಿಕೊಳ್ಳಲು ಉಪಯೋಗಿಸಿದ ಹೊಸ ಕತ್ತದ ನಾರಿನ ಹಗ್ಗವನ್ನು ಬಹುಶಃ ಆತ ತನ್ನ ಜೊತೆಗೆ ತಂದಿರಲಾರ, ಅದನ್ನು ಕುಮರಿಯಲ್ಲಿಯೇ ಖರೀದಿಸಿದ್ದಿರ ಬಹುದು.  ಆ ಸಂಗತಿ ನಿಜವಾಗಿದ್ದರೆ ಅಲ್ಲಿಯ ಅಂಗಡಿಗಳವರು ಕನಿಷ್ಟ ಆ ವ್ಯಕ್ತಿಯ ಚಹರೆ ಹೇಳಿದ್ದರೂ ಸಾಕಿತ್ತು ಈ ಪ್ರಕರಣದ ಪತ್ತೆಗೆ ಸ್ವಲ್ಪಮಟ್ಟಿಗಾದರೂ ಸಹಕಾರಿಯಾಗುತ್ತಿತ್ತು. ಇದೊಂದು ಊಹೆ ಕುಮರಿಯಲ್ಲಿ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿತ್ತು.


     ಈ ಪ್ರಕರಣ ಕುರಿತಂತೆ ವಿವಿಧ ರೀತಿಯ ವಿಚಿತ್ರ ಗುಮಾನಿ ಅರ್ಜಿಗಳು ಇಲಾಖೆಯ ಮುಖ್ಯಸ್ಥರಿಗೆ ರಾಜ್ಯ ಸರ್ಕಾರದ ಮಂತ್ರಿ ಮಹೋದಯರಿಗೆ ಹೋದವು. ಅವೆಲ್ಲವುಗಳು ವಿಚಾರಣೆಗೆ ಜಿಲ್ಲಾ ಕೇಂದ್ರಕ್ಕೆ ಬಂದವು. ಆ ಎಲ್ಲವುಗಳ ಸಾರಾಂಶವಿಷ್ಟೆ,, ಪೋಲೀಸ್ ಇಲಾಖೆ ಈ ಪ್ರಕರಣದ ತನಿಖೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಅದಲ್ಲದೆ ಮೃತನ ಬಳಿ ದೊಡ್ಡ ಪ್ರಮಾಣದ ಹಣವಿತ್ತು, ಮೈಮೇಲೆ ಉಂಗುರ ಚೈನುಗಳಿದ್ದವು ತನಿಖೆಗೆ ತೆರಳಿದ್ದ ಸ್ಥಳೀಯ ಪೋಲೀಸರು ಅವನ್ನೆಲ್ಲ ಲಪಟಾಯಿಸಿದ್ದಾರೆ ಎನ್ನುವುದಾಗಿತ್ತು. ಈ ಎಲ್ಲ ಅರ್ಜಿಗಳು ವಿಚಾರಣೆ ಮತ್ತು ವರದಿಗಾಗಿ ಸಗರಪೇಟೆಯ ಉಪ ರಕ್ಷಣಾಧಿಕಾರಿ ಕೆಂಡಗಪ್ಪನವರಿಗೆ ಬಂದವು. ಈ ಪ್ರಕರಣದ ತನಿಖಾಧಿಕಾರಿ ನಿರ್ಗುಂಡಿ ಪೋಲಿಸ್ ಠಾಣೆಯ ಮಂಜಪ್ಪ ಗೌಡರು, ಆ ದಿನ ಅವರ ಜೊತೆ ತೆರಳಿದ್ದ ಸಿಬ್ಬಂದಿಗಳಾದ ನುಸ್ರತ್ ಅಲಿ, ವೆಂಕಟಯ್ಯ, ಆಂಜನೇಯ ಮತ್ತು ಮಂಜುನಾಥ ರವರನ್ನು ತೀವ್ರ ತನಿಖೆಗೆ ಒಳ ಪಡಿಸ ಲಾಯಿತು. ಇವರಲ್ಲದೆ ಇವರೊಂದಿಗೆ ತೆರಳಿದ ಕಾರ್ ಡ್ರೈವರ್ ರಫಿಕ್ ಮತ್ತು ಸಹಕರಿಸಲು ಹೋಗಿದ್ದ ಆ ವ್ಯಾಪ್ತಿಯ ಪಟೇಲ್ ಪರಮಯ್ಯ, ರೋಡ್ ಕಾಂಟ್ರಾಕ್ಟ ಕೆಲಸದ ಮೇಸ್ತ್ರಿ ಮುನಿಸ್ವಾಮಿ ಆತನ ಕೆಲಸದ ಹುಡುಗರನ್ನು ವಿಚಾರಣೆ ಮಾಡಿ ಹೇಳಿಕೆ ಗಳನ್ನು ದಾಖಲಿಸಿಕೊಂಡು ಅವುಗಳೊಂದಿಗೆ ಪ್ರಕರಣದ ಪ್ರಮುಖ ದಾಖಲೆಗಳ ಪ್ರತಿಗಳ ಸಮೇತ ವಿವರವಾದ ವರದಿಯನ್ನು ಕೆಂಡಗಪ್ಪನವರು ಜಿಲ್ಲಾ ಕೇಂದ್ರಕ್ಕೆ ಕಳಿಸಿ ಕೊಟ್ದರು.


     ಮೇಲಾಧಿಕಾರಿಗಳ ಆದೇಶದಂತೆ ಮೃತನ ಬಟ್ಟೆ ಬರೆ ಸಮೇತ ಲಭ್ಯವಿದ್ದ ವಿವರಗಳನ್ನು ಕಲೆ ಹಾಕಿ ಆತನ ಶವದ ಫೋಟೋ ಮುದ್ರಿಸಿ ' ಲುಕ್ ಔಟ್ ' ನೋಟೀಸುಗಳನ್ನು ಜಿಲ್ಲೆಯ ಎಲ್ಲ ಠಾಣೆ ಮತ್ತು ಉಪಠಾಣೆಗಳಿಗೆ, ಜಿಲ್ಲಾ ಅಪರಾಧ ಪತ್ತೆ ವಿಭಾಗದ ಮೂಲಕ ರಾಜ್ಯದ ಎಲ್ಲ ಜಿಲ್ಲೆಗಳಿಗೆ ಕಳಿಸಿ ಕೊಡಲಯಿತು. ಆಕಾಶವಾಣಿ ಮೂಲಕ ಕೂಡ ಬಿತ್ತರಿಸಲಾಯಿತು. ಜಿಲ್ಲಾ ಕ್ರೈಂ ಮೀಟಿಂಗ್ ಮತ್ತು ಬಾರ್ಡರ್ ಕ್ರೈಂ ಮೀಟಿಂಗ್ ಗಳಲ್ಲಿ ಈ ಪ್ರಕರಣದ ಮಾಹಿತಿ ನೀಡಿ ಬೇರೆ ಬೇರೆ ಠಾಣೆಗಳಲ್ಲಿ ವರದಿಯಾದ ಪತ್ತೆಯಾಗದ ಮನುಷ್ಯ ಕಾಣೆ ಪ್ರಕರಣಗಳ ಜೊತೆ ಸಮೀಕರಿಸಿ ನೋಡಲಾಯಿತು. ಈ ಎಲ್ಲ ಪ್ರಯತ್ನಗಳ ಹೊರತಾಗಿಯೂ ಆತ ಯಾರೆಂಬುದು ಪತ್ತೆಯಾಗಲಿಲ್ಲ. ' ಅಪರಿಚಿತ ' ಈ ಪರಿಚಿತ ಜಗತ್ತಿಗೆ ಅಪರಿಚಿತನಾಗಿಯೇ ಉಳಿದು ಹೋದ.


     ಆತ ಎಲ್ಲಿಂದಲೋ ಈ ದಟ್ಟಾರಣ್ಯ ಪ್ರದೇಶಕ್ಕೆ ಬಂದು ಸಾವು ತಂದುಕೊಂಡ. ಆತನ ತೊಂದರೆ ತಾಪತ್ರಯ ಗಳು ಏನಿದ್ದವೋ ? ಯೋಚಿಸಲು ತೊಡಗಿದಂತೆ ಇಲ್ಲಿಯ ವರೆಗೆ ಈ ಜಗತ್ತಿನಲ್ಲಿ ಎಷ್ಟು ಜನ ಅಪರಿಚಿತರು ತಮ್ಮ ಜೀವನವನ್ನು ಹೀಗೆ ಮುಗಿಸಿಕೊಂಡು ಅಪರಿಚಿತರಾಗಿಯೇ ಕಾಲಚಕ್ರದಲ್ಲಿ ಸೇರಿ ಹೋಗಿದ್ದಾರೆ.? ಇದು ಇಲ್ಲಿಗೆ ಕೊನೆಗೊಳ್ಳು ವಂತಹುದಲ್ಲ. ಈ ಜಗದ ಅಂತ್ಯದ ವರೆಗೆ ಇಂತಹ ಘಟನೆಗಳು ಕಾಲ ಕಾಲಕ್ಕೆ ಘಟಿಸುತ್ತಲೆ ಹೋಗುತ್ತವೆ. ಇವುಗಳು ಯಾಕಾಗಿ ಸಂಭವಿಸುತ್ತ ಹೋಗುತ್ತವೆ ಎಂದರೆ ವ್ಯವಸ್ಥೆ ಯೊಳಗಿರುವ ಜೀವನ ಧೋರಣೆ ಮತ್ತು ನಿಯತಿಗಳನ್ನು ಪರೀಕ್ಷಿಸಲು ಬರುತ್ತಿರುತ್ತವೆ. ಪರಸಪ್ಪ, ಆಂಜನೇಯ, ನುಸ್ರತ್ ಅಲಿ, ಗಂಗಾಧರಯ್ಯ ಮತ್ತು ಮಂಜಪ್ಪಗೌಡರ ಹಾಗೂ ಇತರರ ಗುಣಧರ್ಮಗಳನ್ನು ಪರೀಕ್ಷೆಗೆ ಒಡ್ಡುತ್ತವೆ. ವಿದ್ಯಾವಂತರು ವ್ಯವಸ್ಥೆಯೊಳಗೆ ಪ್ರವೇಶ ಪಡೆದಷ್ಟೂ ವ್ಯವಸ್ಥೆ ಜನಪರ ವಾಗುತ್ತ ಹೋಗುತ್ತದೆ ಎನ್ನುವುದು ವಿಚಾರವಂತರ ಮತ್ತು ಆಶಾವಾದಿಗಳ ನಿರೀಕ್ಷೆ. ಆದರೆ ವಿಪರ್ವಾಸವೆಂದರೆ ಪರಸಪ್ಪ ನಂತಹವರ ವ್ಯವಸ್ಥೆಯೊಳಗಡೆ ಪ್ರವೇಶ ಒಂದೊಂದು ಅಪವಾದ ವಾದರೆ ಒಪ್ಪಿಕೊಳ್ಳಬಹುದು, ಆದರೆ ಇತ್ತೀಚಿನ ದಿನಗಳಲ್ಲಿ ಅದೊಂದು ನಿಯಮವಾಗಿ ಮಾರ್ಪಾಡು ಗೊಳ್ಳುತ್ತಿದೆ. ಇದೊಂದು ಗಾಬರಿ ಹುಟ್ಟಿಸುವ ಸಂಗತಿ. ಇದರ ಮೂಲ ಸಮಾಜದ ಮನಸ್ಥಿತಿಯಲ್ಲಿದೆ. ಇಂತಹ ಮನಸ್ಥಿತಿಗಳ ಮಧ್ಯೆ ಹುಟ್ಟಿಕೊಳ್ಳುವ ನಮ್ಮ ಸಮಾಜದ ಒಟ್ಟಾರೆಯಾದ ವ್ಯವಸ್ಥೆ. ಇದೊಂದು ಬೀಜ ವೃಕ್ಷ ನ್ಯಾಯ, ಸಮಾಜ ವ್ಯವಸ್ಥೆಯೆಡೆಗೆ ಬೊಟ್ಟು ತೋರಿಸಿದರೆ ವ್ಯವಸ್ಥೆ ಸಮಾಜದೆಡೆಗೆ ಬೊಟ್ಟು ತೋರುತ್ತದೆ. ಇಂದು ಸಮಾಜ ಮತ್ತು ವ್ಯವಸ್ಥೆಗಳೆರಡೂ ತಮ್ಮ ಚಲನಶೀಲತೆಯನ್ನು ಉಳಿಸಿ ಕೊಂಡಿಲ್ಲ. ಎಲ್ಲವೂ ನೀಂತ ನೀರಾಗಿ ಬಿಟ್ಟಿವೆ. ಇಲ್ಲಿ ವಿದ್ಯಾವಂತ ಅವಿದ್ಯಾವಂತರೆಂಬ ವರ್ಗೀಕರಣ ಸಲ್ಲ. ಇಲ್ಲಿ ಪರಸಪ್ಪ ಮತ್ತು ಗೌರಮ್ಮ ಹಾಗೂ ಅವರಂತಹವರು ಕೆಲಸಗಳ್ಳತನ, ಅವಕಾಶವಾದಿತನ ಮತ್ತು ಸ್ವಾರ್ಥದ ಕೊಳೆತ ಮನಸ್ಥಿತಿಯ ಪ್ರತೀಕವಾದರೆ, ಆಂಜನೇಯ, ಅಲಿ ಮತ್ತು ಗಂಗಾಧರಯ್ಯ ನಂತಹವರು ಸಮಾಜದ ಚಲನ ಶೀಲತೆಯ ಬಿಂದುಗಳಾಗಿ ಗೋಚರಿಸುತ್ತಾರೆ. ಇಂತಹ ಮನಸ್ಥಿತಿಯ ಚೇತನಗಳು ಅವರೊಂದಿಗೆ ಮಣ್ಣು ಸೇರಿ ಬಿಡಬಾರದು. ಅಂತಹವರ ಸಂಖ್ಯೆ ವೃದ್ಧಿಸಬೇಕು.


     ಹಾಗೆಯೇ ಸಮಾಜದಲ್ಲಿ ಪಟೇಲ್ ಪರಮಯ್ಯ, ಮುನಿಸ್ವಾಮಿ ಮತ್ತು ಆತನ ಕೆಲಸದ ಹುಡುಗರಂತಹವರು ಸಹ ಕಾಲ ಕಾಲಕ್ಕೆ ಬರುತ್ತಿರಬೇಕು, ಅಂದಾಗ ಮಾತ್ರ ಮನುಷ್ಯ ಹೀಗೆ ಜಗತ್ತಿಗೆ ಅಪರಿಚಿತನಾಗಿ ಸಾವು ಕಾಣುವ ಸಂಖ್ಯೆಗಳು ಗಣನೀಯವಾಗಿ ಕಡಿಮೆಯಾಗುತ್ತವೆ. ಇಂತಹ ಸಾವುಗಳ ಸಂಖ್ಯೆಯಲ್ಲಿಯ ಇಳಿತವೆ ಸಮಾಜದ ಪ್ರಗತಿಯ ಲಕ್ಷಣ. ಹೀಗಾಗಿ ಬುದ್ಧ, ಬಸವ ಮತ್ತು ಗಾಂಧಿಯವರ ವಿಚಾರ ಧಾರೆಗಳು ಚಲನಶೀಲ ಸಮಾಜದ ಪ್ರಗತಿಯ ಲಕ್ಷಣಗಳಾಗುತ್ತವೆ. ಅವುಗಳ ಆಚರಣೆಗಳು ಪರಸಪ್ಪ ನಂತಹವರ ಬಾಯಲ್ಲಿಯ ಸವಕಲು ಮಾತುಗಳಾಗಿ ಬಿಡಬಾರದು. ಆಂಜನೇಯ, ಅಲಿ ಮತ್ತು ಮಂಜುನಾಥ ರವರ ತರಹ ಎಲ್ಲರಲ್ಲೂ ದೈನಂದಿನ ವೃತ್ತಿ ಧರ್ಮವಾಗಿ ಪಡಮೂಡಬೇಕು ಅಂದಾಗ ಮಾತ್ರ ಅಂತಹವರ ವಿಚಾರಧಾರೆಗಳಿಗೆ ಅರ್ಥ ಬರುತ್ತದೆ.


     ಈ ರೀತಿ ಎಲ್ಲ ತಲ್ಲಣ ಮತ್ತು ಸಂಚಲನಗಳನ್ನು ಸೃಷ್ಟಿಸಿದ, ಫಾಲತೂ ಜನಗಳ ಸಮಯ ಕಳೆಯುವ ಮಾತಿಗೆ ಆಹಾರವಾದ ಆ ' ಅಪರಿಚಿತ ' ಕೊನೆಗೂ ಈ ಜಗತ್ತಿಗೆ ಅಪರಿಚಿತನಾಗಿ ಉಳಿದದ್ದು ಮಾತ್ರ ಬಹಳ ನೋವಿನ ಸಂಗತಿ. ವರ್ಷಗಳುರುಳಿದಂತೆ ಈ ಘಟನೆ ಮಸಕಾಗುತ್ತ ನಡೆಯಿತು. ಮೃತನ ಜೋಬಿನಲ್ಲಿ ದೊರೆತ ಐವತ್ತೈದು ರೂಪಾಯಿಗಳು ಸಗರಪೇಟೆಯ ಉಪ ವಿಭಾಗಾಧಿಕಾರಿಗಳ ಆದೇಶದಂತೆ ಸರ್ಕಾರಿ ಖಜಾನೆಗೆ ಜಮೆಯಾದವು. ಲಾಂಚ್ ಮತ್ತು ಬಸ್ ಟಿಕೆಟ್  ಗಳು ಕಡತದಲ್ಲಿ ಅಡಕವಾಗಿ ಪತ್ತೆಯಾಗದ ಶವಗಳ ಕಡತಗಳಲ್ಲಿ ಸೇರಿ ಕತ್ತಲ ಕೋಣೆ ಸೇರಿದವು. ಆಂಜನೇಯ ಒಪ್ಪವಾಗಿ ತೊಳೆದು ಮಡಿಚಿಟ್ಟ ಮೃತನ ಬಟ್ಟೆ ಬರೆ ಮತ್ತು ಬೆಲೆಬಾಳದ ಚರ ವಸ್ತುಗಳು ಅಂತಿಮ ಸಂಸ್ಕಾರ ಕಂಡವು. ನುಸ್ರತ್ ಅಲಿ ಮತ್ತು ಗಂಗಾಧರಯ್ಯ ನವರು ನಿವೃತ್ತಿ ಹೊಂದಿ ತಮ್ಮ ಜೀವನದ ಸಂಧ್ಯಾ ದಿನಗಳನ್ನು ಕಳೆಯುತ್ತಿರ ಬಹುದು, ಇಲ್ಲವೆ ಗತಿಸಿಯೆ ಹೋಗಿರಬಹುದು ಯಾರು ಬಲ್ಲರು. ಇನ್ನು ಪರಸಪ್ಪ ಆಂಜನೇಯ ಇನ್ನೂ ವೃತ್ತಿಯಲ್ಲಿದ್ದು ನಿವೃತ್ತಿಯ ದಿನಗಳೆಡೆಗೆ ಸಾಗಿರ ಬಹುದು. ವ್ಯವಸ್ಥೆ ಯೊಳಗಡೆ ಜನಗಳ ಆಗಮನ ಮತ್ತು ನಿರ್ಗಮನ ಕಾಲ ಕಾಲಕ್ಕೆ ಆಗುತ್ತ್ತಿರುವಂತಹವು. ಆಗಮಿಸಿದವರು ನಿರ್ಗಮಿಸುವ ಮುನ್ನ ಮನುಷ್ಯರಾಗುತ್ತ ಮಾಗುತ್ತ ಜನಪರರಾಗುತ್ತ ಹೋಗಬೇಕು, ಜೊತೆಗೆ ಈ ಸಮಾಜ ಕೂಡ. ಅಂದರೆ ಮಾತ್ರ ಈ ಜಗತ್ತು ಸಹನೀಯ ವಾಗಲು ಸಾಧ್ಯ. ಇಂತಹ ಅಪರಿಚಿತ ಸಾವುಗಳ ಸಂಖ್ಯೆಯ ಗಣನೀಯ ಇಳಿತವೆ ಸಮಾಜದ ಪ್ರಗತಿಯ ಲಕ್ಷಣ. ಇಂತಹ ಘಟನೆಗಳು ಸಂಭವಿಸದೆ ಹೋಗುವುದೆಂದರೆ ಅದೊಂದು ಮುಕ್ತ ಲೋಕ. ಆ ನಿಟ್ಟಿಗೆ ಸಾಗುವುದೆ ದೈವತ್ವದೆಡೆಗಿನ ಪಯಣ. ಅದನ್ನು ಬೇಕಾದರೆ ಮುಕ್ತಿಯೆನ್ನಿ ಇಲ್ಲ ವಿಮೋಚನೆಯೆನ್ನಿ.


                                                                                                                                 ( ಮುಗಿಯಿತು )


         
      ಅಪರಿಚಿತ ಕಥೆಯ ಭಾಗ 1 ರಿಂದ 2 ಕ್ಕೆ ಲಿಂಕ್sampada.net/blog/h-patil                              


                              ಭಾಗ 3 ರಿಂದ 6 ಕ್ಕೆ ಲಿಂಕ್sampada.net/blog/h-patil


                              ಭಾಗ 7ರಿಂದ 10 ಕ್ಕೆ ಲಿಂಕ್sampada.net/blog/h-patil
 

Rating
No votes yet

Comments