ಕನ್ನಡ ಪ್ರೇಮ ಉಕ್ಕಿಸದ ಸಂಭ್ರಮಾಚರಣೆಗಳು...

ಕನ್ನಡ ಪ್ರೇಮ ಉಕ್ಕಿಸದ ಸಂಭ್ರಮಾಚರಣೆಗಳು...

ನಾನು ಓದಿದ್ದು 'ಜವಾಹರ್ ನವೋದಯ ವಿದ್ಯಾಲಯ' ಎಂಬ ಎಂದೂ ಮರೆಯಲಾಗದ, ಹೆತ್ತವರಿಗಿಂತಲೂ ಹೆಚ್ಚು ಪ್ರೀತಿಯಿಂದ ನನ್ನಂತಹ ಸಾವಿರಾರು ಮಕ್ಕಳನ್ನು ಸಲಹಿ ಪೋಷಿಸಿದ ಕೇಂದ್ರಿಯ ವಿದ್ಯಾಲಯವೊಂದರಲ್ಲಿ. ಕೇಂದ್ರೀಯ ಪಠ್ಯವೆಂದರೆ ಅಲ್ಲಿ ಕನ್ನಡ ಕಲಿಕೆಗಿಂತ ಆಂಗ್ಲ ಮತ್ತು ಹಿಂದಿ ಕಲಿಕೆಗೆ ಹೆಚ್ಚು ಪ್ರಾಶಸ್ತ್ಯವಿರುತ್ತದೆ. ಹಾಗಂತ ಕನ್ನಡವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದರು ಎಂಬರ್ಥವಲ್ಲ. ಈ ಎಲ್ಲಾ ಪಠ್ಯ ವಿಷಯಗಳೊಂದಿಗೆ ಕನ್ನಡ ವಿಷಯವೂ ಇತ್ತು. ಕನ್ನಡ ಕಲಿಸುವ ಗುರುಗಳಿದ್ದರು. ಅವರನ್ನು ನಾವು ‘ಗುರೂಜಿ’ ಎಂದೇ ಸಂಬೋಧಿಸುತ್ತಿದ್ದೆವು.  ಹಿಂದಿ ಕಲಿಸುವ ಶಿಕ್ಷಕರನ್ನು ‘ಶ್ರೀಮಹಾನ್ ಜೀ’ ಎಂದು ಕರೆಯುವ ವಾಡಿಕೆಯಿತ್ತು. ಇಂತಹ ಕೇಂದ್ರಿಯ ವಿದ್ಯಾಲಯದೊಳಗೆ ಇಂಗ್ಲೀಷ್ ಮತ್ತು ಹಿಂದಿಗೆ ಎಷ್ಟು ಮಹತ್ವವಿತ್ತೋ ಕನ್ನಡ ಭಾಷೆಗೂ ಅಷ್ಟೇ ಸ್ವಚ್ಛಂದವಾದ ಮಹತ್ವವಿತ್ತು. ಶಾಲೆ ನಡೆಯುತ್ತಿದ್ದ ವಾರದ ಆರು ದಿನಗಳಲ್ಲಿ ಬುಧವಾರ ಮತ್ತು ಶನಿವಾರ ಮುಂಜಾನೆಯ ಪ್ರಾರ್ಥನೆ ಕಸ್ತೂರಿ ಕನ್ನಡದಲ್ಲಿಯೇ ಸಾಂಗವಾಗಿ ಸಾಗುತ್ತಿತ್ತು. ತನ್ನದೇ ಘನತೆ ಹೊಂದಿದ್ದ ‘ಜವಾಹರ್ ನವೋದಯ ವಿದ್ಯಾಲಯ’ ಶಾಲೆಗಳ ಪ್ರಾರ್ಥನೆಗಳಲ್ಲಿ ಕನ್ನಡ ಪ್ರೇಮ ಮೊಳಗುತ್ತಿತ್ತು. ‘ಜೋಗದ ಸಿರಿ ಬೆಳಕಿನಲ್ಲಿ, ತುಂಗೆಯ ತೆನೆ ಬಳುಕಿನಲ್ಲಿ...’ ಹಾಡನ್ನು ಸಾಮೂಹಿಕವಾಗಿ ಹಾಡುವಾಗ ಮೈ ರೋಮಗಳು ನೆಟ್ಟಗಾಗುತ್ತಿದ್ದವು. 


‘ಇತಿಹಾಸದ ಹಿಮದಲ್ಲಿನ
ಸಿಂಹಾಸನ ಮಾಲೆಯಲ್ಲಿ
ಗತಸಾಹಸ ಸಾರುತಿರುವ
ಶಾಸನಗಳ ಸಾಲಿನಲ್ಲಿ...’ ಎಂಬ ಸಾಲಗಳನ್ನು ವಾದ್ಯಗೋಷ್ಠಿಯೊಂದಿಗೆ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಒಟ್ಟಿಗೆ ಒಮ್ಮೆಲೇ ಚೀರಿ ಹಾಡುವಾಗ ಮೈ ಮನ ಪುಳಕಗೊಂಡು ಒಮ್ಮೆ ನಿರ್ಲಿಪ್ತರಾಗಿ ತೇಲಿದಂತಾಗುತ್ತಿತ್ತು. ಕನ್ನಡವನ್ನು ಅಷ್ಟೇ ಪ್ರೀತಿಸುತ್ತಿದ್ದ ನಮ್ಮ ಪ್ರಾಂಶುಪಾಲರಾಗಿದ್ದ ಶ್ರೀ ಸಿದ್ಧರಾಮೇಗೌಡರು ಇನ್ನೊಂದಿರಲಿ, ಇನ್ನೊಂದಿರಲಿ ಎಂದು ಮತ್ತೆ ಹಾಡಿಸುತ್ತಿದ್ದರು. 

‘ಜಯ ಕರ್ನಾಟಕ, ಜಯ ಕರ್ನಾಟಕ, ಜಯ ಕರ್ನಾಟಕ ಮಾsssತೆ.. 
ಜಯಗೀತೆ ಹಾಡಿ, ಸುತರೆಲ್ಲ ಕೂಡಿ
ವಂದಿಪೆವು ಜನ್ಮದಾತೆ...’ – ಈ ಹಾಡಿನೊಂದಿಗೆ ತಾಯಿನೆಲದ ಮೇಲೆ ಮತ್ತಷ್ಟು ಭಾವುಕರಾಗುತ್ತಿದ್ದೆವು. 
 ‘ಅರಿವೆ ಗುರು ನುಡಿ ಜ್ಯೋತಿರ್ಲಿಂಗ
ದಯವೇ ಧರ್ಮದ ಮೂಲತರಂಗ
ವಿಶ್ವಭಾರತಿಗೆ ಕನ್ನಡದಾರತಿ
ಮೊಳಗಲಿ ಮಂಗಳ ಜಯಭೇರಿ’ –  ಕಣವಿಯವರ ಈ ಹಾಡನ್ನು ‘ಸಂಗೀತ ತಂಡ’ ಹಾಡುವಾಗ ಮೈನವಿರೇಳಿ ನಿಂತಲ್ಲೇ ಕಂಪಿಸಿ ಎಲ್ಲಾ ಬಂಧನಗಳು ಆ ಕ್ಷಣಕ್ಕೆ ಮೈಬಿಟ್ಟು 'ತಾಯಿನೆಲ ಪ್ರೇಮ ಮಿಗಿಲಲ್ಲವೇ' ಎಂದುಕೊಂಡ ಮನಸ್ಸು ಪಕ್ವಗೊಳ್ಳುತ್ತಿತ್ತು. ಇಷ್ಟಲ್ಲದೇ ವಾರವೆಲ್ಲಾ ನಡೆಯುತ್ತಿದ್ದ ಅನೇಕ ಕಾರ್ಯಕ್ರಮಗಳು, ಹಬ್ಬ ಹರಿದಿನಗಳು, ಸರ್ವಧರ್ಮ ಪ್ರಾರ್ಥನೆಗಳು ಹೆಚ್ಚಾಗಿ ಕನ್ನಡದಲ್ಲಿಯೇ ನಡೆಯುತ್ತಿತ್ತು. ‘ಯಾವುದೇ ಭಾವವನ್ನೇ ಆಗಲಿ, ಆ ಕ್ಷಣದ ಅಳು ಅಥವಾ ನಗುವಾಗಲಿ, ಕುಣಿದಾಡುವ ಸಂಗತಿಯಾಗಲಿ, ಮಾತೃ ಭಾಷೆಯ ಮೂಲಕವಷ್ಟೇ ಪಕ್ವವಾಗಿ ಸಂವಹಿಸಬಹುದು’ ಎಂಬುದನ್ನು ನಮ್ಮನ್ನೆಲ್ಲಾ ಸಲಹಿದ ಶಿಕ್ಷಕ ಪಿತೃಗಳು ಅರಿತುಕೊಂಡಿದ್ದರು. ವಿವಿಧ ಸದನ(ಎಲ್ಲಾ ವಿದ್ಯಾರ್ಥಿಗಳನ್ನು ಒಟ್ಟಿಗೆ ಸೇರಿಸಿ ಮತ್ತೆ ಕೆಲವು ಗುಂಪುಗಳನ್ನಾಗಿ ಮಾಡಿ ಅವುಗಳನ್ನು ‘ಸದನ’ ಎಂದು ಕರೆಯುತ್ತಾರೆ)ಗಳ ನಡುವೆ ವರ್ಷವೆಲ್ಲಾ ನಡೆಯುತ್ತಿದ್ದ ‘ಸಾಂಸ್ಕಂತಿಕ ಕಾರ್ಯಕ್ರಮ ಸ್ಪರ್ಧೆ’ಗಳಲ್ಲಿ ಕನ್ನಡವೇ ನಲಿದಾಡುತ್ತಿತ್ತು. ಕನ್ನಡ ಭಾವಗೀತೆಗಳು, ಜನಪದ ಗೀತೆಗಳು, ಚಿತ್ರಗೀತೆಗಳು, ಸ್ವರಚಿತ ಕವನಗಳು, ನಾಟಕ, ಚರ್ಚಾಕೂಟ, ಆಶುಭಾಷಣ ಸ್ಪರ್ಧೆ, ಪ್ರಬಂಧ, ಕನ್ನಡ ಮಹನೀಯರ ಚಿತ್ರಗಳನ್ನು ಗುರುತಿಸುವ ಸ್ಪರ್ಧೆಗಳು - ಹೀಗೆ ಹತ್ತು ಹಲವಾರು ಸೃಜನಶೀಲ ಕಾರ್ಯಕ್ರಮಗಳು ಕನ್ನಡಮ್ಮನ ಜೊತೆ ಜೊತೆಗೆ ನನ್ನಂತಹವರಿಗೆ ಸ್ವಲ್ಪ ನಂಟು ಬೆಳೆಸಿದವು. ಕೇರಳ, ತಮಿಳುನಾಡು, ಆಚಿಧ್ರಪ್ರದೇಶ, ಮಧ್ಯಪ್ರದೇಶಗಳಿಂದ ಬರುತ್ತಿದ್ದ ಶಿಕ್ಷಕರು ಕೆಲವೇ ದಿನಗಳಲ್ಲಿ ನಿರರ್ಗಳವಾಗಿ ಕನ್ನಡ ಮಾತನಾಡುವುದನ್ನು ಗಮನಿಸಿದಾಗ ‘ಕನ್ನಡ ಭಾಷೆಯನ್ನು ಕಲಿಯಲು ಅಗಾಧವಾದಂತಹ ಪ್ರಯತ್ನ ಖಂಡಿತ ನಿಷಿದ್ಧ, ಸುಲಭವಾಗಿ ಒಲಿಸಿಕೊಳ್ಳಬಹುದಾದ ಭಾಷೆ’ ಎಂದೆನಿಸುತ್ತಿತ್ತು.

ಕನ್ನಡ ರಾಜ್ಯೋತ್ಸವದ ಆಚರಣೆಗೆ ವಿದ್ಯಾರ್ಥಿಗಳೊಂದಿಗೆ ತಿಂಗಳುಗಟ್ಟಲೇ ತಾಲೀಮು ನಡೆಸುತ್ತಿದ್ದ ಶಿಕ್ಷಕರು ಕನ್ನಡನಾಡು ನುಡಿಗೆ ಹೋರಾಡಿದ ದಿಗ್ಗಜರ ಉಪಸ್ಥಿತಿಯಲ್ಲಿ ಸಮಾರಂಭವನ್ನು ಅಷ್ಟೇ ಅಚ್ಚುಕಟ್ಟಾಗಿ ನಡೆಸುವುದಲ್ಲದೆ. ‘ಕರ್ನಾಟಕದ ಇತಿಹಾಸದಲ್ಲಿ...’, ‘ಕನ್ನಡ ನಾಡಿನ ರನ್ನದ ರತುನ, ಕೇಳೋ ಕಥೆಯನ್ನ..’  ಮುಂತಾದ ಗೀತೆಗಳಿಗೆ ಸಂಯೋಜಿಸುತ್ತಿದ್ದ ಸಾಮೂಹಿಕ ನೃತ್ಯ ಎಂಥಹವರಿಗೂ ನಾಡಭಕ್ತಿ ಉಕ್ಕಿಸುತ್ತಿತ್ತು. ಈ ಎಲ್ಲಾ ವಿಚಾರಗಳಿಂದಲೋ ಏನೋ 6ನೇ ತರಗತಿಯವರೆವಿಗೂ ಕರ್ನಾಟಕ ತಮಿಳುನಾಡು ಗಡಿಭಾಗದ ಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಓದಿದ ನನಗೆ ಕನ್ನಡ ಭಾಷೆ ಹೆಜ್ಜೇನಿಗಿಂತಲೂ ಸಿಹಿಯಾದದ್ದು. ಕೇವಲ ಹತ್ತನೇ ತರಗತಿವರೆವಿಗಷ್ಟೇ ಕನ್ನಡ ಅಭ್ಯಸಿಸುವ ಅವಕಾಶವಿದ್ದ ನನಗೆ ಕನ್ನಡ ಎಂದೂ ಹೊರೆಯಾಗಲಿಲ್ಲ. ಈಗಲೂ ಅಷ್ಟೇ,  ಸಾಮಾನ್ಯವಾಗಿ ಗೋಚರಿಸಿಕೊಳ್ಳದ ತಪ್ಪುಗಳನ್ನು ಬಿಟ್ಟರೆ ನನ್ನ ತಾಯಿ ಭಾಷೆಯನ್ನು ಅಷ್ಟೇ ನಿರರ್ಗಳವಾಗಿ ಮಾತನಾಡಬಲ್ಲೆ ಮತ್ತು ಬರೆಯಬಲ್ಲೆ. ಇಷ್ಟೆಲ್ಲಾ ಹೇಳಿಕೊಟ್ಟ ಪುಣ್ಯಸ್ಥಳದೊಳಗಿದ್ದ ಕಾಯಕಯೋಗಿಗಳು ಅನಿವಾರ್ಯತೆಗಾಗಿ ಬೇಕಾಗುವ ಆಂಗ್ಲಭಾಷೆನ್ನೂ ಅಷ್ಟೇ ನಿರರ್ಗಳವಾಗಿ ಮಾತನಾಡುವುದನ್ನು ಕಲಿಸಿಕೊಟ್ಟಿದ್ದಾರೆ. ಒಂದು ಭಾಷೆಯನ್ನು ಪ್ರೀತಿಸುವುದೆಂದರೆ ಮತ್ತೊಂದು ಭಾಷೆಯನ್ನು ದ್ವೇಷಿಸುವುದು ಎಂಬರ್ಥವಲ್ಲ, ಆದರೆ ನೆರೆಮನೆಯ ತಾಯಿ ರೇಷ್ಮೆ ಸೀರೆ ತೊಟ್ಟಿರುವಾಗ,  ಹರಿದ ಸೀರೆ ಉಟ್ಟುಕೊಂಡಿದ್ದರೂ ನಮ್ಮಮ್ಮನೇ ನಮ್ಮ ದೇವತೆ.

ಆದರೆ, ಇಷ್ಟೆಲ್ಲಾ ಶಕ್ತಿಯನ್ನು ತನ್ನೊಳಗೆ ಹದುಗಿಸಿಕೊಂಡಿರುವ, ಓದುವುದು ಮತ್ತು ಬರೆಯುವುದರಲ್ಲಿ ಯಾವುದೇ ತೊಡಕಿಲ್ಲದ, ಮಲ್ಲಿಗೆಯಕ್ಷರಗಳನ್ನು ದಾರಕ್ಕೆ ಪೋಣಿಸಿದಂತಿರುವ ಪ್ರತಿ ಪದವೂ ನಿರರ್ಗಳವಾಗಿರುವಾಗ ಕನ್ನಡಭಾಷೆಗೆ ರಾಜ್ಯೋತ್ಸವ ಎಂಬ ಒಂದೇ ದಿನದ ಸಂಭ್ರಮಾಚರಣೆ ಸಹ್ಯವೇ? ವರ್ಷವೆಲ್ಲಾ ಪೂಜೆ ಮಾಡುವ ಇರಾದೆಯಿದ್ದರೆ ಸಾಕು, ನಾಡು ನುಡಿ ಪ್ರೇಮವನ್ನು ಒಂದೇ ದಿನದ ಉತ್ಸವಕ್ಕೆ ಕೂಡಿಡಲು ಸಾಧ್ಯವಿಲ್ಲ ಎಂಬ ಪ್ರಶ್ನೆ ಮೊದಲಿನಿಂದಲೂ ಪ್ರಶ್ನೆಯಾಗಿಯೇ ಉಳಿದಿದೆ. ಹಬ್ಬ, ಹರಿದಿನ, ಸಂಭ್ರಮ, ಉತ್ಸವಗಳೆಲ್ಲಾ ಸಾಮಾಜಿಕ ಕೌಂಟುಂಬಿಕತೆ ಮೆರೆಯಲು ಸಹಕಾರಿ, ಸಮಾಜದ ಜನಗಳು ಒಂದೆಡೆ ಕೂಡಿಕೊಳ್ಳಲು ಇದೊಂದು ಸಂದರ್ಭ, ನಮ್ಮೊಳಷ್ಟೇ ಅಡಗಿಕೊಳ್ಳುವ ನೆಲ ನುಡಿಯ ಪ್ರೇಮವನ್ನು ಹೊರಹಾಕುವ ವಿಧಾನವೆಂದುಕೊಂಡರೂ, ಅನೇಕರು ಆಚರಣೆಗಳಲ್ಲಿನ ಆ ದಿನದುದ್ದೇಶ ಮತ್ತು ಮೂಲ ಸೊಗಡನ್ನೇ ಮರೆತು ಅನ್ಯ ಕಾರಣಗಳಿಗೆ ಸಂಭ್ರಮಾಚರಣೆಯನ್ನು ಆಯೋಜಿಸುವುದು ಇಂದಿನ ದುರಂತ. 

ಕರ್ನಾಟಕದ ಪ್ರತಿ ಬೀದಿಯೂ ರಾಜ್ಯೋತ್ಸವದ ಆಚರಣೆ ಎಂಬ ನೆಪದಲ್ಲಿ ತನ್ನನ್ನು ತಾನು ಸಿಂಗರಿಸಿಕೊಂಡಿರಬಹುದು. ಆದರೆ ಈ ಸಿದ್ಧತೆ ನಡೆದಿರುವ ಉದ್ದೇಶ ಅನೇಕ ಕಡೆ ಈಡೇರುವುದಿಲ್ಲವೆಂಬುದೇ ದುರಂತ? ಎಷ್ಟೋ ಬೀದಿಗಳಲ್ಲಿ ಗಣೇಶ ಚತುರ್ಥಿ ಪ್ರಯುಕ್ತ, ಹತ್ತಾರು ಸಾವಿರ ಬೆಲೆ ಬಾಳುವ ಗಣೇಶನನ್ನು ಪ್ರತಿಷ್ಠಾಪಿಸಿ, ನಂತರ ಅದೇ ಮೂರ್ತಿಯೆದುರೇ ದೊಡ್ಡ ವೇದಿಕೆ ಕಟ್ಟಿ ಕಿವಿ ಕಿತ್ತುಹೋಗುವ ‘ಆರ್ಕೆಸ್ಟ್ರಾ’ ವೆಂಬ ಗದ್ದಲ ಏರ್ಪಡಿಸಿರುತ್ತಾರೆ. ತಿಂಗಳೆಲ್ಲಾ ನಡೆಯುವ ಇಂತಹ ಗದ್ದಲಗಳಿಗೆ ಕಿವಿಕೊಟ್ಟು ಕೊಟ್ಟು ಎಷ್ಟೋ ಪ್ರಾಣಿಗಳು ಹೆದರಿರುತ್ತವೆ, ಗರ್ಭಿಣಿ ಸ್ತ್ರೀಯರು ತಾತ್ಕಾಲಿಕವಾಗಿ ದೂರದ ಮನೆಗಳಲ್ಲಿರಬೇಕು, ಎಳೆ ಕಂದಮ್ಮಗಳು ನಿದ್ದೆಯಲ್ಲಿಯೇ ಬೆಚ್ಚಿ ಬೀಳುತ್ತವೆ. ಮೇಲಕ್ಕೆತ್ತಿದ ಕೈ ಕೆಳಗಿಳಿಸದೇ ಮೂಕವಾಗುವ ಗಣಪತಿ ಮುಂದೆ ಅರ್ಧ ಬಟ್ಟೆ ತೊಟ್ಟ ಲಲನೆಯರ ಕುಣಿತವೆಂಬುದು ಸಾಮಾನ್ಯ. ಕನ್ನಡ ರಾಜ್ಯೋತ್ಸವದಾಚರಣೆಯೂ ಅದೇ ಮಾರ್ಗದಲ್ಲಿರುವುದು ಸಹಿಸಿಕೊಳ್ಳಲಾಗದ ಕಹಿಸತ್ಯ. ಕನ್ನಡಪ್ರೇಮ ಉಕ್ಕಿಸುವಂತಹ, ನಾಡುನುಡಿಗೆ ದುಡಿದವರನ್ನು ಸ್ಮರಿಸಿಕೊಳ್ಳುವಂತಹ ಯಾವುದೇ ಕಾರ್ಯಕ್ರಮವಿರುವುದಿಲ್ಲ. ಮನೆ ಮನೆಯಲ್ಲೂ ಚಂದಾ ವಸೂಲಿ ಮಾಡುವುದು ಮೊದಲ ರೂಢಿ, ತಿನ್ನಲು ಅನ್ನಕ್ಕೆ ಗತಿಯಿಲ್ಲದವರೂ ಸಂಯೋಜಕರೆನಿಸಿಕೊಳ್ಳುವ ಪುಂಡರಿಗೆ ಸಾಲ ಮಾಡಿಯಾದರೂ ದುಡ್ಡು ನೀಡಲೇಬೇಕಾದ ಪರಿಸ್ಥಿತಿಯಿದೆ. ಎಷ್ಟೋ ಊರುಗಳಲ್ಲಿ ಒಂದು ಬೀದಿಗೆ ಮತ್ತೊಂದು ಬೀದಿಯವರು ಕಾಲಿಟ್ಟರೆ ಸಾಕು ದುಡ್ಡಿಗಾಗಿ ಪೀಡಿಸಿ ಪೀಡಿಸಿ ಬಲವಂತವಾಗಿ ವಸೂಲಿ ಮಾಡಿಕೊಳ್ಳುತ್ತಾರೆ. ಸ್ಕೂಟರಿಗಿಷ್ಟು, ಕಾರಿಗಿಷ್ಟು ಎಂಬ ಪೂರ್ವ ನಿಗಧಿತ ವಸೂಲಿಗಳು. ಈ ಪುಡಾರಿಗಳೆಲ್ಲಾ ಯಾವುದೋ ಒಂದು ಪಕ್ಷಕ್ಕೆ ಸೀಮಿತಗೊಂಡಿರುವವರಾಗಿರುವುದಲ್ಲದೇ,  ಕಾರ್ಯಕ್ರಮದ ಹೆಸರಿನಲ್ಲಿ ಮತ್ತೇ ತಮ್ಮ ಮಾತೃಪಕ್ಷದ ವೈಭವದ ಜೊತೆಗೆ, ಅತಿಥಿಗಳಲ್ಲಿ ಅನೇಕರು ಅದೇ ಪಕ್ಷಕ್ಕೆ ಸೇರಿದರಾಗಿರುತ್ತಾರೆ. ಇದನ್ನೆಲ್ಲಾ ಸಹಿಸದ ಮತ್ತೊಂದು ಗುಂಪು ಗದ್ದಲವೆಬ್ಬಿಸಲು ಕಂಠಪೂರ್ತಿ ಕುಡಿದು ಅಲ್ಲೇ ಎಲ್ಲೋ ಸಜ್ಜಾಗಿ ನಿಂತಿರುತ್ತಾರೆ.

ಇಷ್ಟೆಲ್ಲ ಒಂದೆಡೆಯಾದರೆ, ತಾಯಿ ಭುವನೇಶ್ವರಿಯ ಫೋಟೋ ಎಲ್ಲೋ ಒಂದೆಡೆ ತೂಗಿಕೊಂಡಿದ್ದರಷ್ಟೇ ಸಾಕು ಕೆಲವರಿಗೆ. ಉಳಿದಂತೆ ಸಿನಿಮಾ ನಟರ ಚಿತ್ರಗಳೇ ರಾರಾಜಿಸುತ್ತಿರುತ್ತವೆ. ಗಡಿ ವಿಚಾರವಾಗಿ ಹೋರಾಡಿದ ಮಹನೀಯರಾಗಲಿ, ಏಕೀಕರಣಕ್ಕೆ ಪಟ್ಟು ಹಿಡಿದು ಇಂದಿನ ಅಖಂಡತೆಗೆ ಶ್ರಮಿಸಿದವರಾಗಲಿ, ಕನ್ನಡ ಭಾಷೆ ಬೆಳೆಸಿದ ಕವಿಗಳ ಚಿತ್ರಗಳಾಗಲಿ ಅಂದು ನೆನಪಾಗುವುದು ತೀರಾ ವಿರಳ. 2011 ರ ನವೆಂಬರ್ 1 ರಂದು ನಾನಿದ್ದ ಚಿಕ್ಕಮಗಳೂರಿನ ನನ್ನ ಮನೆಯ ಮುಂದೆ ನಡೆದ ಸಂಭ್ರಮಾಚರಣೆಯಲ್ಲಿ ಇಷ್ಟೆಲ್ಲಾ ಆಗುವುದರೊಂದಿಗೆ ಕನ್ನಡ ಪ್ರೇಮ ಸಾರುವ ಒಂದೆರಡು ಸಿನಿಮಾ ಹಾಡುಗಳ ಮೂಲಕ ಪ್ರಾರಂಭವಾದ ಕಾರ್ಯಕ್ರಮ ಕೊನೆಗೆ ‘ಇಷ್ಟೆನಾ ಪಂಕಜ, ಒಂದೇ ಒಂದು ಸಾರಿ ಕಣ್ತುಂಬ ನೋಡೆ..’ ಕಡೆಗೆ ತಿರುಗಿಕೊಂಡಿತು. ನಂತರ ಮೈ ಕಾಯಿ ಕಾಣಿಸಲೇಬೇಕು ಎಂದು ಪಣ ತೊಟ್ಟವರಂತೆ ಬಂದಿದ್ದ ಒಂದಷ್ಟು ಹುಡುಗಿಯ ನೃತ್ಯ. ಅವರು ಬಗ್ಗಿದರೆ ತಗ್ಗಿದರೆ ಚೀರಾಡುವ ಕನ್ನಡ ಬಾವುಟ ಕೈಯಲ್ಲಿ ಹಿಡಿದುಕೊಂಡವರು. ಕೊನೆಗೆ ಕಂಠಪೂರ್ತಿ ಕುಡಿದವರ ಬೀದಿ ಕುಣಿತ. ಕೈ ಕಾಲುಗಳಿಗೆ ಸಿಕ್ಕ ಚೇರು ಮೇಜುಗಳೆಲ್ಲಾ ಪುಡಿಪುಡಿ. ಒಂದಷ್ಟು ಕುಡುಕರಿಂದ ತಾಯಿ ಭುವನೇಶ್ವರಿಗೆ ಮುತ್ತು. ಕೊನೆಗೆ ಎರಡು ಗುಂಪುಗಳ ನಡುವೆ ಘರ್ಷಣೆ ಪ್ರಾರಂಭವಾಗಿ, ತಲೆ ಹೊಡೆದುಕೊಂಡು ರಕ್ತ ಸೋರಿ, ಜಗಳ ತಾರಕಕ್ಕೇರಿದಾಗ ಅಷ್ಟು ಹೊತ್ತಿನಲ್ಲಿ ಬಂದ ಪೋಲೀಸ್ ಗಳಿಗೆ ಇವರೇ ಅತಿಥಿಗಳು.

ವರ್ಷದ ಒಂದು ದಿನದಲ್ಲಿ ಇಷ್ಟೆಲ್ಲಾ ರಾದ್ಧಾಂತ-ರಗಳೆ ಎಬ್ಬಿಸಿ ಕನ್ನಡ ಸಂಸ್ಕೃತಿ, ಪರಂಪರೆಯನ್ನು ಹಾಳುಗೈಯುವ ಬದಲು, ಆ ತಾಯಿಯನ್ನು ಪ್ರತಿನಿತ್ಯ ಮನಸ್ಸಿನಲ್ಲಿ ನೆನಪಿಸಿಕೊಂಡರಷ್ಟೇ ಸಾಕೆನಿಸುತ್ತದೆ. ಪ್ರತಿ ವಿಚಾರದಲ್ಲೂ ಕನ್ನಡಕ್ಕಾಗಿ ಸ್ವ-ನಿಷ್ಠೆಯಿಂದಿ, ಸ್ವಯಂಪ್ರೇರಿತರಾಗಿ ಹೋರಾಡುವ ಕನ್ನಡ ಸಂಘಟನೆಗಳ ಜೊತೆ ಕೈಜೋಡಿಸಿ ನಾಡು ನುಡಿಗೆ ತೊಂದರೆಯಾದಾಗ ನಮ್ಮದೂ ಒಂದು ಕೂಗನ್ನು ಸೇರಿಸಿದರೆ ಒಳಿತು. ಕನ್ನಡ ಎರಡು ಭಾಗವಾಗಲಿ ಎಂಬ ಕಿಡಿಯನ್ನು ಇಟ್ಟು ಮುಂದೆ ಒಂದು ದಿನ ಸತ್ತುಹೋಗುವ ಉಮೇಶ್ ಕತ್ತಿಯಂತಹ ಜನಗಳ ಹುಟ್ಟಡಗಿಸಲು, ರಾಜಧಾನಿಯಾದ ಬೆಂಗಳೂರಿನಲ್ಲಿ ಕನ್ನಡವನ್ನು ಮರು(?)ಸ್ಥಾಪಿಸಲು, ಹೆಚ್ಚೆಚ್ಚು ಜನರಲ್ಲಿ ಕನ್ನಡ ಪ್ರೀತಿ ಮೂಡಿಸಲು, ಕನ್ನಡ ಪುಸ್ತಕ ಓದಿಸಲು, ನಮ್ಮ ನೆಲ ಜಲ ನುಡಿಯನ್ನು ಕಾಪಾಡಿಕೊಳ್ಳಲು ಇಂತಹ ಕೂಗಾಟ ಚೀರಾಟವಷ್ಟೇ ತುಂಬಿಕೊಳ್ಳುವ ಕಾರ್ಯಕ್ರಮಗಳಿಂದ ಸಾಧ್ಯವಿಲ್ಲ.

Comments