ಬಾ..ಬಬಿಯಾ..ಬಾ........
ದೇವಸ್ಥಾನದ ಫೋಟೋ ಹಾಕಿ ಬಬಿಯಾನನ್ನ ಕರೆಯುತ್ತಾನಲ್ಲಾ-ಅಂತ ಯೋಚಿಸಿದಿರಾ? ಅದೇ ಇಲ್ಲಿನ ವಿಶೇಷತೆ. ಈ ಸ್ಥಳದ ಸ್ಟಾರ್ ಎಟ್ರಾಕ್ಷನ್-"ಬಬಿಯಾ" ಎಂಬ ಮೊಸಳೆ! ಇಲ್ಲಿಗೆ ಬಂದ ಜನರೆಲ್ಲಾ ದೇವರಿಗೆ ಕೈ ಮುಗಿದ ನಂತರ ಮೊದಲು ಹುಡುಕುವುದು "ಬಬಿಯಾ"ನನ್ನೇ! ಈ ಮೊಸಳೆ ಬಗ್ಗೆ ಮತ್ತೆ ಹೇಳುವೆ. ಮೊದಲು ಈ ದೇವಸ್ಥಾನದ ಇನ್ನಷ್ಟು ವಿಶೇಷತೆಗಳನ್ನು ಹೇಳಲಿಕ್ಕಿದೆ.
ಇದು ಕೇರಳದ "ಅನಂತ ಪದ್ಮನಾಭ" ದೇವಸ್ಥಾನ.. ತಡೀರಿ...ಆ..ಅತ್ಯಂತ ಶ್ರೀಮಂತ ಅನಂತ ಪದ್ಮನಾಭ-ತಿರುವನಂತಪುರದಲ್ಲಿರುವುದು.ಇದು ಕುಂಬ್ಲೆ ಸಮೀಪದಲ್ಲಿರುವ "ಅನಂತಪುರ"ದ ಪದ್ಮನಾಭ ದೇವಸ್ಥಾನ. ಈ ದೇವಸ್ಥಾನವೇ ಆ ಶ್ರೀಮಂತ ದೇವಾಲಯದ ಮೂಲ! ಇಲ್ಲಿಂದ ಗುಹೆಯ ಮೂಲಕ ನೇರ ಅಲ್ಲಿಗೆ ತಲುಪಬಹುದು. ಈ ಗುಹೆಯ ಮೂಲಕ ಹೋಗಿ ಅಲ್ಲಿನ ಧನಕನಕ ತಂದರೆ ಹೇಗೆ?-ನಿಮಗೆ ಬಂದ ಹಾಗೇ ನನಗೂ ಈ ಯೋಚನೆ ಬಂತು. ಆದರೆ ಈ ಗುಹೆಯ ಆ ಬದಿಯ ಬಾಗಿಲು ಧನಕನಕವಿರುವ ಗುಹೆಗೇ ತೆರೆಯುತ್ತದೆಯೋ ಎಂದು ಕನ್ಫರ್ಮ್ ಮಾಡಿ ನಂತರ ಹೋಗೋಣ.
ಸುತ್ತಲೂ ಕೊಳ ನಡುವೆ ದೇವಸ್ಥಾನವಿರುವ ಕೇರಳದ ಏಕೈಕ ದೇವಾಲಯವಿದು.
ಇಲ್ಲಿನ ದೇವರನ್ನು "ಕಡು ಶರ್ಕರ ಪಾಕ" ವಿಧಾನದಿಂದ ಮಾಡಿರುವುದು. ಇದರ ಬಗ್ಗೆ ಹಾಗೂ ದೇವಸ್ಥಾನದ ಬಗ್ಗೆಯೂ ವಿವರವಾಗಿ ಈ ಬ್ಲಾಗಲ್ಲಿ ಬರೆದಿರುವರು- http://mounakanive.blogspot.in/2011/07/blog-post_14.html
"ಬಬಿಯಾ" ಮೊಸಳೆಯ ಫೋಟೋ ತೆಗೆಯಬೇಕೆಂದು ಬಹಳ ಪ್ರಯತ್ನಿಸಿದೆ. ಆದರೆ ಈ ಧಡಿಯಾನನ್ನ ನೋಡಿದ ಬಬಿಯಾ ಗುಹೆಯಿಂದ ಹೊರಗೆ ಬರಲೇ ಇಲ್ಲ. ಬರಿಗಾಲಲ್ಲಿ ನಡೆದು ಅಭ್ಯಾಸವಿಲ್ಲದ ನನಗೆ ಅಲ್ಲಿನ ಬಿಸಿಲಿಗೆ ಮುರಕಲ್ಲಿನ ಮೇಲೆ ನಡೆಯಲು ಆಗಲೇ ಇಲ್ಲ. ಜತೆಗಿದ್ದ ಭಾವಂದಿರನ್ನ ಫೋಟೋ ತೆಗೆಯಲು ಕಳುಹಿಸಿದೆ. ಇಷ್ಟರವರೆಗೆ ಅದೆಷ್ಟೋ ಜನರ ಕ್ಯಾಮರಾಗಳಿಗೆ ಪೋಸ್ ಕೊಟ್ಟೂ ಕೊಟ್ಟೂ ಸಾಕಾಗಿದ್ದ ಬಬಿಯಾ ಅವರ ಕ್ಯಾಮರಾ ಕಂಡಕೂಡಲೇ ನೀರೊಳಗೆ ಮರೆಯಾದ."ಬಾ..ಬಬಿಯಾ..ಬಾ.." ಎಂದು ಕರೆದೂ ಕರೆದೂ ಸಾಕಾಯ್ತು..........
(ಬಬಿಯಾ ಬಗ್ಗೆ ಇನ್ನಷ್ಟು ವಿವರಗಳು ಮೇಲಿನ ಕೊಂಡಿಯಲ್ಲಿವೆ)
ಈ ಶಾಸನ ಓದಲಾದರೆ ಇನ್ನಷ್ಟು ವಿವರಗಳು ಲಭ್ಯವಾಗುವುದು-
(ಚಿತ್ರಗಳು ಕೆಲವು-ನನ್ನ ಭಾವನ ಕ್ಯಾಮರಾದಿಂದ)
-ಗಣೇಶ.
Comments
ಗಣೇಶ್,
ಗಣೇಶ್,
ಅದು ತುಳು ಲಿಪಿಯಲ್ಲಿರುವ ಶಾಸನ. ಈಚೆಗೆ ಇನ್ನೊಂದು ತುಳು ಶಾಸನ ಪರಕ್ಕಿಲದ ಬಳಿ ದೊರೆತಿರುವ ಸುದ್ದಿಯಿದೆ.
In reply to ಗಣೇಶ್, by kpbolumbu
ಕೃಷ್ಣಪ್ರಕಾಶ ಅವರೆ,
ಕೃಷ್ಣಪ್ರಕಾಶ ಅವರೆ,
ನೀವಂದಂತೆ ಅದು ತುಳು ಲಿಪಿಯಲ್ಲಿರುವ ಶಾಸನ. ತುಳು ಲಿಪಿಯನ್ನು ಚೆನ್ನಾಗಿ ಬಲ್ಲವರಿಲ್ಲದ ಕಾರಣ ಅದರಲ್ಲಿ ಬರೆದಿರುವ ವಿಷಯ ಗೊತ್ತಿಲ್ಲ.- http://www.udayavani.com/news/162L15TOusrism%E0%B2%85%E0%B2%A8-%E0%B2%A4%E0%B2%AA-%E0%B2%B0%E0%B2%A6-%E0%B2%8F%E0%B2%95--%E0%B2%97--%E0%B2%AE-%E0%B2%B8%E0%B2%B3-.html ; ಆದರೆ ತಮಗೆ ತುಳು ಲಿಪಿಯ ಅರಿವಿದೆ - http://sampada.net/blog/vasantshetty/06/11/2008/13375 ತಾವು ಪ್ರಯತ್ನಿಸಿ ನೋಡಬಹುದು.
ಧನ್ಯವಾದಗಳು.
-ಗಣೇಶ.
In reply to ಕೃಷ್ಣಪ್ರಕಾಶ ಅವರೆ, by ಗಣೇಶ
ಗಣೇಶ್,
ಗಣೇಶ್,
ಈ ಶಾಸನದ ವಿವರ ನನ್ನಲ್ಲಿದೆ. ಒಂದೆರಡು ದಿನಗಳಲ್ಲಿ ನೀಡಬಲ್ಲೆ.
In reply to ಗಣೇಶ್, by kpbolumbu
ಕೃಷ್ಣ ಪ್ರಕಾಶ್ ಅವರೆ,
ಕೃಷ್ಣ ಪ್ರಕಾಶ್ ಅವರೆ,
ನೀವು ನೀಡಬಲ್ಲಿರಿ ಎಂಬ ನನ್ನ ನಂಬಿಕೆ ನಿಜವಾಯಿತು. ಶಾಸನದ ವಿವರದ ನಿರೀಕ್ಷೆಯಲ್ಲಿ-ಗಣೇಶ.
In reply to ಕೃಷ್ಣಪ್ರಕಾಶ ಅವರೆ, by ಗಣೇಶ
ಸ್ವಸ್ತಿ ಶ್ರೀ ಮೀನಾನ್ಟ್
ಸ್ವಸ್ತಿ ಶ್ರೀ ಮೀನಾನ್ಟ್ ಬ್ರಹಸ್ಪತಿ
ಪ್ಪಿ ತಲೆ ತಿ(೦)ಗಳ್ ವೆನ್ದಿ ಕಾರ್ಯ
ವೈಕಿಂ ದೇವಯಾಸ್ತಿಕು ಜಯಸಿಂ
ಹ ದೆವೆೞ ಮುಗೆರೈರ ಗ್ರಾಮಕು
ತಡ್ಯ ಪರಿಹಾರೊ ಮಾತೊನುಲ
ಕಾತೆೞ ಮುಗೆರೈರ ಗ್ರಾಮೊ ಕಾಪಾ
ಡ್ತ್ ಕೊಂಡೆೞ ಈ ಸಂಕೇತ ಕಾಪು
ಅಬೆ ಪಲ್ಲಿಡ್ತ್ ಒರಿಯೆ ಅಪ್ಪಿನ್ಟ್
ಅೞ್ಡ ಕರ್ತಾವ್ ಒವ್ವ್ ಪನ್ತಿನ ವಾ
ಗ್ರಾಮದನ್ನ್ಟ್ಡ್ ಪನ್ತಿನ ಗ್ರಾಮಂ ಕೆಂಜಿಲೞ್
ತಿಗೆ ಪನ್ತಿನಾಯೆ ಎರ್ದ್ ಅಡ್ತಿನಾ
ಯೆ ಗ್ರಾಮಂಕ್ ಪಿದೆ ಈ ಗ್ರಾಮನ್ನ್ಡ್ತ್ ಸಂಕೇ
ತ(ನ್) ಯೆಸ್ತಿನಾಯೆ ಗ್ರಾಮಂಕ್ ಪಿದ ಗ್ರಾ
ಮನ್ತ -- ಸಾಕ್ಷಿ ---
(ಸಂಗ್ರಹದಿಂದ)
In reply to ಸ್ವಸ್ತಿ ಶ್ರೀ ಮೀನಾನ್ಟ್ by kpbolumbu
ಕೃಷ್ಣಪ್ರಕಾಶರೆ, ತಮ್ಮ
ಕೃಷ್ಣಪ್ರಕಾಶರೆ, ತಮ್ಮ ಸಂಗ್ರಹದಿಂದ ಈ ವಿವರ ಹುಡುಕಿಕೊಟ್ಟದ್ದಕ್ಕೆ ತುಂಬಾ ಧನ್ಯವಾದಗಳು. ಅರ್ಥಮಾಡಿಕೊಳ್ಳಲು ಕಷ್ಟವಿದೆ. ನಾನಂದುಕೊಂಡಂತೆ-ಇದಕ್ಕೂ ದೇವಸ್ಥಾನಕ್ಕೂ ಯಾವುದೇ ಸಂಬಂಧವಿರಲಿಕ್ಕಿಲ್ಲ. ಬಹುಷಃ ಮೊಗವೀರ ಜನಾಂಗ( ಸಮುದ್ರ+ ಕುಂಬ್ಲ ಸಮೀಪ ಈ ಜನಾಂಗದವರು ಇದ್ದಿರಬಹುದು. http://en.wikipedia.org/wiki/Kumbla ) ಕ್ಕೆ ಸಂಬಂಧಿಸಿದ ಸ್ಥಳದ ಬಗ್ಗೆ...ಜಯಸಿಂಹ ದೊರೆ ನೀಡಿದ್ದು......ಬರೆದಿರಬಹುದು. ?
-ಗಣೇಶ.
In reply to ಕೃಷ್ಣಪ್ರಕಾಶರೆ, ತಮ್ಮ by ಗಣೇಶ
ಧನ್ಯವಾದಗಳು ಗಣೇಶ್.
ಧನ್ಯವಾದಗಳು ಗಣೇಶ್.
ಮೊಗವೀರ ಜನಾಂಗದ ಬಗ್ಗೆ ಅಲ್ಲ. ’ಮೊಗ್ರಾಲ್’ ಗ್ರಾಮದ ಬಗ್ಗೆ ಇರಬಹುದು. ’ಮುಗರೈರ ಗ್ರಾಮ’ ಎನ್ನಲಾಗಿದೆ. ಕುಂಬಳೆ ರಾಜಮನೆತನ ಮಾಯಿಪ್ಪಾಡಿಗೆ ಸ್ಥಳಾಂತರಗೊಳ್ಳುವ ಮುನ್ನ ಕುಂಬಳೆಯಲ್ಲಿ ನೆಲೆಸಿತ್ತು. ಆದ ಕಾರಣ ಅದು ಕುಂಬಳೆಗ ಸಮೀಪದ ಮೊಗ್ರಾಲಿಗೆ ಸಂಬಂಧಪಟ್ಟದ್ದೆಂಬ ಊಹೆಗೆ ಎಡೆಯಿದೆ. ಅದೂ ಅಲ್ಲದೆ ಮುರ ಕಲ್ಲಿನ ಮೇಲೆ ಕರಿಕಲ್ಲಿನ ಶಾಸನವನ್ನು ಸ್ಥಾಪಿಸಿರುವ ಕಾರಣ ಈ ಶಾಸನವನ್ನು ಬರೆಯಿಸಿರುವ ತಾಣ ಇದೇ ಆಗಿರಬೇಕಾಗಿಲ್ಲ.
ತಲೆ ತಿಂಗಳ್ = ಹಿಂದಿನ ತಿಂಗಳು
ವೆನ್ದಿ ಕಾರ್ಯ = ಆಗಬೇಕಾದ ಕಾರ್ಯ
ವೈಕಿಂ ದೇವ = ’ನಿರ್ದಿಷ್ಟ’ ದೇವರು
ದೇವಯಾಸ್ತಿ = ದೇವರ ಆಸ್ತಿ
ದೇವೆೞ = ದೇವರು
ತಡ್ಯ ಪರಿಹಾರೊ = ಮನೆ ಹಣ
ಮಾತೊನುಲ ಕಾತೆೞ = ಎಲ್ಲವನ್ನೂ ಸಂರಕ್ಷಿಸಿದರು
ಈ ಸಂಕೇತ ಕಾಪು(ಡು) = ಈ ಸಂಕೇತವನ್ನು ಕಾಯಬೇಕು (ರಕ್ಷಿಸಬೇಕು)
ತಿಗೆ ಪನ್ತಿನಾಯೆ = ಎರಡು ಬಗೆದವನು
ಗ್ರಾಮನ್ನ್ಡ್ತ್ = ಗ್ರಾಮದಿಂದ
ಯೆಸ್ತಿನಾಯೆ = ಹೊರಗಿಟ್ಟವನು
ಗ್ರಾಮಂಕ್ ಪಿದೆ = ಗ್ರಾಮದಿಂದ ಹೊರಗೆ
’ನಿರ್ದಿಷ್ಟ’ ದೇವರ ಹೆಸರು ಇಲ್ಲಿ ಸೂಚಿತವಾಗಿಲ್ಲ. ದೊರೆ ಜಯಸಿಂಹನನ್ನು ಜಯಸಿಂಹ ದೇವರು ಎಂದು ಕರೆಯಲಾಗಿದೆ.
In reply to ಧನ್ಯವಾದಗಳು ಗಣೇಶ್. by kpbolumbu
"ಮುಗರೈರ ಗ್ರಾಮ" ಅನ್ನುವುದನ್ನು
"ಮುಗರೈರ ಗ್ರಾಮ" ಅನ್ನುವುದನ್ನು ಮೊಗೇರರ ಗ್ರಾಮ ಅಂದು ತಪ್ಪು ತಿಳಿದೆ ಕೃಷ್ಣಪ್ರಕಾಶರೆ. ಅದು ಮೊಗ್ರಾಲ್ ಗ್ರಾಮ ಇರಬಹುದು ಎಂದು ತಿದ್ದಿದ್ದಕ್ಕೆ ಧನ್ಯವಾದಗಳು. ಕುಂಬಳೆ ಸಮೀಪದ ಮೊಗ್ರಾಲ್ ಪುತ್ತೂರು ( http://maps.google.co.in/maps?q=mogral%20river&rls=com.microsoft:en-us&oe=UTF-8&startIndex=&startPage=1&redir_esc=&um=1&ie=UTF-8&hl=en&sa=N&tab=wl )ಗೆ ಸಂಬಂಧಿಸಿದ್ದಿರಬಹುದು. ಇನ್ನಷ್ಟು ವಿವರ ನೀಡಿದ್ದಕ್ಕೆ ನನ್ನಿ.
-ಗಣೇಶ.
ಬಬಿಯಾನನ್ನು ಟಿವಿಯಲ್ಲಿ
ಬಬಿಯಾನನ್ನು ಟಿವಿಯಲ್ಲಿ ಹಿಂದೊಮ್ಮೆ ನೋಡಿದ ನೆನಪು!
In reply to ಬಬಿಯಾನನ್ನು ಟಿವಿಯಲ್ಲಿ by kavinagaraj
ಕವಿನಾಗರಾಜರೆ, ಈಗ ಯುಟ್ಯೂಬ್
ಕವಿನಾಗರಾಜರೆ, ಈಗ ಯುಟ್ಯೂಬ್ನಲ್ಲಿ ಒಮ್ಮೆ ನೋಡಿ- http://www.youtube.com/watch?v=eAneedEw-ds
ಧನ್ಯವಾದಗಳು, -ಗಣೇಶ.
In reply to ಕವಿನಾಗರಾಜರೆ, ಈಗ ಯುಟ್ಯೂಬ್ by ಗಣೇಶ
ನೋಡಿದೆ, ಧನ್ಯವಾದ. :)
ನೋಡಿದೆ, ಧನ್ಯವಾದ. :)
ಉತ್ತಮವಾದ ಚಿತ್ರಗಳು ಹಾಗು ವಿವರ
ಉತ್ತಮವಾದ ಚಿತ್ರಗಳು ಹಾಗು ವಿವರ. ನೀವ0ತು ಸಾಕಷ್ತು ಸುತ್ತುತ್ತೀರಿ. ಎಲ್ಲ ಜಾಗಗಳನ್ನು ನೋಡುತ್ತ ಇರುತ್ತೀರಿ .
ಒಳ್ಳೆಯದೊ0ದು ಜಾಗದ ದರ್ಶನ ಮಾಡಿಸಿದ್ದಕ್ಕೆ ಅಭಿನ0ದನೆ
In reply to ಉತ್ತಮವಾದ ಚಿತ್ರಗಳು ಹಾಗು ವಿವರ by partha1059
ಪ್ರಶಾಂತ ಸ್ಥಳ, ಜನಜಂಗುಳಿ ಜಾಸ್ತಿ
ಪ್ರಶಾಂತ ಸ್ಥಳ, ಜನಜಂಗುಳಿ ಜಾಸ್ತಿ ಇಲ್ಲ. ಮುಂದೊಮ್ಮೆ ಮಂಗಳೂರು ಕಡೆ ಹೋದರೆ ನೋಡಲು ಮರೆಯದಿರಿ. ಅಲ್ಲಿಂದ ಹತ್ತು ಕಿ.ಮೀ.ಅಂತರದೊಳಗೇ ಸುಪ್ರಸಿದ್ಧ ಮಧೂರು ದೇವಸ್ಥಾನವಿದೆ.
ಧನ್ಯವಾದಗಳು
-ಗಣೇಶ.
ಗಣೇಶ್ ಅಣ್ಣ -
ಗಣೇಶ್ ಅಣ್ಣ -
ಈ ದೇವಸ್ಥಾನ ಮತ್ತು ಆ ಮೊಸಳೆ (ಬಬಿಯ)ಬಗ್ಗೆ ಈ ಮೊದಲೇ ದಿನ ಪತ್ರಿಕೆ ಒಂದರಲ್ಲಿ ಮತ್ತು ಮಾಸಿಕ ಒಂದರಲ್ಲಿ ಓದಿದ ನೆನಪು...ಈಗ ನೀವು ಸಂಕ್ಷಿಪ್ತವಾಗಿ ಸರಳವಾಗಿ ಚಿತ್ರ ಸಮೇತ(ಮೊಸಳೆ ಬಿಟ್ಟು..!!)ಒಳ್ಳೆ ಬರಹ ಬರೆದಿರುವಿರಿ....
ಅಲ್ಲಿಗೆ ಹೋಗುವ ಮನಸಾಗಿದೆ.!!
ಕೆಲಸದ ಮಧ್ಯ ಬಿಡುವು ಮಾಡಿಕೊಂಡು ಮಾಲ್ನಲಿ ಕಮಾಲ್ ಮಾಡುತ್ತಾ ,ಅನಂತ ಸನ್ನಿಧಿಗಳನ್ನು ಸುತ್ತಿ ನಮಗೆ ಚಿತ್ರ ಸಮೇತ ವಿಪುಲ ಮಾಹಿತಿ ನೀಡುವ ನಿಮಗೆ ನನ್ನಿ ..
ಶುಭವಾಗಲಿ..
\|
In reply to ಗಣೇಶ್ ಅಣ್ಣ - by venkatb83
ಧರ್ಮಸ್ಥಳ ಲಕ್ಷದೀಪ ಉತ್ಸವ ನೋಡಿ
ಧರ್ಮಸ್ಥಳ ಲಕ್ಷದೀಪ ಉತ್ಸವ ನೋಡಿ ಅಲ್ಲಿಂದ ಸಣ್ಣ ಟ್ರಿಪ್ ಪುತ್ತೂರು ಮಹಾಲಿಂಗೇಶ್ವರ (ಹೊಸ ದೇವಸ್ಥಾನ ಕಟ್ಟುವ ಕೆಲಸ ಬಿರುಸಾಗಿ ನಡೆಯುತ್ತಿದೆ)ದೇವಾಲಯಕ್ಕೆ,ನಂತರ ಅನಂತ ಪದ್ಮನಾಭನ ಬಳಿಗೆ...; ಅದರಲ್ಲಿ "ಬಬಿಯಾ" ಬಗ್ಗೆ ಬರೆಯೋಣ ಅನಿಸಿತು.
ಧನ್ಯವಾದಗಳು ಸಪ್ತಗಿರಿವಾಸಿ,
-ಗಣೇಶ.
In reply to ಧರ್ಮಸ್ಥಳ ಲಕ್ಷದೀಪ ಉತ್ಸವ ನೋಡಿ by ಗಣೇಶ
ಪ್ರಶಾಂತ ವಾತಾವರಣದಲ್ಲಿರುವ ಈ
ಪ್ರಶಾಂತ ವಾತಾವರಣದಲ್ಲಿರುವ ಈ ಸುಂದರ ದೇವಸ್ಥಾನಕ್ಕೆಕೆಲವು ವರುಷಗಳ ಹಿಂದೆ ನಾವು ಮನೆಮಂದಿಯೆಲ್ಲ ಹೋಗಿದ್ದೆವು.ನಮಗೂ ಬಬಿಯಾ ಕಂಡಿರಲಿಲ್ಲ.ಮೇಲೆಯೊಂದು ಕೆರೆಯಿದೆ,ಕೆಲವೊಮ್ಮೆ ಅಲ್ಲಿರುತ್ತದೆಯೆಂದು ಹೇಳಿದಾಗ ಅಲ್ಲಿಯೂ ಹೋಗಿ ನೋಡಿದ್ದೆವು.ಅರ್ಚಕರು ಪೂಜೆ ಮುಗಿಸಿ ನೈವೇದ್ಯವನ್ನು ಬಬಿಯಾಗೆ ನೀಡುವ ಸಮಯದಲ್ಲಿ ಅಲ್ಲಿದ್ದರೆ ಬಬಿಯಾ ದರ್ಶನವಾಗಬಹುದು.
In reply to ಪ್ರಶಾಂತ ವಾತಾವರಣದಲ್ಲಿರುವ ಈ by Premashri
ಪ್ರೇಮಶ್ರೀ ಅವರೆ,
ಪ್ರೇಮಶ್ರೀ ಅವರೆ,
ಒಂದು ಮೊಸಳೆ ದೇವರ ನೈವೇದ್ಯ ತಿಂದು ಬದುಕುವುದು ಇನ್ನೂ ನನಗೆ ನಂಬಲಾಗುತ್ತಿಲ್ಲ!
-ಗಣೇಶ.
ಗಣೇಶವ್ರೇ ನಿಮ್ಮ ಲೇಖನ ಓದಿ
ಗಣೇಶವ್ರೇ ನಿಮ್ಮ ಲೇಖನ ಓದಿ ದೇವಾಲಯವನ್ನು ಒಮ್ಮ್ಫೆ ನೋಡಬೇಕೆನಿಸಿದೆ.
In reply to ಗಣೇಶವ್ರೇ ನಿಮ್ಮ ಲೇಖನ ಓದಿ by tthimmappa
ಧನ್ಯವಾದ ತಿಮ್ಮಪ್ಪ ಅವರೆ. ಒಮ್ಮೆ
ಧನ್ಯವಾದ ತಿಮ್ಮಪ್ಪ ಅವರೆ. ಒಮ್ಮೆ ನೋಡಬೇಕಾದ ದೇವಾಲಯವೇ.ಹತ್ತಿರವೇ ಮಧೂರು ದೇವಸ್ಥಾನವಿದೆ ( http://sampada.net/blog/nkumar/15/06/2009/21531 ) ನಿಮಗಾಗಿ ಅನಂತಪುರ ದೇವಸ್ಥಾನದ ಬಾಗಿಲಲ್ಲಿ ದೇವರಿಗೆ ಮುಖ ಮಾಡಿ ಕುಳಿತ ಗರುಡನ ಚಿತ್ರ-