ಯುಗಾದಿಯೂ ಮತ್ತು ನನ್ನ ಬೋಳುತಲೆಯೂ..

ಯುಗಾದಿಯೂ ಮತ್ತು ನನ್ನ ಬೋಳುತಲೆಯೂ..

 ಯುಗಾದಿ  ಹಬ್ಬ ಬಂದಾಗಲೆಲ್ಲಾ ನನಗೆ ಒಂದು ಅನುಮಾನ ಕಾಡುತ್ತಲೇ ಇರುತ್ತದೆ. ಈ ಯುಗಾದಿ ಹಬ್ಬದ ಪರಿಣಾಮವೇ ಇರಬಹುದು ಇಂದು ನಾನು ಬೋಳುತಲೆಯವನಾಗಿರಲು ಕಾರಣ ಎಂದು. ನಾನು ಚಿಕ್ಕವನಿದ್ದಾಗ ನನ್ನ ಅಮ್ಮ ಪ್ರತಿ ಯುಗಾದಿಯಂದು ನನ್ನ ಮೈಕೈಯಿಗೆಲ್ಲಾ  ಉಗುರುಬೆಚ್ಚಗಿನ ಹರಳೆಣ್ಣೆ ಹಚ್ಚಿ ಹುಡುಗಿಯರ ಕೂದಲಿನಂತೆ ಸೊಂಪಾಗಿದ್ದ ನನ್ನ ತಲೆಗೂ ಹರಳೆಣ್ಣೆ ತಿಕ್ಕಿ ಸೀಗೆ ಕಾಯಿ ಪುಡಿ ಹಾಕಿ ಉಜ್ಜಿ ಉಜ್ಜಿ ಸ್ನಾನ ಮಾಡಿಸುತ್ತಿದ್ದುದರಿಂದಲೇ ಇಂದು ನಾನು ಅಮ್ಮ ಹಾಗೆ ಉಜ್ಜುತಿದ್ದ ನೆತ್ತಿಯ ಭಾಗದಿಂದ ಹಿಡಿದು ಹಣೆಯವರೆಗೆ  ಬೋಳು ತಲೆಯವನಾಗಿಬಿಟ್ಟಿದ್ದೇನೆ ಅನಿಸುತ್ತದೆ. ಮೊನ್ನೆ ಊರಿಗೆ ಹೋದಾಗ ಮುನಿಸಿನಿಂದ ಅದೇ ವಿಷಯವನ್ನು ಅಮ್ಮನಿಗೆ ಹೇಳಿ ನನ್ನ ಅಸಮಾಧಾನ ವ್ಯಕ್ತಪಡಿಸಿದೆ. ಅಮ್ಮ ನಗುತ್ತಲೇ ನಿನಗಾದರೂ ಅಕ್ಕಪಕ್ಕ ಇಷ್ಟಾದರೂ ಕೂದಲಿದೆ.. ನಿನ್ನ ಮುತ್ತಾತನ ತಲೆ ಪೂರ್ತೀ ತಾಮ್ರದ ಬಿಂದಿಗೆಯಾಗಿ ಬಿಸಿಲಿಗೆ ಲಕ ಲಕ ಅಂತ ಹೊಳೆಯುತಿತ್ತು ಅಂದಾಗ ಅಮ್ಮ ಹೇಳುವುದರಲ್ಲಿ ಅರ್ಥವಿದೆ ಅನ್ನಿಸಿತ್ತು. ಅಮ್ಮ ನಾನು ಅಂದಿದ್ದಕ್ಕೆ ನನ್ನ ಮಗ ಬೇಜಾರು ಮಾಡಿಕೊಂಡನೋ ಏನೋ ಅಂದುಕೊಂಡು ತಕ್ಷಣವೇ ತಲೆ ಮೇಲೆ ಕೂದಲಿಲ್ಲದೇ ಇದ್ರೆ ಏನಾಯ್ತ ಬಿಡೋ ತಲೆ ಒಳಗಡೆ ಚೆನ್ನಾಗಿರೋದೈತಲ್ಲಾ.. ಅಂದಾಗ ಇನ್ನೂ ನನ್ನನ್ನು ಚಿಕ್ಕಮಗುವೆಂದುಕೊಳ್ಳುವ ಅಮ್ಮನ ಪ್ರೀತಿಗೆ ನನ್ನ ಕಣ್ಣು ಮಂಜಾಗಿತ್ತು. ಏನೇ ಆದರೂ ಯುಗಾದಿಯ ದಿನ ಮತ್ತೆ ಮತ್ತೆ ಅಮ್ಮನೇ ನನ್ನ ತಲೆ ಬೋಳಾಗಲು ಕಾರಣ ಅಂತ ಅನ್ನಿಸಲು ಶುರುವಾಗುತ್ತದೆ.

ಇತ್ತಿಚೆಗಂತೂ ಬಿಸಿಲು ಜಾಸ್ತಿಯಾಗಿ ಯಾರಾದರೂ ನನ್ನ ತಲೆ ನೋಡುತ್ತಲೇ ಏನ್ಸಾರ್ ತುಂಬಾ ಬಿಸಿಲು ಅಂದಾಗ ನನಗೆ ತಡೆಯಲಾಗದ ಕೋಪ ಬರುತ್ತದೆ. ಬಿಸಿಲು ಸೂರ್ಯನಿಂದ ಬರ್ತಾ ಇದೇರಿ.. ನನ್ನ ತಲೆಯಿಂದ ಅಲ್ಲ ಅಂತ ಹೇಳಬೇಕೆನಿಸಿದರೂ ಹೇಳಲಾಗದೇ ಸುಮ್ಮನಾಗಿ ಪೆಚ್ಚು ನಗೆ ನಗುತ್ತೇನೆ. ಕೆಲವರಂತೂ ನನ್ನ ಬೋಳುತಲೆಯನ್ನೇ ದಿಟ್ಟಿಸಿ ಇನ್ನೂ ಎಷ್ಟು ವರ್ಷ ಇದೆ ಸಾರ್ ಸರ್ವೀಸು ಎಂದಾಗ ಯಾವ ಸರ್ವೀಸಪ್ಪಾ ಭೂಮಿ ಮೇಲಿನದೋ.. ಅಥವಾ ನನ್ನ ಕೆಲಸದ್ದೋ ಎಂದು ಅನುಮಾನವಾಗುತ್ತದೆ. ರೀ ಸ್ವಾಮೀ.. ನನಗೆ ಇನ್ನೂ ಹದಿಮೂರು ವರ್ಷ ಇದೆ ಕೆಲಸದಿಂದ ರಿಟೈರ್ ಆಗೋದಿಕ್ಕೆ ಅಂತ ಹೇಳಿ ಮನಸ್ಸಿನಲ್ಲಿಯೇ ಅಲ್ಲಿಯವರೆಗೂ ನಿಮ್ಮಂಗೆ ಕೇಳೋರಿಗೆಲ್ಲಾ  ಪಾಠ ಮಾಡ್ತಾನೇ ಇರ್ಬೇಕು.. ಅಂದುಕೊಳ್ಳುತ್ತೇನೆ. ಅಷ್ಟೋಂದು ಇದೆಯಾ ಸಾರ್ ಅಂತ ನಾನೇನಾದರೂ ನನ್ನ ಜನ್ಮ ದಿನಾಂಕವನ್ನು ತಪ್ಪು ಕೊಟ್ಟಿರಬಹದೇನೋ ಎಂದು ಸಂಶಯ ವ್ಯಕ್ತಪಡಿಸುವ ಜನರನ್ನು ಕಂಡಾಗ ನನಗೆ ನನ್ನ ಅಮ್ಮನ ನೆನಪಾಗುತ್ತದೆ.

ನೆನ್ನೆ ದಿನ ಬೇವಿನ ಸೊಪ್ಪು, ಮಾವಿನ ಸೊಪ್ಪು ತರಲು ಮೈನ್ ರೋಡಿಗೆ ಹೋದಾಗ ಅದನ್ನು ಮಾರುತ್ತಿದ್ದ ಹೆಂಗಸು ‘ಏನ್ಸಾಮಿ ಇಷ್ಟೊಂದು ಬಿಸಿಲು.. ಟೋಪಿನಾದ್ರೂ ಹಾಕ್ಕೊಂಡು ಬರಬಾರದಿತ್ತಾ..’ ಎಂದು   ಆಕೆ ನಿಜವಾದ ಕಾಳಜಿ ವ್ಯಕ್ತಪಡಿಸಿದರೂ ನನಗೆ ಸಿಟ್ಟು ಬರದೇ ಇರಲಿಲ್ಲ.  ವ್ಯಾಪಾರ ಮಾಡೋದಿಕ್ಕೆ ಕುಂತಿದೀಯೋ.. ತಲೆ ನೋಡೋದಿಕ್ಕೆ ಕುಂತಿದೀಯೋ..’ ಅಂತ ರೇಗಿಬಿಟ್ಟೆ. ಆಕೆಯೇನೂ ಬೇಸರ ಮಾಡಿಕೊಳ್ಳಲಿಲ್ಲ. ‘ನಮ್ಮ ಯಜಮಾನಂಗೂ ನಿಮ್ಮ ತರಾನೇ ತಲೆ ಬೋಳಾಗದೆ ಅದುಕ್ಕೇ ಹೇಳಿದೆ..’ ಅಂದು ಕಿಸಕ್ಕನೇ ನಕ್ಕಾಗ ನನಗೆ ಅಳಬೇಕೋ ನಗಬೇಕೋ ತಿಳಿಯಲಿಲ್ಲ.  ತೆಪ್ಪಗೆ ಬೇವು-ಮಾವು ಎರಡನ್ನೂ ಮನೆಗೆ ತಂದೆ. 

Comments

Submitted by ಗಣೇಶ Thu, 04/11/2013 - 23:56

ಕೂದಲೆಲ್ರೀ- ಅಂದರೆ "ತಿಮ್ಮಪ್ಪ"ನಿಗೆ ಅರ್ಪಿಸಿದೆ ಅಂತಾರೆ ತಿರುಪತಿಗೆ ಹೋಗಿ ಬಂದವರು.:) ತಿಮ್ಮಪ್ಪನವರೆ, ಹಾಸ್ಯ ಸೂಪರ್.
Submitted by tthimmappa Fri, 04/12/2013 - 17:15

In reply to by ಗಣೇಶ

ಗಣೇಶ್ ರವರೇ.. ಸುಮ್ಮನೆ ಕಥೆಗಳನ್ನು ಬರೆಯುತಿದ್ದೆ.. ಒ೦ದು ಹಾಸ್ಯ‌ ಲೇಖನ‌ ಬರೆಯಬೇಕೆನಿಸಿತು. ಮೆಚ್ಚಿರುವುದಕ್ಕೆ ತು೦ಬಾ ಖುಷಿಯಾಯಿತು..ಧನ್ಯವಾದಗಳು. ಹೊಸ‌ ವರುಷದ‌ ಶುಭಾಶಯಗಳು.
Submitted by venkatb83 Fri, 04/12/2013 - 12:37

;())) ತಿಮ್ಮಪ್ಪನವರೆ ಡಾಕ್ಟರು ಹೇಳುವ ಹಾಗೆ ದಿನ ನಿತ್ಯ ೧೫೦ -೧೬೦ ಕೂದಲುಗಳು ಉದುರೋದು ಮಾಮೂಲಿ .... !! ದಿನ ನಿತ್ಯ ತಲೆ ಸ್ನಾನ ಮಾಡುವ ಹಸಿ ಕೂದ್ಳನ್ನೇ ಬಾಚುವ ನಾ ನೋಡುವ ಹಾಗೆ ದಿನ ನಿತ್ಯ ಅದಕಿಂತ ಹೆಚ್ಚಿಗೆನೆ ಕೂದಲು ಬೀಳುತ್ತೆ ಆದರೂ ಈಗಲೂ ನನ್ನ ತಲೆ ಮೇಲೆ ಜೋಗಿ ಶಿವಣ್ಣನ ಹಾಗೆ ಅಸ್ಟೊಂದು ಕೂದಲು ಇದೆ.. ಆದ್ರೆ ಮುಂದೆಯೂ ಇದ್ದೀತೆ .... ? ಗೊತ್ತಿಲ್ಲ, ಇರಲಿ ಸದಾ ಎಂದೇ ಬಯಸುವೆ.. ! ಎಣ್ಣೆ -ಶೀಗೆ ಕಾಯಿ ಸ್ನಾನಕ್ಕೂ ಕೂದಲ ಬೀಳುವಿಕೆಗೂ ಕಾರಣ ಇಲ್ಲ ಬಿಡಿ .. ಹೀಗಂತೂ ಕ್ಲೋರಿನ್ ಕೊಳಾಯಿ ನೀರು ಸ್ನಾನ ಮಾಡಿ ಕುಡಿದು ದೇಹಾರೋಗ್ಯದಲ್ಲಿ ಹಲವು ಬದಲಾವಣೆ ಆಗಿ ಚಿಕ್ಕವರಿಗೆ ಕೂದಲು ಇರೋಲ್ಲ ಅಥವಾ ಬಿಳಿ ಕೂದಲು ಖಾತ್ರಿ... ಏನ್ ಮಾಡೋದು ... ?ಯಾರ್ಗೆ ಹೇಳೋಣ ನಮ್ ಪ್ರಾಬ್ಲಮ್ಮು ..!! ವಿಜಯನಾಮ ಸಂವತ್ಸರದ ಹಾರ್ದಿಕ ಶುಭಾಶಯಗಳು ಶುಭವಾಗಲಿ.. \।/
Submitted by tthimmappa Fri, 04/12/2013 - 17:42

In reply to by venkatb83

ಸಪ್ತಗಿರಿವಾಸಿ ವೆ೦ಕಟೇಶ್ ರವರೇ.. ಎಣ್ಣೆ ಸೀಗೆಕಾಯಿಗೂ ಕೂದಲು ಉದುರಿ ಬೋಳು ತಲೆಯಾಗುವುದಕ್ಕೂ ಯಾವುದೇ ಸ೦ಬ೦ಧ‌ ಇಲ್ಲ‌ ! ಸ೦ಬ೦ಧ‌ ಇರುವುದು ನಮ್ಮ‌ ತಾತ‌ ಮುತ್ತಾತನ‌ ಬೋಳುತಲೆಯಲ್ಲಿ! ಇದು ಅನುವ೦ಶೀಯವಾಗಿ ಬರುವ೦ತದು. ನಾವು ನೀವು ಏನೂ ಮಾಡಲು ಆಗುವುದಿಲ್ಲ‌!333........‍‍‍‍‍ !!!!!......!111 !!!!!!11 ! !ಹೆಚ್ಚು ವರಿ ಮಾಡದಿದ್ದರೆ ಸಾಕು ಹೋಗುವುದೆಲ್ಲಾ ಹೋಗಲಿ ದೂರ ದೂರ‌ ಅ೦ತ‌.........> ಈಗೆಲ್ಲಾ ಚೆನ್ನಾಗಿ ಕೂದಲು ಇರುವರೇ ನುಣ್ಣಗೆ ತಲೆ ಶೇವ್ ಮಾಡಿಸಿಕೊ೦ಡು ಕೂಲಿ೦ಗ್ ಗ್ಲಾಸ್ ಹಾಕಿಕೊಳ್ಳುವ‌ ಕಾಲ‌!!>!!!!.......... ಏನೇ ಇರಲಿ ಬಾಹ್ಯ‌ ರೂಪಕ್ಕಿ೦ತ‌ ಆ೦ತರಿಕ‌ ರೂಪ‌ ಮನುಷ್ಯನಿಗೆ ಮುಖ್ಯ‌ ಎನ್ನುವುದು ಸವ೯ಕಾಲಿಕ‌ ಸತ್ಯ‌.; ಧನ್ಯವಾದಗಳು ಮತ್ತು ಹೊಸ‌ ವರುಷದ‌ ಶುಭಾಶಯಗಳು..
Submitted by venkatb83 Fri, 04/12/2013 - 18:00

In reply to by tthimmappa

"ಬಾಹ್ಯ‌ ರೂಪಕ್ಕಿ೦ತ‌ ಆ೦ತರಿಕ‌ ರೂಪ‌ ಮನುಷ್ಯನಿಗೆ ಮುಖ್ಯ‌ ಎನ್ನುವುದು ಸವ೯ಕಾಲಿಕ‌ ಸತ್ಯ‌." +1 ಹೌದು ಸಕ್ಕರೆ ಕಾಯಿಲೆ ಮತ್ತು ಕೂದಲು ಉದುರುವಿಕೆಗೆ ವಂಶವಾಹಿಗಳು ಸಹಾ ಕಾರಣ ಎಂದು ಓದಿದ್ದೆ ಆದರೆ ಆ ಬಗ್ಗೆ ನಿಮಗೆ ಹೇಳೋಕೆ ಮರೆತಿದ್ದೆ .. ನಮ್ಮನೆಯಲೀ ತಾತ ಮುತ್ತಾತ ಅಪ್ಪನಿಗೆ ಕೂದಲು ಸೊಂಪಾಗಿದೆ ಸೊ ನನ್ನ ತಲೆ ಕೂದಲು ಉದುರುವ ಚಾನ್ಸ್ ಇಲ್ಲ , ಆದ್ರೆ ಇದಕ್ಕೆ ವ್ಯತಿರಿಕ್ತವಾಗಿ ನಮ್ಮ ಅಣ್ಣನ ತಲೆ ಈಗಾಗ್ಲೇ ಮುಕ್ಕಾಲು ಭಾಗ ಬೋಳಾಗಿದೆ ಅವರ ವಯಸ್ಸು ೩೫ ಅಸ್ತೆ ... ಅದ್ಕೆ ನೋಡಿ ಈ ವೈದ್ಯಕೀಯ ಅನ್ವೇಷಣೆ ಸಂಗತಿಗಳನ್ನು ಎಲ್ಲೆಡೆ ಎಲ್ಲರಿಗೂ ಅನ್ವಯಿಸಿಕೊಂಡು ಇರಾಕ್ ಆಗೋಲ್ಲ.. ಮಾರುತ್ತರಕ್ಕೆ ನನ್ನಿ ಶುಭವಾಗುತೈತಪ್ಪೋ ...! \।
Submitted by Shreekar Fri, 04/12/2013 - 18:51

In reply to by venkatb83

.........> ಈಗೆಲ್ಲಾ ಚೆನ್ನಾಗಿ ಕೂದಲು ಇರುವರೇ ನುಣ್ಣಗೆ ತಲೆ ಶೇವ್ ಮಾಡಿಸಿಕೊ೦ಡು ಕೂಲಿ೦ಗ್ ಗ್ಲಾಸ್ ಹಾಕಿಕೊಳ್ಳುವ‌ ಕಾಲ‌!!>!!!!.......... ನಾನೂ ಇದನ್ನೇ ಹೇಳಬೇಕೆಂದಿದ್ದೆ, ತಿಮ್ಮಪ್ಪನವರೇ ! ಸಪ್ತಗಿರಿಯವರೇ, ಬೋಡು ತಲೆಯವರಿಗೆ ಸೆಕ್ಸ್‌ ಅಪ್ಪೀಲ್ ಹೆಚ್ಚಂತೆ ! ನನ್ನ ಭಾವ ಗಣೇಶ್ ರವರು ಮತ್ತು ಅವರ ಇಬ್ಬರು ಪುತ್ರರು (ನವವಿವಾಹಿತರು) ಮೂರೂ ಜನ ಕೇವಲ ಫ್ಯಾಷನ್ ಗಾಗಿ ತಲೆ ನುಣ್ಣಗೆ ಟ್ರಾನ್ಸ್ ಪೋರ್ಟರ್ ಜಾಸನ್ ಸ್ಟ್ರಾಥಮ್ ಥರಾ ಬೋಳಿಸಿದ್ದಾರೆ, ನೋಡಲೂ ಹಾಗೆಯೇ ಜಾಸನ್ ಥರಾ ಇದ್ದಾರೆ. ಅವರುಗಳ ಫೋಟೋ ನೋಡಿದರೆ ನೀವು ಕೂಡಾ ......
Submitted by venkatb83 Sat, 04/13/2013 - 12:44

In reply to by Shreekar

" ಬೋಡು ತಲೆಯವರಿಗೆ ಸೆಕ್ಸ್‌ ಅಪ್ಪೀಲ್ ಹೆಚ್ಚಂತೆ !" ;()))))) ಹೌದು ಈ ಬಗ್ಗೆ ಯಾವತ್ತೋ ಪತ್ರಿಕೆಯಲ್ಲಿ ಓದಿದ ನೆನಪು.... !! ನಿಮ್ಭಾವ ಗಣೇಶ್ ಅಣ್ಣ ಅವರು ಭಲೇ ಬಿಡಿ ಅದು ಅವತ್ತೇ ಗೊತ್ತಾಗಿದೆ ...ಯಾವತ್ತು ಅಂತೀರಾ? ಅದೇ ಕಿಚನ್ ಮೇ ಚಮಕ್ ಚಲ್ಲೋ ಅಂತ ಒಂದು ಬರಹ ಬರೆದಿರುವರಲ್ಲ ..!! ಆಗಾಗ ಮಾ . ಮು ನ ನೆನೆವರು ....! ನನ್ನ ಫೆವರೀಟ್ ಹೀರೋ ಆ ಜೇಸನ್ ಸ್ತ್ಯಾಥಂ -ಬೋಡಾದರೂ ಸಖತ್ ಲುಕ್ ಇರುವ ನಾಯಕ ,ಅವನನ್ನು ನೋಡಿದಾಗ ಕೂಡಲ ಅವಶ್ಯಕತೆ ಅದರ ಪ್ರಾಮುಖ್ಯತೆ ಬೇಕಿಲ್ಲ ಅನ್ಸುತ್ತೆ...! ಅವಾನ್ ಟ್ರಾನ್ಸ್ಪೋರ್ಟ್ರ್ ಸೀರೀಸ್ ನೋಡಿ ಧನ್ಗಾಗಿರುವೆ ..!! ಶುಭವಾಗುತೈತಪ್ಪೋ ... \।
Submitted by ಗಣೇಶ Mon, 04/15/2013 - 00:30

In reply to by venkatb83

ನುಣ್ಣಗೆ ಬೋಡು ಹೊಡೆಸಿದ ಶ್ರೀಕರ್ ಅವರ ಬುದ್ಧಿವಂತ ಭಾವ ಗಣೇಶ ಬೇರೆ, ಈ ಕಿಚನ್ ಮೆ ಚಮ್ಮಕ್ ಚಲೋ ( http://sampada.net/… )ಕೈಲಿ ಜುಟ್ಟು ಕೊಟ್ಟಿರೋ ದಡ್ಡಾ ಗಣೇಶ ಬೇರೆನೇ..:)
Submitted by tthimmappa Fri, 04/12/2013 - 22:17

In reply to by venkatb83

ಎಲ್ಲವೂ ಎಲ್ಲರಿಗೂ ಅನ್ವಹಿಸುವುದಿಲ್ಲ‌ ವೆ೦ಕಟೇಶ್ ರವರೇ.. ಜೀವನವೇ ಹಾಗೆ.. ಪ್ರಪ೦ಚದ‌ ಎಲ್ಲಾ ಮನುಷ್ಯರಿಗೂ ಶುಭವಾಗಲಿ ಎ೦ದು ಆಶಿಸೋಣ‌...> ಏನ೦ತೀರಿ..?