“ಮಲೆಗಳಲ್ಲಿ ಮದುಮಗಳು” ಕಾದಂಬರಿಯ ರಂಗರೂಪ

“ಮಲೆಗಳಲ್ಲಿ ಮದುಮಗಳು” ಕಾದಂಬರಿಯ ರಂಗರೂಪ

ಅದೊಂದು ಅದ್ಭುತ ಅನುಭವ! ನೀರು ನಿಂತಿರುವ ಗದ್ದೆಗಳ ಮಧ್ಯೆ ಸಾಗುವ ಗದ್ದೆಯ ಅಂಚಿನಲ್ಲಿ ಅತ್ತಿಂದಿತ್ತ ನಡೆದಾಡುತ್ತಿರುವ ನಾಲ್ಕಾರು ಜನರು ಅಲ್ಲೇ ನಿಂತು, ಅನತಿ ದೂರದಲ್ಲಿ ದ್ರೌಪದಿ ವಸ್ತ್ರಾಪಹರಣ ನಾಟಕವನ್ನು ಐತ ಮತ್ತು ಇತರ ಗ್ರಾಮಸ್ಥರು ಅಭ್ಯಾಸ ಮಾಡುತ್ತಿರುವಾಗ, ಗದ್ದೆ ಅಂಚಿನಲ್ಲಿ ನಡೆಯುತ್ತಿರುವ ಜನರು ಇತ್ತ ತಿರುಗಿ “ಓಯ್, ಏನದು, ಸರಿಯಾಗಿ ಸೀರೆ ಎಳೆಯೋ” ಎಂದು ಕೂಗಿ ಸಲಹೆ ನೀಡುತ್ತಿದ್ದವರು ಮತ್ತು ಅವರ ಜೊತೆ ದನಿಗೂಡಿಸಿದವರು ಅಡಕೆ  ಮರದ ತುದಿಯಲ್ಲಿ ಕುಳಿತು ಅಡಕೆ ಕೀಳುತ್ತಿರುವವರು ಮತ್ತು ಗದ್ದೆಗೆ ಬೀಜ ಬಿತ್ತುತ್ತಿರುವವರು. ಕೆಲಸದ ಮಧ್ಯದಲ್ಲಿ ಅಗತ್ಯವೆನಿಸಿದರೆ, ಗದ್ದೆಗೆ ಇಳಿದು ನೀರನ್ನು ಚಿಮ್ಮುತ್ತಾ ಓಡಾಡುತ್ತಿದ್ದರು ಆ ಗದ್ದೆ ನಾಟಿ ಜನ. ಇವೆಲ್ಲ ಮೈದಳೆದಿರುವುದು “ಮಲೆಗಳಲ್ಲಿ ಮದುಮಗಳು” ನಾಟಕದಲ್ಲಿ. ಬೆಂಗಳೂರು ವಿಶ್ವವಿದ್ಯಾನಿಲಯದ ಹತ್ತಿರುವಿರುವ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ಇಡೀ ರಾತ್ರಿ ನಡೆಯುತ್ತಿರುವ ಈ ನಾಟಕವನ್ನು ನೋಡುವುದೆಂದರೆ, ಒಂದೆಡೆ 19ನೆಯ ಶತಮಾನದ ಮಲೆನಾಡಿನ ಜೀವನದ ಅನುಭವವನ್ನು ಅನುಭವಿಸುವುದರ ಜೊತೆ, ನಾಟಕದ ಮಧ್ಯೆ ಅಲ್ಲಿಲ್ಲಿ ಇಣುಕುಹಾಕುವ ಸಮಕಾಲೀನ ಸಮಸ್ಯೆಗಳು, ನೋಡುಗರನ್ನು ಚಿಂತನೆಗೆ ಹಚ್ಚುತ್ತವೆ.
     ಬಸವಲಿಂಗಯ್ಯನವರ ನಿರ್ದೇಶನದಲ್ಲಿ ನಡೆಯುತ್ತಿರುವ “ಮಲೆಗಳಲ್ಲಿ ಮದುಮಗಳು” ನಾಟಕವನ್ನು ನೋಡುವುದು ಜೀವಮಾನದಲ್ಲೊಮ್ಮೆ ದೊರೆಯುವ ಅನುಭವ ಎಂದರೆ ತಪ್ಪಾಗದು. ರಾತ್ರಿ ಎಂಟರಿಂದ ಬೆಳಿಗ್ಗೆ 6ರÀ ತನಕ ನಡೆಯುವ ನಾಟಕವನ್ನು ನಾಲ್ಕು ವೇದಿಕೆಗಳಲ್ಲಿ ಪ್ರದರ್ಶಿಸುತ್ತಿದ್ದಾರೆ. ಬೆಂಗಳೂರಿನ ಕಲಾಗ್ರಾಮದಲ್ಲಿ ಮಲೆನಾಡಿನ ಜನಜೀವನದ ವಿವಿಧ ಮಗ್ಗುಲುಗಳನ್ನು ತೋರಿಸಲು ತಕ್ಕಷ್ಟು ಜಾಗವಿರುವುದರಿಂದಾಗಿ, ಆ ಅವಕಾಶವನ್ನು ಸಾಕಷ್ಟು ಉಪಯೋಗಿಸಿಕೊಂಡು ನಾಟಕದ ದೃಶ್ಯಗಳನ್ನು ಪ್ರದರ್ಶಿಸುವಲ್ಲಿ ನಿರ್ದೇಶಕರ ಜಾಣ್ಮೆ ಎದ್ದು ಕಾಣುತ್ತದೆ. ಕನ್ನಡ ಮತ್ತು ಸಂಸ್ಕøತಿ ಇಲಾಖೆಯು ಈ ಪ್ರಯತ್ನಕ್ಕೆ ಕೈಜೋಡಿಸಿದೆ.


     ಮೊದಲ ವೇದಿಕೆಯ ಸ್ವರೂಪ ವಿಶಿಷ್ಟ. ಅದರ ಹೆಸರು ಕೆರೆಯಂಗಳ. ಎಡಭಾಗದಲ್ಲಿ ಗದ್ದೆ, ಹತ್ತೆಂಟು ಅಡಿಕೆ ಮರಗಳಿರುವ ತೋಟ, ಗದ್ದೆಯಲ್ಲಿ ಕೆಲಸ ಮಾಡುವ ಆಳುಗಳು, ಅವರ ಮೇಲ್ವಿಚಾರಣೆ ಮಾಡುವ ಸೇರೇಗಾರ ಚೀಂಕ್ರ, ಮತ್ತು ಆಗಾಗ ಬಂದು ಕೆಲಸ ಎಷ್ಟು ಆಯಿತು ಎಂದು ನೋಡುವ ಹೆಗ್ಗಡೆಯವರು. ವೇದಿಕೆಯ ಎಡಭಾಗದಲ್ಲಿ ಅಡಿಕೆಮರಗಳಿಂದ ಮಾಡಿದ ಪುಟ್ಟ ಮನೆ, ಮಲೆನಾಡಿನ ದಾರಿಗಳಂತೆ ಏರಿಳಿತಗಳಿಂದ ಕೂಡಿದ ದಾರಿಗಳು, ಅಡಿಕೆ ದಬ್ಬೆ ಬಳಸಿ ಸೇತುವೆ, ಅಟ್ಟಣೆ, ಹಂದಿಒಡ್ಡು ಮತ್ತಿತರ ವಿನ್ಯಾಸಗಳು. ಮೊದಲ ಎರಡು ಗಂಟೆಗಳಲ್ಲಿ ಕಂಡು ಬರುವ ದೃಶ್ಯಗಳಲ್ಲಿ ಗಮನ ಸೆಳೆಯುವ ಹಲವು ಕಥಾಭಾಗಗಳಿದ್ದರೂ, ನಾಯಿ ಗುತ್ತಿಯು ತಿಮ್ಮಿಯನ್ನು ಹಾರಿಸಿಕೊಂಡು ಹೋಗುವ ಪ್ರಣಯ ಸಾಹಸ ಹೆಚ್ಚು ನೆನಪಿನಲ್ಲಿ ಉಳಿಯುತ್ತದೆ. ಗುತ್ತಿ ಎಂದ ಕೂಡಲೆ ಅವನ ಜೊತೆ ಅವಿನಾಭಾವ ಸಂಬಂಧ ಹೊಂದಿರುವ ಹುಲಿಯ ಎಂಬ ನಾಯಿಯ ವಿಚಾರ ಮುಂಚೂಣಿಗೆ ಬರಲೇಬೇಕು. ಕಪ್ಪು ಬಣ್ಣದ ಹುಲಿಯನ ಚುರುಕಾದ ಚಟುವಟಿಕೆಯು ಪೂರ್ತಿ ವೇದಿಕೆಯನ್ನು ಬಳಸಿಕೊಂಡು, ಪಾದರಸದ ಓಟವನ್ನು ನೆನಪಿಸುತ್ತದೆ. ಆ ನಾಯಿಯು ಅತ್ತಿತ್ತ ಓಡುವುದೇನು, ಮೇಲಿನಿಂದ ಕೆಳಗೆ ನೆಗೆಯುವುದೇನು, ಮಕ್ಕಳ ಬಳಿ ಬಂದು ಆಟವಾಡುವುದೇನು, ಇಂಬಳವನ್ನು ಕಚ್ಚಿಸಿಕೊಂಡು ಮುಲುಕಾಡುವುದೇನು, ಇವೆಲ್ಲವೂ ಅಭಿನಯದ ಕೌಶಲ್ಯತೆಯನ್ನು ತೋರಿಸುತ್ತದೆ ಎನ್ನಬಹುದು. ಹಂದಿ ಒಡ್ಡಿನಿಂದ ಒಂದು ಹಂದಿಯನ್ನು ಹಿಡಿಯಲು ಹತ್ತಾರು ಆಳುಗಳು ಕೋಲು ಹಿಡಿದು ಅತ್ತಿತ್ತ ಓಡುತ್ತಾ, ಪರದಾಡುತ್ತಾ ಇದ್ದಾಗ, ಅವರಿಂದ ತಪ್ಪಿಸಿಕೊಂಡು ಬರುವ ಹಂದಿಯು ತುಳಸಿಕಟ್ಟೆಯನ್ನು ಅಶುದ್ಧ ಮಾಡುವ ಸನ್ನಿವೇಶ ಒಂದೆಡೆಯಾದರೆ, ಅದೇ ಸಮಯದಲ್ಲಿ ರಂಗಪ್ರವೇಶ ಮಾಡುವ ಹುಲಿಯನು ಆ ಹಂದಿಯನ್ನು ಅಟ್ಟಾಡಿಸಿಕೊಂಡು, ಅಡ್ಡಗಟ್ಟಿ ಹಿಡಿಯುವಾಗ, ಆ ನಾಯಿಯ ಚಾತುರ್ಯ ಎದ್ದು ಕಾಣುತ್ತದೆ. ಹಂದಿ ಮತ್ತು ನಾಯಿಯ ವೇಷ ಧರಿಸಿದ ಪಾತ್ರಧಾರಿಗಳಿಬ್ಬರೂ ಅದೆಷ್ಟು ವೇಗವಾಗಿ ವೇದಿಕೆಯ ತುಂಬಾ ಓಡಾಡುತ್ತಾ, ಪ್ರೇಕ್ಷಕರ ಗಮನವನ್ನು ಹಿಡಿದಿಟ್ಟುಕೊಂಡು ನಾಟಕದ ಓಟಕ್ಕೆ ಪೂರಕವಾಗುತ್ತಾರೆಂಬುದು ಅಚ್ಚರಿಯನ್ನು ಹುಟ್ಟಿಸುತ್ತದೆ.
     ಕುವೆಂಪು ಅವರು ತಮ್ಮ ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ ಮೊದಲಿಗೇ ಬರೆದಿದ್ದಾರೆ, ‘ಇಲ್ಲಿ ಯಾವುದೂ ಮುಖ್ಯವಲ್ಲ, ಯಾವುದೂ ಅಮುಖ್ಯವಲ’್ಲ ಎಂದು. ಗುತ್ತಿಯ ನಾಯಿಯೂ ಮುಖ್ಯವಾಗದ, ಹಂದಿ ಒಡ್ಡಿನ ಸಾಕು ಹಂದಿಯೂ ಅಮುಖ್ಯವಾಗದೆ ಕಥಾನಕ ಇದು. ಎರಡನೆಯ ವೇದಿಕೆ ಬಯಲುರಂಗದಲ್ಲಿ, ನಾಗಕ್ಕ, ನಾಗತ್ತೆಯ ಚೋದ್ಯದ ಪ್ರಸಂಗದ ಜೊತೆಯಲ್ಲೇ, ತಿಮ್ಮಿಯ ತಾಯಿಯ ಮೈಮೇಲೆ ಭೂತ ಆವಾಹನೆಯಾದಾಗ ಮೇಲ್ಭಾಗದ ಅಟ್ಟದಲ್ಲಿ ಬೆಂಕಿಯ ದೊಂದಿ ಹಿಡಿದುಬರುವ ಭೂತದ ಕೋಲದ ವೇಷಧಾರಿಯ ಮೈನವಿರೇಳಿಸುವ ನೃತ್ಯ, ಚೀಂಕ್ರನು ಕುಡಿದ ಮತ್ತಿನಲ್ಲಿ ತನ್ನ ಹೆಂಡತಿಯನ್ನು ಕೊಲ್ಲುವ ಪ್ರಸಂಗ, ತಿಮ್ಮಿಯನ್ನು ಹಾರಿಸಿಕೊಂಡು ಬಂದ ಗುತ್ತಿಯು ಅವಳನ್ನು ಹುಲಿಕಲ್ ನೆತ್ತಿಗೆ ಕರೆದುಕೊಂಡು ಹೋಗಿ ರಾತ್ರಿ ಕಳೆಯುವ ವಿಚಾರ, ಅಲ್ಲಿ ಕಂಡುಬರುವ ಸೂರ್ಯೋದಯವನ್ನು ಕಂಡು ಅಚ್ಚರಿಪಡುವ ತಿಮ್ಮಿ, ಹುಲಿಯನನ್ನು ಹಿಡಿಯಲು ಬರುವ ಕುರ್ಕ – ಈ ರೀತಿ ಸಾಗುವ ನಾಟಕವು ಮಲೆನಾಡಿನ ಅಂದಿನ ಜನಜೀವನವನ್ನು ಬಿಂಬಿಸುವಲ್ಲಿ ಯಶಸ್ವಿಯಾಗಿದೆ. ಜೋಗಪ್ಪಗಳ ಮೂಲಕ ಅಲ್ಲಲ್ಲಿ ಕತೆಯನ್ನು ಹೇಳಿಸಿ, ಅಗಾಧ ಸ್ವರೂಪ ಹೊಂದಿರುವ ಮೂಲಕತೆಯ ವಿವರಗಳನ್ನು ಪ್ರೇಕ್ಷಕರಿಗೆ ಮುಟ್ಟಿಸುವ ಪ್ರಯತ್ನ ಮತ್ತು ಹಾಡುಗಳ ಮೂಲಕ ಹೊಸದೊಂದು ಆಯಾಮವನ್ನು ನೀಡುವ ಪ್ರಯತ್ನ ಗಮನ ಸೆಳೆಯುತ್ತದೆ. ಖ್ಯಾತ ಸಂಗೀತಗಾರ ಹಂಸಲೇಖ ಅವರು ಸಂಯೋಜಿಸಿರುವ ಕೆಲವು ಗೀತೆಗಳು ಮತ್ತೆ ಮತ್ತೆ ಕೇಳಬೇಕೆನಿಸುತ್ತವೆ. ಹೊನ್ನಾಳಿ ಹೊಡೆತಕ್ಕೆ ಹೆಸರುವಾಸಿಯಾಗಿರುವ ವಸೂಲಿ ವೃತ್ತಿಯ ಕರೀಂ ಸಾಬು, ಇಜಾರದ ಸಾಬು ಮೊದಲಾದವರ ಚಟುವಟಿಕೆಗಳಿಗೆ ನೃತ್ಯ ಸಹಿತವಾಗಿರುವ ಹಾಡೊಂದನ್ನು ಬಳಸಿಕೊಂಡು, ಅವರ ಜೀವನಶೈಲಿಯ ಮೇಲೊಂದು ಕ್ಷಕಿರಣ ಬೀರಲಾಗಿದೆ.
     ಪ್ರೇಕ್ಷಕರು ಅನತಿ ದೂರ ನಡೆದು ಮೂರನೆಯ ವೇದಿಕೆಯಾದ “ಬಿದಿರುಮೆಳೆ”ಯಲ್ಲಿ ಆಸೀನರಾದ ಕೂಡಲೆ, ಅಘೋರಿಗಳ ಪೂಜೆಯ ದೃಶ್ಯದ ಮೂಲಕ ನಾಟಕ ಮುಂದುವರಿಯುತ್ತದೆ. ಅಂತಕ್ಕ ಸೆಡ್ತಿಯ ಮಗಳು ಕಾವೇರಿಗೆ ದೇವಯ್ಯನು ಪ್ರೀತಿಯಿಂದ ಕೊಟ್ಟ ಉಂಗುರವು ಕಳೆದುಹೋಗಿ, ಅದು ಚೀಂಕ್ರನ ಮೂಲಕ ವಸೂಲಿ ಸಾಬರ ಕೈಸೇರಿ, ಕಾವೇರಿಯ ಅತ್ಯಾಚಾರದೊಂದಿಗೆ ಕೊನೆಯಾಗುವುದು, ಸುಬ್ಬಣ್ಣ ಹೆಗಡೆಯು ಪುನರ್ಜನ್ಮಗೊಂಡ ತನ್ನ ಮಗನನ್ನು ಮಗುವಿನ ಮುಖದಲ್ಲಿ ಕಾಣುವುದು ಮತ್ತಿತರ ಪ್ರಸಂಗಗಳು ಈ ವೇದಿಕೆಯಲ್ಲಿ ಮೂಡಿಬರುತ್ತವೆ.   ಬೆಳಗಿನ ಜಾವ ನಾಲ್ಕು ಗಂಟೆಯ ಸುಮಾರಿಗೆ ನಾಲ್ಕನೆಯ ವೇದಿಕೆಯಾದ “ಹೊಂಗೆರಂಗ”ಕ್ಕೆ ನಡೆದು ಬಂದು ಕುಳಿತ ಪ್ರೇಕ್ಷಕರಿಗೆ, ಕಾದಂಬರಿಯ ಕೊನೆಯ ಘಟನಾವಳಿಗಳು ಅನಾವರಣಗೊಳ್ಳುತ್ತವೆ. ಚಿನ್ನಮ್ಮನ ಮದುವೆಯ ಪ್ರಯತ್ನ, ವೆಂಕಟಪ್ಪನಾಯಕನ ಮನೆಯಲ್ಲಿ ದಿಬ್ಬಣದ ಸ್ವಾಗತ, ಪೀಂಚಲು ಎಂಬ ಸಹಾಯಕಿಯೊಂದಿಗೆ ರಾತ್ರೋರಾತ್ರಿ ಪರಾರಿಯಾಗುವ ಮದುಮಗಳು ಚಿನ್ನಮ್ಮನ ಕತೆಯ ಮೂಲಕ “ಮದುಮಗಳ” ಸಾಹಸಗಳಿಗೆ ಅರ್ಥ ಬರುತ್ತದೆ. ಆದರೆ ಕುವೆಂಪುರವರು ಸ್ಪಷ್ಟಪಡಿಸಿದಂತೆ, ಇಲ್ಲಿ ಯಾವುದೂ ಮುಖ್ಯವಲ್ಲ, ಅಮುಖ್ಯವೂ ಅಲ್ಲ. ದೇವಯ್ಯನನ್ನು ಮತಾಂತರಿಸಲು ಪಾದರಿ ಯತ್ನಿಸಿದಾಗ, ಮುಕುಂದಯ್ಯನು ಚಮತ್ಕಾರದ ಮೂಲಕ ಆ ಪ್ರಯತ್ನವನ್ನು ವಿಫಲಗೊಳಿಸುತ್ತಾನೆ. ಗಲಾಟೆಯಲ್ಲಿ ಸಿಕ್ಕಿಬಿದ್ದ ಗುತ್ತಿಯು ತನ್ನ ಹೆಂಡತಿ ತಿಮ್ಮಿ ಮತ್ತು ನಾಯಿ ಹುಲಿಯನನ್ನು ಕರೆದುಕೊಂಡು ನದಿ ದಾಟುವಾಗ, ನೀರಿನಲ್ಲಿ ಮುಳುಗುವ ನಾಯಿಯು ಗುತ್ತಿಯನ್ನು ಶೋಕದ ಲೋಕಕ್ಕೆ ಕೊಂಡೊಯ್ಯುತ್ತದೆ. ಸಾಕುಪ್ರಾಣಿಯಾದ ಹುಲಿಯನ ಸಾವಿಗಾಗಿ ಗೋಳಿಡುವ ಗುತ್ತಿಯ ಪ್ರಕರಣದೊಂದಿಗೆ ನಾಟಕ ಮುಗಿಯುತ್ತದೆ.
     ನಾಟಕದ ನಿರ್ದೇಶಕ ಸಿ.ಬಸವಲಿಂಗಯ್ಯ, ವೇದಿಕೆಗಳ ವಿನ್ಯಾಸಕ ಶಶಿಧರ ಅಡಪ, ಕಾದಂಬರಿಯನ್ನು ನಾಟಕದ ರೂಪಕ್ಕೆ ಅಳವಡಿಸಿದ ಕೆ.ವೈ.ನಾರಾಯಣ ಸ್ವಾಮಿ, ಸಂಗೀತ ನೀಡಿದ ಹಂಸಲೇಖ ಮತ್ತು ಹತ್ತೈವತ್ತು ಕಲಾವಿದರು, ನಟರು ನಾಟಕದ ಯಶಸ್ಸಿಗೆ ತಮ್ಮ ಕೊಡುಗೆ ನೀಡಿದ್ದಾರೆ. ಎಪ್ರಿಲ್ 18ರಿಂದ ಮೇ 30ರ ತನಕ, ಪ್ರತಿ ವಾರ ನಾಲ್ಕು ಬಾರಿ (ಮಂಗಳವಾರ, ಗುರುವಾರ, ಶನಿವಾರ, ಭಾನುವಾರ) ಪ್ರದರ್ಶನಗೊಳ್ಳುತ್ತಿರುವ “ಮಲೆಗಳಲ್ಲಿ ಮದುಮಗಳು” ನಾಟಕವು, ಇಡೀ ರಾತ್ರಿ  ನೋಡುಗರನ್ನು ಬೇರೊಂದೇ ಲೋಕಕ್ಕೆ ಕರೆದೊಯ್ಯುತ್ತದೆ, ಹೊಸ ಅನುಭವವನ್ನು ನೀಡುತ್ತದೆ. ಎರಡು ವರ್ಷಗಳ ಹಿಂದೆ ಮೈಸೂರಿನಲ್ಲಿಯೂ ಪೂರ್ಣರಾತ್ರಿ ಈ ನಾಟಕವು ಪ್ರದರ್ಶನಗೊಂಡಿದ್ದು, ಈಗ ರಾಜ್ಯದ ರಾಜಧಾನಿಯಲ್ಲಿ ಪ್ರದರ್ಶನಗೊಳ್ಳುವ ಮೂಲಕ ರಂಗಾಸಕ್ತರಲ್ಲಿ ಸಂಚಲನ ಮೂಡಿಸಿದೆ.
                                                                                 -ಶಶಿಧರ ಹೆಬ್ಬಾರ ಹಾಲಾಡಿ   
ಚಿತ್ರಕೃಪೆ : ಪ್ರದೀಪ್ ಸಾಮಗ (ಪಿಕಾಸ ವೆಬ್ ಆಲ್ಬಂ) [http://picasaweb.google.com/lh/photo/oVKg7UNYajlAc0pIySFcog]
 

Comments

Submitted by venkatb83 Mon, 04/22/2013 - 19:14

ಹೆಬ್ಬಾರರೆ ಮಲೆಗಳಲ್ಲಿ ಮದುಮಗಳು ಓದಿ ಹಲವು ದಿನ ಅದರ ಗುಂಗಲ್ಲೇ ಇದ್ದೆ. ಅದ್ಕೆ ಮೊದಲು ಹಲವು ಕನ್ನಡ ಹಿಂದಿ ತೆಲುಗು ಆಂಗ್ಲ ಕಾದಂಬರಿಗಳನ್ನು ಓದಿದ್ದರೂ ಯಾವುದೋ ಇಸ್ಟೊಂದು ಮನ ಸೆಳೆದಿರಲಿಲ್ಲ. ಆಮೇಲೆ ಇದೇನಾದರೂ ಸಿನೆಮ ಆಗಿದೆಯ ಎಂದು ನೆಟ್ನಲ್ಲಿ ಹುಡುಕಿದಾಗ ಇದು ಸಿಗದೇ ಕಾನೂರು ಹೆಗ್ಗಡತಿ ಸಿಎನ್ಮ ಸಿಕ್ಕಿತು ಅದನ್ನು ಡೌನ್ಲೋಡ್ ಮಾಡಿ ನೋಡಿದೆ , ಕಾದಂಬರಿ ಒಂದನ್ನು ಸಿನೆಮಾಗೆ ಅಳವಡಿಸುವುದು ಎಷ್ಟು ಕಷ್ಟದ ಕೆಲಸ ಅಂತ ನೋಡಿದ ಮೇಲೆ ಅನ್ನಿಸಿತು . ಹೆಗ್ಗಡೆ ಆಗಿ ಗಿರೀಶ್ ಕಾರ್ನಾಡ್ , ಹೆಗ್ಗಡತಿ ಆಗಿ ತಾರ ಅವರ ಅಭಿನಯ ಮಾತು ಆರುಂಧತಿ ನಾಗ್ ಇನ್ನಿತರರ ಅಭಿನಯಕ್ಕೆ ಎರಡು ಮಾತಿಲ್ಲ ಽಅದರೆ ಅದು ಕಾದಂಬರಿ ಸೆಳೆದ ಹಾಗೆ ನನ್ನನು ಸೆಳೆಯಲು ಮನ ಗೆಲ್ಲಲು ವಿಫಲವಾಯ್ತು , ಆದರೂ ಆ ಪ್ರಯತ್ನ ಮೆಚ್ಚಿದೆ. ಒಂದು ವರ್ಷದ ಹಿಂದೆ ಈ ಕಾದಂಬರಿಯನ್ನು ನಾಟಕವನ್ನಾಗಿಸಿ ಅಹೋರಾತ್ರಿ ಮೈಸೂರಲ್ಲಿ ಪ್ರದರ್ಶಿಸಿದಾಗ ಜೋರು ಮಳೆಯಲ್ಲೂ ಜನ ಕದಲದೆ ಮಿಸುಕಾಡದೆ ಪೇಚಾಡದೆ ನೋಡಿದ್ದು ಮತ್ತು ಹಲವರಿಗೆ ಹಲವು ದಿನ ಟಿಕೆಟ್ ಸಿಗದೇ ಹೋದದ್ದು ಕೇಳಿ ನೋಡಿ ಅಚ್ಚರಿ ಆದೆ /... ಹೀಗೂ ಉಂಟೆ ಅಂತ ..!! ಸಿನೆಮ ಬಿಟ್ಟರೆ ಬೇರೆ ಮಾಧ್ಯಮಕ್ಕೆ ಇಂದು ಉಳಿಗಾಲವಿಲ್ಲ ಎಂದು ಯೋಚಿಸಿದ್ದೆ ಆದರೆ ಬಸವಲಿಂಗಯ್ಯ ತರಹದ ಜನ ಕಷ್ಟ ಪಟ್ಟು ಶ್ರಮ ವಹಿಸಿ ಮತ್ತೆ ನಾಟಕಗಳತ್ತ ಜನ ದಾಪುಗಾಲಿಡುವ ಹಾಗೆ ಮಾಡಿರುವರು. ಅವರಿಗೆ ನಮ್ಮ ನನ್ನಿ ಈ ಮಲ್ಲತ್ತಹಳ್ಳಿ ಎಲಿ ಬರುತ್ತೋ? ಹೆಸರು ಕೇಳಿದ ಹಾಗಿದೆ ಆದ್ರೆ ಎಲ್ಲಿ ಅಂತ ಗೊತ್ತಿಲ್ಲ ಎಂದು ನೆಟ್ನಲ್ಲಿ ಹುಡುಕಾಡಿದೆ . ಸಿಕ್ಕಿತು ಆದರೂ ಪಕ್ಕಾ ಗೊತ್ತಿರಲಿಲ್ಲ. ಆದರೆ ಮೊನ್ನೆ ಪರೀಕ್ಷೆ ಬರೆಯಲು ಹೋಗುವಾಗ ನನಗೆ ಸಿಕ್ಕಿತು. ಅಲ್ಲಿಗೆ ಹೋಗಲು ಮತ್ತಿಕೆರೆ - ವಿದ್ಯಾರಣ್ಯಪುರ- ಯಲಹಂಕ -ಯಶವಂತಪುರ ಕಡೆಯಿಂದ ೪ ೦ ೧ ಕೆ ಎಂ ಮತ್ತು ಕೆಂಗೇರಿಗೆ ಹೋಗುವ ಎಲ್ಲ ಅಬಸ್ಸುಗಳು ಹೋಗುವವು. ಬೆಂಗಳೂರು ವಿಶ್ವ ವಿದ್ಯಾಲಯ ಸ್ಟಾಪ್ನಲ್ಲಿ ಅಥವಾ ಅದ್ಕೆ ಮುಂಚೆ ಬರುವ ಮಲ್ಲತ್ತಹಳ್ಳಿ ಸ್ತಪ್ನಲಿ ಇಳಿದರೆ ಎಡಗಡೆ ಬಸ್ ಸ್ಟಾಪ್ ಹಿಂದೂ ಗಾದೆ ಈ ಕಲಾ ಗ್ರಾಮ - ವಿಶಾಲ ಪ್ರದೇಶದಲ್ಲಿದೆ . .. ನಾನು ಈ ವಾರ ಆ ನಾಟಕ ನೋಡಲು ಹೋಗುವೆ . ಬಹುಶ ಶನಿವಾರ ಭಾನುವಾರ ಹೋಗುವೆ. ಅದನ್ನು ನೋಡಿದ ಮೇಲೆ ಆ ಬಗ್ಗೆ ಬರಹ ಬರೆವ ಇರಾದೆ ಇದೆ ನೋಡುವ .. ನಿಮ್ಮ ಆ ಬಗೆಗಿನ ಬರಹ ಓದಿದ ಮೇಲೆ ಆ ನಾಟಕವನ್ನು ಆದಸ್ತು ಶೀಘ್ರ ನೋಡುವ ಮನಸ್ಸಾಗಿದೆ ಆದರೆ ಈಗ ಪರೀಕ್ಷೆ ಇವೆ .. ;( ನನ್ನಿ ಶುಭವಾಗಲಿ \।
Submitted by ಗಣೇಶ Tue, 04/23/2013 - 00:12

In reply to by venkatb83

ಹೆಬ್ಬಾರರೆ, ನಾಟಕದ ವಿವರ ಓದುವಾಗ ಇಂದೇ ಹೋಗಿ ನೋಡಲೆ ಅನಿಸುತ್ತಿದೆ. ಏನು ಮಾಡಲಿ ..ರಾತ್ರಿ ಇಡೀ ನಡೆಯುವ ನಾಟಕ. ದೂರ ಬೇರೆ..ರಜೆ ಇಲ್ಲ. ಅದಕ್ಕೆ ನಮ್ಮ ಸಪ್ತಗಿರಿವಾಸಿ ನಾಟಕ ನೋಡುವುದಕ್ಕೆ ಕಾಯುತ್ತಿದ್ದೇನೆ. ಕಣ್ಣಿಗೆ ಕಟ್ಟುವಂತೆ ಸಿನೆಮಾಗಳ ವಿಮರ್ಶೆ ಮಾಡುವ ಅವರಿಂದ ನಾಟಕದ ವಿಮರ್ಶೆ ಓದಿದರೆ ಸಾಕಲ್ವಾ...
Submitted by sasi.hebbar Tue, 04/23/2013 - 09:35

In reply to by ಗಣೇಶ

ಇನ್ನೂ ಒ0ದು ತಿ0ಗಳು ಇದೆಯಲ್ಲಾ! ಬ0ದು ನೋಡಿ. ಶನಿವಾರ‌ ರಶ್ ಇರುತ್ತದೆ. ಇದನ್ನು ನೋಡುವುದು ಅಪರೂಪದ‌ ಅನುಬವ‌. ಕಾದ0ಬರಿ ಓದಿದ‌ ನ0ತರ‌ ನೋಡಿದರೆ ಚೆನ್ನ‌.
Submitted by sasi.hebbar Tue, 04/23/2013 - 09:40

In reply to by venkatb83

ಮಲ್ಲತ್ತಹಳ್ಳಿಯು ನಾಗರಬಾವಿ 2 ನೆಯ‌ ಹ0ತದಲ್ಲಿದೆ. ರಿ0ಗ್ ರಸ್ತೆಯಲ್ಲಿ ಪಾಪರೆಡ್ಡಿ ಪಾಳ್ಯದ‌ ಹತ್ತಿರ‌ ಇದೆ. ನೀವು ನಾಟಕ‌ ನೋಡಿದ‌ ನ0ತರ‌ ನಿಮ್ಮ‌ ಅಭಿಪ್ರಾಯ‌ ತಿಳಿಸಿ. ನಿಮ್ಮ‌ ವಿಸ್ತ್ರ್ತತ‌ ಪ್ರತಕ್ರಿಯೆ ನನಗೆ ಈ ರೀತಿಯ‌ ಇನ್ನಶ್ಹ್ಕು ಬರಹಗಳನ್ನು ಬರೆಯುವ‌ ಸ್ಪೂರ್ತಿ ನೀಡಿದೆ. ಧನ್ಯವಾದ‌.
Submitted by sasi.hebbar Tue, 04/23/2013 - 12:16

In reply to by ಸುಮ ನಾಡಿಗ್

ಕುವೆ0ಪು ಭಾಷಾ ಭಾರತಿ ಪ್ರಾಧಿಕಾರದ‌ ಹತ್ತಿರವಿರುವ‌ "ಕಲಾಗ್ರಾಮ‌", ಬೆ0.ವಿ.ವಿ. (ಅ0ಬೇಡ್ಕರ್ ಕಾಲೇಜು ಹತ್ತಿರ), ನಾಗರಭಾವಿ ರಿ0ಗ್ ರಸ್ತೆ. ಪ್ರವೇಶವು ಮುಖ್ಯ‌ ರಸ್ತೆಗೆ ಹೊ0ದಿಕೊ0ಡಿದೆ. ಕಾರ್ ಪಾರ್ಕಿ0ಗ್ ಇದೆ. ತಿ0ಡಿ ಕೊ0ಡೊಯ್ಯುವುದು ಅಗತ್ಯ‌.!![https://maps.google…]
Submitted by sasi.hebbar Wed, 04/24/2013 - 22:26

ನಟನ ತಲೆಗೆ ಬೆಂಕಿ ಹಿಡಿದದ್ದು! ಅದು ಹೇಗೆಂದರೆ, ನಾಟಕದಲ್ಲಿ ಒಂದು ಸ್ತ್ರೀ ಪಾತ್ರಧಾರಿಗೆ ದೆವ್ವ ಮೈಮೇಲೆ ಬರುತ್ತದೆ. ವೇದಿಕೆಯ ಮೇಲ್ಭಾಗದಲ್ಲಿ ಅಟ್ಟದ ರೂಪದಲ್ಲಿ ಒಂದು ವೇದಿಕೆ ಇದೆ - ಅಲ್ಲಿ ಭೂತದ ಕೋಲದ ವೇಷಧಾರಿಯು ಅದೇ ಸಮಯದಲ್ಲಿ, ಕೆಂಪು ವಸ್ತ್ರದ ವಿಶೇಷ ಉಡುಗೆ ಧರಿಸಿ ಬರುತ್ತಾನೆ. ಆತನ ಕೈಯಲ್ಲಿ ಎರಡು ದೊಂದಿ. ತಲೆಗೆ ಹುಲ್ಲಿನ ವಿಶೇಷ ಅಲಂಕಾರ. ದೈವದ ಮಾತುಗಳನ್ನು ಆ ಭೂತ ವೇಷಧಾರಿ ನುಡಿಯುತ್ತಿರುವಾಗ, ಆಕಸ್ಮಿಕವಾಗಿ ತಲೆಯ ಹುಲ್ಲಿನ ಅಲಂಕಾರಕ್ಕೆ ದೊಂದಿಯ ಕಿಡಿ ಸಿಡಿದು, ಬೆಂಕಿ ಹಿಡಿಯುತ್ತದೆ. ನಾವು ಪ್ರೇಕ್ಷಕರಲ್ಲಿ ಕೆಲವರು ಅದನ್ನು ತೋರಿಸಿ ಕೈ ಮಾಡಿ ಕೂಗಿದರೂ, ಆ ನಟನಿಗೆ ತನ್ನ ತಲೆಗೆ ಬೆಂಕಿ ಹಿಡಿದದ್ದು ಅರಿವಾಗತ್ತಲೇ ಇಲ್ಲ. ಕೆಳಭಾಗದಲ್ಲಿದ್ದ ವೇದಿಕೆಯಲ್ಲಿದ್ದ ಹಲವಾರು ನಟರಿಗೆ ಆತನ ತಲೆಗೆ ಬೆಂಕಿ ಹಿಡಿದದ್ದು ಕಾಣಿಸುತ್ತಲೇ ಇಲ್ಲ. . . .ಅಂತೂ ಕೊನೆಗೆ, ಭೂತಕೋಲದ ವೇಷ ಧರಿಸಿದ ವೇಷಧಾರಿಗೆ ತನ್ನ ತಲೆಯ ಬಳಿ ಬೆಂಕಿ ಉರಿಯುತ್ತಿದ್ದುದು ಅರಿವಾಗಿ, ಹೊತ್ತಿ ಉರಿಯುತ್ತಿದ್ದ ಒಣ ಹುಲ್ಲಿನ ಆ ಅಲಂಕಾರವನ್ನು ಕೊಡವಿ ಕೆಳಗೆಸೆಯುತ್ತಾನೆ . . . .ನಮಗೆಲ್ಲರಿಗೂ ನಿಟ್ಟುಸಿರು!!
Submitted by sasi.hebbar Wed, 04/24/2013 - 22:31

ವೇದಿಕೆಯಲ್ಲಿ ರಕ್ತ ಹೀರುವ ಇಂಬಳ (ಜಿಗಣೆ) ಪ್ರತ್ಯಕ್ಷ! . . . . . ಮಲೆಗಳಲ್ಲಿ ಮದುಮಗಳು ನಾಟಕವನ್ನು ನೋಡಿದ ನನಗೆ, ಇನ್ನೂ ಅದರ ಗುಂಗು ಇಳಿದಿಲ್ಲ. ಮಲೆನಾಡಿನ ಏರುತಗ್ಗು ದಾರಿಯ ಪ್ರತಿರೂಪವಾದ ಆ ರಂಗಮಂಚದಲ್ಲಿ, ರಕ್ತಹೀರುವ ಜಿಗಣೆಯೊಂದು ಪ್ರತ್ಯಕ್ಷವಾದರೆ ಎಷ್ಟು ನಾಟಕೀಯವಲ್ಲವೆ? ರಕ್ತದ ಬಣ್ಣದ ಇಂಬಳವು, ದಟ್ಟ ಕಾಡಿನಲ್ಲಿ ತನ್ನ ತಲೆಯನ್ನು ಅತ್ತ ಇತ್ತ ತನ್ನ ಬೇಟೆಗಾಗಿ ಆಡಿಸುತ್ತಿರವಂತೆಯೇ, ಇಲ್ಲೂ ತನ್ನ ತಲೆಯನ್ನು ಆಡಿಸುತ್ತಾ ನಾಲ್ಕೆಂಟು ಅಡಿ ಇಳಿಜಾರಿನಲ್ಲಿ ಚಲಿಸುತ್ತಾ, ಹುಲಿಯನೆಂಬ ನಾಯಿಯ ಮೂಗಿನೊಳಗೆ ಹೋಗಲು ಯತ್ನಿಸುತ್ತದೆ! ವೇದಿಕಯಲ್ಲಿದ್ದ ಆ ಜಿಗಣೆಯ ಉದ್ದ ಸುಮಾರು ಎಂಟು ಅಡಿ, ಅಗಲ ಎರಡು ಅಡಿ!
Submitted by venkatb83 Thu, 04/25/2013 - 13:12

ಹೆಬ್ಬಾರರೆ ಮಲೆಗಳಲ್ಲಿ ಮದುಮಗಳು ನಾಟಕದ ಸನ್ನಿವೇಶಗಳ ಫೋಟೋಗಳ ಸ್ಲೈಡ್ ಶೋ ಇಲ್ಲಿದೆ ನೋಡಿ . ( ಸೌಜನ್ಯ: ಯೂಟೂಬ್) ಇದು ಮೈಸೂರಲ್ಲಿ ನಡೆದ ನಾಟಕದ ಛಾಯ ಚಿತ್ರಣ. http://www.youtube… http://www.youtube… ಈ ನಾಟಕ ನೋಡಿ ನೀವ್ ಬರೆದದ್ದು ಓದಿದ ಮೇಲೆ ಅದನ್ನು ಯಾವಾಗಾ ನೋಡುವೆನೋ ಎನ್ನುವಂತಾಗಿದೆ. ಅಲ್ಲದೆ ಆ ಕಡೆ ಪರೀಕ್ಷೆ ಬರೆಯಲು ಹೋದಾಗೆಲ್ಲ ಆ ಬೋರ್ಡ್ ನೋಡಿ ಮನ ಅವತ್ತೇ ನೋಡಲು ಇಚ್ಚಿಸುತ್ತೆ , ಆದರೆ ಈಗ ಪರೀಕ್ಷೆ ನಡೆಯುತ್ತಿವೆ ;;( ಹಲ್ಲದೆ ಭಾನುವಾರವೂ ಪರೀಕ್ಷೆ ಇವೆ . ಹೆಂಗೋ ಈ ನಾಟಕ ಪ್ರದರ್ಶನ ಮುಂದಿನ ತಿಂಗಳ ಕೊನೆ ವರೆಗೆ ಇರುವುದರಿಂದ ಮತ್ತು ಮುಂದಿನ ತಿಂಗಳ ಮೊದಲ ವಾರದಲ್ಲೇ ಪರೀಕ್ಷೆ ಮುಗುಯೋದ್ರಿಂದ ಅಷ್ಟರ ಒಳಗೆ ಅಥವಾ ಮುಗಿಯುವ ಮುನ್ನ ಆ ನಾಟಕವನ್ನು ನೋಡುವೆ .. ಸಾಧ್ಯವಾದರೆ - ಅನುಮತಿ ಇದ್ದರೆ ನಾಟಕದ ಸನ್ನಿವೇಶಗಳ ಫೋಟೋ ತೆಗೆದು ಪುಟ್ಟ ವೀಡಿಯೊ ಮಾಡಿ ಸೇರಿಸುವೆ. ಹಾಗೆ ನಾ ನಾಟಕದ ಬಗ್ಗೆ ಪುಟ್ಟ ಪರಿಚಯ ಬರಹವೂ .. ಇಂಥಾ ಬೃಹತ್ ಕಾದಂಬರಿಯನ್ನ ಹತ್ತು ಹಲವು ಪಾತ್ರಗಳನ್ನ ಸನ್ನಿವೇಶಗಳನ್ನ ನಾಟಕಕ್ಕೆ ಅಳವಡಿಸಿ ಹಲವು ಪಾತ್ರಧಾರಿಗಳನ್ನು ಹುಡುಕಿ ತರಭೇತಿ ಕೊಟ್ಟು ಆ ಪಾತ್ರಗಳಿಗೆ ಸಜ್ಜುಗೊಳಿಸಿ ೫-೬ ಕಡೆ ಬೇರೆ ಬೇರೆ ರಂಗ ಮಂಚಗಳಲ್ಲಿ ಹಲವು ಸನ್ನಿವೇಶಗಳನ್ನು ನಡೆಸೋದು ಎಷ್ಟು ಕಷ್ಟದ ಕೆಲಸ . ಬಸವಲಿಂಗಯ್ಯ ಅವರನ್ನ ಎಷ್ಟು ಹೊಗಳಿದರೂ ಸನ್ಮಾನಿಸಿದರೋ ಕಡಿಮೆಯೇ .. ಈ ನಾಟಕ ಭರಪೂರ ಮನರಂಜನೆ ಕೊಟ್ಟು ಈ ಬಿರು ಬಿಸಿಲಲ್ಲಿ ಮಲೆನಾಡ ಪರಿಸರದೊಂದಿಗೆ ತಂಪು ನೀಡಲಿ ಹತ್ತು ಹಲವು ವಿಕ್ರಮ ದಾಖಲೆ ಸೃಷ್ಟಿಸಲಿ ಎಂಬ ಹಾರೈಕೆ .. ಆ ಸಮಯ(ನಾ ನಾಟಕ ನೋಡುವ) ಬೇಗ ಬರಲಿ ಎಂದು ಬಯಸುವೆ .. ಶುಭವಾಗಲಿ \।
Submitted by sasi.hebbar Thu, 04/25/2013 - 15:42

In reply to by venkatb83

ಪೋಟೋ ತೆಗೆಯಲು ಅನುಮತಿ ಇದೆ ‍ ಆದರೆ ಪ್ಲಾಶ್ ಬಳಸುವ0ತಿಲ್ಲ‌.ನಾನು ಹೋಗಿದ್ದ‌ ದಿನ್ ಕೆಲವರು ವೀಡಿಯೋ ಮಾಡುತ್ತಿದ್ದರು. ನಿಮ್ಮ‌ ಪರೀಕ್ಜ್ಶೆ ಬೇಗನೆ ಮುಗಿದು, ಬೇಗನೆ ನಾಟಕ‌ ನೋಡಿ. ಶುಭವಾಗಲಿ. ‍ ‍ _ಶಶಿಧರ‌ ಹಾಲಾಡಿ.
Submitted by sasi.hebbar Sat, 04/27/2013 - 20:26

In reply to by Manasa G N

ಎರಡು ವರುಷದ‌ ಹಿ0ದೆ ನೋಡಿದ್ದಕ್ಕೂ ಈಗ‌ ಬೆ0ಗಳೂರಿನಲ್ಲಿ ನಡೆಯುತ್ತಿರುವುದಕ್ಕೂ, ನಾಟಕದಲ್ಲಿ ಬದಲಾವಣೆಯಾಗಿರಬಹುದು ‍ ‍ . .ಅ0ತಹ‌ ಬದಲಾವಣೆಯನ್ನು ಗಮನಿಸುವುದಕ್ಕೂ ಕುತೂಹಲಕಾರಿಯಾಗಿರುತ್ತದೆ, ಅಲ್ಲವೆ? ನಿಮ್ಮ‌ ಪ್ರತಿಕ್ರಿಯೆಗಾಗಿ ವ0ದನೆ.
Submitted by raghumuliya Sun, 04/28/2013 - 13:18

In reply to by sasi.hebbar

ಹೆಬ್ಬಾರರೆ, ನಿನ್ನೆ ರಾತ್ರಿ ''ಮಲೆಗಳಲ್ಲಿ ಮದುಮಗಳನ್ನು'' ನೋಡಿದೆ.ನಿಜಕ್ಕೂ ರೋಚ‌ಕ‌ ಅನುಭವ‌. ಸುಮಾರು ಎಪ್ಪತ್ತಕ್ಕೂ ಹೆಚ್ಚು ಕಲಾವಿದರ‌ ಈ ಅದ್ಭುತ‌ ಪ್ರಯತ್ನ ರ0ಗ‌ಕ್ಷೇತ್ರಕ್ಕೆ ಹೊಸ‌ ಆಯಾಮವನ್ನು ನೀಡೀತೆ0ಬ‌ ಭರವಸೆ ಮೂಡಿಸಿತು. ಕಥೆಯ‌ ಒಟ್ಟು ಎಳೆಗಳು ದೊರಕದಿದ್ದರೂ , ನಾಲ್ಕು ವೇದಿಕೆಗಳಲ್ಲಿ ಸಾಗಿದ‌ ವೈಭವ‌ ಸದಾ ಮನದಲ್ಲಿ ಹಸಿರಾಗಿ ಉಳಿಯುವುದ0ತೂ ನಿಸ್ಸ0ದೇಹ‌. ಬಿದಿರಮೆಳೆಯಲ್ಲಿ ತಿರುಪತಿಗೆ ಹೋಗಿ ತಿರುಗಿಬಾರದ‌ ಗ0ಡನನ್ನು ಹುಡುಕುತ್ತಾ ರೋದಿಸುವ‌ ಸನ್ನಿವೇಷ‌ ಇನ್ನೂ ಪಕ್ವವಾಗಬೇಕೇನೋ.ಆದರೆ ಭಾವತೀವ್ರತೆಯ‌ ಉಳಿದ‌ ಸನ್ನಿವೇಷಗಳು ಆ ಕೊರತೆಯನ್ನು ಮರೆಮಾಚಿವೆ.ಒ0ದೆರಡು ಕಡೆ ಕಲಾವಿದರು ಮಾತುಗಳನ್ನು ಮರೆತರೂ ನಾಟಕದ‌ ಒಟ್ಟ0ದದಲ್ಲಿ ಕೊರತೆ ಅನ್ನಿಸಲಿಲ್ಲ.ಅ0ತಕ್ಕೆಯ‌ ಕನ್ನಡ‌ ದಕ್ಷಿಣಕನ್ನಡದಿ0ದ‌ ಬಹಳ‌ ದೂರವಿದ್ದರೂ ಆ ಬಗ್ಗೆ ನನ್ನ ದೂರೇನೂ ಇಲ್ಲ. ಮುಖ್ಯಭೂಮಿಕೆಯ‌ ಎಲ್ಲಾ ಕಲಾವಿದರು ಬಹಳ‌ ದುಡಿದಿದ್ದಾರೆ,ನೆನಪಿನಲ್ಲಿ ಉಳಿಯುವ0ತಹ‌ ನಟನೆಯನ್ನು ತಮ್ಮ ಪಾದರಸವನ್ನು ಹೋಲುವ‌ ನಡೆಯ‌ ಜೊತೆ ನೀಡಿದ್ದಾರೆ.ರ0ಗಸಜ್ಜಿಕೆ ಬಹಳ‌ ಸೊಗಸಾಗಿದೆ.ಸ0ಗೀತ‌ ಮಧುರವಾಗಿದೆ,ಸಾಹಿತ್ಯ ಮೆಲುಕು ಹಾಕುವ0ತಿದೆ. ತೂಕಡಿಕೆಯೇ ಬಾರದೆ, ಬೆಳಕು ಹರಿಯುವ‌ ಹೊತ್ತು ಛೆ..ಇನ್ನೂ ಇರಬೇಕಿತ್ತು,ಮುಗಿಯಿತಲ್ಲಾ ಎ0ಬ‌ ಭಾವನೆ ಕೊಟ್ಟ ಈ ನಾಟಕವನ್ನು ಇನ್ನೊಮ್ಮೆ ನೋಡಲು ಹೋಗಬೇಕೆ0ಬಾಸೆ. ನಿಮ್ಮ ಲೇಖನವನ್ನು ನಾಟಕ‌ ನೋಡಿದ‌ ಮೇಲೆಯೇ ಓದಬೇಕೆ0ದು ಕಾದಿಟ್ಟಿದ್ದೆ.ಇಷ್ಟವಾಯಿತು,ಧನ್ಯವಾದ‌.
Submitted by sasi.hebbar Sun, 04/28/2013 - 22:20

In reply to by raghumuliya

ಇನ್ಫ್ನೊಮ್ಮೆ ಆ ನಾಟಕವನ್ನು ನಾನೂ ನೋಡುವವನಿದ್ದೇನೆ. ಒ0ದೆರ್ಡು ಅನಿಸಿಕೆ ಅ0ದರೆ, ನೀವು ಹೇಳಿದ‌ ನ0ತರ‌ ನೆನಪಾಯಿತು ‍ : ಅ0ತಕ್ಕಯ‌ ಕನ್ನಡ‌ ಕ್ರತಕವಾಗಿದ್ದ್ರೂ ಪರವಾಗಿರಲಿಲ್ಲ‌, ಆದರೆ, ಆ ಒ0ದು ಪಾತ್ರದ‌ ಅಬಿನಯ‌, ವ್ಯಾಪ್ತಿ, ಅಳುವ‌ ರೀತಿ ಎಲ್ಲವೂ ತು0ಬಾ ಅಧ್ವಾನವಾಗಿದೆ. ಆ ಪಾತ್ರಕ್ಕೆ ಅಷ್ಟು ಅವಕಾಶ‌ ಕೊಡಬಾರದಾಗಿತ್ತು. ಧನ್ಯವಾದ‌.
Submitted by vinayasimha.patil Thu, 05/02/2013 - 10:31

In reply to by sasi.hebbar

'ಈ ಪರಿಯ ಸೊಬಗಾವ ದೇವನಲು ನಾ ಕಾಣೆ ' ಅನ್ನುವ ದಾಸರ ಪದದಂತೆ... 'ಈ ಪರಿಯ ಸೊಬಗಾವ ರಂಗ-ರೂಪಕದಲ್ಲೂ ನಾ ಕಾಣೆ'. ಮಲೆಗಳಲ್ಲಿ ಮಧುಮಗಳು ರಂಗ-ರೂಪಕ ಅದ್ಭುತ! ಹೆಬ್ಬಾರರೆ ತುಂಬಾ ಧನ್ಯವಾದಗಳು, ನೀವು ತಿಳಿಸಿದ್ದಕ್ಕೆ ಇದರಬಗ್ಗೆ ಗೊತ್ತಾಗಿದ್ದು ಮತ್ತು ಈ ಅದ್ಭುತವನ್ನು ನೋಡುವ ಭಾಗ್ಯ ದೋರತದ್ದು.
Submitted by sasi.hebbar Thu, 05/02/2013 - 13:22

In reply to by vinayasimha.patil

ನಾಟಕ ನೋಡಿ ನಿಮಗೆ ತುಂಬಾ ಖುಷಿಯಾದರೆ, ಅದಕ್ಕೆ ಮುಖ್ಯ ಕಾರಣ ನಿರ್ದೇಶಕರಾದ ಶ್ರೀ ಬಸವಲಿಂಗಯ್ಯ ಮತ್ತು ಮೂಲ ಲೇಖಕರಾದ ಕುವೆಂಪು. ನಾನು ಆ ನಾಟಕವನ್ನು ಇನ್ನೊಮ್ಮೆ ನೋಡುವ ಇರಾದೆಯಲ್ಲಿದ್ದೇನೆ. ಧನ್ಯವಾದ, ನಿಮ್ಮ ಪ್ರತಿಕ್ರಿಯೆಗೆ.
Submitted by sasi.hebbar Fri, 05/03/2013 - 18:45

ಈ ವಿಶಿಷ್ಟ ರಂಗಪ್ರಯೋಗವನ್ನು ನೋಡಿದ ನಂತರ, ಅದರ ಗುಂಗಿನಲ್ಲೇ, ಇದ್ದೆ. ಆ ನಂತರದ ದಿನಗಳಲ್ಲಿ, ಶಿವರಾಮ ಕಾರಂತರ, "ಮರಳಿ ಮಣ್ಣಿಗೆ" ಕಾದಂಬರಿಯನ್ನು ಓದುತ್ತಿದ್ದಾಗ, ಅನಿಸಿದ್ದೇನೆಂದರೆ, "ಮರಳಿ ಮಣ್ಣಿಗೆ" ಯನ್ನು ಇಡೀ ರಾತ್ರಿ ಆಡಬಲ್ಲ ನಾಟಕವನ್ನಾಗಿಸಬಹದೇನೊ ಎಂದು! ಮರಳಿ ಮಣ್ಣಿಗೆ ಯಲ್ಲಿ, ಅಂತಹ ವಿಶಾಲ ಕ್ಯಾನ್ ವಾಸ್ ಇದೆ. ಮನೆಯಲ್ಲಿ, ಗಂಡಸರ ದೃಷ್ಟಿಯಲ್ಲಿ "ಕಸ"ದ ರೀತಿ ಪರಿಗಣಿಸಲ್ಪಟ್ಟ ಹೆಂಗಸರು, ಗಂಡನಿಗೆ ಎರಡನೆಯ ಮದುವೆ, ದೋಣಿಯಲ್ಲಿ ಸಾಗುವ ಮದುವೆಯ ದಿಬ್ಬಣಗಳು, ಲಾಸ್ಯ ಲಲನೆಯರಿಂದ ದೌಲತ್ ಜ್ಯಾದಾ, ಪೇಟೆಯಲ್ಲಿ ಓದುವ ಹುಡುಗರು, ದಾರಿ ತಪ್ಪುವ ಹುಡುಗರು, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿ ಉಪ್ಪು ಮಾಡುವ ಹಳ್ಳೀಯ ಜನ, ಬ್ರಿಟಿಷರಿಂದ ಜೈಲಿಗೆ ತಳ್ಳಲ್ಪಡುವ ವಿದ್ಯಾರ್ಥಿಗಳು ಇತ್ಯಾದಿ ಇತ್ಯಾದಿ ‍: ಈ ರೀತಿಯ ವಿವಿರಗಳು ನಾಟಕದಲ್ಲಿ ಚೆನ್ನಾಗಿ ಮೂಡಿಬರಬಹುದು ಎನಿಸಿತು. ಆದರೆ, ಇದು ಕೇವಲ ಅನಿಸಿಕೆ ಅಷ್ಟೆ. ನಾಟಕವನ್ನು ತಯಾರಿಸುವುದು ಎಂದರೆ, ಅದೊಂದು ವಿಶೇಷ ಪ್ರಕ್ರಿಯೆ ಎಂಬ ವಿನಮ್ರ ಅರಿವು ನನಗಿದೆ. ಯಾರಾದರೂ ರಂಗ ನಿರ್ದೇಶಕರು ಪ್ರಯತ್ನಿಸಬಹುದಾದ ಕಾದಂಬರಿ " ಮರಳಿ ಮಣ್ಣಿಗೆ".