“ಮಲೆಗಳಲ್ಲಿ ಮದುಮಗಳು” ಕಾದಂಬರಿಯ ರಂಗರೂಪ
ಅದೊಂದು ಅದ್ಭುತ ಅನುಭವ! ನೀರು ನಿಂತಿರುವ ಗದ್ದೆಗಳ ಮಧ್ಯೆ ಸಾಗುವ ಗದ್ದೆಯ ಅಂಚಿನಲ್ಲಿ ಅತ್ತಿಂದಿತ್ತ ನಡೆದಾಡುತ್ತಿರುವ ನಾಲ್ಕಾರು ಜನರು ಅಲ್ಲೇ ನಿಂತು, ಅನತಿ ದೂರದಲ್ಲಿ ದ್ರೌಪದಿ ವಸ್ತ್ರಾಪಹರಣ ನಾಟಕವನ್ನು ಐತ ಮತ್ತು ಇತರ ಗ್ರಾಮಸ್ಥರು ಅಭ್ಯಾಸ ಮಾಡುತ್ತಿರುವಾಗ, ಗದ್ದೆ ಅಂಚಿನಲ್ಲಿ ನಡೆಯುತ್ತಿರುವ ಜನರು ಇತ್ತ ತಿರುಗಿ “ಓಯ್, ಏನದು, ಸರಿಯಾಗಿ ಸೀರೆ ಎಳೆಯೋ” ಎಂದು ಕೂಗಿ ಸಲಹೆ ನೀಡುತ್ತಿದ್ದವರು ಮತ್ತು ಅವರ ಜೊತೆ ದನಿಗೂಡಿಸಿದವರು ಅಡಕೆ ಮರದ ತುದಿಯಲ್ಲಿ ಕುಳಿತು ಅಡಕೆ ಕೀಳುತ್ತಿರುವವರು ಮತ್ತು ಗದ್ದೆಗೆ ಬೀಜ ಬಿತ್ತುತ್ತಿರುವವರು. ಕೆಲಸದ ಮಧ್ಯದಲ್ಲಿ ಅಗತ್ಯವೆನಿಸಿದರೆ, ಗದ್ದೆಗೆ ಇಳಿದು ನೀರನ್ನು ಚಿಮ್ಮುತ್ತಾ ಓಡಾಡುತ್ತಿದ್ದರು ಆ ಗದ್ದೆ ನಾಟಿ ಜನ. ಇವೆಲ್ಲ ಮೈದಳೆದಿರುವುದು “ಮಲೆಗಳಲ್ಲಿ ಮದುಮಗಳು” ನಾಟಕದಲ್ಲಿ. ಬೆಂಗಳೂರು ವಿಶ್ವವಿದ್ಯಾನಿಲಯದ ಹತ್ತಿರುವಿರುವ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ಇಡೀ ರಾತ್ರಿ ನಡೆಯುತ್ತಿರುವ ಈ ನಾಟಕವನ್ನು ನೋಡುವುದೆಂದರೆ, ಒಂದೆಡೆ 19ನೆಯ ಶತಮಾನದ ಮಲೆನಾಡಿನ ಜೀವನದ ಅನುಭವವನ್ನು ಅನುಭವಿಸುವುದರ ಜೊತೆ, ನಾಟಕದ ಮಧ್ಯೆ ಅಲ್ಲಿಲ್ಲಿ ಇಣುಕುಹಾಕುವ ಸಮಕಾಲೀನ ಸಮಸ್ಯೆಗಳು, ನೋಡುಗರನ್ನು ಚಿಂತನೆಗೆ ಹಚ್ಚುತ್ತವೆ.
ಬಸವಲಿಂಗಯ್ಯನವರ ನಿರ್ದೇಶನದಲ್ಲಿ ನಡೆಯುತ್ತಿರುವ “ಮಲೆಗಳಲ್ಲಿ ಮದುಮಗಳು” ನಾಟಕವನ್ನು ನೋಡುವುದು ಜೀವಮಾನದಲ್ಲೊಮ್ಮೆ ದೊರೆಯುವ ಅನುಭವ ಎಂದರೆ ತಪ್ಪಾಗದು. ರಾತ್ರಿ ಎಂಟರಿಂದ ಬೆಳಿಗ್ಗೆ 6ರÀ ತನಕ ನಡೆಯುವ ನಾಟಕವನ್ನು ನಾಲ್ಕು ವೇದಿಕೆಗಳಲ್ಲಿ ಪ್ರದರ್ಶಿಸುತ್ತಿದ್ದಾರೆ. ಬೆಂಗಳೂರಿನ ಕಲಾಗ್ರಾಮದಲ್ಲಿ ಮಲೆನಾಡಿನ ಜನಜೀವನದ ವಿವಿಧ ಮಗ್ಗುಲುಗಳನ್ನು ತೋರಿಸಲು ತಕ್ಕಷ್ಟು ಜಾಗವಿರುವುದರಿಂದಾಗಿ, ಆ ಅವಕಾಶವನ್ನು ಸಾಕಷ್ಟು ಉಪಯೋಗಿಸಿಕೊಂಡು ನಾಟಕದ ದೃಶ್ಯಗಳನ್ನು ಪ್ರದರ್ಶಿಸುವಲ್ಲಿ ನಿರ್ದೇಶಕರ ಜಾಣ್ಮೆ ಎದ್ದು ಕಾಣುತ್ತದೆ. ಕನ್ನಡ ಮತ್ತು ಸಂಸ್ಕøತಿ ಇಲಾಖೆಯು ಈ ಪ್ರಯತ್ನಕ್ಕೆ ಕೈಜೋಡಿಸಿದೆ.
ಮೊದಲ ವೇದಿಕೆಯ ಸ್ವರೂಪ ವಿಶಿಷ್ಟ. ಅದರ ಹೆಸರು ಕೆರೆಯಂಗಳ. ಎಡಭಾಗದಲ್ಲಿ ಗದ್ದೆ, ಹತ್ತೆಂಟು ಅಡಿಕೆ ಮರಗಳಿರುವ ತೋಟ, ಗದ್ದೆಯಲ್ಲಿ ಕೆಲಸ ಮಾಡುವ ಆಳುಗಳು, ಅವರ ಮೇಲ್ವಿಚಾರಣೆ ಮಾಡುವ ಸೇರೇಗಾರ ಚೀಂಕ್ರ, ಮತ್ತು ಆಗಾಗ ಬಂದು ಕೆಲಸ ಎಷ್ಟು ಆಯಿತು ಎಂದು ನೋಡುವ ಹೆಗ್ಗಡೆಯವರು. ವೇದಿಕೆಯ ಎಡಭಾಗದಲ್ಲಿ ಅಡಿಕೆಮರಗಳಿಂದ ಮಾಡಿದ ಪುಟ್ಟ ಮನೆ, ಮಲೆನಾಡಿನ ದಾರಿಗಳಂತೆ ಏರಿಳಿತಗಳಿಂದ ಕೂಡಿದ ದಾರಿಗಳು, ಅಡಿಕೆ ದಬ್ಬೆ ಬಳಸಿ ಸೇತುವೆ, ಅಟ್ಟಣೆ, ಹಂದಿಒಡ್ಡು ಮತ್ತಿತರ ವಿನ್ಯಾಸಗಳು. ಮೊದಲ ಎರಡು ಗಂಟೆಗಳಲ್ಲಿ ಕಂಡು ಬರುವ ದೃಶ್ಯಗಳಲ್ಲಿ ಗಮನ ಸೆಳೆಯುವ ಹಲವು ಕಥಾಭಾಗಗಳಿದ್ದರೂ, ನಾಯಿ ಗುತ್ತಿಯು ತಿಮ್ಮಿಯನ್ನು ಹಾರಿಸಿಕೊಂಡು ಹೋಗುವ ಪ್ರಣಯ ಸಾಹಸ ಹೆಚ್ಚು ನೆನಪಿನಲ್ಲಿ ಉಳಿಯುತ್ತದೆ. ಗುತ್ತಿ ಎಂದ ಕೂಡಲೆ ಅವನ ಜೊತೆ ಅವಿನಾಭಾವ ಸಂಬಂಧ ಹೊಂದಿರುವ ಹುಲಿಯ ಎಂಬ ನಾಯಿಯ ವಿಚಾರ ಮುಂಚೂಣಿಗೆ ಬರಲೇಬೇಕು. ಕಪ್ಪು ಬಣ್ಣದ ಹುಲಿಯನ ಚುರುಕಾದ ಚಟುವಟಿಕೆಯು ಪೂರ್ತಿ ವೇದಿಕೆಯನ್ನು ಬಳಸಿಕೊಂಡು, ಪಾದರಸದ ಓಟವನ್ನು ನೆನಪಿಸುತ್ತದೆ. ಆ ನಾಯಿಯು ಅತ್ತಿತ್ತ ಓಡುವುದೇನು, ಮೇಲಿನಿಂದ ಕೆಳಗೆ ನೆಗೆಯುವುದೇನು, ಮಕ್ಕಳ ಬಳಿ ಬಂದು ಆಟವಾಡುವುದೇನು, ಇಂಬಳವನ್ನು ಕಚ್ಚಿಸಿಕೊಂಡು ಮುಲುಕಾಡುವುದೇನು, ಇವೆಲ್ಲವೂ ಅಭಿನಯದ ಕೌಶಲ್ಯತೆಯನ್ನು ತೋರಿಸುತ್ತದೆ ಎನ್ನಬಹುದು. ಹಂದಿ ಒಡ್ಡಿನಿಂದ ಒಂದು ಹಂದಿಯನ್ನು ಹಿಡಿಯಲು ಹತ್ತಾರು ಆಳುಗಳು ಕೋಲು ಹಿಡಿದು ಅತ್ತಿತ್ತ ಓಡುತ್ತಾ, ಪರದಾಡುತ್ತಾ ಇದ್ದಾಗ, ಅವರಿಂದ ತಪ್ಪಿಸಿಕೊಂಡು ಬರುವ ಹಂದಿಯು ತುಳಸಿಕಟ್ಟೆಯನ್ನು ಅಶುದ್ಧ ಮಾಡುವ ಸನ್ನಿವೇಶ ಒಂದೆಡೆಯಾದರೆ, ಅದೇ ಸಮಯದಲ್ಲಿ ರಂಗಪ್ರವೇಶ ಮಾಡುವ ಹುಲಿಯನು ಆ ಹಂದಿಯನ್ನು ಅಟ್ಟಾಡಿಸಿಕೊಂಡು, ಅಡ್ಡಗಟ್ಟಿ ಹಿಡಿಯುವಾಗ, ಆ ನಾಯಿಯ ಚಾತುರ್ಯ ಎದ್ದು ಕಾಣುತ್ತದೆ. ಹಂದಿ ಮತ್ತು ನಾಯಿಯ ವೇಷ ಧರಿಸಿದ ಪಾತ್ರಧಾರಿಗಳಿಬ್ಬರೂ ಅದೆಷ್ಟು ವೇಗವಾಗಿ ವೇದಿಕೆಯ ತುಂಬಾ ಓಡಾಡುತ್ತಾ, ಪ್ರೇಕ್ಷಕರ ಗಮನವನ್ನು ಹಿಡಿದಿಟ್ಟುಕೊಂಡು ನಾಟಕದ ಓಟಕ್ಕೆ ಪೂರಕವಾಗುತ್ತಾರೆಂಬುದು ಅಚ್ಚರಿಯನ್ನು ಹುಟ್ಟಿಸುತ್ತದೆ.
ಕುವೆಂಪು ಅವರು ತಮ್ಮ ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ ಮೊದಲಿಗೇ ಬರೆದಿದ್ದಾರೆ, ‘ಇಲ್ಲಿ ಯಾವುದೂ ಮುಖ್ಯವಲ್ಲ, ಯಾವುದೂ ಅಮುಖ್ಯವಲ’್ಲ ಎಂದು. ಗುತ್ತಿಯ ನಾಯಿಯೂ ಮುಖ್ಯವಾಗದ, ಹಂದಿ ಒಡ್ಡಿನ ಸಾಕು ಹಂದಿಯೂ ಅಮುಖ್ಯವಾಗದೆ ಕಥಾನಕ ಇದು. ಎರಡನೆಯ ವೇದಿಕೆ ಬಯಲುರಂಗದಲ್ಲಿ, ನಾಗಕ್ಕ, ನಾಗತ್ತೆಯ ಚೋದ್ಯದ ಪ್ರಸಂಗದ ಜೊತೆಯಲ್ಲೇ, ತಿಮ್ಮಿಯ ತಾಯಿಯ ಮೈಮೇಲೆ ಭೂತ ಆವಾಹನೆಯಾದಾಗ ಮೇಲ್ಭಾಗದ ಅಟ್ಟದಲ್ಲಿ ಬೆಂಕಿಯ ದೊಂದಿ ಹಿಡಿದುಬರುವ ಭೂತದ ಕೋಲದ ವೇಷಧಾರಿಯ ಮೈನವಿರೇಳಿಸುವ ನೃತ್ಯ, ಚೀಂಕ್ರನು ಕುಡಿದ ಮತ್ತಿನಲ್ಲಿ ತನ್ನ ಹೆಂಡತಿಯನ್ನು ಕೊಲ್ಲುವ ಪ್ರಸಂಗ, ತಿಮ್ಮಿಯನ್ನು ಹಾರಿಸಿಕೊಂಡು ಬಂದ ಗುತ್ತಿಯು ಅವಳನ್ನು ಹುಲಿಕಲ್ ನೆತ್ತಿಗೆ ಕರೆದುಕೊಂಡು ಹೋಗಿ ರಾತ್ರಿ ಕಳೆಯುವ ವಿಚಾರ, ಅಲ್ಲಿ ಕಂಡುಬರುವ ಸೂರ್ಯೋದಯವನ್ನು ಕಂಡು ಅಚ್ಚರಿಪಡುವ ತಿಮ್ಮಿ, ಹುಲಿಯನನ್ನು ಹಿಡಿಯಲು ಬರುವ ಕುರ್ಕ – ಈ ರೀತಿ ಸಾಗುವ ನಾಟಕವು ಮಲೆನಾಡಿನ ಅಂದಿನ ಜನಜೀವನವನ್ನು ಬಿಂಬಿಸುವಲ್ಲಿ ಯಶಸ್ವಿಯಾಗಿದೆ. ಜೋಗಪ್ಪಗಳ ಮೂಲಕ ಅಲ್ಲಲ್ಲಿ ಕತೆಯನ್ನು ಹೇಳಿಸಿ, ಅಗಾಧ ಸ್ವರೂಪ ಹೊಂದಿರುವ ಮೂಲಕತೆಯ ವಿವರಗಳನ್ನು ಪ್ರೇಕ್ಷಕರಿಗೆ ಮುಟ್ಟಿಸುವ ಪ್ರಯತ್ನ ಮತ್ತು ಹಾಡುಗಳ ಮೂಲಕ ಹೊಸದೊಂದು ಆಯಾಮವನ್ನು ನೀಡುವ ಪ್ರಯತ್ನ ಗಮನ ಸೆಳೆಯುತ್ತದೆ. ಖ್ಯಾತ ಸಂಗೀತಗಾರ ಹಂಸಲೇಖ ಅವರು ಸಂಯೋಜಿಸಿರುವ ಕೆಲವು ಗೀತೆಗಳು ಮತ್ತೆ ಮತ್ತೆ ಕೇಳಬೇಕೆನಿಸುತ್ತವೆ. ಹೊನ್ನಾಳಿ ಹೊಡೆತಕ್ಕೆ ಹೆಸರುವಾಸಿಯಾಗಿರುವ ವಸೂಲಿ ವೃತ್ತಿಯ ಕರೀಂ ಸಾಬು, ಇಜಾರದ ಸಾಬು ಮೊದಲಾದವರ ಚಟುವಟಿಕೆಗಳಿಗೆ ನೃತ್ಯ ಸಹಿತವಾಗಿರುವ ಹಾಡೊಂದನ್ನು ಬಳಸಿಕೊಂಡು, ಅವರ ಜೀವನಶೈಲಿಯ ಮೇಲೊಂದು ಕ್ಷಕಿರಣ ಬೀರಲಾಗಿದೆ.
ಪ್ರೇಕ್ಷಕರು ಅನತಿ ದೂರ ನಡೆದು ಮೂರನೆಯ ವೇದಿಕೆಯಾದ “ಬಿದಿರುಮೆಳೆ”ಯಲ್ಲಿ ಆಸೀನರಾದ ಕೂಡಲೆ, ಅಘೋರಿಗಳ ಪೂಜೆಯ ದೃಶ್ಯದ ಮೂಲಕ ನಾಟಕ ಮುಂದುವರಿಯುತ್ತದೆ. ಅಂತಕ್ಕ ಸೆಡ್ತಿಯ ಮಗಳು ಕಾವೇರಿಗೆ ದೇವಯ್ಯನು ಪ್ರೀತಿಯಿಂದ ಕೊಟ್ಟ ಉಂಗುರವು ಕಳೆದುಹೋಗಿ, ಅದು ಚೀಂಕ್ರನ ಮೂಲಕ ವಸೂಲಿ ಸಾಬರ ಕೈಸೇರಿ, ಕಾವೇರಿಯ ಅತ್ಯಾಚಾರದೊಂದಿಗೆ ಕೊನೆಯಾಗುವುದು, ಸುಬ್ಬಣ್ಣ ಹೆಗಡೆಯು ಪುನರ್ಜನ್ಮಗೊಂಡ ತನ್ನ ಮಗನನ್ನು ಮಗುವಿನ ಮುಖದಲ್ಲಿ ಕಾಣುವುದು ಮತ್ತಿತರ ಪ್ರಸಂಗಗಳು ಈ ವೇದಿಕೆಯಲ್ಲಿ ಮೂಡಿಬರುತ್ತವೆ. ಬೆಳಗಿನ ಜಾವ ನಾಲ್ಕು ಗಂಟೆಯ ಸುಮಾರಿಗೆ ನಾಲ್ಕನೆಯ ವೇದಿಕೆಯಾದ “ಹೊಂಗೆರಂಗ”ಕ್ಕೆ ನಡೆದು ಬಂದು ಕುಳಿತ ಪ್ರೇಕ್ಷಕರಿಗೆ, ಕಾದಂಬರಿಯ ಕೊನೆಯ ಘಟನಾವಳಿಗಳು ಅನಾವರಣಗೊಳ್ಳುತ್ತವೆ. ಚಿನ್ನಮ್ಮನ ಮದುವೆಯ ಪ್ರಯತ್ನ, ವೆಂಕಟಪ್ಪನಾಯಕನ ಮನೆಯಲ್ಲಿ ದಿಬ್ಬಣದ ಸ್ವಾಗತ, ಪೀಂಚಲು ಎಂಬ ಸಹಾಯಕಿಯೊಂದಿಗೆ ರಾತ್ರೋರಾತ್ರಿ ಪರಾರಿಯಾಗುವ ಮದುಮಗಳು ಚಿನ್ನಮ್ಮನ ಕತೆಯ ಮೂಲಕ “ಮದುಮಗಳ” ಸಾಹಸಗಳಿಗೆ ಅರ್ಥ ಬರುತ್ತದೆ. ಆದರೆ ಕುವೆಂಪುರವರು ಸ್ಪಷ್ಟಪಡಿಸಿದಂತೆ, ಇಲ್ಲಿ ಯಾವುದೂ ಮುಖ್ಯವಲ್ಲ, ಅಮುಖ್ಯವೂ ಅಲ್ಲ. ದೇವಯ್ಯನನ್ನು ಮತಾಂತರಿಸಲು ಪಾದರಿ ಯತ್ನಿಸಿದಾಗ, ಮುಕುಂದಯ್ಯನು ಚಮತ್ಕಾರದ ಮೂಲಕ ಆ ಪ್ರಯತ್ನವನ್ನು ವಿಫಲಗೊಳಿಸುತ್ತಾನೆ. ಗಲಾಟೆಯಲ್ಲಿ ಸಿಕ್ಕಿಬಿದ್ದ ಗುತ್ತಿಯು ತನ್ನ ಹೆಂಡತಿ ತಿಮ್ಮಿ ಮತ್ತು ನಾಯಿ ಹುಲಿಯನನ್ನು ಕರೆದುಕೊಂಡು ನದಿ ದಾಟುವಾಗ, ನೀರಿನಲ್ಲಿ ಮುಳುಗುವ ನಾಯಿಯು ಗುತ್ತಿಯನ್ನು ಶೋಕದ ಲೋಕಕ್ಕೆ ಕೊಂಡೊಯ್ಯುತ್ತದೆ. ಸಾಕುಪ್ರಾಣಿಯಾದ ಹುಲಿಯನ ಸಾವಿಗಾಗಿ ಗೋಳಿಡುವ ಗುತ್ತಿಯ ಪ್ರಕರಣದೊಂದಿಗೆ ನಾಟಕ ಮುಗಿಯುತ್ತದೆ.
ನಾಟಕದ ನಿರ್ದೇಶಕ ಸಿ.ಬಸವಲಿಂಗಯ್ಯ, ವೇದಿಕೆಗಳ ವಿನ್ಯಾಸಕ ಶಶಿಧರ ಅಡಪ, ಕಾದಂಬರಿಯನ್ನು ನಾಟಕದ ರೂಪಕ್ಕೆ ಅಳವಡಿಸಿದ ಕೆ.ವೈ.ನಾರಾಯಣ ಸ್ವಾಮಿ, ಸಂಗೀತ ನೀಡಿದ ಹಂಸಲೇಖ ಮತ್ತು ಹತ್ತೈವತ್ತು ಕಲಾವಿದರು, ನಟರು ನಾಟಕದ ಯಶಸ್ಸಿಗೆ ತಮ್ಮ ಕೊಡುಗೆ ನೀಡಿದ್ದಾರೆ. ಎಪ್ರಿಲ್ 18ರಿಂದ ಮೇ 30ರ ತನಕ, ಪ್ರತಿ ವಾರ ನಾಲ್ಕು ಬಾರಿ (ಮಂಗಳವಾರ, ಗುರುವಾರ, ಶನಿವಾರ, ಭಾನುವಾರ) ಪ್ರದರ್ಶನಗೊಳ್ಳುತ್ತಿರುವ “ಮಲೆಗಳಲ್ಲಿ ಮದುಮಗಳು” ನಾಟಕವು, ಇಡೀ ರಾತ್ರಿ ನೋಡುಗರನ್ನು ಬೇರೊಂದೇ ಲೋಕಕ್ಕೆ ಕರೆದೊಯ್ಯುತ್ತದೆ, ಹೊಸ ಅನುಭವವನ್ನು ನೀಡುತ್ತದೆ. ಎರಡು ವರ್ಷಗಳ ಹಿಂದೆ ಮೈಸೂರಿನಲ್ಲಿಯೂ ಪೂರ್ಣರಾತ್ರಿ ಈ ನಾಟಕವು ಪ್ರದರ್ಶನಗೊಂಡಿದ್ದು, ಈಗ ರಾಜ್ಯದ ರಾಜಧಾನಿಯಲ್ಲಿ ಪ್ರದರ್ಶನಗೊಳ್ಳುವ ಮೂಲಕ ರಂಗಾಸಕ್ತರಲ್ಲಿ ಸಂಚಲನ ಮೂಡಿಸಿದೆ.
-ಶಶಿಧರ ಹೆಬ್ಬಾರ ಹಾಲಾಡಿ
ಚಿತ್ರಕೃಪೆ : ಪ್ರದೀಪ್ ಸಾಮಗ (ಪಿಕಾಸ ವೆಬ್ ಆಲ್ಬಂ) [http://picasaweb.google.com/lh/photo/oVKg7UNYajlAc0pIySFcog]
Comments
ಹೆಬ್ಬಾರರೆ ಮಲೆಗಳಲ್ಲಿ ಮದುಮಗಳು
In reply to ಹೆಬ್ಬಾರರೆ ಮಲೆಗಳಲ್ಲಿ ಮದುಮಗಳು by venkatb83
ಹೆಬ್ಬಾರರೆ, ನಾಟಕದ ವಿವರ ಓದುವಾಗ
In reply to ಹೆಬ್ಬಾರರೆ, ನಾಟಕದ ವಿವರ ಓದುವಾಗ by ಗಣೇಶ
ಇನ್ನೂ ಒ0ದು ತಿ0ಗಳು ಇದೆಯಲ್ಲಾ!
In reply to ಹೆಬ್ಬಾರರೆ, ನಾಟಕದ ವಿವರ ಓದುವಾಗ by ಗಣೇಶ
ಹೆಬ್ಬಾರರೆ, ಒಂದೊಂದೇ ವಿಷಯ ಹೇಳಿ
In reply to ಹೆಬ್ಬಾರರೆ ಮಲೆಗಳಲ್ಲಿ ಮದುಮಗಳು by venkatb83
ಮಲ್ಲತ್ತಹಳ್ಳಿಯು ನಾಗರಬಾವಿ 2 ನೆಯ
In reply to ಮಲ್ಲತ್ತಹಳ್ಳಿಯು ನಾಗರಬಾವಿ 2 ನೆಯ by sasi.hebbar
ಹೆಬ್ಬಾರರೆ,
In reply to ಹೆಬ್ಬಾರರೆ, by ಸುಮ ನಾಡಿಗ್
ಕುವೆ0ಪು ಭಾಷಾ ಭಾರತಿ ಪ್ರಾಧಿಕಾರದ
In reply to ಕುವೆ0ಪು ಭಾಷಾ ಭಾರತಿ ಪ್ರಾಧಿಕಾರದ by sasi.hebbar
ಧನ್ಯವಾದಗಳು.
In reply to ಧನ್ಯವಾದಗಳು. by ಸುಮ ನಾಡಿಗ್
ಹೆಬ್ಬಾರರೆ
In reply to ಹೆಬ್ಬಾರರೆ by VEDA UDUPA
ಕಲಾಗ್ರಾಮದಲ್ಲೂ ಸಿಗುತ್ತದೆ.
ನಟನ ತಲೆಗೆ ಬೆಂಕಿ ಹಿಡಿದದ್ದು!
ವೇದಿಕೆಯಲ್ಲಿ ರಕ್ತ ಹೀರುವ ಇಂಬಳ
ಹೆಬ್ಬಾರರೆ ಧನ್ಯವಾದಗಳು ..ನಾಟಕ್
In reply to ಹೆಬ್ಬಾರರೆ ಧನ್ಯವಾದಗಳು ..ನಾಟಕ್ by Sateesh R Patil
ಖ0ಡಿತಾ ನೋಡಿ. ಅದೊ0ದು ಅಪರೂಪದ
ಹೆಬ್ಬಾರರೆ
In reply to ಹೆಬ್ಬಾರರೆ by venkatb83
ಪೋಟೋ ತೆಗೆಯಲು ಅನುಮತಿ ಇದೆ
ಅದ್ಭುತ ಅನುಭವ ನನಗೂ ಸಹ ಆಗಿದೆ
In reply to ಅದ್ಭುತ ಅನುಭವ ನನಗೂ ಸಹ ಆಗಿದೆ by Manasa G N
ಎರಡು ವರುಷದ ಹಿ0ದೆ ನೋಡಿದ್ದಕ್ಕೂ
In reply to ಎರಡು ವರುಷದ ಹಿ0ದೆ ನೋಡಿದ್ದಕ್ಕೂ by sasi.hebbar
ಹೆಬ್ಬಾರರೆ,
In reply to ಹೆಬ್ಬಾರರೆ, by raghumuliya
ಕ್ಷಮಿಸಿ,ಒ0ದೆರಡು ಕಡೆ ಅಕ್ಷರ
In reply to ಹೆಬ್ಬಾರರೆ, by raghumuliya
ಇನ್ಫ್ನೊಮ್ಮೆ ಆ ನಾಟಕವನ್ನು ನಾನೂ
In reply to ಇನ್ಫ್ನೊಮ್ಮೆ ಆ ನಾಟಕವನ್ನು ನಾನೂ by sasi.hebbar
'ಈ ಪರಿಯ ಸೊಬಗಾವ ದೇವನಲು ನಾ ಕಾಣೆ
In reply to 'ಈ ಪರಿಯ ಸೊಬಗಾವ ದೇವನಲು ನಾ ಕಾಣೆ by vinayasimha.patil
ನಾಟಕ ನೋಡಿ ನಿಮಗೆ ತುಂಬಾ
In reply to ನಾಟಕ ನೋಡಿ ನಿಮಗೆ ತುಂಬಾ by sasi.hebbar
ಮತ್ತೊಮ್ಮೆ ಹೋಗುವಾಗ ನನಗೂ
In reply to ಮತ್ತೊಮ್ಮೆ ಹೋಗುವಾಗ ನನಗೂ by hpn
ಖಂಡಿತಾ!!
ಈ ವಿಶಿಷ್ಟ ರಂಗಪ್ರಯೋಗವನ್ನು