'ದೇವರು'!
ನಾನು ಓದಿದ ಮೊದಲ ನಾಸ್ತಿಕವಾದದ ಪುಸ್ತಕ 'ದೇವರು'! ಲೇ: ಎ. ಎನ್. ಮೂರ್ತಿ ರಾವ್.
ಅದುವರೆಗೂ ಆಧ್ಯಾತ್ಮಿಕತೆ, ಮೋಕ್ಷ, ಪುರಾಣ ಅಂತೆಲ್ಲಾ ಓದುತ್ತಿದ್ದವನಿಗೆ ಮೊದಲಬಾರಿಗೆ ನನ್ನ ಯೋಚನಾ ರೀತಿಗೆ ವಿರುದ್ಧವಾದ
ಪುಸ್ತಕ ಸಿಕ್ಕಿತ್ತು. ನಿಜಕ್ಕೂ ಓದಲು ಪ್ರಾರಂಭಿಸುವವರೆಗೆ ಇದು ದೇವರ ಅಸ್ತಿತ್ವವನ್ನೇ ಪ್ರಶ್ನಿಸುವ ಪುಸ್ತಕ ಎಂದು ಗೊತ್ತಿರಲಿಲ್ಲ!
ಎ. ಎನ್. ಮೂರ್ತಿರಾಯರ 'ದೇವರು' ಪುಸ್ತಕ ಒಮ್ಮೆ ಓದಿದರೆ ಸಾಕು ಎಷ್ಟು ಆಸ್ತಿಕನೇ ಆಗಿರಲಿ ಒಂದು ಕ್ಷಣ
ಗೊಂದಲಕ್ಕೀಡಾಗುತ್ತಾನೆ. ನಿಜಕ್ಕೂ ಕ್ಲಿಷ್ಟವಾದ ಪದಗಳ ಬಳಕೆಯೇನೂ ಇಲ್ಲದೆ, ಸರಳ ಮತ್ತು ಹಾಸ್ಯಾತ್ಮಕವಾಗಿ ಅವರು ಬರೆದ
ರೀತಿಯಿಂದಲೇ ಪುಸ್ತಕ ಓದಿಸಿಕೊಂಡು ಹೋಗುತ್ತದೆ. ತದನಂತರ ಇದೇ ವಿಷಯದ ಬಗ್ಗೆ ಅನೇಕ ಪುಸ್ತಕಗಳನ್ನು ಓದಿದ್ದೇನಾದರೂ,
ಈ ಪುಸ್ತಕದ ಕೆಲವು ಸಾಲುಗಳು ಆಗಾಗ ಮನಸ್ಸಿನಲ್ಲಿ ಬರುತ್ತಿರುತ್ತದೆ. ಕೆಲವು ವಾಕ್ಯಗಳು ತುಸು ಅತಿಯಾಯಿತೇನೋ
ಎನ್ನಿಸುವಂತಿದ್ದರೂ ಕೂಡ, ಇನ್ನೊಮ್ಮೆ ಆಲೋಚಿಸಿದಾಗ ಸರಿಯಾಗಿಯೇ ಬರೆದಿದ್ದಾರೆ ಎನಿಸುತ್ತದೆ!
ಕೆಲವು ಸಾಲುಗಳು!
ಕಲ್ಲೂ ಮರಗಿಡಗಳೂ ದೇವರಾಗಬಹುದು. ಮಾರಮ್ಮನ ಗುಡಿಗಳಲೆಲ್ಲ ಸಾಮನ್ಯವಾಗಿ ಇರುವುದು ಕಲ್ಲು, ಕಲ್ಲಿನ ವಿಗ್ರಹವಲ್ಲ, ಬರೀ
ಕಲ್ಲು. ಮಾರಮ್ಮ ಅದರಲ್ಲಿ ನೆಲೆಸಿ ಅದಕ್ಕೆ ದೈವತ್ವ ಕೊಡುತ್ತಾಳೆ ಎಂಬುದು ನಂಬಿಕೆ!! ಅದೇ ರೀತಿ ತುಳಸಿ ಪೂಜೆ. ನಮಗೆ ಅರಳಿ
ಮರವೂ ದೇವರು, ಅದಕ್ಕೆ ದೈವತ್ವ ಪಡೆದು ಅಶ್ವತ್ಠನಾರಯಣ ಆಗಿದೆ. ಅದಕ್ಕೆ ನೂರೆಂಟು ಪ್ರದಕ್ಷಿಣೆ ಹಾಕಿದವರಿಗೆ ಸಂತಾನ
ಲಭಿಸುತ್ತದಂತೆ! ಅದರ ಮಗ್ಗುಲಲ್ಲಿ ಒಂದು ಬೇವಿನ ಮರವನ್ನೂ ಬೆಳೆಸಿ ಎರಡಕ್ಕೂ ಮದುವೆ ಮಾಡಿಸಿದರೆ ಪುಣ್ಯ ಬರುತ್ತದೆ ಎಂದು
ನಂಬಿ ಮದುವೆ ಮಾಡಿಸುವ ಜನ ಈಗಲೂ ಇದ್ದಾರೆ. ಅಫ್ರಿಕಾದ ಕೆಲವು ಬಣಗಳವರು ಮೊಸಳೆಯನ್ನು ದೇವರೆಂದು ಬಾವಿಸಿ ಅದಕ್ಕೆ
ಬಲಿ ಕೊಡುತ್ತಿದ್ದರಂತೆ. ನಾಗರಹಾವನ್ನು ದೇವರೆಂದು ಪೂಜೆ ಮಾಡುವುದು ನಮ್ಮಲ್ಲಿ ಆಚರಣೆಯಲ್ಲಿದೆಯಷ್ಟೆ. ನಾಗಪ್ರತಿಷ್ಟೆ ಮಾಡಿದರೆ
ಪುತ್ರ ಸಂತಾನ ಲಭಿಸುತ್ತದೆಯೆಂದು ಲಕ್ಷಗಟ್ಟಲೆ ಜನ ನಂಬಿದ್ದಾರೆ. ಅನಕ್ಷರಸ್ಠರು ಮಾತ್ರವಲ್ಲ ಘನ ವಿದ್ವಾಂಸರೂ ನಾಗಪ್ರತಿಷ್ಟೆ
ಮಾಡುತ್ತಾರೆ. ನಾಗರಹಾವನ್ನು ಕೊಲ್ಲುವುದು ಪಾಪ, ಕೊಂದವರಿಗೆ ಚರ್ಮ ರೋಗ ಬಂದು ಅವರ ವಂಶದವರನೆಲ್ಲಾ ಕಾಡುತ್ತದಂತೆ.
ಕೆಲವು ವೇಳೆ ಪ್ರಥಮ ವರ್ಗದ ದೇವರೊಬ್ಬನ ಸಹವಾಸದಿಂದ ಮೃಗ ಪಕ್ಷಿಗಳಿಗೂ ದೈವತ್ವ ಲಭಿಸುತ್ತದೆ. ವಿಷ್ಣುವಿನ
ವಾಹನವಾದ್ದರಿಂದ ಗರುಡ ತಾನೂ ದೇವರಾಗಿದ್ದಾನೆ. ಅದೇ ರೀತಿ ನಮ್ಮ ದೇಶದಲ್ಲಿ ಹನುಮಂತರಾಯನ ಗುಡಿಯಿಲ್ಲದ ಊರೇ ಇಲ್ಲ.
ಮುಂದಿನ ಕಲ್ಪದಲ್ಲಿ ಹನುಮಂತ ಬಡ್ತಿ ಪಡೆದು ಬ್ರಹ್ಮ ಆಗುತ್ತಾನಂತೆ. ಈ ಮಟ್ಟದಿಂದ ಒಂದು ಹಂತ ಮೇಲಕ್ಕೇರಿದರೆ (ಅಥವಾ
ಕೆಳಕ್ಕಿಳಿದರೆ) ಸ್ವಲ್ಪ ಹೆಚ್ಚು ಕಡಿಮೆ ಮಾನವ ರೂಪವನ್ನುಳ್ಳ ಮಾರಿ ಮಸಣಿ, ಬೀರೆ ದೇವರುಗಳೂ, ಪಂಜುರ್ಲಿ ಬೊಬ್ಬರ್ಯಗಳಂಥ
ಭೂತಗಳೂ ಸಿಕ್ಕುತ್ತಾರೆ. ಕೆಲವು ಅಮ್ಮಗಳಂತೂ ತಮ್ಮ ಊರುಗಳಲ್ಲಿ ವಿಶೇಷ ಗೌರವ ಗಳಿಸಿ ದೇವರ ಮಟ್ಟ ಏರಿದ್ದಾರೆ. ಇವರೆಲ್ಲಾ
ಯಾವನಾದರೊಬ್ಬನ ಮೇಲೆ ಬಂದು ಅವನ ಮೂಲಕ ತಮ್ಮ ಸಲಹೆಯನ್ನೋ ಅಪೇಕ್ಷೇಯನ್ನೋ ತಿಳಿಸಬಲ್ಲರು.
ರೋಗರುಜಿನಗಳನ್ನು ತಂದುಹಾಕಿ, ಸಾವುನೋವುಗಳನ್ನುಂಟುಮಾಡಿ, ಜನರಿಂದ ಕಾಣಿಕೆ ವಸೂಲು ಮಾಡಿದ ಮೇಲೆ ಬದುಕಿಕೋ
ಹೋಗು ಎಂದು ಪಿಡುಗನ್ನು ಅಲ್ಲಿಗೆ ನಿಲ್ಲಿಸುತ್ತಾರೆ.!"
ಇಂತಹ ದೇವರುಗಳನ್ನೂ, ನಂಬಿಕೆಗಳನ್ನೂ ದಿಟ್ಟವಾಗಿಯೇ ಪ್ರಶ್ನಿಸುತ್ತಾ ಕೆಲವೊಂದು ಕಡೆ ತಾರ್ಕಿಕವಾಗಿ ವಿವರಿಸುತ್ತಾ ಪುಸ್ತಕದ
ಪ್ರತಿಯೊಂದು ಪುಟಗಳು ಸಾಗುತ್ತವೆ. ನನಗಂತೂ ಇದರಲ್ಲಿ ಯಾವುದೇ ಉತ್ಪ್ರೇಕ್ಷೆ ಇಲ್ಲ ಎಂದೆನೆಸಿತ್ತು! ಶಿವರಾಮ್ ಕಾರಂತರು
ಹೇಳುವಂತೆ ಯಾವುದೋ ಒಂದು ಕಾಲದ ಜನಾಂಗದವರು ತಮ್ಮ ಕಲ್ಪನೆಗನುಸಾರವಾಗಿ ಸೃಷ್ಠಿಸಿಕೊಂಡತಹ ನಂಬಿಕೆಗಳನ್ನು, ಅದೇ
ರೀತಿ ಕಣ್ಣು ಮುಚ್ಚಿ ಸ್ವೀಕರಿಸಲು ನನ್ನ ತಾರ್ಕಿಕ ಬುದ್ಧಿ ಒಪ್ಪುವುದಿಲ್ಲ! ಯಾಕೆಂದರೆ ನನ್ನ ಭಾವನೆಯ ದೇವರು ಯಾವುದೋ
ಗುಡಿಯಲ್ಲಿ ಕುಳಿತು ಅಥವಾ ಇನ್ಯಾರದೋ ಮೈಯಲ್ಲಿ ಬಂದು, ನನ್ನನ್ನು ನಂಬಿದರೆ ಮಾತ್ರ ನಿನ್ನನ್ನು ಉದ್ಧಾರ ಮಾಡುತ್ತೇನೆ
ಎನ್ನುವುದಿಲ್ಲ. ಈ ಜನ್ಮದಲ್ಲಿ ತಪ್ಪು ಮಾಡಿದರೆ ಬರುವ ಜನ್ಮದಲ್ಲಿ ಶಿಕ್ಷಿಸುತ್ತೇನೆ ಎನ್ನುವುದಿಲ್ಲ! ನಮ್ಮನ್ನು ಸೃಷ್ಠಿ ಮಾಡಿದ ದೇವರೇ
ನಮಗೆ ಒಳ್ಳೆಯತನವನ್ನು ಮಾತ್ರ ಕೊಡಬಹುದಾಗಿತ್ತಲ್ಲ?! ಈ ಪ್ರಶ್ನೆಗೆ ಕೆಲವರು ಈ ರೀತಿ ಉತ್ತರಿಸುತ್ತಾರೆ, ದೇವರು ನಮಗೆ
ಯಾವುದು ಒಳ್ಳೆಯದು ಮತ್ತು ಯಾವುದು ಕೆಟ್ಟದ್ದು ಎಂದು ತೀರ್ಮಾನಿಸುವ ವಿವೇಕವನ್ನಂತೂ ನೀಡಿದ್ದಾನೆ, ಅದನ್ನು ಅರಿಯದಿದ್ದರೆ
ನಮ್ಮ ಕರ್ಮ!! ಸರಿಯೇ! ಒಮ್ಮೆ ಯಾರೊ ಒಬ್ಬ (ಅ)ವಿವೇಕಿ ಶಿಷ್ಯ ಗುರುಗಳಲ್ಲಿ ಕೇಳಿದನಂತೆ, "ಗುರುಗಳೇ, ಜೀವನವೆಲ್ಲಾ
ಅನ್ಯಾಯವೆಸಗುತ್ತಾ, ಪರರಿಗೆ ಮೋಸ ಮಾಡುತ್ತಾ ಕಳೆದ ವ್ಯಕ್ತಿಯೊಬ್ಬ, ದೇವರಲ್ಲಿ ಮಾತ್ರ ಅಚಲವಾಗಿ ನಂಬಿಕೆ ಇರಿಸುತ್ತಾನೆ.
ದಿವಸವೂ ಶ್ರದ್ಧೆಯಿಂದ ದೇವರ ಪೂಜೆ ಮಾಡುತ್ತಾನೆ, ಇಂತಹವನು ಸತ್ತರೆ ಸ್ವರ್ಗ ಸೇರುತ್ತಾನೆಯೆ? ಅಂತೆಯೇ ಎಲ್ಲರಿಗೂ
ತನ್ನಿಂದಾಗುವ ಸಹಾಯ ಮಾಡುತ್ತಾ, ಪರೋಪಕಾರಿಯಾಗಿ ಜೀವಿಸುವ ವ್ಯಕ್ತಿಯೊಬ್ಬ ದೇವರಲ್ಲಿ ಲವಲೇಶವೂ
ನಂಬಿಕೆಯಿರಿಸುವುದಿಲ್ಲ. ಈತ ನರಕ ಸೇರುತ್ತಾನೆಯೆ?"
ಗುರುಗಳು ಎಂದರಂತೆ, "ನೋಡು, ದೇವರು ಯಾರನ್ನೂ ರಕ್ಷಿಸುವುದಾಗಲೀ, ಶಿಕ್ಷಿಸುವುದಾಗಲೀ ಇಲ್ಲ. ಪ್ರತಿಯೊಬ್ಬನಿಗೂ ಅವನ
ತಪ್ಪು ಒಪ್ಪುಗಳನ್ನು ನೋಡಿ ಶಿಕ್ಷಿಸಲು ದೇವರೇನು ಬಡ್ಡಿ ವ್ಯಾಪಾರಿಯಲ್ಲ! ಜೀವನದ ಕೊನೆಗಳಿಗೆಯಲ್ಲಿ ಪ್ರತಿಯೊಬ್ಬ ಮನುಷ್ಯನೂ
ತನ್ನ ಜೀವನದುದ್ದಕ್ಕೂ ಮಾಡಿದ ತಪ್ಪುಗಳನ್ನು ನೆನೆಯುತ್ತಾನೆ, ಪಾಪ ಪ್ರಜ್ಞೆಯಿಂದ ಪಶ್ಚಾತಪಿಸುತ್ತಾನೆ. ಅದುವೇ ಆತನಿಗೆ ನರಕ
ಸಮಾನ. ಪ್ರತಿಯೊಬ್ಬ ಮಾನವನ ಆ ಕ್ಷಣದ ಮಾನಸಿಕ ಸ್ಥಿತಿಯನ್ನು ವಿವರಿಸಲು ಅಸಾಧ್ಯ!"
ಜೀವನದಲ್ಲಿ ಕೆಲವೊಂದು ಮೌಲ್ಯಗಳನ್ನು ಅಳವಡಿಸಿಕೊಂಡವರಿಗೆ, ದೇವರ ಬಗೆಗಿನ ನಂಬಿಕೆಯಾಗಲೀ, ಭಕ್ತಿಯಾಗಲೀ
ಅಗತ್ಯವಿಲ್ಲವೆಂದು ನನ್ನ ಭಾವನೆ.
Comments
ಧನ್ಯವಾದಗಳು ಶಿವ ರವರೆ ಕಾಣದೇ
In reply to ಧನ್ಯವಾದಗಳು ಶಿವ ರವರೆ ಕಾಣದೇ by Amaresh patil
ದನ್ಯವಾದಗಳು ಅಮರೇಶ್ ಅವರೇ. ನಮ್ಮ
ನಮ್ಮ ಉದ್ಧಾರ ನಮ್ಮಿಂದಲೇ ಹೊರತು
In reply to ನಮ್ಮ ಉದ್ಧಾರ ನಮ್ಮಿಂದಲೇ ಹೊರತು by kavinagaraj
ನಾಗರಾಜರೇ ಧನ್ಯವಾದಗಳು. ನಮ್ಮ
"ದೇವರು ಯಾರನ್ನೂ ರಕ್ಷಿಸುವುದಾಗಲೀ
In reply to "ದೇವರು ಯಾರನ್ನೂ ರಕ್ಷಿಸುವುದಾಗಲೀ by venkatb83
ವೆಂಕಟ್ ಅವರೇ ಧನ್ಯವಾದಗಳು.