೨೬. ಶ್ರೀ ಲಲಿತಾ ಸಹಸ್ರನಾಮ ೬೪ ಮತ್ತು ೬೫ನೇ ನಾಮಗಳ ವಿವರಣೆ
ಲಲಿತಾ ಸಹಸ್ರನಾಮ ೬೪-೬೫
Devarṣi-gaṇa- saṃghāta -stūyamānātma-vaibhavā देवर्षि-गण-संघात-स्तूयमानात्म-वैभवा (64)
೬೪. ದೇವರ್ಷಿ-ಗಣ-ಸಂಘಾತ-ಸ್ತೂಯಮಾನಾತ್ಮ-ವೈಭವಾ
ಈ ನಾಮದಿಂದ ಪ್ರಾರಂಭವಾಗಿ ೮೪ನೇ ನಾಮದವರೆಗೆ ರಾಕ್ಷಸನಾದ ಭಂಡಾಸುರನನ್ನು ಸಂಹರಿಸುವ ವರ್ಣನೆಯಿದೆ. ದೇವ+ಋಷಿ+ಗಣ. ದೇವ ಎಂದರೆ ಪುಂ. ಮತ್ತು ಸ್ತ್ರೀ ದೇವರುಗಳು ಅಥವಾ ದೇವ-ದೇವಿಯರು, ಋಷಿ ಎಂದರೆ ಮಹಾನ್ ಮುನಿ, ಗಣ ಎಂದರೆ ದೇವತೆಗಳ ಅಥವಾ ಉಪದೇವರುಗಳ ಸಮೂಹ. ಅಗ್ನಿ ಪುರಾಣವು ಏಳು ವಿಧವಾದ ಗಣಗಳನ್ನು ಹೆಸರಿಸುತ್ತದೆ. ಉದಾಹರಣೆಗೆ ರುದ್ರ ಗಣವೆಂದರೆ ಶಿವನ ಸಹಾಯಕರು ಅಥವಾ ಆಜ್ಞಾಪಾಲಕರು. ’ಶ್ರೀ ರುದ್ರಂ’ನ ೧೧ನೇ ಶ್ಲೋಕವು ಈ ರುದ್ರ ಗಣಗಳನ್ನು ಪ್ರಾರ್ಥಿಸುವುದಕ್ಕಾಗಿಯೇ ಪ್ರತ್ಯೇಕವಾಗಿ ರಚಿಸಲ್ಪಟ್ಟಿದೆ. ಋಷಿ ಎಂದರೆ ಮಹಾ ಮುನಿಗಳಾದ ವಶಿಷ್ಠ, ನಾರದ ಮೊದಲಾದವರು. ನಾರದನನ್ನು ದೇವರ್ಷಿ ಎಂದೂ ಕರೆದಿದ್ದಾರೆ. ದೇವಿಯನ್ನು ದೇವ-ದೇವಿಯರು, ಋಷಿಮುನಿಗಳು, ಉಪದೇವ-ದೇವಿಯರು ಅಥವಾ ದೇವತೆಗಳ ಸಮೂಹವು ಪೂಜಿಸುತ್ತದೆ. ದೇವರುಗಳು ಮತ್ತು ಋಷಿಗಳು ಪರಬ್ರಹ್ಮಕ್ಕಿಂತ ಕಡಿಮೆ ಸ್ತರದಲ್ಲಿರುವವರನ್ನು ಪೂಜಿಸುವುದಿಲ್ಲ ಹಾಗಾಗಿ ಈ ನಾಮವು ದೇವಿಯು ನಿರ್ಗುಣ ಬ್ರಹ್ಮಳೆಂದು ಪರೋಕ್ಷವಾಗಿ ಪ್ರತಿಪಾದಿಸುತ್ತದೆ.
ನಾರದ ಮಹರ್ಷಿಯು ಶ್ರೀ ಲಲಿತೆಯ ಬಳಿ ಸಾರಿ ದೇವತೆಗಳಿಗೆ ಮತ್ತು ಋಷಿಗಳಿಗೆ ಕಂಟಕ ಪ್ರಾಯನಾಗಿದ್ದ ಭಂಡಾಸುರನನ್ನು ಸಂಹರಿಸುವಂತೆ ಬೇಡಿಕೊಂಡನಂತೆ. ಈ ನಾಮದ ಗೂಡಾರ್ಥವೇನೆಂದರೆ; ಇಲ್ಲಿ ದಾನವರೆಂದರೆ ಅಜ್ಞಾನದಿಂದ ಉಂಟಾಗುವ ಅಹಂಕಾರ ಅಥವಾ ಅಹಮಿಕೆ. ತಮ್ಮ ಅಹಂಕಾರವನ್ನು ನಾಶಗೊಳಿಸಲು ಜನರು ಶ್ರೀ ಲಲಿತೆಯ ಬಳಿಗೆ ಬರುತ್ತಾರೆ; ಏಕೆಂದರೆ ಆಕೆಗೆ ಮಾತ್ರವೇ ಅದನ್ನು ನಾಶಮಾಡುವ ಶಕ್ತಿಯಿದೆ. ಪಾಪಕಾರ್ಯಗಳು ಅಜ್ಞಾನದಿಂದಾಗಿ ಮಾಡಲ್ಪಡುತ್ತವೆ.
Bhaṇḍāsura-vadhodyukta-śakti-senā-samanvitā भण्डासुर-वधोद्युक्त-शक्ति-सेना-समन्विता (65)
೬೫. ಭಂಡಾಸುರ-ವಧೋದ್ಯುಕ್ತ-ಶಕ್ತಿ-ಸೇನಾ-ಸಮನ್ವಿತಾ
ದೇವಿಯು ಭಂಡಾಸುರನೊಡನೆ ಯುದ್ಧ ಮಾಡಲು ತನ್ನ ಸೇನೆಯೊಂದಿಗೆ ಸಿದ್ಧಳಾಗಿದ್ದಾಳೆ. ಅವಳ ಸೈನ್ಯವು ಶ್ರೀ ಚಕ್ರದಲ್ಲಿ ಹೆಸರಿಸಿರುವ ವಿವಿಧ ದೇವಿಯರಿಂದ ಕೂಡಿದೆ. ಈ ನಾಮದೊಂದಿಗೆ ಒಂದು ಕತೆಯು ಅನುಬಂಧಹೊಂದಿದೆ. ಪ್ರೇಮದೇವತೆಯಾದ ಮನ್ಮಥನು ಶಿವನಿಂದಾಗಿ ಸುಟ್ಟು ಬೂದಿಯಾದನು. ಗಣೇಶನು ಆಟವಾಡುತ್ತಾ ಈ ಬೂದಿಯನ್ನು ಒಟ್ಟುಮಾಡಿ ಅದರಿಂದ ಒಬ್ಬ ಮನುಷ್ಯನನ್ನು ಸೃಷ್ಟಿಸಿದನು. ಅದನ್ನು ಸೃಷ್ಟಿಕರ್ತನಾದ ಬ್ರಹ್ಮನು ನೋಡಿ ಭಂಡ ಭಂಡ ಅಂದರೆ ಭಲೇ ಭಲೇ ಎಂದು ಅವನನ್ನು ಪ್ರಶಂಸಿದನು. ಅಂದಿನಿಂದಾಗಿ ಆ ರಾಕ್ಷಸನಿಗೆ ಭಂಡಾಸುರ ಎಂದು ಹೆಸರಾಯಿತು. ಶಿವನ ಉಗ್ರವಾದ ಮೂರನೆಯ ಕಣ್ಣಿನಿಂದ ಮನ್ಮಥನು ಸುಡಲ್ಪಟ್ಟದ್ದರಿಂದ ಭಂಡಾಸುರನು ಬಹಳಷ್ಟು ಶಕ್ತಿಶಾಲಿಯಾಗಿದ್ದನು. ಅವನು ಎಲ್ಲಾ ವಿಧವಾದ ಕೆಡಕುಗಳ ಮೂರ್ತರೂಪನಾಗಿದ್ದ.
ಭಂಡ ಎಂದರೆ ಬಂಧನ ಎನ್ನುವ ಅರ್ಥವೂ ಇದೆ. ಶಿವ ಸೂತ್ರದ ೧ನೇ ಅಧ್ಯಾಯದ ಎರಡನೇ ಶ್ಲೋಕವು ’ಜ್ಞಾನಮ್ ಬಂಧಃ’ ಎನ್ನುತ್ತದೆ. ಬಂಧಕ್ಕೆ ಇರುವ ವ್ಯಾಖ್ಯೆಯೆಂದರೆ ಪರಿಮಿತ ಜ್ಞಾನ. ಆದ್ದರಿಂದ ಅಜ್ಞಾನವು ಬಂಧನಕ್ಕೆ ಕಾರಣವಾಗಿದೆ ಎಂದು ಅರ್ಥೈಸಬಹುದು. ಬಂಧನವೆಂದರೆ ಎಲ್ಲಾ ವಿಧವಾದ ಆಕರ್ಷಣೆಗೆ ಒಳಗಾಗುವುದು, ಆಸೆಗಳಿಗೆ ದಾಸನಾಗುವುದು, ಮೊದಲಾದವು ಎನ್ನಬಹುದು. ಅಜ್ಞಾನವು ದ್ವೈತ ಅನುಭವಕ್ಕೆ (ಆತ್ಮ ಮತ್ತು ಪರಮಾತ್ಮವು ಬೇರೆ ಎಂದು ತಿಳಿಸುವ ಅನುಭವ) ಕಾರಣವಾಗಿದೆ ಆದ್ದರಿಂದ ಅಜ್ಞಾನವನ್ನು ಬಂಧನವೆಂದಿದ್ದಾರೆ. ಒಬ್ಬನಿಗೆ ಜ್ಞಾನವಿದ್ದರೆ ಅವನು "ನಾನು ಅದೇ (ಅಹಂ ಬ್ರಹ್ಮಾಸ್ತ್ಮಿ)" ಎನ್ನುತ್ತಿದ್ದ. ಅಂತಹ ಬ್ರಹ್ಮಾಂಡ ಚೈತನ್ಯವಾದ ಆತ್ಮನನ್ನು ಜೀವಿಯ ಅಥವಾ ಅಣುವಿನಷ್ಟು ಚಿಕ್ಕದಾದ ವೈಯ್ಯಕ್ತಿಕ ಆತ್ಮದ ಸ್ಥಾಯಿಗೆ ಪರಿಮಿತಗೊಳಿಸಿರುವುದಕ್ಕೆ ಮೂಲ ಕಾರಣ ಮನಸಿನ ಹುಟ್ಟುಗುಣ ಅಥವಾ ಸಂಸ್ಕಾರಗೊಂಡಿರದ ಮನಸ್ಸು; ಇದನ್ನೇ ’ಆಣವ ಮಲ’ ಎನ್ನುತ್ತಾರೆ. (ಆಣವ ಮಲದ ಕುರಿತಾಗಿ ಹೆಚ್ಚಿನ ವಿವರಗಳಿಗೆ - ಶೈವಮತದ ಹಲವು ಮುಖಗಳು : ಭಾಗ ೩ - ಪಾಶುಪತ ಮತ http://sampada.net/blog/%E0%B2%B6%E0%B3%88%E0%B2%B5%E0%B2%AE%E0%B2%A4%E0%B2%A6-%E0%B2%B9%E0%B2%B2%E0%B2%B5%E0%B3%81-%E0%B2%AE%E0%B3%81%E0%B2%96%E0%B2%97%E0%B2%B3%E0%B3%81-%E0%B2%AD%E0%B2%BE%E0%B2%97-%E0%B3%A9-%E0%B2%AA%E0%B2%BE%E0%B2%B6%E0%B3%81%E0%B2%AA%E0%B2%A4-%E0%B2%AE%E0%B2%A4/08/08/2012/37856 ನೋಡಿ). ಇದನ್ನು ಮನಸ್ಸಿನ ಹುಟ್ಟುಗುಣವೆಂದಿದ್ದಾರೆ ಇಲ್ಲವಾಗಿದ್ದರೆ ಅದು ಪರಬ್ರಹ್ಮವನ್ನು ಅರಿತು ಮುಕ್ತವಾಗದೇ ಹೇಗಿರುತ್ತಿತ್ತು? ಬಿಡುಗಡೆಯಿಂದ ಮಾತ್ರವೇ ಈ ಬಂಧನದಿಂದ ಮುಕ್ತನಾಗಲು ಸಾಧ್ಯ. ಮತ್ತು ಮುಕ್ತಿಯು ಕೇವಲ ಜ್ಞಾನದಿಂದಷ್ಟೇ ದೊರೆಯುತ್ತದೆ. ಮನಸ್ಸಿನ ಈ ಸ್ಥಿತಿಯಿಂದ ಮುಕ್ತವಾಗಬೇಕೆಂದರೆ; ಶಿವ ಸೂತ್ರದ ೧ನೇ ಅಧ್ಯಾಯದ ೬ನೇ ಶ್ಲೋಕವು, "ಉನ್ನತವಾದ ಪ್ರಜ್ಞೆಯಿಂದ, ವಿವಿಧ ಶಕ್ತಿಗಳು (ಶಕ್ತಿದೇವತೆಯ ವಿವಿಧ ಕ್ರಿಯಾ ಶಕ್ತಿಗಳು) ಒಂದಾಗಿ ಮಾಯೆಯಿಂದುಂಟಾದ ಈ ಪ್ರಪಂಚನ್ನು ಇಲ್ಲವಾಗಿಸುತ್ತದೆ ಮತ್ತು ಪರಮಚೈತನ್ಯವನ್ನು ಅರಿಯುವತ್ತ ಕೊಂಡೊಯ್ಯುತ್ತವೆ", ಎಂದು ಹೇಳುತ್ತದೆ. ಈ ಕ್ರಿಯೆಯೇ ಆತ್ಮಸಾಕ್ಷಾತ್ಕಾರ.
ಈ ನಾಮದ ಗೂಡಾರ್ಥವೇನೆಂದರೆ, ಶ್ರೀ ಲಲಿತೆಯು ನಮಗೆ ಮರಣ ಮತ್ತು ಜನನಗಳ ಚಕ್ರದಿಂದ ಬಿಡುಗಡೆಯನ್ನು ಕೊಡಲು ಸಿದ್ಧಳಿದ್ದಾಳೆ ಆದರೆ ನಾವು ಅವಳನ್ನು ತಿಳಿಯುವುದಕ್ಕೆ ಕಾತುರವನ್ನು ಹೊಂದಿರಬೇಕು. ಭಂಡಾಸುರನು ಅಜ್ಞಾನ ಮತ್ತು ಅದರಿಂದ ಉಂಟಾಗುವ ಕೆಡಕುಗಳ ಮೂರ್ತರೂಪವಾಗಿದ್ದಾನೆ. ಅವಳು ಅಜ್ಞಾನ ಮತ್ತು ಅದಕ್ಕೆ ಸಂಭಂದಿಸಿದ ಎಲ್ಲಾ ಕ್ರಿಯೆಗಳೊಂದಿಗೆ ಯುದ್ಧ ಮಾಡಲು ಸಿದ್ಧಳಿದ್ದಾಳೆ. ಶಕ್ತಿ-ಸೇನಾ ಎಂದರೆ ಅವಳ ವಿವಿಧ ರೀತಿಯ ಶಕ್ತಿಗಳು; ಕೇವಲ ಸೃಷ್ಟಿ ಮಾತ್ರವಲ್ಲ, ಪಾಲನೆ ಮತ್ತು ಲಯ ಶಕ್ತಿಗಳೂ ಕೂಡಾ. ಅವಳ ವಿವಿಧ ಕಾರ್ಯಗಳನ್ನು ಶ್ರೀ ಚಕ್ರದ ೯೯೬ನೇ ನಾಮಾವಳಿಯಲ್ಲಿ ಪ್ರಸ್ತಾಪಿಸಲಾಗಿರುವ ವಿವಿಧ ದೇವಿಯರ ಮೂಲಕ ಸಾಂಕೇತಿಕವಾಗಿ ಬಿಂಬಿಸಲಾಗಿದೆ.
******
ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 64,65 http://www.manblunder.com/2009/07/lalitha-sahasranamam-6465.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ.
Comments
ನಮಸ್ಕಾರ ಶ್ರೀಧರರವರಿಗೆ,
ನಮಸ್ಕಾರ ಶ್ರೀಧರರವರಿಗೆ,
ನಾಮಾವಳಿ ಲೇಖನ ಓದುತ್ತ ತಟ್ಟನೊಂದು ಸಂಶಯ ಬಂದುಬಿಟ್ಟಿತು - ಕೆಲವು ವರ್ಣನೆಗಳು ಅಥವ ಹೆಸರುಗಳು ಕಾಳಿದಾಸನ ಶ್ಯಾಮಲದಂಡಕದ ಕಾಳಿಯ ಹೆಸರಿಗೂ ತಾಳೆಯಾದಂತೆ ಕಾಣುತ್ತವೆ. ನಿಮಗೆ ಗೊತ್ತಿರುವಂತೆ ಶ್ಯಾಮಲದಂಡಕದ ನಾಮಾವಳಿಗೂ, ಲಲಿತಾಸಹಸ್ರ ನಾಮಾವಳಿಗೂ ನೇರ ಸಂಬಂಧವಿದೆಯೆ ಅಥವ ಕೆಲ ಸಾಮೀಪ್ಯತೆ ಕೇವಲ ಸಾಂದರ್ಭಿಕ ಅಥವ ಕಾಕತಾಳೀಯವೆ?
ನಾಗೇಶ ಮೈಸೂರು, ಸಿಂಗಾಪುರದಿಂದ
In reply to ನಮಸ್ಕಾರ ಶ್ರೀಧರರವರಿಗೆ, by nageshamysore
ಆತ್ಮೀಯ ನಾಗೇಶ್ ಅವರೆ,
ಆತ್ಮೀಯ ನಾಗೇಶ್ ಅವರೆ,
ನನಗೆ ಕಾಳಿದಾಸ ವಿರಚಿತ ಶಾಮಲ ದಂಡಕದ ಕುರಿತಾಗಿ ಕಲ್ಪನೆಯಿಲ್ಲ. ಬಹುಶಃ ಕಾಳಿದಾಸನೂ ಸಹ ದೇವಿಯ ಉಪಾಸಕನಾಗಿದ್ದರಿಂದ ಅದೇ ಹೆಸರುಗಳು ಎರಡೂ ಕಡೆ ಪ್ರಚಲಿತದಲ್ಲಿರಬಹುದು ಮತ್ತು ಸಾಮ್ಯತೆ ಕಂಡು ಬರಲು ಅದೇ ಕಾರಣವಾಗಿರಬಹುದು. ಶಾಮಲ ದಂಡಕದ ಉಲ್ಲೇಖವೇನಾದರೂ/ಕೊಂಡಿಯೇನಾದರೂ ಇದ್ದರೆ ತಿಳಿಸಿ ಅದನ್ನು ಈ ಮಾಲಿಕೆಯ ಮೂಲ ಲೇಖಕರಾದ ಶ್ರೀಯುತ ವಿ. ರವಿಯರವಿರಿಗೆ ಕಳುಹಿಸಿಕೊಟ್ಟು ಅವರ ಅಭಿಪ್ರಾಯವನ್ನು ಪಡೆಯೋಣ. ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ
In reply to ಆತ್ಮೀಯ ನಾಗೇಶ್ ಅವರೆ, by makara
ಶಾಮಲಾ ದಂಡಕಮ್ ಕೃತಿಯು ಬಹುಶಃ
ಶಾಮಲಾ ದಂಡಕಮ್ ಕೃತಿಯು ಬಹುಶಃ ಲಲಿತಾ ಸಹಸ್ರನಾಮದಿಂದ ಪ್ರೇರಣೆ ಪಡೆದಿರಬಹುದೇ ಹೊರತು ಲಲಿತಾ ಸಹಸ್ರನಾಮವು ಯಾವುದೇ ಉದ್ಗ್ರಂಥದಿಂದ ಪ್ರೇರಣೆ ಪಡೆಯಲು ಸಾಧ್ಯವಿಲ್ಲ ಎನ್ನುವುದು ಶ್ರೀಯುತ ವಿ. ರವಿಯವರ ದೃಢ ಅಭಿಪ್ರಾಯ. ಏಕೆಂದರೆ ಲಲಿತಾ ಸಹಸ್ರನಾಮವು ಯಾವಾಗ ಮತ್ತು ಯಾರಿಂದ ರಚಿಸಲ್ಪಟ್ಟಿತೆನ್ನುವುದಕ್ಕೆ ಖಚಿತವಾದ ದಾಖಲೆಗಳಿಲ್ಲ ಮತ್ತು ಇದನ್ನು ಸ್ವಯಂ ಎಂಟು ವಾಗ್ದೇವಿಗಳು ಶ್ರೀ ಲಲಿತೆಯ ಸಮ್ಮುಖದಲ್ಲಿಯೇ ರಚಿಸಿದರೆನ್ನುವುದು ದೇವಿಯ ಭಕ್ತರ ನಂಬಿಕೆ. ಹಾಗಾಗಿ ಲಲಿತಾ ಸಹಸ್ರನಾಮವೇ ಎಲ್ಲಾ ದೇವಿ ಸ್ತೋತ್ರಗಳಿಗೆ ಮೂಲಗ್ರಂಥವಾಗಿರ ಬಹುದು. ಏಕೆಂದರೆ ಲಲಿತಾ ತ್ರಿಶತಿಗೆ ಆಧಾರವಾಗಿರುವುದು ಈ ಲಲಿತಾ ಸಹಸ್ರನಾಮವೇ ಮತ್ತು ಆದಿ ಶಂಕರ ವಿರಚಿತ ಸೌಂದರ್ಯ ಲಹರಿಗೂ ಲಲಿತಾ ಸಹಸ್ರನಾಮವೇ ಆಧಾರ ಗ್ರಂಥವಾಗಿದೆ.
In reply to ಶಾಮಲಾ ದಂಡಕಮ್ ಕೃತಿಯು ಬಹುಶಃ by makara
ಹೌದು ಶ್ರೀಧರ ಅವರೆ, ನನ್ನ
ಹೌದು ಶ್ರೀಧರ ಅವರೆ, ನನ್ನ ಅನಿಸಿಕೆಯು ಅದೆ ಮತ್ತು ಲಲಿತಾಂಬಿಕೆಯ ಸಹಸ್ರ ನಾಮವಳಿಯೆ ಇತರೆ ಎಲ್ಲದರ ತಾಯ್ಮೂಲ ಅನ್ನುವುದು ಸಂಶಯಾತೀತ - ಏಕೆಂದರೆ ಕಾಲಮಾನದ ರೀತ್ಯವೂ ಸಹ ಕಾಳಿದಾಸನ ಕಾಲ ನಮ್ಮ ಎಣಿಕೆ ಏಟುಕಿಗೆ ನಿಲುಕುವಂತಾದ್ದು, ಕಾಲ ಕಲ್ಪನೆಗೆ ನಿಲುಕುವಂತಾದ್ದು. ಆದರೆ ಲಲಿತಾಂಬಿಕೆಯ ಮೂಲ ಸ್ತೋತ್ರ ಕಾಲಾತೀತ ಹಾಗೂ ದೇಶಾತೀತ ಸ್ತರಗಳ ಮುಖವಾಣಿಯಾಗಿ ಹೊಮ್ಮಿದ್ದು. ಒಂದು ರೀತಿಯಲ್ಲಿ ಲೌಕಿಕ ಮಾನವತ್ವದ ಸ್ತರದಲ್ಲಿ ಹೇಲುವುದಾದರೆ - ಅದು ಯಾವಾಗಲೂ, ಇತ್ತು, ಈಗಲೂ ಇದೆ, ಮುಂದೆಯೂ ಸದಾ ಇರುವಂತಾದ್ದು. ಬ್ರಹ್ಮಾಂಡವಿರಲಿ ಇಲ್ಲದಿರಲಿ, ಈ ಇರುವಿಕೆಯ ಸ್ಥಿತಿ ನಿರಂತರ. ಕಾಳಿಕಾಂಬೆಯು ಒಂದು ವಿಧದಲ್ಲಿ ಲಲಿತಾಂಬಿಕೆಯ ಅಂಶವೂ ಆಗಿರುವುದರಿಂದ, ಹಲವು ನಾಮಾವಳಿ ಸ್ತ್ರೋತ್ರಗಳು ತಾನೆ ತಾನಾಗಿ ಎರವಲಾಗಿರುವ ಎಲ್ಲಾ ಸಾಧ್ಯತೆಗಳು ಇದೆ. ನನ್ನ ಕುತೂಹಲವೂ ಆ ಜಿಜ್ಞಾಸೆಯಲ್ಲೆ ಹುಟ್ಟಿದ್ದು. ಶ್ರಿಯುತ ರವಿಯವರ ಹತ್ತಿರವೂ ವಿಷಯ ಪರಿಷ್ಕರಿಸಿದ್ದಕ್ಕೆ ಮತ್ತು ಚೆನ್ನಾಗಿ ವಿವರಿಸಿದ್ದಕ್ಕೆ, ತುಂಬಾ ಧನ್ಯವಾದಗಳು - ಎಂದಿನಂತೆ :-)
ನಾಗೇಶ ಮೈಸೂರು, ಸಿಂಗಾಪುರದಿಂದ
In reply to ಹೌದು ಶ್ರೀಧರ ಅವರೆ, ನನ್ನ by nageshamysore
ಶ್ರೀಯುತ ನಾಗೇಶ್ ಅವರಿಗೆ
ಶ್ರೀಯುತ ನಾಗೇಶ್ ಅವರಿಗೆ ನಮಸ್ಕಾರಗಳು. ನೀವು ಪ್ರಸ್ತಾಪಿಸಿರುವ ಶ್ಯಾಮಲಾ ದಂಡಕಮ್ ಕೃತಿಯನ್ನ ಅಣ್ಣಾವ್ರು ಕವಿರತ್ನ ಕಾಳಿದಾಸದಲ್ಲಿ ಹಾಡಿದ್ದಾರೆಂದು ತಿಳಿದುಬಂತು. ನೀವು ಎತ್ತಿದ ಪ್ರಶ್ನೆಯಿಂದ ಆ ಹಾಡನ್ನು ಯೂ-ಟ್ಯೂಬಿನಲ್ಲಿ ಕೇಳುವ ಸೌಭಾಗ್ಯ ನನಗೆ ಒದಗಿತು. ನೀವೇ ಹೇಳಿರುವಂತೆ ಕಾಳಿಯೂ ಸಹ ಲಲಿತಾಂಬಿಕೆಯ ಅವತಾರವೇ ಆಗಿದ್ದಾಳೆ. ಇದಕ್ಕೆ ಪೂರಕವಾಗಿ ಲಲಿತಾ ಸಹಸ್ರನಾಮ - ಪೂರ್ವ ಭಾಗದಲ್ಲಿ http://sampada.net/blog/%E0%B3%AC-%E0%B2%B2%E0%B2%B2%E0%B2%BF%E0%B2%A4%… ಇರುವ ಈ ವಾಕ್ಯಗಳನ್ನು ಗಮನಿಸಿ.
"ತಂತ್ರಶಾಸ್ತ್ರದಲ್ಲಿ ತಿಳಿಸಿರುವ ವಿಧಿ-ವಿಧಾನಗಳನ್ನು ಅನುಸರಿಸಿದರೆ ಕ್ಷಿಪ್ರ ಫಲವುಂಟಾಗುವುದೆಂದು ಹೇಳಲ್ಪಟ್ಟಿದೆ. ಪ್ರತ್ಯೇಕವಾಗಿ ಲಲಿತಾ ಸಹಸ್ರನಾಮವು ಅತ್ಯುತ್ತಮವಾದದ್ದೆಂದು ಪರಿಗಣಿಸಲ್ಪಟ್ಟಿದೆ. ಅವಳ ವಿವಿಧ ರೂಪಗಳನ್ನು ಸ್ತುತಿಸಲು ಹತ್ತು ಸಹಸ್ರನಾಮಗಳು ಪ್ರಚಲಿತದಲ್ಲಿವೆ. ಅವುಗಳೆಂದರೆ ಗಂಗಾ, ಗಾಯತ್ರೀ, ಶ್ಯಾಮಲಾ, ಲಕ್ಷ್ಮೀ, ಕಾಳಿ, ಬಾಲಾ, ಮತ್ತು ಲಲಿತಾ (ಈಗ ಪ್ರಸ್ತಾಪಿಸಿರುವುದು), ರಾಜರಾಜೇಶ್ವರೀ, ಸರಸ್ವತೀ, ಮತ್ತು ಭವಾನೀ".
In reply to ಶ್ರೀಯುತ ನಾಗೇಶ್ ಅವರಿಗೆ by makara
ನಮಸ್ಕಾರ ಶ್ರೀಧರರವರಿಗೆ,
ನಮಸ್ಕಾರ ಶ್ರೀಧರರವರಿಗೆ,
ಅಂದಹಾಗೆ ನನಗೂ ಶ್ಯಾಮಲದಂಡಕದ ಜ್ಞಾನವಿರುವುದು ಅಣ್ಣಾವ್ರ ಕವಿರತ್ನ ಕಾಳಿದಾಸದ ಮೂಲಕವೆ! ದೇವಿ ಪ್ರತ್ಯಕ್ಷವಾದಾಗ ಹಾಡುವ ಅಷ್ಟು ಪದ್ಯಗಳು ಹೆಚ್ಚುಕಮ್ಮಿ ಬಾಯಿಪಾಠವಾಗಿ ಹೋಗಿವೆ - 'ಮಾಣಿಕ್ಯ ವೀಣಾ ಮುಪನಾಲಯಂತೆ' , 'ಚತುರ್ಭುಜೆ ಚಂದ್ರಕಲಾವತಂಸೆ', 'ಮಾತಾ ಮರಕತ ಶ್ಯಾಮ', 'ಸುಧಾ ಸಮುದ್ರಾಂತ ಹೃದ್ಯನ್ಮಣಿ', 'ದೇವ ದೇವೇಶ ದೈತ್ಯೇಶ ಯಕ್ಷೇಶ', 'ಸರ್ವ ಯಂತ್ರಾತ್ಮಿಕೆ....' ಇವೆಲ್ಲದರ ನೆನಪೆ ಸಾಮ್ಯತೆಯನ್ನು ಅರಿವಾಗಿಸಿದ್ದು!
ಕೊ.ಕೊ: ಅಂದ ಹಾಗೆ ಈ ಸಾಮಾನ್ಯನನ್ನು ಶ್ರೀಯುತ ಎಂದೆಲ್ಲ ಸಂಭೋಧಿಸಬೇಡಿ, ತುಂಬಾ ಸಂಕೋಚವಾಗುತ್ತದೆ. ಹಾಸ್ಯಕ್ಕೆ ಹಾಗೆಂದಿದ್ದರೆ ಸರಿ, ಪರವಾಗಿಲ್ಲ :-)
- ನಾಗೇಶ ಮೈಸೂರು, ಸಿಂಗಪುರದಿಂದ
In reply to ನಮಸ್ಕಾರ ಶ್ರೀಧರರವರಿಗೆ, by nageshamysore
ನಾಗೇಶರೇ, ನಿಮಗೂ ಪ್ರತಿವಂದನೆಗಳು.
ನಾಗೇಶರೇ, ನಿಮಗೂ ಪ್ರತಿವಂದನೆಗಳು. ಇಲ್ಲಿ ಒಂದು ಸಮಸ್ಯೆ ಇದೆ, ಅದೇನೆಂದರೆ ಸಾಮಾನ್ಯವಾಗಿ ಪ್ರತಿಕ್ರಿಯೆ ಬರೆಯುವಾಗ ಒಬ್ಬರು ಒಂದೇ ರೀತಿಯಾದ ಆರಂಭಿಕ ವಾಕ್ಯಗಳನ್ನು ಬರೆಯುತ್ತಾರೆ. ಹಾಗಾಗಿ ಅವರು ಯಾವ ಬರಹಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ ಎನ್ನುವುದು ಅರ್ಥವಾಗುವುದಿಲ್ಲ. ಅದಕ್ಕೇ ಮೊದಲಿನ ಸಾಲಿನಲ್ಲಿ ಸ್ವಲ್ಪ ಬದಲಾವಣೆ ಮಾಡಿದರೆ ಇದು ಯಾವುದೋ ಹೊಸ ಪ್ರತಿಕ್ರಿಯೆ ಎಂದುಕೊಂಡು ಸಂಭಂದಿಸಿದವರು ಅದನ್ನು ನೋಡಿ ಮರುಪ್ರತಿಕ್ರಿಯಿಸುವ ಸಾಧ್ಯತೆ ಇರುತ್ತದೆ. ಅಷ್ಟಕ್ಕೂ ಶ್ರೀಯುತ ಎನ್ನುವುದಕ್ಕೆ ನೀವು ಯೋಗ್ಯರೇ ಆಗಿದ್ದೀರಿ.