SUmUಕತೆ : ಭಾಗ - ೩

Submitted by ಸುಧೀ೦ದ್ರ on Mon, 05/20/2013 - 12:56

 

ನಾನು ಅಂಕಲ್ ಊಟ ಮುಗಿಸಿ ಕೂತಿದ್ದೆವು, ಅತ್ತೆ ಇನ್ನೂ ಊಟ ಮಾಡುತ್ತಿದ್ದರು. ಗಂಟೆ ಹತ್ತಾಯಿತು ನಾನು ಹೊರಡುತ್ತೀನಿ ಅಂಕಲ್ ಅಂದೆ. ಏ ಕೂತ್ಕೊಲೋ ಏನ್ ಮಾಡ್ತ್ಯ ಇಷ್ಟ್ ಬೇಗ ಹೋಗಿ ಅಪರೂಪಕ್ಕೆ ಬಂದಿದ್ಯ ಅಂದ್ರು. ಅಪರೂಪ ಏನ್ ಅಂಕಲ್ ನಾಕೈದು ದಿನದ ಹಿಂದಷ್ಟೇ ಬಂದಿದ್ನಲ ಅಂದ್ರೆ, ಲೇ ಅವಳನ್ನು ಓದೋ ನೆಪದಲ್ಲಿ ದೂರ ಕಳುಸ್ದಿ, ನೀನು ಫ್ರೆಂಡ್ ಮದ್ವೆ ಮಾಡ್ಕೊಂಡ ಅಂತೇಳಿ ಈ ಮನೆ ಬಿಟ್ಟು ಅಕ್ಕನ ಮನೆ ಸೇರ್ಕೊಬಿಟ್ಟೆ. ಇಲ್ಲಿ ನಾವಿಬ್ರೇ ಆಗೊಗಿದೀವಿ..... ನಾನು ಅವರ ಮನೆಯಿಂದ ಹೊರಡುವಾಗಲ್ಲೆಲ್ಲ ಅಂಕಲ್ ರ ಈ ಮಾತುಗಳು ಸಾಮಾನ್ಯ. ಆಯ್ತು ಬಿಡಿ ಅಂಕಲ್ ಅಂತ ನಾನು ಕೂತ್ಕೊಳಕ್ಕೆ ಸರಿಯಾಗಿ ಸಂಯುಕ್ತಾ ಕರೆ ಮಾಡಿದಳು. ಅವಳ ಕರೆ ಕಟ್ ಮಾಡಿ ನಾನು ಮತ್ತೆ ಮಾಡಿದೆ.

ಎರಡು ಮೊಬೈಲ್ ಬಿಲ್ಲು ಕಟ್ಟೋನು ನೀನೆ, ಯಾಕಪ್ಪ ಕಟ್ ಮಾಡ್ತ್ಯ - ಈ ಡಯಲಾಗ್ ನ  ಪ್ರತಿದಿನ ೨-೩ ಬಾರಿ ಕೇಳಿಲ್ಲ ಅಂದ್ರೆ ನಂಗು ನಿದ್ದೆ ಬರಲ್ಲ ಹೇಳಿಲ್ಲ ಅಂದ್ರೆ ಅವಳಿಗೂ ನಿದ್ದೆ ಬರಲ್ಲ.

ಆಯ್ತೇನೆ ಊಟ? ಬಿಸಿ ಬಿಸಿ ಗರಂ ಗರಂ ರೋಟಿ ತಿಂದ? - ರಾತ್ರಿ ಹಾಸ್ಟಲ್ ಮೆಸ್ಸಲ್ಲಿ ದಿನ ಅದೇ ತಿನ್ನುತ್ತಿದ್ದ ಅವಳಿಗೆ ನಾನು ರೇಗಿಸುತ್ತಿದ್ದುದು ಹಾಗೆ.

ಹು.. ಮೃಷ್ಟಾನ್ನ ಭೋಜನ ಮುಗಿತಪ್ಪ..  ನಿಂದು ಆಯ್ತಾ  ಊಟ?

ನಂದು ಊಟ ಆಯಿತು ಕಣೆ ನಿ..  ಹಾ ಹಾ ಅಂತ ಆಕಳಿಸುತ್ತಾ ಹೇಳಿದೆ.

ಓಹ್.. ನಮ್ಮಲೇನೆ ಮಾಡ್ದ... ಸಿಹಿಕುಂಬಳಕಾಯಿ ಹುಳಿ ತಾನೇ? ನೀನ್ ಬಂದ್ರೆ ಅಮ್ಮ ಮಾಡೋದೇ ಅದು ಬಿಡು,,

ಏನ್ ಸಕತ್ತಾಗಿತ್ತು ಗೊತ್ತಾ... ಆಹಾ ಸಂಡಿಗೆಯಂತು ಸೂಪರ್ ...

ಲೇ ಸಾಕು ಸುಮ್ನಿರೋ ನಂಗ್ ಉರುಸ್ಬೇಕು ಅಂತಾನೆ ಹೇಳ್ತ್ಯ ....

ಯಾರಪ್ಪ ಫೋನು.. ನಮ್ ಸಂಯುನಾ? ಕೊಡಿಲ್ಲಿ ಅಂತ ಅತ್ತೆ ಫೋನ್ ಇಸ್ಕೊಂಡು ರೂಮು ಸೇರಿದರು.

ಅಷ್ಟರಲ್ಲಿ ಪವರ್ ಕಟ್ ಆಯಿತು. ಥು ತೆರಿಕೆ ಈಗಲೇ ಹೋಗಬೇಕಿತ್ತಾ ಕರೆಂಟು ಅನ್ಕೊತಾ ಮೊಂಬತ್ತಿ ಹಚ್ಚಿಟ್ಟ ಅಂಕಲ್, ಬಾ ಆಚೆ ಜಗುಲಿ ಮೇಲೆ ಕೂಡೋಣ ಅಂತ ಅಂದರು. ಸಮಯ ೧೦:೩೦ ಆಗಿತ್ತು. UPS ಇಟ್ಟುಕೊಂಡಿದ್ದೋರು (ಎಲ್ಲರೂ) ಬಿಗ್ ಬಾಸು, ಕ್ರೈಂ ಫೈಲು, ಹೀಗೂ ಉಂಟೆ, ಸಿನಿ ಜಗತ್ತು, ಹೆಡ್ ಲೈನ್ಸ್ ಟುಡೇ ನೋಡುವುದರಲ್ಲಿ ಬ್ಯುಸಿಯಾಗಿದ್ದಾರೆ. UPS ಇಲ್ಲದವರೆಂದರೆ ಅಂಕಲು ಮತ್ತೆ ಮೂಲೆ ಮನೆ ಮೇಷ್ಟ್ರು. ಮೇಷ್ಟ್ರಿಗೆ ಈಗ ಸರಿ ರಾತ್ರಿ, ಹಾಗಾಗಿ ಬೀದಿಯಲ್ಲಿ ನಾವಿಬ್ಬರೇ.

ಕಳೆದ ವಾರ ಬಂದಿರಲ್ಲಿಲ್ಲ ಈ ಕಡೆ ಊರಿಗೆ ಹೋಗಿದ್ದಾ? ಅಪ್ಪ ಅಮ್ಮ ಎಲ್ಲ ಹೇಗಿದಾರೆ?

ಹು ಅಂಕಲ್.. ಊರಿಗೆ ಹೋಗಿದ್ದೆ.. ಆಗ ಒಂದು ಚುಟುಕು ಬರ್ದಿದ್ದೆ ಕೇಳಿ , ಹೇಳಲಾ..

ನಾನು ಬೇಡ ಅಂದ್ರು ನೀನ್ ಬಿಡ್ತ್ಯ.. ಹೇಳು ಮತ್ತೆ

ವೀಕೆಂಡ್ ಮಾಮೂಲು

ಅಕ್ಕನ ಮನೆಯಲ್ಲಿ ಮಾಡಿದ್ದರು ಅನ್ನ ಹೆಸರುಕಾಳು
ಊಟ ಮಾಡಿ ಹೊರಟಾಗ ರಾತ್ರಿ ಒಂಬತ್ತುಕಾಲು
ಮೆಜೆಸ್ಟಿಕ್ ಸೇರಿದಾಗ ಐವತ್ತು ರೂ ಆಗಿತ್ತು ಆಟೋದವನ ಪಾಲು
ತುಮಕೂರು ಬಸ್ಸು ಹತ್ತಿ ಕುಳಿತೆ ಚಾಚಿ ಕಾಲು
ಮನೆ ತಲುಪಿದಾಗ ರಾತ್ರಿ ಹನ್ನೆರಡು ಕಾಲು
ಅಮ್ಮ ಮಾಡಿಕೊಟ್ಟಳು ಒಂದು ಲೋಟ ಹಾಲು
ಕುಡಿದು ಮಲಗಿದೆ ಹೊದ್ದು ಶಾಲು
ವೀಕೆಂಡಿನಲಿ ನನಗಿದೆಲ್ಲ ಮಾಮೂಲು

 

ನಾನು ಹೇಳಲು ಶುರು ಮಾಡಿದಾಗಲೇ ಕಾರೊಂದು ತಿರುವಿನಲ್ಲಿ ಕಂಡಿತು. ನಾನು ಮುಗಿಸುವ ಹೊತ್ತಿಗೆ ಬರ್ರ್ ಎಂದು ಬಂದ ಮಾರುತಿ ವ್ಯಾನು, ಅಂಕಲ್ ಮನೆ ಎದುರಿಗೆ ಮೂರು ಮನೆ ಬಿಟ್ಟು ಇದ್ದ ಸೇಟು ಮನೆ (ಬಂಗಲೆ) ಮುಂದೆ ನಿಂತು, ಗಾಡಿಯಿಂದ ಯಾರನ್ನೋ ಹೊರದಬ್ಬಿ ಬಂದಷ್ಟೇ ವೇಗವಾಗಿ ಹೊರಟುಹೋಯಿತು. ೨- ೩ ನಿಮಿಷ ಕಳೆದರೂ ಸೇಟು ಮನೆಯಿಂದ ಯಾರೂ ಹೊರ ಬಾರದ್ದಿದ್ದಾಗ, ನಾನು ಅಂಕಲ್ ಅಲ್ಲಿ ಹೋದೆವು. ಏನಾಶ್ಚರ್ಯ! ಅವರು ಮನೆ ಮುಂದೆ ದೂಕಿ ಹೋಗಿದ್ದುದು ಯಾರನ್ನಾ? ನನ್ನ ಕಣ್ಣನ್ನು ನಾನೇ ಕೆಲ ಕ್ಷಣ ನಂಬಲು ಸಾಧ್ಯವಾಗಲ್ಲಿಲ್ಲ ........  ಅತ್ತ ಇತ್ತ ಕಣ್ಣಾಡಿಸಿ, ಯಾರು ನೋಡುತ್ತಿಲ್ಲವೆಂಬುದನ್ನು ಖಾತ್ರಿ ಪಡಿಸಿಕೊಂಡು ಅವಳನ್ನು ಎತ್ತಿಕೊಂಡು ಸರ ಸರನೆ ಸೇಟು ಮನೆಯ ಕಾಂಪೌಂಡ್ ಒಳಗೋಡಿದೆ. ಹನ್ನೊಂದಾಗಿದ್ದರಿಂದ ಹಾಲಿನ ದೀಪವೊಂದು ಬಿಟ್ಟರೆ ಬೇರೆ ಯಾವ ದೀಪವೂ ಹತ್ತಿರಲ್ಲಿಲ್ಲ. ಅಂಕಲ್ ಅವರ ಮನೆ ಬಾಗಿಲು ಬಡಿದಾಗ, ಸೇಟುವಿನ ಸೊಸೆ ಬಾಗಿಲು ತೆರೆದರು. ನಾನು ಸೀದಾ ಒಳಹೋಗಿ ಅಲ್ಲೇ ಇದ್ದ ಸೋಫಾದ ಮೇಲೆ ಅವಳನ್ನ ಮಲುಗಿಸಿ, ನಿಮ್ಮಿ ಆಂಟಿ ಕಡೆ ತಿರುಗಿ ಏನ್ ಆಂಟಿ ಇದು ಎನ್ನುವನಂತೆ ಕೈ ಸನ್ನೆ ಮಾಡಿದೆ. ನಮಗೆ ಗೊತ್ತಾಗಿಬಿಡ್ತಲ್ಲಾ ಅಂತಾನೋ ಏನೋ, ಆಕೆ ಮುಖ ಸಿಂಡರಿಸಿಕೊಂಡು ಏನೂ ಮಾತಾಡದೆ ಬಾಗಿಲಿನ ಕಡೆ ಕೈ ತೋರಿಸಿದರು. ನಾವು ತಲೆ ತಗ್ಗಿಸಿ ಇನ್ನೇನು ಹೊರಡಬೇಕು, ಅನ್ನೋಷ್ಟರಲ್ಲಿ, ಸೇಟುವಿನ ಮಗ ಹಿತೇಶ ಒಂದ್ನಿಂಷ ಅನ್ನುತ್ತಾ   ಬಂದರು. ಬಾಗಿಲಿನ ಕಡೆ ತಿರುಗಿದ್ದ ನಾವು ಹಿತೇಶನ ಧ್ವನಿ ಕೇಳಿ ೧೮೦ ಡಿಗ್ರೀ ತಿರುಗಿ ನಿಂತೆವು. ಸಾರ್ ಬನ್ನಿ ಎನ್ನುತ್ತಾ ಹಿತೇಶ, ನಿರ್ಮಲರಿಗೆ ಮನೆ ಬಾಗಿಲ ಚಿಲಕ ಹಾಕಲು ಹೇಳಿ ನಮ್ಮನ್ನು ಅವರ ರೂಮಿಗೆ ಕರೆದೊಯ್ದು, ಕುರ್ಚಿ ತೋರಿಸಿ ಕೂಡಲು ಹೇಳಿದರು. ಚಿಲಕ ಹಾಕಿ ಬಂದ ನಿರ್ಮಲ, ರೂಮಿನ ಬಾಗಿಲ ಬಳಿ ಬಂದು ನಿಂತಿದ್ದನ್ನು ನೋಡಿದೆ. ಐದು ನಿಮಿಷದ ಮೌನದ ನಂತರ, ಕಣ್ಣೊರೆಸಿಕೊಳ್ಳುತ್ತಾ  ಹಿತೇಶ ಮಾತಾಡಲು ಶುರು ಮಾಡಿದರು.

ಈಗೆ ಒಂದು ತಿಂಗಳ ಕೆಳಗೆ ನನ್ನ ಪ್ಯಾಂಟಿನ ಜೇಬಲ್ಲಿದ್ದ ೫ ಸಾವಿರ ರೂಪಾಯಿ ಕಾಣೆಯಾಯಿತು. ಮನೆ ಕೆಲಸದವಳನ್ನ ಬಿಟ್ಟು ಬೇರಾರೂ ಈ ಕೆಲಸ ಮಾಡಲು ಸಾಧ್ಯವೇ ಇಲ್ಲ ಅಂದುಕೊಂಡು, ನಮ್ಮಮ್ಮ ಅವರಂತೂ ಉಪ್ಪು ತಿಂದ ಮನೆಗೆ ಕನ್ನ ಹಾಕ್ತ್ಯೇನೆ ಬೋಸುಡಿ ಅಂತ ಬೀದಿಯಲ್ಲೇ ಆಕೆ ಮರ್ಯಾದೆ ಮೂರಾಬಟ್ಟೆ ಮಾಡಿ ಕೆಲಸದಿಂದ ಓಡಿಸಿದರು. ೩೦ ವರ್ಷದಿಂದ   ನಮ್ಮನೆಯಲ್ಲಿ ದುಡಿಯುತ್ತಿದ್ದ ಆಕೆ, ಈ ಕೆಲಸ ಮಾಡಿರಲಿಕ್ಕಿಲ್ಲ ಅನಿಸಿದರೂ, ಆ ಕ್ಷಣಕ್ಕೆ ನನ್ನ ಬುದ್ದಿಯೂ ಮಂಕಾಗಿಹೋಗಿತ್ತು. ಅವತ್ತು ನಾವು ಸ್ವಲ್ಪ ವಿವೇಚನೆ ಮಾಡಿ ನೋಡಿದ್ದರೆ, ನಮ್ಮ ಮಗಳನ್ನು ನೀವು ಇವತ್ತು ಹೀಗೆ ಎತ್ತಿಕೊಂಡು ಬರಬೇಕಾದ ಪರಿಸ್ಥಿತಿ ಉದ್ಬವಿಸುತ್ತಿರಲ್ಲಿಲ್ಲ !!

ನಮ್ಮ ನಿಶಾಗೆ ಎಷ್ಟು ಸಾರ್ ವಯಸ್ಸು?? ಕೇವಲ ೧೫, ಇನ್ನು ೧೫ ತುಂಬಿಲ್ಲ. ೯ನೇ ಕ್ಲಾಸಲ್ಲಿ ಓದುತ್ತಿದ್ದಾಳೆ. ನಮ್ಮ ಅಂತಸ್ತಿಕೆಗೆ ತಕ್ಕಂತೆ ಅವಳನ್ನು ಬಿಷಪ್ ಸ್ಕೂಲಿಗೆ ಸೇರಿಸಿದ್ವಿ, ಅದು ನಮ್ಮ ತಪ್ಪ ಸಾ... ಓದು ಬರ್ಯೋದ್ರಲ್ಲಿ ಎರಡು ಮಾತಿಲ್ಲ. ಎಲ್ಲಾದ್ರಲ್ಲೂ 1st ಕ್ಲಾಸ್ ತೆಗಿತಾಳೆ. ಅದ್ಯಾರು ಇವಳ ತಲೆ ಕೆಡುಸಿದ್ರೊ ಗೊತ್ತಿಲ್ಲ, ಇವತ್ತು ನನ್ ಮಗಳು ಡ್ರಗ್ ಅಡಿಕ್ಟ್ ಸಾ..

ಆ ೫ ಸಾವಿರ ಕಳ್ಳತನ ಮಾಡಿದ್ದು ನಮ್ಮ ನಿಶಾನೆ ಸಾ... ಆ ದಿನನೇ ಅಂತೆ ಅವಳು ಡ್ರಗ್ಸಿನ 1st ಚುಚ್ಚುಮದ್ದು ತೊಗೊಂಡಿದ್ದು. ನಾವು ಅವತ್ತೇ ಎಚ್ಚೆತ್ತುಕೊಂಡಿದ್ದರೆ ಚೆನ್ನಾಗಿರುತ್ತಿತ್ತು. ವಿನಾಕಾರಣ ಆ ಕೆಲಸದವಳನ್ನು ಓಡಿಸಿದೆವು. ಆ ಕೆಲಸದವಳು ನಮ್ಮ ಮನೆ ಬಿಟ್ಟು ಹೋಗಿದ್ದೆ ಬಂತು ನೋಡಿ, ಈ ಒಂದು ತಿಂಗಳಲ್ಲಿ ನಮ್ಮನೆ ನರಕವಾಗಿದೆ, ನನ್ನಮ್ಮ ಮಾಡ್ಲಿ ಆ ಕೆಲಸ ಅಂತ ಇವಳು, ನಾನ್ಯಾಕ್ ಮಾಡ್ಬೇಕು ಅವಳೇ ಮಾಡ್ಲಿ ಅಂತ ಅವರು. ಕೆಲಸದವಳಿದ್ದಾಗ ಇಬ್ಬರನ್ನೂ ಕೂಡಿಸಿ ಮಾಡುತ್ತಿದ್ದಳು, ಇವರು ಆರಾಮಾಗಿ ಇದ್ದರು, ನಾವಿಲ್ಲದಾಗ ಅತ್ತ ಅಂಗಡಿ ಕಡೆ ಬಂದು ವ್ಯಾಪಾರದಲ್ಲಿ ಸಹಾಯ ಮಾಡುತ್ತಿದ್ದರು. ಈಗ ಬ್ಯುಸಿನೆಸ್ಸು ಲಾಸು, ಮನೆಯಲ್ಲಿ ಜಗಳ. ೩ ಜನ  ಬೇರೆ ಕೆಲಸದವರು ಬಂದರೂ ವಾರದ ಮೇಲೆ ಯಾರು ಉಳಿಯಲ್ಲಿಲ್ಲ.

ಮನೆ ವಿಚಾರ ಹಾಗಿರ್ಲಿ ಸಾ... ನಿಶಾ ಡ್ರಗ್ಸ್ ತೆಗೆದುಕೊಳ್ಳೋಕೆ ಶುರು ಮಾಡಿಬಿಟ್ಟಿದ್ದಳು. ಮೊದಲ ಹದಿನೈದು ದಿನ ಅದು ನಮಗೆ ಗೊತ್ತೇ ಆಗಿರಲ್ಲಿಲ್ಲ. ಅವತ್ತೊಂದಿನ ನಿರ್ಮಲ, ಬಟ್ಟೆ ಒಗೆಯಲು ನಿಶಾಳ ಸ್ಕೂಲ್ ಯುನಿಫಾರ್ಮಿನ ಸ್ಕರ್ಟ್ ಅನ್ನು  ನೆನಸಿಡುವಾಗ ಮೂಗಿಗೆ ಸಿಗರೇಟ್  ವಾಸನೆ ಬಡಿದಂತಾಗಿ, ಅವಳು ಅದನ್ನು ಮತ್ತೆ ಮತ್ತೆ ಮೂಸಿ ನೋಡಿ ನನ್ನ ಬಳಿ ಬಂದು ರೀ ನಿಶಾಳ ಸ್ಕರ್ಟ್ ವಾಸನೆ ನೋಡಿ, ನನಗೆ ಸಿಗರೇಟ್  ವಾಸನೆ ಬರ್ತಿದೆ ಎಂದು ನನ್ನ ಕೈಗಿತ್ತಳು. ನಾನು ಮೂಸಿದಾಗ ಸಿಗರೇಟ್ ವಾಸನೆ ಬರುತ್ತಿದ್ದುದು ಖಚಿತವಾಯಿತು. ಮಗಳ ಮೇಲೆ ಅನುಮಾನಪಡೋದು ಬೇಡ, ನೀನು ಈ ವಿಚಾರ ಯಾರಿಗೂ ಹೇಳಬೇಡ ಮತ್ತು ನಿಶಾಳನ್ನು ಕೇಳಬೇಡ ಅಂತ ಹೆಂಡತಿಗೆ ಹೇಳಿ ನಾನು ಅವತ್ತಿಂದ ನಿಶಾಳ ಮೇಲೆ ಒಂದು ಕಣ್ಣಿಟ್ಟೆ ಸಾ..

ಅಮೇಲಿನ ಮೂರು ದಿವಸ ನಾನೇ ನಿಶಾಳನ್ನ ಸ್ಕೂಲಿಗೆ ಬಿಡುತ್ತಿದ್ದೆ ಮತ್ತೆ ಸಂಜೆ ಕರೆತರುತ್ತಿದ್ದೆ ಸಾ.. ನಾಕನೇ ದಿನ ಸಂಜೆ  ಅವಳು ಪಾರ್ಟಿ ಇದೆ ಪಪ್ಪಾ ಹೋಗ್ಬರ್ತೀನಿ  ಅಂದಾಗ ನಗುತ್ತಲೇ ಕಳುಹಿಸಿ, ನಾನು ಅವಳನ್ನು ಹಿಂಬಾಲಿಸಿದೆ. ಅಂದು ನಿಶಾ ಹೋದದ್ದು ಬ್ಲೂ ಐಸ್ ಲಾಂಜ್ ಬಾರ್ ಗೆ. ಅಲ್ಲಿ ಅವಳ ಸಹಪಾಠಿಗಳೇ ೮-೧೦ ಮಂದಿ ಇದ್ದರು. ಅದರಲ್ಲಿ ೬ ಜನ ಹುಡುಗಿಯರೇ. ೫-೧೦ ನಿಮಿಷ ಕಳೆಯುತ್ತಲೇ, ಜೇಬೊಳಗೆ ಕೈ ಹಾಕಿ ಎಂತದ್ದೋ ಪುಡಿ ತೆಗೆದು ಸಿಗರೇಟ್ ಒಳಗೆ ತುರುಕಿ ಎಲ್ಲರೂ ಸೇದತೊಡಗಿದರು. ನನ್ನ ಮಗಳು ಸಾ.. ನನ್ನ ಕಣ್ಣೆದುರೇ ಸಿಗರೇಟ್  ಸೇದೊದ್ನ ನೋಡಿದೆ ಸಾ.. ಕೆಲವರು ಅರೆವಳಿಕೆ ನೀಡುವ ಚುಚ್ಚು ಮದ್ದು ತೆಗೆದುಕೊಂಡರು. ನಿಶಾಳಿಗೆ ಕಪಾಳಕ್ಕೆ ಬಾರಿಸಿಬಿಡಲ ಅನ್ನೋಷ್ಟು ಕೋಪ ಬಂದಿತ್ತು, ನಾನು ಇನ್ನೇನು ಅವರ ಬಳಿ ತೆರಳಬೇಕು, ಅಷ್ಟರಲ್ಲಿ ಎಲ್ಲಾ ಓಡತೊಡಗಿದರು, ನನಗೆ ಅಲ್ಲೇನು ಆಗುತಿದೆ ಅಂತ ಅರಿವಾಗೊದ್ರೊಳಗೆ ಪೋಲೀಸರು ಅವರನ್ನೆಲ್ಲ ಹಿಡಿದ್ದಿದ್ದರು. ನಾನು ಸ್ವಲ್ಪ ಬುದ್ದಿ ಉಪಯೋಗಿಸಿ, ಆ ಪೋಲಿಸರಿಗೆ ಹತ್ತು ಸಾವಿರ ಲಂಚ ಕೊಟ್ಟು ನಿಶಾಳನ್ನ ಮತ್ತು ಅವಳ ಗೆಳತಿ ರೋಸಿಯನ್ನ ಬಿಡಿಸಿಕೊಂಡು ಬಂದೆ ಸಾ.. ಅವತ್ತು ನಮ್ಮ ಅದೃಷ್ಟ, ನಾವು ಆಚೆ ಬಂದು ಕಾರಲ್ಲಿ ಕೂತಮೇಲೆ, ರೈಡಾದ ಸುದ್ದಿ ತಿಳಿದ ಮೀಡಿಯಾದವರು ಬಂದರು.. ಇಲ್ಲವಾಗಿದ್ದರೆ ಅವತ್ತೆ ನಿಶಾ TV ಯಲ್ಲಿ ಬಂದಿರುತ್ತಿದ್ದಳು ಸಾ..

ಮತ್ತೆ ಮೂರು ದಿನ ನಿಶಾಳನ್ನ ಮನೆ ಬಿಟ್ಟು ಹೋಗಲು ಬಿಡಲ್ಲಿಲ್ಲ, ರೋಸಿಗೂ ಹಾಗೆ ಮಾಡಿದ್ದರು. ಮನೆಯಲ್ಲಿ ವಿಷಯ ಗೊತ್ತಾದ್ದರಿಂದ ಮತ್ತು ಸಮಯಕ್ಕೆ ಡ್ರಗ್ಸ್ ಸಿಗದ ಹತಾಶೆಯಿಂದ ರೋಸಿ ಸೂಸೈಡ್ ಮಾಡಿಕೊಂಡಳು. ಈ ನಿಶಾನು ಎಲ್ಲಿ ಆ ತರ ಮಾಡ್ಕೊಬಿಡ್ತಾಳೋ ಅಂತ, ಈಗೊಂದು ವಾರದಿಂದ ನಾನೇ ಅವಳಿಗೆ ದಿನಕ್ಕೆ ಐನೂರು ಸಾವಿರ ಕೊಡ್ತಿದೀನಿ ಸಾ... ಎಲ್ಲ ನಮ್ಮ ಕರ್ಮ ಸಾ.. ನೀವೇ ಹೇಳಿ ಸಾರ್  ಅವಳನ್ನು ಆ ಚಟದ ದಾಸ್ಯದಿಂದ ಮುಕ್ತಿಗೊಳಿಸೊದು ಹೇಗೆ ಅಂತ. ಇದು ನನ್ನ ಮಗಳೊಬ್ಬಳ ಸಮಸ್ಯೆ ಅಷ್ಟೇ ಅಲ್ಲ ಸಾ.. ಇಡೀ  ಬೆಂಗಳೂರಲ್ಲೇ ಸಾವಿರಾರು ಮಕ್ಕಳಿದ್ದಾರೆ ನಮ್ಮ ರಾಜ್ಯದಲ್ಲೇ ಲಕ್ಷಕ್ಕಿಂತ ಹೆಚ್ಚಿದ್ದಾರೆ, ದೇಶದಲ್ಲಿ ಹತ್ತು ಲಕ್ಷಕ್ಕೂ ಹೆಚ್ಚಿದ್ದಾರೆ, ನಾನು ಲೆಕ್ಕ ಕೊಟ್ಟಿದ್ದು ಹೈ ಸ್ಕೂಲು ಪ್ರೈಮರಿ ಸ್ಕೂಲ್ ಮಕ್ಳುದ್ದು ಅಷ್ಟೇ.. ಇನ್ನು ಕಾಲೇಜ್ ಮಕ್ಕಳು ಎಷ್ಟು ಇದ್ದರೋ ಆ ದೇವರಿಗೆ ಗೊತ್ತು.

 

ನೀವ್ಯಾರಾದರೂ ಈ ಮಾದಕ ದ್ರವ್ಯ ಜಾಲವನ್ನು ನಿರ್ಮೂಲನೆ ಮಾಡುವ ಬಗ್ಗೆಯಾಗಲಿ ಅಥವಾ ಅದರ ದಾಸ್ಯಕ್ಕೆ ಬಲಿಯಾದ ಮಕ್ಕಳನ್ನು ಮುಕ್ತಿಗೊಳಿಸುವ ಬಗ್ಗೆಯಾಗಲೀ ಯೋಚಿಸಿದ್ದೀರಾ ???

 

ಇದನ್ನು ನೆನೆದು ಗಂಟಲು ಒಣಗಿದಂತಾಗಿ, ಪರಿಚಾರಿಕೆಯನ್ನು ಕರೆದು ನೀರು ಇಸ್ಕೊಂಡು ಕುಡಿದೆ. ಸಂಯುಕ್ತಾ ನನಗೂ ನೀರು ಕೊಡು ಎಂದಳು. ನೀರಿನ ಬಾಟಲಿಯನ್ನು ನೀಡಿ, ಅವಳ ಗಲ್ಲವನ್ನೊಮ್ಮೆ ಸವರಿ, ಮತ್ತೆ ಸೀಟಿಗೊರಗಿ ಕಣ್ಣು ಮುಚ್ಚಿದೆ.

                                                **********************************

Comments