ಕಲ್ಲಿಗೆ ಹಾಲೆರೆಯುವುದು ತರವೆ?

ಕಲ್ಲಿಗೆ ಹಾಲೆರೆಯುವುದು ತರವೆ?

 ಕಲ್ಲಿಗೆ ಹಾಲೆರೆಯುವುದು ತರವೆ?

==================

 

ಅದೇಕೊ ಈ ನಡುವೆ ಫೇಸ್ ಬುಕ್ , ಮುದ್ರಣ ಮಾಧ್ಯಮ , ಅಥವ ಯಾವುದೆ ಮಾಧ್ಯಮದಲ್ಲು. ನಮ್ಮ ಎಲ್ಲ  ಸಂಪ್ರದಾಯದ ಆಚರಣೆಗಳನ್ನು ವಿಭಿನ್ನ ದೃಷಿಕೋನದಿಂದ ನೋಡಲಾಗುತ್ತಿದೆ. ತಮ್ಮ ತಕ್ಷಣದ ಭಾವನೆಗಳನ್ನೆಲ್ಲ ಯಾವುದೆ ವಿಮರ್ಷೆ ಇಲ್ಲದೆ ಬರೆಯಲಾಗುತ್ತೆ . ದೇವರಿಗೆ ನೈವೇಧ್ಯ, ಅಭಿಷೇಕವಾಗಲಿ, ಹಾವಿಗೆ ಹಾಲೆರೆಯುವದಾಗಲಿ ಕಡೆಗೊಮ್ಮೆ ಪಟಾಕಿ ಹಚ್ಚುವದಾಗಲಿ ಎಲ್ಲ ಸಂದರ್ಭದಲ್ಲು  ತಕ್ಷಣವೆ ಲೇಖನಗಳು ಕಾಣಿಸಿಕೊಳ್ಳುತ್ತವೆ.

 

ಹಾವಿಗೆ ಹಾಲೆರೆಯುವುದು ಎಂದಾಕ್ಷಣ, ಹಲವು ವಾದಗಳು, ಅದರಿಂದ ಏನು ಲಾಭ? ಅದು ಮೂಢನಂಭಿಕೆ. ಅದೆ ಬಡವರು ಮಕ್ಕಳು ಹಾಲಿಲ್ಲದೆ ಇರುವಾಗ ಕಲ್ಲು ನಾಗರಕ್ಕೆ ಹಾಲೆರೆಯುವುದು ತರವೆ ಈ ರೀತಿ ಬುದ್ದಿವಂತಿಕೆಯ ಪ್ರಶ್ನೆಗಳು.  

 

 ಧಾರ್ಮಿಕ ನಂಭಿಕೆಗಳೆ ಹಾಗೆ ಅವಕ್ಕೆ ಯಾವುದೆ ಆದಾರವಾಗಲಿ ತರ್ಕವಾಗಲಿ ಇರುವದಿಲ್ಲ ಎನ್ನುವುದು ಸತ್ಯ. ಅದು ಯಾವುದೆ ಧರ್ಮವಾಗಿರಬಹುದು ಇಂತ ಆಚರಣೆಗಳನ್ನೆಲ್ಲ ಯಾರು ತಪ್ಪಿಸಲಾಗಲ್ಲ. ಹಾಗೆಂದ ಮಾತ್ರಕ್ಕೆ ಎಲ್ಲ ಧಾರ್ಮಿಕ ಆಚರಣೆಗಳು ಸಹ ಉಪಯೋಗ ಇಲ್ಲದವೆ ? ಎನ್ನುವ ಅನುಮಾನ ಕಾಡುತ್ತದೆ. 

 

ಸಾವಿರಾರು ವರುಷಗಳ ಇತಿಹಾಸದಲ್ಲಿ , ಬೆಳೆದು ಬಂದಿರುವ ಆಚರಣೆಗಳು ಕಾಲಘಟ್ತದಲ್ಲಿ ಮಾರ್ಪಾಡಾಗುತ್ತಲೆ ಬಂದಿದೆ. ಯಾವುದೊ ಕಾರಣಕ್ಕೆ ಪ್ರಾರಂಬವಾಗಿ, ನಂತರ ಅದೆ ಮೂಢನಂಬಿಕೆಯಾಗಿ, ನಂತರ ಮೂಡನಂಭಿಕೆಯು ಕಳೆದು ಅದು ಒಂದು ಪ್ರತಿಷ್ಟೆಯ ಆಚರಣೆಯಾಗಿ ಬದಲಾಗಿರುವದಿದೆ. ಅಲ್ಲೆಲ್ಲ ಯಾವ ತರ್ಕವು ಸಿಗುವದಿಲ್ಲ. 

 

ಅಂತ ಮೂಢನಂಭಿಕೆಗಳನ್ನು ಎತ್ತಿ ಹಾಡಿ ಖಂಡಿಸುವ ಕೆಲಸ ಶ್ರೀ ಬಸವಣ್ಣನವರ ಕಾಲ ಹಾಗು ಅದಕ್ಕೆ ಹಿಂದಿನಿಂದಲೆ ಬೆಳೆದು ಬಂದಿದೆ. 

 

ಹಾಲು ಎರೆದಾಗಲೆಲ್ಲ ಬಡವರ ಮಕ್ಕಳನ್ನು ನೆನಪಿಸಿಕೊಂಡು ಬರೆಯುವ ನಾವು , ಮರುದಿನ ನಾವು ಊಟಕ್ಕೆ ಕುಳಿತು, ಹೊಟ್ಟೆಗೆ ಜಾಸ್ತಿಯಾಗಿ ಎಲೆಯಲ್ಲಿ ಅನ್ನವನ್ನು ಚೆಲ್ಲುವಾಗ ಅದೆ ಬಡಮಕ್ಕಳನ್ನು ನೆನೆಯುವದಿಲ್ಲ ಅನ್ನುವುದು ಸಹ ವ್ಯಂಗ್ಯವೆ . ಹಾಲೆರೆಯುವುದನ್ನು ಖಂಡಿಸುವದಕ್ಕಷ್ಟೆ ನಮ್ಮ ವಿರೋದ ಸೀಮಿತ ನಂತರ ಬಡಮಕ್ಕಳ ಹಾಲಿಗೆ ? ಏನು ಮಾಡಬೇಕು ಅದಕ್ಕೆ ಸರ್ಕಾರ ವಿದೆಯಲ್ಲ ಅದು ಸರಿ ಮಾಡಬೇಕು, ಇದು ನಮ್ಮ ದೋರಣೆ. (ಅದಕ್ಕಾಗಿ ಸರ್ಕಾರ ಸಹ ಶಾಲೆಯ ಮಕ್ಕಳಿಗೆ ವಾರಕ್ಕೆ ಮೂರು ದಿನ ಹಾಲಿನ ಏರ್ಪಾಡು ಮಾಡಿದೆ ಬಿಡಿ) 

 

ಇದೆಲ್ಲಕ್ಕು ಹೊರತಾಗಿಯು ಪ್ರತಿ ಆಚರಣೆಯು ಮೂಢನಂಭಿಕೆಯು ತನ್ನದೆ ಆದ ಪ್ರಾಂತಿಯ ಸೊಗಡನ್ನು ಹೊಂದಿದೆ. ನಮ್ಮಲ್ಲಿರುವ ವಸ್ತುಗಳು ಅನ್ನಾಹಾರಗಳು ಕೇವಲ ತಿನ್ನುವದಕ್ಕೆ ಕುಡಿಯುವದಕ್ಕೆ ಅಲ್ಲ,  ಕೆಲವು ಅಮೋದ ಪ್ರಮೋದಗಳಿಗು, ಹಲವು ನಂಭಿಕೆಗಳಿಗು ಆಚರಣೆಗಳಿಗು ವಿನಿಯೋಗವಾಗುತ್ತದೆ, ಹಾಗಾಗೆ ಹೋಮ ಹವನಗಳಿಗೆ ತಿನ್ನುವ ವಸ್ತುಗಳಾದ ತುಪ್ಪ, ಅನ್ನ, ಬೆಲ್ಲ ಅಲ್ಲದೆ ಬಟ್ಟೆಗಳನ್ನೆಲ್ಲ ಹಾಕಲಾಗುತ್ತದೆ. ದೇವರಿಗೆ ನೈವೇಧ್ಯವೆಂದು  ಅವನ ಮುಂದು   ಅಹಾರಗಳನ್ನಿಟ್ಟು ನಂತರ ನಾವೆ ಅದನ್ನು ತಿನ್ನುವುದು ಇದೆ. ಹಾಗೆ ನೋಡಿದರೆ ತಿನ್ನುವುದು ಕುಡಿಯುವುದು ಬಿಟ್ಟಲ್ಲಿ ಎಲ್ಲವು ವ್ಯರ್ಥವೆ, ದುಂದುಗಾರಿಕೆಯೆ.

 

 

 

ಧಾರ್ಮಿಕ ಆಚರಣೆಗಳು ಮಾತ್ರ ವಲ್ಲದೆ ಅಧುನಿಕತೆಯ ಹೆಸರಿನಲ್ಲಿ ನಡೆಯುವ ಹಲವು ಆಚರಣೆಗಳು ಸಹ ಮೂಢನಂಭಿಕೆಯೆ ಅಲ್ಲವೆ, ಹಿಂದೊಮ್ಮೆ ಬೆಂಗಳೂರಿನಲ್ಲಿ ವಿದೇಶಿಯರಂತೆ ಟಮೋಟೋ ಡೆ ಎಂದು ಆಚರಿಸಲು ನೋಡಲಿಲ್ಲವೆ, ವಿದೇಶದಲ್ಲಿ ಲಾರಿ ಲಾರಿ ಲೋಡು ಟಮೋಟವನ್ನು ರಸ್ತೆಯಲ್ಲಿ ಇದಕ್ಕಾಗಿ ಸುರಿಯುವುದು ಸಹ ಮೂಢನಂಭಿಕೆಯು ಅದು ಸಹ ಅಹಾರವೆ. ಹಾಗೆ ಅಮೇರಿಕದವರು ಹಲವು ಲೋಡ್ ಗೋದಿ ಮುಂತಾದ ಧಾನ್ಯಗಳನ್ನು ಮೀನುಗಾರಿಕೆ ಹೆಸರಲ್ಲಿ ಸಮುದ್ರಕ್ಕೆ ಸುರಿಯುವುದು ಸಹ ತಪ್ಪೆ ಅಲ್ಲವೆ ಅದು ಸಹ ಬಡವರ ಅಹಾರವೆ. 

 

 ಬರಿ ಹಾಲು ನಮ್ಮ ಅಹಾರವಷ್ಟೆ ಏಕೆ ಪಶುಗಳಿಗೆ ಪ್ರಾಣಿಗಳಿಗೆ ಸಹ ಅಮೂಲ್ಯವಾದ ಕೆಲವು ಅಹಾರಗಳನ್ನು, ಹುಲ್ಲು ಮುಂತಾದವು ನಾವು ಅನ್ಯ ಉದ್ದೇಶಗಳಿಗೆ ಬಳಸಿದರೆ ಅದು ಸಹ ತಪ್ಪೆ ಅಲ್ಲವೆ.

 

 ಇಂತಹ ದುಂದು ತಪ್ಪು ಎನ್ನುವದಾದರೆ, ತಿನ್ನಲು ಕುಡಿಯಲು ಸಹ ಇಲ್ಲದ ಸಾವಿರ ಸಾವಿರ ಬಡವರಿರುವ ಈ ನಾಡಿನಲ್ಲಿ  ಕ್ರಿಕೇಟಿನಂತ ದುಂದುಗಾರಿಕೆ ಬೇಕೆ ?.  ರೈತರಿಗೆ ಕೊಡಲು ವಿಧ್ಯುತ್ ಇಲ್ಲದಿರುವಾಗ ಅರ್ಧರಾತ್ರಿಯಲ್ಲಿ ಸೂರ್ಯನು ನಾಚುವಂತೆ ವಿಧ್ಯುತ್ ದೀಪ ಬೆಳಗಿಸಿ ಆಡುವ ಆ ಕ್ರಿಕೇಟ್ ಯಾವ ಪುರುಷಾರ್ಥಕ್ಕೆ 

 

ನಮ್ಮಲ್ಲಿ  ಹಣ ಇದೆಯೆಂಬ ಕಾರಣಕ್ಕೆ  ಇಪ್ಪತ್ತು ರೂಪಾಯಿ ಊಟಕ್ಕೆ  ಸ್ಟಾರ್ ಹೋಟಲಿನಲ್ಲಿ ಸಾವಿರಾರು ರೂಪಾಯಿ ಸುರಿದು , ಅಹಾರವನ್ನೆಲ್ಲ ಚೆಲ್ಲಿ ದುಂದು ಮಾಡುವುದು ಸಹ ಮೂಢನಂಭಿಕೆಯಲ್ಲವೆ.  ಹಾಲು ಎರೆದರೆ ದಂಡವಾಗುತ್ತೆ ಅನ್ನುವಾಗ , ನಮ್ಮ ಮನೆಗಳಲ್ಲಿ ನಡೆಸುವ ಮದುವೆ ಎಂಬ ಕಾರ್ಯಕ್ರಮದಲ್ಲಿ  ಛತ್ರದ ಹಿಂದಿನ ತೊಟ್ಟಿಗಳಲ್ಲಿ ಬೀಳುವ ಅಹಾರಕ್ಕೆ  ಲೆಕ್ಕ ಇಟ್ಟಿದ್ದೇವ.  

 

ಹೀಗೆ ಪ್ರಶ್ನೆಗಳ ಸರಮಾಲೆ  ಮೂಡುತ್ತಲೆ  ಹೋಗುತ್ತದೆ, ಆದರೆ ಅದೆಲ್ಲ ಉಫ್ ಬೆಳಗ್ಗೆ ಆಫೀಸಿಗೆ ಓಡುವಾಗ ಮಾಯವಾಗುತ್ತದೆ, 

 

ಮುಂದಿನ ವರ್ಷ ಮತ್ತೆ ನಾಗರಪಂಚಮಿ ಬಂದಾಗ ಲೇಖನ ಒಂದು ಕಾಣಿಸುತ್ತದೆ... ಕಲ್ಲಿಗೆ ಹಾಲೆರೆಯುವುದು ತರವೆ, ಹಲವು ಬಡಮಕ್ಕಳು ಹಾಲಿಲ್ಲದೆ ಸಾಯುವಾಗ ? ಎನ್ನುವ ಶೀರ್ಷಿಕೆಯ ಜೊತೆ. 

Comments

Submitted by partha1059 Sun, 08/11/2013 - 16:21

ದೇವರೆ ಏನಪ್ಪ ಮಾಡೋದು, ನಾನು ಲೇಖನ‌ ಪೋಸ್ಟ್ ಮಾಡಿದಾಗಲೆಲ್ಲ, 'Error can not be posted please try after some time" ಎಂದು ನುಡಿಯುತ್ತಿದ್ದ ಸಂಪದ‌, ನಂತರ‌ ನೋಡಿದಲ್ಲಿ ಒಂದೆ ಬರಹವನ್ನು ಅಷ್ಟೊಂದು ಸಾರಿ ಹಾಕಿ ನನ್ನನ್ನು ಅಣಕಿಸುತ್ತಿದೆ. ಸಂಪದ‌ ನಿರ್ವಾಹಕರೆ ನನ್ನ ಬರಹವನ್ನು ತೆಗೆಯಬೇಕಿಗ‌.
Submitted by makara Sun, 08/11/2013 - 17:09

ಪಾರ್ಥಸಾರಥಿಗಳೆ, ನಿಮ್ಮ ಲೇಖನ ಅಷ್ಟು ಮಹತ್ವದ್ದೆಂದು ಅರಿತೇ ಆ ದೇವರೇ ಅದನ್ನು ನಾಲ್ಕು ನಾಲ್ಕು ಬಾರಿ ಅಚ್ಚಾಗುವಂತೆ ಮಾಡಿದ್ದಾನೆ ಬಿಡಿ :)) ನೀವು ಹೇಳಿದ ಆಚರಣೆಗಳ ಕುರಿತು ಒಂದು ವಿಷಯ ಜ್ಞಾಪಕಕ್ಕೆ ಬರುತ್ತದೆ. ಅದೇನೆಂದರೆ ಹೈದರಾಬಾದಿನ ನಡುಗಡ್ಡೆಯಲ್ಲಿ ಹುಸೇನ್ ಸಾಗರ್ ಎನ್ನುವ ಗಣೇಶನ ವಿಸರ್ಜನೆ ಮಾಡುವ ದೊಡ್ಡದಾದ ಕೆರೆಯಿದೆ. ಗಣೇಶನ ಹಬ್ಬ ಆರಂಭವಾಗಿ ನಾಲ್ಕೈದು ದಿನಗಳಿಗೆ ಎಲ್ಲಾ ತೆಲುಗು ಛಾನೆಲ್ಲುಗಳಲ್ಲಿ ಗಣೇಶನ ವಿಗ್ರಹದಿಂದಾಗುವ ಪರಿಸರ ಮಾಲಿನ್ಯದ ಕುರಿತಾದ ಚರ್ಚೆ ಪ್ರಾರಂಭವಾಗುತ್ತದೆ. ಆದರೆ ತಮಾಷೆಯ ಸಂಗತಿ ಎಂದರೆ ಈ ಕೆರೆಗೆ ಹಲವಾರು ಮೈಲಿಗಳಷ್ಟು ದೂರದಿಂದ ಕಾರ್ಖಾನೆಗಳ ಅಪರಿಷ್ಕೃತ ವಿಷ ತ್ಯಾಜ್ಯಗಳ ಸೇರ್ಪಡೆಯಾಗುತ್ತದೆ. ಅದರ ಕುರಿತು ಒಂದೇ ಒಂದು ದಿನವೂ ಪ್ರಸ್ತಾಪ ಬರುವುದಿಲ್ಲ. ಅದನ್ನು ಖಂಡಿಸಲೂ ಹೋಗುವುದಿಲ್ಲ ಎನ್ನುವುದೇ ವಿಪರ್ಯಾಸ :(( ನೀವು ಹೇಳಿದಂತೆ ಕೇವಲ ಒಂದು ಮುಖವನ್ನು ಮಾತ್ರ ನೋಡದೇ ಸಮಸ್ಯೆಯ ಎರಡೂ ಮುಖಗಳನ್ನು ನೋಡಬೇಕು; ಆಗ ಮಾತ್ರ ನಾವು ವಿರೋಧ ವ್ಯಕ್ತಪಡಿಸುವುದಕ್ಕೆ ಒಂದು ಅರ್ಥ ಬರುತ್ತದೆ. ಯಾವುದೋ ದೇಶದಲ್ಲಿ ನಡೆಯುವ ಪರಸ್ಪರ ಟೊಮ್ಯಾಟೋ ಎರಚಾಡುವ ಮೇಳ, ನಾರ್ವೆಯಲ್ಲಿ ನಡೆಯುವ ಸೀಲ್ ಪ್ರಾಣಿಗಳನ್ನು ಭೇಟೆಯಾಡುವ ಹಬ್ಬ, ಸ್ಪೇನಿನ ಗೂಳಿ ಕಾಳಗ, ಇಂಥಹವುಗಳೆಲ್ಲಾ ನಮ್ಮ ಬುದ್ಧಿ ಜೀವಿಗಳ ಗಮನ ಸೆಳೆಯುವುದೇ ಇಲ್ಲ. ಅದೇ ದೊಡ್ಡ ದುರಂತ. ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ
Submitted by basho aras Mon, 08/12/2013 - 13:09

ನಿಮ್ಮ ಅಭಿಪ್ರಾಯಕ್ಕೆ ನನ್ನ ಸಹಮತವಿದೆ. ಹಿಂದಿನವರ ಸಂಪ್ರದಾಯ ಆಚರಣೆಗಳಲ್ಲಿ ಒಳ್ಳೆಯ ಉದ್ದೇಶವಿದೆ ಅದನ್ನು ಅರ್ಥ ಮಾಡಿಕೋಳ್ಳದೆ ಇಂಥಹ ವಿರೋಧ ಹೇಳಿಕೆ ಕೊಡುತ್ತಾರೆ, ಹುತ್ತಕ್ಕೆ ,ಕಲ್ಲಿಗೆ ಹಾಲು, ಎಳೆನೀರು, ನೀರು ಹಾಕುವುದು ಹುತ್ತ ನಿರ್ಮಿಸುವ ಇರುವೆಗಳಿಗಾಗಿ . ಆ ಇರುವೆಗಳಿಗೆ ಇದ್ದಲ್ಲೇ ಆಹಾರ ಸಿಕ್ಕಾಗ ನಾವು ಬೆಳೆದ ದವಸ ಧಾನ್ಯಗಳು ಇರುವೆಯ ಪಾಲಾಗದು ಎಂಬ ಉದ್ದೇಶ ಮತ್ತು ಆ ಹುತ್ತದಲ್ಲಿ ಹಾವು ನೆಲೆಸಿ ಇಲಿಗಳ ಕಾಟವನ್ನು ತಪ್ಪಿಸಲಿ ಎಂದು. ನಾಗ ಬನಗಳಲ್ಲಿ ಇರುವ ವೃಕ್ಷ ಸಂಪತ್ತು ಪರಿಸರಕ್ಕೆ ಪೂರಕ. ಹೀಗೆ ಎಲ್ಲಾ ಆಚರಣೆಗೂ ಹಿರಿಯರು ಸರಿಯಾಗಿ ಅರ್ಥ್ಯೆಸಿದರೆ ಉತ್ತಮ ಅಲ್ಲವೇ?
Submitted by Vinutha B K Mon, 08/12/2013 - 15:46

ಪಾರ್ಥರವರೆ ನಿಮ್ಮ ಚಿಂತನೆ ಇಷ್ಟವಾಯ್ತು ..ಬ್ರಷ್ಟಚಾರಕ್ಕಾಗಿ ಮತ್ತು ಡೆಲ್ಲಿ ಹೆಣ್ಣುಮಗಳ ಮಾನಬಂಗದ ವಿಚಾರಕ್ಕಾಗಿ ನಡೆದ ಬಂದ್ ಗಳನ್ನ ಪ್ರೆರೇಪಿಸಿಕೊಟ್ಟ ಎಷ್ಟೋ ಮಂದಿ ತನ್ನ ಮನೆಯವರಿಗೆ ಬುದ್ದಿ ಹೇಳಲು ಮರೆತು ದೇಶವನ್ನೇ ಬದಲಿಸುವೆ ಎಂದು ಹೊರಟಿದ್ದರು ,ಯಾವುದೇ ಒಂದು ಘಟನೆಯಿಂದ ತಾನು ಕಲಿತು ತನ್ನ ಜೋತೆಯವರನ್ನು ಬದಲಿಸಿದರೆ ಸಾಕು ಅದು ದೇಶವನ್ನು ಬದಲಿಸಲು ಸಹಾಯಮಾಡುತ್ತದೆ ,ಇಂಥಹ ರಾಜಕಾರಣಿಗಳ ಮಧ್ಯೆ ಒಂದು ದಿನದ ಬಂದ್ ಯಾವ ಬದಲಾವಣೆಯನ್ನು ತರುವುದಿಲ್ಲ .. ಇನ್ನು ನಿಮ್ಮ ಹಾವು ,ಹುತ್ತ ,ಹಾಲು ಎಂದರೆ,ಎಲ್ಲ ಆಚರಣೆಯ ಹಿಂದೆ ಒಂದರ್ಥವಿರುತ್ತದೆ ನಿಜ -ಆ ಒಂದು ದಿನ ಬೆಳಿಗ್ಗಿನ ಜಾವವೇ ಎದ್ದು ಬಹಳ ಮಡಿಯಿಂದ ಎಲ್ಲ ತಯಾರಿ ನಡೆಸುವುದರಿಂದ ಒಂದು ರೀತಿಯ ದ್ಯಾನದಂತೆಯೇ ಸರಿ ಒಳ್ಳೆಯದೇ ,ಎಷ್ಟೋ ಬಾರಿ ತಿನ್ನದೇ ಎಸೆಯುವ ಊಟಕ್ಕಿಂತ ಅಷ್ಟು ಹಾಲಿನ ವ್ಯಯವೇನು ಹೆಚ್ಚಲ್ಲ... ಆದರೆ ಒಬ್ಬ ಬಡವ ಕೇಳಿದರೆ ಕೊಡದೆ ,ಇಲ್ಲದವರಿಗೆ ಸಹಾಯ ಮಾಡದೇ ,ದೇವರ ಹೆಸರಿನಲ್ಲಿ ಹಾಳುಮಾಡುವುದು ತಪ್ಪೆಂದು ನನ್ನ ಅಭಿಪ್ರಾಯ .. .... ಬೋ .ಕು .ವಿ
Submitted by anand33 Mon, 08/12/2013 - 17:41

ಹಾವು ಹಾಲನ್ನು ಆಹಾರವಾಗಿ ಸೇವಿಸುವ ಪ್ರಾಣಿ ಅಲ್ಲ. ಹೀಗಾಗಿ ಹಾವಿಗೆ ಹಾಲೆರೆಯುವುದರಲ್ಲಿ ಅರ್ಥವಿದೆ ಎಂದು ನನಗನಿಸುವುದಿಲ್ಲ. ಹುತ್ತದಲ್ಲಿರುವ ಗೆದ್ದಲು ಕೂಡಾ ಹಾಲನ್ನು ಸೇವಿಸುವ ಜೀವಿ ಅಲ್ಲ. ಅದು ನಿರ್ಜೀವ ಜೈವಿಕ ಪದಾರ್ಥಗಳಾದ ಮರ ಇತ್ಯಾದಿಗಳನ್ನು ತಿಂದು ಜೀವಿಸುವ ಜೀವಿ. ಹೀಗಾಗಿ ಹಾವಿಗೆ ಹಾಲೆರೆಯುವುದು ವೈಜ್ಞಾನಿಕ ಎಂದು ಹೇಳಲು ಯಾವುದೇ ಆಧಾರವಿಲ್ಲ. ಹಾಲಿನ ನಷ್ಟದ ಪ್ರಶ್ನೆಗಳಿಗಿಂತಲೂ ಜನರ ಯೋಚನಾಶಕ್ತಿಯನ್ನು ನಂಬಿಕೆ ಹತ್ತಿಕ್ಕುವುದು ಇದೆಯಲ್ಲ ಇದು ದೇಶದ ಅಭಿವೃದ್ಧಿಗೆ ಹಾಗೂ ಒಳಿತಿಗೆ ಮಾರಕ. ಒಂದು ದಿನ ಹಾಲು ಎರೆದರೆ ದೊಡ್ಡ ನಷ್ಟ ಆಗಲಿಕ್ಕಿಲ್ಲ ಆದರೆ ಅದರ ಅವಶ್ಯಕತೆ ಇದೆಯೇ ಎಂಬ ತಿಳುವಳಿಕೆ ನಮ್ಮ ಜನರಲ್ಲಿ ಮೂಡಬೇಕು. ಹಾಲನ್ನು ಎರೆಯದೆಯೇ ಹಾವನ್ನು ಆರಾಧಿಸುವುದು ಅಥವಾ ನಾಗಬನದಲ್ಲಿ ಭಕ್ತಿ ಅಥವಾ ಶ್ರದ್ಧೆ ತೋರಿಸಲು ಸಾಧ್ಯವಿಲ್ಲವೇ ಎಂದು ಆಲೋಚಿಸುವುದು ಉತ್ತಮ. ಹಿರಿಯರು ಮಾಡಿದ ಆಚರಣೆಗಳೆಂದು ಇಂದು ಕಣ್ಣು ಮುಚ್ಚಿ ಅವುಗಳನ್ನು ಅನುಸರಿಸುವುದು ಎಷ್ಟರ ಮಟ್ಟಿಗೆ ಸಮಂಜಸ ಎಂಬ ಚಿಂತನೆ ಜನರಲ್ಲಿ ಬೆಳೆಸಬೇಕಾಗಿದೆ. ಜನರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಯದೆ ದೇಶ ಉದ್ಧಾರವಾಗಲು ಸಾಧ್ಯವಿಲ್ಲ. ನಂಬಿಕೆಯ ಹೆಸರಿನಲ್ಲಿ ಈ ದೇಶದಲ್ಲಿ ಯಾವುದನ್ನೂ ಪ್ರಶ್ನಿಸುವಂತಿಲ್ಲ. ಇಂಥ ಚಿಂತನೆಗಳಿಗೆ ಮುಚ್ಚಿದ ಬಾಗಿಲಿನ ಮನಸ್ಥಿತಿಯಿಂದಾಗಿ ನಮ್ಮ ದೇಶ ವಿಜ್ಞಾನ ಹಾಗೂ ತಂತ್ರಜ್ಞಾನಗಳಲ್ಲಿ ಮುಂದುವರಿಯುತ್ತಿಲ್ಲ. ಮೂಲಭೂತ ವಿಜ್ಞಾನದಲ್ಲಿ ಹಾಗೂ ತಂತ್ರಜ್ಞಾನದಲ್ಲಿ ದೇಶದಲ್ಲಿ ಹೊಸ ಅವಿಷ್ಕಾರಗಳು ನಮ್ಮ ದೇಶದಿಂದ ಬರುತ್ತಿರುವುದು ಬಹಳ ಕಡಿಮೆ. ಹೀಗಾಗಿಯೇ ನಾವು ಹಿಂದೆ ಉಳಿದಿರುವುದು. ನಮ್ಮ ದೇಶದ ಅವಶ್ಯಕತೆಗಳಿಗೆ ಅನುಗುಣವಾಗಿ ಇಲ್ಲಿ ವಿಜ್ಞಾನ ಹಾಗೂ ತಂತ್ರಜ್ಞಾನದ ಬೆಳವಣಿಗೆ ಆಗುತ್ತಾ ಇಲ್ಲ. ಬಹುತೇಕ ತಂತ್ರಜ್ಞಾನಗಳು ಪಾಶ್ಚಾತ್ಯ ಮೂಲದವು. ಹೀಗಾಗಿ ನಮ್ಮ ದೇಶವು ಹಿಂದುಳಿದಿದೆ.
Submitted by partha1059 Mon, 08/12/2013 - 20:48

In reply to by anand33

ಆನಂದ್ ರವರಿಗೆ ನಿಮ್ಮ ಅಭಿಪ್ರಾಯ‌ ಒಪ್ಪಿದೆ ಜನರಲ್ಲಿ ವೈಜ್ಞಾನಿಕ ಪ್ರಜ್ನೆ ಬೆಳೆಸುವ ಅವಶ್ಯಕತೆ ಖಂಡೀತವಿದೆ. ಅದು ವಿಧ್ಯಾಭಾಸ್ಯದ ಮೂಲಕ ಆಗಬೇಕಿದೆ. ನಮ್ಮಲ್ಲಿ ನಂಭಿಕೆಯನ್ನು ಪ್ರಶ್ನಿಸುವಂತಿಲ್ಲ ಎಂದೇನು ಹೇಳುವಂತಿಲ್ಲ (ನಂಬಿಕೆಯ ಹೆಸರಿನಲ್ಲಿ ಈ ದೇಶದಲ್ಲಿ ಯಾವುದನ್ನೂ ಪ್ರಶ್ನಿಸುವಂತಿಲ್ಲ. ಇಂಥ ಚಿಂತನೆಗಳಿಗೆ ಮುಚ್ಚಿದ ಬಾಗಿಲಿನ ಮನಸ್ಥಿತಿಯಿಂದಾಗಿ ನಮ್ಮ ದೇಶ ವಿಜ್ಞಾನ ಹಾಗೂ ತಂತ್ರಜ್ಞಾನಗಳಲ್ಲಿ ಮುಂದುವರಿಯುತ್ತಿಲ್ಲ) ಅನಾದಿಕಾಲದಿಂದಲು ಪ್ರಶ್ನೆಗಳು ಅವುಗಳಿಗೆ ಉತ್ತರಗಳನ್ನು ಹುಡುಕುತ್ತಲೆ ಸಾಗಿದ್ದೇವೆ. ವಿದೇಶಗಳಲ್ಲಿ ಪ್ರಶ್ನೆ ಮಾಡಿದಾಗ ಕಲ್ಲಲ್ಲಿ ಹೊಡೆದು ಕೊಲ್ಲುವ ಅಥವ ರಸ್ತೆಯಲ್ಲಿ ಬೆಂಕಿಹಚ್ಚುವ ಬರ್ಭರತೆಯ ನಾಗರೀಕತೆ ಇದ್ದಾಗ ನಮ್ಮಲ್ಲಿ ತಂದೆಯೆ ಮಗನನ್ನು ಎದುರಿಸಿ ಪ್ರಶ್ನೆ ಮಾಡುವ ನಚೀಕೇತನಿದ್ದ, ಪ್ರಶ್ನೆಗಳನ್ನೆ ಉಪನಿಷತ್ ಮಾಡಿದ್ದರು, ಅಪ್ಪನನ್ನೆ ಎದುರಿಸಿದ ಪ್ರಹ್ಲಾದನಿದ್ದ, ಇವೆಲ್ಲ ಕತೆ ಎನ್ನುತ್ತೀರೇನೊ, ಸಾಮಾನ್ಯವಾಗಿ ಸಮಾಜದಲ್ಲಿ ಇರುವ ಪರಿಸ್ಥಿಥಿಗಳೆ ಕತೆಯ ರೂಪದಲ್ಲಿ ಹೊರಬರುತ್ತಿರುತ್ತವೆ. ಇಷ್ಟೆಲ್ಲ ಪ್ರಶ್ನೆಗಳಿದ್ದಾಗಲು ಮೂಢನಂಭಿಕೆಗಳು ಇದ್ದೆ ಇರುತ್ತವೆ, ಹಾಗೆ ಅವು ನಮ್ಮಲ್ಲಿ ಮಾತ್ರವಲ್ಲಿ ವಿದೇಶಗಳಲ್ಲು ಇರುತ್ತವೆ ಬೇರೆ ಬೇರೆ ರೂಪದಲ್ಲಿ , ಅಧುನಿಕತೆಯ ಹೆಸರಿನಲ್ಲಿ ಅಷ್ಟೆ. ಅವುಗಳಿಂದ ಸಮಾಜಕ್ಕೆ ಯಾವುದೆ ದಕ್ಕೆ ಆಗುವದಿಲ್ಲ, ಅವೆಲ್ಲ ಕೆಲವೊಮ್ಮೆ ಮಾನಸಿಕ ಸಾಂತ್ವನವನ್ನು ನೀಡುತ್ತವೆ ಅನ್ನುವುದು ಸತ್ಯ. ಅವೆಲ್ಲ ಅವರವರ ನಂಬಿಕೆಗಳು, ನಮ್ಮಲ್ಲಿ ಪ್ರಶ್ನೆಗೆ ಎಷ್ಟೆ ಅವಕಾಶ ಇರುವಾಗಲು, ಮುಂದುವರೆಯಲಿಲ್ಲ ಎಂದರೆ ಇಲ್ಲಿ ಮೊದಲಿನಿಂದ ಇರುವ ಆಡಳಿತ ವ್ಯವಸ್ಥೆ ಅಷ್ಟೆ, ಅದು ರಾಜನ ಆಡಳಿತವೊ, ಪಕ್ಷದ ಆಡಳಿತವೊ, ಸರ್ಕಾರವೊ ಯಾವುದೆ ಹೆಸರಿರಲಿ ಇರುವುದು ಅದೆ ಜನ , ವಿರೋಧಗಳಿಂದಲೆ ನಾವು ಮುಂದುವರೆಯಲಾರೆವು ಎನ್ನುವದನ್ನು ಯಾವಾಗ ಅರ್ಥಮಾಡಿಕೊಳ್ಳುವೆವು ತಿಳಿಯದು
Submitted by anand33 Tue, 08/13/2013 - 11:28

ಪ್ರಸಕ್ತ ಇರುವ ಚಿಂತನೆಗಳಿಗಿಂತ ಭಿನ್ನವಾಗಿ ಚಿಂತಿಸುವ ಸಾಮರ್ಥ್ಯ ಯುವಜನಾಂಗದಲ್ಲಿ ಬೆಳೆಸುವುದರಿಂದ ವಿಜ್ಞಾನ ಹಾಗೂ ತಂತ್ರಜ್ಞಾನದಲ್ಲಿ ಹೊಸತನ್ನು ಕಂಡುಕೊಳ್ಳಲು ಸಾಧ್ಯ. ಇದು ನಮ್ಮ ದೇಶದಲ್ಲಿ ನಡೆಯುತ್ತಿಲ್ಲ. ಯಾವ ದೇಶವು ಹೊಸ ತಂತ್ರಜ್ಞಾನ ಹಾಗೂ ವೈಜ್ಞಾನಿಕ ಶೋಧನೆಗಳನ್ನು ಆವಿಷ್ಕರಿಸುವಲ್ಲಿ ಮುಂದೆ ಇರುತ್ತದೋ ಆ ದೇಶ ಮುನ್ನಡೆ ಸಾಧಿಸುತ್ತದೆ. ಸುಧಾರಿತ ತಂತ್ರಜ್ಞಾನ ಆಧರಿಸಿ ಹೊಸ ಸುಧಾರಿತ ಉತ್ಪನ್ನಗಳನ್ನು ಯಾವ ದೇಶ ಮೊದಲು ಕಡಿಮೆ ವೆಚ್ಚದಲ್ಲಿ ತಯಾರಿಸುತ್ತದೋ ಅದು ಸಹಜವಾಗಿ ಹೊಸ ಮಾರುಕಟ್ಟೆಗಳನ್ನು ಜಾಗತಿಕವಾಗಿ ಕಂಡುಕೊಂಡು ಆರ್ಥಿಕವಾಗಿ ಮುನ್ನಡೆ ಸಾಧಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ನೋಡಿದರೆ ನಮ್ಮ ದೇಶ ತುಂಬಾ ಹಿಂದೆ ಇದೆ. ನಮ್ಮ ದೇಶದ ರೂಪಾಯಿ ಡಾಲರ್ ಎದುರು ಕುಸಿಯುತ್ತಿರುವುದಕ್ಕೆ ಇದೂ ಒಂದು ಪ್ರಧಾನ ಕಾರಣವಾಗಿದೆ. ನಾವು ಹೊಸ ಆವಿಷ್ಕಾರಗಳನ್ನು ಮಾಡಿ ಅವನ್ನು ವಿಶ್ವ ಮಾರುಕಟ್ಟೆಗೆ ಬಿಡುವ ಬದಲು ಬೇರೆ ದೇಶಗಳಿಂದ ಆಮದು ಮಾಡುವುದರಲ್ಲಿಯೇ ತೊಡಗಿದ್ದೇವೆ. ಕಾರಣ ಇಲ್ಲಿ ಭಿನ್ನ ಚಿಂತನೆಗೆ ಪ್ರೋತ್ಸಾಹವಿಲ್ಲ. ಪ್ರೋತ್ಸಾಹವಿಲ್ಲದಲ್ಲಿ ಪ್ರತಿಭೆಗಳು ಅರಳುವುದಿಲ್ಲ. ಇಲ್ಲಿ ಭಿನ್ನ ಚಿಂತನೆಗೆ ಪ್ರೋತ್ಸಾಹ ಇಲ್ಲದೆ ಇರಲು ಕಾರಣ ಅತಿಯಾದ ನಂಬಿಕೆ. ಎಲ್ಲವನ್ನೂ ಯಾವುದೊ ಒಂದು ನಿಸರ್ಗಾತೀತ ಶಕ್ತಿಗೆ ಆರೋಪಿಸಿ ನಮ್ಮ ಜವಾಬ್ದಾರಿಯಿಂದ ನಾವು ನುಣುಚಿಕೊಳ್ಳುವುದು ನಮ್ಮ ದೇಶದಲ್ಲಿ ಸಾಮಾನ್ಯವಾಗಿದೆ. ಹೀಗಾಗಿ ಸವಾಲನ್ನು ಎದುರಿಸುವ ಛಲ ಉಳ್ಳ, ಆತ್ಮವಿಶ್ವಾಸ ತುಂಬಿ ತುಳುಕುವ ಯುವ ಜನಾಂಗ ದೇಶದಲ್ಲಿ ರೂಪುಗೊಳ್ಳುತ್ತಲೇ ಇಲ್ಲ. ನಮ್ಮ ದೇಶದಲ್ಲಿಯೇ ದೊಡ್ಡ ಮಾರುಕಟ್ಟೆ ಇದ್ದರೂ ನಮಗೆ ಬೇಕಾದ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ತಯಾರಿಸುವುದಾಗಲೀ, ಕಂಪ್ಯೂಟರ್ ಹಾರ್ಡ್ವೇರ್ ಉತ್ಪನ್ನಗಳನ್ನು ನಮ್ಮದೇ ತಂತ್ರಜ್ಞಾನದಲ್ಲಿ ತಯಾರಿಸುವುದಾಗಲೀ ಮಾಡದೆ ಹೊರದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದೇವೆ. ಇದರಿಂದಾಗಿ ನಮ್ಮ ದೇಶದಲ್ಲಿ ಉದ್ಯೋಗಾವಕಾಶಗಳು ಬೆಳೆಯುತ್ತಿಲ್ಲ. ಆಮದಿಗಾಗಿ ವಿದೇಶಿ ವಿನಿಮಯ ಅಪಾರ ಪ್ರಮಾಣದಲ್ಲಿ ವ್ಯಯವಾಗಿ ರೂಪಾಯಿ ಕುಸಿಯುತ್ತಾ ಹೋಗುತ್ತಿದೆ. ನಮ್ಮಲ್ಲಿ ಇಂಟರ್ನೆಟ್ ಸಂಪರ್ಕಕ್ಕೆ ಬೇಕಾಗುವ ಮೋಡೆಮ್ಗಳು, ಮೊಬೈಲ್ ಸಂವಹನಕ್ಕೆ ಬೇಕಾಗುವ ಎಲೆಕ್ಟ್ರಾನಿಕ್ ಉತ್ಪನ್ನಗಳು ಮೊದಲಾದವುಗಳನ್ನು ಇಲ್ಲಿ ತಯಾರಿಸುವ ತಂತ್ರಜ್ಞಾನ ಬೆಳೆಸದೆ ಚೀನಾದಂಥ ದೇಶದ ಮೇಲೆ ಅವಲಂಬಿತರಾಗಿದ್ದೇವೆ. ಚೀನಾದವರು ಇಂಥವುಗಳನ್ನು ತಯಾರಿಸುವಾಗ ಸಾವಿರಾರು ಎಂಜಿನಿಯರಿಂಗ್ ಕಾಲೇಜುಗಳು ಇರುವ ನಮ್ಮ ದೇಶದಲ್ಲಿ ಸ್ಥಳೀಯ ತಂತ್ರಜ್ಞಾನ ಬಳಸಿ ಇವುಗಳನ್ನು ಇಲ್ಲೇ ಏಕೆ ತಯಾರಿಸಲು ಸಾಧ್ಯವಿಲ್ಲ ಎಂಬ ಬಗ್ಗೆ ದೇಶದಲ್ಲಿ ಸಮರ್ಪಕ ಚಿಂತನೆ ನಡೆದಿಲ್ಲ. ಇದಕ್ಕೆ ನಮ್ಮ ಸಾಂಪ್ರದಾಯಿಕ ಮನಸ್ಥಿತಿಯೇ ಕಾರಣವಾಗಿರುವಂತೆ ಕಾಣುತ್ತದೆ.
Submitted by partha1059 Tue, 08/13/2013 - 11:59

In reply to by anand33

ನೀವು ಹೇಳಿರುವದೆಲ್ಲ ಸತ್ಯ ಆದರೆ ಕಾರಣ‌ ಮಾತ್ರ ಸ್ವಲ್ಪ ಬೇರೆಯೆ ಇದೆ. ಅದಕ್ಕೆ ಕಾರಣ‌ ನಮ್ಮ ಸರ್ಕಾರದ‌ ಆಡಳಿತದ‌ ನೀತಿ. ನೀವು ಹೇಳುವಂತೆ ಯಾವುದೆ ಸರ್ಕಾರ‌ ನಮ್ಮಲ್ಲಿ ತಂತ್ರಜ್ನಾನ‌ ಬೆಳೆಯಲು ಅವಕಾಶ‌ ನೀಡುತ್ತಿಲ್ಲ ಸ್ಥಳೀಯ‌ ಪ್ರತಿಭೆಗಳನ್ನು ಪ್ರೋತ್ಸಾಹ‌ ನೀಡುತ್ತಿಲ್ಲ. ಎಲ್ಲ ಉಪಕರಣಗಳು ಸಹ‌ ವಿದೇಶದಿಂದ‌ ಬರುವಂತೆ ಪ್ರೋತ್ಸಾಹಿಸುತ್ತಿದೆ. ನಮ್ಮದೆ ಆದ‌ ಕೈಗಾರಿಕೆಗಳನ್ನು ಮುಚ್ಚಿಸಿ ಅಮದು ಮಾಡಲು ಪ್ರೋತ್ಸಾಹ‌ ನೀಡುತ್ತಿದೆ. ನೀವು ಹೇಳಿರುವ‌ ಟೆಲಿಕಾಂ ಆಗಲಿ ಉಳಿದ‌ ಕಂಪ್ಯೂಟರ್ ಆಗಲಿ ಎಲ್ಲ ನೂರು ಪ್ರತಿಶತ‌ ವಿದೇಸಿ ಬಂಡವಾಳಕ್ಕೆ ಅವಕಾಶ‌ ನೀಡಲಾಗಿದೆ. ಈಗ‌ ವ್ಯವಸಾಯವನ್ನು ಸಹ‌ ಧಮನ‌ ಮಾಡಲು ಸರ್ಕಾರ‌ ಸಿದ್ದವಾಗುತ್ತಿದೆ, ನಾವು ತಿನ್ನುವ‌ ಅಹಾರಗಳು, ಎಣ್ಣೆ ಮುಂತಾದ‌ ಖಾದ್ಯಗಳು ಎಲ್ಲವನ್ನು ಹೊರಗಿನಿಂದ‌ ತರಿಸಲು ಉತ್ಸುಕವಾಗಿದೆ. ನಮ್ಮದೆ ಆದ‌ ಎಲ್ ಐ ಸಿ ಯನ್ನು ಮುಚ್ಚಿಹಾಕಲು ಸಿದ್ದತೆ ಆರಂಬವಾಗಿದೆ. ಕಡೆಗೆ ಯುದ್ದೋಪಕರಣಗಳು , ಟೆಲಿಕಾಂ ಉಪಕರಣಗಳು ಸಹಿತ‌ ನಮ್ಮ ಶತ್ರು ದೇಶ‌ ಎಂದೆ ಗುರುತಿಸುವ‌ ಚೀನದ‌ ಮೇಲೆ ಅವಲಂಬಿತವಾಗುವಂತೆ ಆಗುತ್ತಿದೆ. ಇದಕೆಲ್ಲ ನಮ್ಮಲ್ಲಿ ಸತ್ತು ಹೋಗಿರುವ‌ ದೇಶಾಭಿಮಾನ‌ , ಒಳಜಗಳ‌, ನಾಯಕರ‌ ಧನದಾಹ‌ ಇಂತಹುಗಳೆ ಕಾರಣಗಳಾಗುತ್ತಿವೆ. ಮೂಢನಂಭಿಕೆಗಳು ಯಾವಗಳು ಹೊಸ‌ ಚಿಂತನೆಗಳ‌ ಜೊತೆಗೆ ಸಾಗುತ್ತವೆ ಉದಾಹರಣೆ ರಾಕೆಟ್ ಹಾರಿಸುವ‌ ಮುಂಚೆ ದೇವರನ್ನು ಪೂಜಿಸಲಾಗುತ್ತೆ, ಅಥವ‌ ತಿರುಪತಿಗೆ ಹರಕೆ ಹೊರಲಾಗುತ್ತೆ :‍) ಅದಕ್ಕೆಲ್ಲ ಸಂಭಂದವಿಲ್ಲ, ಅದನ್ನು ಒಂದು ರೀತಿ ಮನಸಿಗೆ ವಿಶ್ವಾಸಕೊಡುವ‌ ಕ್ರಿಯೆಗೆ ಹೋಲಿಸಬಹುದು ಅಥವ‌ ಡಾಕ್ಟರಗಳು ಕೊಡುವ‌ ಥೆರಪಿಯಂತೆ. ನಂಬುವರು ನಂಬಬಹುದು ಅಥವ‌ ಬಿಡಬಹುದು ವ್ಯಯುಕ್ತಿಕ‌ ಕ್ರಿಯೆಗಳು ಅವು. ನೀವು ಹೇಳುವ‌ ದೇಶ‌ ಸಾಗುವ‌ ಹೊರ‌ ನೀತಿಗೆ ಬೇಕಾದುದ್ದು, ಅತ್ಮಾಭಿಮಾನ‌, ದೇಶಭಕ್ತಿ, ಭ್ರಷ್ಟಾಚರವಿಲ್ಲದ‌ ಮನಸ್ಥಿಥಿ ಇದಕ್ಕೆಲ್ಲ ಬೇಕಾದುದ್ದು ಸರಿಯಾದ‌ ನಾಯಕತ್ವ ಸದ್ಯಕ್ಕೆ ಅದು ಕನಸು (_:
Submitted by partha1059 Tue, 08/13/2013 - 13:46

In reply to by partha1059

ಆನಂದರವರೆ ಹಾಗೆ ಸಣ್ಣ ಉದಾಹರಣೆ ನೋಡಿ ನಮ್ಮ ದೇಶದ‌ ಕಬ್ಬಿಣದ‌ ಅದಿರು ಕಡಿಮೆ ಬೆಲೆಯಲ್ಲಿ ಚೀನಕ್ಕೆ ಹೋಗಿ ಅಲ್ಲಿಂದ‌ ಕಬ್ಬಿಣವನ್ನು ಹೆಚ್ಚೆ ಬೆಲೆಗೆ ಕೊಳ್ಳಲು ಯಾರು ಕಾರಣ‌. ಇಲ್ಲಿಯೆ ಕಬ್ಬಿಣದ‌ ಕಾರ್ಖಾನೆ ಬಂದು 5000 ಜನರಿಗೆ ಕೆಲಸ‌ ಸಿಕ್ಕಿ ಬಡತನ‌ ನೀವಾರಣೆ ಆಗುವದಾದರೆ , ಕಾರ್ಖಾನೆಯ‌ ಪ್ರಾರಂಬೋತ್ಸವಕ್ಕೆ ಕಲ್ಲಿನ‌ ಮುಂದೆ ಒಂದು ಕಾಯಿ ಒಡೆದು ಹಾಲು ಹಾಕಿದರೆ ನಷ್ಟವೇನು ಬಿಡಿ. ಅದೊಂದು ಮಾನಸಿಕ‌ ಕ್ರಿಯೆ . ಆದರೆ ಆಗಬೇಕಾದ‌ ಕೆಲಸದ‌ ಕಡೆ ನಮ್ಮ ಗಮನವಿಲ್ಲ , ಕಬ್ಬಿಣದ‌ ಕಾರ್ಖಾನೆ ಇಲ್ಲಿ ಕೇಳದೆ, ಕಲ್ಲಿಗೆ ಹಾಲು ಸುರಿಯುವ‌ ಬಗ್ಗೆ ಮಾತ್ರ ಮಾತನಾಡುತ್ತೇವೆ. ಹಾಗೆ ಮೇಲೆ ಶ್ರೀಧರ‌ ಭಂಡ್ರಿಯವರ‌ ಮಾತನ್ನು ಓದಿ ನೋಡಿ
Submitted by anand33 Tue, 08/13/2013 - 13:49

ರಾಕೆಟ್ ಹಾರಿಸುವ ಮುಂಚೆ ತಿರುಪತಿಗೆ ಹರಕೆ ಹೊರುವುದು ಅಥವಾ ದೇವರನ್ನು ಪೂಜಿಸಬೇಕಾದ ಅಗತ್ಯವಿಲ್ಲ. ಇದು ನಮ್ಮ ವಿಜ್ಞಾನಿಗಳ ಆತ್ಮವಿಶ್ವಾಸದ ಕೊರತೆಯನ್ನು ತೋರಿಸುತ್ತದೆ ಏಕೆಂದರೆ ನಮ್ಮ ವಿಜ್ಞಾನಿಗಳು ಕೂಡ ಇಲ್ಲಿನ ಸಾಂಪ್ರದಾಯಿಕ ಪರಿಸರದಲ್ಲಿ ಬೆಳೆದಿರುವುದು ಅದಕ್ಕೆ ಕಾರಣ. ಅವರಿಗೆ ಎಳೆಯ ವಯಸ್ಸಿನಲ್ಲಿ ವೈಚಾರಿಕತೆಯನ್ನು, ಆತ್ಮ ವಿಶ್ವಾಸವನ್ನು ಬಿತ್ತುವ ಶಿಕ್ಷಣವನ್ನು ನೀಡಲಾಗಿಲ್ಲ. ನಿಸರ್ಗ ನಿಯಮಗಳ ಅನುಸಾರ ಸಮರ್ಪಕ ತಂತ್ರಜ್ಞಾನ ಅಳವಡಿಸಿದರೆ ರಾಕೆಟ್ ಮೇಲೆ ಹಾರಿಯೇ ಹಾರುತ್ತದೆ. ನಾಸಾದ ವಿಜ್ಞಾನಿಗಳು ರಾಕೆಟ್ ಹಾರಿಸುವ ಮುನ್ನ ಪೂಜೆ, ಹರಕೆ ಹೊರದೆಯೂ ಯಶಸ್ವಿಯಾಗಿ ರಾಕೆಟ್ ಹಾರಿಸುತ್ತಿದ್ದಾರೆ. ಇದಕ್ಕೆ ಬೇಕಾಗಿರುವುದು ವೈಚಾರಿಕ ಚಿಂತನೆ ಹಾಗೂ ವಿಜ್ಞಾನಿಗಳಲ್ಲಿ ಆತ್ಮವಿಶ್ವಾಸ. ನಮ್ಮ ದೇಶದ ವಿಜ್ಞಾನಿಗಳಲ್ಲಿ ಅದಕ್ಕೇ ಕೊರತೆ ಇದೆ. ಪರಸ್ಪರ ಅವಲಂಬಿತವಾಗಿರುವ ಅಧುನಿಕ ಜಗತ್ತಿನಲ್ಲಿ ಜಾಗತೀಕರಣಕ್ಕೆ ನಮ್ಮ ದೇಶ ತೆರೆದುಕೊಳ್ಳಲೇ ಬೇಕಾಗಿತ್ತು ಹಾಗಾಗಿ ತೆರೆದುಕೊಂಡಿದೆ. ಜಾಗತೀಕರಣದಲ್ಲಿ ಅವಕಾಶಗಳೂ ಇವೆ. ನಾವು ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಉತ್ಪನ್ನ ನೀಡಿದರೆ ಅಭಿವೃದ್ಧಿ ಹೊಂದಲು ವ್ಯಾಪಕ ಅವಕಾಶಗಳಿವೆ. ಸರಕಾರದ ಅಧೀನದಲ್ಲಿ ಇರುವ ಉದ್ಯಮಗಳು ಹೊಸತನವನ್ನು ಅಳವಡಿಸಲು ಸರ್ಕಾರದ ನಿರ್ಧಾರ ಅವಶ್ಯಕವಾಗಿರುವ ಕಾರಣ ಸರಕಾರದ ನೀತಿಗಳೂ ಸಾರ್ವಜನಿಕ/ಸರ್ಕಾರೀ ವಲಯದ ಉದ್ದಿಮೆಗಳ ಸ್ಪರ್ಧಾತ್ಮಕತೆಯ ಮೇಲೆ ಪರಿಣಾಮ ಬೀರುವುದು ನಿಜವಾದರೂ ಜಾಗತೀಕರಣದಿಂದ ಉತ್ತಮ ಸೇವೆ ನೀಡಿದರೆ ಎಲ್. ಐ. ಸಿ. ಯಂಥ ಉದ್ಯಮಕ್ಕೆ ಯಾವುದೇ ಧಕ್ಕೆ ಆಗಲಾರದು. ನಮ್ಮ ಉದ್ಯಮಗಳು ಸ್ಪರ್ಧಾತ್ಮಕವಾಗಿ ಗುಣಮಟ್ಟದ ಉತ್ಪನ್ನಗಳನ್ನು ಕಡಿಮೆ ಬೆಲೆಯಲ್ಲಿ ನೀಡಿದರೆ ವಿದೇಶಿ ಬಂಡವಾಳ 100% ಬಂದರೂ ಗೆಲ್ಲಲು ಸಾಧ್ಯ. ಖಾದ್ಯ ತೈಲದಲ್ಲಿ ನಮ್ಮ ದೇಶವು ಸ್ವಾವಲಂಬಿ ಯಾಗಿಲ್ಲದ ಕಾರಣ ಆಮದು ಮಾಡುವುದು ಅನಿವಾರ್ಯ. ಖಾದ್ಯ ತೈಲಗಳ ಉತ್ಪಾದನೆಯನ್ನು ದೇಶದಲ್ಲಿ ಹೆಚ್ಚಿಸಲು ಸೂಕ್ತ ಭೂಮಿ ಹಾಗೂ ನೀರಾವರಿ ಸೌಲಭ್ಯ ಇಲ್ಲದ ಕಾರಣ ಆಮದು ಮಾಡಲಾಗುತ್ತಿದೆ.
Submitted by anand33 Tue, 08/13/2013 - 15:26

ನಮ್ಮ ದೇಶದಲ್ಲಿ ಕಬ್ಬಿಣದ ಅದಿರು ಇದ್ದು ಕಬ್ಬಿಣ ಮತ್ತು ಸ್ಟೀಲ್ ಅನ್ನು ನಮಗೆ ಬೇಕಾದಷ್ಟು ಉತ್ಪಾದಿಸಲು ವಿಫಲರಾಗಿರುವುದು ಮತ್ತು ಅದಿರು ರಫ್ತು ಮಾಡಿ ಮತ್ತೆ ಕಬ್ಬಿಣ ಮತ್ತು ಸ್ಟೀಲ್ ಆಮದು ಮಾಡುವ ಪರಿಸ್ಥಿತಿ ಇರುವುದು ಯೋಚಿಸಬೇಕಾದ ವಿಚಾರ. ನಮ್ಮ ದೇಶದಲ್ಲಿಯೇ ಅದನ್ನು ಉತ್ಪಾದಿಸುವ ಅಗತ್ಯ ಇದೆ ಎಂಬುದು ಒಪ್ಪತಕ್ಕ ಮಾತೇ.
Submitted by H A Patil Tue, 08/13/2013 - 19:35

ಪಾರ್ಥ ಸಾರಥಿಯವರಿಗೆ ವಂದನೆಗಳು ' ಕಲ್ಲಿಗೆ ಹಾಲೆರೆಯವುದು ತರವೆ ' ಒಂದು ಸಕಾಲಿಕ ವಿಚಾರ ಪ್ರಚೋದಕ ಲೇಖನ, ನಿಮ್ಮ ಎಲ್ಲ ಅನಿಸಿಕೆಗಳಿಗೆ ನನ್ನ ಸಹಮತವಿದೆ, ಧನ್ಯವಾದಗಳು.
Submitted by basho aras Wed, 08/14/2013 - 11:39

ಈ ಲೇಖನಕ್ಕೆ ಬಂದ ಪ್ರತಿಕ್ರಿಯೆಗಳು ಉತ್ತಮವಾಗಿದೆ. ಇದಕ್ಕೆ ಪೂರಕವಾಗಿ "ಮೂಢ ನಂಬಿಕೆಗಳನ್ನು ಕ್ಯೆ ಬಿಡಬೇಡಿ" ಲೇಖಕ ಕೆ.ಅರ್. ಕೃಷ್ಣಮೂರ್ತಿ ಜನಪದ ಪ್ರಕಾಶನ ಬೆಂಗಳೂರು ಈ ಪುಸ್ತಕವನ್ನು ಓದುವುದು ಉತ್ತಮವೆನಿಸುತ್ತದೆ.