ಆಸೆಗಳು ನೂರಾರು ...

ಆಸೆಗಳು ನೂರಾರು ...

ಗಾನ ಲೋಕದಲ್ಲಿ ವಿಹರಿಸುತ್ತಿರಲು

ಸಂಗೀತಲೋಕದೆಲ್ಲ ಜ್ಞ್ನಾನ ಪಡೆಯುವಾಸೆ

 

ವಾದ್ಯಗಳ ಮಾಧುರ್ಯ ಆಲಿಸುತ್ತಿರಲು

ಸಕಲ ವಾದ್ಯಗಳನ್ನೂ ನುಡಿಸುವಾಸೆ

 

ನೃತ್ಯ ಕಾರ್ಯಕ್ರಮ ನೋಡುತ್ತಿರಲು

ನಾಟ್ಯ ಪ್ರೌಢಿಮೆ ಪಡೆಯುವಾಸೆ

 

ಸಿನಿಮಾ, ನಾಟಕ ವೀಕ್ಷಿಸುತ್ತಿರಲು

ರಂಗದ ಮೇಲೆ ಅಭಿನಯಿಸುವಾಸೆ

 

ಅವಿಷ್ಕಾರಗಳ ಬಗ್ಗೆ ತಿಳಿಯುತ್ತಿರಲು

ಎನಗೂ ಅವರಂತೆ ಸೃಷ್ಟಿಸುವಾಸೆ

 

ಸಾಹಿತ್ಯ ಲೋಕದಿ ಅಡ್ಡಾಡುತಿರಲು

ಎನಗೂ ನಾಲ್ಕಕ್ಷರ ಬರೆಯುವಾಸೆ

 

ಧಾರ್ಮಿಕ ಕಾರ್ಯಕ್ರಮದಲ್ಲಿ ಕುಳಿತಿರಲು

ಎನಗೂ ಮಂತ್ರೋಚ್ಚಾರ ಮಾಡುವಾಸೆ

 

ವಾಣಿಜ್ಯ ದಿಗ್ಗಜರ ನುಡಿಗಲಾಲಿಸುತ್ತಿರಲು

ಎನಗೂ ಏನಾದರೂ ಸಾಧಿಸುವಾಸೆ

 

ಎಲ್ಲೆಲ್ಲೂ ಇರುವಾಸೆ,

ಎಲ್ಲವನ್ನೂ ಅರಿಯುವಾಸೆ

 

ಆಸೆಯ ಬಲೆಗೆ ಸಿಲುಕಿ ಒದ್ದಾಡುತಿರಲು

ಯಾವುದನ್ನೂ ಸಾಧಿಸದೆ ಕಳೆದುಹೋಗುತ್ತಿರಲು

 

ಎನ್ನ ಮಿತಿಯನ್ನು ತಿಳಿಯುವಾಸೆ,

ನನ್ನನ್ನೇ ನಾ ಅರಿಯುವಾಸೆ

 

Comments

Submitted by kavinagaraj Wed, 09/18/2013 - 15:29

'ಸಾಧ್ಯವಾದುದನ್ನು ಮಾಡುವಾಸೆ, ಮಾಡಬಹುದಾದ್ದನ್ನು ಮಾಡುವಾಸೆ' - ಈ ಆಸೆಗಳೇ ಜೀವನವನ್ನು ಮುನ್ನಡೆಸುವಂತಹವು!
Submitted by venkatb83 Wed, 09/18/2013 - 17:47

"ಎನ್ನ ಮಿತಿಯನ್ನು ತಿಳಿಯುವಾಸೆ, ನನ್ನನ್ನೇ ನಾ ಅರಿಯುವಾಸೆ" ಆ ... ಆ ... ಆ .... ಸೆ .. ಅತಿಯಾಗಿ ಇದ್ಯಾಕೋ ದು ... ದೂ ... ರದ ಆಸೆ ಅನಿಸುತ್ತಿದೆ ..!! ಭಲ್ಲೆ ಅವರೇ ನೀವ್ ಈ ಮಧ್ಯೆ ಗದ್ಯ ಬಿಟ್ಟು ಪದ್ಯ ಹಿಡಿದದಕ್ಕೆ ಕಾರಣವೇನು? ಶುಭವಾಗಲಿ \।
Submitted by bhalle Wed, 09/18/2013 - 18:42

In reply to by venkatb83

ಸತ್ಯವಾದ ಮಾತು ಸಪ್ತಗಿರಿವಾಸಿಗಳೇ ... ಅತೀ ಆಸೆ ಗತಿ ಕೇಡು :-( ಜ್ಞಾನದಾಹಕೆ ಉತ್ತಮ ಉದಾಹರಣೆ ಅಂದರೆ ಕಾಗೆಯ ದಾಹದ ಕಥೆ ... ಹೂಜಿಯ ನೀರು - ಜ್ಞಾನ ಭಂಡಾರ ಕಲ್ಲುಗಳು - ಪ್ರಯತ್ನ ಕಾಗೆ - ನಾವುಗಳು ಸಿಕ್ಕ ನೀರು - ಪ್ರಯತ್ನದ ಫಲ ಭಾವನೆಗಳನ್ನು ಹೊರಹಾಕಲು ಪದ್ಯರೂಪವೇ ಸೂಕ್ತ ಎನಿಸುತ್ತದೆ ...
Submitted by partha1059 Thu, 09/19/2013 - 15:23

jack of all master of none ಎನ್ನುವ‌ ನಾಡ್ನುಡಿ ಅದೇಕೆ ನೆನಪಿಗೆ ಬಂತು ... ಯಾವುದನ್ನು ನೋಡುವಾಗಲು ನಮಗೆ ಆಸಕ್ತಿ ಕೆರಳುವುದು ಸಹಜ‌... ಆದರೆ ಸಾಧಿಸಲು ಜೀವನಕಾಲ‌ ಮಾತ್ರ ಅಲ್ಪ ಹಾಗಾಗಿ ನನ್ನಂತವರೆಲ್ಲ ಎಲ್ಲಿಗೂ ಸಲ್ಲದೆ ಎಲ್ಲಿಯೊ ಪೂರ್ಣವಾಗಿ ತೊಡಗಿಕೊಳ್ಳದೆ ಜೀವನ‌ ಮುಗಿಸಿಬಿಡುವರು ..... ಕೆಲವರು ಒಂದೆ ವಿಶ್ಹಯವನ್ನು ಜೀವನ‌ ಪೂರ‌ ತಪಸ್ಸಿನಂತೆ ಸಾಧಿಸುವರು ...
Submitted by bhalle Thu, 09/19/2013 - 21:46

In reply to by partha1059

ಹೌದು ಪಾರ್ಥರೇ ... ಸಾಧನೆಗೈದು ಪೋಗಲು, ಹೆಸರು ಉಳಿಯುವುದು ... ಇವರು ಇಂಥ ಸಾಧನೆ ಮಾಡಿದರು ಅಂತ. ಗೂಗಲ್-ಡೂಡಲ್'ನಲ್ಲಿ ಕಾಣಿಸಿಕೊಳ್ಳುತ್ತಾರೆ. ಸಾಧನೆಗಳೇನೂ ಮಾಡದೆ ಪೋಗಲೂ, ಹೆಸರು ಉಳಿವುದು ... ಇವರು ಇದ್ದರು, ಹೋದರು ... ಅವರ ಇರುವು ಇರುವೆಗೂ ತಿಳೀಲಿಲ್ಲ ಅಂತ ಇನ್ನು ನಾವು ... ಹೋಗ್ಲಿ ಬಿಡಿ ನೀವೇ ಹೇಳಿ ಆಗಿದೆಯಲ್ಲ :-)
Submitted by ಗಣೇಶ Fri, 09/20/2013 - 00:11

In reply to by bhalle

ಭಲ್ಲೇಜಿ, ಕವನ ಸೂಪರ್. ನನ್ನದೂ ಆಸೆಗಳು ನೂರಾರು.. ತಬ್ಲೆ ಕಲಿಯಲು ಹೊರಟೆ, ಅರ್ಧಕ್ಕೆ ಬಿಟ್ಟೆ, ಕೊಳಲು ಕಲಿತೆ, ಸ್ವಲ್ಪವೇ ದಿನ, ಸಂಗೀತವೂ ಹಾಗೇ.. ಕಮಲ ಹಾಸನ್ ಕಾಲದಲ್ಲಿ ಡ್ಯಾನ್ಸ್ಗೂ..ಈಗಲೂ ಆಸೆಗಳು ಮುಗಿದಿಲ್ಲ. ಲೇಟೆಸ್ಟ್- ಮೌತ್ ಆರ್ಗನ್ ತೆಗೆದುಕೊಂಡು ಪ್ರಯತ್ನಿಸಬೇಕು.. ಕತೆ ಕವಿತೆ ಬರೆಯಬೇಕು... ಒಟ್ಟಾರೆ ಹೇಳಬೇಕೆಂದರೆ ಈ ಕವಿತೆ ನನ್ನದೇ! :) ಪಾರ್ಥರೆ- "..ಹಾಗಾಗಿ ನನ್ನಂತವರೆಲ್ಲ ಎಲ್ಲಿಗೂ ಸಲ್ಲದೆ ಎಲ್ಲಿಯೊ ಪೂರ್ಣವಾಗಿ ತೊಡಗಿಕೊಳ್ಳದೆ ಜೀವನ‌ ಮುಗಿಸಿಬಿಡುವರು .." ಎಲ್ಲದರಲ್ಲೂ ೧೦೦ ಮಾರ್ಕ್‌ಗೇ ಯಾಕೆ ನೋಡುತ್ತೀರಿ. ಇದ್ದ ಸಮಯವನ್ನು ಹಾಳುಗೆಡವದೇ ಏನಾದರೂ ಕಲಿಯುತ್ತಾ ಇದ್ದರಾಯಿತು. ಎಲ್ಲರೂ ಸಾಧಕರೇ ಆದರೆ ಮುಂದಿನ ಮಕ್ಕಳಿಗೆ ಹಿಸ್ಟರಿ ಕಷ್ಟವಾಗಲಿಕ್ಕಿಲ್ಲವೇ?:) ವನಸುಮದಂತೆ ನಾಲ್ಕು ಕ್ಷಣ ಅರಳಿ, ಮುಗುಳ್ನಕ್ಕು ಹೋದರಾಯಿತು...
Submitted by bhalle Fri, 09/20/2013 - 05:38

In reply to by ಗಣೇಶ

ಗಣೇಶ್'ಜಿ ನಮಸ್ಕಾರ ಸುಖ ಜೀವನಕ್ಕೆ ಒಳ್ಳೇ ಸೂತ್ರ ಹೇಳಿದ್ದೀರ .... "ವನಸುಮದಂತೆ ನಾಲ್ಕು ಕ್ಷಣ ಅರಳಿ ಹೋದರಾಯಿತು" ... ಅಲ್ಲೇ ಇರೋದು ಐನಾತಿ ಪ್ರಾಬ್ಲಮ್ಮು ... ಹಾಗೆಂದು ಕೊಳ್ಳಲೂ ಸಾಧನೆಬೇಕು. ಈಗ ಒಂದು ವಿಷಯ ಸ್ಪಷ್ಟವಾಯಿತು ನೋಡಿ ... ನಾವು, ನೀವು, ಪಾರ್ಥರು ಮೂವರದ್ದು ಒಂದೇ ಕಥೆ ಅಂತ :-) ಇನ್ನೂ ಹಲವರು ಇರಬಹುದು ಅನ್ನಿಸುತ್ತೆ :-)
Submitted by Vinutha B K Fri, 09/20/2013 - 15:24

ಚೆನ್ನಾಗಿದೆ . ಎಲ್ಲರ ಮನದ ತುಮುಲ ನಿಮ್ಮ ಕವನದಲ್ಲಿದೆ ಎನಿಸಿತು . ಆಸೆಯೇ ಇಲ್ಲದೆ ಅಜ್ಞಾನಿಯಾಗಿರುವುದಕ್ಕಿಂತ ,ಆಸೆ ಅತಿಯಾಗಿ ಸಖಲಕಲಾವಲ್ಲಭರಾಗಿ ಮಾಡದೇ ಹೋದರು ಅರೆಬರೆ ಜ್ಞಾನಿಯನ್ನಾಗಿ ಮಾಡಿದರೆ ಆಸೆ ತಪ್ಪಲ್ಲ .. ವಿದ್ವಾನ್ ಆಗಿ ಹೇಳಿಕೊಡದಿದ್ದರು ,ಅಲ್ಪ ಸ್ವಲ್ಪ ಕಲೆ ಅರಿತುಕೊಳ್ಳಲರ್ಹರಂತಾಗಿರುವುದು ಉತ್ತಮವೆಂಬುದು ನನ್ನ ಅನಿಸಿಕೆ ..
Submitted by bhalle Fri, 09/20/2013 - 16:24

In reply to by Vinutha B K

ಧನ್ಯವಾದಗಳು ವಿನುತಾ ಅವರೇ ... ನಿಮ್ಮ ಮಾತು ನಿಜ. ಹೌದು ಅಜ್ನಾನಕ್ಕಿಂತ ಅಲ್ಪಜ್ನಾನ ಮೇಲು ... ಆದರೆ ಅಲ್ಪಜ್ನಾನ ಹೊಂದಿ ಎಲ್ಲ ಬಲ್ಲೆ ಎಂದು ಅಂದುಕೊಳ್ಳದಿರುವುದು ಉತ್ತಮ. ಹಾಗಾದಲ್ಲಿ ನಗೆಪಾಟಲಾದೀತು. ಹಾಗಾಗಿ ಅಲ್ಪಜ್ನಾನ ಎನ್ನುವುದರ ಬದಲು ಸ್ವಲ್ಪಜ್ನಾನ ಎನ್ನೋಣ. ಏನಂತೀರ? ನಾಲ್ಕು ಜನ ಸೇರಿದೆಡೆ ಒಂದು ವಿಷಯದ ಮೇಲೆ ಪ್ರಭುತ್ವಕ್ಕಿಂತ ನಾಲ್ಕಾರು ವಿಷಯಗಳ ಮೇಲಿನ ಸ್ವಲ್ಪ ಜ್ನಾನ ಇರುವುದೇ ಚೆನ್ನ ... ಒಂದು ವಿಷಯದ ಮೇಲಿನ ಪ್ರಭುತ್ವ ಹೊಂದಿದ್ದಾಗ ಸಮಾನ ಅಭಿರುಚಿಯವರೊಡನೆ ಮಾತ್ರ ಬೆರೆಯಲು ಸಾಧ್ಯ ಎನಿಸುತ್ತದೆ. Vertical Knowledge ಗಿಂತ horizontal knowledge ಉತ್ತಮ.