' ಋಣ ಪ್ರಜ್ಞೆ '

' ಋಣ ಪ್ರಜ್ಞೆ '

ಚಿತ್ರ

 

 

 

 

 

 

 ಮನುಷ್ಯ

ಮೂಲದಲೊಬ್ಬ ಹಿಪೋಕ್ರ್ಯಾಟ್‍

ನಾವು ನಮ್ಮ ಬದುಕು

ಸಹನೀಯವಾಗಿಸಿದವರ

ಮರೆತು ಕಾಣದ ದೇವರಿಗೆ

ಕೃತಜ್ಞತೆ ಸಲ್ಲಿಸುತ್ತೇವೆ

 

ದೇವರಿಗೆ

ನಾವು ಸಲ್ಲಿಸುವ ಕೃತಜ್ಞತೆ

ನಮ್ಮ ದೌರ್ಬಲ್ಯ ಮತ್ತು 

ನಮ್ಮ ಪಾಪಗಳನ್ನು

ಮರೆಮಾಚುವ ಒಂದು

'ರಕ್ಚಾ ಕವಚ' ಅಷ್ಟೆ

 

ಬದುಕಿದಾಗ ಹಿರಿಯರನ್ನು

ಸರಿಯಾಗಿ ನಡೆಸಿಕೊಳ್ಳದೆ ನಾವು

ಅವರು ನಮ್ಮನ್ನಗಲಿ ಹೋದಾಗ

ವೈಭವದ ತಿಥಿ ಕರ್ಮ

ವೈಕುಂಠ ಸಮಾರಾಧನೆ

ಮಾಡುತ್ತ ಅವರ ಹೆಸರಿನಲಿ

ದೇಣಿಗೆ ನೀಡುತ್ತ ತೋರಿಕೆಯ

'ಋಣ ಪ್ರಜ್ಞೆಗೆ'

ಜೋತು ಬೀಳುತ್ತೇವೆ ಅದಕೆ

ಮನುಷ್ಯತ್ವದ ಧ್ಯಾನದ

ಕೇಂದ್ರ ಬೇಕು ತೋರಿಕೆಯ

ಆಡಂಬರವಲ್ಲ

 

ಕೃತಜ್ಞತೆಯೆನ್ನುವುದು

ಉರಿಸುವ ಊದುಬತ್ತಿ

ಬೆಳಗುವ ಬಣ್ಣದ ಬಲ್ಬು

ಸುಗಂಧ ಸೂಸುವ

ಹೂಮಾಲೆಗಳಿಂದಲಕೃತ

'ಫೋಟೋ'ದಲ್ಲಲ್ಲ ಅದು

ನಮಗೆ ಬದುಕು ಕೊಟ್ಟವರಿಗೆ

ಸಲ್ಲಿಸುವ 'ಅಂತರ್ಗತ ಭಾವನೆ'

ಅದೊಂದು' ನೈಜ ನೈತಿಕ ಪ್ರಜ್ಞೆ'

ಚಿತ್ರ ಕೃಪೆ : ಗೂಗಲ್ ಇಮೇಜಸ್, 

          ‍      _    

Rating
No votes yet

Comments

Submitted by nageshamysore Sun, 10/20/2013 - 01:42

ಪಾಟೀಲರಿಗೆ ನಮಸ್ಕಾರ. ಋಣಪ್ರಜ್ಞೆ ಕವನ ಮನುಜನೊಳಗಿನ ತೋರಿಕೆಯ ದ್ವಂದ್ವವನ್ನು ಚೆನ್ನಾಗಿ ಬಿಂಬಿಸಿದೆ. ಸ್ವಂತಕ್ಕಾಗಿ ಬದುಕುವುದಕ್ಕಿಂತ, ಪರರ ನಿರೀಕ್ಷೆಯನುಸಾರ ಬದುಕಲೆತ್ನಿಸುವ, ಲೋಕ ಮೆಚ್ಚುವಂತೆ ನಡೆವ ಹಾಗೆ 'ನಟಿಸುವ' ನಮ್ಮ ಎಷ್ಟೊ ಕ್ರಿಯೆಗಳು ಮನುಷ್ಯತ್ವದ ಆಷಾಢಭೂತಿತನಕ್ಕೆ ಹಿಡಿದ ಕನ್ನಡಿ. ಅಷ್ಟೆಲ್ಲ ತೋರಿಕೆಯ ತಾಕಲಾಟದ ಬದಲು ತುಸುವಾದರೂ ವಾಸ್ತವಿಕತೆಯ ಅವಶ್ಯಕತೆಗನುಗುಣವಾಗಿ, ನಿಜಾಯತಿಯಿಂದ ನಡೆಯಲೆತ್ನಿಸಿದರೆ ಎಷ್ಟೊ ದ್ವಂದ್ವಗಳನ್ನು ಪರಿಹರಿಸಬಹುದು. ಆ ತರದ ಬೂಟಾಟಿಕೆಗಳನ್ನು ಎತ್ತಿ ತೋರಿಸುತ್ತ ನಮ್ಮ ಋಣಪ್ರಜ್ಞೆಯ 'ಕಮರ್ಶಿಯಲಿಸಂ' ಬಗ್ಗೆ ಬೆಳಕು ಚೆಲ್ಲುವುದಲ್ಲದೆ, ಯಾವುದು ಸರಿಯಾದ ರೀತಿ ಎಂಬ ಜಿಜ್ಞಾಸೆಗೆಗೆ ಉತ್ತರಿಸಲು ಯತ್ನಿಸುತ್ತದೆ ಕವನ. ವಸ್ತು ಮೆಚ್ಚಿಕೆಯಾಯ್ತು - ನಿಜ ಹೇಳಬೇಕೆಂದರೆ, ನಿಮ್ಮ ಪಟ್ಟಿಯನ್ನು ಇನ್ನಷ್ಟು ಉದ್ದವಾಗಿ ವಿಸ್ತರಿಸುತ್ತಾ ಹೋಗುವಷ್ಟು ಉದಾಹರಣೆಗಳು ಸಿಗುತ್ತವೆ. ಒಂದು ರೀತಿ, ನಾವೆಲ್ಲರೂ ಈ ಋಣಪ್ರಜ್ಞೆಯ ಬಂಧಿಗಳೊ ಏನೊ. ಆ ಪ್ರಜ್ಞೆಯನ್ನು ಕೆಣಕುವ ಕವನ ನೀಡಿದ್ದಕ್ಕೆ ಧನ್ಯವಾದಗಳು.
 
-ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
 

Submitted by H A Patil Sun, 10/20/2013 - 20:05

In reply to by nageshamysore

ನಾಗೇಶ ಮೈಸೂರು ರವರಿಗೆ ವಂದನೆಗಳು
ಈ ಕವನ ಕುರಿತು ತಾವು ಬರೆದ ವಿಸ್ತೃತ ವಿಮರ್ಶೇ ಓದಿದೆ, ಕವನವನ್ನು ಇನ್ನೂ ಲಂಬಿಸಬಹುಯದಿತ್ತು, ಯಾಕೋ ನನ್ನ ಕವನಗಳು ಬಹಳ ಧೀರ್ಘವಾಗುತ್ತಿವೆಯೆ ಮತ್ತು ಓದುಗರನ್ನು ಬೇಸರಕ್ಕೆ ಈಡು ಮಾಡುತ್ತಿವೆಯೆ ಎನ್ನುವ ಆತಂಕ ಕಾಡಿದ್ದರಿಂದ ಕವನವನ್ನು ಲಂಬಿಸದೆ ಚುಟುಕಾಗಿ ಮುಗಿಸಿದೆ, ಮೆಚ್ಚುಗೆಗೆ ಧನ್ಯವಾದಗಳು.

Submitted by nageshamysore Mon, 10/21/2013 - 03:28

In reply to by H A Patil

ಪಾಟೀಲರೆ, ಈ ಕವಿತೆಯ ಉದ್ದ ಬರೆದಷ್ಟೂ ಹೋಗಬಹುದು - ಆದರೆ ಸಾಂಕೇತಿಕತೆಯ ದೃಷ್ಟಿಯಿಂದ ಇಷ್ಟೆ ಸಾಕು.  ಉದ್ದದ ವಿಷಯಕ್ಕೆ ಬಂದರೆ ಇದು ಕವಿಗಳನ್ನು ಕಾಡುವ ಸಹಜ ದ್ವಂದ್ವ - ಹೇಳಲೆಷ್ಟೊಂದಿದ್ದರೂ ಕೇಳುವವರಿಗೆ ಸಾಕಾಗುವಷ್ಟಿರುವಂತೆ ನಿಯಂತ್ರಿಸುವುದು ಹೇಗೆ? ಜತೆಗೆ ಕೆಲವರಿಗೆ ಉದ್ದ ಹಿಡಿಸಬಹುದು, ಮತ್ತೆ ಕೆಲವರಿಗೆ ಉದ್ದವೆ ಅಡೆತಡೆಯೆನಿಸಬಹುದು. ಈಗಿನ ವೇಗ ಯುಗಕ್ಕೆ ಕಡಿಮೆ ಉದ್ದವೆ ಸೂಕ್ತವೆನಿಸುತ್ತದೆ - ಓದುವವರಿಗೆ ಹೆಚ್ಚು ಸಮಯ ಬೇಕಾಗುವುದಿಲ್ಲ. ತುಂಬಾ ಉದ್ದವಿದ್ದಲ್ಲಿ ಭಾಗಗಳಾಗಿ ಮಾಡುವುದು ಮತ್ತೊಂದು ಸಾಧ್ಯತೆ. ಅದೇನೆ ಇದ್ದರೂ, ಹಿಡಿಸಿದರೆ ಸಹೃದಯಿ ಓದುಗರು ಖಂಡಿತ ಓದುತ್ತಾರೆ, ಉದ್ದವಿದ್ದರೂ ಸಹ - ಕೊಂಚ ತಡವಾಗಿಯಾದರೂ :-)

Submitted by H A Patil Mon, 10/21/2013 - 17:18

In reply to by nageshamysore

ನಾಗೇಶ ಮೈಸೂರು ರವರಿಗೆ ವಂದನೆಗಳು
ತಮ್ಮ ಮರು ಪ್ರತಿಕ್ರಿಯೆ ಓದಿದೆ ತಮ್ಮ ಅಭಿಪ್ರಾಯಕ್ಕೆ ನನ್ನ ಒಪ್ಪಿಗೆಯಿದೆ ಧನ್ಯವಾದಗಳು.