ಪುನರ್ಜನ್ಮ
ನಾ ಸತ್ತೆ.
ಕೊನೇಗೆ...
ಈ ಜನ್ಮಕ್ಕೆ ಅದೇ ತಾನೇ ಕೊನೇ?
Biggest Boss ಎದುರಿಗೆ ಕೈಕಟ್ಟಿಕೊಂಡು ನಿಂತೆ.
ನನ್ನ ಬಯ್ಯೋಗ್ರಫಿನೆಲ್ಲಾ ಓದಲಾಯಿತು:
ಹುಡುಗನಾಗಿದ್ದಾಗ ಅವನಿಗೆ ಬಯ್ದೆ; ಇವಳಿಗೆ ಹೊಡೆದೆ; ಮೇಷ್ಟರಿಗೆ ಅಡ್ಡಹೆಸರಿಟ್ಟೆ. ಅದನ್ನು ಕದ್ದೆ; ಇದನ್ನ ಸುಟ್ಟೆ; ಇತ್ಯಾದಿ.
ಬೀಡಿ, ಭಂಗಿ ಸೇದಿದೆ; ಮೋಸ ಮಾಡಿದೆ; ಜಗಳ ಕಾದೆ; ಮೊದಲಾಗಿ.
ದಾನ ಮಾಡಲಿಲ್ಲ; ದೇವಸ್ಥಾನಕ್ಕೆ ಹೋಗಲಿಲ್ಲ; ದೇವರನ್ನು ನೆನಸಲೂ ಇಲ್ಲ; ಕೈಲಾಗದವರಿಗೂ ವಂಚನೆ ಮಾಡಿದೆ, ಮುಂತಾದವು.
ಹೆಂಡತಿಗೆ ಹೊಡೆದೆ; ಮಕ್ಕಳನ್ನು ಮುದ್ದಿಸಲಿಲ್ಲ; ಸರಿಯಾಗಿ ನೋಡಿಕೊಳ್ಳಲೂ ಇಲ್ಲ; ಇತ್ಯಾದಿ.
ತಂದೆತಾಯರನ್ನು ಗೌರವಿಸಲಿಲ್ಲ; ಅವರ ಕಷ್ಟ ಕಾಲದಲ್ಲಿ ನೆರವಾಗಲಿಲ್ಲ; ಅವರ ಮುದಿತನವನ್ನು ಹಂಗಿಸಿದೆ, ಮೊದಲಾಗಿ.
ವಯಸ್ಸಾದ ಮೇಲೂ ದುಶ್ಚಟ ಬಿಡಲಿಲ್ಲ; ಒಳ್ಳೆಯದನ್ನ ನೆನಸಲೂ ಇಲ್ಲ, ಮುಂತಾಗಿ.
'ಒಳ್ಳೆಯದ್ದೇನಾದರೂ ಅಕಸ್ಮಾತ್ತಾಗಿ, ಅಪ್ಪಿತಪ್ಪಿ ಮಾಡಲಾಗಿತ್ತೇ?' ಎಂಬ ಪ್ರಶ್ನೆ ಬಂತು.
‘ಸಾಧ್ಯವಾದಾಗಲೆಲ್ಲಾ ಕನ್ನಡದಲ್ಲೇ ಮಾತಾಡುತ್ತಿದ್ದ’, ಎಂದು ಚಿತ್ರಗುಪ್ತ ಉತ್ತರಿಸಿದರೂ ಕೂಡಲೇ,
‘ಬೇರಿನ್ಯಾವ ಭಾಷೆಯಲ್ಲೂ ಕಿಂಚಿತ್ತೂ ಪರಿಣಿತಿ ಇಲ್ಲ, ಇವನಿಗೆ’ ಎಂದು ಸೇರಿಸಿದ.
ಸರಿ. ಜಜ್ಮೆಂಟ್ ಪಾಸಾಯಿತು. ನರಕದ ಎಲ್ಲಾ ಉರಿಯುವ ಒಲೆ, ಕುದಿಯುವ ಕೊಪ್ಪರಿಗೆ, ಸುಡುವ ಕಡಾಯಿ, ಇತ್ಯಾದಿ ಪರಿಕರಣಗಳಲ್ಲಿ heat treatment processing cycleಗಳಲ್ಲಿ ದೀರ್ಘಕಾಲದ ಶಿಕ್ಷೆಗಳು.
‘ವಾಪಸಾದ ಮೇಲೆ ಏನು? ನರಜನ್ಮವೋ, ನಾಯಿಜನ್ಮವೋ?’ ಎಂದು ಚಿತ್ರಗುಪ್ತ ಪ್ರಶ್ನಿಸಿದ.
‘ಛೆ, ಛೆ! ನಾಯಿ ಜನ್ಮ ಹೋಗಲಿ ನರಜನ್ಮಕ್ಕೂ ಲಾಯಕ್ಕಿಲ್ಲ’, ಎಂದು Boss ಆರ್ಡರಿತ್ತರು. ' ಕೀಳು ಜಂತುವಾಗಿ ಹುಟ್ಟಲಿ!'
‘ಅಂದರೆ..?’ ಸರಿಯಾದ ಸ್ಥಳಕ್ಕೆ ವರ್ಗಾಯಿಸದಿದ್ದರೆ ಚಿತ್ರಗುಪ್ತನಿಗೆ remark ಬರುತ್ತಲ್ವಾ?
ಕ್ಷಣಕಾಲ ಯೋಚಿಸಿ, ‘ಯಾವದಾದರೂ ಕಾಡಿನಲ್ಲಿ ಕಣ್ಣು, ಕಿವಿ, ಮೂಗು, ಕೈ, ಕಾಲು, ಏನೂ ಇಲ್ಲದ ಎರೆಹುಳವಾಗಿ ಹುಟ್ಟಿ, ಮಣ್ಣುತಿನ್ನುತ್ತಿರಲಿ!’ ಎಂದು ಆಜ್ಞೆಯಾಯಿತು.
ಎಲ್ಲಾ ಮಾತುಕತೆ ಮುಗಿದ ಮೇಲೆ, ತಲೆಯ ತುಸು ಮೇಲ್ಗಡೆ ಕೈಯೆತ್ತಿ, ‘ರಾಜ್ಯೋತ್ಸವದ ದಿನಗಳಲ್ಲಿ ಕನ್ನಡದಲ್ಲಿ ಮಾತಾಡಿದ್ದೆ. ಅದಕ್ಕೇನಾದರೂ concession ಇದ್ಯೇ?’ ಎಂದು ಅಂಜುತ್ತಾ ಕೇಳಿದೆ.
ಚಿತ್ರ ಗುಪ್ತನೆಡೆಗೆ ‘ಹೌದೋ?’ ಎಂದು ಪ್ರಶ್ನಿಸುವಂತೆ ಪ್ರಭುಗಳು (ಅಂದ್ರೆ ಬಿಗ್ ಬಾಸು) ನೋಡಿದರು.
‘ಹೂಂ. ಒಂದು ಐದಾರು ವರ್ಷ ಮಾತಾಡಿರ ಬಹುದು’, ledger ನೋಡುತ್ತಾ ಚಿತ್ರಗುಪ್ತ ಹೇಳಿ, ‘ಅದಕ್ಕೆ?’ ಎಂದು ತೀಕ್ಷ್ಣವಾಗಿ ನನ್ನೆಡೆ ನೋಡಿದ.
‘ಅದು ಒಳ್ಳೆಯ ಕೆಲಸವಾದರೆ ನನ್ನ ಒಂದು ಪ್ರಾರ್ಥನೆ, ದೇವರೂ...’ ಎಂದೆ.
‘ಹೂಂ...?’
‘ಎರೆಹುಳುವಾಗಿ ಹುಟ್ಟುವಾಗ ಕರ್ನಾಟಕದಲ್ಲೇ posting ಕೊಡ್ಸಿ ಸ್ವಾಮೀ’
‘ಕರ್ನಾಟಕದ ಒಂದು ಮೂಲೆಯಲ್ಲಿ dry areaಕ್ಕೆ ಹಾಕಿಬಿಡಿ, ಪ್ರಭೂ’ ಎಂದ ಚಿತ್ರಗುಪ್ತ.
‘Dry areaದಲ್ಲಿ ಎರೆಹುಳುವಿಗೇನು ಕೆಲಸವಿರುತ್ತೆ, ದೇವರೂ..? ಕರ್ನಾಟಕದ ಮೂಲೆಯಲ್ಲೇ ಹಾಕಿ. ಕೊಡಗೂ ಕೇರಳದ ಗಡಿಪ್ರದೇಶದಲ್ಲಿ, ಆದ್ರೆ ಕರ್ನಾಟಕದೊಳಗೇ post ಮಾಡಿ ಸ್ವಾಮೀ,’ ಎಂದೆ.
‘ತಥಾಸ್ತು!’ ಎಂದು ಅಂಕಿತ ಹೇಳಿ, ಮಹಾಪ್ರಭುಗಳು ಸ್ವಲ್ಪ ಕಾಲ ನನ್ನತ್ತಲೇ ಯೋಚಿಸುತ್ತಾ ನೋಡಿ, ‘ಲೋ, ಫಟಿಂಗಾ! ನಿನಗೆ ಮಣ್ಣುಮುಕ್ಕಿಸುವದಕ್ಕೆ ಎರೆಹುಳುವಿನ ಜನ್ಮ ಕೊಟ್ಟರೂ, ಕನ್ನಡದ ಮಣ್ಣೇ ತಿನ್ನುವ ಹಾಗೆ ಯೋಜಿಸಿದೀಯಲ್ಲಯ್ಯಾ, ಘಾಟಿ!’ ಎಂದು ಮೆಚ್ಚುಗೆಯ ನಗು ಸೂಸಿ, ‘ಹೋಗು ಯಾವತ್ತೋ ನಾಲ್ಕು ಮಾತು ಕನ್ನಡದಲ್ಲಿ ಆಡಿದ್ದೀಯಲ್ಲಾ... ಹೂಂ! ಹೋಗು!’ ಎಂದರು.
‘ಕೊಡಗಿನ ಮಣ್ಣು ಸ್ವಲ್ಪ ಹೆಚ್ಚು ಸಿಹಿಯಾಗಿರುತ್ತೆ, ದೇವರೂ’ ಎಂದು ಹಲ್ಲು ಗಿಂಜಿದೆ.
Comments
ಉ: ಪುನರ್ಜನ್ಮ
ತುಂಬಾ ಇಷ್ಟವಾಯಿತು ನವೆಂಬರ್ ಗೆ ಒಳ್ಳೆ ಬರಹ ನಿಮ್ಮ ಒಪ್ಪಿಗೆ ಇದೆಯೆಂದು ಭಾವಿಸಿ ಬೇರಡೆಯು ಹಂಚಿಕೊಳ್ಳುತ್ತಿರುವೆ
In reply to ಉ: ಪುನರ್ಜನ್ಮ by partha1059
ಉ: ಪುನರ್ಜನ್ಮ
ಸಂಪದದಲ್ಲಿ ಆಯ್ದ ಬರಹಗಳಿಗೆ ರೆಕಮಂಡ್ ಮಾಡಲು ಅವಕಾಶವಿದ್ದಿದ್ದರೆ ನಾನು ಈ ಬರಹವನ್ನು ಆಯ್ದಬರಹ ಎಂದು ಅಡ್ಮಿನ್ ಗೆ ರೆಕಮಂಡ್ ಮಾಡುತ್ತಿದ್ದೆ :) :)
In reply to ಉ: ಪುನರ್ಜನ್ಮ by partha1059
ಉ: ಪುನರ್ಜನ್ಮ
ಪಾರ್ಥ ಸಾ,
ನಿಮ್ಮ ಮಾತನ್ನು ನಾನೂ ಅನುಮೋದಿಸುತ್ತೇನೆ.
ಸಂಪದದ ನಿರ್ವಾಹಕರೇ, ದಯವಿಟ್ಟು ಐನಂಡರ ಕತೆಯನ್ನು ಆಯ್ದ ಬರಹವನ್ನಾಗಿ ಮಾಡಿ!
In reply to ಉ: ಪುನರ್ಜನ್ಮ by partha1059
ಉ: ಪುನರ್ಜನ್ಮ
ಆಯ್ತು. ಸಂಪದದ ಓದುಗರಿಗೆ ಇಷ್ಟವಾದ ಬಳಿಕ ಬೇರೆ ಓದುಗರಿಗೂ ಇಷ್ಟವಾಗುತ್ತೆ. ಹಂಚಿಕೊಳ್ಳೋಣ, ಅದಕ್ಕೇನು? :)
ಉ: ಪುನರ್ಜನ್ಮ
ಸಿರಿವಂತನಾದರೂ ಕನ್ನಡ ನಾಡಲ್ಲೆ ಮೆರೆವೆ ......
ಎರೆಹುಳುವಾದರೂ ಕನ್ನಡ ಮಣ್ಣಲ್ಲೆ ಬೆರೆವೆ....
ಚೆನ್ನಾಗಿದೆ ಕನ್ನಡದ ಪ್ರಭುಗಳೆ
ರಾಮೋ.
In reply to ಉ: ಪುನರ್ಜನ್ಮ by RAMAMOHANA
ಉ: ಪುನರ್ಜನ್ಮ
ಇಷ್ಟವಾಯಿತು !
ಕನ್ನಡ ಭಾಷೆ, ನೆಲ, ಮಣ್ಣುಗಳ ಮೇಲೆ ಇಷ್ಟೊಂದು ಪ್ರೀತಿ (ಅಚ್ಚ ಕನ್ನಡಿಗರಿಗೇ ಇರದಷ್ಟು) ನಿಮಗಿರುವದಕ್ಕೆ ಕಾರಣ ನೀವು ಕೊಡಗಿಯವರಾಗಿರುವುದು. :-)))))
ನಾಳಿನ ರಾಜ್ಯೋತ್ಸವಕ್ಕೆ ಉತ್ತಮ ಕೊಡುಗೆ !
In reply to ಉ: ಪುನರ್ಜನ್ಮ by Shreekar
ಉ: ಪುನರ್ಜನ್ಮ
ಯಾಕಪ್ಪಾ, ನಾನೂ ಅಚ್ಚ-ಕನ್ನಡಿಗನಲ್ವೇ? ;)
In reply to ಉ: ಪುನರ್ಜನ್ಮ by Iynanda Prabhukumar
ಉ: ಪುನರ್ಜನ್ಮ
ಐನಂಡರೇ,
ನೀವು ಅಚ್ಚ ಕನ್ನಡಿಗರಿಗಿಂತ ಎಷ್ಟೋ ಪಾಲು ಮೇಲಿನವರು !
ಅಚ್ಚ ಕನ್ನಡಿಗ ಎಂದು ನಾನು ಹೇಳಿದ್ದು ಮನೆಮಾತು ಕನ್ನಡವಾಗಿರುವವರಿಗೆ.
ಇನ್ನೊಬ್ಬ ಕೊಡವ/ಕೊಡವತಿ ಎದುರಾದಾಗ ನೀವು ಕನ್ನಡ ಮಾತಾಡುತ್ತಿರೋ ಅಥವಾ ಕೊಡವ ಭಾಷೆಗೆ ಹಾರುತ್ತೀರೋ? :-)))))
ಅಚ್ಚಕನ್ನಡಿಗರು ಈಗ ಕಂಗ್ಲೀಶಿಗೆ ಶರಣಾಗುತ್ತಿದ್ದಾರೆ !
In reply to ಉ: ಪುನರ್ಜನ್ಮ by Shreekar
ಉ: ಪುನರ್ಜನ್ಮ
ಪ್ರಿಯ ಮಿತ್ರ ಶ್ರೀಕರ್,
ನಿಮ್ಮ ಪ್ರೀತ್ಯಾಭಿಮಾನಗಳು ನನ್ನನ್ನು ಸಂತೋಷ-ಸಂಕೋಚಗೊಳಿಸಿವೆ. ಆದರೂ ನಾನು ಅಚ್ಚ ಕನ್ನಡಿಗರಿಗಿಂತ ಮೇಲು, ಎಂಬುವದನ್ನು ಒಪ್ಪಲಾರೆ.
ನಿಜ; ಕೊಡವ/ಕೊಡವತಿಯರೊಬ್ಬರನ್ನು ಭೇಟಿಯಾದಾಗ ಮಾತುಗಳೆಲ್ಲಾ ಕೊಡವ ಭಾಷೆಯಲ್ಲೇ. (ಇದು ನಿಮಗೆ ಗೊತ್ತಿರುವದರಿಂದ ನಿಮಗೆ ಬಹಳಷ್ಟು ಕೊಡವ ಮಿತ್ರರಿರಬಹುದೆಂದು ಭಾವಿಸುತ್ತೇನೆ.)
ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು.