ನಳ ಮತ್ತು ಭೀಮರ ಅಡುಗೆ ಪುಸ್ತಕಗಳು!
ನಳಪಾಕ ಮತ್ತು ಭೀಮಪಾಕ ಎಂದು ನಾವೆಲ್ಲ ಕೇಳಿದ್ದೇವಷ್ಟೇ, ಇವರು ಉತ್ತಮ ಅಡುಗೆಗೆ ಪ್ರಸಿದ್ಧರು. ನಳನ ಮನೆಯಲ್ಲಿ ಅಡುಗೆ ಅವನದೇ ಇದ್ದಿರಬೇಕು! ರೂಪ ಬದಲಿಸಿದ ನಳನನು ದಮಯಂತಿ ಗುರುತು ಹಿಡಿಯುವುದು ಅವನ ಅಡುಗೆಯ ರುಚಿಯಿಂದ ! ಮತ್ತೆ ಭೀಮನು ಅಜ್ಞಾತವಾಸದ ಅವಧಿಯಲ್ಲಿ ವಿರಾಟರಾಜನ ಅರಮನೆಯಲ್ಲಿ ಇದ್ದದ್ದು ಅಡುಗೆಯವನಾಗಿ. ನಮ್ಮಲ್ಲಿ ಒಳ್ಳೆಯ ಅಡಿಗೆಯನ್ನು ಹೊಗಳುವುದು ಭೀಮಪಾಕ/ನಳಪಾಕ ಎಂದೇ ಅಲ್ಲವೇ? ಇಷ್ಟೊಂದು ಪ್ರಸಿದ್ದರಾದ ಇವರು ಅಡುಗೆಯ ಬಗ್ಗೆ ಏನಾದರೂ ಬರೆದಿಟ್ಟಿದ್ದಾರೆಯೇ?
ಇತ್ತೀಚೆಗೆ ಧಾರವಾದಕ್ಕೆ ಹೋದಾಗ ಅಲ್ಲಿ ಸುಂದರವಾದ ಮತ್ತು ಹೊಸದಾದ ಕಟ್ಟಡದಲ್ಲಿ ಆರಂಭವಾಗಿರುವ ಮತ್ತು ಉತ್ತರ ಕರ್ನಾಟಕದಲ್ಲಿಯೇ ಅತಿ ದೊಡ್ಡ ಪುಸ್ತಕ ಮಳಿಗೆ ಎಂಬ ಖ್ಯಾತಿಯನ್ನು ಸದ್ಯಕ್ಕೆ ಹೊಂದಿರುವ ಭಾರತ್ ಬುಕ್ ಡೀಪೋಕ್ಕೆ ಹೋಗಿದ್ದೆ. ಅಲ್ಲಿ ನಳಮಹಾರಾಜಕೃತ ಪಾಕಶಾಸ್ತ್ರ ಮತ್ತು ಭೀಮಸೇನವಿರಚಿತ ಸೂಪತಂತ್ರ ( -ಕೃತಿಕಾರರು ಮತ್ತು ಅವರ ಕೃತಿಗಳ ಹೆಸರು ಅದಲು ಬದಲಾಗಿರಬಹುದು, ನನಗೆ ಸರಿಯಾಗಿ ನೆನಪಿಲ್ಲ ) ಎಂಬ ಪುಟ್ಟ ಪುಸ್ತಕ ನೋಡಿದೆ! ಸಂಸ್ಕೃತ ಮೂಲ ಮತ್ತು ಕನ್ನಡ ಅನುವಾದ ಇಲ್ಲಿದೆ . ಬೆಲೆ ಐವತ್ತು ರೂಪಾಯಿ ಮಾತ್ರ. ಅಡುಗೆಯವನಿಗೆ ಅದರಲ್ಲಿ ಪಾಚಕ ಎಂಬ ಶಬ್ದ ಬಳಸಿದ್ದಾರೆ . ಇಂಗ್ಲೀಶಿನ ಸೂಪ್ ಮತ್ತು ೧೬ನೇ ಶತಮಾನದ ಪುರಂದರದಾಸರ ರಚನೆಯಲ್ಲಿ ಬರುವ ಸೂಪ ಒಂದೇ ಎಂಬ ಬಗ್ಗೆ ನಿಮಗೆ ಗೊತ್ತಿರಬಹುದು. ಇಲ್ಲಿ ಸೂಪತಂತ್ರ ಎಂದೇ ಕೃತಿಯ ಹೆಸರು. ಸಂಸ್ಕೃತದಲ್ಲಿಯೇ ಸೂಪ ಶಬ್ದ ಸಾವಿರ ವರ್ಷಕ್ಕಿಂತಲೂ ಹಿಂದೆಯೇ ಇದೆ ನೋಡಿ.
Comments
ಉ: ನಳ ಮತ್ತು ಭೀಮರ ಅಡುಗೆ ಪುಸ್ತಕಗಳು!
ರಸಭರಿತ ವಿಚಾರ ತಿಳಿಸಿದ್ದೀರಿ, ಧನ್ಯವಾದ.
ಉ: ನಳ ಮತ್ತು ಭೀಮರ ಅಡುಗೆ ಪುಸ್ತಕಗಳು!
DLI ನಲ್ಲು ನಳಪಾಕದ ಒಂದು ಪುಸ್ತಕವಿದೆ 1947 ಇಸವಿಯದು ಎಂದು ನನ್ನ ಕಂಪ್ಯೂಟರ್ ನಲ್ಲಿ ಅದೆಕೊ ಒಪನ್ ಆಗುತ್ತಿಲ್ಲ ಓದಿನೋಡಿ
In reply to ಉ: ನಳ ಮತ್ತು ಭೀಮರ ಅಡುಗೆ ಪುಸ್ತಕಗಳು! by partha1059
ಉ: ನಳ ಮತ್ತು ಭೀಮರ ಅಡುಗೆ ಪುಸ್ತಕಗಳು!
ಪಾರ್ಥರೇ , ಆ ಪುಸ್ತಕ ಕೆರೂರು ವಾಸುದೇವಾಚಾರ್ಯರ - 'ಐದಂಕಿನ ಸಂಗೀತಪ್ರಧಾನ ಪೌರಾಣಿಕ ನಾಟಕ' ಆಗಿದ್ದರೆ ಅದನ್ನು ಇಳಿಸಿಕೊಂಡಿದ್ದೇನೆ - ಓದುವುದು ಬಾಕಿ ಅಷ್ಟೇ :( ,