'ದ ತ್ರಿ ಮಿಸ್ಟೇಕ್ಸ್ ಆಫ್ ಮೈ ಲೈಫ್'
ಚೇತನ್ ಭಗತ್ ಬರೆದ 'ದ ತ್ರಿ ಮಿಸ್ಟೇಕ್ಸ್ ಆಫ್ ಮೈ ಲೈಫ್' ನಿಜಕ್ಕೂ ಆಸಕ್ತಿ ಮೂಡಿಸುವಂತಹ ಪುಸ್ತಕ. ಮೇಲ್ನೋಟಕ್ಕೆ ಅಹಮದಾಬಾದ್ ನ ಮೂರು ಗೆಳೆಯರ ಜೀವನದ ಭಿನ್ನ ಆಸಕ್ತಿ, ದ್ವಂದ್ವ, ನೋವು-ನಲಿವುಗಳ ಕಥೆಯಂತೆ ಕಂಡರೂ, ಕಥೆಯೊಳಗೆ ಇಳಿದಾಗ ಭಾರತೀಯ ಸಮಾಜ, ಧರ್ಮ, ಕ್ರಿಕೆಟ್, ವ್ಯಾಪಾರಗಳ ಬಗ್ಗೆ ಆಳವಾದ ಅರಿವು ಮೂಡಿಸುವುದಂತೂ ಸತ್ಯ..ಮೂರು ಗೆಳೆಯರಲ್ಲಿ, ಗೋವಿಂದ್ ಬಡ ಕುಟುಂಬದ ಹುಡುಗ, ಲೆಕ್ಕದಲ್ಲಿ ಪಕ್ಕಾ, ಬಿಸಿನೆಸ್ ಮಾಡಿ ಸಿರಿವಂತನಾಗಬೇಕೆಂಬ ಅದಮ್ಯ ಬಯಕೆ. ಇಶಾಂತ್ ಮಧ್ಯಮ ಕುಟುಂಬದ ಯುವಕ, ಭಾರತೀಯ ಸೇನೆಯ ಸೇವೆಯನ್ನು ಬಿಟ್ಟು ಬಂದು ಒಂದು ವರ್ಷವಾದರೂ ಬೇರೆ ಕೆಲಸವಿಲ್ಲ, ಕ್ರಿಕೆಟ್ನಲ್ಲಿನ ಆಸಕ್ತಿಯಿಂದಾಗಿ ಬೇರೆ ಯಾವ ಕೆಲಸದಲ್ಲೂ ಆಸಕ್ತಿಯಿಲ್ಲ. ಮೂರನೆಯವನು ಓಮಿ, ಅರ್ಚಕರ ಮಗ, ಗೊತ್ತುಗುರಿಯಿಲ್ಲದ ಜೀವನ. ಈ ಮೂವರು ಕಥಾನಾಯಕರ ಕಥೆಯೇ 'ದ ತ್ರಿ ಮಿಸ್ಟೇಕ್ಸ್ ಆಫ್ ಮೈ ಲೈಫ್'.
ವ್ಯಾಪಾರ ಪ್ರಾರಂಭಿಸಬೇಕೆಂಬ ಗೋವಿಂದ್ ಆಸೆ, ಸೈನ್ಯ ಬಿಟ್ಟು ಬಂದಂದಿನಿಂದ ಮನೆಯಲ್ಲಿ ಅಪ್ಪನ ಕಿರಿ ಕಿರಿ ತಾಳಲಾರದೆ ಇಶಾನ್, ಅರ್ಚಕ ವೃತ್ತಿ ಬಿಟ್ಟು ಬೇರೆನನ್ನೋ ಮಾಡಬೇಕು ಎಂಬ ಓಮಿಯ ಅಸಂಬದ್ಧ ಆಸೆಗಳೆಲ್ಲವೂ ಸೇರಿ ಗೋವಿಂದ್ ಕನಸಿನ ವ್ಯಾಪಾರ, 'ದ ಟೀಮ್ ಇಂಡಿಯಾ ಕ್ರಿಕೆಟ್ ಶಾಪ್' ಎಂಬ ಹೆಸರಿನಲ್ಲಿ ಶುರುವಾಗಿಯೇ ಬಿಟ್ಟಿತು. ಕ್ರೀಡಾ ಸಾಮಗ್ರಿಗಳಷ್ಟೇ ಅಲ್ಲದೇ ಇಶಾನ್ ಕ್ರಿಕೆಟ್ ಕೋಚಿಂಗ್ ಕೊಡಲಾರಂಭಿಸಿದ. ದಿನೇ ದಿನೇ ವ್ಯಾಪಾರ ವೃದ್ಧಿಸುತ್ತಾ, ಗೋವಿಂದ್ ಕನಸು ನನಸಾಗುವ ದಾರಿಯಲ್ಲಿತ್ತು. ಹೀಗೆ ಮುಂದುವರಿಯುತ್ತಾ ಈ ಮೂವರು ಗೆಳೆಯರ ಜೀವನದಲ್ಲಿ ಏರಿಳಿತಗಳು ಬೇರೆ ಬೇರೆ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಅಯೋಧ್ಯೆಯಿಂದ ವಾಪಾಸಾದ ಓಮಿಯ ಸೋದರ ಮಾವ ಬಿಟ್ಟೂಮಾಮ ಈ ಮೂವರು ಗೆಳೆಯರನ್ನು ರಾಜಕೀಯ ಸಭೆ, ಕೋಮು ಚಟುವಟಿಕೆಗಳಿಗೆ ಪ್ರಚೋದಿಸುತ್ತಾರೆ. ಗೋವಿಂದ್, ಇಶಾನ್ ಮತ್ತು ಓಮಿ ಇಷ್ಟವಿಲ್ಲದಿದ್ದರೂ ಇಕ್ಕಟ್ಟಿಗೆ ಸಿಲುಕಿ, ಬಿಟ್ಟೂಮಾಮ ತಾಳಕ್ಕೆ ಕುಣಿಯಬೇಕಾಗುತ್ತದೆ. ಇನ್ನೊಂದು ಕಡೆ, ವೈದ್ಯಕೀಯ ಪ್ರವೇಶ ಪರೀಕ್ಷೆಗೆ ತಯಾರಿ ನಡೆಸುವ ಇಶಾನ್ ಸೋದರಿ ವಿದ್ಯಾ, ಮತ್ತು ಅವಳಿಗೆ ಮನೆಪಾಠ (ಟ್ಯೂಷನ್) ಹೇಳಿಕೊಡುವ ಗೋವಿಂದ್ ನಡುವೆ ಪ್ರೇಮ ಪ್ರಸಂಗ, ಇವೆಲ್ಲದರ ಗೊಡವೆಯೇ ಇಲ್ಲದ ಇಶಾನ್ಗೆ ಆಲಿ ಎಂಬ ಹುಡುಗನ ಪರಿಚಯವಾಗುತ್ತದೆ. ಆಲಿಯ ಅದ್ಭುತ ಪ್ರತಿಭೆಯಿಂದ ಉತ್ತೇಜಿತನಾದ ಇಶಾನ್, ಆಲಿಯನ್ನು ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗುವಂತೆ ಮಾಡಲು ಪಡಬಾರದ ಪಾಡು ಪಡುತ್ತಾನೆ.
ಇವೆಲ್ಲದರ ನಡುವೆಯೂ ಮೂರೂ ಗೆಳೆಯರ ಸ್ನೇಹ, ಕಥೆಯನ್ನು ಊರುಗೋಲಂತೆ ಮುನ್ನಡೆಸುತ್ತದೆ. ಈ ಸಂದರ್ಭದಲ್ಲಿ ಎಲ್ಲೋ ಆದ ರೈಲು ದುರಂತ ಇವರ ಸ್ನೇಹದಲ್ಲಿ ಬಿರುಗಾಳಿಯೆಬ್ಬಿಸುತ್ತದೆ. ಕೋಮುಗಳ ಸಂಘರ್ಷದಲ್ಲಿ ರೈಲಿಗೆ ಬೆಂಕಿ ಬಿದ್ದು, ಬಿಟ್ಟುಮಾಮನ ಮಗನ ಸಹಿತ ಹಲವರು ಪ್ರಾಣ ಕಳೆದುಕೊಳ್ಳತ್ತಾರೆ. ಇದೇ ಬಿಸಿ ಬರ್ಹಾನ್ಪುರಕ್ಕೂ ತಟ್ಟುತ್ತದೆ. ಆಲಿಯ ತಂದೆ ತಾಯಿಗಳಿಬ್ಬರೂ ಕೋಮು ದಳ್ಳುರಿಗೆ ಬಲಿಯಾಗುತ್ತಾರೆ, ಆಲಿ, ಇಶಾನ್, ಗೋವಿಂದ್ ಮತ್ತು ಓಮಿ ತಮ್ಮ ಸ್ಪೋರ್ಟ್ಸ್ ಶಾಪ್ನ ಎದುರಿಗಿರುವ ಪಾಳುಬಿದ್ದ ಬ್ಯಾಂಕ್ ಕಟ್ಟಡದಲ್ಲಿರುತ್ತಾರೆ, ಗಲಾಟೆಯ ಕಾರಣದಿಂದ ರಾತ್ರಿಯೂ ಅಲ್ಲೇ ಉಳಿದುಕೊಳ್ಳಬೇಕಾಗುತ್ತದೆ. ಮಗನನ್ನು ಕಳೆದುಕೊಂಡ ಬಿಟ್ಟೂ ಮಾಮ, ಪಾನಮತ್ತನಾಗಿ, ಒಂದು ತಂಡದೊಂದಿಗೆ ಆಲಿಯನ್ನು ಹುಡುಕುತ್ತಾನೆ. ಆಲಿಯನ್ನು ಹುಡುಕುತ್ತಾ, ಪಾಳುಬಿದ್ದ ಬ್ಯಾಂಕ್ ಕಟ್ಟಡದ ಬಳಿಗೆ ಬರುತ್ತಾನೆ. ಆಲಿ ಭಾರತದ ಕ್ರಿಕೆಟ್ ಭವಿಷ್ಯವನ್ನು ರೂಪಿಸುವ, ಮಹಾನ್ ಪ್ರತಿಭೆಯೆಂದು ನಂಬಿದ್ದ ಇಶಾಂತ್, ಗೋವಿಂದ್ ಮತ್ತು ಓಮಿ, ಓಮಿಯನ್ನು ರಕ್ಷಿಸಲು ಶತಾಯಗತಾಯ ಪ್ರಯತ್ನಪಡುತ್ತಾರೆ. ಈ ಪ್ರಯತ್ನದಲ್ಲೇ ಓಮಿ ಪ್ರಾಣತ್ಯಾಗ ಮಾಡುತ್ತಾನೆ, ಆಲಿಯ ಕೈಗೆ ಬಲವಾದ ಪೆಟ್ಟು ಬೀಳುತ್ತದೆ, ಬಿಟ್ಟೂಮಾಮ ಸಾವನ್ನಪ್ಪುತ್ತಾನೆ. ಗೋವಿಂದ್ ಮತ್ತು ವಿದ್ಯಾಳ ವಿಷಯ ತಿಳಿದು, ಇಶಾಂತ್ ಗೋವಿಂದ್ನಿಂದ ದೂರವಾಗುತ್ತಾನೆ. ಇಶಾಂತ್ ಆಲಿಯ ಕೈ ಶಸ್ತ್ರಚಿಕಿತ್ಸೆಗಾಗಿ ಹಣ ಒಟ್ಟು ಮಾಡುತ್ತಾನೆ. ಕೊನೆಯಲ್ಲಿ ಲೇಖಕ ಇಬ್ಬರೂ ಗೆಳೆಯರನ್ನು ಒಟ್ಟುಗೂಡಿಸಿ, ಕಥೆಯನ್ನು ಸುಖಾಂತ್ಯಗೊಳಿಸುತ್ತಾನೆ.
ಒಟ್ಟಾರೆ ಚೇತನ್ ಭಗತ್ ಸ್ನೇಹಿತರ ಜೀವನದಲ್ಲೇ, ಪ್ರತಿಯೊಬ್ಬ ಸಾಮಾನ್ಯ ವ್ಯಕ್ತಿಯ ಧಾರ್ಮಿಕ, ರಾಜಕೀಯ, ವ್ಯಾವಹಾರಿಕ ದೃಷ್ಠಿಕೋನಗಳು, ಅದಕ್ಕೆ ತಕ್ಕಂತೆ ಅವರು ರೂಪಿಸಿಕೊಳ್ಳುವ ಅವರ ಗುರಿಗಳು, ಅವರಿಗೆದುರಾಗುವ ಸಾಮಾಜಿಕ ಪರಿಸ್ಥಿತಿಗಳು ಮತ್ತು ಪ್ರತಿಕ್ರಿಯೆಗಳನ್ನು ಕಟ್ಟೀಕೊಡುವಲ್ಲಿ 'ತ್ರಿ ಮಿಸ್ಟೇಕ್ಸ್ ಇನ್ ಮೈ ಲೈಫ್' ಯಶಸ್ವಿಯಾಗುತ್ತದೆ.
Comments
ಉ: 'ದ ತ್ರಿ ಮಿಸ್ಟೇಕ್ಸ್ ಆಫ್ ಮೈ ಲೈಫ್'
ಕೀರ್ತಿರಾಜ್ ನಮಸ್ಕಾರ,
ಚೇತನ್ ಭಗತರ ಐದಾರು ಪುಸ್ತಕಗಳನ್ನು ಈಚೆಗೆ ತಾನೆ ಭಾರತಕ್ಕೆ ಬಂದಾಗ ಕೊಂಡುಕೊಂಡೆ. ಅದರಲ್ಲಿ ಇದೂ ಒಂದು. ತೀರಾ ದುಬಾರಿಯಲ್ಲದ ರೀತಿಯಲ್ಲಿ ಹೊರಬರುವ ಇವರ ಇಂಗ್ಲೀಷ್ ಪುಸ್ತಕಗಳು ಓದುವಲ್ಲಿ ಸರಳವಾಗಿ ಕೂತೂಹಲಕಾರಿಯಾಗಿರುವುದು ನಿಜ. ಧನ್ಯವಾದಗಳು.
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು
In reply to ಉ: 'ದ ತ್ರಿ ಮಿಸ್ಟೇಕ್ಸ್ ಆಫ್ ಮೈ ಲೈಫ್' by nageshamysore
ಉ: 'ದ ತ್ರಿ ಮಿಸ್ಟೇಕ್ಸ್ ಆಫ್ ಮೈ ಲೈಫ್'
ನಮಸ್ಕಾರ ನಾಗೇಶ್ರವರಿಗೆ., ನೀವು ಹೇಳಿದ್ದು ನಿಜ, ಚೇತನ್ ಭಗತ್ರ ಸರಳ ನಿರೂಪಣೆ ನಿಜಕ್ಕೂ ಅದ್ಭುತ. ಪ್ರತಿಕ್ರಿಯೆಗೆ ಧನ್ಯವಾದ.
ಮಾನ್ಯರೇ ನೀವು ಚೇತನ್ ಭಗತ್ ರ…
ಮಾನ್ಯರೇ ನೀವು ಚೇತನ್ ಭಗತ್ ರ ಕಾದಂಬರಿ 'ತ್ರೀ ಮಿಸ್ಟೇಕ್ಸ್ ಆಫ್ ಮೈ ಲೈಫ್' ಬಗ್ಗೆ ಬರೆದ ಪರಿಚಯ ಓದಿದೆ. ಪುಸ್ತಕ ಓದುವ ಮನಸ್ಸಾಗಿದೆ. ನೀವು ೨೦೧೪ರಲ್ಲಿ ಬರೆದ ಈ ಪುಸ್ತಕ ಪರಿಚಯ ಇಂದು ಸಂಪದದಲ್ಲಿ ಏನೋ ಹುಡುಕಾಟದಲ್ಲಿದ್ದಾಗ ನನ್ನ ಕಣ್ಣಿಗೆ ಬಿತ್ತು. ಪುಸ್ತಕ ಮಾರುಕಟ್ಟೆಗೆ ಬಂದು ತುಂಬಾ ಸಮಯವಾಗಿದೆ. ಓದಲು ಸಿಗುವುದೋ ನೋಡಬೇಕು. ಇಂಥಹ ಹತ್ತು ಹಲವಾರು ಪುಸ್ತಕಗಳ ಬಗ್ಗೆ ನೀವು ಯಾಕೆ ಸಂಪದದಲ್ಲಿ ಬರೆಯುವುದನ್ನು ಮುಂದುವರೆಸಬಾರದು. ಇಂಗ್ಲೀಷ್ ಪುಸ್ತಕದ ಅಲರ್ಜಿ ಇರುವ ನಮ್ಮಂಥವರಿಗೆ ಅದನ್ನೂ ಓದಬೇಕು ಅನ್ನೋ ಪ್ರೇರಣೆಯಾದರೂ ಸಿಗುತ್ತದೆ ಅಲ್ಲವೇ?
ದಯವಿಟ್ಟು ಬರೆಯಿರಿ
ಅಶ್ವಿನ್