ಫ್ಲಾಟ್ ಕೊಳ್ಳುವ ಮುನ್ನ ೨
( http://sampada.net/blog/%E0%B2%AB%E0%B3%8D%E0%B2%B2%E0%B2%BE%E0%B2%9F%E0... )
ಫ್ಲಾಟ್ ಕೊಂಡು ವರ್ಷವಾಗುತ್ತಾ ಬಂದರು ಆಮೆಗತಿಯಲ್ಲಿ ಕೆಲಸ ನಡೆಯುತ್ತಿರುವುದು ಕಂಡಾಗ, ಫ್ಲಾಟ್ ವಾಸಿಗಳು ಒಬ್ಬೊಬ್ಬರೇ ಪ್ರಶ್ನಿಸಲು ಪ್ರಾರಂಭಿಸುವರು. ಇವರೆಲ್ಲಾ ಒಗ್ಗಟ್ಟಾಗಿ "ಫ್ಲಾಟ್ ವಾಸಿಗಳ ಅಸೋಷಿಯೇಶನ್" ಮಾಡಿಯಾರು ಎಂಬ ಸುಳಿವು ಸಿಕ್ಕ ಕೂಡಲೇ ಬಿಲ್ಡರ್ ಕಡೆಯ ಒಬ್ಬ ಮೀಟಿಂಗ್ ಕರೆದು "ನಮಗೆ ಆ ಕಷ್ಟ, ಈ ಕಷ್ಟ... ಆದರೂ ಮೈಂಟೈನ್ ಮಾಡುತ್ತಿದ್ದೇವೆ..." ಎಂದೆಲ್ಲಾ ಹೇಳಿ, "ಮೈಂಟೆನೆನ್ಸ್ ಹಣ* ಜಾಸ್ತಿ ಮಾಡಿದರೆ ಕೆಲಸ ಬೇಗ ಆಗುವುದು" ಎನ್ನುವರು. ಅವರ ಮಾತಿನ ಮೋಡಿ ಹೇಗಿರುತ್ತದೆಂದರೆ, ಕೆಲವರು ಆಗಲೇ ಜಾಸ್ತಿ ಕೊಡಲು ತಯಾರಾಗಿರುತ್ತಾರೆ.
ಅವರಿಗೆಲ್ಲಾ ವಿವರಿಸಿ ಹೇಳಿ, ಎಲ್ಲರನ್ನೂ ಒಟ್ಟು ಸೇರಿಸಿ, ಅಸೋಷಿಯೇಶನ್ ಮಾಡಿ ನಾವೇ ಅಪಾರ್ಟ್ಮೆಂಟ್ನ ಮೈಂಟೆನೆನ್ಸ್ ನೋಡಿಕೊಳ್ಳುವೆವು ಎಂದಿರೋ, " ಈಗೇನೋ ಒಗ್ಗಟ್ಟಾಗಿರುವಿರಿ. ನಂತರ ನಿಮ್ಮೊಳಗೇ ಜನತಾ, ಬಿಜೆಪಿ, ಕಾಂಗೈ ಪಾರ್ಟಿಗಳಾಗುವುದು, ಮತ್ತೆ ನಮ್ಮ ಬಳಿ ಬರುವಿರಿ" ಎಂದು ಚಾಲಾಕಿ ಬುದ್ಧಿ ತೋರಿಸುವರು.
ಅಸೋಷಿಯೇಶನ್ ಮಾಡಿ ಅವರು ಹೇಳಿದ್ದಕ್ಕಿಂತ ಅರ್ಧ ದರದಲ್ಲೇ ಮೈನ್ಟೈನ್ ಮಾಡಿ ತೋರಿಸಿದರೆ, ಬೇನಾಮಿ ಹೆಸರಲ್ಲಿ ತಮ್ಮ ಕೈಯಲ್ಲೇ ಇಟ್ಟುಕೊಂಡ ಫ್ಲಾಟ್ಗಳ ಮೈನ್ಟೆನೆನ್ಸ್ ಹಣ ಕೊಡದೇ ಸತಾಯಿಸುವರು. ಮೊದಲೇ ತೆಗೆದುಕೊಂಡಿರುವ ಕಾರ್ಪಸ್ ಫಂಡ್ (ಆಪದ್ಧನ?)ನ್ನು ಅಸೋಷಿಯೇಶನ್ಗೆ ಹಸ್ತಾಂತರಿಸಬೇಕೆಂಬ ಕಾನೂನಿದ್ದರೂ ಕೊಡುವುದಿಲ್ಲ.
ಆಗಬೇಕಾದ ಕೆಲಸಗಳ ಬಗ್ಗೆ ಫೋನ್, ಇಮೈಲ್, ರಿಜಿಸ್ಟರ್ಡ್ ಪೋಸ್ಟ್ ಮಾಡಿ ವಿಚಾರಿಸಿದರೆ, ಒಬ್ಬರು ಇನ್ನೊಬ್ಬರ, ಅವರು ಮತ್ತೊಬ್ಬರ ಬಳಿ ವಿಚಾರಿಸಲು ಹೇಳುವರು. ಇನ್ನೂ ಒತ್ತಾಯಿಸಿದರೆ ಬೆದರಿಸಲು ನೋಡುವರು. ರಾಜಕಾರಣಿಗಳು, ಅಧಿಕಾರಿಗಳು, ಪೋಲೀಸರು ಇವರ ಜೇಬೊಳಗೆ ಇರುವರು(ಎನ್ನುವಂತೆ ವರ್ತಿಸುವರು). ಅದಕ್ಕೂ ಬಗ್ಗದಿದ್ದಾಗ ರೌಡಿಗಳ ಭಯ ತೋರಿಸುವರು!
ಫ್ಲಾಟ್ ಕೊಳ್ಳುವಾಗ ಎಷ್ಟು ನಯವಾಗಿ ಮಾತನಾಡಿರುತ್ತಾರೋ, ಅದೇ ಕೊಂಡಾದ ಮೇಲೆ ಮೀಟಿಂಗ್ ಮಾಡುವ ರೀತಿಯೇ ಬೇರೆ-
ತನ್ನ ಹಿಂಬಾಲಕರು ಹತ್ತು ಜನರೊಂದಿಗೆ ಸಿನಿಮಾದಲ್ಲಿ ರೌಡಿಗಳು ಎಂಟ್ರಿ ಹಾಕುವಂತೆ ಬರುವರು. ಕಾರಣವಿಲ್ಲದೇ ಯಾರಾದರೊಬ್ಬ ಪಾಪದವನ ಮೇಲೆ ಮುಗಿಬಿದ್ದು, ಅವನಿಗೆ ಮಾತನಾಡಲೂ ಅವಕಾಶವಿಲ್ಲದಂತೆ ಸ್ವರವೇರಿಸಿ ಬೈಯಲು ಪ್ರಾರಂಭಿಸುವರು. ಹೀಗೆ ಭಯದ ವಾತಾವರಣ ಕ್ರಿಯೇಟ್ ಮಾಡಿದ ನಂತರ ಸಭೆ...
ಇದನ್ನೆಲ್ಲಾ ಇಲ್ಲಿ ಯಾಕೆ ಹೇಳಿದ್ದೆಂದರೆ-ಈ ಬಿಲ್ಡರ್ಗಳು ಪತ್ರಿಕೆಗಳಲ್ಲಿ ಅಪಾರ್ಟ್ಮೆಂಟ್ಗಳ ದೊಡ್ಡದೊಡ್ಡ ಜಾಹೀರಾತು ನೀಡಿ, ಫ್ಯಾಂಟಸಿ ಲೋಕವನ್ನೇ ಸೃಷ್ಟಿಮಾಡುವರು. ಅಲ್ಲಿ ಅವರು ತೋರಿಸಿದ ರೇಟು, ತಮ್ಮ ಬಜೆಟ್ನೊಳಗೆ ಬರುವುದು, ಎಂದಾಲೋಚಿಸಿ ಮಧ್ಯಮ ವರ್ಗದ ಜನ, ತಾವು ಕೂಡಿಟ್ಟ ಹಣ+ಬ್ಯಾಂಕ್ ಲೋನ್ ಮಾಡಿ ಹೇಗೋ ಹೊಂದಿಸಿ, ತಮ್ಮ ಕನಸಿನ ಫ್ಲಾಟ್ ಖರೀದಿಸುವರು. ಪಾಪ.. ೧೭% ಗೂ ಜಾಸ್ತಿ ಬಡ್ಡಿಗೆ ಲೋನ್ ತೆದುಕೊಂಡಿರುವವರೂ ಇದ್ದಾರೆ.
ಮನೆಗೆ ಬಂದ ಕೆಲದಿನಗಳಲ್ಲೇ ಗೊತ್ತಾಗುವುದು-
-BWSSBಯ ಕಾವೇರಿ ನೀರು ಕನಸು! ಆ ಊರಿನ ಕಡೆ BWSSB ಪೈಪ್ ಲೈನೇ ಬಂದಿರುವುದಿಲ್ಲ.
-ಕೇವಲ ೭೦೦-೮೦೦ ಅಡಿ ತೆಗೆದ ಬೋರ್ವೆಲ್ ನೂರಾರು ಮನೆಗೆ ನೀರು ಒದಗಿಸಲು ಒದ್ದಾಡಿ, ಬೇಸಗೆ ಬರುವ ಮೊದಲೇ ರೆಸ್ಟ್ ತೆಗೆದುಕೊಳ್ಳುವುದು.
-ಒಳಚರಂಡಿ(sewage) ಕನೆಕ್ಷನ್ ಸರಿ ಇರುವುದಿಲ್ಲ. ಬ್ಲಾಕ್ ಆದಾಗ, ಅಪಾರ್ಟ್ಮೆಂಟ್ನ ಮೂಲೆಯಲ್ಲಿ ಒಂದು ಹತ್ತಡಿ><ಹತ್ತಡಿ ಪಿಟ್ ತೆಗೆದು, ಅದಕ್ಕೆ ಕನೆಕ್ಟ್ ಮಾಡಿ, ಏನೋ ಭಾರೀ ಉಪಕಾರ ಮಾಡಿದವರ ಹಾಗೆ ಮಾತನಾಡುವರು.
-"A Khata" ಇಲ್ಲ.
-ಪೊಸೆಷನ್ ಸರ್ಟಿಫಿಕೇಟ್ ಇಲ್ಲ.
......
ಕೆಲ ಜನರು "fed up" ಎಂದು ಬೇಸರ ವ್ಯಕ್ತಪಡಿಸುತ್ತಿದ್ದರೆ, ಪೇಪರಲ್ಲಿ ಅದೇ ಬಿಲ್ಡರ್ಗಳ ಹೊಸ ಹೊಸ ಪ್ರಾಜೆಕ್ಟಗಳ ಜಾಹೀರಾತು ಬರುತ್ತಿರುವುದು.
ಕೊನೆಗೆ ಉಳಿದಿರುವುದು ಎರಡೇ ಆಪ್ಶನ್. ಸುಮ್ಮನಿರುವುದು ಅಥವಾ ಕನ್ಸೂಮರ್ ಕೋರ್ಟ್ಗೆ ಹೋಗುವುದು. ಅವರಿಗೆ ಹಣದ ಮದ ಎಷ್ಟಿರುವುದೆಂದರೆ "ಹೋಗ್ರಿ, ಕೋರ್ಟ್ನಲ್ಲೇ ನೋಡೋಣ... ಇಪ್ಪತ್ತು ವರ್ಷ ಕೇಸ್ ಮುಂದುವರೆಸುವೆ....." ಎನ್ನುವರು.
__________________
*ಮೈಂಟೆನೆನ್ಸ್ ಹಣ* :-
ಸೆಕ್ಯೂರಿಟಿ, ಕಾಮನ್ ಏರಿಯಾದ ಲೈಟ್, ಲಿಫ್ಟ್ ಇತ್ಯಾದಿಗಳ ಖರ್ಚಿಗೆಂದು ತಿಂಗಳು, ತಿಂಗಳು ಫ್ಲಾಟ್ ವಾಸಿಗಳಿಂದ ಪಡೆಯುವ ಹಣ. ಉದಾಹರಣೆಗೆ ಮೈಂಟೆನೆನ್ಸ್ ಹಣ ಈ ತಿಂಗಳು ಸ್ಕ್ವಾರ್ ಫೂಟ್ಗೆ ೩ ರೂನಂತೆ ಎಂದಿದ್ದರೆ- ೨೦೦೦ ಸ್ಕ್ವಾರ್ ಫೂಟ್ನ ಮನೆಯವನು ೨೦೦೦><೩=೬೦೦೦ರೂ ಆ ತಿಂಗಳು ಕೊಡಬೇಕು. ಹೆಚ್ಚಿನ ಬಿಲ್ಡರ್ಗಳು ವರ್ಷದ ಮೈಂಟೆನೆನ್ಸ್ ಹಣ ಮೊದಲೇ ಒಟ್ಟಿಗೆ ತೆಗೆದುಕೊಳ್ಳುವರು(೬೦೦೦><೧೨=೭೨೦೦೦). ೩ ವರ್ಷದ್ದೂ ಒಟ್ಟಿಗೆ ತೆಗೆದುಕೊಂಡು ಇನ್ನೂ ಸಾಲುವುದಿಲ್ಲ ಅನ್ನುವವರೂ ಇರುವರು!
Comments
ಉ: ಫ್ಲಾಟ್ ಕೊಳ್ಳುವ ಮುನ್ನ ೨
ಸಣ್ಣ ನಗರಗಳೇ ವಾಸಿ!
In reply to ಉ: ಫ್ಲಾಟ್ ಕೊಳ್ಳುವ ಮುನ್ನ ೨ by kavinagaraj
ಉ: ಫ್ಲಾಟ್ ಕೊಳ್ಳುವ ಮುನ್ನ ೨
ಗಣೇಶ್ ಅಣ್ಣಾ - ದಿನ ನಿತ್ಯ ಪತ್ರಿಕೆಗಳಲ್ಲಿ ಜಾಹೀರಾತು(ಅದೇ ಬಣ್ಣ ಬಣ್ಣದ ..!!)ನೋಡಿ ಓದಿ , ಅಲ್ಲಿ ಒಮ್ಮೆ ವಾಸಿಸುವ ಮನಸಾಗದೆ ಇರದು ... ಆದರೆ ಅದರ್ ಆಸಲಿಯತ್ತು ಅವರ ಮಸಲತ್ತು ಹೀಗೆಲ್ಲ ಇರಲಿದೆ (ಬಹುಪಾಲು ಅಪಾರ್ಟ್ ಮೆಂಟಗಳಲ್ಲಿ)ಎಂದು ತಿಳಿದು ಅಲ್ಲಿ ಈಗಾಗಲೇ ಸೇರಿರುವವರ ಪರಿಸ್ತಿತಿ ಕೇಳಿ ವ್ಯಥೆ ಆಯ್ತು ..
ಜೀವನದ ಕೂಡಿಟ್ಟ ಅಮೂಲ್ಯ ಹಣವನ್ನ ಅವರ ಕೈಗೆ ಹಾಕಿ ಹೀಗೆಲ್ಲ ಪರಿಸ್ಥಿತಿ ಎದುರಿಸಬೇಕೆ?
ಸರಕಾರಿ ಅಧಿಕಾರಿಗಳು ತೋಳ್ಬಲ ಬಾಯ್ಬಲ ಇರುವವರಿಗೆ ಇದು ಕಾಲವೇ?
ಕೋರ್ಟು ಕಚೇರಿ ಎಂದು ತಿರುಗಿ ಕೊನೆಗೂ ನ್ಯಾಯ ನಂ ಕಡೆ ಆಗುವುದು ಎಂಬ ಖಾತರಿ ಇಲ್ಲ ..:(( ಸಿಕ್ಕರೂ ಈ ಧಾಂಡಿಗರ ಭಯ ...!!
ನೀವ್ ಇದಕ್ಕೆ ಭಾಗ 2 ಎಂದು ಹಾಕಿರುವುದು ನೋಡಿದರೆ ಈ ಸರಣಿ ಮುಂದುವರೆಯುವ ಹಾಗಿದೆ ..!!
ಫ್ಲ್ಯಾಟ್ಸ್ ಅಪಾರ್ಟ್ಮೆಂಟ್ಸ್ ಕುರಿತ ಕಾನೂನು ಮಾಹಿತಿ ಸಲಹೆ -ಖಾಯಿದೆಗಳ ಬಗ್ಗೆ
ಕೆಳಗೆ ಕೆಲವು ಉಪಯೋಗವಾಗಬಹುದಾದ ಲಿಂಕ್ಸ್ ಇವೆ ನೋಡಿ :http://bit.ly/L5Gb6w
http://ekikrat.in/Under-What-Circumstances-Can-You-File-Complaint-Agains...
http://bit.ly/1k0rLl5
http://bit.ly/1d5HLw5
http://bit.ly/1b43ULA
ಈ ತರ್ಹದ ಮಾಹಿತಿಗಳನ್ನು ತಿಳಿಸಿ ಮಹದುಪಕಾರ ಮಾಡಿರುವ ನಿಮಗೆ ನನ್ನಿ ..
ಶುಭವಾಗಲಿ
\|/
In reply to ಉ: ಫ್ಲಾಟ್ ಕೊಳ್ಳುವ ಮುನ್ನ ೨ by venkatb83
ಉ: ಫ್ಲಾಟ್ ಕೊಳ್ಳುವ ಮುನ್ನ ೨
ಸಪ್ತಗಿರಿವಾಸಿಯವರೆ, ಕೊಂಡಿಗಳಿಗೆ(ಒಂದೆರಡು ನನಗೆ ಬೇಕಾಗಿದ್ದದ್ದೇ) ಧನ್ಯವಾದಗಳು. ಪುಣ್ಯಕ್ಕೆ ನಮ್ಮ ಫ್ಲಾಟ್ ವಾಸಿಗಳು ಒಗ್ಗಟ್ಟಾಗಿರುವುದರಿಂದ ನಮ್ಮಲ್ಲಿ ಎಲ್ಲಾ ಸವಲತ್ತುಗಳು ಸ್ವಲ್ಪ ತಡವಾದರೂ ಸಿಗುತ್ತಿವೆ.
ಆದರೆ ಉಳಿದ ಕಡೆ ಹೀಗಾಗುತ್ತಿಲ್ಲ. ಹೊಸದಾಗಿ ಫ್ಲಾಟ್ ಕೊಳ್ಳುವವರಿಗೆ ಸ್ವಲ್ಪ ಸಹಾಯವಾಗಲಿ ಎಂಬ ಉದ್ದೇಶದಿಂದ ಇದನ್ನು ಬರೆದಿರುವೆ. ಇನ್ನೂ ಸೇರಿಸಲು ಕೆಲವು ವಿಷಯಗಳಿವೆ. ಉಪಯುಕ್ತ ಅನಿಸಿದಾಗ ಸೇರಿಸುವೆ.
ಬಿಲ್ಡರ್ನೊಂದಿಗೆ ತೊಂದರೆಗಳು ಪ್ರತ್ಯೇಕವಿಟ್ಟರೆ(ಸಾಮ ದಾನ ಕನ್ಸ್ಯೂಮರ್ ಕೋರ್ಟ್ನಿಂದ ಪರಿಹರಿಸಿಕೊಂಡರೆ) , ಫ್ಲಾಟ್ ನಿಂದ ಲಾಭವೂ ಬಹಳವಿದೆ...
=ಎಲ್ಲೇ ಹೋಗಲು ಮನೆ ಬಗ್ಗೆ ಚಿಂತಿಸಬೇಕಿಲ್ಲ
=ದಿನವೂ ಒಂದಲ್ಲ ಒಂದು ಮನೆಯಿಂದ ಸ್ವೀಟ್..ಇತ್ಯಾದಿ ಸಿಗುತ್ತಿರುವುದು.:)
=ಕಾರ್ ಪಾರ್ಕಿಂಗ್ ಚಿಂತೆ ಇಲ್ಲ
=ಜತೆಯಾಗಿ ಎಲ್ಲಾ ಹಬ್ಬಗಳ ಆಚರಣೆ, ರಿಪಬ್ಲಿಕ್ ಡೇನೂ ಆಚರಿಸಿದೆವು.
=ಒಬ್ಬರಲ್ಲ ಒಬ್ಬರು ಸಹಾಯಕ್ಕೆ ಕೂಡಲೇ ಒದಗುವರು...ಹೀಗೇ ಪಟ್ಟಿ ತುಂಬಾ ಇದೆ.
In reply to ಉ: ಫ್ಲಾಟ್ ಕೊಳ್ಳುವ ಮುನ್ನ ೨ by kavinagaraj
ಉ: ಫ್ಲಾಟ್ ಕೊಳ್ಳುವ ಮುನ್ನ ೨
ಕವಿನಾಗರಾಜರೆ, ಸಣ್ಣನಗರಗಳು ಬಿಡಿ, ಹಳ್ಳಿ ಹಳ್ಳಿಗಳಿಗೂ ಈ ತಿಮಿಂಗಿಲಗಳು ನುಗ್ಗಿವೆ. ಕಾಡು ಸಹ ಬಿಡರೂ..
ಉ: ಫ್ಲಾಟ್ ಕೊಳ್ಳುವ ಮುನ್ನ ೨
ಮನೆ, ಫ್ಲಾಟು ಕೊಳ್ಳುವಷ್ಟು ಹೊತ್ತಿಗೆ ಜನ ಸಾಲ, ಕಂತಿನ ಹೊರೆಗೆ 'ಪ್ಲಾಟಾಗಿರುತ್ತಾರೆ' ಜನ. ಆದರೂ ಬೆನ್ನು ಬಿಡದ ನಕ್ಷತ್ರಿಕ 'ಮೈಂಟೆನೆನ್ಸ್ ಚಾರ್ಜುಗಳು'. ಒಂದು ರೀತಿ ಕೊಂಡುಕೊಂಡ ಸ್ವಂತ ಮನೆಗೆ ಬಾಡಿಗೆ ಕಟ್ಟಿದ ಹಾಗೆ!
.
ಗಾಳಿಯಲಿ ಕಟ್ಟಿದ ಮನೆಗೆ
ನೆಲವೆಲ್ಲಿ ಹುಡುಕುವುದಯ್ಯ
ನೆಲವಿಲ್ಲದ ನೆಲೆಗು ಖರ್ಚು ಕಂದಾಯ
ಬಿಟ್ಟರೂ ಬಿಡದಾ ಮಾಯೆ ಕಾಣಯ್ಯ !
.
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು
In reply to ಉ: ಫ್ಲಾಟ್ ಕೊಳ್ಳುವ ಮುನ್ನ ೨ by nageshamysore
ಉ: ಫ್ಲಾಟ್ ಕೊಳ್ಳುವ ಮುನ್ನ ೨
>>ಮನೆ, ಫ್ಲಾಟು ಕೊಳ್ಳುವಷ್ಟು ಹೊತ್ತಿಗೆ ಜನ ಸಾಲ, ಕಂತಿನ ಹೊರೆಗೆ 'ಪ್ಲಾಟಾಗಿರುತ್ತಾರೆ' ಜನ. ಆದರೂ ಬೆನ್ನು ಬಿಡದ ನಕ್ಷತ್ರಿಕ 'ಮೈಂಟೆನೆನ್ಸ್ ಚಾರ್ಜುಗಳು'. ಒಂದು ರೀತಿ ಕೊಂಡುಕೊಂಡ ಸ್ವಂತ ಮನೆಗೆ ಬಾಡಿಗೆ ಕಟ್ಟಿದ ಹಾಗೆ!
:) ಇದಲ್ಲದೇ ಸರಕಾರೀ ಅಧಿಕಾರಿಗಳಿಗೆ...ಫ್ಲಾಟ್ ವಾಸಿಗಳೆಂದರೆ ಶ್ರೀಮಂತರೆಂದೇ ಲೆಕ್ಕ..ಹೇಗೆ ಸುಲಿಗೆ ಮಾಡುವುದೆಂದೇ ಲೆಕ್ಕ ಹಾಕುತ್ತಿರುವರು. ಇನ್ನು ಫ್ಲಾಟ್ ಅಸೋಷಿಯೇಶನ್ನ ಅಧ್ಯಕ್ಷ ಇತ್ಯಾದಿ ಆಗಿದ್ದರೆ..ಇನ್ನಷ್ಟು ತಾಪತ್ರಯಗಳು. ಕೆಲವೊಮ್ಮೆ ಸಂಬಳ ಸಿಗುವ ತನ್ನ ಕೆಲಸ ಬಿಟ್ಟು ಫ್ಲಾಟ್ನ ಕೆಲಸಕ್ಕೇ ಜಾಸ್ತಿ ಸಮಯ ಮೀಸಲಿಡಬೇಕಾಗಬಹುದು. ಯಾವಾಗ ಎಲ್ಲಿ ತೊಂದರೆ ಬರುವುದು ಹೇಳಲು ಸಾಧ್ಯವಿಲ್ಲ-ನಮ್ಮ ಪ್ರತ್ಯೇಕ ಮನೆಯಾದರೆ ನಾಳೆ ನೋಡೋಣ ಅಂತ ಸುಮ್ಮನಿರಬಹುದು, ಫ್ಲಾಟ್ನಲ್ಲಿ ಬೇಗನೆ ತೀರ್ಮಾನ ತೆಗೆದುಕೊಳ್ಳಬೇಕಾಗುವುದು.ಫ್ಲಾಟ್ ಕೊಂಡು ಪ್ಲಾಟಾಗದಿರಲು ಬೆಸ್ಟ್ ಐಡಿಯಾ ಅಂದರೆ ಅದನ್ನು ಬಾಡಿಗೆ ಕೊಟ್ಟುಬಿಡುವುದು.
>>ಗಾಳಿಯಲಿ ಕಟ್ಟಿದ ಮನೆಗೆ
ನೆಲವೆಲ್ಲಿ ಹುಡುಕುವುದಯ್ಯ
ನೆಲವಿಲ್ಲದ ನೆಲೆಗು ಖರ್ಚು ಕಂದಾಯ... ಸೂಪರ್ ಕವನ ನಾಗೇಶರೆ. (ಫ್ಲಾಟ್ ಕೆಡವಿದರೆ, ತಾನು ಕೊಂಡ ಫ್ಲಾಟ್ನ ಅನುಪಾತಕ್ಕೆ ಸರಿಯಾಗಿ ನೆಲದಲ್ಲೂ ಒಂದು ಪಾಲು ಇದೆ..)
ರಿಟೈರ್ ಆಗುವ ಸಮಯ ಹತ್ತಿರ ಬರುತ್ತಿದೆ- ಆರಾಮ ಫ್ಲಾಟಲ್ಲಿದ್ದು ಸ್ವಿಮ್ಮಿಂಗ್,ಜಿಮ್ಮಿಂಗ್ ಮಾಡಿಕೊಂಡು ಇರೋಣ ಅಂತ ಬಂದರೆ ...ಸಂಪದದ ಮೀಸಲು ಸಮಯವನ್ನೂ ಇದು ನುಂಗುತ್ತಿದೆ. :(
ಉ: ಫ್ಲಾಟ್ ಕೊಳ್ಳುವ ಮುನ್ನ ೨
ಗಣೇಶ್ ಅಣ್ಣಾ
ಇವತ್ತಿನ ವಿಜಯ ಕರ್ನಾಟಕದಲ್ಲಿ ಉಪಯೋಗವಾಗಬಹುದಾದ ಬರಹ ಒಂದಿದೆ -ಅದರ ಲಿಂಕ್ ಇಲ್ಲಿದೆ
http://www.vijaykarnatakaepaper.com/epaperimages/822014/822014-md-hr-28/...
ಶುಭವಾಗಲಿ
\|/
In reply to ಉ: ಫ್ಲಾಟ್ ಕೊಳ್ಳುವ ಮುನ್ನ ೨ by venkatb83
ಉ: ಫ್ಲಾಟ್ ಕೊಳ್ಳುವ ಮುನ್ನ ೨
ಉಪಯುಕ್ತ ಕೊಂಡಿ ನೀಡಿದಕ್ಕೆ ಸಪ್ತಗಿರಿವಾಸಿಗೆ ಧನ್ಯವಾದಗಳು. ಇನ್ನಷ್ಟು ವಿವರ ಸೇರಿಸಲಿಕ್ಕಿದೆ..ಸಮಯ ಸಿಕ್ಕಾಗ ಬರೆಯುವೆ.