ದೊಡ್ಡ ಬೆಟ್ಟದಲ್ಲಿ ಒಂದು ಗುಡಿಯಿರಬೇಕೂ...

Submitted by ಗಣೇಶ on Tue, 01/28/2014 - 16:10
ಚಿತ್ರ

ಬೆಂಗಳೂರಲ್ಲಿ ಮತ್ತಿಕೆರೆಯಿಂದ ಯಲಹಂಕಕ್ಕೆ ಹೋಗುವ ದಾರಿಯಲ್ಲಿ, ಎಮ್ ಎಸ್ ಪಾಳ್ಯ ದಾಟಿ ಒಂದು ಕಿ.ಮೀ. ಹೋದರೆ ದೊಡ್ಡಬೆಟ್ಟಹಳ್ಳಿ ಸಿಗುವುದು. ಬೆಟ್ಟದ ಮೇಲಿರುವ ಗುಡಿಯ ಚಿತ್ರ ( ಚಿತ್ರ ೧೩-೧೪) ಗಮನಿಸಿ. ಈ ಕಡೆಯಿಂದ ಕಲ್ಲು ಕೆತ್ತಿದ ಹಾಗೇ ಆ ಬದಿಯಲ್ಲೂ ಕೆತ್ತಿರುವರು. ಬೆಟ್ಟದ ಮೇಲೆ ಹೋಗಲು ದಾರಿಯೇ ಇಲ್ಲ. ಕಲ್ಲು ಕ್ವಾರಿ ಮಾಡಿದ ದಾರಿಯಲ್ಲಿ ( ಚಿತ್ರ-೧೧) ನಿದಾನಕ್ಕೆ ಮೇಲೆ ಹತ್ತಬೇಕು. ಸ್ವಲ್ಪ ಜಾರಿದರೆ ಹಾವೇಣಿ ಆಟದ ಹಾವಿನ ಬಾಯಿಗೆ ಸಿಕ್ಕಿದ ಹಾಗೇ, ಜಾರಿ ಕೆಳಗೆ ಮೊದಲಿದ್ದ ಸ್ಥಳಕ್ಕೇ ತಲುಪುವುದು ಗ್ಯಾರಂಟಿ.
ಹೇಗೋ ಪ್ರಯತ್ನ ಪಟ್ಟು ಮೇಲೆ ಹತ್ತಿಯಾಯಿತು. ಈಗ ಜಾಗ್ರತೆಯಾಗಿ ಆ ತುದಿಯಲ್ಲಿರುವ ಗುಡಿಗೆ (ಚಿತ್ರ-೫) ಹೋಗಬೇಕು. ಎಡಕ್ಕೆ ಜಾರಿದರೆ...(ಚಿತ್ರ-೩,೪) ನೇರ ಕೆರೆಯೊಳಗೆ. ಬಲಕ್ಕೆ ಜಾರಿದರೆ..(ಚಿತ್ರ-೧೨) ಕಲ್ಲು ಬಂಡೆ ಗಟ್ಟಿಯೋ, ತಲೆ ಗಟ್ಟಿಯೋ ನೋಡಬೇಕಾಗುವುದು.
ಶಿವ ನಾಮ ಸ್ಮರಣೆ ಮಾಡುತ್ತಾ ಗುಡಿ (ಚಿತ್ರ-೭) ಬಳಿ ತಲುಪಿದೆ. ಅಲ್ಲಿ ಯಾರೂ ಇರಲಿಲ್ಲ. ಹಾಗಾಗಿ ಒಳಗೆ ಹೋಗದೇ ಅಲ್ಲಿಂದಲೇ ನಮಸ್ಕರಿಸಿ ಹಿಂದೆ ತಿರುಗಿದೆ.
 ಮನೆ ಒಡೆದ, ರಸ್ತೆ ಅಗೆದ, ಕಲ್ಲು, ಮಣ್ಣು, ಸಿಮೆಂಟು,ಕಾಂಕ್ರಿಟ್, ಗಲೀಜು..ಗಳನ್ನೆಲ್ಲಾ ಲಾರಿಯಲ್ಲಿ ಲೋಡ್‌ಗಟ್ಟಲೆ ತಂದು ಕೆರೆಯ ಆ ಪಕ್ಕದಲ್ಲಿ ಹಾಕಿ (ಚಿತ್ರ- ೯,೧೦) ನೆಲ ಸಮತಟ್ಟು ಮಾಡುತ್ತಾ ಬರುತ್ತಿದ್ದಾರೆ. ಅಲ್ಲಿ ಬಹುಷಃ ಮುಂದೊಂದು ದಿನ ಮಾಲ್/ಅಪಾರ್ಟ್ಮೆಂಟ್/ ಬಸ್‌ ನಿಲ್ದಾಣ...ಏನೋ ಒಂದು ಮಾಡಿಯಾರು.
 "ಮಾಲ್‌ಗಳ ಆರ್ಟಿಫಿಷಿಯಲ್ ಕೆರೆಗಳಿಗಿಂತ ನಾನು ಯಾವುದರಲ್ಲಿ ಕಮ್ಮಿ? ಯಾಕೆ ನಿಮಗೆ ನನ್ನ ಬಗ್ಗೆ ಪ್ರೀತಿ ಇಲ್ಲ?" ಅಂತ ಕೆರೆ (ಚಿತ್ರ-೨) ನನ್ನ ಬಳಿ ಕೇಳಿದ ಹಾಗೆ ಅನಿಸಿತು. ನನ್ನ ಭ್ರಮೆ ಅಂತ ತಿಳಿದು, ಗುಡ್ಡದಿಂದ ಇಳಿಯಲು ಹೊರಟೆ. ಆಗ ನೆನಪಾಯಿತು!
 ನಾನು ಈ ಗುಡ್ಡ ಏರಿದ ಮೇಲೆ "ಟೈಟಾನಿಕ್ ಹೀರೋ" ತರಹ ಕೈ ಚಾಚಿ "ಹೋ......."ಎಂದು ಹೇಳಬೇಕೆಂದಿದ್ದೆ. ಈ ಇಕ್ಕಟ್ಟಾದ ಸ್ಥಳದಲ್ಲಿ ಬ್ಯಾಲೆನ್ಸ್ ಮಾಡುವುದರಲ್ಲಿ ಅದು ಮರೆತೇ ಹೋಗಿತ್ತು.
ಈಗ ನನ್ನೆರಡೂ ಕೈಗಳನ್ನು ಹೊರಚಾಚಿ, "ಹೋ........" ಎಂದು ಗಟ್ಟಿಯಾಗಿ ಹೇಳಲು ಹೊರಟೆ. ಸ್ವರವೇ ಬರಲಿಲ್ಲ.
ಕಣ್ಣೊರೆಸಿಕೊಂಡು ಜಾಗ್ರತೆ ಇಳಿದು ಬಂದೆ..
********************************
ಬೆಂಗಳೂರಿನ ಹೈಯೆಸ್ಟ್ ಪಾಯಿಂಟ್‌- 

http://ces.iisc.ernet.in/energy/wetlands/sarea.html 

http://en.wikipedia.org/wiki/Doddabettahalli

Rating
No votes yet

Comments

venkatb83

Tue, 01/28/2014 - 16:32

ಕಣ್ಣೊರೆಸಿಕೊಂಡು ಜಾಗ್ರತೆ ಇಳಿದು ಬಂದೆ..
???
ಗಣೇಶ್ ಅಣ್ಣಾ - ಈ ಚಿತ್ರಗಳನ್ನು ನೋಡಿದಾಗ ಕಲ್ಲು ಮಣ್ಣಿಗಾಗಿ ಅಗೆದು ಇಲ್ಲಿ ಈ ದೇವಸ್ಥಾನ ಇರುವುದರಿಂದ ಆದ್ರ ಅ
ಪ್ರದೇಶ ಬಿಟ್ಟಿರುವ ಹಾಗಿದೆ . .ಅವರ ಬಾಯಿಗೆ ಮಣ್ಣಾಕ..!! ಹಿಂದೆ ಒಮ್ಮೆ ಅದೇ ದಾರಿಯ ಇದೆ ರೀತಿಯ ಪ್ರದೇಶವೊಂದರ ಬಗ್ಗೆ ನೀವ್ ಬರೆದದ್ದು ಓದಿದ್ದೆ -ಈಗ ಇದು ನೋಡಿ ಇದು ಅದೇನ ಎಂದು ಅನಿಸಿತು ಆದರೆ ಪೂರ್ತಿ ಓದಿದಾಗ ಅದಲ್ಲ ಇದು ಬೇರೆ ಆದರೆ ಅದರದೇ ಕಥೆ ವ್ಯಥೆ ಅನಿಸಿತು .. ನಮ್ಮ ನಿಮ್ಮ ಈ ಸುತ್ತಮುತ್ತಲಿನ ಪ್ರದೇಶಗಳ ಪರಿಚಯ ಬರಹ ಚೆನ್ನಿದೆ. ಅದು (ಆ ಪ್ರದೇಶ) ನಿಮ್ಮಸ್ಟೇ ಹತ್ತಿರ ನಮಗೂ ..!! ಶುಭವಾಗಲಿ
ನನ್ನಿ
\|/

ಸಪ್ತಗಿರಿವಾಸಿಯವರೆ,
ನಿಮ್ಮ‌ ನೆನಪಿನ‌ ಶಕ್ತಿ ಮೆಚ್ಚಬೇಕಾದದ್ದೇ. ಇದು ಅದೇ ಪ್ರದೇಶ‌.( http://sampada.net/blog/%E0%B2%B9%E0%B2%B3%E0%B3%8D%E0%B2%B3%E0%B2%BF%E0... ) ಈ ಗುಡ್ಡದ‌ ಹಿಂಬದಿ ಒಂದು 500 ಮೀ. ದೂರದಲ್ಲಿ ಒಂದು ದೇವಸ್ಠಾನದ‌ ಪಕ್ಕದಲ್ಲಿದ್ದ‌ ಕೊಳದ‌ ಬಗ್ಗೆ "ಹಳ್ಳಿಯಾದರೇನು ಸಿವಾ" ಎಂದು ಬರೆದಿದ್ದೆ. ಕತ್ತಲಾದುದರಿಂದ‌ ಗುಡ್ಡಕ್ಕೆ ಇನ್ನೊಮ್ಮೆ ಹೋಗುವೆ ಅಂತ‌ ಅಲ್ಲಿ ಬರೆದಿದ್ದೆ. ಅಂದಿನಿಂದ‌ ಗುಡ್ಡ‌ ಜರಿಯುವ‌ ಮುನ್ನ‌ ಹೋಗಿ ನೋಡಬೇಕೆಂದಿದ್ದೆ.
ಟ್ರೆಕ್ಕಿಂಗ್ ಅಂತ‌ ಒಂದು ಮುಂಜಾನೆ ಹೊರಟುಬಿಡಬೇಡಿ.ಯಾರಿಗೂ ಬೇಡದ‌ ಒಂದು ಸಣ್ಣ‌ ಗುಡ್ಡ‍‍ವಿದು...

ಬೆಂಗಳೂರಿನ‌ ಹೈಯೆಸ್ಟ್ ಪ್ರದೇಶ‌ ಎಂದು ಗೊತ್ತಿದ್ದೂ ಕೆಡವುತ್ತಿರುವರು...ಅಳಿದುಳಿದ‌ ಕೆರೆಗಳ‌ ರಕ್ಷಣೆ ಮಾಡುತ್ತಿಲ್ಲ‌.. ನದಿ ಪುನಶ್ಚೇತನ‌ ಮಾಡಲು ಹೊರಟಿದ್ದಾರೆ.:) ಚಿತ್ರಗಳಲ್ಲಾದರೂ ಉಳಿಯಲಿ ಅಂತ‌ ಸೇರಿಸಿದೆ. ತಮ್ಮ‌ ಮೆಚ್ಚುಗೆಗೆ ಧನ್ಯವಾದಗಳು.

nageshamysore

Wed, 01/29/2014 - 03:43

ಅಯ್ಯೊ ಶಿವನೆ! ತಲೆ ಮೇಲೊಂದು (ಉದ್ಭವದ ಸಿನಿಮಾ ರೀತಿ) ದೇವಸ್ಥಾನವಿದ್ದರೂ ಬಿಡರಲ್ಲ! ಮುಂದೊಂದು ದಿನ ಗುಡ್ಡ, ಗುಡಿ ಮಾಯವಾಗಿ ಹೊಸದೊಂದು ಮಾಲ್'ಗುಡಿ' ಕಾಣಿಸಿಕೊಂಡರೆ ಅಚ್ಚರಿಯೇನೂ ಇಲ್ಲ!
ಧನ್ಯವಾದಗಳೊಂದಿಗೆ  
ನಾಗೇಶ ಮೈಸೂರು

>>ಗುಡಿ ಹೋಗಿ ಮಾಲ್‌ಗುಡಿ :))
ಗುಡಿಗೆ ಹೋಗುವುದಕ್ಕಿಂತಲೂ ನಿಷ್ಟೆಯಿಂದ ಮಾಲ್ ಹೋಗುವವರು ಜಾಸ್ತಿ. ಗಲೀಜು ಮಾಡುವುದಿಲ್ಲ. ಸುತ್ತುಹಾಕುತ್ತಿರುವರು. ಅಂದಮೇಲೆ "ಮಾಲ್‌ಗುಡಿ" ಅನ್ನಲಡ್ಡಿಯಿಲ್ಲ ನಾಗೇಶರೆ :)

ಪರಿಚಿತ ಸ್ಥಳ ಅಲ್ಲ. ಕಲ್ಲು ಕ್ವಾರಿ ಮಾಡುವವರು ಫೋಟೋ ತೆಗೆಯುವುದಕ್ಕೆ ಆಕ್ಷೇಪ ಮಾಡುವರೋ ಎಂಬ ಯೋಚನೆ ಇತ್ತು. ಅಂತಹದ್ದೇನೂ ಸಂಭವಿಸಲಿಲ್ಲ ಕವಿನಾಗರಾಜರೆ. ತಮ್ಮ ಮೆಚ್ಚುಗೆಗೆ ಧನ್ಯವಾದಗಳು.

sathishnasa

Wed, 01/29/2014 - 21:32

ಗಣೇಶ್ ರವರೇ ನಿಮ್ಮ ಈ ಲೇಖನ ಓದಿದ ಮೇಲೆ ಅನ್ನಿಸಿದ್ದು " ಹೀಗೂ ಉಂಟೆ....? " ಅಂತ. ಮುಂದೊಮ್ಮೆ ಇಂತ ಸ್ಥಳಗಳು ಬೆಂಗಳೂರಿನ ಸುತ್ತ ಮತ್ತ ಇಲ್ಲದಂತಾಗುತ್ತೆ ಅನ್ನಿಸುತ್ತೆ. ಧನ್ಯವಾದಗಳೊಂದಿಗೆ.....ಸತೀಶ್

ಸತೀಶರೆ,
೮೧ರಿಂದ ಬೆಂಗಳೂರಲ್ಲಿರುವೆ. ಅನೇಕ ಕೆರೆಗಳ ಸಾವನ್ನು ನೋಡಿರುವೆ, ನೋಡುತ್ತಿರುವೆ. ಈಗೆಲ್ಲಾದರೂ ಕೆರೆ ಕಂಡರೆ "ಈ ಕೆರೆ ಇನ್ನೂ ಯಾಕೆ ಉಳಿದಿದೆ?" ಅಂತ ಯೋಚಿಸುವಂತಾಗಿದೆ.:( ಹಿಂದೊಮ್ಮೆ ಇದೇ ಸ್ಥಳಕ್ಕಿಂತ ಸ್ವಲ್ಪ ದೂರದಲ್ಲಿರುವ ಕೆರೆ ನೋಡುತ್ತಿದ್ದಾಗ (ಸಪ್ತಗಿರಿವಾಸಿ ಮೇಲೆ ಹೇಳಿದ್ದು) ಒಬ್ಬಾತ ಈ ಸ್ಥಳವನ್ನು ತೋರಿಸಿ "ಅದು ಅತೀ ಎತ್ತರದ ಸ್ಥಳ, ಅಲ್ಲಿಂದ ಯಲಹಂಕ ಪೂರ್ತಿ ಕಾಣಿಸುತ್ತಿತ್ತು.." ಎಂದೆಲ್ಲಾ ಹೇಳಿದಾಗ ನಾನು ನಂಬಿರಲಿಲ್ಲ. ಗೂಗ್‌ಲ್ ಸರ್ಚ್ ಮಾಡಿ ನೋಡಿದಾಗ ಅವರು ಹೇಳಿದ್ದು ಸರಿ ಅಂತ ಗೊತ್ತಾಯಿತು. ಆದರೂ ಒಮ್ಮೆ ಗುಡ್ಡ ಏರಿಯೇ ನಂತರ ಬರೆಯುವೆ ಅಂತ ಸುಮ್ಮನಾದೆ. ಬೆಂಗಳೂರಿನವರಿಗೆ ಅಂದಾಜು ಮಾಡಲು ಕಷ್ಟವಿಲ್ಲ. ಮೆಜೆಸ್ಟಿಕ್‌ನಿಂದ ಮಲ್ಲೇಶ್ವರ೧೮ನೇ ಕ್ರಾಸ್, ಟಾಟಾ ಇನ್ಸ್ಟಿಟ್ಯೂಟ್ ಏರು ದಾರಿಯೇ. ಅಲ್ಲಿಂದ ರಾಮಯ್ಯ ಕಾಲೇಜ್‌ವರೆಗೆ ಏರು ದಾರಿಯಿದ್ದು ನಂತರ ಮತ್ತಿಕೆರೆ ತಗ್ಗು ಪ್ರದೇಶ. ನಂತರ ಗೋಕುಲ, ಬಿ.ಇ.ಎಲ್ ಸರ್ಕ್‌ಲ್ ಏರಿದ್ದು, ಗಂಗಮ್ಮ ಸರ್ಕಲ್ ತಗ್ಗು ಪ್ರದೇಶ..ಅಲ್ಲಿಂದ ನಂತರ ದೊಡ್ಡಬೆಟ್ಟಹಳ್ಳಿಯವರೆಗೂ ಏರು ದಾರಿ. ಯಾಕಿದನ್ನು ಉಳಿಸಲು ಸ್ಥಳೀಯರೂ ಪ್ರಯತ್ನಿಸುತ್ತಿಲ್ಲ...ಗೊತ್ತಾಗುತ್ತಿಲ್ಲ.