ಬ್ಲಾಗಿನ ಚೀಲ !

Submitted by nageshamysore on Tue, 05/13/2014 - 18:54

ಬ್ಲಾಗೆಂಬ ಜೋಳಿಗೆ ತುಂಬ
ಎಳ್ಳು ಜೊಳ್ಳು ಕಾಳೆಲ್ಲ ತುಂಬ
ತುಂಬುತುಂಬುತ ಹರಿದ ಧಾರೆ
ಹೂವ್ವಂತೆ ಅರಳಿದರೆ ಕೆಂದಾವರೆ ||

ಬಾಗಿಲು ತೆಗೆದಾ ಹಾಗೆಲ್ಲ
ಮನಕದ ತಟ್ಟಿ ಪದಗಳ ಪಲ್ಲ
ಪಲ್ಲವಿಸುತ ಪರಿಮಳಿಸುತಲೆಲ್ಲ
ಪಸರಿಸಿದಂತೆ ಗೊನೆ ಗೊನೆ ಸಾಲ ||

ಹುಳು ಹೊಡೆದು ಬಿಟ್ಟವೊ
ಮುಟ್ಟದೆಲೆ ಕನ್ನಿಕೆಯಾಗಿಟ್ಟವೊ
ಪೇರಿಸಿಟ್ಟ ಜಗದಿ ಹುಡುಕಿ ಜಾಗ
ತಾವುಳಲು ತಾವೆ ಹೊತ್ತಾವೆ ನೊಗ ||

ಚೀಲ ತುಂಬಿ ತುಳುಕುತಿದೆ
ಇಣುಕಿ ಹೆಕ್ಕಿ ಮುಕ್ಕುವರಿಲ್ಲದೆ
ಮೆದ್ದು ನೋಡಲೆ ತಾನೆ ಸೊಗಸು
ಅರಿವಾಗುವ ನಿಜಾಯತಿ ಹೊಂಗನಸು ||

ಇದ್ದರು ಕಾಗುಣಿತ ಕುಣಿತ
ಒಟ್ಟಾರೆ ಸುಸಂಗತದಾ ಗಣಿತ
ಅಂದುಕೊಂಡೆ ತುಂಬಿಸುತಿದೆ ಬಳ್ಳ
ಕದ್ದು ಕಾದಿದೆ ಫಲಿತಕೆ ಮನದೊಳ ಕಳ್ಳ ||

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು

ಲೇಖನ ವರ್ಗ (Category)