ಸಂಬಂಧದ ಅನುಬಂಧ

ಸಂಬಂಧದ ಅನುಬಂಧ

 

     ಈ ದೇವರ ಸೃಷ್ಟಿಯ ರಹಸ್ಯ ದೇವರು ಮಾತ್ರ ಬಲ್ಲ. ಜೀವಿಯ ಬದುಕು ತನ್ನಿಂದ ತಾನೇ ಪರಿಪೂರ್ಣ ಆಗದಂತಹ, ಒಂದಲ್ಲಾ ಒಂದು ರೀತಿಯಲ್ಲಿ ಇನ್ನೊಂದನ್ನು ಅವಲಂಬಿಸಲೇಬೇಕಿರುವ ಸ್ಥಿತಿ ಸಂಬಂಧಗಳಿಗೆ ಕಾರಣವಾಗಿದೆ. ಸೃಷ್ಟಿಯ ಮೂಲವೂ ಸಂಬಂಧದಿಂದಲೇ ಆರಂಭವಾಗುತ್ತದೆ. ಮೂರು ಸಂಗತಿಗಳು, ಜಗತ್ತು, ಜೀವ ಮತ್ತು ದೇವ, ಮೊದಲಿನಿಂದಲೂ ಬಹುತೇಕ ಎಲ್ಲಾ ಜಿಜ್ಞಾಸೆಗಳು, ತರ್ಕಗಳು, ಚರ್ಚೆಗಳು, ಸಿದ್ಧಾಂತಗಳ ಮೂಲವಾಗಿವೆ. ಪರಮಾತ್ಮ ಅನಾದಿ, ಅನಂತ, ಸ್ಟೃಕರ್ತ, ಸರ್ವವ್ಯಾಪಿ, ಸರ್ವಶಕ್ತನೆಂದು ಎಲ್ಲಾ ಆಸ್ತಿಕರು ನಂಬುತ್ತಾರೆ. ಆಸ್ತಿಕರಲ್ಲದವರೂ ಸಹ ಈ ಬ್ರಹ್ಮಾಂಡದ ಸ್ಥಿತಿಗೆ ಕಾರಣವಾದ ಯಾವುದೋ ಒಂದು ಶಕ್ತಿ ಇದೆಯೆನ್ನುವುದನ್ನು ಒಪ್ಪುತ್ತಾರೆ. ಈ ಮೂರು ಸಂಗತಿಗಳೂ ಪರಸ್ಪರ ಸಂಬಂಧವೆಂಬ ಬಂಧಕ್ಕೊಳಪಟ್ಟಿವೆ.

     ನಾವು ಪ್ರಕೃತಿ ಎಂದು ಕರೆಯುವ ಈ ಜಡಜಗತ್ತು ಸೃಷ್ಟಿಯಾದುದಾದರೂ ಹೇಗೆ? ವ್ಶೆಜ್ಞಾನಿಕವಾಗಿ ಹೇಳುವುದಾದರೆ ಸುಖಾಸುಮ್ಮನೆ ಶೂನ್ಯದಿಂದ ಯಾವುದೇ ಸೃಷ್ಟಿ ಸಾಧ್ಯವೇ ಇಲ್ಲ. ಇರುವುದನ್ನು ರೂಪಾಂತರ ಮಾಡಿ ಇನ್ನೊಂದು ರೂಪಕ್ಕೆ ತರಬಹುದಷ್ಟೇ. ದೇವರು ಈ ಜಗತ್ತಿನ ಜನಕನೆಂದು ಧರ್ಮಗ್ರಂಥಗಳು ಹೇಳುತ್ತವೆ. ಆದರೆ ಯಾವುದರಿಂದ ಸೃಷ್ಟಿಸಿದ? ಏಕೆ ಸೃಷ್ಟಿಸಿದ? ಹೇಗೆ ಸೃಷ್ಟಿಸಿದ?  ತರ್ಕಬದ್ಧವಾಗಿ ನೋಡಿದರೆ ಈ ಜಡಜಗತ್ತಿನ ಸೃಷ್ಟಿ ಶೂನ್ಯದಿಂದಂತೂ ಆಗಿರಲಾರದು. ದೇವರ ಸೃಷ್ಟಿ, ಶೂನ್ಯದಿಂದ ಸೃಷ್ಟಿಸಿದ ಎಂದು ವಾದದ ಸಲುವಾಗಿ ಒಪ್ಪಿಕೊಂಡರೂ, ಪ್ರಶ್ನೆ ಉದ್ಭವಿಸುತ್ತದೆ. ದೇವರು ಶೂನ್ಯದಿಂದ ಏನು ಬೇಕಾದರೂ ಸೃಷ್ಟಿಸಬಹುದಾದರೆ ಇನ್ನೊಬ್ಬ ತನ್ನಷ್ಟೇ ಅಥವ ತನಗಿಂತ ಬಲಿಷ್ಠ ದೇವರನ್ನು ಸೃಷ್ಟಿಸಬಲ್ಲನೇ ಎಂದರೆ ಉತ್ತರ ಕೊಡುವುದು ಕಷ್ಟ. ಒಂದು ಕಟ್ಟಡವನ್ನು ಯಾವುದೇ ವಸ್ತುಗಳ ಸಹಾಯವಿಲ್ಲದೆ ನಿರ್ಮಿಸಲು ಸಾಧ್ಯವಿದೆಯೇ? ಅದಕ್ಕೆ ಇಟ್ಟಿಗೆ, ಕಲ್ಲು, ಸಿಮೆಂಟು, ಮರಳು, ಕಬ್ಬಿಣ, ಮುಂತಾದವು ಇರಲೇಬೇಕು. ಕಟ್ಟಡದಲ್ಲಿರುವ ವಸ್ತುಗಳು ಮೊದಲೂ ಇದ್ದವು, ಈಗಲೂ ಇದ್ದಾವೆ, ಆದರೆ ಬೇರೆ ಬೇರೆ ರೂಪಗಳಲ್ಲಿ! ಕಟ್ಟಡ ಬಿದ್ದು ಹೋದರೂ, ನಾಶವಾದರೂ, ಅದರಲ್ಲಿ ಬಳಕೆಯಾದ ವಸ್ತುಗಳು ಮುಂದೂ ಸಹ ಒಂದಲ್ಲಾ ಒಂದು ರೀತಿಯಲ್ಲಿ ಯಾವಾಗಲೂ ಇರುತ್ತವೆ. ಹೀಗೆಯೇ ಈ ಜಗತ್ತೂ ಸಹ ಮೊದಲೂ ಇತ್ತು, ಈಗಲೂ ಇದೆ, ಆದರೆ ಬೇರೆ ರೂಪಾಂತರಗಳಲ್ಲಿ ಎನ್ನವುದು ಹೆಚ್ಚು ಸಮಂಜಸ ವಾದವಾಗುತ್ತದೆ. ಜಗತ್ತಿನ ಸೃಷ್ಟಿ, ಸ್ಥಿತಿ, ಲಯಗಳಿಗೆ ಸಾಕ್ಷೀಭೂತನಾಗಿದ್ದು ಈ ಕ್ರಿಯೆ ನಿರಂತರವಾಗಿ ನಡೆಯುವಂತೆ ನೋಡಿಕೊಳ್ಳುವವನು ಭಗವಂತನೆನ್ನಬಹುದು. 

     ಜೀವಾತ್ಮ ಸಹ ಪರಮಾತ್ಮನಂತೆ ಅನಾದಿ, ಅನಂತವೆಂಬುದು ಸನಾತನ ಧರ್ಮದ ತಿರುಳಾಗಿದೆ. ಕರ್ಮ ಸಿದ್ಧಾಂತ ಮತ್ತು ಪುನರ್ಜನ್ಮ ಸಿದ್ಧಾಂತಗಳು ಇದಕ್ಕೆ ಪುಷ್ಟಿ ನೀಡುತ್ತವೆ. ಈ ವಿಚಾರದಲ್ಲಿ ಪ್ರತ್ಯೇಕ ಲೇಖನಗಳಲ್ಲಿ ಚರ್ಚಿಸಿರುವುದರಿಂದ ಇದನ್ನು ಇಲ್ಲಿ ವಿಸ್ತೃತವಾಗಿ ಚರ್ಚಿಸದೆ ಮುಂದುವರೆಯೋಣ. ಒಟ್ಟಾರೆಯಾಗಿ ಜಗತ್ತು, ಜೀವ ಮತ್ತು ದೇವರು ಸಂಬಂಧದ ಮೂಲಗಳಾಗಿದ್ದು, ಸಂಬಂಧ ಅನ್ನುವುದು ನಮ್ಮ ಬದುಕಿನ ಬಿಡಿಸಲಾಗದ ಬಂಧವಾಗಿದೆ. ಮಾನವ ಸಂಬಂಧಗಳ ಕುರಿತ ವಿಶ್ಲೇಷಣೆಗೆ ಇದು ಪೀಠಿಕೆಯಾಗಿದೆ. 

     ಜೀವಿಯ ದೇಹ ಪಂಚಭೂತಗಳಿಂದ ಕೂಡಿದುದಾಗಿದೆ. ದೇವನ ಅದ್ಭುತ ಚಮತ್ಕಾರದ ದೇಹವೆಂಬ ರಚನೆಗೆ ಚೈತನ್ಯ ನೀಡಿರುವುದು ದೇಹದೊಳಗಿನ ಜೀವಾತ್ಮವಾಗಿದೆ. ಜೀವಾತ್ಮ ಅನಂತ, ಅನಾದಿಯೆಂದು ಕರೆಯಲ್ಪಟ್ಟುದಾದರೂ, ಹೊಸ ಜನ್ಮ ಅಥವ ಹುಟ್ಟಿನೊಂದಿಗೆ ಅಪ್ಪ-ಅಮ್ಮ ಎಂಬ ಮಾಧ್ಯಮದ ಮತ್ತು ಪಂಚಭೂತಗಳ ಸಂತುಲಿತ ಸಂಯೋಗದ ಸಂಬಂಧವನ್ನು ಹೊತ್ತು ತರುತ್ತದೆ. ಬೆಳೆಯುತ್ತಾ ಕುಟುಂಬದ ಇತರ ಸದಸ್ಯರು, ಸ್ನೇಹಿತರು, ಬಂಧುಗಳ ಸಂಬಂಧ ಉಂಟಾಗುತ್ತದೆ. ದೈನಂದಿನ ಅವಶ್ಯಕತೆ, ಬೆಳವಣಿಗೆ, ಇತ್ಯಾದಿಗಳಿಗಾಗಿ ಜೀವಿಗಳು ಕುಟುಂಬದ, ಸಮುದಾಯದ, ಗ್ರಾಮದ, ರಾಜ್ಯದ, ದೇಶದ ಇತರರ ಸಹಕಾರ ಪಡೆಯಬೇಕಾಗುತ್ತದೆ, ಅವಲಂಬಿಸಬೇಕಾಗುತ್ತದೆ. ಆಶ್ರಯ, ಆಹಾರ, ಮುಂತಾದುವುಗಳಿಗಾಗಿ ಪ್ರಕೃತಿಯನ್ನೂ ಅವಲಂಬಿಸಬೇಕಾಗುತ್ತದೆ. ಈ ಕಾರಣಕ್ಕಾಗಿಯೇ ಹಿರಿಯರು ಪ್ರತಿಯೊಬ್ಬರೂ ಮೂರು ವಿಧದ ಋಣಗಳಿಗೆ -ಪಿತೃಋಣ, ಆಚಾರ್ಯ ಋಣ ಮತ್ತು ದೇವ ಋಣ- ಬಾಧ್ಯಸರು ಎಂದಿರುವುದು!

     ಪಿತೃಋಣ ತೀರಿಸುವುದು ಎಂದರೆ ಸಾಮಾನ್ಯವಾಗಿ ಮೃತರಾದ ಹಿರಿಯರಿಗೆ ಮಾಡುದ ಶ್ರಾದ್ಧಾದಿ ಕರ್ಮಗಳು ಎಂತಲೇ ಭಾವಿಸುತ್ತಾರೆ. ಮೃತರಾದ ನಂತರದಲ್ಲಿ ಮಾಡಲಾಗುವ ಉತ್ತರಕ್ರಿಯೆ, ತಿಥಿ, ಶ್ರಾದ್ಧ, ಇತ್ಯಾದಿಗಳಿಂದ ಪಿತೃಋಣ ತೀರುತ್ತದೆಯೇ ಎಂಬುದು ಪ್ರಶ್ನೆ. ಯಾವುದೇ ಜನ್ಮದಲ್ಲಿ ಯಾವುದೇ ಜೀವಿ ತನ್ನ ಜೀವಿತಾವಧಿಯಲ್ಲಿ ಗಳಿಸಿದ್ದನ್ನು, ಮನೆ, ಸಂಪತ್ತು, ಮಡದಿ, ಮುಂತಾದುವನ್ನು, ಅಷ್ಟೇ ಏಕೆ, ತನ್ನ ಶರೀರ ಮಾತ್ರವಲ್ಲ, ಕನಿಷ್ಠ ತಾನು ಧರಿಸಿದ್ದ ವಸ್ತ್ರವನ್ನಾಗಲೀ ಸಾಯುವಾಗ ಹೊತ್ತೊಯ್ದುದನ್ನು ಯಾರೂ ಕಂಡಿದ್ದಿಲ್ಲ. ಹೀಗಿರುವಾಗ ಬೇರೊಬ್ಬರು ಅವರಿಗೆ ಸದ್ಗತಿಗಾಗಿ ಸಹಾಯ ಮಾಡಲು ಸಾಧ್ಯವಿದೆಯೇ?   ವೇದದ ಈ ಮಂತ್ರ ಹೇಳುತ್ತದೆ:

ನ ಕಿಲ್ಬಿಷಮತ್ರ ನಾಧಾರೋ ಅಸ್ತಿ ನ ಯನ್ಮಿತ್ರೈಃ ಸಮಮಮಾನ ಏತಿ | 

ಅನೂನಂ ಪಾತ್ರಂ ನಿಹಿತಂ ನ ಏತತ್ಪಕ್ತಾರಂ ಪಕ್ವಃ ಪುನರಾವಿಶಾತಿ ||  (ಅಥರ್ವ.೧೨.೩.೪೮)

     ದೇವರ ನ್ಯಾಯವಿಧಾನದಲ್ಲಿ ಯಾವ ಒಡಕೂ, ದೋಷವೂ ಇಲ್ಲ. ಬೇರೆ ಯಾವ ಆಧಾರವೂ ಇಲ್ಲ. ಸ್ನೇಹಿತರ, ಮಧ್ಯವರ್ತಿಗಳ, ಬಂಧುಗಳ ಸಹಾಯದಿಂದ ನಾನು ರಕ್ಷಿತನಾಗಿದ್ದು ಮೋಕ್ಷಕ್ಕೆ ಸೇರುತ್ತೇನೆ ಎಂಬುದೂ ಕೂಡ ಇಲ್ಲ. ನಮ್ಮ ಈ ಒಡಕಿಲ್ಲದ ಅಂತಃಕರಣದ ಪಾತ್ರೆ ಗೂಢವಾಗಿ ಇಡಲ್ಪಟ್ಟಿದ್ದು, ಬೇಯಿಸಿದ ಅನ್ನ, ಕರ್ಮಫಲವಿಪಾಕವು ಅಡಿಗೆ ಮಾಡಿದವನನ್ನು ಪುನಃ ಮರಳಿ ಪ್ರವೇಶಿಸಿಯೇ ತೀರುತ್ತದೆ ಎಂಬುದು ಇದರ ಅರ್ಥ. ವಿಷಯ ಸ್ಷಷ್ಟ - ಮಾಡಿದ್ದುಣ್ಣೋ ಮಹರಾಯ! ಅವನು ಕಟ್ಟಿಕೊಂಡ ಬುತ್ತಿ ಅವನದೇ ಆಗಿದ್ದು ಅವನೇ ತಿನ್ನಬೇಕು! ಜೀವಿ ತಾನು ಜೀವಿತಾವಧಿಯಲ್ಲಿ ಮಾಡಿದ ಕೆಲಸ ಕಾರ್ಯಗಳಿಗನುಸಾರವಾಗಿ ಫಲ ಅನುಭವಿಸುವುದು ಶತಸ್ಸಿದ್ಧವಂದಾದಾಗ ಅದನ್ನು ಬೇರೊಬ್ಬರು, ಮಧ್ಯವರ್ತಿಗಳು ಶ್ರಾದ್ಧಾದಿ ಕರ್ಮಗಳ ಮೂಲಕ ಬದಲಾಯಿಸಲು ಸಾಧ್ಯವೇ? ಸಾಧ್ಯವೆಂದಾದಲ್ಲಿ, ಇದು ವೇದಗಳು ಮತ್ತು ಭಗವದ್ಗೀತೆ ಉಪದೇಶಿಸುವ ನೀತಿಗೆ ವಿರುದ್ಧವಾಗುತ್ತದೆ. ನನಗೆ ಕಾಯಿಲೆ ಬಂದರೆ ಔಷಧಿಯನ್ನು ನಾನೇ ಕುಡಿದು ಆರೋಗ್ಯ ಸರಿಪಡಿಸಿಕೊಳ್ಳಬೇಕು. ಬೇರೆ ಯಾರೋ ಔಷಧಿ ಕುಡಿದರೆ ನನ್ನ ಕಾಯಿಲೆ ಹೇಗೆ ವಾಸಿಯಾದೀತು? ಬಳಕೆಯಲ್ಲಿರುವ ಶ್ರಾದ್ಧಾದಿ ಕರ್ಮಗಳಿಂದ ಮೃತರ ಆತ್ಮಕ್ಕೆ ಸದ್ಗತಿ ದೊರೆಯುತ್ತದೆಂಬುದು, ಸಾಮಾನ್ಯ ಜ್ಞಾನವನ್ನು, ಕ್ರಿಯೆಗೆ ತಕ್ಕಂತೆ ಪ್ರತಿಕ್ರಿಯೆ ಇರುತ್ತದೆ ಎಂಬುದನ್ನು ಅಲ್ಲಗಳೆಯುವ ಸಂಗತಿ. ಬದುಕಿದ್ದಾಗ ಏನು ಬೇಕಾದರೂ ಮಾಡಿಬಿಡಬಹುದು, ಯಾರ ತಲೆಯನ್ನಾದರೂ ಒಡೆದು ಸಂಪತ್ತು ದೋಚಬಹುದು, ಸತ್ತ ನಂತರದಲ್ಲಿ ಮಕ್ಕಳು ಲಕ್ಷಾಂತರ ರೂ. ವೆಚ್ಚ ಮಾಡಿ ಶ್ರಾದ್ಧ ಮಾಡಿಬಿಟ್ಟರೆ ಎಲ್ಲಾ ಸರಿಹೋಗುತ್ತದೆ ಎಂಬ ವಾದದಂತೆಯೇ ಇದು! ಮೃತ ಶರೀರವನ್ನು ಪಂಚಭೂತಗಳಲ್ಲಿ ವಿಲೀನಗೊಳಿಸುವ ಕ್ರಿಯೆಯೊಂದಿಗೆ ಅಂತ್ಯೇಷ್ಟಿಕರ್ಮ ಮುಗಿಯುತ್ತದೆ. ನಂತರದಲ್ಲಿ ಮಾಡುವ ಕ್ರಿಯೆಗಳಿಗೆ ಈಗ ತಿಳಿದಿರುವಂತೆ ಸಮರ್ಥನೆ ಕಾಣುವುದಿಲ್ಲ. ಇಂತಹ ಯಾವುದೇ ಕ್ರಿಯೆಗಳು ಮೃತರ ಸಂಬಂಧಿಕರ ಮಾನಸಿಕ ಸಮಾಧಾನಕ್ಕಷ್ಟೇ ಸೀಮಿತವೆಂದರೆ ಕಠಿಣ ಮಾತಾಗುತ್ತದೆ.

     ಶ್ರಾದ್ಧ ಕರ್ಮಾದಿಗಳನ್ನು ಮಾಡುವುದರಿಂದ ಆತ್ಮ ಸದ್ಗತಿ ಪಡೆಯುವುದಿಲ್ಲವೆಂದಾದರೆ ತಲೆ ತಲಾಂತರಗಳಿಂದ ಹಿರಿಯರು ನಡೆಸಿಕೊಂಡು ಬರುತ್ತಿರುವ ಈ ಕ್ರಿಯೆಗಳಿಗೆ ಅರ್ಥವಿಲ್ಲವೇ ಎಂಬ ಪ್ರಶ್ನೆ ಮೂಡುವುದು ಸಹಜ. ಶ್ರಾದ್ಧ ಮಾಡುವ ಮೂಲಕ ಹಿರಿಯರನ್ನು ನೆನೆಸಿಕೊಂಡು ಅವರು ಹಾಕಿಕೊಟ್ಟ ಉತ್ತಮ ರೀತಿಯ ಸಂಸ್ಕಾರಗಳನ್ನು ಮುಂದುವರೆಸಿಕೊಂಡು ಹೋಗಬಹುದು. ಅವರ ನೆನಪನ್ನು ಸ್ಥಾಯಿಯಾಗಿ ಉಳಿಯುವಂತೆ ಮಾಡಬಹುದು, ಅವರು ಪೂರ್ಣ ಮಾಡದೆ ಉಳಿಸಿದ್ದ ಉತ್ತಮ ಕೆಲಸಗಳನ್ನು ಪೂರ್ಣಗೊಳಿಸುವುದು ನಿಜವಾದ ಅರ್ಥದ ಶ್ರಾದ್ಧವೆನಿಸುತ್ತದೆ. ಮೃತರ ನೆನಪಿನಲ್ಲಿ, ಅವರ ಹೆಸರಿನಲ್ಲಿ ಸಮಾಜಕ್ಕೆ ಹಿತವಾಗುವ ಕೆಲಸಗಳನ್ನು ಮಾಡಬಹುದು. ಅಂತ್ಯ ಸಂಸ್ಕಾರದ ಸಂದರ್ಭದಲ್ಲಿ ಮಾಡುವ ಮಂತ್ರೋಚ್ಛಾರಗಳಿಂದ ಮೃತ ಶರೀರಕ್ಕೆ ಯಾವುದೇ ಅನುಕೂಲವಾಗುವುದಿಲ್ಲ. ಅನುಕೂಲವಾಗುವುದೇನಾದರೂ ಇದ್ದರೆ ಅದು ಸಂಸ್ಕಾರ ಕಾರ್ಯ ನೆರವೇರಿಸುವವರಿಗೆ ಅಷ್ಟೆ. ಈ ವೇದಮಂತ್ರ ಹೇಳುತ್ತದೆ:

ಸಂ ಗಚ್ಛಸ್ವ ಪಿತೃಭಿಃ ಸಂ ಯಮೇನೇಷ್ಟಾಪೂರ್ತೇನ ಪರಮೇ ವ್ಯೋಮನ್ |

ಹಿತ್ವಾಯಾವದ್ಯಂ ಪುನರಸ್ತಮೇಹಿ ಸಂ ಗಚ್ಛಸ್ವ ತನ್ವಾ ಸುವರ್ಚಾಃ || (ಋಕ್.೧೦.೧೪.೮.)

     ಓ ಜೀವ! ನಿನ್ನನ್ನು ಪಾಲಿಸುವವರೊಂದಿಗೆ, ಅಹಿಂಸಾ, ಸತ್ಯಾದಿ ವ್ರತಗಳೊಂದಿಗೆ, ಪ್ರಾಪ್ತ ಮತ್ತು ಪ್ರಾಪ್ಯ ಅಭಿಲಾಷೆಗಳೊಂದಿಗೆ, ಪರಮರಕ್ಷಕನಾದ ಪ್ರಭುವಿನಲ್ಲಿ ಆಶ್ರಯ ಪಡೆದುಕೋ. ಕೆಟ್ಟದ್ದನ್ನು ಬಿಟ್ಟು, ಮತ್ತೆ ಮನೆಗೆ ಹೋಗು. ಸುವರ್ಚಸ್ವಿಯಾಗಿ, ಶರೀರದೊಂದಿಗೆ ಮುಂದೆ ಸಾಗು ಎಂಬ ಅರ್ಥದ ಈ ಮಂತ್ರ ಸತ್ತವರಿಗೋ, ಬದುಕಿರುವವರಿಗೋ? ಹಾಗಾದರೆ ಈ ಶ್ರಾದ್ಧವನ್ನು ಹೇಗೆ ಮಾಡಬೇಕು? ಹಿರಿಯರು ಬದುಕಿದ್ದಾಗ ಅವರನ್ನು ಶ್ರದ್ಧೆಯಿಂದ, ಗೌರವದಿಂದ ನೋಡಿಕೊಳ್ಳುವುದೇ ನಿಜವಾದ ಶ್ರಾದ್ಧ. ಅವರು ಜೀವಂತವಿದ್ದಾಗ ಕೀಳಾಗಿ ಕಂಡು, ಅವಮಾನಿಸಿ, ಸರಿಯಾಗಿ ನೋಡಿಕೊಳ್ಳದೆ, ಸತ್ತಾಗ ವಿಜೃಂಭಣೆಯಿಂದ ತಿಥಿ ಮಾಡಿದರೆ ಏನು ಪ್ರಯೋಜನ? ನಮ್ಮ ಹುಟ್ಟಿಗೆ ಮಾಧ್ಯಮಗಳಾದವರಿಗೆ, ಪ್ರೌಢಾವಸ್ಥೆಗೆ ಬರುವವರೆಗೂ ಮತ್ತು ನಂತರದಲ್ಲೂ ಎಲ್ಲಾ ರೀತಿಯ ಸೇವೆ ಮಾಡಿ, ಪಾಲಿಸಿ, ಪೋಷಿಸಿದವರಿಗೆ ಪ್ರತಿಯಾಗಿ ಅವರ ಸೇವೆಯನ್ನು ಮಾಡುತ್ತಾ ಸಂತೋಷದಿಂದ ಇರುವಂತೆ ನೋಡಿಕೊಳ್ಳುವುದೇ ಪಿತೃಋಣವನ್ನು ತೀರಿಸುವ ಉತ್ತಮ ರೀತಿಯಾಗಿದೆ. 

     ಆಚಾರ್ಯ ಋಣವನ್ನು ತೀರಿಸುವುದೆಂದರೆ ಇಂದಿನ ಪ್ರಗತಿಗೆ, ಉನ್ನತಿಗೆ ಕಾರಣರಾದ, ಸುಯೋಗ್ಯ ಮಾರ್ಗದರ್ಶನ ಮಾಡಿದ ಎಲ್ಲಾ ಆಚಾರ್ಯರುಗಳ ಪ್ರತಿ ಶ್ರದ್ಧಾಗೌರವಗಳನ್ನು ಹೊಂದುವುದು ಮತ್ತು ಮುಖ್ಯವಾಗಿ ನಮಗೆ ತಿಳಿದ ಜ್ಞಾನವನ್ನು ಮುಂದಿನವರಿಗೆ ತಿಳಿಸುವ, ಹಂಚುವ ಕೆಲಸವನ್ನು ಮಾಡುವುದೇ ಆಗಿದೆ. ಇಲ್ಲಿ ಆಚಾರ್ಯರು ಎಂದರೆ ಕೇವಲ ನಮಗೆ ಜ್ಞಾನ, ಅನುಭವಗಳನ್ನು ಕೊಡುವ ಎಲ್ಲರೂ ಆಚಾರ್ಯರೇ! ಪ್ರಾಣಿ, ಪಕ್ಷಿ, ಕ್ರಿಮಿ-ಕೀಟಗಳು, ವಿಸ್ಮಯಕರ ಪ್ರಕೃತಿ, ಮುಂತಾದ ಎಲ್ಲವುಗಳಿಂದಲೂ ನಾವು ಒಂದಿಲ್ಲೊಂದು ರೀತಿಯ ಪಾಠವನ್ನು ಕಲಿತಿರುತ್ತೇವೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕಿದೆ. 

     ದೇವಋಣವನ್ನು ತೀರಿಸುವುದೆಂದರೆ ದೇವಸ್ಥಾನ, ಚರ್ಚು, ಮಸೀದಿಗಳಿಗೆ ಹೋಗಿ ಧೂಪ-ದೀಪ-ನೈವೇದ್ಯ ಮಾಡಿ ಕೃತಕೃತ್ಯರಾದೆವೆಂದುಕೊಳ್ಳುವುದಲ್ಲ, ಪ್ರಾರ್ಥಿಸುವುದಲ್ಲ. ಈ ಕ್ರಿಯೆಗಳು ಕೇವಲ ಆತ್ಮೋನ್ನತಿಯ ಸಲುವಾಗಿ ಅಷ್ಟೇ. ಭಗವಂತನ ಸೃಷ್ಟಿಯಾದ ಪಂಚಭೂತಗಳಿಂದ ನಿರ್ಮಿತವಾಗಿರುವ ಶರೀರದ ಋಣ ತೀರಿಸುವ ಸಲುವಾಗಿ ಪಂಚಭೂತಗಳಾದ ಜಲ, ನೆಲ, ಆಕಾಶ, ಅಗ್ನಿ, ವಾಯುಗಳ ಸದುಪಯೋಗ ಮಾಡಿಕೊಳ್ಳುವುದರೊಟ್ಟಿಗೆ ಅವುಗಳ ರಕ್ಷಣೆಯ ಹೊಣೆಯನ್ನೂ ಹೊತ್ತು, ನಮ್ಮ ಮುಂದಿನ ಪೀಳಿಗೆಗೂ ಅವುಗಳು ಉಪಯೋಗವಾಗುವಂತೆ ಉಳಿಸಿಹೋಗುವುದೇ ನಿಜವಾಗಿ ದೇವಋಣವನ್ನು ತೀರಿಸುವ ಬಗೆಯಾಗಿದೆ.

-ಕ.ವೆಂ.ನಾಗರಾಜ್.

Comments

Submitted by nageshamysore Sat, 07/25/2015 - 14:12

ಕವಿಗಳೆ ನಮಸ್ಕಾರ. ಜಗತ್ತು-ಜೀವ-ದೇವ, ಸೃಷ್ಟಿ-ಸ್ಥಿತಿ-ಲಯ, ಋಣತ್ರಯಗಳಾದ ಪಿತೃ-ಆಚಾರ್ಯ-ದೇವ ಋಣಗಳೆಲ್ಲದರ ನಡುವಿನ ಸಂಬಂಧದ ಮೇಲೆ ಬೆಳಕು ಚೆಲ್ಲಿದ ಉತ್ಕೃಷ್ಟ ಬರಹ. ಸಮಷ್ಟಿಯ ಲೆಕ್ಕಾಚಾರದಲ್ಲಿ ಎಲ್ಲವು ಹೇಗೆ ಅವಲಂಬಿತವಾಗಿವೆ ಮತ್ತು ಪರಸ್ಪರ ಹೇಗೆ ಪ್ರತಿಕ್ರಿಯಿಸುತ್ತವೆ ಎಂದು ಚೆನ್ನಾಗಿ ಪ್ರತಿಪಾದಿಸಿದೆ. ಅಭಿನಂದನೆಗಳು ಮತ್ತು ಧನ್ಯವಾದಗಳು...!

Submitted by Nagaraj Bhadra Sat, 07/25/2015 - 22:15

ಕವಿ ನಾಗರಾಜ ಸರ್ ಅವರಿಗೆ ನಮಸ್ಕಾರಗಳು.ಜಗತ್ತು,ಜೀವ,ಮನುಷ್ಯ ಬಗ್ಗೆ ಬಿಂಬಿಸುವ ಉತ್ತಮ ಲೇಖನ ಸರ್.ಮನುಷ್ಯ ಬರುವಾಗಲೂ ಬೆತ್ತಲು ಹೋಗುವಾಗಲೂ ಬೆತ್ತಲು.ಆದರೂ ಅವನ ವ್ಯಾಮೋಹ, ಅತಿಯಾದ ಆಸೆ ಮಾತ್ರ ಕಡಿಮೆಯಾಗಿಲ್ಲ.ಬದುಕಿರೋವರೆಗೂ ಬೇರೆಯವರಿಗೆ ಕೈಯಲ್ಲಿ ಆದಷ್ಟು ಸಹಾಯ ಮಾಡಬೇಕು.

Submitted by H A Patil Sun, 07/26/2015 - 18:38

ಕವಿ ನಾಗರಾಜರವರಿಗೆ ವಂದನೆಗಳು
ಸಂಬಂಧದ ಅನುಬಂಧ ಋಣದ ವ್ಯಾಖ್ಯೆಯನ್ನು ಬಿಂಬಿಸುವ ಎಲ್ಲರಲ್ಲಿ ಋಣಪ್ರಜ್ಞೆಯನ್ನು ಜಾಗೃತಗೊಳಿಸುವ ಲೇಖನ ಬಹಳ ಅರ್ಥವ್ಯಾಪ್ತಿಯನ್ನು ಹೊಂದಿರುವ ಲೇಖನ ಓದಿ ಹರುಷವಾಯಿತು, ಧನ್ಯವಾದಗಳು.