ಜೈ ಜವಾನ್ - ಜೈ ಕಿಸಾನ್
ಚಿತ್ರ ಕೃಪೆ: ವಿಕೀಪೀಡಿಯಾ (https://en.m.wikipedia.org/wiki/File:Lal_Bahadur_Shastri_(cropped).jpg)
ಜೈ ಜವಾನ್ ಜೈ ಕಿಸಾನ್
ಮುನ್ನಡೆಯಿತಲ್ಲ ಹಿಂದೂಸ್ತಾನ್
ಕದನದ ಪರಿ ಪರಿ ಸಮ್ಮಾನ
ನಡೆಸಿದನಂತೆ ಶಾಸ್ತ್ರಿ ವಾಮನ ||
ಗೇಣುದ್ದವ ಅಳೆಯಲುಂಟೆ ?
ಗೇಣು ಹಾಕಿಯೆ ದೊಡ್ಡಳತೆ
ಗೋಣಾಡಿಸದೆ ಗಟ್ಟಿ ಎದೆಯೊಡ್ಡಿ
ಮೆಟ್ಟೇ ಸ್ಥೈರ್ಯ ಇನ್ಯಾರಿಗೆ ಬಿಡಿ ! ||
ವರುಷವೆರಡೆ ಆಳಿದರೇನು ?
ಪುರುಷಸಿಂಹ ಬಾಳಿದ ತನು
ಅಳುಕಂಜದೆ ನಡೆದೊತ್ತಿ ಅರಿಗೆ
ಔದಾರ್ಯ ಮತ್ತೆ ತೋರಿದ ಬಗೆ ||
ಕುಬ್ಜ ಕಾಯದಂತೆ ವಯಸು
ಬೇಕಿತ್ತೇನು ಅವನಿಗೂ ಕೂಸು?
ಕಾರ್ಯ ಮುಗಿಸಿ ತತ್ಕಾಯವಳಿದೂ
ಅಸುವಳಿದಳಿಯದ ಘೋಷವಾಕ್ಯವದು ||
ಇಂದಿಗು ಅದೇ ಮಂತ್ರ ಸರಿ
ಜವಾನ್ ಕಿಸಾನ್ ದ್ವಂದ ಪರಿ
ಬಿತ್ತಿ ಬೆಳೆದುದ ಮುತ್ತ ಬಿಡದೆ
ಕಾವಲಾಗಿ ದಂಡು ಸೋದರರೆದೆ ||
Comments
ಉ: ಜೈ ಜವಾನ್ - ಜೈ ಕಿಸಾನ್
ಆತ್ಮೀಯ ನಾಗೇಶ ಜಿ, ಶಾಸ್ತ್ರೀಜಿ ಯವರನ್ನು ತುಂಬ ಚನ್ನಾಗಿ ಕಟ್ಟಿಕೊಡುತ್ತ ಸುಂದರ ಸಶಕ್ತ ಕವನವನ್ನು ಹೆಣೆದಿದ್ದೀರಿ. ಈ ದೇಶದ ಧೀಮಂತ ಪ್ರಧಾನಿಯಾದ ಲಾಲ ಬಹಾದ್ದೂರ ಶಾಸ್ತ್ರೀಜಿಯವರನ್ನು ತಾವು ನೆನೆದ ಭಕ್ತಿಗೆ ಧನ್ಯ. ಸರ್, ವಂದನೆಗಳು.
In reply to ಉ: ಜೈ ಜವಾನ್ - ಜೈ ಕಿಸಾನ್ by lpitnal
ಉ: ಜೈ ಜವಾನ್ - ಜೈ ಕಿಸಾನ್
ಇಟ್ನಾಳರೆ ನಮಸ್ಕಾರ ಮತ್ತು ಧನ್ಯವಾದಗಳು. ಲಾಲ್ ಬಹದೂರ್ ಶಾಸ್ತ್ರಿಗಳ ಈ ಕಿರು ಕವನಕ್ಕೆ ಪ್ರೇರಣೆಯಾದದ್ದು ಸಂಪದೀಗ ಸಂತೋಷ ಶಾಸ್ತ್ರಿಗಳ, ಗಾಂಧಿ ಕವನಕ್ಕೆ ನೀಡಿದ ಸಣ್ಣ ಕಾಮೆಂಟಿನಿಂದ. ಗಾಂಧಿ ಜಯಂತಿಯ ದಿನವೆ ಲಾ.ಬ.ಶಾಸ್ತ್ರಿಗಳ ಜಯಂತಿಯೆಂದರಿವಾಗಿ ಹೆಣೆದದ್ದು, ನನಗೆ ತಿಳಿದಷ್ಟು ಮಾಹಿತಿ ಸೇರಿಸಿಕೊಂಡು :-)
ಉ: ಜೈ ಜವಾನ್ - ಜೈ ಕಿಸಾನ್
ರಾಯರ ಕವನ ಬಲು ಸೊಗಸಾಗಿದೆಯೆಂದರೆ ಚರ್ವಿತ ಚರ್ವಣವಾದರೂ, ಬೇರೆ ದಾರಿ ಇಲ್ವೇ! ಅಲ್ಲಾ ಮಾರಾಯರೇ, ಶಾಸ್ತ್ರೀಜಿ ಬಗ್ಗೆ ಕವನ ಬರೀದಿದ್ರೆ ಈ ಶಾಸ್ತ್ರಿಗೆ ಮಂಡೆ ಬೆಚ್ಚಗಾಗುವುದು ಸರಿಯಲ್ಲವೋ! (ಹಾಗಂದೇಂತ ನನ್ನ ಕುಂಡೆ ಬೆಚ್ಚ ಮಾಡಿದರೆ ತಪ್ಪಾಗ್ತದೆ!) (ಕ್ಷಮಿಸಿ, ಇದು ಪ್ರಾಸಕ್ಕಾಗಿ ಮಾತ್ರ,no offense meant)
In reply to ಉ: ಜೈ ಜವಾನ್ - ಜೈ ಕಿಸಾನ್ by santhosha shastry
ಉ: ಜೈ ಜವಾನ್ - ಜೈ ಕಿಸಾನ್
ಶಾಸ್ತ್ರಿಗಳೆ ನಮಸ್ಕಾರ ಮತ್ತು ಧನ್ಯವಾದಗಳು..:-)
ರಾಮ ರಾಮಾ..! ಆ ಶಾಸ್ತ್ರಿಗಳ ಬಗ್ಗೆ ಬರೆದು, ಈ ಶಾಸ್ತ್ರಿಗಳ ಮಂಡೆ ತಂಪಾಗಿಸಿ, ಇನ್ನೆಲ್ಲೆಲೊ ಪ್ರಾಸದ ಬಾಸುಂಡೆ ಬರಿಸಿಕೊಳ್ಳೊದ್ರಿಂದ ತಪ್ಪಿಸಿಕೊಂಡಂಗಾಯ್ತು. ಒಟ್ಟಾರೆ ಇದು ಸದ್ಯಕ್ಕೆ ಶಾಸ್ತ್ರಿಗಳ ಗುಣಗಾನಕ್ಕೆ ಸುಸಮಯ ಬಿಡಿ - ಲಾಲ್ ಬಹದ್ದೂರ್ ಶಾಸ್ತ್ರಿಗಳ ಜತೆ, ಸಂಪದದ ಸಂತೋಷ್ ಶಾಸ್ತ್ರಿಗಳು, ಕ್ರಿಕೆಟ್ಟಿನ ರವಿ ಶಾಸ್ತ್ರಿಗಳು...
ಉ: ಜೈ ಜವಾನ್ - ಜೈ ಕಿಸಾನ್
ಶಾಸ್ತ್ರೀಜಿ ನನ್ನ ಮೆಚ್ಚಿನ ನಾಯಕಮಣಿಗಳಲ್ಲಿ ಒಬ್ಬರು. ಆಹಾರದ ಸಮಸ್ಯೆ ನೀಗಿಸಲು ವಾರದಲ್ಲಿ ಒಂದು ಒಪ್ಪತ್ತು ಉಪವಾಸ ಮಾಡಲು ಅವರು ಕರೆ ಕೊಟ್ಟಿದ್ದರು. ಅವರ ಕರೆ ಅನುಸರಿಸಿ ನಾನು ಸುಮಾರು 8 ವರ್ಷಗಳ ವರೆಗೆ ಪ್ರತಿ ಸೋಮವಾರದಂದು ಒಪ್ಪತ್ತು ಉಪವಾಸ ಆಚರಿಸಿದ್ದೆ. ನಂತರದಲ್ಲಿ ಮಧುಮೇಹ ರೋಗ ನನ್ನ ಈ ವ್ರತ ನಿಲ್ಲಿಸಿತು. ಇವರ ಸಾವಿನ ಹಿಂದೆ ರಷ್ಯ ಕಮ್ಯುನಿಸ್ಟರ ಮತ್ತು ನಮ್ಮವರೇ ಆದ ಬೆನ್ನಿಗೆ ಚೂರಿ ಹಾಕುವವರ ಸಂತತಿಯ ಕರಾಳ ಕೈವಾಡವಿದೆ.
In reply to ಉ: ಜೈ ಜವಾನ್ - ಜೈ ಕಿಸಾನ್ by kavinagaraj
ಉ: ಜೈ ಜವಾನ್ - ಜೈ ಕಿಸಾನ್
ಕವಿಗಳೆ ಪ್ರತಿಕ್ರಿಯೆಗೆ ನಮಸ್ಕಾರ ಮತ್ತು ಧನ್ಯವಾದಗಳು. ಅಲ್ಪಕಾಲದ ಅಧಿಕಾರದಲ್ಲೂ ಧೀರ್ಘಕಾಲದ ಪ್ರಭಾವ ಬೀರಿದ ಕೆಲವ ವ್ಯಕ್ತಿತ್ವಗಳಲ್ಲಿ ಶಾಸ್ತ್ರಿಗಳು ಒಬ್ಬರು. ಅವರನ್ನು ನೆನೆಯುವ ದಿನ ಮತ್ತು ಕಾರ್ಯಕ್ರಮಗಳು ಅಪರೂಪವೆನಿಸುತ್ತದೆ - ಈ ಹುಟ್ಟುಹಬ್ಬವು ಗಾಂಧಿಜಯಂತಿಯ ಜತೆ ಸೇರಿ ಗೌಣವಾಗಿಬಿಡುವ ಹಾಗೆ.