ಜೈ ಜವಾನ್ - ಜೈ ಕಿಸಾನ್

ಜೈ ಜವಾನ್ - ಜೈ ಕಿಸಾನ್

ಚಿತ್ರ ಕೃಪೆ: ವಿಕೀಪೀಡಿಯಾ (https://en.m.wikipedia.org/wiki/File:Lal_Bahadur_Shastri_(cropped).jpg)

ಜೈ ಜವಾನ್ ಜೈ ಕಿಸಾನ್
ಮುನ್ನಡೆಯಿತಲ್ಲ ಹಿಂದೂಸ್ತಾನ್
ಕದನದ ಪರಿ ಪರಿ ಸಮ್ಮಾನ
ನಡೆಸಿದನಂತೆ ಶಾಸ್ತ್ರಿ ವಾಮನ ||

ಗೇಣುದ್ದವ ಅಳೆಯಲುಂಟೆ ?
ಗೇಣು ಹಾಕಿಯೆ ದೊಡ್ಡಳತೆ
ಗೋಣಾಡಿಸದೆ ಗಟ್ಟಿ ಎದೆಯೊಡ್ಡಿ
ಮೆಟ್ಟೇ ಸ್ಥೈರ್ಯ ಇನ್ಯಾರಿಗೆ ಬಿಡಿ ! ||

ವರುಷವೆರಡೆ ಆಳಿದರೇನು ?
ಪುರುಷಸಿಂಹ ಬಾಳಿದ ತನು
ಅಳುಕಂಜದೆ ನಡೆದೊತ್ತಿ ಅರಿಗೆ
ಔದಾರ್ಯ ಮತ್ತೆ ತೋರಿದ ಬಗೆ ||

ಕುಬ್ಜ ಕಾಯದಂತೆ ವಯಸು
ಬೇಕಿತ್ತೇನು ಅವನಿಗೂ ಕೂಸು?
ಕಾರ್ಯ ಮುಗಿಸಿ ತತ್ಕಾಯವಳಿದೂ
ಅಸುವಳಿದಳಿಯದ ಘೋಷವಾಕ್ಯವದು ||

ಇಂದಿಗು ಅದೇ ಮಂತ್ರ ಸರಿ
ಜವಾನ್ ಕಿಸಾನ್ ದ್ವಂದ ಪರಿ
ಬಿತ್ತಿ ಬೆಳೆದುದ ಮುತ್ತ ಬಿಡದೆ
ಕಾವಲಾಗಿ ದಂಡು ಸೋದರರೆದೆ ||

 

Comments

Submitted by lpitnal Tue, 10/06/2015 - 22:42

ಆತ್ಮೀಯ ನಾಗೇಶ ಜಿ, ಶಾಸ್ತ್ರೀಜಿ ಯವರನ್ನು ತುಂಬ ಚನ್ನಾಗಿ ಕಟ್ಟಿಕೊಡುತ್ತ ಸುಂದರ ಸಶಕ್ತ ಕವನವನ್ನು ಹೆಣೆದಿದ್ದೀರಿ. ಈ ದೇಶದ ಧೀಮಂತ ಪ್ರಧಾನಿಯಾದ ಲಾಲ ಬಹಾದ್ದೂರ ಶಾಸ್ತ್ರೀಜಿಯವರನ್ನು ತಾವು ನೆನೆದ ಭಕ್ತಿಗೆ ಧನ್ಯ. ಸರ್, ವಂದನೆಗಳು.

Submitted by nageshamysore Wed, 10/07/2015 - 05:46

In reply to by lpitnal

ಇಟ್ನಾಳರೆ ನಮಸ್ಕಾರ ಮತ್ತು ಧನ್ಯವಾದಗಳು. ಲಾಲ್ ಬಹದೂರ್ ಶಾಸ್ತ್ರಿಗಳ ಈ ಕಿರು ಕವನಕ್ಕೆ ಪ್ರೇರಣೆಯಾದದ್ದು ಸಂಪದೀಗ ಸಂತೋಷ ಶಾಸ್ತ್ರಿಗಳ, ಗಾಂಧಿ ಕವನಕ್ಕೆ ನೀಡಿದ ಸಣ್ಣ ಕಾಮೆಂಟಿನಿಂದ. ಗಾಂಧಿ ಜಯಂತಿಯ ದಿನವೆ ಲಾ.ಬ.ಶಾಸ್ತ್ರಿಗಳ ಜಯಂತಿಯೆಂದರಿವಾಗಿ ಹೆಣೆದದ್ದು, ನನಗೆ ತಿಳಿದಷ್ಟು ಮಾಹಿತಿ ಸೇರಿಸಿಕೊಂಡು :-)

Submitted by santhosha shastry Wed, 10/07/2015 - 23:46

ರಾಯರ‌ ಕವನ‌ ಬಲು ಸೊಗಸಾಗಿದೆಯೆಂದರೆ ಚರ್ವಿತ‌ ಚರ್ವಣವಾದರೂ, ಬೇರೆ ದಾರಿ ಇಲ್ವೇ! ಅಲ್ಲಾ ಮಾರಾಯರೇ, ಶಾಸ್ತ್ರೀಜಿ ಬಗ್ಗೆ ಕವನ‌ ಬರೀದಿದ್ರೆ ಈ ಶಾಸ್ತ್ರಿಗೆ ಮಂಡೆ ಬೆಚ್ಚಗಾಗುವುದು ಸರಿಯಲ್ಲವೋ! (ಹಾಗಂದೇಂತ‌ ನನ್ನ‌ ಕುಂಡೆ ಬೆಚ್ಚ‌ ಮಾಡಿದರೆ ತಪ್ಪಾಗ್ತದೆ!) (ಕ್ಷಮಿಸಿ, ಇದು ಪ್ರಾಸಕ್ಕಾಗಿ ಮಾತ್ರ‌,no offense meant)

Submitted by nageshamysore Thu, 10/08/2015 - 00:36

In reply to by santhosha shastry

ಶಾಸ್ತ್ರಿಗಳೆ ನಮಸ್ಕಾರ ಮತ್ತು ಧನ್ಯವಾದಗಳು..:-)

ರಾಮ ರಾಮಾ..! ಆ ಶಾಸ್ತ್ರಿಗಳ ಬಗ್ಗೆ ಬರೆದು, ಈ ಶಾಸ್ತ್ರಿಗಳ ಮಂಡೆ ತಂಪಾಗಿಸಿ, ಇನ್ನೆಲ್ಲೆಲೊ ಪ್ರಾಸದ ಬಾಸುಂಡೆ ಬರಿಸಿಕೊಳ್ಳೊದ್ರಿಂದ ತಪ್ಪಿಸಿಕೊಂಡಂಗಾಯ್ತು. ಒಟ್ಟಾರೆ ಇದು ಸದ್ಯಕ್ಕೆ ಶಾಸ್ತ್ರಿಗಳ ಗುಣಗಾನಕ್ಕೆ ಸುಸಮಯ ಬಿಡಿ - ಲಾಲ್ ಬಹದ್ದೂರ್ ಶಾಸ್ತ್ರಿಗಳ ಜತೆ, ಸಂಪದದ ಸಂತೋಷ್ ಶಾಸ್ತ್ರಿಗಳು, ಕ್ರಿಕೆಟ್ಟಿನ ರವಿ ಶಾಸ್ತ್ರಿಗಳು...

Submitted by kavinagaraj Wed, 10/14/2015 - 21:14

ಶಾಸ್ತ್ರೀಜಿ ನನ್ನ ಮೆಚ್ಚಿನ ನಾಯಕಮಣಿಗಳಲ್ಲಿ ಒಬ್ಬರು. ಆಹಾರದ ಸಮಸ್ಯೆ ನೀಗಿಸಲು ವಾರದಲ್ಲಿ ಒಂದು ಒಪ್ಪತ್ತು ಉಪವಾಸ ಮಾಡಲು ಅವರು ಕರೆ ಕೊಟ್ಟಿದ್ದರು. ಅವರ ಕರೆ ಅನುಸರಿಸಿ ನಾನು ಸುಮಾರು 8 ವರ್ಷಗಳ ವರೆಗೆ ಪ್ರತಿ ಸೋಮವಾರದಂದು ಒಪ್ಪತ್ತು ಉಪವಾಸ ಆಚರಿಸಿದ್ದೆ. ನಂತರದಲ್ಲಿ ಮಧುಮೇಹ ರೋಗ ನನ್ನ ಈ ವ್ರತ ನಿಲ್ಲಿಸಿತು. ಇವರ ಸಾವಿನ ಹಿಂದೆ ರಷ್ಯ ಕಮ್ಯುನಿಸ್ಟರ ಮತ್ತು ನಮ್ಮವರೇ ಆದ ಬೆನ್ನಿಗೆ ಚೂರಿ ಹಾಕುವವರ ಸಂತತಿಯ ಕರಾಳ ಕೈವಾಡವಿದೆ.

Submitted by nageshamysore Thu, 10/15/2015 - 04:18

In reply to by kavinagaraj

ಕವಿಗಳೆ ಪ್ರತಿಕ್ರಿಯೆಗೆ ನಮಸ್ಕಾರ ಮತ್ತು ಧನ್ಯವಾದಗಳು. ಅಲ್ಪಕಾಲದ ಅಧಿಕಾರದಲ್ಲೂ ಧೀರ್ಘಕಾಲದ ಪ್ರಭಾವ ಬೀರಿದ ಕೆಲವ ವ್ಯಕ್ತಿತ್ವಗಳಲ್ಲಿ ಶಾಸ್ತ್ರಿಗಳು ಒಬ್ಬರು. ಅವರನ್ನು ನೆನೆಯುವ ದಿನ ಮತ್ತು ಕಾರ್ಯಕ್ರಮಗಳು ಅಪರೂಪವೆನಿಸುತ್ತದೆ - ಈ ಹುಟ್ಟುಹಬ್ಬವು ಗಾಂಧಿಜಯಂತಿಯ ಜತೆ ಸೇರಿ ಗೌಣವಾಗಿಬಿಡುವ ಹಾಗೆ.