ವೇದಗಣಿತ ಪರಿಚಯ ಭಾಗ – ೨: ಕಟಪಯಾದಿ ಪದ್ಧತಿ - ೧
ವೇದಗಣಿತ ಪರಿಚಯ ಭಾಗ – ೨: ಕಟಪಯಾದಿ ಪದ್ಧತಿ - ೧
೧. ಕಟಪಯಾದಿ ಪದ್ಧತಿಯಲ್ಲಿ ಸಂಖ್ಯೆಗಳನ್ನು ಅಕ್ಷರಗಳ ಮೂಲಕ ಸಂಕೇತಿಸುವ ಮೂರು ವಿಧಾನಗಳಿವೆ.
೨. ಮೊದಲನೆಯ ಪದ್ಧತಿಯ ಸೂತ್ರ ಹಾಗು ಅವುಗಳ ಅರ್ಥವನ್ನು ಕೆಳಗಡೆ ವಿವರಿಸಲಾಗಿದೆ –
(ಕೋಷ್ಟಕ - ೧ನ್ನು ನೋಡಿ)
ಕಾದಿ ನವ = ’ಕ’ ದಿಂದ ’ಝ’ ದವರೆಗಿನ ಅಕ್ಷರಗಳು (ಒಂಬತ್ತು) ಒಂದರಿಂದ ಒಂಬತ್ತರವರೆಗಿನ (೧ರಿಂದ ೯) ಅಂಕೆಗಳನ್ನು ಸೂಚಿಸುತ್ತವೆ.
ಟಾದಿ ನವ = ’ಟ’ ದಿಂದ ’ಧ’ ದವರೆಗಿನ ಅಕ್ಷರಗಳು (ಒಂಬತ್ತು) ಒಂದರಿಂದ ಒಂಬತ್ತರವರೆಗಿನ (೧ರಿಂದ ೯) ಅಂಕೆಗಳನ್ನು ಸೂಚಿಸುತ್ತವೆ.
ಪಾದಿ ಪಂಚಕ = ’ಪ’ ದಿಂದ ’ಮ’ ದವರೆಗಿನ ಅಕ್ಷರಗಳು (ಐದು) ಒಂದರಿಂದ ಐದರವರೆಗಿನ (೧ರಿಂದ ೫) ಅಂಕೆಗಳನ್ನು ಸೂಚಿಸುತ್ತವೆ.
ಯಾಧ್ಯಾಷ್ಟಕ = ’ಯ’ ದಿಂದ ’ಹ’ ದವರೆಗಿನ ಅಕ್ಷರಗಳು (ಎಂಟು) ಒಂದರಿಂದ ಎಂಟರವರೆಗಿನ (೧ರಿಂದ ೮) ಅಂಕೆಗಳನ್ನು ಸೂಚಿಸುತ್ತವೆ.
ಕ್ಷಃ ಶೂನ್ಯಮ್ = ’ಕ್ಷ’ ಅಕ್ಷರವು ಶೂನ್ಯವನ್ನು ಅಂದರೆ ಸೊನ್ನೆಯನ್ನು ಸೂಚಿಸುತ್ತದೆ.
೩, ಈ ಕೆಳಗಿನ ಕೋಷ್ಟಕವು (ಕೋಷ್ಟಕ - ೨ನ್ನು ನೋಡಿ) ಅಕ್ಷರಗಳು ಹಾಗು ಅವುಗಳು ಸೂಚಿಸುವ ಅಂಕೆಗಳನ್ನು ತೋರಿಸುತ್ತದೆ.
೧ ೨ ೩ ೪ ೫ ೬ ೭ ೮ ೯ ೦
ಕ ಖ ಗ ಘ ಙ ಚ ಛ ಜ ಝ -
ಟ ಠ ಡ ಢ ಣ ತ ಥ ದ ಧ -
ಪ ಫ ಬ ಭ ಮ - - - - -
ಯ ರ ಲ ವ ಶ ಷ ಸ ಹ - ಕ್ಷ
೪. ಈ ಪದ್ಧತಿಯಂತೆ ಅಂಕೆ ೧ನ್ನು ಕ, ಟ, ಪ ಮತ್ತು ಯ ಗಳು ಸೂಚಿಸುತ್ತವೆ.
೫. ಬೇರೆ ಅಂಕೆಗಳನ್ನೂ ಸಹ ಅದೇ ವಿಧವಾಗಿ ಮೇಲಿನ ಕೋಷ್ಟಕದಿಂದ ತಿಳಿಯಬಹುದು.
೬. ಸ್ವರದೊಂದಿಗೆ ವ್ಯಂಜನವು ಸೇರಿ ಗುಣಿತಾಕ್ಷರವುಂಟಾದಾಗ ಆ ಅಕ್ಷರದ ಬೆಲೆಯನ್ನು ಲೆಕ್ಕಹಾಕಲು ವ್ಯಂಜನಾಕ್ಷರವಷ್ಟೆ ತೆಗೆದುಕೊಳ್ಳಬೇಕು, ಸ್ವರಾಕ್ಷರಕ್ಕೆ ಯಾವುದೇ ಪ್ರತ್ಯೇಕವಾದ ಬೆಲೆಯಿರುವುದಿಲ್ಲ. ಉದಾಹರಣೆಗೆ ಕ, ಕಾ, ಕಿ, ಕೀ ಎಲ್ಲವೂ ಕ ಅಕ್ಷರದ ಬೆಲೆಯಾದ ಅಂಕೆ ೧ನ್ನು ಮಾತ್ರವೇ ಹೊಂದಿರುತ್ತವೆ.
ಉದಾಹರಣೆ - ೧: "ಜಯ" ಶಬ್ದವು ಯಾವ ಸಂಖ್ಯೆಯನ್ನು ಸೂಚಿಸುತ್ತದೆ?
೧. ಜಯ ಶಬ್ದವು ಮಹಾಭಾರತದಲ್ಲಿ ಬಹಳ ಮಹತ್ವದ್ದಾಗಿ ಪರಿಗಣಿಸಲ್ಪಟ್ಟಿದೆ.
ಮಹಾಭಾರತ ಕೃತಿಯು ಕೆಳಗಿನ ಶ್ಲೋಕದಿಂದ ಆರಂಭವಾಗುತ್ತದೆ.
ನಾರಾಯಣ ನಮಸ್ಕೃತ್ಯ ನರಂ ಚೈವ ನರೋತ್ತಮಮ್ l
ದೇವೀಂ ಸರಸ್ವತೀಂ ವ್ಯಾಸಂ ತಥೋ ಜಯಮುದೈರಯೇತ್ ll
ಗೀತೆಯು ಈ ಶ್ಲೋಕದೊಂದಿಗೆ ಆರಂಭವಾಗುತ್ತದೆ (ಗೀತಾ ೧. ೧) -
ಧರ್ಮಕ್ಷೇತ್ರೇ ಕುರುಕ್ಷೇತ್ರೇ ಸಮವೇತಾ ಯುಯುತ್ಸವಃ l
ಮಾಮಕಾಃ ಪಾಂಡವಶ್ಚೈವ ಕಿಮಕುರ್ವತ ಸಂಜಯ ll
ಗೀತೆಯು ಈ ಶ್ಲೋಕದೊಂದಿಗೆ ಮುಕ್ತಾಯವಾಗುತ್ತದೆ (ಗೀತಾ ೧೮.೭೮) -
ಯತ್ರ ಯೋಗೇಶ್ವರಃ ಕೃಷ್ಣೋ ಯತ್ರ ಪಾರ್ಥೋ ಧನುರ್ಧರಃ l
ತತ್ರ ಶ್ರೀರ್ವಿಜಯೋ ಭೂತಿಃ ಧ್ರುವಾನೀತಿರ್ಮತಿರ್ಮಮ ll
ಜಯ ಶಬ್ದವು ಈ ಎಲ್ಲಾ ಶ್ಲೋಕಗಳಲ್ಲಿಯೂ ಕಂಡುಬರುತ್ತದೆ.
೨. ಜಯ ಶಬ್ದದ ಸಂಖ್ಯಾ ಬೆಲೆಯು ಈ ವಿಧವಾಗಿ ಇದೆ -
’ಜ’ ಅಕ್ಷರದ ಸ್ಥಾನ ಬೆಲೆ = ೮ (ಏಕ ಸ್ಥಾನ)
’ಯ’ ಅಕ್ಷರದ ಸ್ಥಾನ ಬೆಲೆ = ೧ (ದಶ ಸ್ಥಾನ)
೩. ಅಂಕೆಗಳನ್ನು ಅವುಗಳ ಸ್ಥಾನ ಬೆಲೆಗಳ ಪ್ರಕಾರ ಹೊಂದಿಸಲು ಇರುವ ಸೂತ್ರ - ಅಂಕಾನಾಂ ವಾಮತೋ ಗತಿಃ (ಅಂಕೆಗಳನ್ನು ಬಲದಿಂದ ಎಡಕ್ಕೆ ಬರೆಯಿರಿ)
೪. ಸೂತ್ರದಂತೆ ‘ಜ(=೮)’ ಅಕ್ಷರವನ್ನು ಏಕದ ಸ್ಥಾನದಲ್ಲಿ, ಹಾಗು ‘ಯ(=೧)’ ಅಕ್ಷರವನ್ನು ಹತ್ತರ (ದಶಮ) ಸ್ಥಾನದಲ್ಲಿ ಬರೆಯಬೇಕು.
೫. ಆಗ ಸೂತ್ರವನ್ನು ಅನುಸರಿಸಿ ಉತ್ಪನ್ನವಾಗುವ ಸಂಖ್ಯೆಯು ೧೮ ಆಗುತ್ತದೆ.
೬. ಮಹಾಭಾರತದಲ್ಲಿರುವ ಪರ್ವಗಳ ಸಂಖ್ಯೆ = ೧೮
೭. ಮಹಾಭಾರತದಲ್ಲಿರುವ ಅಧ್ಯಾಯಗಳ ಸಂಖ್ಯೆ = ೧೮
೮. ಮಹಾಭಾರತ ಯುದ್ಧ ನಡೆದ ದಿನಗಳ ಸಂಖ್ಯೆ = ೧೮
೯. ಮಹಾಭಾರತ ಯುದ್ಧದಲ್ಲಿ ಪಾಲ್ಗೊಂಡ ಅಕ್ಷೋಹಿಣಿ ಸೈನ್ಯಗಳ ಸಂಖ್ಯೆ
(ಕೌರವರದು ೧೧ ಹಾಗು ಪಾಂಡವರದು ೭) = ೧೮
೧೦. ಮಹಾಭಾರತಕ್ಕೆ ಇರುವ ಪರ್ಯಾಯ ಹೆಸರು "ಜಯ"
****
ಆಂಗ್ಲ ಮೂಲ: ಶ್ರೀಯುತ ಡಾ. ರೇಮೆಳ್ಳ ಅವಧಾನಿಗಳು ರಚಿಸಿರುವ ವೇದ ಗಣಿತ -೪, ಪ್ರಕಟಣೆ: ಶ್ರೀ ವೇದಭಾರತಿ, ಭಾಗ್ಯನಗರ VEDIC MATHEMATICS - 4, (PUBLISHED BY SHRI VEDA BHARATHI, AUTHOR: Dr. Remella Avadhanulu)
ಇದರ ಹಿಂದಿನ ಲೇಖನ ವೇದಗಣಿತ ಕಿರು ಪರಿಚಯ ಭಾಗ - ೧: ಸಂಸ್ಕೃತದಲ್ಲಿ ಸಂಖ್ಯೆಗಳನ್ನು ಹೇಳುವ ವಿಧಾನ ಈ ಕೊಂಡಿಯನ್ನು ನೋಡಿ https://sampada.net/blog/%E0%B2%AD%E0%B2%BE%E0%B2%97-%E0%B3%A7-%E0%B2%B5...
Comments
ಉ: ವೇದಗಣಿತ ಪರಿಚಯ ಭಾಗ – ೨: ಕಟಪಯಾದಿ ಪದ್ಧತಿ - ೧
ಕುತುಹಲಕಾರಿಯಾಗಿದೆ ಹಾಗು ಮನಮುಟ್ಟುವಂತೆ
ವಿವರಣೆ ಮಾಡಿರುವಿರಿ ಶ್ರೀಧರರೆ.ಮುಂದಿನ ಭಾಗಕ್ಕಾಗಿ ಕಾಯುತ್ತಿದ್ದೇನೆ
ವಂದನೆಗಳು.
In reply to ಉ: ವೇದಗಣಿತ ಪರಿಚಯ ಭಾಗ – ೨: ಕಟಪಯಾದಿ ಪದ್ಧತಿ - ೧ by swara kamath
ಉ: ವೇದಗಣಿತ ಪರಿಚಯ ಭಾಗ – ೨: ಕಟಪಯಾದಿ ಪದ್ಧತಿ - ೧
ನಿಮ್ಮ ಪ್ರೋತ್ಸಾಹದಾಯಕ ನುಡಿಗಳಿಗೆ ಧನ್ಯವಾದಗಳು ಕಾಮತ್ ಸರ್. ಎಂದಿನಂತೆ ನನ್ನದು ಅನುವಾದಕನ ಪಾತ್ರ ಮಾತ್ರ. ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ :)
ಉ: ವೇದಗಣಿತ ಪರಿಚಯ ಭಾಗ – ೨: ಕಟಪಯಾದಿ ಪದ್ಧತಿ - ೧
ಹೊಸ ಹೊಸ ವಿಚಾರಗಳನ್ನು ಓದಿ, ಅರ್ಥೈಸಿಕೊಂಡು ಸದ್ವಿರ್ಮಶೆ ಮಾಡಿ ಪ್ರೋತ್ಸಾಹಿಸುವುದು ಸಂಪದ ವಾಚಕರ ಹಿರಿಯ ಗುಣ. ಮಿನ್ನೇರಿಸಿದ ದಿನದಂದೇ ಈ ಸರಣಿಯ ಎರಡೂ ಲೇಖನಗಳಿಗೆ ೧೦೦ಕ್ಕೂ ಅಧಿಕ ಹಿಟ್ಟುಗಳು ಸಿಕ್ಕಿರುವುದೇ ಅದಕ್ಕೆ ಸಾಕ್ಷಿ. ಇದಕ್ಕೆ ಪೂರ್ವಾಭಾವಿಯಾಗಿ ಈ ಲೇಖನದ ಕೊಂಡಿಗಳನ್ನು ಫೇಸ್ ಬುಕ್ಕಿನ ಮಿತ್ರರಾದ ಶ್ರೀಯುತ ಗೋಪಿನಾಥ್, ಶ್ರೀಮತಿ ಭಾರತಿ ಮತ್ತು ನಮ್ಮ ನಲ್ಮೆಯ ಸಂಪದಿಗರಾದ ನಾಗೇಶರು ಮಾಡಿ, ಈ ವಿಷಯವು ಹೆಚ್ಚಿನ ಜನಕ್ಕೆ ತಲುಪುವಲ್ಲಿ ತಮ್ಮ ಅಳಿಲು ಸೇವೆಯನ್ನು ಮಾಡುತ್ತಿದ್ದಾರೆ. ಈ ಸರಣಿಯ ಮುಂದಿನ ಲೇಖನವನ್ನೂ ಇದೀಗ ಮಿನ್ನೇರಿಸಲಾಗಿದೆ. ಆಸಕ್ತರು ವಿವರಗಳಿಗೆ ಈ ಕೊಂಡಿಯನ್ನು ನೋಡಿhttps://sampada.net/blog/%E0%B2%AD%E0%B2%BE%E0%B2%97-%E0%B3%A9-%E0%B2%B5... ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ :)