ಸಂಪದದ ಆರಂಭದ ದಿನಗಳ ನೆನಪು ಈಗಲೂ ಹಸುರಾಗಿದೆ. ಇಸವಿ ೨೦೦೪ - ಅದು ಅಂತರ್ಜಾಲದಲ್ಲಿ ಕನ್ನಡ ಇಲ್ಲವೇ ಇಲ್ಲ ಎಂಬಂತಿದ್ದ ಕಾಲ. ಆಗ ದ್ರೂಪಲ್ ಎಂಬ ತಂತ್ರಾಂಶದಲ್ಲಿ ಕನ್ನಡ ಬಳಸಲು ಪ್ರಯತ್ನಿಸುತ್ತಿದ್ದೆ. ಆಗಿನ ದಿನಗಳಲ್ಲಿ ಯೂನಿಕೋಡ್ ಕನ್ನಡ ಇನ್ನೂ ಅಷ್ಟು ಸರಿಯಾಗಿ ರೂಪುಗೊಂಡಿರಲಿಲ್ಲ. ಜೊತೆಗೆ ಆಗ ಇದ್ದ ತಂತ್ರಜ್ಞಾನ ಕೂಡ ಕನ್ನಡದ ಬಳಕೆಗೆ ಸುಲಭದ ಹಾದಿ ನೀಡುತ್ತಿರಲಿಲ್ಲ. ಮೊದಲನೆಯ ಸಾರಿ ಆ ತಂತ್ರಾಂಶದಲ್ಲಿ ಕನ್ನಡದ ಅಕ್ಷರಗಳು ಸರಿಯಾಗಿ ಮೂಡಿಬಂದಾಗ ನನಗದು “ಯುರೇಕಾ” ಮೊಮೆಂಟ್. ಉತ್ಸಾಹದಲ್ಲಿ ನಾನು ಅದನ್ನು ಕೆಲವು ಗೆಳೆಯರಿಗೆ ತೋರಿಸಿದೆ. ಅವರುಗಳು ತಮ್ಮ ಲೇಖನಗಳನ್ನು ಅದರಲ್ಲಿ ಹಾಕಲು ಪ್ರಾರಂಭಿಸಿದರು. ಅದನ್ನೋದಿದ ಮತ್ತಷ್ಟು ಜನ ತಾವೂ ಸಂಪದದಲ್ಲಿ ಬರೆಯಲು ಪ್ರಾರಂಭಿಸಿದರು. ಯುನಿಕೋಡ್ ಕನ್ನಡದಲ್ಲಿ ಗಣನೀಯ ಕಂಟೆಂಟ್ ಹೊಂದಿದ ಮೊಟ್ಟ ಮೊದಲ ಸಮುದಾಯ ತಾಣವಾಗಿ ಸಂಪದ ರೂಪುಗೊಂಡಿತು.
ಅನಂತರ “ಸಂಪದ" ನಡೆದು ಬಂದ ಬಗೆ ನಿಮಗೆಲ್ಲರಿಗೂ ಗೊತ್ತು. ಸಾವಿರಾರು ಜನರು ದಿನವೂ “ಸಂಪದ"ದಲ್ಲಿ ಭಾಗವಹಿಸಲು ಆರಂಭಿಸಿದರು. ಹಲವರಿಗಂತೂ ದಿನಕ್ಕೊಮ್ಮೆಯಾದರೂ ಸಂಪದ ನೋಡದಿದ್ದರೆ ಏನೋ ಕಳೆದುಕೊಂಡ ಭಾವನೆ. ಸಂಪದದ ಓದುಗರು, ಬರಹಗಾರರು ಮತ್ತು ಪ್ರತಿಕ್ರಿಯಿಸುವವರ ಸಂಖ್ಯೆ ಹೆಚ್ಚಾಗತೊಡಗಿತು. "ತಾವು ಲೇಖಕರಾಗಿ ಬೆಳೆದದ್ದೇ ಸಂಪದದಿಂದಾಗಿ” ಎಂದು ಹೇಳುವವರು ಇಂದಿಗೂ ಹಲವರಿದ್ದಾರೆ. ಇದನ್ನು ಹೇಳುವಾಗ ನನಗೆ ಗೆಳೆಯರಾದ ದಿ।। ಅಶೋಕ್ ನೆನಪಾಗುತ್ತಾರೆ. ಪ್ರತಿನಿತ್ಯ ಬೆಳಗಾಗಿ ಸುದ್ದಿ ವಿಶೇಷಗಳನ್ನು ಸಂಪದದ ಓದುಗರಿಗೆ ಸ್ವಪ್ರೇರಣೆಯಿಂದ ಬರೆದುಕೊಂಡು ಹಂಚುತ್ತಿದ್ದ ಅವರು ಒಮ್ಮೆ “ಸಂಪದ ಇಲ್ಲದಿದ್ದರೆ ನನಗೆ ದಿನವೇ ಇಲ್ಲ” ಎಂದಿದ್ದರು.
ಕ್ರಮೇಣ, ಸಂಪದದಲ್ಲಿ ಪ್ರಕಟವಾಗುವ ಬರಹಗಳು ಹೆಚ್ಚಾದಂತೆ ಹಲವು ವಿಭಾಗಗಳನ್ನು ತೆರೆದೆವು - ಅದು ಕೃಷಿ ಸಂಪದ ಇರಬಹುದು ಅಥವ ಹರಿದಾಸ ಸಂಪದ ಇರಬಹುದು.
ಕನ್ನಡದ ಅತ್ಯಂತ “ಬಳಕೆದಾರ ಸ್ನೇಹಿ” ಪೋರ್ಟಲ್ “ಸಂಪದ" ಎಂದು ಅಭಿಮಾನದಿಂದ ಹೇಳಿಕೊಳ್ಳಬಹುದು -ಅದು ಬಹುಶಃ ಉತ್ಪ್ರೇಕ್ಷೆಯಾಗದು. ಕಳೆದ ಹನ್ನೆರಡು ವರುಷಗಳ ಬರಹಗಳನ್ನು ಹುಡುಕುವುದರಿಂದ ತೊಡಗಿ, ತಮ್ಮ ಬರಹಗಳನ್ನು ತಾವೇ ಪ್ರಕಟಿಸುವುದರ ವರೆಗೆ - ಎಲ್ಲವೂ ಸಂಪದದಲ್ಲಿ ಬಹಳ ಸುಲಭ. ಸ್ಮಾರ್ಟ್ ಫೋನುಗಳು ಜನಪ್ರಿಯವಾದಂತೆ, “ಸಂಪದ”ದ ಮೊಬೈಲ್ ಆಪ್ ಕೂಡ ಬಿಡುಗಡೆ ಮಾಡಿದ್ದೇವೆ.
ಹನ್ನೆರಡು ವರುಷಗಳ ನಂತರ, ಕಳೆದ ಹನ್ನೆರಡು ವರುಷಗಳಲ್ಲಿ ಆಗಿರುವ ಪ್ರಮುಖ ಬದಲಾವಣೆಗಳನ್ನು ಪಟ್ಟಿ ಮಾಡಲು ಇಷ್ಟಪಡುತ್ತೇನೆ:
೧) ತಂತ್ರಜ್ಞಾನ ಪ್ರತಿನಿತ್ಯ ಬದಲಾಗುತ್ತಿದೆ.
೨) ಭಾರತದ ಒಂದು ನೂರು ಕೋಟಿಗಿಂತ ಅಧಿಕ ಜನರ ಕೈಯಲ್ಲಿ ಈಗ ಮೊಬೈಲ್ ಫೋನ್ ಇದೆ.
೩) ಸಾಮಾಜಿಕ ಜಾಲತಾಣಗಳು ನಮ್ಮೆಲ್ಲರ ಬದುಕನ್ನು ಬ್ಯುಸಿಯಾಗಿರಿಸಿವೆ.
ಹೆಚ್ಚಿನ ಬರಹಗಾರರು ಸಂಪದದಿಂದ ಸಾಮಾಜಿಕ ಜಾಲತಾಣಗಳಿಗೆ ವಲಸೆ ಹೋದರೂ ಪ್ರತಿ ತಿಂಗಳೂ ಸಂಪದವನ್ನು ನಡೆಸುತ್ತು, ಅದಕ್ಕೆ ತಗಲುವ ಖರ್ಚನ್ನು ವಹಿಸಿಕೊಳ್ಳುತ್ತ ನಡೆಸಿಕೊಂಡು ಬಂದಿದ್ದೇನೆ. ಆದರೆ ಮೇಲೆ ನಾನು ಉಲ್ಲೇಖಿಸಿದ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ “ಸಂಪದ"ವನ್ನು ಹೇಗೆ ಮುನ್ನಡೆಸಬೇಕೆಂದು ಚಿಂತನೆ ಮಾಡಲೇಬೇಕಾದ ಸಂದರ್ಭ ಬಂದಿದೆ. ಹೀಗಾಗಿ ಕೆಲವು ಬದಲಾವಣೆಗಳು ನಿಮ್ಮ ಮುಂದಿದೆ.
“ಸಂಪದ"ದ ಪ್ರಧಾನ ಆಶಯಗಳು ಹೀಗಿರಲಿ ಅನಿಸುತ್ತದೆ:
- ಕನ್ನಡದ ಯುವ ಹಾಗೂ ಹೊಸ ಬರಹಗಾರರಿಗೆ ಅಂತರ್ಜಾಲದಲ್ಲಿ ತಮ್ಮ ಸೃಜನಾತ್ಮಕ ಬರಹಗಳನ್ನು ಪ್ರಕಟಿಸಲು ವೇದಿಕೆ ಒದಗಿಸುವುದು.
- ಓದುಗರಿಗೆ ವಿವಿಧ ವಿಷಯಗಳ ಬಗ್ಗೆ ಮಾಹಿತಿ ನೀಡುವ, ಮನೋವಿಕಾಸಕ್ಕೆ ಸಹಾಯವಾಗುವ, ಚಿಂತನೆಗೆ ಪ್ರೇರೇಪಿಸುವ ಬರಹಗಳಿಗೆ ಒತ್ತು ನೀಡುವುದು.
"ಸಂಪದ"ದ ನಿರ್ವಹಣೆ
ಈ ನಿಟ್ಟಿನಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದ್ದೇವೆ:
- ಇನ್ನು ಮುಂದೆ “ಸಂಪದ"ವನ್ನು "ನವ್ಯ ಸಂಪದ” ಸಂಘಟನೆ ನಿರ್ವಹಿಸಲಿದೆ.
- “ಸಂಪದ"ದಲ್ಲಿ ಪ್ರಕಟವಾಗುವ ಬರಹಗಳು “ಸಂಪದ"ದ ಆಶಯಕ್ಕೆ ಪೂರಕವಾಗಿವೆ ಎಂಬುದನ್ನು ಖಚಿತ ಪಡಿಸಿಕೊಳ್ಳಲಿಕ್ಕಾಗಿ “ಸಂಪಾದಕ ಸಮಿತಿ"ಯೊಂದನ್ನು ರಚಿಸಲಾಗಿದೆ. ಕನ್ನಡದ ಹಿರಿಯ ಬರಹಗಾರ, ಅಂಕಣಕಾರ ಹಾಗೂ ಸಾರ್ವಜನಿಕ ಹಿತಾಸಕ್ತಿ ಕಾರ್ಯಕರ್ತ ಅಡ್ಡೂರು ಕೃಷ್ಣ ರಾವ್ ಅವರು ಸಂಪಾದಕ ಸಮಿತಿಯ ಪ್ರಧಾನ ಸಂಪಾದಕರು ಆಗಿರುತ್ತಾರೆ.
- “ಸಂಪದ"ಕ್ಕೆ ತಾಂತ್ರಿಕ ನೆರವನ್ನು “ಸಾರಂಗ ಇನ್ಫೊಟೆಕ್” ಯಾವುದೇ ಶುಲ್ಕವಿಲ್ಲದೆ ಮುಂದುವರಿಸಲಿದೆ. “ಸಂಪದ"ವನ್ನು ಇನ್ನಷ್ಟು ಬಳಕೆದಾರ ಸ್ನೇಹಿ ಆಗಿಸಲಿಕ್ಕಾಗಿ ಹೊಸಹೊಸ ವಿನ್ಯಾಸ ಹಾಗೂ ವಿಧಾನಗಳನ್ನು ಕೂಡ ಒದಗಿಸಲಿದೆ.
- “ಸಂಪದ"ವನ್ನು ಅಂತರ್ಜಾಲದಲ್ಲಿ ನಿರಂತರವಾಗಿ (೨೪ X ೭ X ೩೬೫) ಸಕ್ರಿಯವಾಗಿ ಇರಿಸಲಿಕ್ಕಾಗಿ ಬಹಳಷ್ಟು ವೆಚ್ಚವಾಗುತ್ತಿದೆ. ಇದನ್ನು ಆರಂಭದಿಂದಲೂ ಹೆಚ್ಚಿನಂತೆ ನಾನೇ ಭರಿಸುತ್ತಿರುವೆ. ಇನ್ನು ಮುಂದೆ ಜಾಹೀರಾತು ಇಲ್ಲವೇ ಪ್ರಾಯೋಜಕತ್ವದ ನೆರವಿನಿಂದ ಇದನ್ನು ಭರಿಸುವ ಪ್ರಯತ್ನ ನಡೆಯಲಿದೆ.
- ನಾನು ಸಂಪದದಿಂದ ಒಂದು ರೀತಿಯಲ್ಲಿ ಸಂಪೂರ್ಣ ದೂರ ಸರಿಯುವ ಸಮಯ ಬಂದಿದೆ. ತಂತ್ರಜ್ಞಾನ ವಿಷಯದಲ್ಲಿ ನನ್ನ ಸಹಾಯ ಮುಂದುವರೆಯುವುದು. ಸಮಯವಾದಾಗ ನಾನೂ ಇಲ್ಲಿ ಬರೆಯುವ ಪ್ರಯತ್ನ ಮಾಡುವೆ.
ಸಂಪದದಲ್ಲಿ ನಿಮ್ಮ ಸಹಭಾಗಿತ್ವ
“ಸಂಪದ”ವನ್ನು ಕನ್ನಡದ ಅಮೂಲ್ಯವಾದ ಅಂತರ್ಜಾಲ ಸಮುದಾಯವಾಗಿ ಮುನ್ನಡೆಸಲಿಕ್ಕಾಗಿ ಮಹತ್ವದ ಬದಲಾವಣೆಗಳನ್ನು ಮಾಡುತ್ತಿರುವ ಈ ಹೊತ್ತಿನಲ್ಲಿ ನಿಮ್ಮೆಲ್ಲರ ಸಹಭಾಗಿತ್ವ ನಮಗೆ ಮುಖ್ಯ.
ಈ ಬಗ್ಗೆ ನಿಮ್ಮ ಸಲಹೆಗಳಿಗೆ ನಮ್ಮ ಸ್ವಾಗತ. ನಿಮ್ಮ ಸಲಹೆ ಹಾಗೂ ಪ್ರತಿಕ್ರಿಯೆಗಳನ್ನು ಏಳು ದಿನಗಳ ಮುನ್ನ mail AT sampada.net - ಇ-ಮೇಯ್ಲ್ ವಿಳಾಸಕ್ಕೆ ಬರೆದು ಕಳುಹಿಸಬೇಕಾಗಿ ವಿನಂತಿ.
ಜೊತೆಗೆ, ಇನ್ನು ಮುಂದೆಯೂ “ಸಂಪದ"ದಲ್ಲಿ ಓದುಗರಾಗಿ, ಬರಹಗಾರರಾಗಿ, ಸ್ಪಂದಿಸುವವರಾಗಿ ಸಕ್ರಿಯವಾಗಿ ಭಾಗವಹಿಸುವಿರೆಂಬ ನಂಬಿಕೆ ನಮ್ಮದು.
- Log in or register to post comments
- 15288 ಹಿಟ್ಸ್
Printer-friendly version
ಪ್ರತಿಕ್ರಿಯೆಗಳು
ಉ: ॑ನವ್ಯ ಸಂಪದ' - ಸಂಪದದಲ್ಲಿ ಬದಲಾವಣೆಗಳು ಮತ್ತು ಹೊಸತೊಂದು ದಿಶೆ
ಹೊಸ ಪ್ರಯತ್ನಗಳಿಗೆಲ್ಲ ಒಳ್ಳೆಯದಾಗಲಿ!
ಉ: ॑ನವ್ಯ ಸಂಪದ' - ಸಂಪದದಲ್ಲಿ ಬದಲಾವಣೆಗಳು ಮತ್ತು ಹೊಸತೊಂದು ದಿಶೆ
ಎಲ್ಲಾ ಒಳ್ಳೆಯದಾಗಲಿ.
ಉ: ॑ನವ್ಯ ಸಂಪದ' - ಸಂಪದದಲ್ಲಿ ಬದಲಾವಣೆಗಳು ಮತ್ತು ಹೊಸತೊಂದು ದಿಶೆ
ಶುಭವಾಗಲಿ. ಜಾಹೀರಾತು/ಪ್ರಾಯೋಜಕತ್ವದ ಯೋಚನೆ ಒಳ್ಳೆಯದೇ.
ಉ: ॑ನವ್ಯ ಸಂಪದ' - ಸಂಪದದಲ್ಲಿ ಬದಲಾವಣೆಗಳು ಮತ್ತು ಹೊಸತೊಂದು ದಿಶೆ
ನಮ್ಮಂತಹ ಅನೇಕ ಹಿರಿಯನಾಗರಿಕರು ಈ 'ಸಂಪದ ' ತಾಣದಲ್ಲಿ ಲೇಖನ ಕವನ ಗಳನ್ನ ನೇರವಾಗಿ ಪ್ರಕಟಿಸುವ ಅವಕಾಶ ಪಡೆದು ಅನೇಕ ಸ್ನೇಹಿತರ ಪರಿಚಯ ವಾಗಿ ಅವರೊಂದಿಗೆ ಆತ್ಮೀಯತೆ ಬೆಳೆಯಲು ಅನುವು ಮಾಡಿಕೊಟ್ಟ ಹರಿ ಪ್ರಸಾದ ನಾಡಿಗರೆ ತಾವು ಪೋಷಿಸಿ ಬೆಳಸಿದ ಈ 'ಸಂಪದ'ತಾಣದಿಂದ ದೂರಸರಿಯುವುದು ಮನಸ್ಸಿಗೆ ಬೇಸರದ ಸಂಗತಿಯಾಗಿದೆ.
ತಾವು ಎಲ್ಲೇ ಇದ್ದರೂ ಈ ಸಂಪದ ತಾಣ 'ನವ್ಯಸಂಪದ'ತಾಣವಾಗಿ ರೂಪಾಂತರ ಗೊಂಡರೂ ನಿಮ್ಮ ನೆನಪು ನಮ್ಮ ಮನಸ್ಸಿನಲ್ಲಿ ಅಚ್ಚ ಹಸಿರಾಗಿರುತ್ತದೆ.
ಇನ್ನುಮುಂದೆ ಈ ತಾಣದ ಪ್ರಧಾನ ಸಂಪಾದಕರಾಗಿ ಹೊಣೆಯನ್ನು ಹೊತ್ತು ಕಾರ್ಯ ನಿರ್ವಹಿಸಲಿರುವ ಹಿರಿಯರಾದ ಅಡ್ಡೂರ ಕೃಷ್ಣರಾವ್ ಇವರಿಗೆ ನನ್ನ ತುಂಬುಮನಸ್ಸಿನ ಶುಭಾಶಯ ಕೋರುತ್ತೇನೆ
ರಮೇಶ ಕಾಮತ್.
ಉ: ॑ನವ್ಯ ಸಂಪದ' - ಸಂಪದದಲ್ಲಿ ಬದಲಾವಣೆಗಳು ಮತ್ತು ಹೊಸತೊಂದು ದಿಶೆ
ಹಿರಿ ಕಿರಿಯರೆನ್ನದೆ ಯಾವ ಬೇಧ ಭಾವ ತೋರದೆ ಎಲ್ಲರ ಬರಹ ಪ್ರಕಟಿಸಿ ಬೆಳೆಸಿದ ಸಂಪದ ಈಗ ನವ್ಯ ಸಂಪದ ಆಗ್ತಿರೋದು ತಿಳಿಯಿತು, ಅಂದಿನಿಂದ ಸಕ್ರಿಯರಾಗಿರುವ ಶ್ರೀಯುತ ಅಡ್ಡೂರ ಕೃಷ್ಣರಾವ್ ಅವರು ಸಂಪದ ಮುನ್ನಡೆಸಲಿರುವ್ದು ತಿಳಿಯಿತು ಎಂದಿನಂತೆ ನಮ್ಮ ಸಹಕಾರ ಇರುವುದು.. ಶುಭವಾಗಲಿ.. ಸಪ್ತಗಿರಿವಾಸಿ
ಉ: ॑ನವ್ಯ ಸಂಪದ' - ಸಂಪದದಲ್ಲಿ ಬದಲಾವಣೆಗಳು ಮತ್ತು ಹೊಸತೊಂದು ದಿಶೆ
ಬಹಳ ದಿನಗಳ ನಂತರ ಭೇಟಿ! ಎಲ್ಲಿ ಹೋದಿರಿ ಗುರು ಶಿಷ್ಯರೆಲ್ಲಾ?