ಗೃಹ ಪ್ರವೇಶ -೨
ತಡವಾಗಿ ಕಂತನ್ನು ಪ್ರಕಟಿಸಿದಕ್ಕಾಗಿ ಸಂಪದಿಗರಲ್ಲಿ ಕ್ಷಮೆ ಕೋರುತ್ತಾ ....
ಗೃಹ ಪ್ರವೇಶ -೧
.....
೨
ದುಬೈ ಬಿಡಬೇಕಾದರೆ ಜೂನಿಯರ್ ಉತ್ತರ ಭಾರತಿಯನ್ನು 'ಮೇಂಗಲೋರ್ ಮೇ ಘರ್ ಕರೆಂಗೆ' ಎಂದು ಪುಸಲಾಯಿಸಿದ ಮೋಹನನಿಗೆ ಈಗ ಕೋಟಾ ದಲ್ಲೇ ತನ್ನ ಟಿಕಾಣಿ ಹೂಡುವ ಮನಸ್ಸಾಯಿತು. ಮಂಗಳೂರಿನಲ್ಲಿ ಇದ್ದರೂ ಅದು ಒಂದು ಬಗೆಯಲ್ಲಿ ಅಬ್ಬೆಪಾರಿತನವೇ, ನಮ್ಮ ದೆಂಬ ಸ್ವಂತಿಕೆಇಲ್ಲ, ಯಾರೋ ಕಟ್ಟಿದ ಮನೆಯಲ್ಲಿ ಒಂದು ಭಾಗ ನಮ್ಮದೆನ್ನ ಬೇಕು. ಆ ಸ್ವಂತಿಕೆ ಎಷ್ಟೆಂದರೂ ಅಷ್ಟೇ ಅಂದ ಮುರಳಿಯ ಮಾತು ನೆನಪಾಯಿತು.
ಬರೀ ಭಾರತದ ಹೊರಗಿನ ಕನಸು ಕಾಣುತಿದ್ದ ಮುರಳಿಗೆ ಅಲ್ಲಿನ ಸಂಭಂದಗಳು ಮತ್ತು ಇಲ್ಲಿನ ಸಂಭಂದಗಳ ಆಳವನ್ನು ಕೈ ಹಿಡಿದ ಅನುಸೂಯ ಅರ್ಥ ಮಾಡಿದ್ದಳು. ಊರಿನಲ್ಲಿ ಬೆಳೆದ ಅನುಸೂಯಳಿಗೆ ಕಿಟಕಿಗಳಿಲ್ಲದ ಮನೆಯಲ್ಲಿ ರಂಗೋಲಿ ಹಾಕುವುದು ಇಷ್ಟ ಇರಲಿಲ್ಲ. ಮುಡಿ ತುಂಬ ಹೂ ಮುಡಿಯುತಿದ್ದ ಹೆಣ್ಣಿಗೆ ರೂಂ ಫ್ರೆಶ್ನರ್ ಪರಿಮಳ ಹಿಡಿಸಲಿಲ್ಲ. ಮೂರು ತಿಂಗಳಿಗೆ ನೀರು ಚಿಮುಕಿಸಿದ ಒಣ ಗಾಳಿ ಹಿಡಿಸದೆ ಮತ್ತೆ ಭಾರತಕ್ಕೆ ಬಂದಿಳಿದಳು. ಅತ್ತೆ ಮಾವನ ಜೊತೆ ಕೋಟಾ ವನ್ನೇ ತನ್ನ ಕೋಟೆ ಆಗಿಸಿದಳು. ಅವಳು ಮರಳಿದ ಬಳಿಕ ಮುರಳಿಗೂ ಭಾರತೀಯತೆಯ ಸತ್ವದ ಅರಿವಾಗುತ್ತಾ ಬಂತು. ಒಂಟಿಯಾಗಿ ಹೆಚ್ಚುದಿನ ಅಲ್ಲಿ ಉಳಿಯಲಾಗದೆ ಅವನೂ ಮುಂದಿನ ಎರಡು ವಾರಗಳಲ್ಲಿ ಅಲ್ಲಿನ ಎಲ್ಲ ಸಾಮ್ರಾಜ್ಯವನ್ನು ತಮ್ಮ ಪಾಟ್ನರ್ ಗಳಿಗೆ ಒಪ್ಪಿಸಿ ಕೋಟೆ ಸೇರಿದ್ದನು.ಮೊದಲಿಗೆ ಮೋಹನನಿಗೆ ಇವನ ನಿರ್ಧಾರ ತಪ್ಪೆಂದು ಕಂಡರೂ ಬಳಿಕದ ದಿನದಲ್ಲಿ ಅವನು ಇಲ್ಲಿ ಮಾಡಿದ ಪ್ರಗತಿ ಕಂಡು ತಾನೂ ಏನನ್ನಾದರೂ ತನ್ನ ನೆಲದಲ್ಲಿ ಸಾಧಿಸುವ ಛಲ ಹುಟ್ಟಿದ್ದು. ಜಮೀನು , ಬೇಸಾಯ ಬಿಟ್ಟು ಪರವೂರು, ವಿದೇಶಗಳಿಗೆ ವಲಸೆ ಹೋಗುವವರಿಗೆ ಇವನು ವಿರುದ್ಧವಾಗಿದ್ದ, ಇಲ್ಲೇ ಇದ್ದು ಬದುಕು ಕಟ್ಟಿ ಕೊಡುವ ಮಾರ್ಗದರ್ಶನ ನೀಡುತಿದ್ದ. ಸಾವಯವ ಕ್ರಷಿ ಪರಿಚಯಿಸಿ ತನ್ನ ಜಮೀನಿನಲ್ಲಿ ಹಲವರಿಗೆ ಉಧ್ಯೋಗ ಒದಗಿಸಿದ. ಪ್ರತಿಯೊಂದು ವರದಿಯೂ ಮುರಳಿ ಮೋಹನನಿಗೆ ಇಂಟರ್ನೆಟ್ ನಲ್ಲಿ ಒದಗಿಸುತಿದ್ದದ್ದು ಅವನಿಗೂ ಈ ಕಡೆಗೆ ಗಮನ ವಾಲಲು ಕಾರಣವಾಗಿತ್ತು. ಹುಟ್ಟಿನಿಂದ ಇಲ್ಲಿ ವರೆಗೆ ಅಲೆಮಾರಿಯಾಗಿ ಸುತ್ತುತಿದ್ದ ಮೋಹನನಿಗೆ ತನ್ನ ಮಕ್ಕಳು ತನ್ನಂತೆ ಅಬ್ಬೇಪಾರಿಯಾಗಿ ತಿರುಗುವುದು ಇಷ್ಟ ವಿರಲಿಲ್ಲ, ಅದಕ್ಕಾಗಿಯೇ ಅವನೂ ಮರಳಿ ಭಾರತಕ್ಕೆ ಬರುವ ನಿರ್ಧಾರ ಮಾಡಿದ್ದ. ಆದರೆ ಜೂನಿಯರ್ ಉತ್ತರ ಭಾರತಿ ಇವನ ನಿರ್ಧಾರಕ್ಕೆ ಸಮ್ಮತಿಸಿ ಇರಲಿಲ್ಲ. ಸಿನಿಯರ್ ಉತ್ತರ ಭಾರತಿಯದ್ದೂ ಇದೆ ಮತವಾಗಿತ್ತು. ಕನಕಪುರದ ಕೂಗು ಯಾರು ಕೇಳುತ್ತಿರಲಿಲ್ಲ.ನಂತರದ ದಿನದಲ್ಲಿ ಮೋಹನ ಜೂನಿಯರ್ ಭಾರತಿಗೆ ಮಂಗಳೂರಿನ ಅಲ್ಲಿನ ಈಗಿನ ವೈಭೋಗದ ಪರಿಚಯ ಮಾಡಿದ ಬಳಿಕ ಅವಳು ಒಲ್ಲದ ಮನಸ್ಸಿನಿಂದ ಒಪ್ಪಿಗೆ ಸೂಚಿಸಿದಳು. ಮಂಗಳೂರಿನಲ್ಲೇ ಅಲೆಮಾರಿಯಾದ ಕನಕಪುರ ಮತ್ತು ಸಿನಿಯರ್ ಉತ್ತರ ಭಾರತಿಯನ್ನು ತಂದಿಡುವ ಮಾತಾಯಿತು. ಎಲ್ಲರ ಒಪ್ಪಿಗೆಯ ಮೇರೆಗೆ ಮೋಹನ ಧುಬೈಗೆ ಅಲ್ವಿದಾ ಹೇಳಿ ಏಳು ಗಂಟೆ ಹಿಂದೆ ವಿಮಾನ ಏರಿದ್ದ. ಜೂನಿಯರ್ ಭಾರತಿ ಡೆಲ್ಲಿ ವಿಮಾನ ಹತ್ತಿದರೆ ಇವನು ಮಂಗಳೂರು ವಿಮಾನ ಏರಿದ್ದ. ಇವನು ಗೆಳೆಯನ ಮನೆ ನೋಡಿ ಹಾಗೆ ಮಂಗಳೂರಿನಲ್ಲಿ ಹುಡುಕಾಟ ಮಾಡುವ ಮನಸ್ಸು ಮಾಡಿ ಹೊರಟಿದ್ದ.
ತಾನು ಭಾರತಕ್ಕೆ ಬರುವ, ಮಂಗಳೂರಿನಲ್ಲಿ ಸೆಟ್ಲ್ ಆಗುವ ವಿಚಾರ ಮುರಳಿಯಲ್ಲಿ ಹೇಳಿದ್ದರೂ ಇವತ್ತೇ ಬರುವವನಿದ್ದೇನೆ ಎಂದು ಹೇಳಿರಲಿಲ್ಲ. ಅವನಿಗೆ ಸರಪ್ರೈಸ್ ಕೊಡುವ ಇರಾದೆ ಇವನದ್ದಾಗಿತ್ತು. ಈಗ ಯಶವಂತ್ ನ ಮಾತು ಕೇಳಿದ ಬಳಿಕ ಇವನಿಗೆ ಇನ್ನೊಂದು ಯೋಜನೆ ಓಡಿತು. ಗೆಳೆಯ ಹೊಸದಾಗಿ ಮಾಡಿದ ಮನೆಯ ಬಳಿಯಲ್ಲೇ ಮನೆಕಟ್ಟಲು ಯೋಗ್ಯ ಸ್ಥಳವಿದೆ ನೀನೆ ಖರೀದಿಸು ಎಂದಿದ್ದ, ಆದರೆ ಹಿಂದೆ ಜೂನಿಯರ್ ಭಾರತಿ ಇದನ್ನು ಬೇಡ ಅಂದಿದ್ದಳು, ಆ ಕುರಿತು ಅವನಲ್ಲಿ ಮಾತಾಡಿ ಅಲ್ಲೇ ತನ್ನ ಮನೆಯನ್ನು ಕಟ್ಟಿಸುವ ಮನಸ್ಸಾಯಿತು ಮೋಹನನಿಗೆ.
ವರ್ಷದ ಹಿಂದೆ ಅವನು ಹೊಸ ಮನೆ ಕಟ್ಟುವ ವಿಚಾರ ಮೋಹನನ್ನಲ್ಲಿ ಹೇಳಿದಾಗ ಮೋಹನಗೆ ಒಂದು ಬಗೆಯ ಆಘಾತ ವಾಗಿತ್ತು. ತಲೆ ತಲೆಮಾರುಗಳಿಂದ ಬಂದ, ಇಪ್ಪತ್ತು ವರ್ಷಗಳ ಹಿಂದೆ ನೋಡಿದ ಆ ಮನೆ ಮತ್ತು ಅದರ ಅಂಗಳ ಇನ್ನೂ ಮೋಹನನ ಮನಸ್ಸಿಂದ ಮಾಸಿರಲಿಲ್ಲ. ಕೆತ್ತನೆಯ ಕಂಭಗಳು, ನಾಲ್ಕು ಸುತ್ತಿನಲ್ಲೂ ಪಾವ್ಳಿ , ನಡುವೆ ತುಳಸಿ ಕಟ್ಟೆ ಮೂರು ಕೋಣೆಗಳ ಚಚೌಕ ಮನೆ, ಮಾಳಿಗೆಯಲ್ಲಿ ಎರಡು ದೊಡ್ಡ ಕೋಣೆಗಳು. ವರ್ಷಗಳು ಸವೆದಿದ್ದರೂ ಕಸೂರಿ ಕೆಲಸಗಳು ಸವೆದಿರಲಿಲ್ಲ.
ಅದನ್ನು ಬೀಳಿಸಿ ಹೊಸ ಮನೆಕಟ್ಟಲು ಕಾರಣ ಕೇಳಿದಾಗ ಮುರಳಿ ಹೇಳಿದ ಚತುಷ್ಪಥ ಕಾಮಗಾರಿ ಇವತ್ತು ಮೋಹನನ ಕಣ್ಣೆದುರು ನಡೆಯುತ್ತಿತ್ತು.
ಹಳೆಯ ಮನೆಯ ಮಾದರಿಯಲ್ಲೇ ಹೊಸ ಮನೆಯನ್ನು ಅವನು ಖರೀದಿಸಿದ ಜಾಗದಲ್ಲಿ ಕಟ್ಟಲು ಬಯಸಿದ್ದ. ಅದೇ ಪ್ಲಾನ್ ಅನ್ನು ಯತಾವತ್ತಾಗಿ ಮೊದಲಿಗೆ ಕಾಗದದ ಮೇಲೆ ಇಳಿಸಲಾಗಿತ್ತು. ಮತ್ತೆ ಕಾಗದವನ್ನೇ ಈ ಹೊಸ ಭೂಮಿಯಲ್ಲಿ ಇಳಿಸಲಾಗಿತ್ತು. ಹೊಸ ಮನೆಯ ಮಾದರಿಯನ್ನು ಅವನು ಮೋಹನನಿಗೆ ಮೇಲ್ ಮಾಡಿದ್ದ, ಹಳೆ ಮನೆಗೆ ಆಧುನಿಕತೆಯ ಟಚ್ ಕೊಟ್ಟಿದ್ದ. ರೂಪ ಒಂದೇ ಆಗಿದ್ದರೂ ಇದು ಹಳೆಮನೆಯಕ್ಕಿಂತ ಸಣ್ಣದಾಗಿತ್ತು ಇಲ್ಲಿ ನಡುವಿನ ಅಂಗಳ ಹಳೆಯ ಅಂಗಳಕ್ಕಿಂತ ತುಂಬಾ ಸಣ್ಣದಾಗಿತ್ತು. ಹಿಂದಿನದ್ದು ಅಡಕೆ ಭತ್ತ ಒಣಗಿಸುವಷ್ಟು ದೊಡ್ಡದಿದ್ದರೆ ಇಲ್ಲಿ ಅದು 9*9 ಫೀಟ್ ನದ್ದಾಗಿತ್ತು . ಅವನ ಮೇಲ್ ಬಂದ ದಿನ ಅವನನ್ನು ತುಂಬಾ ಹೊಗಳಿದ್ದೇ, ಅವನಂತೆ ತನಗೂ ಅದೇ ಪ್ಲಾನ್ ನಲ್ಲಿ ಮನೆ ಕಟ್ಟುವ ಬಯಕೆಯನ್ನೂ ವ್ಯಕ್ತ ಪಡಿಸಿದ್ದ. ಆ ಪ್ರಾಂಗಣದ ಕುರಿತು ಕೇಳಿದಕ್ಕೆ ಇರುವ ನಾಲ್ಕು ಜನರ ಮೂಳೆ ಹೂಳಲು ಇಷ್ಟು ಜಾಗ ಸಾಕು ಅಂದಿದ್ದ.
ಕೆಂಪಾಗಿದ್ದ ಮೈಲು ಕಲ್ಲಿನ ಮೇಲೆ ಕುಂದಾಪುರ ಕ್ಕೆ ಹನ್ನೆರಡು ಕಿ.ಮಿ ಎಂದು ಬರೆದಿತ್ತು. ಯಶವಂತ "ಕೋಟದಲ್ಲಿ ಎಲ್ಲಿ ಮನೆ "ಎಂದು ಕೇಳಿದ.
ಮೊಬೈಲ್ ಅನ್ನು ಹುಡುಕಿ ತೆಗೆದು ಅಲ್ಲಿ ಇದ್ದ ಅಡ್ರೆಸ್ ಅನ್ನು ಅವನಿಗೆ ಬರೆದು ಕೊಟ್ಟ. ಕೆಳಗಿಳಿದು ಅಡ್ರೆಸ್ ಕೇಳಲು ಮುರಳಿ ಎಲ್ಲರಿಗೂ ಪರಿಚಯದ ವಿಳಾಸದಂತೆ ಮರುಕ್ಷಣವೇ ಬೀಡ ಉಗಿಯುತಿದ್ದವ ಉತ್ತರಿಸಿದನ್ನು ನೋಡಿ ಮೋಹನನಿಗೆ ಇನ್ನು ಹೆಮ್ಮೆ ಹೆಚ್ಚಾಯಿತು. ಮಂಗಳೂರಿನಲ್ಲಿ ಇಲ್ಲ ಬೆಂಗಳೂರಿನಲ್ಲಿ ಪಕ್ಕದ ಫ್ಲಾಟ್ ನವನ ಬಗ್ಗೆ ಕೇಳಿದರೆ ಗೊತ್ತಿರುವುದಿಲ್ಲ, ಈ ಪುಟ್ಟ ಊರಿನಲ್ಲಿ ವಿಳಾಸದ ನೆರವಿಲ್ಲದೆ ವ್ಯಕ್ತಿಯನ್ನು ಬರೇ ಹೆಸರಿನಲ್ಲಿ, ಮಾಡುವ ವೃತ್ತಿಯಲ್ಲಿ ಗುರುತಿಸಬಹುದು.
ಇಲ್ಲಿ ಏನ್ ಎಚ್ 66 ಈಗ ಹಳದಿ ಗಾಡಿಯ ಹೊರತಾಗಿ ಎಲ್ಲ ಪ್ರೈವೇಟ್ ಗಾಡಿಗಳ ಸಂಚಾರಕ್ಕೆ ಮುಕ್ತ ವಾಗಿತ್ತು. ಆಚೆ ಮೂರು ಲೇನ್ ಈಚೆ ಮೂರು ಲೇನ್ ಗಳ ರಾಷ್ಟ್ರೀಯ ಹೆದ್ದಾರಿ ಮೋಹನನಿಗೆ ಮತ್ತೆ ದುಬೈಗೆ ಅಟ್ಟಿದಂತೆ ಅನಿಸುತಿತ್ತು. ಹೆದ್ದಾರಿಯ ನಡುವೆ ಯಾರಿಗೂ ತೊಂದರೆ ಕೊಡದ, ಯಾರಿಗೂ ಉಪಯೋಗಕ್ಕೆ ಬಾರದ ಮೂವತ್ತು ಫೀಟ್ ಜಾಗ ಮಾತ್ರ ತನ್ನ ಪಾಡಿಗೆ ಮೌನದಲ್ಲೇ ಮಲಗಿತ್ತು. ಬೀಡ ಹೀರುತಿದ್ದವ ಮುಂದಿನ ಬಲ ತಿರುವಲ್ಲಿ ಹೋಗಲು ಹೇಳಿದ್ದರೂ ನಡುವೆ ಅನಾಥ ಶವದಂತೆ ಮಲಗಿದ್ದ ಡಿವೈಡರ್ ನಿಂದಾಗಿ ಮೋಹನನ್ನು ಅವನ ಗಮ್ಯ ಸೇರಲು ಇನ್ನು ಒಂದು ಕಿ.ಮಿ ದೂರ ಜಾಸ್ತಿ ಕ್ರಮಿಸುವಂತೆ ಮಾಡಿತು.
ರೋಡಿನ ಎಡಬಾಗದಲ್ಲಿ ಅಸ್ಥವ್ಯಸ್ತವಾಗಿ ಬಿದ್ದ , ಹೊರಗಿನಿಂದ ತಂತಿಯ ಬೇಲಿ ಹಾಕಿದ ಪ್ರಾಂಗಣ ಮೋಹನನ್ನು ಸೆಳೆಯಿತು. ಅದೇ ಪ್ರಾಂಗಣ ಗೆಳೆಯ ಮುರಳಿಯ ಹಳೆ ಮನೆಯ ಜಾಗವಾಗಿತ್ತು. ಹೊರಗಿನ ಮನೆ ಆವರಣವನ್ನು ಏನ್ ಎಚ್ 66 ನುಂಗಿತ್ತು. ಧಾರು ಶಿಲ್ಪಗಳು ಹಳೆ ಮನೆಯಲ್ಲಿ ನಗುತಿದ್ದವು. ಕುಂಕುಮ ಕಳೆದುಕೊಂಡ ಒಂದೂ ಸುಕ್ಕು ಗಳಿರದ ನಡುವಯಸ್ಸಿನ ಹೆಣ್ಣಿನ ಹಣೆಯಂತೆ ಅವನಿಗೆ ಆ ಬೇಲಿ ಹಾಕಿದ ಜಾಗ ಕಾಣುತಿತ್ತು.ಇಷ್ಟು ದಿನ ಹೊರ ಜಗತ್ತಿಗೆ ಕಾಣದ ತುಳಸಿ ಮಾತ್ರ ಈಗ ಒಂಟಿಯಾಗಿ ನೂರು ಕಿ.ಮಿ ವೇಗದಲ್ಲಿ ಓಡುವ ವಾಹನಗಳಿಗೆ ತನ್ನ ಅಸ್ತಿತ್ವವನ್ನು ಸಾರುತಿತ್ತು, ಉಯ್ಯಾಲೆ ಕಟ್ಟಿ ಆಡಿದ ಇನ್ನೂರು ವರ್ಷದ ಹಳೆಯ ಮಾವಿನ ಮರವೂ ಅಲ್ಲಿರಲಿಲ್ಲ. ಯಶವಂತ್ ಗಾಡಿಯನ್ನು ನಾಜೂಕಾಗಿ ಬಲಕ್ಕೆ ತಿರುಗಿಸಿ, ಬೀಡಾದ ಬಾಯಿಯಲ್ಲಿ ಕೇಳಿದಂತೆ ಗಾಡಿ ಓಡಿಸಿದನು.
"ಗೋಕುಲ" ಮೋಹನನನ್ನು ಸ್ವಾಗತಿಸಿತು. ಹೊರಗಿನಿಂದ ಅದೇ ಹಳೆ ಮನೆಯನ್ನು, ಕಾಗದದ ಮೇಲಿನ ಹೊಸ ಮನೆಯ ಪ್ರತಿಕ್ರತಿ ಹಚ್ಚ ಹಸುರಿನ ಭತ್ತದ ಗದ್ದೆಯ ನಡುವೆ ಎದ್ದು ನಿಂತಿತ್ತು. ಆದರೆ ಅಲ್ಲಿ ಸೇರಿರುವ ಜನರು ಇವನಿಗೆ ಅಪ್ರಸ್ತುತ ಎನಿಸಿದರೂ, ಯಾವುದೋ ಕಾರಣಕ್ಕೆ ಜನ ಸೇರಿರುವರು ಎಂದುಕ್ಕೊಂಡು ಮೋಹನ ಕಾರಿನಿಂದ ಕೆಳಗಿಳಿದ.
ಎಲ್ಲರಲ್ಲೂ ಇವನನ್ನು ನೋಡುತ್ತಾ ಪ್ರಶ್ನಾತೀತ ನೋಟದಿಂದ ಸ್ವಾಗತಿಸಿದರು. ಇವನ ಕಾರ್ ಹಿಂದೆ ಹೋಗುತಿದ್ದಂತೆ ಇವನಿಗೆ ಗೌರವ ಸೂಚಿಸುತ್ತ ಎಲ್ಲರೂ ಸರಿದು ನಿಂತರು. ಮನೆಯ ಹೊರಗೆ ಇದ್ದ 'ಗೋಕುಲ' ವನ್ನು ಅವನು ಒಮ್ಮೆ ತನ್ನ ಬೆರಳುಗಳಿಂದ ಉಜ್ಜುತ್ತ ಮೇಲೆ ತೂಗು ಹಾಕಿರುವ ಫೋಟೋ ಗಳನ್ನು ನೋಡಿದ. ಎರಡು ವರ್ಷದ ಹಿಂದೆ ಆ ಹಳೆ ಮನೆಯಲ್ಲಿದ್ದಂತೆ ಇಲ್ಲೂ ಅವನ್ನು ಅದೇ ಪ್ರಕಾರವಾಗಿ ಜೋಡಿಸಿ ಇಟ್ಟಿದ್ದರು. ಸತ್ತರೂ ಮುರಳಿಯ ಅಜ್ಜ ಇನ್ನು ನಗುತ್ತಲೇ ಇದ್ದರು ಕನ್ನಡಿಯ ಒಳಗೆ, ಬದಿಯಲ್ಲಿದ್ದ ಅಜ್ಜಿ ಹಣೆಯಲ್ಲಿ ಇನ್ನೂ ಮುತ್ತೈದೆ ಕುಂಕುಮ ನಗುತಿತ್ತು.
ಒಂದು ಕ್ಷಣಕ್ಕೆ ಅಲ್ಲಿ ಅನಸೂಯನ ಫೋಟೋ ನೋಡಿ ಮೋಹನ ದಂಗಾದನು. ಪ್ರಶ್ನೆಗಳು ಏಳ ತೊಡಗಿದವು. ಏನೋ ಅನಾಹುತ ಸಂಭವಿಸಿದೆ ಎಂದನಿಸಿತ್ತಾದರು ಈಗ ಅದರ ಕುರುಹು ಕಣ್ಣೆದುರೇ ಬಂತು.
"ಮುರಳಿ .. ಮುರಳಿ " ಎಂದು ಮೋಹನ ಗೆಳೆಯನನ್ನು ಕರೆದನು.
ಉತ್ತರ ವಿರಲಿಲ್ಲ. ಹೊರಗಿನ ಪಾವ್ಳಿ ದಾಟಿ ನಡು ಮನೆ ತಲುಪಿದನು.
ನಡುವಿನ ಪಪ್ರಾಂಗಣದಲ್ಲಿ ತುಳಸಿಯ ಪಕ್ಕದಲ್ಲಿ ಮುರಳಿಯನ್ನು ಮಲಗಿಸಿದ್ದರು ಬದಿಯಲ್ಲಿ ಅವನ ಹೆತ್ತವರು, ಮತ್ತು ಎರಡು ವರ್ಷದ ಉಪಾಸನ ಬಿಕ್ಕಳಿಸುತಿದ್ದಳು .ಮೋಹನನಿಗೆ ಮಾತು ಹೊರಡಲಿಲ್ಲ. ಅವನು ಅಲ್ಲೇ ಕುಳಿತು ಬಿಟ್ಟ. ಜೀವನ ಕಲಿಸಿಕೊಟ್ಟ ಮುರಳಿಯಲ್ಲಿ ಹೇಳಬೇಕಂದಿದ್ದ ಕೊನೆಯ ಮಾತುಗಳು ಇವನಲ್ಲೇ ಉಳಿದಿತ್ತು. ಅವನಲ್ಲಿ ಮೋಹನ ಕಳೆದು ಹೋದ. ಬದಿಯಲ್ಲಿದ್ದ ಮಗು "ಅಂಕಲ್ ಫೋನ್" ಎನ್ನುತ್ತಾ ರಿಂಗ್ ಆಗುತಿದ್ದ ಮೊಬೈಲ್ ಅನ್ನು ಇವನ ಕೈಗಿಡುತ್ತ ಎಬ್ಬಿಸಿದಳು. ಮೊಬೈಲ್ ಎತ್ತಿ ಹೊರ ಬಂದು ಉತ್ತರಿಸಿದ ಮೋಹನ.
ಕನಕಪುರ ಡೆಲ್ಲಿಯಿಂದ ಫೊನ್ ಮಾಡಿದ್ದ " ತಲುಪಿದಿಯಾ ಮಗ ಕೋಟಾ ?" ಕೇಳಿದರು ತುಂಬು ಉತ್ಸಾಹದಲ್ಲಿ.
ಮಗ "ಹೌದು, ಆದ್ರೆ ಆಪ್ಪ... ಮತ್ತೆ ಕರೆ ಮಾಡ್ತೇನೆ" ಎನ್ನುವಷ್ಟರಲ್ಲಿ.
"ಅಲ್ಲಿ ರಾಮ ಶಾನುಭೋಗರ ಮನೆಗೆ ಸಾಧ್ಯ ಇದ್ರೆ ಹೋಗಿ ಬಾರೊ .." ಅನ್ನುತ್ತ ಬಿಕ್ಕಿದರು.
ತಂದೆಯ ಕಂಟದಲ್ಲಿನ ಬಿಕ್ಕಳಿಕೆ, ಸಿನಿಯರ್ ಭಾರತಿಯ ಎದುರಿಗೆ ಮೌನವಾಗಿದ್ದ ನಾಲಗೆಯ ದನಿ ಮೊದಲ ಬಾರಿಗೆ ಮಗ ಕೇಳುತಿದ್ದ.
"ಯಾರಪ್ಪಾ ..? ರಾಮ ಶಾನುಭೋಗರು ?" ಅಂದ ಮೋಹನ ಏನೊಂದು ತಿಳಿಯದೇ.
"ನಿನ್ನ ಅಜ್ಜ ಕಣೋ, ಕೋಟ ರಾಮ ಶಾನುಭೋಗರ ಮಗ ನಾನು, ಕನಕಪುರದವನಲ್ಲ ಕಣೊ ನಾನು, ಅಸ್ತಿತ್ವ ಮರೆ ಮಾಡಲು ಕುಂದಾಪುರವನ್ನು ಕನಕಪುರ ವಾಗಿ ಬದಲಿಸಿದ್ದೆ" ಎನ್ನುತ್ತಾ ಮತ್ತೆ ಮೌನವಾದರು.
"ಸರಿ ಅಪ್ಪಾ, ಯಾರ್ ಭೇಟಿಗಾಗಿ ಬಂದಿದ್ದೇನೂ ಅದಂತೂ ನಡೀಲಿಲ್ಲ, ಕನಿಷ್ಠ ಪಕ್ಷ ಇಷ್ಟು ವರ್ಷ ಇದ್ದ ನನ್ನ ಅನ್ವೇಷಣೆಯ ಕೊನೆಯಾಯಿತಲ್ಲ ಅವರನ್ನು ಭೇಟಿ ಮಾಡಿ ಬರುವೆ" ಎನ್ನುತ್ತಾ ಫೋನ್ ಅನ್ನು ಕಿಸೆಯಲ್ಲಿ ಇಳಿಸಿದನು.
"ಅಮ್ಮನವರಿಗಾದ್ರೂ ಕಾಯಿಲೆ ಇತ್ತು ಸತ್ರು, ಸಾವ್ಕಾರಿಗೆ ಏನು ಧಾಡಿ ಇರ್ಲಿಲ್ಲ, ಸಾವು ಪ್ರಾಯನೂ ಅಲ್ಲ, ಆ ಕೂಸನ್ನು ಅಜ್ಜ ಅಜ್ಜಿಯ ಸುಪದ್ರಿಗೆ ಬಿಟ್ಟು ಇಬ್ಬರೂ ಕಣ್ ಮುಚ್ಚಿದರು, ಈ ಪ್ರಾಯದಲ್ಲಿ ಅವರು ಈ ಮಗೂನ ಹೇಗೆ ನೋಡ್ಕೊಳ್ತಾರೂ ..?" ಅಂದದ್ದು ಮೋಹನನಿಗೆ ತಡವಾಗಿ ಕೇಳಿತು.
ಮೋಹನನಿಗೆ ಮುರಳಿಯ ಅನುಸೂಯಾಳ ಬಗ್ಗೆ ನಿನ್ನಲ್ಲಿ ಮಾತಾಡುವುದಿದೆ ಎಂಬ ಮಾತು ನೆನಪಾಯಿತು. ಯಾವುದೋ ವಿಚಿತ್ರ ಕಾಯಿಲೆ ಅವಳನ್ನು ಕಾಡಿತ್ತು. ವಾರದ ಹಿಂದೆ ಅವಳು ತೀರಿ ಕೊಂಡಿದ್ದಳು. ಅವಳ ವಿರಹ ತಾಳಲಾರದೆ ಒಂದೇ ವಾರದಲ್ಲಿ ಗೆಳೆಯ ಅವಳನ್ನು ಅನುಸರಿಸಿ ಎಲ್ಲರನ್ನು, ಎಲ್ಲವನ್ನು ಬಿಟ್ಟು ಒಬ್ಬಂಟಿಯಾಗಿ ಹೋಗಿದ್ದ.
ಅವನು ಅಂದುಕೊಂಡಂತೆ ಅವನ ತೋಟದ ಬಾಳೆ ಎಳೆಯ ಮೇಲೆ ಅವನನ್ನು ಮಲಗಿಸಿದ್ದರು. ಹಿಂದೆ ಇಬ್ಬರೂ ಉಯ್ಯಾಲೆ ಆಡಿದ ಮಾವಿನ ಮರದ ಕಟ್ಟಿಗೆ ಇವನನ್ನು ಸ್ವಾಗತಿಸುತಿತ್ತು. ಮೋಹನ ಅವನಿಗೆ ಹೆಗಲಾದ, ಮಣ್ಣಿನ ಮಡಕೆಯಲ್ಲಿ ಬೆರಣಿ ಅದೇ ಹಳೆ ಅಡುಗೆ ಮನೆಯ ಒಳಗಿನ ಘಂದ ಹರಿಸುತಿತ್ತು. ಮೋಹನನ ಕಣ್ಣಲ್ಲಿ ನೀರಿತ್ತು. ಉಪಾಸನ ಮತ್ತು ಅವನ ಹೆತ್ತವರ ಭವಿಷ್ಯದ ಬಗ್ಗೆ ಚಿಂತೆಯಲ್ಲೇ ಒಂಟಿ ತುಳಸಿಯ ಪಕ್ಕದಲ್ಲಿ ಮಾವಿನ ಮರದ ಕಟ್ಟಿಗೆಯಲ್ಲಿ ತಯಾರಿಸಿದ ಚೌಕಟ್ಟಿಗೆ ಒಂದು ಸುತ್ತು ಬಂದು, ಪುರೋಹಿತನ ಆಜ್ಞೆ ಆದಂತೆ ಹೆಗಲ ಮೇಲಿದ್ದ ಮಡಕೆಯನ್ನು ಕೆಳಗೆ ಬಿಟ್ಟ. ತಿರುಗಿ ನೋಡಲು ಎಲ್ಲವೂ ಚೂರಾಗಿತ್ತು. ನೀರು ಭೂಮಿ ಸೇರಿತ್ತು, ಮುರಳಿ ಅವನಂದುಕೊಂಡಂತೆ ಅವನ ನೆಲದಲ್ಲಿ, ಅವನ ಮಾವಿನ ಮರದ ಕಟ್ಟಿಗೆಯ ಮೇಲೆ ನಗು ನಗುತ್ತ ಮಲಗಿದ್ದ. ಏನ್ ಎಚ್ 66 ಎಲ್ಲದಕ್ಕೂ ಸಾಕ್ಷಿಯಾಗಿತ್ತು. ಹಿಂದೆ ವೇಗನಿರೂದಕ ಗಳಂತೆ ಕಾರ್ಯ ನಿರ್ವಹಿಸುತಿದ್ದ ಹೊಂಡಗಳಿರಲಿಲ್ಲ ಅಲ್ಲಿ, ಎಲ್ಲರೂ ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮ ವೇಗದಲ್ಲಿ ಮುನ್ನುಗ್ಗುತಿದ್ದರು. ಬದಿಯಲ್ಲೇ ಉರಿಯುತಿದ್ದ ಬೆಂಕಿ ಯಾರಿಗೂ ಕಾಣದಾಯಿತು.
ಬೆಂಕಿ ಆರಿದ ಬಳಿಕ ಮೋಹನ್ ಮರಳಿ ಮನೆಗೆ ಬಂದಾಗ ಹೊರಗಿನ ಪ್ರಾಂಗಣದಲ್ಲಿ ಮುರಳಿಯ ಫೋಟೋ ಅನಸೂಯಳ ಬದಿಯಲ್ಲಿ ನಗುತಿತ್ತು. ಒಂದು ನಿಮಿಷ ಮತ್ತೆ ಅವನ್ನೇ ನೋಡಿದನು. ಪೂರ್ಣ ಮೌನದಲ್ಲಿ ತನ್ಮಯ ಮೂರ್ತಿಯಾಗಿ ಅಲ್ಲೇ ನಿಂತಿದ್ದ. ಶಂಕರಪುರ ಮಲ್ಲಿಗೆಯ ನೆನಪಾಗಿ ಒಳಗೆ ಹೋಗಿ ಅದನ್ನು ತಂದು ಪಕ್ಕದ ಸ್ಟೂಲ್ ಸರಿಸಿ ಕತ್ತು ಮೇಲೆ ಮಾಡಿ ಎಲ್ಲ ಫೋಟೋ ಗಳಿಗೆ ಮಲ್ಲಿಗೆ ಹಾಕಲು ಮುಂದಾದ.ಮೊದಲಿನಿಂದ ಎಲ್ಲ ಫೋಟೋ ಗಳನ್ನೂ ಹತ್ತಿರ ದಿಂದ ನೋಡಿದ ಅಜ್ಜನ ಫೋಟೋದ ಕೆಳಗಿದ್ದ ಹೆಸರು ಅಸ್ಪಷ್ಟವಾಗಿ ಕಾಣುತಿತ್ತು.
"ರಾಮ ಶಾನುಭೋಗ್ "
ಮುಂದೆ ಮಾತು ಹೊರಡಲಿಲ್ಲ. ಉಪಾಸನ ಕೆಳಗಿನಿಂದ ಇವನು ಕಟ್ಟಿದ ಪಂಜಿಯನ್ನು ಎಳೆದು "ಅಂಕಲ್ ನೀವು ಇಲ್ಲೇ ಇರಬೇಕಂತೆ, ಅಜ್ಜಿ ಅಂದ್ರು" ಎಂದು ತೊದಲು ನುಡಿದಳು.
"ಚಿಕಪ್ಪ ಅನ್ನು" ಎನ್ನುತ್ತಾ ಅವನು ಕೆಳಗಿಳಿದನು.
ಕಾಮತ್ ಕುಂಬ್ಳೆ
Rating
Comments
ಉ: ಗೃಹ ಪ್ರವೇಶ -೨
test