ಭಾಗ -೧: ಕೊನೆಯುಸಿರೆಳೆಯುತ್ತಿರುವ ಕಮ್ಯೂನಿಸಂ!

Submitted by makara on Sun, 09/02/2018 - 11:36

ರಷ್ಯಾದ ಸ್ಟ್ಯಾಲಿನ್ ಭಕ್ತರು,
ಚೈನಾದ ಮಾವೋ ಚೇಲರು,
ಜೆಲ್‌ಸ್ಕೀ, ಕ್ಯಾಸ್ಟ್ರೋ ಗಣಗಳು, 
ಕಬಳಿಸಿದವು ಮಾನವ ಹಕ್ಕುಗಳ!
ನಿಕೋಲಾಯ್, ಚೌಸೆಸ್ಕಿ, ಖಾದರ್, 
ಹೊನೇಕರ್, ಹೊಸೆಕ್, ತೋಡರ್
ತರಿದರು ಕೋಟಿ ಕೋಟಿ ಕುತ್ತಿಗೆಗಳ
ಉಣಬಡಿಸಿದರು ಶವಗಳ ತುಣುಕುಗಳ!
 
ಹೀಗೊಂದು ಕವಿತೆಯನ್ನು ಬರೆದ ಕ್ರಾಂತಿಕಾರಿ ಕವಿ ‘ಶ್ರೀ ಶ್ರೀ’ ನರಕದಲ್ಲಿ ಕುಳಿತುಕೊಂಡು ಅದರ ಕರಡು ಪ್ರತಿಯನ್ನು ತಿದ್ದುವುದರಲ್ಲಿ ಮಗ್ನರಾಗಿದ್ದಾರೆ. ಯಮನ ಮಹಿಷದ ಘಂಟನಾದದ ಝೇಂಕಾರವನ್ನು ಆಲಿಸುತ್ತಾ, ಮಧ್ಯೆ ಮಧ್ಯೆ ಸ್ಟ್ಯಾಲಿನ್, ಮಾವೋಗಳೆಡೆಗೆ ಕರುಣಾಪೂರಿತ ನೋಟವನ್ನು ಬೀರುತ್ತಾ ಒಲ್ಲದ ಮನಸ್ಸಿನಿಂದ ವೋಡ್ಕಾವನ್ನು ಹೀರುತ್ತಿದ್ದಾರೆ. ಅಲ್ಲಿಯೇ ಪರಲೋಕದಲ್ಲಿ ಮತ್ತೊಂದೆಡೆ..... ಕಾರ್ಲ್‌ಮಾರ್ಕ್ಸ್‌ಮಾನವ ಕಲ್ಯಾಣವನ್ನು ಸಾಧಿಸುತ್ತದೆನ್ನುವ ಭ್ರಮೆಯಲ್ಲಿ ತಾನು ಸೃಷ್ಟಿಸಿದ ’ಸಿದ್ಧಾಂತ’ವು ಮಾರಣಹೋಮಕ್ಕೆ ದಾರಿಯಾದುದನ್ನು ಕಂಡು ವಿಲವಿಲ ಒದ್ದಾಡುತ್ತಿದ್ದಾನೆ. ತಾನು ಹರಿಸಿದ ಕಣ್ಣೀರ ಕಾಲುವೆಯ ದಡದ ಮೇಲೆ ಕುಳಿತುಕೊಂಡು ತಪ್ಪು ಮಾಡಿದೆನೆಂದು ಪದೇ ಪದೇ ಗಲ್ಲಗಳನ್ನು ಬಡಿದುಕೊಳ್ಳುತ್ತಿದ್ದಾನೆ. ಲೆನಿನ್, ಸ್ಟ್ಯಾಲಿನ್, ಮಾವೋ ಮತ್ತು ಚೌಎನ್‌ಲಾಯ್ ಅವರು ಭೋ.....ರೆಂದು ವಿಲಪಿಸುತ್ತಾ, ಮಾನವ ದೇಹಗಳನ್ನು ಕರಕರ ನಮಲುತ್ತಿದ್ದಾರೆ. ತಾವು ಆರಂಭಿಸಿದ ನರಮೇಧವು ಇನ್ನು ಶೀಘ್ರದಲ್ಲಿಯೇ ನಿಂತು ಹೋಗುವುದೆಂದು ನೊಂದುಕೊಳ್ಳುತ್ತಿದ್ದಾರೆ. ಮಾನವರ ದೇಹದ ಮಾಂಸದ ಸರಬರಾಜು ನಿಂತು ಹೋಗುತ್ತದೆ!..... ಎಂದು ಕಳವಳಗೊಳ್ಳುತ್ತಿದ್ದಾರೆ! ಯಾವಾಗ ನಿಂತು ಹೋಗಬಹುದೆನ್ನುವ ವಿಷಯದ ಕುರಿತು ತಮ್ಮ ತಮ್ಮ ಸಿದ್ಧಾಂತಗಳಲ್ಲಿನ ವಿಭೇದಗಳನ್ನು ಅವರು ಮಧ್ಯೆ ಮಧ್ಯೆ ಚರ್ಚಿಸಿಕೊಳ್ಳುತ್ತಿದ್ದಾರೆ! 
 
ಇದಕ್ಕೆಲ್ಲಾ ಕಾರಣವೇನು...........? ?
ಅದಕ್ಕೆ ಕಾರಣ, ಸಮತಾವಾದ ಸತ್ತುಹೋಗಿದೆ! ಹೌದು ಕಮ್ಯೂನಿಸಂ ನೆಗೆದು ಬಿದ್ದಿದೆ, ಇದು ನಿಜ. ಅದರ ಕಳೇಬರವು ಸುಡುಗಾಡು ಸೇರುತ್ತಿದೆ (ಕೊನೆಯುಸಿರೆಳೆಯುತ್ತಿದೆ ಎಂದು ಕೆಲವರು ಹೇಳುತ್ತಿದ್ದಾರೆ!). ಏಳು ದಶಕಗಳ ಕಾಲ ಕೋಟ್ಯಂತರ ಜನರನ್ನು ಕಬಳಿಸಿದ ‘ಕಮ್ಯೂನಿಸಂ’ನ ಅಂತ್ಯಕಾಲವು ಸನ್ನಿಹಿತವಾಗಿದೆ. ಪದೇ ಪದೇ ಮಾನವರ ಮಾರಣ ಹೋಮಗಳನ್ನು ನಡೆಸಿ ಹೆಣಗಳ ರಾಶಿಯನ್ನು ಪೇರಿಸುತ್ತಾ ಮಾನವ ಚರಿತ್ರೆಯನ್ನು ಮಲಿನಗೊಳಿಸಿದ ಕಮ್ಯೂನಿಷ್ಟ್ ರಕ್ತಪಿಶಾಚಿ ಇನ್ನಿಲ್ಲ! ಮೂಡಣ ಯೂರೋಪಿನ ದೇಶಗಳಲ್ಲಿ ಕಮ್ಯೂನಿಸಂನ ಅಂತ್ಯವಾಗಿದೆ. ಉಳಿದ ದೇಶಗಳಲ್ಲಿ ಅದು ಕೊನೆಯುಸಿರೆಳೆಯುತ್ತಿದೆ. ಪ್ರಜಾಪ್ರಭುತ್ವದ ಚೈತನ್ಯದ ಚಿಲುಮೆಗೆ ಕಮ್ಯೂನಿಷ್ಟ್‌ವಿಷ ವೃಕ್ಷಗಳು ಉರುಳಿ ಬಿದ್ದಿವೆ. ಪ್ರಜಾಪ್ರಭುತ್ವದ ಕುಂಭದ್ರೋಣ ಮಳೆಗೆ ಕಮ್ಯೂನಿಷ್ಟ್ ವಿಷಜ್ವಾಲೆಗಳು ಆರಿಹೋಗಿವೆ. ಮಾನವತ್ವದ ಮಹಾ ಪ್ರವಾಹವು ಪೂರ್ವ ಯೂರೋಪನ್ನು ಶುದ್ಧಗೊಳಿಸಿದೆ. ಅದು ಕಮ್ಯೂನಿಸಂನ ದುರ್ಗಂಧವನ್ನು ತೊಳೆದು ಹಾಕುತ್ತಿದೆ. ಹಾಗಾಗಿ ಪರಲೋಕದಲ್ಲಿ ಅಲ್ಲೋಲಕಲ್ಲೋಲವುಂಟಾಗಿದೆ! ಹಾಗಾದರೆ ಇಲ್ಲಿ......?
ಇದ್ಯಾವುದೂ ನಡೆದೇ ಇಲ್ಲವೆಂದು ಕಮ್ಯೂನಿಷ್ಟರು ನಟಿಸುತ್ತಿದ್ದಾರೆ. ತಮಗೇನೂ ತಿಳಿದಿಲ್ಲವೆಂದು ಮುಖಗಳನ್ನು ಮರೆಮಾಚುತ್ತಿದ್ದಾರೆ. ಮೂರನ್ನೂ ಬಿಟ್ಟ ಕಮ್ಯೂನಿಷ್ಟರು ’ಅಭ್ಯುದಯ’ದ ಕುರಿತು ಭಾಷಣಗಳನ್ನು ಬಿಗಿಯುತ್ತಿದ್ದಾರೆ! ಜನರನ್ನು ಮೋಸಗೊಳಿಸುವುದು ದೊಡ್ಡ ಕೆಲಸವೇನೂ ಅಲ್ಲ ಎಂದು ಅವರು ಭಾವಿಸುತ್ತಿದ್ದಾರೆ!
 
ಯಾರು ಅವರು?
ಕಮ್ಯೂನಿಷ್ಟರಲ್ಲದೆ ಮತ್ಯಾರು!
ನಂಬೂದರಿಗಳು, ನಕ್ಸಲೈಟ್ ಗೂಂಡಾಗಳು, ಚಂಡ್ರ ಪಾಲ್, ಜ್ಯೋತಿ ಬಸು, ಮೊದಲಾದ ಚಪ್ಪನ್ನಾರು ಗುಂಪುಗಳು, ವಿರಸಂನವರು (ವಿಪ್ಲವ ರಚಯಿತುಲ ಸಂಘ - ವಿ.ರ.ಸಂ.), ಅರಸಂನವರು (ಅಭ್ಯುದಯ ರಚಯಿತುಲ ಸಂಘ - ಅ.ರ.ಸಂ.), ಕುಣಿದಾಡುವವರು, ಎಗರಾಡುವವರು, ಮೊದಲಾದವರೆಲ್ಲ ಇನ್ನೂ ’ಕ್ರಾಂತಿ’ಯ ಕುರಿತು ‘ಕಮ್ಯೂನಿಸಂ’ನ ಹಿರಿಮೆಯನ್ನು ಕುರಿತು ವಿಶ್ಲೇಷಣೆ ಮಾಡುತ್ತಲೇ ಇದ್ದಾರೆ. ಸೋವಿಯತ್, ಚೈನಾ ದೊರೆಗಳಿಗೆ ’ಲಾಲ್ ಸಲಾಂ’ ಹೊಡೆಯುತ್ತಲೇ ಇದ್ದಾರೆ. ನಾವು ಅವರ ಗುಲಾಮರೆಂದು ಘಂಟಾಘೋಷವಾಗಿ ಹೇಳಿಕೊಳ್ಳುತ್ತಿದ್ದಾರೆ. ಏನೇ ಆಗಲಿ, ’ಕಮ್ಯೂನಿಸಂ’ ಚರಿತ್ರೆಯ ಪುಟಗಳು ಕಸದ ಬುಟ್ಟಿ ಸೇರಿವೆ.
ಮುಂದುವರೆಯುವುದು.........
ವಿ.ಸೂ.: ಇದು ೧೯೯೦ರಲ್ಲಿ ಮೂಲತಃ ತೆಲುಗಿನಲ್ಲಿ ಪ್ರಕಟಗೊಂಡ ಸುಡುಗಾಡು ಸೇರುತ್ತಿರುವ ಸಮತಾವಾದ - ಕಾಟಿಕಿ ಪೋತುನ್ನ ಕಮ್ಯೂನಿಜಂ, ಲೇಖಕರು - ಶ್ರೀಯುತ ತಂಗೇಡುಕುಂಟ ಹೆಬ್ಬಾರ್ ನಾಗೇಶ್ವರ್ ರಾವ್ ಅವರ ಕೃತಿಯ ಕನ್ನಡ ಅನುವಾದ. ಇಪ್ಪತ್ತೇಳು - ಇಪ್ಪತ್ತೆಂಟು ವರ್ಷಗಳ ಹಿಂದೆಯೇ ಪಾಶ್ಚಿಮಾತ್ಯ ದೇಶಗಳಲ್ಲಿನ ಕಮ್ಯೂನಿಸಂನ ನಿಜವಾದ ಮುಖವೇನು, ಕಮ್ಯೂನಿಸಂನ ಸಿದ್ಧಾಂತ ಎಲ್ಲಿ ಎಡವಿತು ಮತ್ತು ಕಮ್ಯೂನಿಷ್ಟ್‌ಪ್ರಭುತ್ವಗಳು ಮಾಡಿದ ಮಾರಣ ಹೋಮ, ಅಲ್ಪಸಂಖ್ಯಾತರ ಮೇಲಿನ ದಬ್ಬಾಳಿಕೆ, ವಿಫಲವಾದ ಕಮ್ಯೂನಿಷ್ಟರ ಆರ್ಥಿಕ ನೀತಿ, ನಿರಂಕುಶ ಆಡಳಿತ, ಮೊದಲಾದ ವಿಷಯಗಳ ಸಮಗ್ರ ಚಿತ್ರಣವನ್ನು  ಆ ಕಿರುಹೊತ್ತಗೆ ಸಫಲವಾಗಿ ಹಿಡಿದುಕೊಟ್ಟಿದೆ. 
*****
 
 
 
 

Rating
No votes yet

Comments

ಸಂಪದದ ಓದುಗರಿಗೆಲ್ಲಾ ಶ್ರೀ ಕೃಷ್ಣ ಜನ್ಮಾಷ್ಠಮಿಯ ಶುಭಾಶಯಗಳು. ಇತ್ತೀಚೆಗೆ ಅರ್ಬನ್ ನಕ್ಸಲರು, ಮಾವೋವಾದಿಗಳು ಮೊದಲಾದ ಶಬ್ದಗಳು ಕೇಳಿ ಬರುತ್ತಿರುವ ಹಿನ್ನಲೆಯಲ್ಲಿ ಈ ಕಮ್ಯೂನಿಷ್ಟರ ನೈಜ ಚರಿತ್ರೆ ಏನು ಎನ್ನುವುದು ಜನ ಸಾಮಾನ್ಯರಿಗೆ ತಿಳಿಯುವ ಅವಶ್ಯಕತೆ ಇದೆ. ಇದು ಸುಮಾರು ಒಂದು ವರ್ಷದ‌ ಹಿಂದೆ ಮೊಗಹೊತ್ತಗೆಯಲ್ಲಿ (ಎಫ್.ಬಿ.) ಪ್ರಕಟಗೊಂಡಿದೆ. :) ‍‍

ಈ ಕಮ್ಯೂನಿಷ್ಟರ ನೈಜ ಚರಿತ್ರೆ ಏನು ಎನ್ನುವುದು ಜನ ಸಾಮಾನ್ಯರಿಗೆ ತಿಳಿಯುವ ಅವಶ್ಯಕತೆ ಇದೆ.

ಹೌದು ಕವಿಗಳೇ, ಇದನ್ನು ಒಂದು ವರ್ಷದ‌ ಹಿಂದೆ ಪ್ರಕಟಿಸಿದ್ದೆ. ಅದು ಇಂದು ಹೆಚ್ಚು ಪ್ರಸ್ತುತವೆನಿಸುತ್ತಿದೆ. ಇದರಲ್ಲಿ ಪ್ರಸ್ತಾಪಿಸಿರುವ‌ ವಿ.ರ.ಸಂ. ಸ್ಥಾಪಕ‌ ಬಂಧಕ್ಕೊಳಗಾಗಿದ್ದ‌ ವರವರ‌ ರಾವ್ :(

ಈ ಲೇಖನವನ್ನು ವಿಶೇಷ‌ ಬರಹಗಳಲ್ಲೊಂದಾಗಿ ಆಯ್ಕೆ ಮಾಡಿರುವುದಕ್ಕೆ ಶ್ರೀಯುತ‌ ನಾಡಿಗರು ಹಾಗು ಸಂಪದದ‌ ಆಡಳಿತ‌ ವಿಭಾಗಕ್ಕೆ ನಾನು ಚಿರಋಣಿ :) ನನ್ನ‌ ಬರಹಗಳನ್ನು ಓದಿ ಪ್ರೋತ್ಸಾಹಿಸುತ್ತಿರುವ‌ ಸಂಪದಿಗರಿಗೂ ನಾನು ಚಿರಋಣಿ ‍-^‍-