ಭಾಗ - ೨೫ ಭೀಷ್ಮ ಯುಧಿಷ್ಠಿರ ಸಂವಾದ: ಸಹಧರ್ಮಾಚರಣೆ!

ಭಾಗ - ೨೫ ಭೀಷ್ಮ ಯುಧಿಷ್ಠಿರ ಸಂವಾದ: ಸಹಧರ್ಮಾಚರಣೆ!

         ಇದು ಭೀಷ್ಮ ಯುಧಿಷ್ಠಿರ ಸಂವಾದ ಅರ್ಥಾತ್ ರಾಜನೀತಿ ಶಾಸ್ತ್ರದಿಂದ ಆಯ್ದ ಮತ್ತೊಂದು ನೀತಿ ಕಥೆ.  
        ಯುಧಿಷ್ಠಿರನು ಹೀಗೆ ಕೇಳಿದನು, "ಪಿತಾಮಹಾ! ವಿವಾಹ ಸಮಯದಲ್ಲಿ ಸಹಧರ್ಮ ಎನ್ನುವ ಮಾತನ್ನು ಹಿರಿಯರು ಹೇಳುತ್ತಿರುತ್ತಾರೆ. ಸಹಧರ್ಮವೆನ್ನುವುದು ನನಗೆ ವಿರೋಧಾಭಾಸವೆಂಬಂತೆ ಕಂಡುಬರುತ್ತಿದೆ. ಭಾರ್ಯಾಭರ್ತರಲ್ಲಿ (ಸತಿಪತಿಯರಲ್ಲಿ) ಒಬ್ಬರು ಮರಣಿಸಿದ ನಂತರ, ಸಹಧರ್ಮವೆನ್ನುವ ಮಾತಾದರೂ ಎಲ್ಲಿರುತ್ತದೆ? ಮೇಲಾಗಿ ಸ್ತ್ರೀಪುರುಷರೀರ್ವರೂ ಎಲ್ಲಿಯೋ ಜನಿಸಿ ಎಲ್ಲಿಯೋ ಹುಟ್ಟಿ ಬೇರೆ ಬೇರೆ ಸಂಸ್ಕಾರಗಳನ್ನು ರೂಢಿಸಿಕೊಂಡು ಅನಂತರ ಸ್ವಲ್ಪಕಾಲಕ್ಕೆ ಸತಿಪತಿಯರಾಗಿ ವ್ಯವಹರಿಸುತ್ತಾರೆ. ಅವರಿಬ್ಬರಿಗೆ ಒಂದೇ ಧರ್ಮವು ಅದು ಹೇಗೆ ಸಾಧ್ಯವಾದೀತು?" 
       ಭೀಷ್ಮನು ಹೀಗೆ ಉತ್ತರಿಸಿದನು, "ಧರ್ಮನಂದನನೇ! ಈ ವಿಷಯದಲ್ಲಿ ಅಷ್ಟಾವಕ್ರನೆಂಬ ಮುನಿಗೂ ಉತ್ತರದಿಶಾ ದೇವಿಗೂ ನಡೆದ ಸಂವಾದವನ್ನು ನಿನಗೆ ಪೇಳುತ್ತೇನೆ. ಅದು ನಿನ್ನ ಪ್ರಶ್ನೆಗೆ ಸೂಕ್ತ ಉತ್ತರವಾಗಲಿದೆ." 
       "ಅಷ್ಟಾವಕ್ರನು ಮಹಾತಪಸ್ವಿಯಾಗಿದ್ದನು. ಸ್ವಲ್ಪ ಕಾಲದ ನಂತರ, ಅವನಿಗೆ ವಿವಾಹ ಮಾಡಿಕೊಳ್ಳಬೇಕೆಂಬ ಬಯಕೆಯುಂಟಾಯಿತು. ವದಾನ್ಯ ಋಷಿಯ ಕುಮಾರಿಯಾದ ಸುಪ್ರಭೆ ಎನ್ನುವಾಕೆ ಅವನಿಗೆ ಇಷ್ಟವಾದಳು. ಆಕೆ ಅಪರೂಪ ಸೌಂದರ್ಯವತಿ, ಅನುಪಮ ಗುಣವತಿ. ಆಕೆಯನ್ನು ತನಗಿತ್ತು ವಿವಾಹ ಮಾಡಿಕೊಡಿರೆಂದು ಅವನು ವದಾನ್ಯ ಋಷಿಯನ್ನು ಕೇಳಿಕೊಂಡನು."
      "ವದಾನ್ಯನು, "ವಿಪ್ರೋತ್ತಮನೇ, ವಿವಾಹವಾಗಲು ಕೆಲವು ಯೋಗ್ಯತೆಗಳಿರುತ್ತವೆ. ಆ ವ್ಯಕ್ತಿಗೆ ಮತ್ತೋರ್ವ ಸ್ತ್ರೀಯೊಡನೆ ಸಂಬಂಧವಿರಬಾರದು. ಅವನು ಪರದೇಶಗಳಲ್ಲಿ ನಿವಸಿಸುವವನಾಗಿರಬಾರದು. ಅವನು ವಿದ್ವಾಂಸನಾಗಿರಬೇಕು. ಪ್ರಿಯವಾಗಿ ಮಾತನಾಡುವವನಾಗಿ, ಗೌರವವನ್ನು ಹೊಂದಿದವನಾಗಿರಬೇಕು. ಭೋಗಗಳನ್ನು ಅನುಭವಿಸುವ ಸಾಮರ್ಥ್ಯಗಳನ್ನು ಉಳ್ಳವನಾಗಿರಬೇಕು. ಅಂತಹವನಿಗೆ ನನ್ನ ಕುಮಾರಿಯನ್ನು ಕೊಡಬೇಕೆನ್ನುವ ಇಚ್ಛೆಯು ನನಗಿದೆ" ಎಂದು ಹೇಳಿದನು."
      "ಅಷ್ಟೇ ಅಲ್ಲ - ಅವನು ಯಾವುದೇ ಸತ್ಕಾರ್ಯವನ್ನು ಮಾಡಬೇಕಾದರೂ ಸಹ ಭಾರ್ಯೆಯ ಅನುಮತಿಯನ್ನು ಹೊಂದಿಯೇ ಮಾಡತಕ್ಕದ್ದು. ವಿವಾಹದ ನಂತರ ಸ್ತ್ರೀಯು ಪುರಷನ ಶರೀರದ ಅರ್ಧ ಭಾಗವಾಗುತ್ತಾಳೆ. ಅವರಿಬ್ಬರೂ ಜೊತೆಯಾಗಿ ಆಚರಿಸುವುದೇ ಧರ್ಮ. ಸಹಧರ್ಮ ಅಂದರೆ ಅದೇ. ಆದ್ದರಿಂದ ಭಾರ್ಯೆಯು ಸಹಧರ್ಮಚಾರಿಣಿ ಎನಿಸುತ್ತಾಳೆ. ಆಗಲೇ ಪುರುಷನು ತನ್ನ ಭಾರ್ಯೆಯೊಂದಿಗೆ ಹಾಗು ಸ್ತ್ರೀಯು ತನ್ನ ಭರ್ತನೊಡನೆ ಮಾಡುವ ಸಹಜೀವನವು ಸಹಧರ್ಮವೆನಿಸಿಕೊಳ್ಳುತ್ತದೆ."
      "ನಿನಗೆ ನನ್ನ ಕುಮಾರಿಯನ್ನು ಇತ್ತು ವಿವಾಹ ಮಾಡುತ್ತೇನೆ. ಅದಕ್ಕೂ ಮೊದಲು ಉತ್ತರ ದಿಕ್ಕಿಗೆ ಹೋಗಿ ಉತ್ತರದಿಶಾ ದೇವಿಯನ್ನು ಸಂದರ್ಶಿಸಿ ಬರುವಂತಹವನಾಗು" ಎಂದು ವದಾನ್ಯನು ಅಷ್ಟಾವಕ್ರನಿಗೆ ಅಂತಿಮವಾಗಿ ಹೇಳಿದನು. ತನ್ನ ಕುಮಾರಿಯನ್ನು ಮದುವೆ ಮಾಡಿ ಕೊಡುವ ಮುನ್ನ ವರನಾದ ಅಷ್ಟಾವಕ್ರನನ್ನು ಪರೀಕ್ಷಿಸಬೇಕೆನ್ನುವುದು ವದಾನ್ಯ ಋಷಿಯ ಉದ್ದೇಶವಾಗಿತ್ತು."
      "ಅಷ್ಟಾವಕ್ರನು ಅದಕ್ಕೆ ಒಪ್ಪಿ ಉತ್ತರ ದಿಕ್ಕಿನತ್ತ ಪಯಣಿಸುತ್ತಾ ಕುಬೇರನ ಅಲಕಾಪುರಿಯನ್ನು ದಾಟಿ, ಹಿಮಾಲಯವನ್ನು ಅಧಿಗಮಿಸಿ, ಒಂದು ಆಶ್ರಮದಲ್ಲಿ ವಾಸವಾಗಿದ್ದ ಒಬ್ಬ ವೃದ್ಧ ಸ್ತ್ರೀಯನ್ನು ನೋಡಿದ. ಅವನು ಆಕೆಯ ಅಪ್ಪಣೆ ಪಡೆದು, ಅಲ್ಲಿಯೇ ವಿಶ್ರಮಿಸಿದನು. ಆ ರಾತ್ರಿ ಆ ವೃದ್ಧ ಸ್ತ್ರೀಯು ಒಬ್ಬ ಸುಂದರ ಯುವತಿಯ ರೂಪವನ್ನು ತಾಳಿ ಅಷ್ಟಾವಕ್ರನ ಶಯ್ಯೆಯನ್ನು ಸೇರಿ ಅವನನ್ನು ಅಪ್ಪಿಕೊಂಡು, ’ನನ್ನ ಬಯಕೆಯನ್ನು ತೀರಿಸು’ ಎಂದು ಹೇಳಿದಳು."
      "ಆಗ ಅಷ್ಟಾವಕ್ರನು ಅಣುವಿನಷ್ಟೂ ವಿಚಲಿತನಾಗದೆ, ಒಣಗಿದ ಕಟ್ಟಿಗೆಯ ಕೊರಡಿನಂತೆ ಅತ್ತಿತ್ತ ಕದಲದೆ  ವಿಕಾರ ರಹಿತನಾಗಿ ಸುಮ್ಮನೇ ಇದ್ದನು."
      "ಆಗ ಆ ಸ್ತ್ರೀಯು, "ಬ್ರಾಹ್ಮಣೋತ್ತಮ, ಯುಕ್ತ ವಯಸ್ಕರಾದ ಸ್ತ್ರೀಪುರುಷರಿಬ್ಬರೂ ಏಕಾಂತವಾಗಿರುವುದು ಎಲ್ಲಿಯಾದರೂ ಸಂಭವಿಸಿದರೆ ಲಕ್ಷಕ್ಕೋ ಕೋಟಿಗೋ ಎಲ್ಲಿಯೋ ಒಂದು ಸಾರಿ ಬಿಟ್ಟರೆ - ಸಾಧಾರಣವಾಗಿ ಕಾಮಕ್ಕೆ ಸಂಬಂಧಿಸಿದ ವಾಂಛೆ ಅಥವಾ ಕೋರಿಕೆಯನ್ನು ಬಿಟ್ಟು ಬೇರೊಂದು ವಿಷಯವು ಅವರ ಮನಸ್ಸಿನಲ್ಲಿ ಉಂಟಾಗದು. ನಾವೀರ್ವರೂ ಈಗ ಏಕಾಂತವಾಗಿದ್ದೇವೆ. ನಾನು ಇನ್ನು ಸುಮ್ಮನಿರಲಾರೆ, ನನ್ನ ಬಯಕೆಯನ್ನು ಪೂರೈಸು." ಎಂದು ಹೇಳಿದಳು."
      "ಮಾತಾ! ನನಗೆ ಪರಸ್ತ್ರೀ ಗಮನವು ನಿಷಿದ್ಧವಾಗಿದೆ. ನಾನು ಒಬ್ಬ ಮುನಿ ಕನ್ಯೆಯನ್ನು ವಿವಾಹವಾಗಬೇಕೆಂದು ನಿಶ್ಚಯಿಸಿಕೊಂಡಿದ್ದೇನೆ. ನನಗೆ ಸ್ವೇಚ್ಛಾ ವಿಹಾರವು ಉಚಿತವಲ್ಲ. ನಿನ್ನ ಆಲೋಚನೆಯನ್ನು ಕೈಬಿಡು" ಎಂದು ಅಷ್ಟಾವಕ್ರನು ಹೇಳಿದನು. 
      "ನಾನು ಸ್ವತಂತ್ರಳು. ನನ್ನನ್ನು ನಾನು ಸ್ವಯಿಚ್ಛೆಯಿಂದ ನಿನಗೆ ಅರ್ಪಿಸಿಕೊಳ್ಳುತ್ತಿದ್ದೇನೆ. ನಿನಗೆ ಯಾವ ದೋಷವೂ ತಟ್ಟದು" ಎಂದು ಆಕೆ ಹೇಳಿದಳು. 
      "ಅದಕ್ಕೆ ಪ್ರತಿಯಾಗಿ ಅಷ್ಟಾವಕ್ರನು, "ಹಾಗೆ ಹೇಳಬೇಡ, ಸ್ವಾತಂತ್ರ್ಯವೆಂದರೆ ಸ್ವೇಚ್ಛೆಯಲ್ಲ" ಎಂದು ಹೇಳಿದನು."
      "ಅಷ್ಟಾವಕ್ರನ ಮನೋನಿಗ್ರಹವನ್ನು ನೋಡಿ ಸಂತುಷ್ಟಳಾದ ಆ ಸ್ತ್ರೀಯು ತನ್ನ ನಿಜರೂಪದಲ್ಲಿ ಪ್ರಕಟಗೊಂಡು ತಾನು ಉತ್ತರದಿಶಾ ದೇವಿ ಎಂದು ಹೇಳಿ ಅವನನ್ನು ಆಶೀವರ್ದಿಸಿ ಕಳುಹಿಸಿದಳು. ಅಷ್ಟಾವಕ್ರನು ಹಿಂದಿರುಗಿ ಬಂದು ವಧಾನ್ಯ ಋಷಿಯ ಕುಮಾರಿಯಾದ ಸುಪ್ರಭೆಯನ್ನು ವಿವಾಹವಾದನು." 
      "ಆದ್ದರಿಂದ ಯುಧಿಷ್ಟಿರನೇ! ದಾಂಪತ್ಯ ಜೀವನದಲ್ಲಿ ಇರುವುದು ಕೇವಲ ಸಹಜೀವನವಷ್ಟೇ ಅಲ್ಲ. ಅದರಲ್ಲಿ ಸಹಧರ್ಮವೂ ಅಡಗಿದೆ. ಅದೇ ಪ್ರಧಾನವಾದುದು. ಇದೇ ಆರ್ಷೇಯ ಧರ್ಮ!" 
      (ವಿವಾಹ ವ್ಯವಸ್ಥೆಯ ಮೂಲಕ ಏರ್ಪಟ್ಟ ಈ ಸಹಧರ್ಮವನ್ನು ಆಚರಿಸುವುದರಿಂದಲೇ ದಾಂಪತ್ಯ ಜೀವನವು ಸುಖಮಯವಾಗುತ್ತದೆ. ಸಮಾಜದಲ್ಲಿ ನಿಯಮ, ನಿಬದ್ಧತೆಗಳು ಸಾಧ್ಯವಾಗುತ್ತವೆ. ಕುಟುಂಬ ಜೀವನದಲ್ಲಿ ’ಸಮಷ್ಟಿ ಹಿತ’ ಎನ್ನುವ ಸಂಸ್ಕಾರವನ್ನು ಸಂತತಿಗೆ ವರ್ಗಾಯಿಸುವುದು ಸಾಧ್ಯವಾಗುತ್ತದೆ. ವಂಶ ಪಾರಂಪರ್ಯವಾಗಿ ಬರುವ ಸಂಪ್ರದಾಯ, ಪದ್ಧತಿಗಳನ್ನು ಮುಂದುವರೆಸಲು ಸಾಧ್ಯವಾಗಿ ತನ್ಮೂಲಕ ಭೂತ, ವರ್ತಮಾನ ಮತ್ತು ಭವಿಷ್ಯತ್ ಕಾಲಗಳಿಗೆ ಸಂಬಂಧವು ಏರ್ಪಡುತ್ತದೆ. ವಿವಾಹ ವ್ಯವಸ್ಥೆಯು, ಆದರ್ಶ ಸಮಾಜ ಜೀವನ ಸೌಧದ ನಿರ್ಮಾಣಕ್ಕೆ ದೃಢವಾದ ಅಡಿಪಾಯವಾಗಿ ಏರ್ಪಟ್ಟು, ಕುಟುಂಬ ವ್ಯವಸ್ಥೆ ಹಾಗೂ ತನ್ಮೂಲಕ ಇತರ ವ್ಯವಸ್ಥೆಗಳು ಸಕ್ರಮವಾಗಿ ನಡೆಯಲು ಸಹಾಯಕವಾಗುತ್ತದೆ.)
*****
(ಆಧಾರ - ಶ್ರೀಯುತ ದೋನೇಪುಡಿ ವೆಂಕಯ್ಯನವರು ತೆಲುಗಿನಲ್ಲಿ ರಚಿಸಿರುವ ಭೀಷ್ಮ ಯುಧಿಷ್ಠಿರ ಸಂವಾದ ಅರ್ಥಾತ್ ರಾಜನೀತಿ ಶಾಸ್ತ್ರ ಎಂಬ ಗ್ರಂಥದಿಂದ ಆಯ್ದ ಭಾಗದ ಅನುವಾದ. ಈ ಸರಣಿಯನ್ನು ಈ ಹಿಂದೆ ಮೊಗಹೊತ್ತಗೆ - ಫೇಸ್ ಬುಕ್ಕಿನಲ್ಲಿ ನನ್ನ ವ್ಯಕ್ತಿಗತ ಪುಟದಲ್ಲಿ ಪ್ರಕಟಿಸಲಾಗಿತ್ತು).  
ಚಿತ್ರಕೃಪೆ:  ಗೂಗಲ್
ಹಿಂದಿನ ಲೇಖನ  ಭಾಗ - ೨೪ ಭೀಷ್ಮ ಯುಧಿಷ್ಠಿರ ಸಂವಾದ: ಭಂಗಾಸ್ವನನ ಉಪಾಖ್ಯಾನ ಅಥವಾ ಸಂಸಾರ ಸುಖ ಯಾರಿಗೆ ಹೆಚ್ಚು? ಓದಲು ಈ ಕೆಳಗಿನ ಕೊಂಡಿಯನ್ನು ನೋಡಿ https://sampada.net/blog/%E0%B2%AD%E0%B2%BE%E0%B2%97-%E0%B3%A8%E0%B3%AA-...

Rating
No votes yet

Comments

Submitted by makara Mon, 11/12/2018 - 08:32

ಈ ಲೇಖನದ ಮುಂದಿನ ಭಾಗ - ೨೬ ಭೀಷ್ಮ ಯುಧಿಷ್ಠಿರ ಸಂವಾದ: ಶ್ರೀಕೃಷ್ಣ ಭೂದೇವಿ ಸಂವಾದ ಅಥವಾ ಪಂಚಯಜ್ಞಗಳು! ಓದಲು ಈ ಕೆಳಗಿನ ಕೊಂಡಿಯನ್ನು ನೋಡಿ https://sampada.net/node/48507

Submitted by makara Mon, 11/12/2018 - 08:33

ಈ ಲೇಖನದ ಮುಂದಿನ ಭಾಗ - ೨೬ ಭೀಷ್ಮ ಯುಧಿಷ್ಠಿರ ಸಂವಾದ: ಶ್ರೀಕೃಷ್ಣ ಭೂದೇವಿ ಸಂವಾದ ಅಥವಾ ಪಂಚಯಜ್ಞಗಳು! ಓದಲು ಈ ಕೆಳಗಿನ ಕೊಂಡಿಯನ್ನು ನೋಡಿhttps://sampada.net/node/48507