ಭಾಗ - ೯ ಮನುವಿನ ಧರ್ಮ: ಜಾತಿಯೇ ಬೇರೆ..... ವರ್ಣವೇ ಬೇರೆ!

ಭಾಗ - ೯ ಮನುವಿನ ಧರ್ಮ: ಜಾತಿಯೇ ಬೇರೆ..... ವರ್ಣವೇ ಬೇರೆ!

ಚಿತ್ರ

         ಜಾತಿಭೂತವೆನ್ನುವುದು ಹಿಂದೂ ಸಮಾಜಕ್ಕೆ ಅಂಟಿದ ಶಾಪ.
         ಇಂದಿನ ಹಿಂದೂ ಸಮಾಜದ ದುರಾಚಾರಗಳಿಗೆಲ್ಲಾ ಕಾರಣವಾಗಿರುವುದು ಅದರಲ್ಲಿ ಕಂಡುಬರುವ ನಿಕೃಷ್ಟವಾಗಿರುವ ಜಾತಿ ವ್ಯವಸ್ಥೆ. 
         ನನ್ನ ಜಾತಿ ದೊಡ್ಡದು, ನಿನ್ನ ಜಾತಿ ಚಿಕ್ಕದು ಎಂಬ ಅಹಂಕಾರವೇ ಜಿಗುಪ್ಸೆ ಹುಟ್ಟಿಸುವಂತಹುದು. ಸಂಕುಚಿತವಾದ ಜಾತಿಬುದ್ಧಿಯಿಂದ ವ್ಯವಹರಿಸುವುದು, ಕೆಳಜಾತಿಗಳವರನ್ನು ತುಳಿಯಬೇಕೆನ್ನುವ ಹುನ್ನಾರ ಮಾಡುವುದು, ಮೇಲ್ಜಾತಿಯವರೆಂಬ ಮದದಿಂದ ನಿಮ್ನ ಜಾತಿಗಳನ್ನು ಅಸ್ಪೃಶ್ಯರಾಗಿ ಕಂಡು ಅವಮಾನಿಸುವುದು, ಜಾತಿಭೇದ ಮಾಡುತ್ತಾ ಅವರನ್ನು ನೀಚವಾಗಿ ಕಾಣುವುದು, ನಿಜಕ್ಕೂ ಅಮಾನುಷವಾದುದು. 
         ಜಾತಿಭೂತವನ್ನು ನಾಮರೂಪಗಳಿಲ್ಲದಂತೆ ನಿರ್ಮೂಲನ ಮಾಡದೇ ಇದ್ದಲ್ಲಿ ಹಿಂದೂ ಸಮಾಜಕ್ಕೆ ಒಳಿತಾಗದು, ಅದು ಅಭಿವೃದ್ಧಿಯಾಗದು ಕೂಡ. 
         ಈ ಮಾತಿಗೆ ಪ್ರತ್ಯುತ್ತರ ಹೇಳುವ ಅವಶ್ಯಕತೆಯಿಲ್ಲ. ಸಾವಿರಾರು ವರ್ಷಗಳ ಕೆಳಗಿನ ಬುದ್ಧ, ರಾಮಾನುಜ, ಬಸವರಿಂದ ಹಿಡಿದು ಇತ್ತೀಚಿನ ಸ್ವಾಮಿ ದಯಾನಂದ ಸರಸ್ವತಿ, ರಾಮಕೃಷ್ಣ-ವಿವೇಕಾನಂದ, ಸ್ವಾಮಿ ಶ್ರದ್ಧಾನಂದ, ಡಾಕ್ಟರ್ ಹೆಡ್ಗೇವಾರರ ತನಕ ಎಷ್ಟೋ ಜನ ಮಹಾತ್ಮರು ಅಕ್ಷರಶಃ ಘಂಟಾಘೋಷವಾಗಿ ಹೇಳಿದ ಮಾತುಗಳಿವು. ಭುಜದ ಮೇಲೆ ತಲೆ, ಸ್ವಲ್ಪ ಇಂಗಿತ ಜ್ಞಾನ ಮತ್ತು ಅಲ್ಪವಾದರೂ ವಿವೇಕವಿರುವ ಪ್ರತಿಯೊಬ್ಬರೂ ಒಪ್ಪಿಕೊಂಡ ಮತ್ತು ಒಪ್ಪಿಕೊಳ್ಳಲೇ ಬೇಕಾದ ವಿಷಯವಿದು. 
         ಆದರೆ ಜಾತಿಭೇದಕ್ಕೆ ಮೂಲ ಕಾರಣವಾಗಿರುವುದು ಮನುಧರ್ಮವಲ್ಲ. ಜಾತಿ ಎನ್ನುವುದನ್ನು ಮನು ಸೃಷ್ಟಿಸಿದ್ದಲ್ಲ. ಈ ಕಾಲದಲ್ಲಿ ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡ, ಹಿಂದುಳಿಗೆ ವರ್ಗಗಳು ಮೊದಲಾದವರು ಅನುಭವಿಸುತ್ತಿರುವ ಸಮಸ್ಯೆಗಳಿಗೆ ತಲತಲಾಂತರಗಳಿಂದ ಅನುಭವಿಸುತ್ತಿರುವ ನೋವು ಸಂಕಟಗಳಿಗೆ ಮನುವಾದವು ಖಂಡಿತವಾಗಿಯೂ ಕಾರಣವಲ್ಲ. 
         ಇನ್ನೂ ಖಚಿತವಾಗಿ ಹೇಳಬೇಕೆಂದರೆ ನಮಗೆ ಕಿರಿಕಿರಿಯುಂಟು ಮಾಡುತ್ತಿರುವ, ತಲೆತಗ್ಗಿಸುವಂತೆ ಮಾಡುತ್ತಿರುವ ಜಾತಿಭೇದದ ಸಮಸ್ಯೆಗೆ ಮನುಧರ್ಮವು ಮೂಲವಲ್ಲ ಆದರೆ ಅದೇ ಅದಕ್ಕಿರುವ ಮದ್ದು! ಹೌದು .... ಖಂಡಿತವಾಗಿ ಅದಕ್ಕಿರುವ ಔಷಧಿಯೇ!
ಭಾರತದೇಶದ ವೈಭವಕ್ಕೆ, ಪ್ರಸಿದ್ಧಿಗೆ ಮೂಲವಾದ ಸನಾತನ ಧರ್ಮ, ಮತಗಳನ್ನು ನಿರ್ಮೂಲನೆ ಮಾಡದ ಹೊರತು ಈ ದೇಶವನ್ನು ಸ್ವಾಧೀನ ಪಡಿಸಿಕೊಳ್ಳಲಾಗದೆನ್ನುವ ದುರ್ಬುದ್ಧಿಯಿಂದ ಎರಡು ಮೂರು ಶತಮಾನಗಳ ಹಿಂದೆ ಬ್ರಿಟಿಷ್ ಸಾಮ್ರಾಜ್ಯವಾದಿಗಳು ಮತ್ತು ಅವರ ತೊತ್ತುಗಳಾದ ಕ್ರೈಸ್ತ ಮಿಷನರಿಗಳು ಯೋಜನಾಬದ್ಧವಾಗಿ ಆರಂಭಿಸಿದ ದುಷ್ಪ್ರಚಾರವು ನಮ್ಮ ಕಣ್ಣಗಳು ಮಾಯಾ ಪೊರೆಯಿಂದ ಮಸುಕಾಗುವಂತೆ ಮಾಡಿದೆ. ಪಾಶ್ಚಾತ್ಯ ವಿದ್ಯೆಯ ಹೆಸರು ಹೇಳಿಕೊಂಡು ಶಾಲಾ-ಕಾಲೇಜುಗಳಲ್ಲಿ ತಲಾಂತರಗಳಿಂದ ಭಾರತೀಯರ ಮೆದುಳಿನಲ್ಲಿ ಸೇರಿಸಿದ ಕಾಲಕೂಟ ವಿಷದ ಪರಿಣಾಮವಾಗಿ ನಮ್ಮ ಧರ್ಮ, ನಮ್ಮ ಸಂಸ್ಕೃತಿ, ನಮ್ಮ ಪರಂಪರೆ ಎಷ್ಟು ಮಹತ್ತರವಾದುದೋ ಎನ್ನುವುದನ್ನು ನಾವು ಗುರುತಿಸಲಾರದೇ ಹೋಗುತ್ತಿದ್ದೇವೆ...... ಅವನ್ನು ಸಮೂಲನಾಶ ಮಾಡುವುದೇ ಆಧುನಿಕತೆಗೆ, ನಾಗರಿಕತೆಗೆ ಇರುವ ಮಾನದಂಡವೆಂದುಕೊಳ್ಳುವ ದೌರ್ಭಾಗ್ಯ ಸ್ಥಿತಿ ಏರ್ಪಟ್ಟಿದೆ. ನಾಚಿಕೆಗೇಡಿನ ಜಾತಿ ವೈಷಮ್ಯಕ್ಕೆ, ಕೆಲಸಕ್ಕೆ ಬಾರದ ಜಾತಿಭೇದಗಳಿಗೆ ಮನುವೇ ಮೂಲಪುರುಷನೆನ್ನುವ ಮಾನಸಿಕ ಅಂಗವೈಕಲ್ಯವು ಬ್ರಿಟಿಷರ ಕುತಂತ್ರದಿಂದ ಜನ್ಮತಾಳಿತು. 
         ಮನು ಅಥವಾ ಮನುಸ್ಮೃತಿ ಹೇಳಿದ್ದು ವರ್ಣ ವ್ಯವಸ್ಥೆಯನ್ನು ಕುರಿತು! ವರ್ಣವೇ ಬೇರೆ, ಜಾತಿಯೇ ಬೇರೆ! ಅವೆರಡಕ್ಕೂ ಅಜ-ಗಜಾಂತರ ವ್ಯತ್ಯಾಸವಿದೆ. ಕಲ್ಲಿನ ಚಿಕ್ಕ ಗುಡ್ಡಕ್ಕೂ ಹಿಮಾಲಯಕ್ಕೂ ಇರುವಷ್ಟು ಬೃಹತ್ ವ್ಯತ್ಯಾಸವಿದೆ. ಮನುಧರ್ಮದಲ್ಲಿ ಹೇಳಿರುವ ವರ್ಣವ್ಯವಸ್ಥೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ... ಈಗ ನಮ್ಮನ್ನು ಕಾಡುತ್ತಿರುವ ಜಾತಿ ವ್ಯವಸ್ಥೆ, ಮನುವು ಹೇಳಿದ ವರ್ಣವ್ಯವಸ್ಥೆ ಒಂದೇ ಎಂದು ತಪ್ಪಾಗಿ ಅರ್ಥೈಸಿಕೊಂಡಿರುವುದು ಎಲ್ಲಾ ಅನರ್ಥಗಳಿಗೆ ಕಾರಣವಾಗಿದೆ. 
         ಜಾತಿ ಅಥವಾ ಕುಲವೆನ್ನುವುದು ಹುಟ್ಟಿನಿಂದ ನಿರ್ಣಯಿಸಲ್ಪಡುತ್ತದೆ. ಆದರೆ ವರ್ಣವೆನ್ನುವುದು ಒಬ್ಬನು ಮಾಡುವ ಕೆಲಸ ಅಥವಾ ವೃತ್ತಿಯನ್ನಾಧರಿಸಿ, ಮನುಷ್ಯನ ಗುಣವನ್ನು ಆಧರಿಸಿ, ಸ್ವಭಾವವನ್ನು ಆಧರಿಸಿ, ಸಾಮರ್ಥ್ಯವನ್ನು ಆಧರಿಸಿ, ಯೋಗ್ಯತೆಯನ್ನು ಆಧರಿಸಿ ನಿರ್ಣಯಿಸಲ್ಪಡುತ್ತದೆ. 
        ಜಾತಿ ಅಥವಾ ಕುಲವೆನ್ನುವುದು ಬದಲಾಗದು. ಬ್ರಾಹ್ಮಣ ಜಾತಿಯಲ್ಲಿ ಜನಿಸಿದವನು ಬದುಕಿರುವಷ್ಟು ಕಾಲ ಅವನು ಬ್ರಾಹ್ಮಣನೇ! ನಿಮ್ನ ಕುಲಗಳಲ್ಲಿ ಹುಟ್ಟಿದವನು ಬದುಕಿರುವ ತನಕ ಅವನು ನಿಮ್ನ ಕುಲದವನೇ! ಬ್ರಾಹ್ಮಣ ಕುಲದಲ್ಲಿ ತಪ್ಪಿ ಹುಟ್ಟಿ, ಬ್ರಾಹ್ಮಣತ್ವವು ಯಾವ ಅಣುವಿನಲ್ಲೂ ಇಲ್ಲದವನು, ಎಲ್ಲಾ ಅವಲಕ್ಷ್ಮಣಗಳನ್ನು ಮೈಗೂಡಿಸಿಕೊಂಡ ಧೂರ್ತನಾದರೂ ಸರಿ ಅವನು ಜೀವಿಸಿರುವಷ್ಟು ಕಾಲ ಅವನು ಬ್ರಾಹ್ಮಣನಾಗಿಯೇ ಚಲಾವಣೆಯಲ್ಲಿರುತ್ತಾನೆ. (ಕೆಲವೊಂದು ಪ್ರಸಂಗಗಳಲ್ಲಿ ಬ್ರಾಹ್ಮಣರಿಗೆ ವಿಧಿಸಿದ ಕುಲಾಚಾರಗಳನ್ನು ಪಾಲಿಸದೇ ಇದ್ದಲ್ಲಿ ಅವನು ಜಾತಿಭ್ರಷ್ಠನಾಗುತ್ತಾನೆ, ಆದರೂ ಅವನು ಬ್ರಾಹ್ಮಣನೆಂದೇ ಗುರುತಿಸಲ್ಪಡುತ್ತಾನೆ). ಶೂದ್ರನಾಗಿಯೋ ಇಲ್ಲ ದಲಿತನಾಗಿಯೋ ನಿಮ್ನ ಜಾತಿಗಳಲ್ಲಿ ಹುಟ್ಟಿ ವೇದಶಾಸ್ತ್ರಗಳನ್ನು ಅಧ್ಯಯನ ಮಾಡಿ ಉತ್ತಮವಾದ ವೈದಿಕ ಸಂಸ್ಕಾರಗಳನ್ನು ಅಳವಡಿಸಿಕೊಂಡು ನಿಷ್ಠೆಯಿಂದ ಜೀವಿಸುವ ಗುಣವಂತನೂ ಸಹ ಬ್ರಾಹ್ಮಣನಾಗಿ ಗುರುತಿಸಲ್ಪಡದೇ ಅವನ ಮೂಲ ಜಾತಿಯಿಂದಲೇ ಗುರುತಿಸಲ್ಪಡುತ್ತಾನೆ. ಇದು ಹುಟ್ಟನ್ನು ಆಧರಿಸಿದ ಜಾತಿ ವ್ಯವಸ್ಥೆ. 
        ವರ್ಣ ಎನ್ನುವುದು ವರ್ಗ ಅಥವಾ ತರಗತಿ! ಮಾಡುವ ವೃತ್ತಿಯನ್ನವಲಂಭಿಸಿ, ಗುಣವನ್ನು ಅವಲಂಭಿಸಿ, ಯೋಗತ್ಯೆಯನ್ನು ಆಧರಿಸಿ ಅದು ನಿರ್ಣಯಿಸಲ್ಪಡುತ್ತದೆ. ಅದನ್ನು ಬದಲಾಯಿಸಿಕೊಳ್ಳುವುದು ಮನುಷ್ಯನ ಕೈಯ್ಯಲ್ಲೇ ಇದೆ. ವರ್ಣ ಎಂದರೆ ಬಣ್ಣ; ಆರ್ಯರೆಂದರೆ ಬೆಳ್ಳಗಿರುವವರು, ದ್ರವಿಡರು ಅಥವಾ ದಸ್ಯುಗಳು ಕಪ್ಪಗಿರುವವರು; ಎಲ್ಲಿಂದಲೋ ಬಂದ ಆರ್ಯರು ಹೀಗೆ ಬಣ್ಣವನ್ನಾಧರಿಸಿ ವರ್ಣ ವ್ಯವಸ್ಥೆಯನ್ನು ಏರ್ಪಡಿಸಿದ್ದಾರೆ - ಎಂದು ಕೆಲವು ಅರೆಬೆಂದ ಜ್ಞಾನಿಗಳು ವಟಗುಟ್ಟುತ್ತಿರುತ್ತಾರೆ. ಅದು ನಿಜವಲ್ಲ. ವರ್ಣ ಎನ್ನುವುದು ವೃಣ್ ಧಾತುವಿನಿಂದ ಬಂದಿದೆ, ಆರಿಸಿಕೊಳ್ಳು ಎನ್ನುವುದು ಅದರ ಶಬ್ದಾರ್ಥ. ’ವರಃ ವೃಣೇತ್’ (ಆಯ್ಕೆ ಮಾಡಿಕೊಂಡದ್ದು ವರ್ಣ) ಎಂದು ನಿರುಕ್ತಕಾರರಾದ ಯಾಸ್ಕರಾಚಾರ್ಯರು ಹೇಳಿರುತ್ತಾರೆ. "ಚಾತುರ್ವರ್ಣ್ಯಂ ಮಯಾ ಸೃಷ್ಟ್ಯಂ ಗುಣಕರ್ಮ ವಿಭಾಗಶಃ" - ಗುಣ ಮತ್ತು ಕರ್ಮಗಳನ್ನು ಆಧರಿಸಿ ನಾಲ್ಕು ವರ್ಣಗಳನ್ನು ನಾನೇ ಸೃಷ್ಟಿಸಿದ್ದೇನೆ ಎಂದು ಗೀತೆಯಲ್ಲಿ (ಅಧ್ಯಾಯ ೪, ಶ್ಲೋಕ ೧೩) ಶ್ರೀಕೃಷ್ಣನು ಹೇಳಿರುವುದು ವರ್ಣವ್ಯವಸ್ಥೆಗೆ ಪ್ರಮಾಣವಾಗಿದೆ. ನಾಲ್ಕು ವರ್ಣಗಳು ಸಮಾಜದಲ್ಲಿರುವ ನಾಲ್ಕು ವರ್ಗಗಳು. 
       ಇಂಗ್ಲೀಷಿನಲ್ಲಿ ಹೇಳಬೇಕೆಂದರೆ, ಕುಲ ಅಥವಾ ಜಾತಿ ವ್ಯವಸ್ಥೆ ಎನ್ನುವುದನ್ನು Caste System ಮತ್ತು ವರ್ಣ ಎನ್ನುವುದು Class System. ವರ್ಣ ವ್ಯವಸ್ಥೆಯಲ್ಲಿ ಹೇಳಲಾಗಿರುವ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ವರ್ಗಗಳೇ (Classes) ಹೆಸರಿನಲ್ಲಿ ಜಾತಿಗಳಾಗಿ (Castes), ಅವುಗಳಿಂದ ಮತ್ತೆ ಉಪಜಾತಿಗಳು ಏರ್ಪಟ್ಟವು. ಆದರೆ ದುರುದೃಷ್ಟವಶಾತ್ ಕಾಲಚಕ್ರಕ್ಕೆ ಸಿಲುಕಿ ವರ್ಣಗಳೇ ಜಾತಿಗಳೆನ್ನುವ ದುರಭಿಪ್ರಾಯವು ಬಲಪಟ್ಟಿತು. 
       ಯಾವುದೇ ಸಮಾಜದಲ್ಲಾಗಲಿ ಮುಖ್ಯವಾಗಿ ಅವಶ್ಯವಿರುವುವು - ೧) ವಿದ್ಯೆ, ೨) ಪರಿಪಾಲನೆ, ರಕ್ಷಣೆ, ೩) ಉತ್ಪಾದನೆ, ವ್ಯಾಪಾರ ಮತ್ತು ೪) ಶ್ರಮ ಶಕ್ತಿ. ವಿದ್ಯೆಯನ್ನು ಕಲಿತುಕೊಂಡು ಜ್ಞಾನಬೋಧನೆ ಮಾಡುವವನು ಬ್ರಾಹ್ಮಣ, ಪರಿಪಾಲನೆ  ಮತ್ತು ರಕ್ಷಣೆಯ ಬಾಧ್ಯತೆಯನ್ನು ನಿರ್ವಹಿಸುವವನು ಕ್ಷತ್ರಿಯ, ವ್ಯಾಪಾರ, ವಾಣಿಜ್ಯಗಳನ್ನು ಕೈಗೊಳ್ಳುವವನು ವೈಶ್ಯ, ಶಾರೀರಿಕವಾಗಿ ಕಷ್ಟಪಡುವವನು ಶೂದ್ರ ಎಂದು ನಮ್ಮ ಪೂರ್ವಿಕರು ಹೆಸರುಗಳನ್ನಿಟ್ಟಿದ್ದಾರೆ. 
       ಇವು ಇಂಗ್ಲೀಷಿನಲ್ಲಿ ಹೇಳುವ 'Watertight compartments' ಅಂದರೆ ಪ್ರತ್ಯೇಕವಾಗಿರುವ ಬಿಡಿಭಾಗಗಳಲ್ಲ. ಯಾವಾಗ ಬೇಕೆಂದರೆ ಆವಾಗ ಅವಶ್ಯಕತೆಗನುಗುಣವಾಗಿ ಯೋಗ್ಯತೆ ಮತ್ತು ನೈಪುಣ್ಯವನ್ನು ಸಂಪಾದಿಸಿಕೊಂಡು ಒಂದು ವರ್ಣದವನು ಅದಕ್ಕಿಂತ ಉನ್ನತವಾದ ವರ್ಣಕ್ಕೆ ಮೇಲೇರಬಹುದು. ಒಂದು ವರ್ಣಕ್ಕೆ ಏರಿದವನು ಅದಕ್ಕೆ ಬೇಕಾದ ಯೋಗ್ಯತೆ ಮತ್ತು ಸಾಮರ್ಥ್ಯವನ್ನು ಕಳೆದುಕೊಂಡು ಭ್ರಷ್ಟನಾದರೆ ಕೆಳ ತಳ್ಳಲ್ಪಡಲೂ ಬಹುದಾಗಿತ್ತು. ಇದಕ್ಕೆ ನಮಗೆ ಅನೇಕ ನಿದರ್ಶನಗಳು ಸಿಗುತ್ತವೆ. 
       ಋಗ್ವೇದದ ೧೦ನೆಯ ಮಂಡಲದಲ್ಲಿ ಪಗಡೆಯಾಟದ ವಿದ್ಯೆಯ ಕುರಿತು ೩೪ ಸೂಕ್ತಗಳನ್ನು ರಚಿಸಿದ ಕವಷ ಐಲೂಷನು ದಾಸಿ ಸ್ತ್ರೀಗೆ ಜನಿಸಿದವನು. ಜನ್ಮತಃ ಅವನ ತಾಯಿಯದು ಶೂದ್ರ ವರ್ಣವಾಗಿತ್ತು. ಆದರೂ ಅತ್ಯುನ್ನತವಾದ ಋಷ್ಯತ್ವವನ್ನು ಹೊಂದಿದ, ಮಂತ್ರ ದ್ರಷ್ಠಾರನಾದ. 
       ಶೂದ್ರ ಸ್ತ್ರೀಗೆ ಜನಿಸಿದ ವತ್ಸ ಮತ್ತು ಚಾಂಡಾಲ ಕುಟುಂಬದಲ್ಲಿ ಜನಿಸಿದ ಮತಂಗರು ಬ್ರಾಹ್ಮಣತ್ವವನ್ನು ಹೊಂದಿ ವೇದ ಋಷಿಗಳೆನಿಸಿದರು. 
       ತನ್ನ ತಂದೆ ಯಾರೋ ಎನ್ನುವುದು ಅವನ ತಾಯಿಗೇ ಗೊತ್ತಿಲ್ಲದ ಸತ್ಯಕಾಮನು ಬ್ರಾಹ್ಮಣನಾಗಿ ಗುರುತಿಸಲ್ಪಟ್ಟು ಬ್ರಹ್ಮವಾದಿಯಾದ ಋಷಿ ಎನಿಸಿದ. 
       ದಾಸಿಯ ಉದರದಲ್ಲಿ ಜನಿಸಿದ ವಿದುರನು ಕುರುಸಭೆಯಲ್ಲಿ ಮಂತ್ರಿಪದವಿಯನ್ನು ಹೊಂದಿ ಅಪ್ರತಿಮ ಧರ್ಮವೇತ್ತನಾಗಿ ಕೀರ್ತಿಗಳಿಸಿದ. 
       ಕ್ಷತ್ರಿಯ ಕುಟಂಬದಲ್ಲಿ ಜನಿಸಿದ ವಿಶ್ವಾಮಿತ್ರನು ಘೋರ ತಪಸ್ಸನ್ನು ಮಾಡಿ ಬ್ರಹ್ಮರ್ಷಿ ಎನಿಸಿಕೊಂಡ. ಮತ್ತೆ ಅದೇ ಬ್ರಹ್ಮಶಿ ವಿಶ್ವಾಮಿತ್ರನ ಮಕ್ಕಳು ಶೂದ್ರರಿಗಿಂತ ಅಧೋಗತಿಗಿಳಿದು ಪತಿತರೆನಿಸಿದರು. 
       ಕ್ಷತ್ರಿಯ ವಂಶದಲ್ಲಿ ಜನಿಸಿದ ರಾಮ, ಯದುವಂಶದಲ್ಲಿ ಜನಿಸಿದ ಕೃಷ್ಣ, ಸಾಕ್ಷಾತ್ ಭಗವಂತನ ಅವತಾರಗಳೆಂದು ಕರೆಯಲ್ಪಟ್ಟು ಲೋಕಪೂಜ್ಯರಾದರು. 
       ಶ್ರೀ ರಾಮನ ಪೂರ್ವಜನಾದ ರಘು ಮಹಾರಾಜನ ಕುಮಾರದ ಪ್ರವೃದ್ಧನು ಸಮಾಜದಿಂದ ಬಹಿಷ್ಕರಿಸಲ್ಪಟ್ಟು ರಾಕ್ಷಸತ್ವವನ್ನು ಹೊಂದಿದ. 
        ಬ್ರಾಹ್ಮಣನಾಗಿ ಜನಿಸಿದ ರಾವಣನು ಭ್ರಷ್ಟನಾಗಿ ರಾಕ್ಷಸನಾದ. 
       ಕ್ಷತ್ರಿಯನಾಗಿ ಹುಟ್ಟಿದ ತ್ರಿಶಂಕುವು ಚಂಡಾಲನೆನಿಸಿದ. 
       ಮಹಾಭಾರತಕಾಲದವರೆಗೆ ಆಚರಣೆಯಲ್ಲಿದ್ದುದು ಮನುವು ಉದ್ದೇಶಿಸಿದ ಇಂತಹ ದ್ವಿಮುಖ ಸಂಚಾರವಿದ್ದ ವರ್ಣ ವ್ಯವಸ್ಥೆ ಮಾತ್ರ. ವರ್ಣವೆನ್ನುವುದು ಹುಟ್ಟಿನಿಂದ ನಿರ್ಣಯಿಸಲ್ಪಡುವುದಾಗಿದ್ದರೆ ಬ್ರಾಹ್ಮಣನಾಗಿ ಹುಟ್ಟಿದವನು ತನಗೆ ನಿರ್ದೇಶಿಸಲ್ಪಟ್ಟಿದ್ದ ವಿಧಿಗಳನ್ನು ನಿರ್ವಹಿಸದೇ ಹೋದರೂ...... ಮಾಡುವ ಕೆಲಸದಿಂದ ಭ್ರಷ್ಟನಾದರೂ, ಅಧಮನಾದರೂ ಬದುಕಿರುವವರೆಗೆ ಬ್ರಾಹ್ಮಣನಾಗಿಯೇ ಉಳಿಯುತ್ತಾನೆ. ಜನ್ಮತಃ ಶೂದ್ರನಾದವನು ಎಷ್ಟೇ ಉತ್ತಮ ಗುಣಗಳನ್ನು ರೂಢಿಸಿಕೊಂಡರೂ ಮೇಲಕ್ಕೇರದೆ ಶೂದ್ರನಾಗಿಯೇ ಉಳಿದು ಹೋಗುತ್ತಾನೆ. ಇದು ಮನುವಿನ ಮೂಲ ಸೂತ್ರಕ್ಕೇ ವಿರುದ್ಧವಾದದ್ದು. ಮನುಸ್ಮೃತಿಯಲ್ಲಿ ಹೇಳಿರುವುದೆಲ್ಲಾ ಮೇಲಿನಿಂದ ಕೆಳಕ್ಕೆ ಮತ್ತು ಕೆಳಗಿನಿಂದ ಮೇಲಕ್ಕೆ ಬದಲಾಗಲು ಅವಕಾಶವಿರುವ ವರ್ಣವ್ಯವಸ್ಥೆಯಷ್ಟೆ. ಇದಕ್ಕೆ ಪೂರಕವಾಗಿರುವ ಈ ಶ್ಲೋಕವನ್ನು ಗಮನಿಸಿ - 
ಶೂದ್ರೋ ಬ್ರಾಹ್ಮಣತಾಮೇತಿ ಬ್ರಾಹ್ಮಣಶ್ಚೈತಿ ಶೂದ್ರತಾಂ l
ಕ್ಷತ್ರಿಯಾ ಜ್ಞಾತಮೇವಂ ತು ವಿದ್ಯಾದ್ವೈಶ್ಯಾಸ್ತಥೈವ ಚ ll 
(ಮನುಸ್ಮೃತಿ ೧೦ - ೬೫)
        ಶೂದ್ರನು ಬ್ರಾಹ್ಮಣತ್ವವನ್ನು ಹೊಂದಬಹುದು, ಬ್ರಾಹ್ಮಣನು ಶೂದ್ರತ್ವವನ್ನು ಹೊಂದಬಹುದು. ಅದೇ ವಿಧವಾಗಿ ಕ್ಷತ್ರಿಯನಾಗಿ ಹುಟ್ಟಿದವನು, ವೈಶ್ಯರಿಗೆ ಜನಿಸಿದವನು ಮಾಡುವ ವೃತ್ತಿಯನ್ನವಲಂಭಿಸಿ ಬೇರೆ ವರ್ಣವನ್ನು ಪಡೆಯಬಹುದು. 
ನ ತಿಷ್ಠತಿ ತು ಯಃ ಪೂರ್ವಾಂ ನೋಪಾಸ್ತೇ ಯಶ್ಚ ಪಶ್ಚಿಮಾಂ  l
ನ ಶೂದ್ರವತ್ ಬಹಿಷ್ಕಾರ್ಯಃ ಸರ್ವಸ್ಮಾತ್ ದ್ವಿಜಕರ್ಮಣಃ  ll
(ಮನುಸ್ಮೃತಿ ೨ - ೧೦೩)
 
        ಉದಯಾಸ್ತಮಾನಗಳಲ್ಲಿ ಯಾರು ಸಂಧ್ಯೆಯನ್ನು ಉಪಾಸನೆ ಮಾಡುವುದಿಲ್ಲವೋ ಅಂತಹವನನ್ನು ಶೂದ್ರನಂತೆಯೇ ಎಲ್ಲಾ ವಿಧವಾದ ದ್ವಿಜ ಕರ್ಮಗಳಿಂದ ಬಹಿಷ್ಕರಿಸ ತಕ್ಕದ್ದು. 
ಯೋನಧೀತ್ಯ ದ್ವಿಜೋ ವೇದಮನ್ಯತ್ರ ಕುರುತೇ ಶ್ರಮಂ l
ಸ ಜೀವನ್ನೇವ ಶೂದ್ರತ್ವಮಾಶು ಗಚ್ಚತಿ ಸಾನ್ವಯಃ ll
(ಮನುಸ್ಮೃತಿ ೨ - ೧೬೮)
       ಯಾರು ವೇದಾಧ್ಯಯನವನ್ನು ಮಾಡದೆ ಇತರ ಶಾಸ್ತ್ರಗಳನ್ನು ಎಷ್ಟೇ ಅಧ್ಯಯನ ಮಾಡಿದರೂ ಸಹ, ತನ್ನ ವಂಶಜರೊಂದಿಗೆ ಅವನೂ ಸಹ ಶೂದ್ರತ್ವವನ್ನು ಹೊಂದುತ್ತಾನೆ. 
       ಮನುವಿನ ದೃಷ್ಟಿಯಲ್ಲಿ ವರ್ಣವೆನ್ನುವುದು ಸುಲಭವಾಗಿ ಹೊಂದಬಹುದಾದುದು ಎನ್ನುವುದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆಯ ಅವಶ್ಯಕತೆಯಿಲ್ಲ. ಕಾಲಾನಂತರದಲ್ಲಿ ಒಬ್ಬನ ಹುಟ್ಟನ್ನು ಆಧರಿಸಿ ಜಾತಿ (ಅಂದರೆ ಜನನ) ಎನ್ನುವುದು ಸ್ಥಿರಪಟ್ಟಿತು. ತದನಂತರ ಚಾತುರ್ವರ್ಣಗಳಲ್ಲಿ ಎಷ್ಟೋ ಜಾತಿಗಳು, ಉಪಜಾತಿಗಳು, ಗೋತ್ರಗಳನ್ನಾಧರಿಸಿ ಕುಲ, ಉಪಕುಲುಗಳು ಏರ್ಪಟ್ಟವು. ಈ ಗೋತ್ರಗಳ ಯಾದಿಗಳು ಹೊಸೆದ ಬಾವಿ ಸೇದುವ ಹಗ್ಗದಷ್ಟು ಉದ್ದವಿವೆ. ಮನುಸ್ಮೃತಿಯಲ್ಲಿ ಹೀಗೆ ಜನನವನ್ನಾಧರಿಸಿದ ಜಾತಿ ವ್ಯವಸ್ಥೆಯ ಪ್ರಸ್ತಾವನೆ ಅಥವಾ ಉಪಕುಲಗಳ ಕುರಿತ ಉಲ್ಲೇಖವು ಎಳ್ಳಷ್ಟಾದರೂ ಇಲ್ಲ. ಇಂದು ನಮ್ಮನ್ನು ಹಿಡಿದು ಪೀಡಿಸುತ್ತಿರುವ ಜಾತಿಭೂತಕ್ಕೆ ಕಾರಣ ಹೇತುವೆಂದು ಮನುವನ್ನು ಅನಾವಶ್ಯಕವಾಗಿ ದೂಷಿಸುವುದು ವಿವೇಚನೆ ಎನಿಸಿಕೊಳ್ಳದು. ಅದು ಅನ್ಯಾಯವಷ್ಟೇ ಅಲ್ಲ...... ಅದು ದುರ್ಬುದ್ಧಿ ಕೂಡಾ! 
ಮುಂದುವರೆಯುವುದು.................
(ಆಧಾರ: ತೆಲುಗಿನಲ್ಲಿ ಶ್ರೀಯುತ ಎಂ.ವಿ.ಆರ್ ಶಾಸ್ತ್ರಿ ಅವರು ರಚಿಸಿರುವ "ಮನುಧರ್ಮ - ನಮಗೆ ಬೇಡವಾದ ಮನು: ಮನುಧರ್ಮಂ, ಮನಕು ಗಿಟ್ಟನಿ ಮನುವು" ಪುಸ್ತಕದ ಒಂಬತ್ತನೆಯ ಅಧ್ಯಾಯ).
*****
ಈ ಸರಣಿಯ‌ ಹಿಂದಿನ‌ ಲೇಖನ ಭಾಗ - ೮ ಮನುವಿನ ಧರ್ಮ: ಪುಕ್ಕಟೆಯಾಗಿ ಸಿಕ್ಕಿರುವುದು ಹಿಂದೂಗಳು ಮಾತ್ರವೇ? ಓದಲು ಈ ಕೊಂಡಿಯನ್ನು ನೋಡಿ: https://sampada.net/blog/%E0%B2%AD%E0%B2%BE%E0%B2%97-%E0%B3%AE-%E0%B2%AE...
 
ಚಿತ್ರಗಳ ಕೃಪೆ: ಗೂಗಲ್
ಚಿತ್ರ - ೧: ಮನುಸ್ಮೃತಿ
ಚಿತ್ರ -೨: ಮಹರ್ಷಿ ಮನು

Rating
No votes yet

Comments

Submitted by makara Sun, 04/07/2019 - 10:22

ಈ ಸರಣಿಯ‌ ಮುಂದಿನ ಲೇಖನ ಭಾಗ - ೧೦ ಮನುವಿನ ಧರ್ಮ: ಡಾ. ಅಂಬೇಡ್ಕರರ ಮಾತುಗಳು ಓದಲು ಈ ಕೊಂಡಿಯನ್ನು ನೋಡಿ: https://sampada.net/blog/%E0%B2%AD%E0%B2%BE%E0%B2%97-%E0%B3%A7%E0%B3%A6-...