ಭಾಗ - ೧೦ ಮನುವಿನ ಧರ್ಮ: ಡಾ. ಅಂಬೇಡ್ಕರರ ಮಾತುಗಳು

ಭಾಗ - ೧೦ ಮನುವಿನ ಧರ್ಮ: ಡಾ. ಅಂಬೇಡ್ಕರರ ಮಾತುಗಳು

ಚಿತ್ರ

         ಮಾನವರೆಲ್ಲರೂ ಸಮಾನರು.
         ಇದು ಆದರ್ಶ!
         ಯಾರು ಏನೇ ಹೇಳಿದರೂ ಮಾನವರೆಲ್ಲರೂ ಸಮನಾಗಿಲ್ಲ. 
         ಇದು ವಾಸ್ತವ!
        ಸರ್ವಮಾನವ ಸಮಾನತ್ವವನ್ನು ಸಾಧಿಸಿ, ಸಮಸಮಾಜವನ್ನು ಸ್ಥಾಪಿಸಿ ಸಮತಾವಾದದ ಸ್ವರ್ಗವನ್ನು ಭೂಮಿಯ ಮೇಲೆ ತರುತ್ತೇವೆಂದು ಹೇಳಿ ಹಲವು ತಲೆಮಾರುಗಳ ಜನರಿಗೆ ಮಂಕುಬೂದಿ ಎರಚಿದ ಕಮ್ಯೂನಿಷ್ಟ್ ಪಕ್ಷಗಳಲ್ಲೇ ಸಮಾನತೆ ಇಲ್ಲ. ಆ ಸಿದ್ಧಾಂತವು ಪ್ರಪಂಚದಲ್ಲಿ ಬದುಕಿರುವಷ್ಟು ಕಾಲ ಕಮ್ಯೂನಿಷ್ಟ್ ರಾಜ್ಯಗಳಲ್ಲಿನ ಪಕ್ಷದ ನೇತಾರರಿಗೆ, ಪಕ್ಷ ಮತ್ತು ಸರ್ಕಾರಗಳಲ್ಲಿ ಪ್ರಭಾವವಿರುವ ವ್ಯಕ್ತಿಗಳಿಗೆ ಇರುವ ವಿಶೇಷವಾದ ಸೌಲಭ್ಯ, ಸೌಭಾಗ್ಯಗಳು ಪಕ್ಷದ ಸಾಮಾನ್ಯ ಸದಸ್ಯರಿಗೆ, ಕಾರ್ಯಕರ್ತರಿಗೆ ಮತ್ತು ಸಾಧಾರಣ ಪ್ರಜೆಗಳಿಗೆ ಎಂದಿಗೂ ದಕ್ಕದು, ಹಿಂದೆಯೂ ದಕ್ಕಿರಲಿಲ್ಲ. 
       ವಿವಿಧ ಜಾತಿಗಳಲ್ಲಿನ ತಾರತಮ್ಯಗಳನ್ನು ನಿರ್ಮೂಲಿಸಿ, ಬಡವರು, ಹಿಂದುಳಿದ ವರ್ಗಗಳು ಮತ್ತು ದಲಿತ ಜನಾಂಗದವರನ್ನೆಲ್ಲಾ ಮೇಲೆತ್ತಿ ನಿಜವಾದ ಸಾಮಾಜಿಕ ನ್ಯಾಯವನ್ನು ಸಾಧಿಸುವುದಕ್ಕಾಗಿಯೇ ಅವತಾರವೆತ್ತಿದವರಂತೆ ಬಡಾಯಿಕೊಚ್ಚಿಕೊಳ್ಳುವ ಪಕ್ಷಗಳಲ್ಲಿಯೂ ಸಹ ಅಧಿಕಾರ ಚಲಾಯಿಸುವ ಆಡಳಿತ ವರ್ಗದವರಿಗೆ, ಅವರ ಬಂಧುಮಿತ್ರರಿಗೆ ಹಾಗೂ ಅವರ ಚೇಲಾಗಳಿಗಿರುವ ಪ್ರಾಮುಖ್ಯತೆ, ಪ್ರಾಧಾನ್ಯತೆ ಬಡ, ಬಲಹೀನ ವರ್ಗಕ್ಕೆ ಸೇರಿದ ಮತ್ತು ದಲಿತ ಜನಾಂಗಕ್ಕೆ ಸೇರಿದ ಸಾಧಾರಣ ಸದಸ್ಯರಿಗೆ ಇರುವುದಿಲ್ಲ. 
ಪ್ರಾಚೀನ  ಋಷಿಗಳಿಂದ ಸ್ಥಾಪಿಸಲ್ಪಟ್ಟ ವರ್ಣ ವ್ಯವಸ್ಥೆಯು ಸಾವಿರಾರು ವರ್ಷಗಳಿಂದಲೂ ಭರತ ಖಂಡದಲ್ಲಿ ಅತ್ಯಂತ ಧರ್ಮಯುತವಾಗಿ ಅನುಷ್ಠಾನದಲ್ಲಿತ್ತೆನ್ನುವ ವಿಷಯವನ್ನು ಈ ಕಾಲದಲ್ಲಿ ಹಲವು ಭ್ರಷ್ಟ ಮತ್ತು ಪೂರ್ವಾಗ್ರಹಪೀಡಿತ ದೃಷ್ಟಿಯುಳ್ಳ, ದುರ್ಭಾಷೆಗಳನ್ನಾಡುವ ಮಹನೀಯರು ಗಮನಿಸಬೇಕಾಗಿರುವ ಗಹನವಾದ ಸಂಗತಿ. 
         ಹಿಂದುಳಿದ, ಬಡ, ಬಲಹೀನ, ದಲಿತ ಜನಾಂಗಗಳಿಗೆ ಸೇರಿದ ಸಹೋದರರಿಗೆ ಎಲ್ಲಿಯೇ ಆಗಲಿ, ಯಾವ ವಿಷಯಕ್ಕೇ ಆಗಲಿ, ಯಾವುದೇ ವಿಧವಾದ ಪಕ್ಷಪಾತವನ್ನು ತೋರದೆ ಎಲ್ಲರನ್ನೂ ಸಮಾನವಾಗಿ ಆದರಿಸಬೇಕೆಂದು ಮೂಟೆಗಟ್ಟಲೆ ಪುಸ್ತಕಗಳನ್ನು, ಕಂತೆಗಟ್ಟಲೆ ಕವಿತೆಗಳನ್ನು ಬರೆಯುವ ಪುಣ್ಯಾತ್ಮರೂ ಸಹ ತಮ್ಮ ಮನೆಗಳಲ್ಲಿ ಕೆಲಸ ಮಾಡುವ ಜನರನ್ನು..... ಅವರೂ ಸಹ ತಮ್ಮಂತೆ ದಲಿತ ಜನಾಂಗಕ್ಕೋ ಅಥವಾ ತಮ್ಮಂತೆ ಹಿಂದುಳಿದ ವರ್ಗಕ್ಕೆ ಸೇರಿದವರೆಂದು ತಿಳಿದರೂ ಕೂಡಾ ಅವರನ್ನು ಕೆಲಸದವರಂತೆಯೇ ಕಾಣುತ್ತಾರೆ. ತಮ್ಮೊಂದಿಗೆ ಸೋಫಾದಲ್ಲಿ ಕುಳ್ಳಿರಿಸಿಕೊಂಡು, ಅವರು ಬರುತ್ತಿದ್ದಂತೆಯೇ ಟೀ, ಕಾಫಿ ಕೊಟ್ಟು, ದೇಶದಲ್ಲಿ ಬಡವ, ಬಲಹೀನ ದಲಿತರಿಗೆ ಆಗುತ್ತಿರುವ ಅನ್ಯಾಯಗಳನ್ನು ಕುರಿತು ಲೋಕಾಭಿರಾಮವಾಗಿ ಮಾತನಾಡುವುದಿಲ್ಲ, ಏಕೆಂದರೆ ಜಾತಿ ಒಂದೇ ಆದರೂ ಸಹ ಕೆಲಸ ಮಾಡುವವರ ತರಗತಿಯೇ ಬೇರೆ. 
ಒಬ್ಬ ಉನ್ನತಾಧಿಕಾರಿಗೆ, ಒಬ್ಬ ಪ್ರಮುಖ ವ್ಯಾಪಾರವೇತ್ತನಿಗೆ, ಒಬ್ಬ ಪೋಲೀಸ್ ಅಧಿಕಾರಿಗೆ ಕೊಡುವ ಗೌರವ, ಮರ್ಯಾದೆಗಳನ್ನು ...... ಬೆವರಿಳಿಸಿ, ಮೈಮುರಿದು ದುಡಿಯುವ ಕಾರ್ಮಿಕರಿಗೆ, ಆಳುಕಾಳುಗಳಿಗೆ ಸಾಧಾರಣವಾಗಿ ಯಾರೂ ಕೊಡುವುದಿಲ್ಲ. ಕೂಲಿ ಕೆಲಸ ಮಾಡುವವನು ನೀಚನೆಂದಲ್ಲ ಅಥವಾ ಉನ್ನತ ಸ್ಥಾನದಲ್ಲಿರುವವರೆಲ್ಲಾ ಉತ್ತಮರೆಂದಲ್ಲ. ಅವರವರು ಮಾಡುವ ಕೆಲಸಗಳ ಹಿರಿಮೆ-ಗರಿಮೆಗಳನ್ನಾಧರಿಸಿ ಸಮಾಜದಲ್ಲಿ ಅವರಿಗೆ ಸಲ್ಲುವ ಗೌರವವು ಹೆಚ್ಚು-ಕಡಿಮೆಯಾಗುತ್ತದೆ. ಇದು ಪ್ರಪಂಚದಲ್ಲಿ ಎಲ್ಲಿಯೇ ಆಗಲಿ, ಯಾವ ಸಮಾಜದಲ್ಲೇ ಆಗಲಿ ಪ್ರಚಲಿತವಿರುವ ವಿಷಯ. 
         ಕುದುರೆ ಹಾಗು ಕತ್ತೆ ಮಾನವರ ದೃಷ್ಟಿಯಲ್ಲಿ ಎಂದಿಗೂ ಸಮಾನವಾಗವು. ಸಮಾಜದಲ್ಲಿ ಉತ್ತಮವಾದ ಸೇವೆಯನ್ನು ಸಲ್ಲಿಸುತ್ತಾ, ಪ್ರಮುಖವಾದ ಮತ್ತು ಜವಾಬ್ದಾರಿಯುತವಾದ ಹುದ್ದೆಗಳನ್ನು ನಿರ್ವಹಿಸುವ ವ್ಯಕ್ತಿಗಳಿಗೆ ಇರುವ ಮನ್ನಣೆ ಕೂಲಿನಾಲಿ ಮಾಡಿ, ಮೈಮುರಿದು ದುಡಿಯುವ ಸಾಮಾನ್ಯ ಕೆಲಸಗಾರರಿಗೆ ಇರುವುದಿಲ್ಲ. ಅದು ನ್ಯಾಯವೋ ಅನ್ಯಾಯವೋ ಎನ್ನುವ ಚರ್ಚೆ ಇಲ್ಲಿ ಅನಾವಶ್ಯಕ. ಮಾಡುವ ಕೆಲಸವನ್ನು ಆದರಿಸಿ ಮನುಷ್ಯನಿಗೆ ಬೆಲೆಯಿರುತ್ತದೆನ್ನುವುದು ಇಲ್ಲಿ ಗಮನಿಸಬೇಕಾಗಿರುವ ವಿಷಯ!
         ಮತ್ತೆ ಮನು ಹೇಳಿದ್ದು ಇದನ್ನೇ ಅಲ್ಲವೇ? ಕೈಗೊಳ್ಳುವ ವೃತ್ತಿಯನ್ನಾಧರಿಸಿ ಮನು ಸಮಾಜವನ್ನು ನಾಲ್ಕು ತರಗತಿಗಳಾಗಿ ವರ್ಗೀಕರಣಮಾಡಿದ್ದಾನೆ. ಮಾಡುವ ಕೆಲಸದ ಪ್ರಾಮುಖ್ಯತೆಯನ್ನು ಪರಿಗಣಿಸಿ ಆಯಾ ವರ್ಗಗಳ ಪ್ರಾಮುಖ್ಯತೆಯನ್ನು ನಿರ್ಣಯಿಸಿದ್ದಾನೆ. ಅದರಲ್ಲಿ ತಪ್ಪೇನು? 
ಪ್ರಪಂಚದ ಚರಿತ್ರೆಯಲ್ಲಿ ಎಲ್ಲಿ ನೋಡಿದರೂ ಬಲಿಷ್ಠನಾದವನು ಬಲಹೀನನಾದವನ ಮೇಲೆ ದೊಡ್ಡಸ್ತಿಕೆಯನ್ನು ಮಾಡಿರುವುದೇ ಕಂಡು ಬರುತ್ತದೆ. ಬಲವಂತನಾದವನು ಹೇಳಿದಂತೆ ಉಳಿದವರೆಲ್ಲಾ ನಡೆದುಕೊಳ್ಳಲೇ ಬೇಕು! ಅಧಿಕಾರ ನಡೆಸುವವರು ಏನು ಮಾಡಿದರೂ, ಏನು ಹೇಳಿದರೂ ಸಹ ಉಳಿದವರು ಬಾಯ್ಮುಚ್ಚಿಕೊಂಡು ಬಿದ್ದಿರಬೇಕು. ಎಂತಹ ವಿದ್ವಾಂಸನಾಗಲಿ, ಎಂತಹ ಮಹಾನ್ ಜ್ಞಾನಿಯಾಗಲಿ ಪರಿಪಾಲಕನ ಅಧಿಪತ್ಯಕ್ಕೆ, ಅವನ ದಯಾ ದಾಕ್ಷಿಣ್ಯಗಳಿಗೆ ಒಳಪಟ್ಟು ಜೀವಿಸಬೇಕಾದ್ದೇ! ಹೌದಲ್ಲವೇ? 
       ಪ್ರಪಂಚದ ಮಾನವ ಚರಿತ್ರೆಯಲ್ಲಿ ಮೊಟ್ಟಮೊದಲಿಗೆ ಮನು ಮಾತ್ರವೇ ಜ್ಞಾನಕ್ಕೆ, ವಿದ್ವತ್ತಿಗೆ ಹಿರಿದಾದ ಸ್ಥಾನವನ್ನು ಕೊಟ್ಟಿದ್ದಾನೆ. ವಿದ್ಯೆಯನ್ನು ಕಲಿಸುವ, ಧರ್ಮವನ್ನು ಬೋಧಿಸುವ, ಸದಾಚಾರವನ್ನು ಪಾಲಿಸುವ ಶ್ರೇಷ್ಠರು, ರಾಜ್ಯವನ್ನಾಳುವವನಿಗಿಂತ ಉನ್ನತವಾದವರು ಎನ್ನುವ ಅತ್ಯುತ್ತಮವಾದ ಪ್ರಮಾಣವನ್ನು ಮನು ವ್ಯವಸ್ಥೆಗೊಳಿಸಿದ್ದಾನೆ. ವಿದ್ಯೆ, ಅಧ್ಯಯನ, ಅಧ್ಯಾಪನೆ, ಸಮಾಜ ಹಿತಕ್ಕಾಗಿ ಯಜ್ಞಗಳನ್ನು ಕೈಗೊಳ್ಳುವುದು, ಕೈಗೊಳ್ಳುವಂತೆ ಪ್ರೇರೇಪಿಸುವುದನ್ನು, ಕರ್ತವ್ಯವಾಗಿ ನಿರ್ದೇಶಿಸಲ್ಪಟ್ಟ ಬ್ರಾಹ್ಮಣ ವರ್ಗಕ್ಕೆ ಸಮಾಜದಲ್ಲಿ ಅತ್ಯುನ್ನತ ಸ್ಥಾನವನ್ನು ಕಲ್ಪಿಸಿದ್ದಾನೆ. ಪ್ರಜೆಗಳಿಗೆ ರಕ್ಷಣೆ, ಶಾಂತಿ ಭದ್ರತೆಗಳನ್ನು ಕಾಪಾಡುವ ಕರ್ತವ್ಯವುಳ್ಳ ಕ್ಷತ್ರಿಯರಿಗೆ ಸಮಾಜದಲ್ಲಿ ಎರಡನೇ ಸ್ಥಾನವನ್ನು ಕೊಟ್ಟಿದ್ದಾನೆ. ವ್ಯವಸಾಯ, ಪಶುಪಾಲನೆ, ವ್ಯಾಪಾರ, ವಾಣಿಜ್ಯಗಳನ್ನು ನಿರ್ವಹಿಸುವ ವೈಶ್ಯ ವರ್ಗಕ್ಕೆ ಮೂರನೇ ಸ್ಥಾನವನ್ನು ಏರ್ಪಡಿಸಿದ್ದಾನೆ. ಯಾವುದೇ ವಿಧವಾದ ನೈಪುಣ್ಯವಿಲ್ಲದೆ, ವಿದ್ಯೆ, ಸಂಸ್ಕಾರಗಳಿಗೆ ದೂರವಾಗಿ ಅಧಮ ಸ್ಥಾಯಿಯಲ್ಲಿ ಜೀವಿಸುವವರನ್ನು ಶೂದ್ರರೆಂದು ನಿರ್ಣಯಿಸಿ ಮನುವು ಅವರಿಗೆ ಮೇಲಿನ ವರ್ಗಗಳಿಗೆ ಸೇವೆ ಮಾಡುವುದನ್ನು ನಿಯುಕ್ತಗೊಳಿಸಿದ್ದಾನೆ. ಅಷ್ಟೇ ಅಲ್ಲ, ಆಯಾ ವರ್ಗಗಳು ಮಾಡಬೇಕಾದ ಕರ್ತವ್ಯಗಳನ್ನು, ನಿರ್ವಹಿಸಬೇಕಾದ ಜವಾಬ್ದಾರಿಗಳನ್ನು, ಮತ್ತು ಅವರಿಗೆ ಇರಬೇಕಾದ ಯೋಗ್ಯತೆಗಳ ಕುರಿತು ಮನುವು ಸ್ಪಷ್ಟವಾದ ನಿರ್ವಚನವನ್ನು ಕೊಟ್ಟಿದ್ದಾನೆ. ಯಾರು ಯಾವ ವರ್ಣಕ್ಕೆ ಸೇರಿದ್ದಾರೆನ್ನುವುದನ್ನು ಅವರ ಜನನವನ್ನಾಧರಿಸಿ ನಿರ್ಣಯಿಸದೆ, ಅವರ ಆಯ್ಕೆಯನ್ನು ಆಧರಿಸಿ ಇರುತ್ತದೆನ್ನುವ ಕಟ್ಟಳೆಯನ್ನೂ ಮಾಡಿದ್ದಾನೆ. ಬ್ರಾಹ್ಮಣ ತಂದೆ-ತಾಯಿಗಳಿಗೆ ಹುಟ್ಟಿದವರಾದರೂ ಸರಿ, ಬ್ರಾಹ್ಮಣತ್ವದ ಲಕ್ಷಣಗಳನ್ನು ಕಳೆದುಕೊಂಡು ಶೂದ್ರಲಕ್ಷಣಗಳನ್ನು ಮೈಗೂಡಿಸಿಕೊಂಡರೆ ಶೂದ್ರನಾಗಿಯೇ ಪರಿಗಣಿಸಲ್ಪಡಬೇಕು. ಅದೇ ವಿಧವಾಗಿ ಶೂದ್ರ ಕುಟುಂಬದಲ್ಲಿ ಹುಟ್ಟಿದರೂ ಬ್ರಾಹ್ಮಣ ಲಕ್ಷಣಗಳನ್ನು, ಯೋಗ್ಯತೆಗಳನ್ನು ಮೈಗೂಡಿಸಿಕೊಂಡರೆ ಬ್ರಾಹ್ಮಣನಾಗಿಯೇ ಗುರುತಿಸಲ್ಪಡಬೇಕು ಎಂದು ಹೇಳಿದ್ದಾನೆ. ಹೀಗೆ ಸ್ವಭಾವ, ಗುಣ ಮತ್ತು ಸಾಮರ್ಥ್ಯಗಳನ್ನು ಆಧರಿಸಿ ಒಂದು ವರ್ಣದಿಂದ ಇನ್ನೊಂದು ವರ್ಣಕ್ಕೆ ಉನ್ನತೀಕರಣ ಮತ್ತು ಸಹಜವಾದ ಅವನತೀಕರಣಗಳಿಗೆ ಮನು ಕಠಿಣವಾದ ಕಟ್ಟುಪಾಡುಗಳನ್ನು ಹೇಳಿದ್ದಾನೆ. 
        ಮನುವು ನಿರ್ಣಯಿಸಿದ "ಗುಣವನ್ನು ಆಧರಿಸಿ ವರ್ಣ"ಗಳೆನ್ನುವುದು ಕಾಲಚಕ್ರಕ್ಕೆ ಸಿಲುಕಿ "ಜನನವನ್ನಾಧರಿಸಿ ಜಾತಿ" ಎನ್ನುವ ರೂಪ ತಾಳಿತು. ಇದೇ ಜಾತಿ ವ್ಯವಸ್ಥೆ ಮುಂದೆ ಉಲ್ಬಣಿಸಿ ವಿಕೃತವೆನಿಸುವ ಹಲವಾರು ವಿಕೃತಿಗಳಿಗೆ ಕಾರಣವಾಯಿತು. ಈ ವಿಕೃತವಾದ ಜಾತಿಭೂತವನ್ನು ಸರ್ವವಿಧದಲ್ಲಿಯೂ ಹೋರಾಡಿ ನಿರ್ಮೂಲಿಸಬೇಕಾದ್ದೇ; ಇದರಲ್ಲಿ ಎರಡು ಮಾತಿಲ್ಲ. ಆದರೆ ಅನಂತರ ಕಾಲದಲ್ಲಿ ನಡೆದ ಅಪಸವ್ಯಗಳಿಗೆ, ವೈಪರೀತ್ಯಗಳಿಗೆ ಮನುವನ್ನು ನಿಂದಿಸುವುದರ ಔಚಿತ್ಯವಾದರೂ ಏನು? ಅಂಬೇಡ್ಕರರಂತಹ ಮಹನೀಯರಿಂದ ರೂಪುಗೊಂಡ ರಾಜ್ಯಾಂಗ ವ್ಯವಸ್ಥೆಯಲ್ಲಿ ಕಾಲಕ್ರಮೇಣ ಸೇರಿಕೊಂಡ ವಿಕೃತಿ, ವೈಪರೀತ್ಯಗಳಿಗೆ ಅಂಬೇಡ್ಕರ್ ಅವರು ಕಾರಣರೆಂದು ಮತಿಯಿರುವ ಯಾರಾದರೂ ಹೇಳಬಲ್ಲರೇ? ಅದೇ ವಿಧವಾಗಿ, ಮನು ನಿರ್ದೇಶಿಸಿದ ಧರ್ಮವ್ಯವಸ್ಥೆಯಲ್ಲಿ ಕಾಲಾಂತರದಲ್ಲಿ ನಡೆದಿರುವ ವೈಪರೀತ್ಯಗಳಿಗೆ ಮನುವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವುದು ಎಷ್ಟರ ಮಟ್ಟಿಗೆ ಸಮಂಜಸ? 
       ಮನು ಹೇಳಿದ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ವರ್ಗಗಳೇ ಅನಂತರ ಕಾಲದಲ್ಲಿ ಅವೇ ಹೆಸರುಗಳಿಂದ ಜಾತಿಗಳಾಗಿ ಮಾರ್ಪಟ್ಟದ್ದರಿಂದ ಇಂದು ನಾವು ಕಾಣುತ್ತಿರುವ ಜಾತಿಗಳೂ, ವರ್ಣಗಳೂ ಒಂದೇ ಎನ್ನುವ ದುರಭಿಪ್ರಾಯವು ನಮಗೆ ಉಂಟಾಗಿದೆ. ಅದು ನಮ್ಮ ಗ್ರಹಿಕೆಯ ಲೋಪವೇ ಹೊರತು ವಾಸ್ತವವಾಗಿ ಜಾತಿಗೂ, ವರ್ಣಕ್ಕೂ ಎಲ್ಲಿಯೂ ಹೋಲಿಕೆಯಿಲ್ಲ. ಈ ಮಾತುಗಳನ್ನು ಬೇರೆ ಯಾರೋ ಅಲ್ಲ ಜಾತಿ ವ್ಯವಸ್ಥೆಗೆ ಕಡುವಿರೋಧಿಯಾಗಿದ್ದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರೇ ಸ್ವತಃ ಅಂಗೀಕರಿಸಿದ್ದಾರೆ. Annihilation of caste ಎನ್ನುವ ಗ್ರಂಥದಲ್ಲಿ ಅವರು ಏನು ಹೇಳಿದ್ದಾರೋ ನೋಡಿ : 
        "The principle underlying caste is fundamentally different from the principle underlying varna. Not only are they fundamentally different; but they are also fundamentally opposed." 
- Annihilation of caste p.59
         "ಜಾತಿಯ ಹಿಂದೆ ಇರುವ ಸೂತ್ರವೇ ಬೇರೆ. ವರ್ಣದ ಹಿಂದಿರುವ ಸೂತ್ರವೇ ಬೇರೆ. ಅವೆರಡೂ ಮೂಲಭೂತವಾಗಿ ಬೇರೆಯಾಗಿರುವುದಷ್ಟೇ ಅಲ್ಲ ಅವು ಮೌಲಿಕವಾಗಿ ವಿರುದ್ಧವಾದವುಗಳೂ ಕೂಡಾ."
  - (ಜಾತಿ ನಿರ್ಮೂಲನೆ, ಡಾ. ಬಿ.ಆರ್. ಅಂಬೇಡ್ಕರ್ ಪುಟ ೫೯) 
 
      "We shall be well advised to recall at the outset that the Hindu society; in common with other societies, was composed of classes and the earliest known are the 1) Brahmins or the priestly class; 2) the Kshatriya, or the military class; 3) the Vaishya, or the merchant class and 4) the Shudra, or the artisan and menial class. Particular attention has to be paid to the fact that this was essentially a class system, in which individuals, when qualified, could change their class, and therefore classes did not change their personnel." 
-Castes in India, Dr. B. R. Ambedkar, p 17-18
       ಪುರಾತನ ಕಾಲದಲ್ಲಿ ಇತರೇ ಸಮಾಜಗಳಂತೆ ಹಿಂದೂ ಸಮಾಜವೂ ಸಹ ವರ್ಗಗಳಾಗಿ ವಿಭಜಿಸಲ್ಪಟ್ಟಿತ್ತು ಮತ್ತು ಪ್ರಾಚೀನ ಕಾಲದಿಂದಲೂ ಕಂಡು ಬರುವ ವರ್ಗಗಳೆಂದರೆ ೧) ಬ್ರಾಹ್ಮಣರು ಎಂದು ಕರೆಯಲ್ಪಡುವ ಪುರೋಹಿತ ವರ್ಗ, ೨) ಕ್ಷತ್ರಿಯರು ಎಂದು ಕರೆಯಲ್ಪಡುವ ಸೈನಿಕ ವರ್ಗ, ೩) ವೈಶ್ಯ ಎನ್ನುವ ವರ್ತಕ ವರ್ಗ, ೪) ಶೂದ್ರ ಎನ್ನುವ ಗುಡಿಕಾರರ ಮತ್ತು ಪರಿಚಾರಕ ವರ್ಗ. ಮುಖ್ಯವಾಗಿ ಗಮನಿಸಬೇಕಾದ ಸಂಗತಿ ಏನೆಂದರೆ ಇದು ವಾಸ್ತವವಾಗಿ ಒಂದು ವರ್ಗ ವ್ಯವಸ್ಥೆ. ಅದಕ್ಕೆ ಬೇಕಾದ ಯೋಗ್ಯತೆಯನ್ನು ಗಳಿಸಿದ ನಂತರ ವ್ಯಕ್ತಿಗಳು ತಮ್ಮ ವರ್ಗವನ್ನು ಬದಲಾಯಿಸಿಕೊಳ್ಳಬಹುದು, ಆದ್ದರಿಂದ ಈ ವರ್ಗಗಳು ತಮಗೆ ಬೇಕಾದ ವ್ಯಕ್ತಿಗಳನ್ನು ಬದಲಾಯಿಸಲಿಲ್ಲ. 
 - ಭಾರತದ ಜಾತಿ ವ್ಯವಸ್ಥೆ, ಡಾ. ಬಿ.ಆರ್.ಅಂಬೇಡ್ಕರ್ ಪುಟ ೧೭-೧೮
 
       Varna and Caste are two very different concepts. Varna is based on the principle of each according to his worth, while Caste is based on the Priniciple of each according to his birth. The two are as distinct as chalk is from cheese. 
- Annihilation of caste, Dr. B.R. Ambedkar p.93
         ವರ್ಣ ಮತ್ತು ಜಾತಿ ಬೇರೆ ಬೇರೆ ಕಲ್ಪನೆಗಳು. ವರ್ಣವು ತಾತ್ತ್ವಿಕವಾಗಿ ಪ್ರತಿಯೊಬ್ಬನ ಯೋಗ್ಯತೆಯನ್ನು ಆಧರಿಸಿ ನಿರ್ಧರಿಸಲ್ಪಟ್ಟರೆ ಜಾತಿ ಎನ್ನುವುದು ತಾತ್ತ್ವಿಕವಾಗಿ ಒಬ್ಬನ ಹುಟ್ಟನ್ನಾಧರಿಸಿ ನಿರ್ಣಯಿಸಲ್ಪಡುತ್ತದೆ. ಅವರೆಡಕ್ಕೂ ಸುಣ್ಣಕ್ಕೂ, ಗಿಣ್ಣಕ್ಕೂ ಇರುವಷ್ಟು ವ್ಯತ್ಯಾಸವಿದೆ. 
 - (ಜಾತಿ ನಿರ್ಮೂಲನೆ, ಡಾ. ಬಿ.ಆರ್. ಅಂಬೇಡ್ಕರ್ ಪುಟ ೯೩)
 
       ವರ್ಣವ್ಯವಸ್ಥೆಯನ್ನು ಕುರಿತು ನಮ್ಮವರಿಗೆ ಇರುವ ಎರಡನೇ ಅತಿದೊಡ್ಡ ದುರಭಿಪ್ರಾಯವೆಂದರೆ ಅದರಲ್ಲಿ ಶೂದ್ರರಿಗೆ ಎಳ್ಳಷ್ಟೂ ಬೆಲೆಯಿರಲಿಲ್ಲ ಮತ್ತು ಆ ವ್ಯವಸ್ಥೆಯಲ್ಲಿ ಅವರನ್ನು ಕೀಳಾಗಿ ಕಾಣುವುದಲ್ಲದೆ ಪಕ್ಷಪಾತ ಧೋರಣೆಯೊಂದಿಗೆ ಅವರನ್ನು ದಾರುಣವಾದ ಅವಮಾನಗಳಿಗೂ ಗುರಿಯಾಗಿಸಲಾಗಿದೆ ಎನ್ನುವುದು! ನಿಜವಾಗಿ ನೋಡಿದರೆ ಶೂದ್ರರೆಂದರೆ ಈ ದೇಶದಲ್ಲಿ ಅನಾದಿಕಾಲದಿಂದಲೂ ಇರುವ ಮೂಲನಿವಾಸಿಗಳೆಂದೂ, ಎಲ್ಲಿಂದಲೋ ವಲಸೆ ಬಂದ ಆರ್ಯರು ಅವರನ್ನು ಪರಾಜಯಗೊಳಿಸಿ, "ದಸ್ಯಗಳು ಅಥವಾ ದಾಸರು" ಎಂದು ಅವರಿಗೆ ನಾಮಕರಣ ಮಾಡಿ, ತಮ್ಮ ವರ್ಣ ವ್ಯವಸ್ಥೆಯಲ್ಲಿ ಅವರಿಗೆ ಅವಮಾನಕರವಾದ ನಾಲ್ಕನೇ ದರ್ಜೆಯನ್ನು ಕೊಟ್ಟು ಅವರನ್ನು ಕಾಲಕೆಳಗೆ ಹೊಸಕಿ ಹಾಕಿದರೆಂದು ತಿಕ್ಕಲು ತಿಕ್ಕಲಾಗಿ ಪುಸ್ತಕಗಳನ್ನು ಬರೆದ ಮಹನೀಯರೂ ಇದ್ದಾರೆ. ಆರ್ಯರು ಬಿಳಿ ತೊಗಲಿನವರೆಂದೂ, ದ್ರಾವಿಡರು ಅಥವಾ ಶೂದ್ರರು ಕಪ್ಪು ವರ್ಣದವರೆಂದು ಮನುಷ್ಯರ ಬಣ್ಣಕ್ಕೂ ತಳುಕು ಹಾಕಿದ ಮೇಧಾವಿಗಳೂ ಇದ್ದಾರೆ. ಇವರ ದುಷ್ಪ್ರಚಾರಗಳಿಗೆ ತಿರುಗೇಟು ನೀಡುವಂತಹ ಉತ್ತರವನ್ನು ಸ್ವತಃ ಬಾಬಾ ಸಾಹೇಬ್ ಅಂಬೇಡ್ಕರ್ ಅವರೇ ಕೊಟ್ಟಿದ್ದಾರೆ.
       It is erroneous to believe that the Shudras were conquered by the Aryan invaders. In the first place the story that the Aryans came from outside India and invaded the natives has no evidence to support it. There is a large body of evidence that India is the home of the Aryans. In the second place there is no evidence anywhere of any warfare having taken place between Aryans and Dasyus but the Dasyus have nothing to do with the Shudras.
-(Dr. Babasaheb Ambedkar Writings and Speeches, Vol. 3, P. 420)
      ಆರ್ಯ ದಾಳಿಕೋರರು ಶೂದ್ರರನ್ನು ಪರಾಜಯಗೊಳಿಸಿದರೆಂದು ಭಾವಿಸುವುದು ಬಹುದೊಡ್ಡ ತಪ್ಪು. ವಾಸ್ತವವಾಗಿ ಆರ್ಯರು ಹೊರಗಿನಿಂದ ಬಂದು ಇಲ್ಲಿನ ಮೂಲನಿವಾಸಿಗಳ ಮೇಲೆ ದಾಳಿ ಮಾಡಿದರೆಂದು ಹೇಳುವುದಕ್ಕೆ ಯಾವುದೇ ಆಧಾರಗಳಿಲ್ಲ, ಆದರೆ ಭಾರತವೇ ಆರ್ಯರ ಮೂಲನಿವಾಸವೆಂದು ಹೇಳುವುದಕ್ಕೆ ಎಣೆಯಿಲ್ಲದಷ್ಟು ಆಧಾರಗಳಿವೆ. ಆರ್ಯರಿಗೆ ಮತ್ತು ದಸ್ಯಗಳಿಗೆ ಯುದ್ಧ ಜರುಗಿತೆಂದು ಹೇಳುವುದಕ್ಕೂ ಯಾವುದೇ ಸಾಕ್ಷಾಧಾರಗಳಿಲ್ಲ ಹಾಗೂ ದಸ್ಯಗಳಿಗೂ ಮತ್ತು ಶೂದ್ರರಿಗೂ ಯಾವುದೇ ವಿಧವಾದ ಸಂಬಂಧವೂ ಇಲ್ಲ. 
        - ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಬರವಣಿಗೆಗಳು ಮತ್ತು ಭಾಷಣಗಳು ಸಂಪುಟ ೩, ಪುಟ  ೪೨೦
 
        The shudras were Aryans i.e. they were believers in the Aryan way of life. The Shudra was, accepted as an Aryan and as late as Kautilya’s Artha Shastra was addressed as Arya. The Shudra was an integral, natural and valued member of the Aryan Society……. (ibid p. 421)
      ಶೂದ್ರರೂ ಆರ್ಯರೇ, ಅಂದರೆ ಅವರು ಆರ್ಯ ಜೀವನ ಪದ್ಧತಿಯಲ್ಲಿ ನಂಬುಗೆಯುಳ್ಳವರಾಗಿದ್ದರು. ಶೂದ್ರರು ಆರ್ಯರಾಗಿ ಅಂಗೀಕರಿಸಲ್ಪಟ್ಟಿದ್ದರು; ಇತ್ತೀಚಿನ ಕೌಟಿಲ್ಯನ ಅರ್ಥಶಾಸ್ತ್ರದಲ್ಲಿಯೂ ಸಹ ಅವರನ್ನು ಶೂದ್ರರು ಎಂದೇ ಸಂಬೋಧಿಸಲಾಗಿದೆ. ಆರ್ಯರ ಸಾಮಾಜಿಕ ವ್ಯವಸ್ಥೆಯಲ್ಲಿ ಶೂದ್ರರು ಅದರ ಅವಿಭಾಜ್ಯ, ಸಹಜ ಮತ್ತು ಗೌರವಾನ್ವಿತ ಸದಸ್ಯರಾಗಿದ್ದರು.......... - ಅದೇ ಉಲ್ಲೇಖ, ಪುಟ  ೪೨೧
 
       That the Shudras were inivited to be present at the coronation of the King along with Brahmins, Kshatriyas and Vysyas is proved by the description given in the Mahabharata of the coronation of Yudhishtira the eldest brother of the Pandavas. Shudra took part in the consecration of the King. According to ancient writer called Nilakantha speaking of the coronation ceremony expressly says: “that the four chief Ministers, Brahmin, Kshatriya, Vysya and Shudra consecrated the new king. Then the leaders of each Varna and by the Castes lower still consecrated him with the holy water.  (ibid p. 422)
      ರಾಜನ ಪಟ್ಟಾಭಿಷೇಕದ ಸಮಯದಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯರೊಂದಿಗೆ ಶೂದ್ರರೂ ಸಹ ಉಪಸ್ಥಿತರಿರುತ್ತಿದ್ದರು, ಮಹಾಭಾರತದಲ್ಲಿ ಪಾಂಡವರ ಹಿರಿಯಣ್ಣನಾದ ಯುಧಿಷ್ಠಿರನ ಪಟ್ಟಾಭೀಷೇಕದ ಕುರಿತು ಕೊಟ್ಟಿರುವ ವಿವರಣೆಯು ಈ ಸಂಗತಿಯನ್ನು ದೃಢಪಡಿಸುತ್ತದೆ. ನೀಲಕಂಠನೆಂಬ ಪುರಾತನ ಕವಿಯೊಬ್ಬನು ಅಭಿಷೇಕದ ಕುರಿತು ಹೀಗೆ ಘಂಟಾಷೋಷವಾಗಿ ಹೇಳಿದ್ದಾನೆ: ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಮಹಾಮಂತ್ರಿಗಳು ಹೊಸ ರಾಜನನ್ನು ಪವಿತ್ರ ಜಲದಿಂದ ಅಭಿಷೇಕಿಸುತ್ತಿದ್ದರು. ತದನಂತರ ಎಲ್ಲಾ ವರ್ಣಗಳ ಮುಖಂಡರು ಹಾಗು ಅದಕ್ಕಿಂತಲೂ ಹಿಂದುಳಿದ ಕುಲಗಳ ಮುಖಂಡರೂ ಸಹ ಪವಿತ್ರ ಜಲದಿಂದ ರಾಜನನ್ನು ಅಭಿಷೇಕಿಸುತ್ತಿದ್ದರು. - ಅದೇ ಉಲ್ಲೇಖ, ಪುಟ  ೪೨೨
ಮುಂದುವರೆಯುವುದು.................
(ಆಧಾರ: ತೆಲುಗಿನಲ್ಲಿ ಶ್ರೀಯುತ ಎಂ.ವಿ.ಆರ್ ಶಾಸ್ತ್ರಿ ಅವರು ರಚಿಸಿರುವ "ಮನುಧರ್ಮ - ನಮಗೆ ಬೇಡವಾದ ಮನು: ಮನುಧರ್ಮಂ, ಮನಕು ಗಿಟ್ಟನಿ ಮನುವು" ಪುಸ್ತಕದ ಒಂಬತ್ತನೆಯ ಅಧ್ಯಾಯ).
*****
    ಈ ಸರಣಿಯ‌ ಹಿಂದಿನ‌ ಲೇಖನ ಭಾಗ - ೯ ಮನುವಿನ ಧರ್ಮ: ಜಾತಿಯೇ ಬೇರೆ..... ವರ್ಣವೇ ಬೇರೆ! ಓದಲು ಈ ಕೊಂಡಿಯನ್ನು ನೋಡಿ: https://sampada.net/blog/%E0%B2%AD%E0%B2%BE%E0%B2%97-%E0%B3%AF-%E0%B2%AE...
 
ಚಿತ್ರಗಳ ಕೃಪೆ: ಗೂಗಲ್

Rating
No votes yet

Comments