ಮಂಗಲ್ ಪಾಂಡೆ...ನಾನು ನೋಡಿದ ಚಿತ್ರ

ಮಂಗಲ್ ಪಾಂಡೆ...ನಾನು ನೋಡಿದ ಚಿತ್ರ

ಮುಂಬಯಿಗೆ ಬಂದು ೨೦ ದಿನಗಳಾದವು. ಬಹಳ ಬೇಸರವಾಗುತ್ತಿತ್ತು, ಅಲ್ಲದೆ ಶನಿವಾರದ ರಜೆಯನ್ನು ಕಳೆಯುವುದು ಹೇಗೆಂದು ಯೋಚಿಸುತ್ತಿದ್ದೆ. ಹಿಂದಿನ ದಿನವಷ್ಟೇ ಬಿಡುಗಡೆಯಗಿದ್ದ, 'ಮಂಗಲ್ ಪಾಂಡೆ' ನೋಡುವ ಎಂದು ಪತ್ರಿಕೆಯಲ್ಲಿದ್ದ, ಮಲ್ಟಿಪ್ಲೆಕ್ಸೊಂದಕ್ಕೆ ಫೋನಾಯಿಸಿದೆ. ನನ್ನ ಅದೃಷ್ಟಕ್ಕೆ ಸಂಜೆ ೪.೩೦ ರ ಪ್ರದರ್ಶನಕ್ಕೆ ಟಿಕೆಟ್ ದೊರೆಯಿತು. ಇನ್ನು ಚಿತ್ರದ ಬಗ್ಗೆ ಹೇಳಬೇಕು. ಬಹು ದಿನಗಳಿಂದ ನಿರೀಕ್ಷಿಸುತ್ತಿದ್ದ ಈ ಚಿತ್ರ ಎಲ್ಲರ ನಿರೀಕ್ಷೆಗಳನ್ನು ಹುಸಿಗೊಳಿಸಿದೆ. ನನ್ನ ಮಟ್ಟಿಗಂತೂ ಇದು ನಿಜ. 'ಭಾವನಿ ಭಾವೈ'ನಂತ ಉತ್ತಮ ಚಿತ್ರಗಳನ್ನು ನಿರ್ದೇಶಿಸಿದ್ದ ಕೇತನ್ ಮೆಹ್ತಾ ಹೀಗೇಕೆ ಮಾಡಿದರು ಎನಿಸಿತು. ಮೊದಲಿಗೇ ಹೇಳಿಬಿಡುತ್ತೇನೆ, ಇದು 'ಲಗಾನ್'ನ ಮುಂದುವರೆದ ಭಾಗದಂತಿದೆ! ಹಾಡುಗಳು ಅನವಶ್ಯಕವಾಗಿ ತುರುಕಲ್ಪಟ್ಟಿವೆ. ನಾಯಕಿ ಪಾತ್ರಕ್ಕೆ ಹೆಚ್ಚಿನ ಅವಕಾಶವಿಲ್ಲ. ಇದು ನಾಯಕನ ಪಾತ್ರದ ಬಗ್ಗೆಯೂ ನಿಜ. 'ಚಿತ್ರಕ್ಕೆ ಸಾಕಷ್ಟು ಸಂಶೋಧನೆಯನ್ನೂ ಮಾಡಿದ್ದೇವೆ' ಎಂದು ಸಂದರ್ಶನವೊಂದರಲ್ಲಿನ ಅಮೀರನ ಮಾತು ನೆನಪಾಗಿ, ಸಂಶೋಧನೆ ನಿರೀಕ್ಷಿತ ವಲಯಗಳಲ್ಲಿ ನಡೆದಿಲ್ಲ ಎನಿಸಿತು. ಉದಾಹರಣೆಗೆ, ಕಂಪನಿ ಸೈನ್ಯದಲ್ಲಿ ಭಾರತೀಯ ಸಿಪಾಯಿಗಳ ಸ್ಥಿತಿ, ಮಂಗಳನ ಹಿನ್ನೆಲೆ ಇತ್ಯಾದಿ. ಮಂಗಳನ ಹಿನ್ನೆಲೆಯು ನಿರ್ದೇಶಕರ ಫೋಕಸ್ ಆಗಿಲ್ಲದಿರಬಹುದು. ಆದರ ಚಿತ್ರದಲ್ಲಿಯೇ ತೋರಿಸಿರುವಂತೆ, ದಂಗೆಯ ಅನೇಕ ನಿರ್ಧಾರಗಳನ್ನು ತೆಗೆದುಕೊಂಡದ್ದು, ಆತನ ಸಹವರ್ತಿ. ನಮಗೆ ಇತಿಹಾಸ ಪುಸ್ತಕಗಳಿಂದ ತಿಳಿದು ಬರುವುದಕ್ಕಿಂತ ಹೆಚ್ಚಿನದೇನು ಇಲ್ಲಿ ಕಾಣುವುದಿಲ್ಲ. ವೇಷ-ಭೂಷಣಗಳ ಬಗ್ಗೆ ಬಹಳ ಹೆಚ್ಚಿನ ಗಮನವನ್ನೇ ಹರಿಸಲಾಗಿದೆ!!! ನನಗೆ ಆಶ್ಚರ್ಯ ಹುಟ್ಟಿಸಿದ್ದು, ಈ ದಿನಗಳಲ್ಲೂ ಮೈ ತುಂಬ ಉಡಲಿಲ್ಲದೆ, ಕೊಳೆತು ನಾರುವ ಚಿಂದಿಗೆ ಬಹಳ ಹತ್ತಿರವಾದ ಬಟ್ಟೆಗಳನ್ನು ತೊಡುವ ಜನರೇ ಹೆಚ್ಚಿರುವ ಈ ದೇಶದಲ್ಲಿ, ೧೫೦ ವರ್ಷಗಳ ಹಿಂದೆ, ಪಾಮರನಿಂದ ಬಲ್ಲಿದನ ವರೆಗೆ ಆ ದಿನಗಳಲ್ಲಿ ಅಷ್ಟು ಶುಭ್ರವಾಗಿರುತ್ತಿದ್ದವೇ ವಸ್ತ್ರಗಳು? ಊರಿನ ಮುಖ್ಯ ರಸ್ತೆಯ ಸೆಟ್ ಮಾತ್ರ ಚೆನ್ನಾಗಿದೆ. ಚಿತ್ರವನ್ನು ನೋಡಿ ಹೊರಬಂದ ನಂತರ ನನಗನಿಸಿದ್ದು, ಅಮೀರ್‍ ಹಿಂದೆ ಕೈತಪ್ಪಿದ ಆಸ್ಕರನ್ನು ಈಗ ದಕ್ಕಿಸಿಕೊಳ್ಳಲು ಮತ್ತೊಂದು ಚಿತ್ರ ಮಾಡಿದ್ದಾರೆಂದು!
Rating
No votes yet

Comments