ಸಕಾರಣವಾಗಿ ಟೀಕಿಸಿದ/ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.

ಸಕಾರಣವಾಗಿ ಟೀಕಿಸಿದ/ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.

ಇಲ್ಲಿ ಸಂಪದದಲ್ಲಿ "ಸ್ಲಮ್‌ಡಾಗ್ ಭಾರತವನ್ನು ಕೆಟ್ಟದಾಗಿ ಬಿಂಬಿಸಿದೆ, ಆ ಸಿನೆಮಾ ಸರಿ ಇಲ್ಲ ಅನ್ನುವವರು.." ಲೇಖನ ಪೋಸ್ಟ್ ಮಾಡುವ ತನಕ (2007 ರ ಜುಲೈನಿಂದ) 86 ಲೇಖನಗಳನ್ನು ಪೋಸ್ಟ್ ಮಾಡಿದ್ದೆ. ಒಂದಷ್ಟಕ್ಕೆ ಏನೂ ಕಾಮೆಂಟ್ಸ್ ಇರುತ್ತಿರಲಿಲ್ಲ. ಆದರೆ 50+ ಪೋಸ್ಟ‍ಗಳಿಗೆ ಓದುಗರು ಕಾಮೆಂಟ್ಸ್/ವಿಮರ್ಶೆ/ಟೀಕೆ/ಪ್ರತಿಕ್ರಿಯೆ/ಅಭಿಪ್ರಾಯ/ಸಹಮತ ಹಾಕಿದ್ದರು. ಅವುಗಳ ಸಂಖ್ಯೆ ಸುಮಾರು 200. ಅವೆಲ್ಲವನ್ನೂ ಓದುತ್ತಿದ್ದೆ. ಆದರೂ, ಅವುಗಳಲ್ಲಿ ಒಂದೆರಡು ಸಂದರ್ಭ ಬಿಟ್ಟರೆ ಯಾವುದಕ್ಕೂ ನಾನು ಪ್ರತಿಕ್ರಿಯಿಸಲು ಹೋಗಿರಲಿಲ್ಲ. ಪ್ರತಿಕ್ರಿಯಿಸಿದ ಆ ಒಂದೆರಡು ಸಂದರ್ಭದಲ್ಲೂ ಅದು ಲೇಖನಕ್ಕೆ ಸಂಬಂಧಿಸಿದಂತೆ ಉತ್ತರವಾಗಿದ್ದ ನೆನಪಿಲ್ಲ.

ಲೇಖನಗಳಿಗೆ ಬಂದ ಕಾಮೆಂಟುಗಳಿಗೆ ಉತ್ತರ ನೀಡದೆ ಇರುವುದಕ್ಕೆ ನನಗಿದ್ದ ಮುಖ್ಯ ಕಾರಣ, ನಾನು ನನ್ನ ಅಭಿಪ್ರಾಯ ಬರೆದಿದ್ದೇನೆ. ಅವರು ಅವರದ್ದು ಬರೆದಿದ್ದಾರೆ. ನಾನು ಕೊಡುವ ಉತ್ತರ ಅಥವ ಸಮಜಾಯಿಷಿ ಅಥವ ಮಾಹಿತಿಯಿಂದಾಗಿಯೆ ಅವರ ಅಥವ ನನ್ನ ನಿಲುವು ಆ ಕೂಡಲೆ ಬದಲಾಗುವುದಿಲ್ಲ. ಒಬ್ಬರು ತಮ್ಮ ನಿಲುವನ್ನು ಬದಲಾಯಿಸಿಕೊಳ್ಳಲು ಅಧ್ಯಯನ/ಅನುಭವ/ಚಿಂತನೆ ಮುಖ್ಯವೆ ಹೊರತು ವಾದ ಅಥವ ಚರ್ಚೆ ಅಲ್ಲ. ನನ್ನ ಲೇಖನ ಮತ್ತು ಅದಕ್ಕೆ ಬಂದಿರುವ ಪ್ರತಿಕ್ರಿಯೆ ಎರಡನ್ನೂ ಓದುವ ಮೂರನೆಯವರು ಅವರದೆ ಆದ conclusion ಗೆ ಬರಲಿ. ಹೀಗೆ ಇತ್ತು ನನ್ನ ಅಭಿಪ್ರಾಯ.

ಇನ್ನು, ಇಂತಹ ವೇದಿಕೆಗಳಲ್ಲಿ ಚರ್ಚೆ ಪಾಂಡಿತ್ಯ ಪ್ರದರ್ಶನಕ್ಕೆ, ಪದ/ವಾಕ್ಯ ಸೀಳುವಿಕೆಗೆ, ವಿಷಯಾಂತರ ಮಾಡುವುದಕ್ಕೆ, ಸಿದ್ಧಾಂತ ಹೇರುವುದಕ್ಕೆ, ವೈಯಕ್ತಿಕ ದೂಷಣೆಗೆ ಇಳಿಯುವುದಕ್ಕೆ, ಹಂಗಿಸುವುದಕ್ಕೆ, ಇತ್ಯಾದಿ... ಹೋಗುವ ರೀತಿಯನ್ನು ನೋಡಿದ್ದೆ. ಹಾಗೆಯೆ ಇಂತಹ ಚರ್ಚೆಗೆ ಬೇಕಾಗುವ ಅಪಾರ ಸಮಯದ ಅರಿವೂ ನನಗಿತ್ತು.

[ಈಗ ಈ ಮೇಲಿನ ವಿಷಯಕ್ಕೆ ನಡೆದ ಚರ್ಚೆಯಲ್ಲಿ ನಾನು ಸುಮಾರು ೨೦ ಗಂಟೆಗಳಿಗೂ ಹೆಚ್ಚು ಕಾಲ ವ್ಯಯಿಸಿದ್ದೇನೆ. ಅದು ಯೋಗ್ಯವಾಗಿ ವಿನಿಯೋಗಿಸಲ್ಪಟ್ಟಿತ್ತೆ? ಏನಾದರೂ ಒಳ್ಳೆಯದು ಬರಲು ಸಾಧ್ಯವಾಯಿತೆ? ಹಾಗೆಯೆ, ಮೇಲಿನ ಪ್ಯಾರಾದಲ್ಲಿ ಬಂದಿರುವ ಯಾವಯಾವುದನ್ನು ಅಲ್ಲಿ ನಾನೂ ಮಾಡಿದ್ದೇನೆ? ಅದರ ಅರಿವು ನನಗಿದೆ. ವಿವರ ಅನಗತ್ಯ.]

ಆದರೆ, ನನ್ನ ಲೇಖನಗಳಿಗೆ ಬರುವ ಕೆಲವು ಪ್ರಶ್ನೆಗಳಿಗೆ ಒಂದು ಸಲವೂ ಉತ್ತರ ನೀಡದಿರುವುದು ಅಷ್ಟೊಂದು ಸೌಜನ್ಯವಲ್ಲ ಎಂದು ಗೊತ್ತಿತ್ತು. ಹಾಗೆಂದು ಉತ್ತರಿಸಲೇಬೇಕಾದ ಒಲವು ಮೇಲಿನ ನನ್ನ ನಂಬಿಕೆಗಳಿಂದಾಗಿ ಇಲ್ಲಿಯತನಕ ಬರಲೆ ಇಲ್ಲ. ಆದರೆ, ಈ ಸಾರಿ ಬಹುಶಃ ಸಮಯ ಇದ್ದದ್ದರಿಂದಲೊ, ಈ ಸಲ ಅಲ್ಲದಿದ್ದರೆ ಮುಂದೆ ಆಗುವ ಸಾಧ್ಯತೆ ಇಲ್ಲ ಅಂತಲೊ, ಅಥವ "ಕೆಲವರ ಅಭಿಪ್ರಾಯಕ್ಕೆ ವಿರೋಧವೆ ಇಲ್ಲ ಎಂತಾಗುತ್ತದೆ" ಅಂತಲೊ, ಆರಂಭದಲ್ಲಿ ಬಂದ ಎರಡು/ಮೂರು ಪ್ರಶ್ನೆಗಳಿಗೆ ಉತ್ತರಿಸಿದೆ. ಇದು ಒಂದೆರಡು ದಿನವಾದರೂ ಮುಂದುವರೆಯುತ್ತದೆ ಎಂದು ಆಗಲೆ ಮಾನಸಿಕವಾಗಿ ಸಿದ್ಧನಾಗಿದ್ದೆ. ಹಾಗಾಗಿ ಅದನ್ನು ಮುಂದುವರೆಸುತ್ತ ಹೋದೆ.

ಕೊನೆಗೂ, ಇಲ್ಲಿಯ ಚರ್ಚೆಗಳಿಂದ ಏನು ಸಾಧ್ಯ ಮತ್ತು ಅವು ಎಂತೆಂತಹ ತಿರುವು ತೆಗೆದುಕೊಳ್ಳುತ್ತದೆ ಎಂದು ನನ್ನ "ಪೂರ್ವಾಗ್ರಹ/ತಿಳಿವು" ಇತ್ತೊ ಅದು ಹಾಗೆಯೆ ಆಗಿದೆ. ನನಗೆ ಇಂತಹ ಚರ್ಚೆಗಳಲ್ಲಿ ಪಾಲ್ಗೊಳ್ಳಲು ಬೇಕಾದ energy ಇರಬೇಕಾದಷ್ಟು ಇಲ್ಲದಿರುವುದರಿಂದ, ಹಾಗೂ ಒಂದು ಸಲವೂ ಉತ್ತರಿಸುವ ಸೌಜನ್ಯ ತೋರಿಲ್ಲ ಎನ್ನುವುದು ಹೋಗಿರುವುದರಿಂದ ಮುಂದಕ್ಕೆಯೂ ನಾನು ಮಾಡುವ ಕೆಲಸ ಲೇಖನ ಬರೆದು ಪೋಸ್ಟ್ ಮಾಡುವುದು ಮಾತ್ರ. ಸಂದರ್ಭ ಮತ್ತು ವಿಷಯ ಆ ಚರ್ಚೆಯಲ್ಲಿ ಪಾಲ್ಗೊಳ್ಳಲೇಬೇಕೆಂಬ ಒತ್ತಡ ಹಾಕಿದಲ್ಲಿ ನೋಡೋಣ. ಆದರೆ ಇನ್ನೊಂದು ತಿಂಗಳ ಕಾಲ ನನ್ನ ಇಂಟರ್ನೆಟ್ ಬಳಕೆ ಕನಿಷ್ಟವಾಗುವುದರಿಂದ, ಅಥವ ಅಸಾಧ್ಯವಾಗುವುದರಿಂದ ಬಹುಶಃ ಇನ್ನು ಮುಂದಕ್ಕೆ ಇಲ್ಲಿನ ಚರ್ಚೆಗಳಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಶೂನ್ಯವೆ. ಮೊದಲಿನಂತೆ.

ಇನ್ನು, ಈಗಾಗಲೆ ಅಲ್ಲಿನ ಕಾಮೆಂಟುಗಳಿಗೆ ಉತ್ತರಿಸಲೇಬೇಕಾದ್ದಕ್ಕೆ ಉತ್ತರಿಸಿದ್ದೇನೆ. ಇನ್ನೂ ಒಂದಷ್ಟು ವಿವರಣೆ/ಅಭಿಪ್ರಾಯ ಬರಬಹುದು. ಆ ಲೇಖನದ ಬಗೆಗಿನ ಚರ್ಚೆಗೆ ನಾನು ಇನ್ನೂ ಸನ್ಯಾಸ ತೆಗೆದುಕೊಂಡಿಲ್ಲ. ಆದರೆ, ಈಗಿನಿಂದ ಇನ್ನು ಮೂರು ದಿನಗಳ ಕಾಲ ಅಷ್ಟೊಂದು ಬಿಡುವಿನ ಸಮಯ ಇಲ್ಲದಿರುವುದರಿಂದ ಸಮಯವಾದಾಗ ಉತ್ತರಿಸುತ್ತೇನೆ. ಅದೂ ನನ್ನ ಲೇಖನದ ಚೌಕಟ್ಟಿನಲ್ಲಿ ಬರುವ ಪ್ರಶ್ನೆಗಳಿಗೆ ಮಾತ್ರ. ಉತ್ತರಿಸದೆ ಬಿಟ್ಟವನ್ನು ಅವು ನನಗೆ ಮುಖ್ಯ ಎನಿಸಿಲ್ಲ ಅಥವ ಅದು ಈಗಿನ ಚರ್ಚೆಗೆ ಸಂಬಂಧಿಸಿದ್ದಲ್ಲ ಎಂದು ಪ್ರತಿಕ್ರಿಯೆ ಬರೆದವರು ಅಂದುಕೊಳ್ಳಬಹುದು. ಕೆಲವರು ಬೇರೆಯದೆ ಅಭಿಪ್ರಾಯಕ್ಕೆ ಬಂದರೆ ಅದೂ ಸರಿ ಇರಬಹುದು, ಇಲ್ಲದಿರಬಹುದು.

ಸಕಾರಣವಾಗಿ ಟೀಕಿಸಿದ/ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.

ನಮಸ್ಕಾರ,
ರವಿ..

Rating
No votes yet

Comments