ನಿಮ್ಮ ಅನುಮಾನಗಳಿಗೆ ಆಚಾರ್ಯ ಮಧ್ವರ ಉತ್ತರ.

ನಿಮ್ಮ ಅನುಮಾನಗಳಿಗೆ ಆಚಾರ್ಯ ಮಧ್ವರ ಉತ್ತರ.

ಶ್ರೀಯುತ ಸೋಮಶೇಖರರಿಗೆ,

ಹೌದು, ನೀವು ಹೇಳಿದ ಹಾಗೆ ವಾಲ್ಮೀಕಿ ರಾಮಾಯಣದಲ್ಲಿ ವಾಲಿ ರಾಮರ ಸಂಭಾಷಣೆ ಉಲ್ಲೇಖವಾಗಿಲ್ಲ. ವಾಲ್ಮೀಕಿ ರಾಮಾಯಣ ರಚನೆ ಯಾಗುವುದಕ್ಕು ಮುನ್ನ, ಭಗವಂತನ ಮುಖ ಕಮಲದಿಂದ ಹೊರಬಂದ "ಮೂಲ ರಾಮಾಯಣ"ದಲ್ಲಿ ಇದರ ಉಲ್ಲೇಖ ಇದೆ. ದುರಾದೃಷ್ಟವೆಂದರೆ ಅದರ ಪ್ರತಿ ಈಗ ಯಾರ ಬಳಿಯೂ ಇಲ್ಲ. ಮೊಟ್ಟ ಮೊದಲ ಬಾರಿಗೆ ಶ್ರೀ ಮಧ್ವಾಚಾರ್ಯರು ಅದರ ಉಲ್ಲೇಖವನ್ನು ತಮ್ಮ  "ಮಹಾಭಾರತ ತಾತ್ಪರ್ಯ ನಿರ್ಣಯ" ಎನ್ನುವ ಗ್ರಂಥದಲ್ಲಿ ಮಾಡಿದ್ದಾರೆ. ಆ ಗ್ರಂಥದ ಹುಟ್ಟೇ ಆ ಕಾರಣಕ್ಕೆ ಆಗಿದೆ. ರಾಮಾಯಣ ಭಾರತಗಳಲ್ಲಿ ಅಲ್ಲಲ್ಲಿ ಬರುವ ಅನುಮಾನಗಳಿಗೆ ಉತ್ತರರೂಪವಾಗಿದೆ.

ಪ್ರಸ್ತುತ, ವಾಲಿ ವಧೆಯ ಪ್ರಕರಣವನ್ನು ನೋಡಿದರೆ, ವಾಲಿ ರಾವಣನಿಗಿಂತ ಬಲಿಷ್ಠ. ಆದ್ದರಿಂದ ರಾವಣ ವಾಲಿಯರು ಸ್ನೇಹಿತರಾಗಿದ್ದರು, ಆದರೆ ರಾವಣನಷ್ಟು ನೀಚನಲ್ಲ. ವಾಲಿಯನ್ನು ಕೊಲ್ಲದೆ ಹಾಗೆ ಬಿಟ್ಟಿದ್ದಿದ್ದರೆ, ಸೀತೆಯ ಬಿಡುಗಡೆ ರಾವಣನ ವಧೆಯಾಗದೆ ಆಗಬೇಕಾಗಿತ್ತು. ಆದರೆ ರಾವಣನ ವಧೆಗಾಗಿಯೇ ರಾಮಾವತಾರ ಆಗಿದ್ದು ಎಲ್ಲರಿಗೂ ತಿಳಿದಿದೆ. ಹಾಗಾಗಿ ರಾಮ ವಾಲಿಯನ್ನು ಕೊಲ್ಲಲೇ ಬೇಕಿತ್ತು. ಮೂಲ ರಾಮಾಯಣದಲ್ಲಿ ಉಲ್ಲೇಖವಾಗಿರುವ ವಾಲಿ ರಾಮರ ಸಂಭಾಷಣೆಯನ್ನ ಆಚಾರ್ಯರು ಹೇಳಿ, "ಇಚ್ಛೆ ಇದ್ದರೆ ನಿನ್ನನು ಬದುಕಿಸುತ್ತೇನೆ" ಎಂದಾಗ, ವಾಲಿಯು, "ಯಾವ ನಿನ್ನನ್ನು ಕಾಣಲೆಂದು ಸಾಧಕರು ಹಗಲಿರುಳು ತಪ ಆಚರಣಾದಿಗಳನ್ನು ಮಾಡುವರೋ, ಅಂಥಾ ನೀನು ಕಣ್ಣ ಮುಂದೆ ಇದ್ದಾಗ, ಸಾಯುವುದಕ್ಕೆ ಏಕೆ ನಿರಾಕರಿಸಲಿ" ಎಂದು ಹೇಳಿ, ತಪ್ಪಿನ ಅರಿವಾಗಿ ಭಗವಂತನನ್ನು ನೋಡುತ್ತಾ ಆನಂದದಿಂದ ಪ್ರಾಣ ಬಿಡುತ್ತಾನೆ. 


ಹಾಗಾಗಿ, ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕಾದ್ದು ಧರ್ಮ, ಅದೇ ವಾಲಿಗೂ ಆಗಿದೆ. ವಾಲಿಯೇ, "ನನ್ನನ್ನು ಹೀಗೆ ಮರೆಯಾಗಿ ಕೊಂದ್ದದ್ದು ಏಕೆ?" ಎಂದು ಪ್ರಶ್ನೆ ಮಾಡುತ್ತಾನೆ, ಅದಕ್ಕೆ ರಾಮನು, "ನೀನು ಎಲ್ಲ ಕಪಿಗಳಂತೆ ಧರ್ಮದ ಜ್ಞಾನವಿಲ್ಲದ, ಬರಿಯ ಕಪಿಯಾಗಿದ್ದರೆ ನಾನು ನಿನ್ನನ್ನು ಕೊಲ್ಲುತ್ತಿರಲಿಲ್ಲ. ಧರ್ಮದ ಅರಿವಿರುವ ಕಪಿ ನೀನು ಹಾಗಾಗಿ ಶಿಕ್ಷಿಸಬೇಕಾಯಿತು. ಹಾಗೆ, ತಪ್ಪು ಮಾಡಿದವರನ್ನು, ಅಧಾರ್ಮಿಕರನ್ನು ಯುದ್ದದಲ್ಲಿ, ಯುದ್ಧ ಧರ್ಮಕ್ಕನುಸಾರವಾಗಿಯೇ ಕೊಲ್ಲಬೇಕು ಎಂದು ನಿಯಮವೇನೂ ಇಲ್ಲ" ಎಂದು ಸಮಾಧಾನ ಮಾಡುತ್ತಾನೆ.

ಮತ್ತೊದು ಪ್ರಕರಣ ವೆಂದರೆ, ಸೀತೆಯ ಪರಿತ್ಯಾಗ. ಈ ಪ್ರಕರಣಕ್ಕೆ ಸಂಭಂದಿಸಿದಂತೆ, ಆಚಾರ್ಯರು, ಅಲ್ಲಿ ರಾಮನು ಒಬ್ಬ ಅಗಸನ ಮಾತನ್ನು ಕೇಳಿ ಸೀತೆಯನ್ನು ಆಶ್ರಮಕ್ಕೆ ಕಳುಹಿಸಿದ್ದಲ್ಲ, ಇಡಿಯ ಅಯೋಧ್ಯೆಯ ಜನತೆಗೆ ಆ ಅನುಮಾನ ಕಾಡಿತ್ತು ಎಂದು ಹೇಳುತ್ತಾರೆ. ಆದರೆ, ಇಲ್ಲಿ ಮತ್ತೊಂದು ಪ್ರಶ್ನೆ ಬರುತ್ತದೆ, ರಾಮನನ್ನು ನಂಬದ ಜನರಾ ಅಯೋಧ್ಯೆಯ ಜನ? ಇದೆ ಜನರಲ್ಲವೆ ರಾಮ ಸೀತೆಯರು ಕಾಡಿಗೆ ಹೊರಟಾಗ ಅತ್ತು ಕರೆದು ಗೋಳಿಟ್ಟಿದ್ದು ? ಅವರಿಗೇಕೆ ಇಂಥ ದುರ್ಬುದ್ದಿ ಬಂತು? ಇದಕ್ಕೆ ಆಚಾರ್ಯರು, ಆ ಕಾಲದಲ್ಲೂ ಅಂಥಾ ದುರಾತ್ಮರು ಇದ್ದರು. ಅವರು ಜನರಲ್ಲಿ ಆ ಅನುಮಾನದ ಬೀಜವನ್ನು ಬಿತ್ತಿದ್ದರಿಂದ, ಎಲ್ಲಗಿರೂ ಅನುಮಾನ ಮೊಳಕೆ ಒಡೆಯಿತು, ರಾಮನ ವರೆಗೂ ಈ ವಿಚಾರ ಮುಟ್ಟಿತು. ರಾಮ ಖಿನ್ನ ಮನಸ್ಕನಾಗಿ, ಸೀತೆಯನ್ನು ಪರಿತ್ಯಾಗ ಮಾಡುವ ನಿರ್ಧಾರವನ್ನು ಮಾಡುತ್ತಾನೆ.

ನಿರ್ಣಯದಲ್ಲಿ, ಇನ್ನೊಂದು ಸೂಕ್ಷ್ಮವನ್ನು ಆಚಾರ್ಯರು ಹೇಳುತ್ತಾರೆ. ಭಗವಂತನಾದ ರಾಮನಿಗೂ, ಲಕ್ಷ್ಮಿಯ ಅವತಾರವಾದ ಸೀತೆಗೂ, ಎಂದೂ ವಿಯೋಗವಿಲ್ಲ. ರಾವಣನು ಅಪಹರ‍ಣ ಮಾಡಿದ್ದು, ಸೀತೆಯ ಆಕೃತಿಯನ್ನ. ಸೀತೆಯನ್ನಲ್ಲ. ಸೀತೆ ಭೂಮಿಯ ಮಡಿಲಿಗೆ ಸೇರಿದಾಗಲು, ರಾಮನೂಟ್ಟಿಗೆ ಅವಳು ಅದೃಶ್ಯವಾಗಿ ವಿಹರಿಸುತ್ತಿದ್ದಳು ಎಂದು.

ಪ್ರಾಯಶ: ನಿಮ್ಮ ಅನುಮಾನ ಈಗ ಬಗೆಹರಿದಿರಬಹುದು. ಇಲ್ಲದಿದ್ದರೆ, ದಯಮಾಡಿ ತಿಳಿಸಿ.
ಧನ್ಯವಾದಗಳು.
_ವಾದಿರಾಜ



Reference : ಶ್ರೀ ಮಹಾಭಾರತ ತಾತ್ಪರ್ಯ ನಿರ್ಣಯ , ಆಚಾರ್ಯ ಮಧ್ವರು
                 ಶ್ರೀ ಸಂಗ್ರಹ ರಾಮಾಯಣ, ಶ್ರೀ ನಾರಾಯಣ ಪಂಡಿತಾಚಾರ್ಯರು.

Rating
No votes yet

Comments