ಭಾಗ - ೩: ಕೊನೆಯುಸಿರೆಳೆಯುತ್ತಿರುವ ಕಮ್ಯೂನಿಸಂ!
ಕಮ್ಯೂನಿಷ್ಟ್ ದೇಶಗಳಲ್ಲಿ ನಡೆದದ್ದೇ ಬೇರೆ. ಬಂಡವಾಳಶಾಹಿ ವ್ಯವಸ್ಥೆಗಳಲ್ಲಿದ್ದುದ್ದಕ್ಕಿಂತ ಕಮ್ಯೂನಿಷ್ಟ್ ದೇಶಗಳಲ್ಲಿ ಪ್ರಜೆಗಳ ಸ್ಥಿತಿ ದಯನೀಯವಾಗಿತ್ತು. ಒಂದು ಕಡೆ ಬಂಡವಾಳಶಾಹಿ ವ್ಯವಸ್ಥೆಗಳು ಪ್ರಜಾಪ್ರಭುತ್ವ ವ್ಯವಸ್ಥೆಗಳಾಗಿ ರೂಪಾಂತರ ಹೊಂದಿದವು, ರೂಪಾಂತರ ಹೊಂದುತ್ತಿವೆ. ಜನರಿಗೆ ಸ್ವಾತಂತ್ರ್ಯ, ಸಮಾನತೆಗಳು ಪ್ರಜಾಪ್ರಭುತ್ವದಡಿಯಲ್ಲಿ ಹೆಚ್ಚಾಗುತ್ತಿದ್ದರೆ ಮತ್ತೊಂದು ಕಡೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ, ವ್ಯಕ್ತಿಗತ ಸ್ವಾತಂತ್ರ್ಯಕ್ಕೆ ಅವಕಾಶವಿಲ್ಲದ ಘೋರವಾದ ನಿರಂಕುಶ ಆಡಳಿತವು ಕಮ್ಯೂನಿಷ್ಟ್ ದೇಶಗಳಲ್ಲಿ ಕಂಡುಬರುತ್ತಿದೆ. ಇನ್ನು ಸಮಾನತ್ವ ಎನ್ನುವುದು ಇದೆಯೋ ಇಲ್ಲವೋ ಎಂದು ಹೇಳುವ ವಾಕ್ ಸ್ವಾತಂತ್ರ್ಯವೂ ಸಹ ಜನರಿಂದ ದೂರವೇ ಉಳಿದಿದೆ. ಕಮ್ಯೂನಿಷ್ಟು ದೇಶಗಳು ಉಕ್ಕಿನ ಪಂಜರಗಳಾಗಿವೆ.
ಕಮ್ಯೂನಿಷ್ಟ್ ದೇಶಗಳಲ್ಲಿ ಪ್ರಜೆಗಳ ಹಸಿವೆ ನೀಗಲಿಲ್ಲ, ನಿರುದ್ಯೋಗ ಸಮಸ್ಯೆ ಕೊನೆಯಾಗಲಿಲ್ಲ. ಪ್ರತಿಯೊಂದಕ್ಕೂ ಕೊರತೆಯಿದೆ. ಏನು ಬೇಕೆಂದರೂ ಸಹ ಗಂಟೆಗಟ್ಟಲೆ ಸರತಿಯ ಸಾಲಿನಲ್ಲಿ ನಿಲ್ಲಬೇಕು, ನಿಂತು ಕೊಂಡರೂ ಸಹ ಕೊನೆಯಲ್ಲಿರುವವರಿಗೆ ಸಾಮಾನುಗಳು ದೊರೆಯುತ್ತವೆ ಎನ್ನುವ ನಂಬಿಕೆಯೂ ಇಲ್ಲ. ಸಮಾಜವಿರೋಧಿ ಗುಂಪುಗಳು, ನೀತಿರಹಿತ, ಭ್ರಷ್ಟ ಅಧಿಕಾರಿಗಳು ಹಾಗು ಉದ್ಯೋಗಿಗಳು ಮಾತ್ರ ಕಮ್ಯೂನಿಷ್ಟರ ಸ್ವರ್ಗದಲ್ಲಿ ಸುಖವಾಗಿದ್ದಾರೆ! ಉದ್ದಿಮೆಗಳಲ್ಲಿ ಹಾಗು ವ್ಯವಸಾಯಗಳಲ್ಲಿ ಉತ್ಪನ್ನವು ಕುಂಠಿತಗೊಂಡಿದೆ, ಆದರೆ ಇವನ್ನೆಲ್ಲಾ ಇತರ ದೇಶಗಳ ಮುಂದೆ ಹೇಳಿಕೊಳ್ಳುವಂತಿಲ್ಲ! ಆ ದೇಶಗಳಲ್ಲಿ ಶಾಶ್ವತವಾದ ತುರ್ತುಪರಿಸ್ಥಿತಿ ಅಮಲಿನಲ್ಲಿದೆ. ಈ ತುರ್ತುಪರಿಸ್ಥಿತಿ ಸಧ್ಯಕ್ಕೆ ತೊಲಗಿ ಹೋಗಿದೆ. ರಕ್ಕಸರಂತೆ ನಿರಂಕುಶಾಡಳಿತ ಬಿಟ್ಟರೆ ಕಮ್ಯೂನಿಸಂ ಸಾಧಿಸಿದ್ದೇನೂ ಇಲ್ಲ ಎನ್ನುವುದು ಸ್ಪಷ್ಟವಾಗಿದೆ. ಏಳು ದಶಕಗಳ ವ್ಯಥೆಗಳ ಕಥೆಗಳು ಒಂದೊಂದಾಗಿ ಬಯಲಾಗುತ್ತಿವೆ. ಕಳೆದ ಐದು ಸಾವಿರ ವರ್ಷಗಳ ಪ್ರಪಂಚದ ಇತಿಹಾಸದಲ್ಲಿ ಜರುಗಿದ ಯುದ್ಧಗಳಲ್ಲಿ ಸಾವಿಗೀಡಾದ ಜನರ ಸಂಖ್ಯೆಗಿಂತ ಈ ಏಳು ದಶಕಗಳಲ್ಲಿ ಕಮ್ಯೂನಿಷ್ಟ್ ನಿರಂಕುಶಾಡಳಿತಗಾರರು ಕೊಲ್ಲಿಸಿದ ಜನರ ಸಂಖ್ಯೆಯೇ ಹೆಚ್ಚು. ಕಮ್ಯೂನಿಷ್ಟ್ ಆಡಳಿತವು ಸೋವಿಯತ್ ರಷ್ಯಾದಲ್ಲಿ ಎರಡೂವರೆ ಕೋಟಿ ಜನರನ್ನು, ಚೀನಾ ಆಡಳಿತವು ಮೂರೂವರೆ ಕೋಟಿ ಜನರನ್ನು ಕೊಂದು ಹಾಕಿವೆ. ಹಾಗೆ ನಿರುದ್ಯೋಗ ಸಮಸ್ಯೆಯನ್ನು ಅವರು ನಿವಾರಿಸಿ ಕೊಂಡಿದ್ದಾರೆ!
ತಲೆಗಳು ಉರುಳಿ ಭೂಮಿಯು ಕುಸಿದು
ಮಲಿನವಾಯಿತು ಜನತೆಯ ಬದುಕು
ಕನಸುಗಳು ನಶಿಸಿ ಕಷ್ಟಗಳಿಗೆ ಸಿಲುಕಿ
ನಲುಗಿದವು ಕಾರ್ಮಿಕರ ಹಕ್ಕುಗಳು
ಕಮ್ಯೂನಿಷ್ಟು ಕಸಾಯಿಕಾರರು
ತುಂಡರಿಸಿ ಹಾಕಿದರವರ ಬದುಕುಗಳನು
ಕಾಲಗರ್ಭದಿ ಅಡಗಿಹೋಗವು
ಬಯಲಾಗುತಿಹವು ಆ ಕಠೋರ ಸ್ಮೃತಿಗಳು
ಕಮ್ಯೂನಿಷ್ಟ್ ಪ್ರಭುತ್ವಗಳು ಹತ್ಯೆ ಮಾಡಿಸಿದ ಜನಗಳ ಸಂಖ್ಯೆಗಿಂತ ಪ್ರಜಾಪ್ರಭುತ್ವಗಳುಳ್ಳ ದೇಶದಲ್ಲಿನ ನಿರುದ್ಯೋಗಿಗಳ ಸಂಖ್ಯೆ ಬಹಳ ಕಡಿಮೆ.
ಸೋವಿಯತ್ ರಷ್ಯಾದಲ್ಲಿ ೧೯೬೦ರಲ್ಲಿ ರಾಷ್ಟ್ರೀಯ ಸ್ಥೂಲ ಉತ್ಪನ್ನವು (GDP) ೨೨೩ ಬಿಲಿಯನ್ ಡಾಲರ್. (ಬಿಲಿಯನ್ ಅಂದರೆ ೧೦೦ ಕೋಟಿ, ೧೯೯೦ರಲ್ಲಿ ಒಂದು ಡಾಲರಿನ ಬೆಲೆ ರೂ.೧೬=೫೦). ೧೯೮೬ರ ಹೊತ್ತಿಗೆ ಅದರ ಸ್ಥೂಲ ರಾಷ್ಟ್ರೀಯ ಉತ್ಪನ್ನವು ೧೨೩೦ ಬಿಲಿಯನ್ ಡಾಲರ್. ಅಂದರೆ ಇದರರ್ಥ ಈ ಅವಧಿಯಲ್ಲಿ ರಾಷ್ಟ್ರೀಯ ಉತ್ಪನ್ನವು ಅಂದಾಜು ಶೇಖಡಾ ೫೫೦ರಷ್ಟು ಹೆಚ್ಚಳವಾಯಿತು. ೧೯೬೦ರಲ್ಲಿ ಅಮೇರಿಕಾದಲ್ಲಿ ಸ್ಥೂಲ ರಾಷ್ಟ್ರೀಯ ಉತ್ಪನ್ನವು ೫೦೯ ಬಿಲಿಯನ್ ಡಾಲರುಗಳಿದ್ದರೆ ೧೯೮೬ರ ಹೊತ್ತಿಗೆ ಅದರ ಸ್ಥೂಲ ರಾಷ್ಟ್ರೀಯ ಉತ್ಪನ್ನವು ೪೨೦೦ ಬಿಲಿಯನ್ ಡಾಲರ್ ಅಂದರೆ ಅದು ಸುಮಾರು ಶೇಖಡಾ ೮೨೩ರಷ್ಟು ಏರಿಕೆಯನ್ನು ಕಂಡಿದೆ. ಪ್ರಜೆಗಳು, ಸಂಪನ್ಮೂಲಗಳು, ಸ್ವಲ್ಪ ಹೆಚ್ಚೂ ಕಡಿಮೆ ಸಮಾನವಾಗಿದ್ದ ಆ ಎರಡೂ ದೇಶಗಳಲ್ಲಿ ಕಮ್ಯೂನಿಷ್ಟ್ ರಷ್ಯಾಕ್ಕಿಂತ ಪ್ರಜಾಪ್ರಭುತ್ವವಿದ್ದ ಅಮೇರಿಕಾ ಸಂಯುಕ್ತ ಸಂಸ್ಥಾನವು ಹೆಚ್ಚಿನ ಪ್ರಗತಿಯನ್ನು ಸಾಧಿಸಿದೆ. ಪ್ರಜಾಪ್ರಭುತ್ವವುಳ್ಳ ಜಪಾನಿನ ಸ್ಥೂಲ ರಾಷ್ಟ್ರೀಯ ಉತ್ಪನ್ನವು ೧೯೬೦ರಲ್ಲಿ ೪೦ ಬಿಲಿಯನ್ ಡಾಲರ್ ಇದ್ದರೆ, ಅದೇ ಕಾಲದಲ್ಲಿ ಕಮ್ಯೂನಿಷ್ಟ್ ಚೀನಾದ ಸ್ಥೂಲ ರಾಷ್ಟ್ರೀಯ ಉತ್ಪನ್ನವು ೪೩ ಬಿಲಿಯನ್ ಡಾಲರ್ ಇತ್ತು. ೧೯೮೬ರ ವೇಳೆಗೆ ಜಪಾನಿನ ಸ್ಥೂಲ ಉತ್ಪನ್ನವು ೧೮೦೦ ಬಿಲಿಯನ್ ಡಾಲರುಗಳಷ್ಟಿದ್ದರೆ ಚೀನಾದ ಉತ್ಪನ್ನವು ಕೇವಲ ೬೦೦ ಬಿಲಿಯನ್ ಡಾಲರುಗಳಿಗೆ ಪರಿಮಿತವಾಗಿದೆ.
ಕಮ್ಯೂನಿಷ್ಟ್ ರಾಷ್ಟ್ರಗಳಲ್ಲೆಲ್ಲಾ ಆರ್ಥಿಕವಾಗಿ ಬಹಳಷ್ಟು ಅಭಿವೃದ್ಧಿ ಹೊಂದಿದ ಪೂರ್ವ ಜರ್ಮನಿ, ಪ್ರಜಾಪ್ರಭುತ್ವದ ಆಡಳಿತ ಹೊಂದಿರುವ ಪಶ್ಚಿಮ ಜರ್ಮನಿಗಿಂತ ಬಹಳ ಹಿಂದೆ ಇದೆ. ಅದಲ್ಲದೆ ಪಶ್ಚಿಮ ಜರ್ಮನಿಯಲ್ಲಿ ನಿವಸಿಸುವ ಪ್ರಜೆಗಳಿಗಿರುವ ವ್ಯಕ್ತಿಗತ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯಗಳು ಪೂರ್ವ ಜರ್ಮನಿಯ ಪ್ರಜೆಗಳಿಗೆ ಇಲ್ಲ. ಆದ್ದರಿಂದ ಕಳೆದ ನಾಲ್ಕು ದಶಕಗಳಿಂದ ಪೂರ್ವ ಜರ್ಮನಿಯ ಪ್ರಜೆಗಳು ಪಶ್ಚಿಮ ಜರ್ಮನಿಗೆ ನಿರಂತರವಾಗಿ ವಲಸೆ ಹೋಗುತ್ತಿದ್ದಾರೆ. ಇನ್ನುಳಿದ ಕಮ್ಯೂನಿಷ್ಟ್ ದೇಶಗಳ ಕಥೆಯನ್ನು ಹೇಳುವ ಅವಶ್ಯಕತೆಯಿಲ್ಲವೆನಿಸುತ್ತದೆ.
ವ್ಯಕ್ತಿಗತ ಆಸ್ತಿಗಳ ರೂಪುರೇಷೆಗಳನ್ನು ಮಾರ್ಪಡಿಸುವುದೇ ಸಮಾಜದಲ್ಲಿ ನಡೆಯುವ ಅಕ್ರಮಗಳು ಹಾಗು ಶೋಷಣೆಯನ್ನು ನಿರೋಧಿಸಲು ಇರುವ ಏಕೈಕ ಮಾರ್ಗವೆಂದು ಭಾವಿಸಿದ ಕಮ್ಯೂನಿಷ್ಟರು ಆ ಸ್ಥಿತಿಯನ್ನು ಸ್ಥಾಪಿಸಲು ರಕ್ತಕ್ರಾಂತಿಯನ್ನು ಹುಟ್ಟುಹಾಕಿದರು. ಅದಾದ ನಂತರ ವರ್ಗಶತ್ರುಗಳ ನಿರ್ಮೂಲನೆ ಎನ್ನುವ ಹೆಸರಿನಲ್ಲಿ ಕೋಟ್ಯಂತರ ಜನರನ್ನು ಕೊಂದರು. ಕಡೆಗೆ ಪುನಃ ವ್ಯಕ್ತಿಗತ ಆಸ್ತಿಗಳ ಪುನರುದ್ಧರೀಕರಣಕ್ಕೆ ಕೈ ಹಾಕಿದ್ದಾರೆ. ಕಡೆಯಲ್ಲಿ ಈಗ ಉಳಿದಿರುವುದು ನಿರಂಕುಶ ಆಡಳಿತ ಮಾತ್ರವೇ!
ಮುಂದುವರೆಯುವುದು.........
ವಿ.ಸೂ.: ಇದು ೧೯೯೦ರಲ್ಲಿ ಮೂಲತಃ ತೆಲುಗಿನಲ್ಲಿ ಪ್ರಕಟಗೊಂಡ ಸುಡುಗಾಡು ಸೇರುತ್ತಿರುವ ಸಮತಾವಾದ - ಕಾಟಿಕಿ ಪೋತುನ್ನ ಕಮ್ಯೂನಿಜಂ, ಲೇಖಕರು - ಶ್ರೀಯುತ ತಂಗೇಡುಕುಂಟ ಹೆಬ್ಬಾರ್ ನಾಗೇಶ್ವರ್ ರಾವ್ ಅವರ ಕೃತಿಯ ಕನ್ನಡ ಅನುವಾದ. ಇಪ್ಪತ್ತೇಳು - ಇಪ್ಪತ್ತೆಂಟು ವರ್ಷಗಳ ಹಿಂದೆಯೇ ಪಾಶ್ಚಿಮಾತ್ಯ ದೇಶಗಳಲ್ಲಿನ ಕಮ್ಯೂನಿಸಂನ ನಿಜವಾದ ಮುಖವೇನು, ಕಮ್ಯೂನಿಸಂನ ಸಿದ್ಧಾಂತ ಎಲ್ಲಿ ಎಡವಿತು ಮತ್ತು ಕಮ್ಯೂನಿಷ್ಟ್‌ಪ್ರಭುತ್ವಗಳು ಮಾಡಿದ ಮಾರಣ ಹೋಮ, ಅಲ್ಪಸಂಖ್ಯಾತರ ಮೇಲಿನ ದಬ್ಬಾಳಿಕೆ, ವಿಫಲವಾದ ಕಮ್ಯೂನಿಷ್ಟರ ಆರ್ಥಿಕ ನೀತಿ, ನಿರಂಕುಶ ಆಡಳಿತ, ಮೊದಲಾದ ವಿಷಯಗಳ ಸಮಗ್ರ ಚಿತ್ರಣವನ್ನು ಆ ಕಿರುಹೊತ್ತಗೆ ಸಫಲವಾಗಿ ಹಿಡಿದುಕೊಟ್ಟಿದೆ.
*****
ಹಿಂದಿನ ಲೇಖನ ಭಾಗ - ೨: ಕೊನೆಯುಸಿರೆಳೆಯುತ್ತಿರುವ ಕಮ್ಯೂನಿಸಂ ಓದಲು ಈ ಕೊಂಡಿಯನ್ನು ನೋಡಿ https://sampada.net/blog/%E0%B2%AD%E0%B2%BE%E0%B2%97-%E0%B3%A8-%E0%B2%95...
Comments
ಉ: ಭಾಗ - ೩: ಕೊನೆಯುಸಿರೆಳೆಯುತ್ತಿರುವ ಕಮ್ಯೂನಿಸಂ!
ಈ ಸರಣಿಯ ಮುಂದಿನ ಲೇಖನಕ್ಕೆ ಈ ಕೊಂಡಿಯನ್ನು ಚಿವುಟಿಸಿ https://sampada.net/blog/%E0%B2%AD%E0%B2%BE%E0%B2%97-%E0%B3%AA-%E0%B2%95...
ಉ: ಭಾಗ - ೩: ಕೊನೆಯುಸಿರೆಳೆಯುತ್ತಿರುವ ಕಮ್ಯೂನಿಸಂ!
ಈ ಸರಣಿಯ ಒಟ್ಟು ನಾಲ್ಕು ಬರಹಗಳನ್ನು ವಾರದ ವಿಶೇಷ ಲೇಖನಗಳಲ್ಲೊಂದನ್ನಾಗಿ ಆರಿಸಿದ ಸಂಪದ ನಿರ್ವಹಣ ಮಂಡಳಿ ಹಾಗು ಶ್ರೀಯುತ ಹರಿಪ್ರಸಾದ್ ನಾಡಿಗರಿಗೆ ನಾನು . ಈ ಸರಣಿಯ ಲೇಖನಗಳನ್ನು ಓದಿ ಪ್ರೋತ್ಸಾಹಿಸುತ್ತಿರುವ ಸಂಪದಿಗರಿಗೂ ನಾನು ಚಿರಋಣಿ. ಪ್ರತಿಯೊಂದು ಲೇಖನವೂ ಶತಕ ಬಾರಿಸುತ್ತಿರುವುದೇ ನಿಮ್ಮಲ್ಲರ ಉತ್ತೇಜನಕ್ಕೆ ಮಾನದಂಡವಾಗಿದೆ. ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ :)