ಭಾಗ - ೬: ಕೊನೆಯುಸಿರೆಳೆಯುತ್ತಿರುವ ಕಮ್ಯೂನಿಸಂ!
ಅಲ್ಪ ಸಂಖ್ಯಾತರ ನಿರ್ಮೂಲನೆ
೧೩೯೬ರಿಂದ ಸರಿಸುಮಾರು ಏಳು ನೂರು ವರ್ಷಗಳ ಕಾಲ ಬಲ್ಗೇರಿಯಾವನ್ನು ಒಟ್ಟೋಮನ್ ರಾಜರು ಪರಿಪಾಲಿಸಿದರು. ಆ ಕಾಲದಲ್ಲಿ ಟರ್ಕಿ ಜನಾಂಗದವರನೇಕರು ಬಲ್ಗೇರಿಯಾದಲ್ಲಿ ಸ್ಥಿರಪಟ್ಟರು. ಎಲ್ಲಾ ಜನಾಂಗಗಳು ಒಂದೇ ಎಂದು ಹೇಳಿದ ಕಮ್ಯೂನಿಷ್ಟರು ೧೯೪೬ರ ಆರಂಭದಿಂದಲೂ ಟರ್ಕಿ ಮೂಲದ ಜನಾಂಗದವರನ್ನು ಕ್ಷುಲ್ಲಕ ಭಾವನೆಯಿಂದ ನೋಡುತ್ತಾ ಅವರನ್ನು ಕೀಳಾಗಿ ನಡೆಸಿಕೊಳ್ಳಲಾರಂಭಿಸಿದರು. ಇದರ ಪರಿಣಾಮವಾಗಿ ೧೯೫೨ರಿಂದ ೧೯೭೮ನೇ ಇಸವಿಯವರೆಗೆ ಸುಮಾರು ೫,೦೨,೦೦೦ ಟರ್ಕಿ ಜನಾಂಗದವರು ಬಲ್ಗೇರಿಯಾದಿಂದ ಟರ್ಕಿ ದೇಶಕ್ಕೆ ವಲಸೆ ಹೋಗಬೇಕಾಯಿತು.
೧೯೫೪ರಿಂದ ಸುಮಾರು ೩೫ ವರ್ಷಗಳಷ್ಟು ದೀರ್ಘಕಾಲ ನಿರಂಕುಶ ಆಡಳಿತ ನಡೆಸಿದ ಕಮ್ಯೂನಿಷ್ಟ್ ನೇತಾರ ಟೋಡರ್ ಷುವ್‌ಕೋವ್‌ನ ಆಡಳಿತವು ಟರ್ಕಿ ಮೂಲದ ಸಂತತಿಯವರನ್ನು ಮತ್ತಷ್ಟು ಕಷ್ಟಕೋಟಲೆಗಳಿಗೆ ಸಿಲುಕಿಸಿತು. ಟರ್ಕಿ ಭಾಷೆಯನ್ನು ಮಾತನಾಡುವುದು ಕೀಳೆಂದು, ಅದು ಅಪರಾಧವೆಂದು ಪ್ರಚಾರ ಮಾಡಲಾಯಿತು. ಟರ್ಕಿ ಪಾಠಶಾಲೆಗಳನ್ನು, ಟರ್ಕಿ ವಾರ್ತಾ ಪತ್ರಿಕೆಗಳನ್ನು ಮುಚ್ಚಿಸಲಾಯಿತು. ’ನಿರ್ಬಂಧ ವಿಲೀನ’ (self-liquidation) ಎನ್ನುವ ಪದ್ಧತಿಯು ಟೋಡರ್ ಷುವ್‌ಕೋವ್‌ನ ಆಡಳಿತ ಕಾಲದಲ್ಲಿ ಜಾರಿಗೆ ಬಂದಿತು. ಈ ಪದ್ಧತಿಯ ಅನ್ವಯ, ಟರ್ಕಿ ಮೂಲದ ಜನಾಂಗದವರು ಟರ್ಕಿ ಭಾಷೆಯನ್ನು ಮರೆತು ಬಲ್ಗೇರಿಯನ್ನರಾಗಿ ಬದಲಾಗಬೇಕು. ೧೯೮೮-೮೯ನೇ ಇಸವಿಯಲ್ಲಿ ಮತ್ತೆ ಸುಮಾರು ೩,೯೦,೦೦೦ ಮಂದಿ ಟರ್ಕಿ ಸಂತತಿಯವರು ಟರ್ಕಿ ದೇಶಕ್ಕೆ ವಲಸೆ ಹೋದರು. ಈ ಶರಣಾರ್ಥಿಗಳ ಸಮಸ್ಯೆಯನ್ನು ನಿವಾರಿಸಿಕೊಳ್ಳಲು ಟರ್ಕಿ ದೇಶವು ತನ್ನ ಸರಿಹದ್ದುನ್ನು ಮುಚ್ಚಿತು. ಇಂದಿಗೂ ಸಹ ೯೦ ಲಕ್ಷವುಳ್ಳ ಬಲ್ಗೇರಿಯಾದ ಜನಸಂಖ್ಯೆಯಲ್ಲಿ ಸುಮಾರು ೧೦ ಲಕ್ಷದಷ್ಟು ಟರ್ಕಿ ಸಂತತಿಯವರಿದ್ದಾರೆ.
ಟರ್ಕಿ ದೇಶದ ವಿಷಯವನ್ನು ಬದಿಗಿರಿಸಿ, ತಮ್ಮಂತೆಯೇ ಕಮ್ಯೂನಿಷ್ಟ್ ದೇಶವಾದ ಹಂಗೇರಿ ಸಂತತಿಯ ಪ್ರಜೆಗಳನ್ನು ರುಮೇನಿಯಾ ದೇಶದ ಕಮ್ಯೂನಿಷ್ಟರು ದಾರುಣವಾಗಿ ಹತ್ತಿಕ್ಕಿದರು. ರುಮೇನಿಯಾದಲ್ಲಿ ಇರುವ ಎರಡು ಕೋಟಿ ಮುವ್ವತ್ತು ಲಕ್ಷ ಜನಸಂಖ್ಯೆಯಲ್ಲಿ ಶೇಖಡಾ ೮%ರಷ್ಟು ಹಂಗೇರಿ ಜನಾಂಗದವರು. ಇವರಲ್ಲಿ ಅಧಿಕರು ರುಮೇನಿಯಾದ ಟ್ರಾನ್ಸಿಲ್ವೇನಿಯಾ ಪ್ರಾಂತದಲ್ಲಿ ಇದ್ದಾರೆ. ಮೊದಲನೇ ಪ್ರಪಂಚ ಯುದ್ಧದ ನಂತರ ’ಆಸ್ಟ್ರಿಯಾ -ಹಂಗೇರಿಯನ್’ ಸಾಮ್ರಾಜ್ಯವು ಕುಸಿದು ಬಿತ್ತು. ಹಂಗೇರಿಯ ಭೂಭಾಗದ ಮೂರನೇ ಎರಡರಷ್ಟು ಭಾಗವು ಬೇರೆ ಬೇರೆ ದೇಶಗಳಿಗೆ ಹಂಚಿಹೋಯಿತು. ಟ್ರಾನ್ಸಿಲ್ವೇನಿಯಾ ಪ್ರಾಂತವು ರುಮೇನಿಯಾಕ್ಕೆ ದಕ್ಕಿತು. ೧೯೪೦ರಲ್ಲಿ ಟ್ರಾನ್ಸಿಲ್ವೇನಿಯಾ ಪ್ರಾಂತದ ಸ್ವಲ್ಪ ಭಾಗವನ್ನು ಹಂಗೇರಿಯು ಆಕ್ರಮಿಸಿತು. ಆದರೆ ಎರಡನೇ ಪ್ರಪಂಚ ಯುದ್ಧದ ನಂತರ ಆ ಭೂಭಾಗವು ಪುನಃ ರುಮೇನಿಯಾದ ಕೈವಶವಾಯಿತು. ಅಂದಿನಿಂದ ರುಮೇನಿಯಾ ದೇಶದಲ್ಲಿರುವ ಹಂಗೇರಿಯನ್ನರು ರುಮೇನಿಯಾ ಕಮ್ಯೂನಿಷ್ಟರ ಜನಾಂಗೀಯ ದ್ವೇಷದ ದಳ್ಳುರಿಗೆ ಸಿಲುಕಿ ನರಳುತ್ತಿದ್ದಾರೆ. ಚೌಸೆಸ್ಕೂ ಆರಂಭಿಸಿದ ’ಕ್ರಮಬದ್ಧೀಕರಣ’ದ ಫಲವಾಗಿ ೧೯೮೯ರಲ್ಲೇ ೩೩ ಸಾವಿರ ಹಂಗೇರಿ ಸಂತತಿಯವರು ಸ್ವದೇಶಕ್ಕೆ ಶರಣಾರ್ಥಿಗಳಾಗಿ ತೆರಳಿದರು. ಹಂಗೇರಿ ಪ್ರಭುತ್ವವು ರುಮೇನಿಯಾ ಸರ್ಕಾರದ ಈ ಕ್ರಮವನ್ನು ತೀವ್ರವಾಗಿ ಖಂಡಿಸಿತು. ಹಂಗೇರಿ ಮೂಲದ ಜನಾಂಗವನ್ನು ಹತ್ತಿಕ್ಕುವ ಪ್ರಧಾನ ಲಕ್ಷ್ಯವನ್ನು ಹೊಂದಿದ್ದ ರುಮೇನಿಯಾ ಸರ್ಕಾರವು ಕೈಗೊಂಡ ಕ್ರಮವೇ ’ಕ್ರಮಬದ್ಧೀಕರಣ’
ಆಕ್ರಮಣ ಮೂಲ ಉದ್ದೇಶ
ಸೋವಿಯತ್ ರಷ್ಯಾದಲ್ಲಿ ಸರಿಸುಮಾರು ನೂರು ಜನಾಂಗಗಳ ಪ್ರಜೆಗಳಿದ್ದಾರೆ. ಆದರೆ ಅವರು ಅನಾದಿಕಾಲದಿಂದಲೂ ರಷ್ಯಾದ ಮೂಲನಿವಾಸಿಗಳು, ಇತರೇ ಜನಾಂಗದವರನ್ನು ನಿರ್ಮೂಲನೆ ಮಾಡಲು ಅವರು ಪ್ರಯತ್ನಿಸುತ್ತಿದ್ದಾರೆ. ’ಕಮ್ಯೂನಿಸಂ’ನ ಹೆಸರಿನಲ್ಲಿ ರಷ್ಯಾದ ಜನಾಂಗೀಯ ಮೂಲಭೂತವಾದವು ಸೋವಿಯತ್ ರಷ್ಯಾವನ್ನು ಆವರಿಸಿದೆ. ಎರಡನೇ ಪ್ರಪಂಚ ಯುದ್ಧಕ್ಕೆ ಮೊದಲು ಸ್ವತಂತ್ರ ದೇಶಗಳಾಗಿದ್ದ ಲಿಥುವೇನಿಯಾ, ಲಾಟ್ವಿಯಾ, ಇಸ್ತೋನಿಯಾಗಳನ್ನು ೧೯೪೦ರಲ್ಲಿ ರಷ್ಯಾದ ಕಮ್ಯೂನಿಷ್ಟರು ಕಬಳಿಸಿದರು. ಪ್ರಸ್ತುತ ಲಾಟ್ವಿಯಾದ ಲಾಟ್ವಿಯಾ ಜನಾಂಗದವರ ಪ್ರಮಾಣ ೬೭%ಗೆ ಕುಸಿದು ಬಿದ್ದಿದೆ. ಅಲ್ಲಿ ೩೩%ರಷ್ಟು ರಷ್ಯಾ ಮೂಲದ ಜನಾಂಗದವರು ಇದ್ದಾರೆ. ಇಸ್ತೋನಿಯಾದಲ್ಲಿಯೂ ರಷ್ಯನ್ ಜನಾಂಗದವರು ೨೫%ರಷ್ಟಾಗಿದ್ದಾರೆ. ಸೋವಿಯತ್ ದೇಶದ ಪ್ರತಿಯೊಂದು ರಿಪಬ್ಲಿಕ್‌ನ ಒಳಗೂ ರಷ್ಯಾ ಮೂಲದ ಜನಾಂಗಗಳು ಅಕ್ರಮವಾಗಿ ಪ್ರವೇಶಿಸಿವೆ ಮತ್ತು ತಮ್ಮ ಸಂಖ್ಯೆಯನ್ನು ಹೆಚ್ಚಿಸಿಕೊಂಡಿವೆ.
ಕಝಕಿಸ್ತಾನ್ ಸೋವಿಯತ್ ರಷ್ಯಾದಲ್ಲಿನ ಒಂದು ರಿಪಬ್ಲಿಕ್. ೧೯೨೭ರಿಂದ ಕಝಕಿಸ್ತಾನದೊಳಕ್ಕೆ ರಷ್ಯನ್ ರಿಪಬ್ಲಿಕ್‌ನಿಂದ ಭಾರೀ ಪ್ರಮಾಣದಲ್ಲಿ ಜನರು ವಲಸೆ ಹೋದರು. ೧೯೧೭ರಿಂದ ೧೯೨೫ರವರೆಗೆ ಕಝಕ್ ಜನಾಂಗದವರು ರಷ್ಯಾದ ಕೆಂಪು ಸೈನ್ಯದೊಂದಿಗೆ ಹೋರಾಡಿದರು. ತಮ್ಮ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದರು. ಆದರೆ ಕಮ್ಯೂನಿಷ್ಟರ ಕಸಾಯಿ ಸೇನೆಯ ಮುಂದೆ ಕಝಕ್ ಜನಾಂಗದವರ ಹೋರಾಟ ವಿಫಲವಾಯಿತು. ೧೯೨೭ರಲ್ಲಿ ರಷ್ಯನ್ ಜನಾಂಗದವರ ವಲಸೆಯನ್ನು ಪ್ರತಿಭಟಿಸಿದ ಕಝಕ್ ಉಪಪ್ರಧಾನಿ ಕುಲುಂಟೇಟೋವ್ ಹಾಗು ಇತರ ೧೮ ಜನ ನಾಯಕರನ್ನು ಸ್ಟಾಲಿನ್ (ಸೋವಿಯತ್ ರಷ್ಯಾದ ನಿರಂಕುಶ ಪರಿಪಾಲಕ) ಪ್ರಭುತ್ವವು ಗಲ್ಲಿಗೇರಿಸಿತು. ಇವರನ್ನು ಬೂರ್ಜ್ವಾವಾದಿಗಳೆಂದು ತೀರ್ಮಾನಿಸಲಾಯಿತು. ೧೯೩೦ರಲ್ಲಿ ರಷ್ಯಾ ಸರ್ಕಾರದಲ್ಲಿ ವಿವಿಧ ಹುದ್ದೆಗಳನ್ನಲಂಕರಿಸಿದ್ದ ಕಝಕ್ ಜನಾಂಗದವರನ್ನು ಪದಚ್ಯುತಗೊಳಿಸಲಾಯಿತು. ಅವರ ಸ್ಥಾನಗಳಿಗೆ ರಷ್ಯನ್ ಜನಾಂಗದವರನ್ನು ತಂದು ಕೂರಿಸಲಾಯಿತು. ೧೯೩೬ರಲ್ಲಿ ಕಝಕಸ್ತಾನವು ರಷ್ಯಾದೊಳಗೆ ಸಂಪೂರ್ಣವಾಗಿ ವಿಲೀನವಾಯಿತು. ೧೯೫೪ರಲ್ಲಿ ’ಹೊಸ ಭೂಮಿಯಲ್ಲಿ ವ್ಯವಸಾಯ’ ಎನ್ನುವ ಯೋಜನೆಯನ್ನು ರಷ್ಯಾದ ಸರ್ಕಾರವು ಹುಟ್ಟು ಹಾಕಿತು. ಈ ಯೋಜನೆಯನ್ವಯ ಲಕ್ಷಾಂತರ ರಷ್ಯನ್ ಜನಾಂಗದವರು ಕಝಕಸ್ತಾನಕ್ಕೆ ತೆರಳಿದರು. ಹೊಸ ಉದ್ಯಮಗಳಲ್ಲಿಯೂ ಸಹ ರಷ್ಯನ್ ಜನಾಂಗೀಯರೇ ಹೆಚ್ಚಿನ ಉದ್ಯೋಗಾವಕಾಶಗಳನ್ನು ಪಡೆದುಕೊಂಡರು. ಇವೆಲ್ಲದರ ಪರಿಣಾಮವಾಗಿ ತಮ್ಮ ಸ್ವಂತ ನೆಲದಲ್ಲೇ ಕಝಕ್ ಜನಾಂಗದವರು ಅಲ್ಪಸಂಖ್ಯಾತರಾಗಿ ಮಾರ್ಪಡುವ ಪ್ರಮಾದವುಂಟಾಗಿದೆ.
ಜನಾಂಗಗಳ ಐಕ್ಯತೆಯ ಜ್ಯೋತಿಯು
ಬೆಳಗಬೇಕಾದ ಭೂಮಿಯಲಿ
ಜನಾಂಗೀಯ ದ್ವೇಷದ ದಳ್ಳುರಿಯು
ಪ್ರಜ್ವಲಿಸಿ ವಿಕಟಿಸಿಹುದು!
ಜನಾಂಗವೊಂದನು ಮತ್ತೊಂದು
ಕಬಳಿಸುವುದೇ ಚರಿತ್ರೆಯಲ್ಲವೆ ತಮ್ಮಾ
ಇದೇ ಅಲ್ಲವೇ ಕೆಂಪು ಝಂಡಾದವರ
ಆಡಳಿತ ವಿಸ್ತರಣೆಯ ಒಳ ಮರ್ಮ!
ಕಝಕಿಸ್ತಾನವನ್ನು ರಷ್ಯನ್ ಜನಾಂಗದವರು ಆಕ್ರಮಿಸುವುದನ್ನು ಪ್ರತಿಭಟಿಸಿದ ಕಝಕ್ ಕಮ್ಯೂನಿಷ್ಟ್ ಪಕ್ಷದ ಕಾರ್ಯದರ್ಶಿಯಾಗಿದ್ದ ಜುಮಾ ಬೇಸಾಯನ್ ಮೋಟೋವ್‌ನನ್ನು ೧೯೫೪ರಲ್ಲಿ ಪದಚ್ಯುತಗೊಳಿಸಲಾಯಿತು. ಕಝಕಿಸ್ತಾನ್ ಏಷಿಯಾ ಖಂಡದಲ್ಲಿ ಇದೆ. ರಷ್ಯಾದ ದುರಾಕ್ರಮಣವನ್ನು ಶತಮಾನದಷ್ಟು ಕಾಲ ಪ್ರತಿಭಟಿಸಿ, ಸರ್ವತಂತ್ರ ಸ್ವತಂತ್ರವಾಗಿ ತಮ್ಮ ಅಸ್ತಿತ್ವವನ್ನು ಸಾಗಿಸಿದ ಉಜ್‌ಬೇಕಿಸ್ತಾನ್, ತಾಝಿಕಿಸ್ತಾನ್, ಕಿರ್ಗಿಸ್ತಾನ್, ಟರ್ಕ್‌ಮನಿಸ್ತಾನ್ ಮೊದಲಾದ ಏಷಿಯಾ ಮೂಲದ ಜನಾಂಗಗಳು ೧೯೧೭ರ ನಂತರ ಕಮ್ಯೂನಿಷ್ಟ್ ದುರಾಕ್ರಮಗಳಿಗೆ ಬಲಿಯಾಗಿ ಸೋವಿಯತ್ ಸಾಮ್ರಾಜ್ಯದೊಳಗೆ ವಿಲೀನಗೊಂಡವು.
೧೯೮೭ರಲ್ಲಿ ಕಝಕಿಸ್ತಾನ್ ಕಮ್ಯೂನಿಷ್ಟ್‌ಪಕ್ಷದ ಕಾರ್ಯದರ್ಶಿಯಾಗಿದ್ದ ದೀನ್‌ಮುಖ್ ಹಮೀದ್ ಕುನ್‌ಯೆನ್‌ನನ್ನು ಪದಚ್ಯುತಗೊಳಿಸಲಾಯಿತು. ಆತ ಬ್ರೆಝ್ನೇವ್‌ನ (ಸೋವಿಯತ್ ರಷ್ಯಾದ ಮಾಜಿ ನಿರಂಕುಶ ಪರಿಪಾಲಕ) ಅನುಚರ ಹಾಗಾಗಿ ಪ್ರಸ್ತುತ ಸೋವಿಯತ್ ರಷ್ಯಾದ ನಿರಂಕುಶ ಪ್ರಭುವಾಗಿರುವ ಗೋರ್ಬಚೇವ್ ಅವನನ್ನು ಪದಚ್ಯುತಗೊಳಿಸಿದ. ಆತನ ಸ್ಥಾನದಲ್ಲಿ ಗೋರ್ಬಚೇವ್ ತನ್ನ ಅನುಚರನಾದ ಗಿನ್ನಾ ಡಿಕೋಲ್‌ಬಿನ್ ಎನ್ನುವವನನ್ನು ಕಝಕಿಸ್ತಾನದ ಕಮ್ಯೂನಿಷ್ಟ್ ಪಕ್ಷದ ಕಾರ್ಯದರ್ಶಿಯನ್ನಾಗಿ ಮಾಡಿದ. ಪದಚ್ಯುತನಾದ ಹಮೀದ್ ಕುನ್‌ಯೆನ್ ಕಝಕ್ ಜನಾಂಗದವನಾಗಿದ್ದರೆ ಡಿಕೋಲ್‌ಬಿನ್ ರಷ್ಯಾ ಜನಾಂಗದವನು. ಕುನ್‌ಯೆನ್‌ನನ್ನು ಪದಚ್ಯುತಗೊಳಿಸಿದ್ದನ್ನು ಪ್ರತಿಭಟಿಸಿ ಕಝಕಿಸ್ತಾನದಲ್ಲಿ ತೀವ್ರವಾದ ಚಳವಳಿ ನಡೆಯಿತು. ಕಝಕ್ ಜನಾಂಗೀಯರ ಕುಮ್ಮಕ್ಕಿನಿಂದ ವಿದ್ಯಾರ್ಥಿಗಳು, ಯುವಕರು ಪ್ರತಿಭಟನೆಗಳಲ್ಲಿ ಪಾಲ್ಗೊಂಡಿದ್ದಾರೆಂದು ಪ್ರಾವ್ಡಾ (ಕಮ್ಯೂನಿಷ್ಟ್ ಪಕ್ಷದ ಅಧಿಕೃತ ವಾರ್ತಾ ಪತ್ರಿಕೆ) ಮತ್ತು ಟಾನ್ (ಸೋವಿಯತ್ ಪ್ರಭುತ್ವದ ವಾರ್ತಾ ಸಂಸ್ಥೆ) ಪ್ರಚಾರ ಮಾಡಿದವು. ಕುನ್‌ಯೆನ್‌ನ ಪದಚ್ಯುತಿಯ ಸಂದರ್ಭವನ್ನು ದುರಪಯೋಗಪಡಿಸಿಕೊಂಡು ಗೂಂಡಾಗಳು, ಸಮಾಜ ವಿರೋಧಿ ಶಕ್ತಿಗಳು ದಹನಕಾಂಡ, ಹಿಂಸಾಕಾಂಡಗಳನ್ನು ನಡೆಸಿವೆ ಎಂದು ಟಾನ್ ಬಿತ್ತರಿಸಿತು. ಸೋವಿಯತ್ ಸ್ವರ್ಗದಲ್ಲಿ ಗೂಂಡಾಗಳು, ಸಮಾಜ ವಿರೋಧಿ ಶಕ್ತಿಗಳು ಇವೆ ಎನ್ನುವುದನ್ನು ಕಮ್ಯೂನಿಷ್ಟ್ ಸರ್ಕಾರವು ನಿರ್ಧರಿಸಿತು. ಇದೇನೆ ಇರಲಿ, ಆ ಚಳವಳಿಕಾರರು ಭದ್ರತಾ ಪಡೆಗಳ ಮೇಲೆ ದೌರ್ಜನ್ಯವನ್ನು ನಡೆಸಿದ್ದು ಮಾತ್ರ ದಿಟ. ಅವರು ಕಾರು ಹಾಗು ಇತರೇ ವಾಹನಗಳು ಮತ್ತು ಅಂಗಡಿ ಮುಂಗಟ್ಟುಗಳಿಗೆ ಬೆಂಕಿ ಹಚ್ಚುವ ಮೂಲಕ ಅವನ್ನು ಧ್ವಂಸ ಮಾಡಿದರು. ಕಮ್ಯೂನಿಷ್ಟ್ ರಷ್ಯಾದಲ್ಲಿ ಅಷ್ಟು ದೊಡ್ಡ ಪ್ರಮಾಣದಲ್ಲಿ ವಿಧ್ವಂಸಕ ಕೃತ್ಯಗಳು ನಡೆದದ್ದು ಅದೇ ಮೊದಲ ಬಾರಿ.
ಸೋವಿಯತ್ ಭೂತಲ ನಾಕದೊಳು
ಭೂತಗಳಿಗೆ ಕೋಟೆ ಕೊತ್ತಲಗಳು
ಕೋತಿಗಳ ನೇತಾರರ ಕಥೆಗಳು
ಸಂತಾಪ ಹುಟ್ಟಿಸುವ ವ್ಯಥೆಗಳು
ಸಮತಾವಾದದ ರಾಗಗಳು
ಶವಪೆಟ್ಟಿಗೆಗಳ ಸಂಗಮಗಳು
ವಿಶ್ವಭ್ರಾತೃತ್ವದ ಕಾಮ್ರೇಡುಗಳು
ಸಂಕುಚಿತತ್ವದ ಮೂಟೆಗಳು!
ಕಳೆದ ಮೂರು ವರ್ಷಗಳಲ್ಲಿ ಸೋವಿಯತ್ ರಷ್ಯಾದ ಎಲ್ಲಾ ರಿಪಬ್ಲಿಕ್ಕುಗಳಿಗೆ (ರಾಜ್ಯಗಳಿಗೆ) ಜನಾಂಗೀಯ ಕಲಹಗಳು ವಿಸ್ತರಿಸಿವೆ. ಸೋವಿಯತ್ ಯೂನಿಯನ್ನಿನಲ್ಲಿ ೧೫ ರಿಪಬ್ಲಿಕ್ಕುಗಳಿವೆ. ದೇಶದ ಒಟ್ಟು ಜನಸಂಖ್ಯೆಯಲ್ಲಿ (೨೭.೭ ಕೋಟಿ) ಅರ್ಧಕ್ಕಿಂತಲೂ ಅಧಿಕ ಜನರು (೧೪.೪ ಕೋಟಿ) ರಷ್ಯನ್ ರಿಪಬ್ಲಿಕ್ಕಿನಲ್ಲಿಯೇ ನಿವಸಿಸುತ್ತಿದ್ದಾರೆ. ರಷ್ಯನ್ ಜನಾಂಗೀಯರು ಎಲ್ಲಾ ರಿಪಬ್ಲಿಕ್ಕುಗಳನ್ನೂ ಆಕ್ರಮಿಸಿದ್ದಾರೆ. ಕಝಕಿಸ್ತಾನದಲ್ಲಿ ರಷ್ಯಾ ಜನಾಂಗದವರು ೪೧% ಇದ್ದಾರೆ. ಆಮೆಲೆ ಕಿರ್ಗಿಸ್ತಾನದಲ್ಲಿ ರಷ್ಯನ್ ಜನಾಂಗೀಯರು ೩೦% ಇದ್ದಾರೆ. ಉಳಿದ ರಿಪಬ್ಲಿಕ್ಕುಗಳಲ್ಲಿಯೂ ಸಹ ರಷ್ಯಾ ಜನಾಂಗದವರು ೨.೩% ನಿಂದ (ಆರ್ಮೇನಿಡಿಯಾ) ಹಿಡಿದು ೨೧%ವರೆಗೆ (ಉಕ್ರೇನ್) ಇದ್ದಾರೆ. ಸೋವಿಯತ್ ಯೂನಿಯನ್ನಿನಲ್ಲಿ ೭೬% ಭೂಭಾಗವು ರಷ್ಯನ್ ರಿಪಬ್ಲಿಕ್ಕಿನಲ್ಲಿಯೇ ಇದೆ. ಸೋವಿಯತ್ ಯೂನಿಯನ್ನಿನಲ್ಲಿ ಕಮ್ಯೂನಿಸಂ ಅಂತರ್ಧಾನವಾಗುತ್ತಿರುವುದಕ್ಕೆ ಒಂದು ಪ್ರಧಾನ ಕಾರಣ ರಷ್ಯನ್ ಜನಾಂಗೀಯರು ಇತರೇ ಜನಾಂಗದವರನ್ನು ಆಪೋಶನ ತೆಗೆದುಕೊಳ್ಳುತ್ತಿರುವುದೇ ಆಗಿದೆ. ಪ್ರಸ್ತುತ ಆಯಾ ಜನಾಂಗದವರು ತಿರುಗಿ ಬಿದ್ದಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಸೋಪು ಸಹ ಸಿಗದೇ ಸೈಬೀರಿಯಾದಲ್ಲಿ ಚಳವಳಿ ಮಾಡುತ್ತಿದ್ದಾರೆ. ಸೈಕಲ್ಲಿಗಾಗಿ ದಿನಗಳವರೆಗೆ ಸರತಿಯ ಸಾಲಿನಲ್ಲಿ ನಿಲ್ಲಬೇಕು. ಬ್ರೆಝ್ನೆವ್ ಬಂಧುಗಳ ಭೂಗತ ಸಾಮ್ರಾಜ್ಯದ ಚಟುವಟಿಕೆಗಳ ಕಥೆಗಳು ಇತ್ತೀಚೆಗೆ ಒಂದೊಂದಾಗಿ ಹೊರಜಗತ್ತಿಗೆ ತಿಳಿಯುತ್ತಿವೆ. ಸ್ಟಾಲಿನ್ ಹತ್ಯೆ ಮಾಡಿಸಿದವರ ಶವಗಳು ಮಾತನಾಡುತ್ತಿವೆ. ಇವೆಲ್ಲವನ್ನೂ ಅಧಿಗಮಿಸಿ ರಾಷ್ಟ್ರೀಯವಾದ, ಪ್ರಜಾಪ್ರಭುತ್ವ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಆಕಾಂಕ್ಷೆಗಳು ಬೆಳೆಯುತ್ತಿವೆ.
ಗಡಿ ವಿವಾದಗಳು
ಅನೇಕ ದಶಕಗಳು ಕಳೆದ ಬಳಿಕ ಮಾಸ್ಕೋದಲ್ಲಿ ಪುನಃ ೧೯೯೦ರ ಮೊದಲ ದಿನದಂದು ಚರ್ಚಿನ ಘಂಟೆಗಳು ಮೊಳಗಿದವು. ಧರ್ಮವೆನ್ನುವುದು ಅಫೀಮು ಎಂದು ಹೇಳಿದ ಕಮ್ಯೂನಿಷ್ಟರು ಪ್ರಜೆಗಳಲ್ಲಿನ ಈ ಅಫೀಮಿನ ಚಟವನ್ನು ನಿರ್ಮೂಲನೆ ಮಾಡದಾದರು. ಕೇವಲ ಮತಧರ್ಮವೆನ್ನುವುದು ಮಾತ್ರವಲ್ಲ ಮತಾಂಧತೆ ಕೂಡ ಸೋವಿಯತ್ ರಷ್ಯಾದಲ್ಲಿ ವಿಜೃಂಭಿಸುತ್ತಿದೆ. ಆರ್ಮೇನಿಯಾ (ಅಧಿಕ ಸಂಖ್ಯಾಕರು ಕ್ರೈಸ್ತರು) ಮತ್ತು ಅಜರ್‌ಬೈಝಾನ್ (ಮುಸ್ಲಿಂ ಬಾಹುಳ್ಯವಿರುವ ಪ್ರಾಂತ) ಪ್ರಾಂತಗಳ ನಡುವೆ ಗಡಿ ತಗಾದೆ ಇದೆ. ಈ ಎರಡೂ ರಿಪಬ್ಲಿಕ್ಕುಗಳ ಮಧ್ಯೆ ಈ ವಿಷಯದ ಕುರಿತು ಕಳೆದ ಎರಡು ವರ್ಷಗಳಿಂದಲೂ ಹೋರಾಟಗಳು ನಡೆಯುತ್ತಿವೆ. ಅಝರ್‌ಬೈಝಾನಿನಲ್ಲಿರುವ ನಾಗರ್ನೋ-ಕರಾಬಿಕ್ ಪ್ರಾಂತವು ತಮಗೆ ಸೇರಬೇಕೆನ್ನುವುದು ಆರ್ಮೇನಿಯಾದವರ ವಾದ. ಎರಡು ವರ್ಷಗಳಿಂದ ಈ ವಿವಾದವು ಭುಗಿಲೆದ್ದು, ಅದನ್ನು ನೆಪವಾಗಿಟ್ಟುಕೊಂಡು ಅಲ್ಲಿ ವಿಧ್ವಂಸಕ ಕೃತ್ಯಗಳು, ದಹನಕಾಂಡಗಳು, ಲೂಟಿಗಳು, ಹರತಾಳಗಳು, ಜಾಥಾಗಳು, ಕರ್ಫ್ಯೂಗಳು, ಅಪಹರಣಗಳು, ಹತ್ಯೆಗಳು ಜರುಗಿದವು. ಉದ್ರಿಕ್ತ ಪರಿಸ್ಥಿತಿ ಇಲ್ಲದ ದಿನಗಳು ಬಹಳ ಅಲ್ಪ. ನಾಗರ್ನೋ-ಕರಾಬಿಕ್ ಅಝರ್‌ಬೈಝಾನಿನಲ್ಲಿದೆ ಆದರೆ ಅಲ್ಲಿ ಆರ್ಮೇನಿಯಾ ಜನಾಂಗದವರು ಅಧಿಕ ಸಂಖ್ಯೆಯಲ್ಲಿದ್ದಾರೆ.
ಮುಂದುವರೆಯುವುದು.........
ವಿ.ಸೂ.: ಇದು ೧೯೯೦ರಲ್ಲಿ ಮೂಲತಃ ತೆಲುಗಿನಲ್ಲಿ ಪ್ರಕಟಗೊಂಡ ಸುಡುಗಾಡು ಸೇರುತ್ತಿರುವ ಸಮತಾವಾದ - ಕಾಟಿಕಿ ಪೋತುನ್ನ ಕಮ್ಯೂನಿಜಂ, ಲೇಖಕರು - ಶ್ರೀಯುತ ತಂಗೇಡುಕುಂಟ ಹೆಬ್ಬಾರ್ ನಾಗೇಶ್ವರ್ ರಾವ್ ಅವರ ಕೃತಿಯ ಕನ್ನಡ ಅನುವಾದ. ಇಪ್ಪತ್ತೇಳು - ಇಪ್ಪತ್ತೆಂಟು ವರ್ಷಗಳ ಹಿಂದೆಯೇ ಪಾಶ್ಚಿಮಾತ್ಯ ದೇಶಗಳಲ್ಲಿನ ಕಮ್ಯೂನಿಸಂನ ನಿಜವಾದ ಮುಖವೇನು, ಕಮ್ಯೂನಿಸಂನ ಸಿದ್ಧಾಂತ ಎಲ್ಲಿ ಎಡವಿತು ಮತ್ತು ಕಮ್ಯೂನಿಷ್ಟ್ ಪ್ರಭುತ್ವಗಳು ಮಾಡಿದ ಮಾರಣ ಹೋಮ, ಅಲ್ಪಸಂಖ್ಯಾತರ ಮೇಲಿನ ದಬ್ಬಾಳಿಕೆ, ವಿಫಲವಾದ ಕಮ್ಯೂನಿಷ್ಟರ ಆರ್ಥಿಕ ನೀತಿ, ನಿರಂಕುಶ ಆಡಳಿತ, ಮೊದಲಾದ ವಿಷಯಗಳ ಸಮಗ್ರ ಚಿತ್ರಣವನ್ನು ಆ ಕಿರುಹೊತ್ತಗೆ ಸಫಲವಾಗಿ ಹಿಡಿದುಕೊಟ್ಟಿದೆ.
*****
ಹಿಂದಿನ ಲೇಖನ ಭಾಗ - ೫: ಕೊನೆಯುಸಿರೆಳೆಯುತ್ತಿರುವ ಕಮ್ಯೂನಿಸಂ ಓದಲು ಈ ಕೊಂಡಿಯನ್ನು ನೋಡಿ https://sampada.net/blog/%E0%B2%AD%E0%B2%BE%E0%B2%97-%E0%B3%AB-%E0%B2%95...
Comments
ಉ: ಭಾಗ - ೬: ಕೊನೆಯುಸಿರೆಳೆಯುತ್ತಿರುವ ಕಮ್ಯೂನಿಸಂ!
ಸರಣಿಯ ಮುಂದಿನ ಲೇಖನ ಭಾಗ - ೭: ಕೊನೆಯುಸಿರೆಳೆಯುತ್ತಿರುವ ಕಮ್ಯೂನಿಸಂ! ಓದಲು ಈ ಕೊಂಡಿಯನ್ನು ಚಿವುಟಿಸಿ https://sampada.net/blog/%E0%B2%AD%E0%B2%BE%E0%B2%97-%E0%B3%AD-%E0%B2%95...