ಭಾಗ - ೨೩ ಭೀಷ್ಮ ಯುಧಿಷ್ಠಿರ ಸಂವಾದ: ವಶಿಷ್ಠ ಬ್ರಹ್ಮ ಸಂವಾದ ಅರ್ಥಾತ್ ದೈವಬಲವೋ ಪುರುಷಪ್ರಯತ್ನವೋ!
ಇದು ಭೀಷ್ಮ ಯುಧಿಷ್ಠಿರ ಸಂವಾದ ಅರ್ಥಾತ್ ರಾಜನೀತಿ ಶಾಸ್ತ್ರದಿಂದ ಆಯ್ದ ಮತ್ತೊಂದು ನೀತಿ ಕಥೆ.
ಯುಧಿಷ್ಠಿರನು ಹೀಗೆ ಕೇಳಿದನು, "ಪಿತಾಮಹಾ! ದೈವಬಲದ ಕಾರಣದಿಂದಾಗಿಯೇ ಲೋಕದಲ್ಲಿ ಸಕಲವೂ ಜರಗುತ್ತವೆ ಎನಿಸುತ್ತದೆ. ಕೇವಲ ಪುರುಷಪ್ರಯತ್ನವು ಅಪ್ರಯೋಜಕವೆನ್ನುವ ಅನುಭವವು ಉಂಟಾಗುತ್ತಿದೆ. ವಾಸ್ತವವಾಗಿ ಈ ಎರಡರಲ್ಲಿ ಯಾವುದು ಹೆಚ್ಚು ಶಕ್ತಿಯುತವಾದುದೋ ಎನ್ನುವುದನ್ನು ಪೂಜ್ಯರಾದ ತಾವು ತಿಳಿಸಿಕೊಡಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ".
ಭೀಷ್ಮನು ಹೀಗೆ ಉತ್ತರಿಸಿದನು, "ಧರ್ಮಜನೇ! ಈ ವಿಷಯದಲ್ಲಿ ’ವಶಿಷ್ಠ ಬ್ರಹ್ಮ ಸಂವಾದ’ವೆನ್ನುವ ಉಪಾಖ್ಯಾನವೊಂದು ಪ್ರಸಿದ್ಧವಾಗಿದೆ. ಅದನ್ನು ನಿನಗೆ ತಿಳಿಸುತ್ತೇನೆ, ಅದೇ ನಿನ್ನ ಪ್ರಶ್ನೆಗೆ ಸೂಕ್ತ ಉತ್ತರವಾಗಬಲ್ಲದು, ಕೇಳುವಂತಹವನಾಗು."
ದೈವಪೌರುಷಗಳಲ್ಲಿ (Pre-Destination and Free-Will ಅಥವಾ ವಿಧಿಲಿಖಿತ ಹಾಗು ಸ್ವಯಂಶಕ್ತಿ) ಯಾವುದು ಮಹತ್ತರವಾದುದು ಎನ್ನುವ ವಶಿಷ್ಠರ ಪ್ರಶ್ನೆಗೆ ಬ್ರಹ್ಮನು ಈ ವಿಧವಾಗಿ ಉತ್ತರಿಸಿದನು - "ಮುನಿವರ್ಯನೇ! ಬೀಜವು ಮೊಳಕೆಯೊಡೆದು ವೃಕ್ಷವಾಗುತ್ತದೆ. ಆ ವೃಕ್ಷವು ಹೂ, ಹಣ್ಣುಗಳನ್ನು ಕೊಡುತ್ತದೆ. ಆ ಹಣ್ಣುಗಳಲ್ಲಿ ಪುನಃ ಬೀಜವು ಇರುತ್ತದೆ. ಆದ್ದರಿಂದ ಬೀಜವು ಯಾವುದೇ ಕಾಲದಲ್ಲಿ ನಿಷ್ಪ್ರಯೋಜನಕಾರಿಯಾದುದಲ್ಲ. ಬೀಜವಿಲ್ಲದಿದ್ದರೆ ವೃಕ್ಷವಿರದು. ಬೀಜವಿಲ್ಲದಿದ್ದರೆ ಫಲವೂ ಲಭ್ಯವಾಗುವುದಿಲ್ಲ. ಬೀಜದಿಂದಲೇ ಪುನಃ ಬೀಜವು ಉಂಟಾಗುತ್ತದೆ. ಆದ್ದರಿಂದ ಬೀಜವೇ ಫಲೋತ್ಪತ್ತಿಗೆ ಮೂಲ ಕಾರಣವಾಗಿದೆ."
"ಕೃಷಿಕನು ಹೊಲದಲ್ಲಿ ಬೀಜಗಳನ್ನು ಬಿತ್ತಿದರೆ ಬೆಳೆಯು ಕೈಗೆ ಬರುತ್ತದೆ. ಬೀಜಗಳನ್ನು ಬಿತ್ತದೇ ಹೋದಲ್ಲಿ ಫಸಲಾದರೂ ಎಲ್ಲಿಂದ ಬರಬೇಕು?"
"ಆದ್ದರಿಂದ ಪುರುಷಪ್ರಯತ್ನವಿಲ್ಲದೇ ದೈವವಾದರೂ ಯಾವ ವಿಧವಾಗಿ ಸಹಾಯಮಾಡಬಲ್ಲುದು?"
"ಲೋಕದಲ್ಲಿ ಧನ-ಕನಕಾದಿಗಳು, ಮಿತ್ರರು, ಐಶ್ವರ್ಯ, ಅಧಿಕಾರ, ವಾಹನಾದಿಗಳು.... ಯಾವುದನ್ನೇ ಆಗಲಿ ಪಡೆಯಬೇಕೆಂದರೆ, ಅದಕ್ಕೆ ಪುರುಷ ಪ್ರಯತ್ನವು ಅತ್ಯಾವಶ್ಯಕ. ಅವರವರ ಮನೋಭಾವ ಹಾಗು ಶಕ್ತಿಸಾಮರ್ಥ್ಯಗಳಿಗೆ ಅನುಗುಣವಾಗಿ ಪ್ರತಿಯೊಬ್ಬರೂ ಕಾರ್ಯಶೀಲರಾಗಬೇಕು. ಕೆಲವರು ತಪಸ್ಸಿನ ಮೂಲಕ, ಕೆಲವರು ಪರಾಕ್ರಮವನ್ನು ಪ್ರದರ್ಶಿಸುವ ಮೂಲಕ, ಕೆಲವರು ವ್ಯಾಪಾರದ ಮೂಲಕ, ಇನ್ನೂ ಕೆಲವರು ಸೇವಾ ಕಾರ್ಯಗಳನ್ನು ಮಾಡುವುದರ ಮೂಲಕ ಅವರವರ ಮನೋಭಾವಕ್ಕೆ ಅನುಗುಣವಾಗಿ ಪ್ರಯತ್ನಗಳನ್ನು ಮುಂದುವರೆಸಿ ಅದಕ್ಕೆ ತಕ್ಕ ಪ್ರತಿಫಲಗಳನ್ನು ಹೊಂದುತ್ತಾರೆ."
"ಮಾಡಿದ ಕೆಲಸಕ್ಕೆ ಪ್ರತಿಫಲವುಂಟಾಗದು ಎಂದು ಹೇಳಿದರೆ, ಎಲ್ಲರೂ ತಮ್ಮ ವಿಧಿಲಿಖಿತವನ್ನು ನಂಬಿಕೊಂಡು ಯಾವುದೇ ಕೆಲಸವನ್ನು ಮಾಡದೇ ಉದಾಸೀನರಾಗಿ ಕೈಕಟ್ಟಿ ಕುಳಿತುಕೊಳ್ಳುತ್ತಾರೆ. ಆಗ ಅವರ ಕೆಲಸವು ನಪುಂಸಕನನ್ನು ಗಂಡನಾಗಿ ಪಡೆದ ಸ್ತ್ರೀಯ ಸ್ಥಿತಿಯಂತೆಯೇ ಇರುತ್ತದೆ."
"ಪುರುಷ ಪ್ರಯತ್ನವನ್ನು ಮಾಡುವವನಿಗೆ ಭಾಗ್ಯವು ಉಂಟಾಗುತ್ತದೆ, ದೈವವು ಅನುಕೂಲಿಸುತ್ತದೆ."
"ಪೂರ್ವದಲ್ಲಿ ಯಯಾತಿಯು ಸ್ವರ್ಗಭ್ರಷ್ಟನಾದ ನಂತರ ಅವನ ’ದೌಹಿತ್ರ’ನ (ಹೆಣ್ಣುಮೊಮ್ಮಗ) ಕರ್ಮದಿಂದಾಗಿ ಅವನಿಗೆ ಪುನಃ ಸ್ವರ್ಗಪ್ರಾಪ್ತಿಯಾಯಿತು."
"ಕೌರವರು ಪಾಂಡವರ ರಾಜ್ಯವನ್ನು ಅಪಹರಿಸಿದರು. ಆದರೆ ಪಾಂಡವರು, ತಮ್ಮ ಬಾಹುಬಲದಿಂದ ಅದನ್ನು ಪುನಃ ಸಂಪಾದಿಸಿಕೊಂಡರು. ತಾವು ದುರದೃಷ್ಟವಂತರೆಂದೂ, ದೈವಬಲವಿಲ್ಲದವರೆಂದೂ ದುಃಖಿಸುತ್ತಾ ಅವರು ಕೂರಲಿಲ್ಲ. ಪ್ರಯತ್ನವನ್ನು ಆರಂಭಿಸಿದ ಕೂಡಲೇ ಅವರಿಗೆ ದೈವಾನುಗ್ರಹವೂ (ಕೃಷ್ಣನ ರೂಪದಲ್ಲಿ) ಲಭಿಸಿತು."
"ತಪೋನಿರತರಾದ ಮುನೀಶ್ವರರು ಶಾಪವನ್ನು ಕೊಡಬಲ್ಲ ಶಕ್ತಿಯನ್ನು ಹೊಂದಿರುತ್ತಾರೆ. ಅವರಿಗೆ ಪುರುಷ ಪ್ರಯತ್ನದಿಂದಲೇ ಆ ಶಕ್ತಿಯು ಉಂಟಾಗುತ್ತದೆಯೇ ಹೊರತು ದೈವಬಲದಿಂದಲ್ಲ"
"ಒಂದು ಬೆಂಕಿಯ ಕಿಡಿಯು ಚಿಕ್ಕದಾಗಿದ್ದರೂ ಸಹ ಅದಕ್ಕೆ ದೈವಬಲವು ಜೊತೆಯಾದರೆ ಅದು ದಾವಾನಲವಾಗಿ ಬದಲಾಗಬಲ್ಲದು. ಅದೇ ವಿಧವಾಗಿ ಪುರುಷಪ್ರಯತ್ನವು ಚಿಕ್ಕದೇ ಆದರೂ ಸಹ ಅದಕ್ಕೆ ದೈವಬಲವು ಜೊತೆಯಾದರೆ ಅದು ಅದ್ಭುತಗಳನ್ನು ಸಾಧಿಸಬಲ್ಲುದು."
"ಎಣ್ಣೆ ಮುಗಿದ ನಂತರ ದೀಪವು ಆರಿಹೋಗುತ್ತದೆ. ಅದೇ ವಿಧವಾಗಿ ಪುರುಷಪ್ರಯತ್ನವು ಮುಗಿದ ಕೂಡಲೇ ದೈವವೂ ಸಹ ತನ್ನ ಕಾರ್ಯದಿಂದ ವಿಮುಖವಾಗುತ್ತದೆ."
"ಪ್ರಯತ್ನಶೂನ್ಯನಾದ ವ್ಯಕ್ತಿಯು ಧನವಿದ್ದರೂ ಸಹ ಅನುಭವಿಸಲಾರ. ಅಧಿಕಾರವಿದ್ದರೂ ಸಹ ಪರಿಪಾಲಿಸಲಾರ. ಆದರೆ ಪ್ರಯತ್ನಶೀಲನಾದವನು ಅಸಂಭವವಾದುದನ್ನೂ ಸಹ ಸಂಭವವಾಗುವಂತೆ ಮಾಡಬಲ್ಲ. ದೈವವಶಾತ್ ಅವನು ಧನ ಅಥವಾ ಅಧಿಕಾರವನ್ನು ಕಳೆದುಕೊಂಡರೂ ಸಹ ಅವುಗಳನ್ನು ಅವನು ಪುನಃ ಗಳಿಸಿಕೊಳ್ಳಬಲ್ಲ. ಅಂತಹವನು ಶ್ರೀರಾಮಚಂದ್ರನಂತೆ - ’ದೈವಸಂಪಾದಿತೋ ದೋಷೋ ಮಾನುಷೇಣ ಮಯಾಜಿತಃ - ದೈವವು ಉಂಟು ಮಾಡಿದ ದೋಷಗಳನ್ನು ನಾನು ಮನುಷ್ಯ ಪ್ರಯತ್ನದಿಂದ ಜಯಿಸಿದೆ’ ಎಂದು ಹೇಳಬಲ್ಲ."
"ಆದ್ದರಿಂದ ಯುಧಿಷ್ಠಿರಾ! ಪುರುಷ ಪ್ರಯತ್ನವೇ ದೈವಬಲವನ್ನು ಅನುಕೂಲಕರವಾಗಿ ಮಾರ್ಪಡಿಸಿಕೊಳ್ಳಬಲ್ಲುದು"
*****
(ಆಧಾರ - ಶ್ರೀಯುತ ದೋನೇಪುಡಿ ವೆಂಕಯ್ಯನವರು ತೆಲುಗಿನಲ್ಲಿ ರಚಿಸಿರುವ ಭೀಷ್ಮ ಯುಧಿಷ್ಠಿರ ಸಂವಾದ ಅರ್ಥಾತ್ ರಾಜನೀತಿ ಶಾಸ್ತ್ರ ಎಂಬ ಗ್ರಂಥದಿಂದ ಆಯ್ದ ಭಾಗದ ಅನುವಾದ. ಈ ಸರಣಿಯನ್ನು ಈ ಹಿಂದೆ ಮೊಗಹೊತ್ತಗೆ - ಫೇಸ್ ಬುಕ್ಕಿನಲ್ಲಿ ನನ್ನ ವ್ಯಕ್ತಿಗತ ಪುಟದಲ್ಲಿ ಪ್ರಕಟಿಸಲಾಗಿತ್ತು).
ಚಿತ್ರಕೃಪೆ: ಗೂಗಲ್
ಹಿಂದಿನ ಲೇಖನ ಭಾಗ - ೨೨ ಭೀಷ್ಮ ಯುಧಿಷ್ಠಿರ ಸಂವಾದ: ಇಂದ್ರ ಶುಕ ಸಂವಾದ ಓದಲು ಈ ಕೆಳಗಿನ ಕೊಂಡಿಯನ್ನು ನೋಡಿ https://sampada.net/blog/%E0%B2%AD%E0%B2%BE%E0%B2%97-%E0%B3%A8%E0%B3%A8-...
Comments
ಉ: ಭಾಗ - ೨೩ ಭೀಷ್ಮ ಯುಧಿಷ್ಠಿರ ಸಂವಾದ: ವಶಿಷ್ಠ ಬ್ರಹ್ಮ ಸಂವಾದ...
ಈ ಲೇಖನದ ಮುಂದಿನ ಭಾಗ - ೨೪ ಭೀಷ್ಮ ಯುಧಿಷ್ಠಿರ ಸಂವಾದ: ವಶಿಷ್ಠ ಬ್ರಹ್ಮ ಸಂವಾದ ಅರ್ಥಾತ್ ದೈವಬಲವೋ ಪುರುಷಪ್ರಯತ್ನವೋ! ಓದಲು ಈ ಕೆಳಗಿನ ಕೊಂಡಿಯನ್ನು ನೋಡಿhttps://sampada.net/blog/%E0%B2%AD%E0%B2%BE%E0%B2%97-%E0%B3%A8%E0%B3%AA-...
In reply to ಉ: ಭಾಗ - ೨೩ ಭೀಷ್ಮ ಯುಧಿಷ್ಠಿರ ಸಂವಾದ: ವಶಿಷ್ಠ ಬ್ರಹ್ಮ ಸಂವಾದ... by makara
ಉ: ಭಾಗ - ೨೩ ಭೀಷ್ಮ ಯುಧಿಷ್ಠಿರ ಸಂವಾದ: ವಶಿಷ್ಠ ಬ್ರಹ್ಮ ಸಂವಾದ...
ಮೇಲಿನ ಪ್ರತಿಕ್ರಿಯೆಯಲ್ಲಿರುವ ಕೊಂಡಿಯಲ್ಲಿರುವುದು ಭಾಗ - ೨೪ ಭೀಷ್ಮ ಯುಧಿಷ್ಠಿರ ಸಂವಾದ: ಭಂಗಾಸ್ವನನ ಉಪಾಖ್ಯಾನ ಅಥವಾ ಸಂಸಾರ ಸುಖ ಯಾರಿಗೆ ಹೆಚ್ಚು? ಅಚಾತುರ್ಯಕ್ಕಾಗಿ ಕ್ಷಮೆಯಿರಲಿ ಮಿತ್ರರೆ :)