ಶುದ್ಧ ಕನ್ನಡ?

2.88889

ನ್ನಡದ ಆಡು ಮಾತು ಬೇರೆ ಭಾಷೆಯ ಅನೇಕ ಪದಗಳನ್ನು ಸಹಜವಾಗಿ ಒಳಗೊಳ್ಳುತ್ತದೆ. ಮಾತನಾಡುವಾಗ, ಕೇಳಿಸಿಕೊಳ್ಳುವಾಗ ಇದು ವಿಚಿತ್ರ ಅನ್ನಿಸುವುದಿಲ್ಲ. ಆದರೆ ಬರೆಯುವ ಕನ್ನಡ ಮಾತ್ರ ಅತ್ಯಂತ ಪ್ಯೂರ್ ಆಗಿರಬೇಕು ಅನ್ನುವ ಭ್ರಮೆ ನಮಗಿದೆ. ಹೌದೆ?
ಕನ್ನಡ ಬರವಣಿಗೆಯಲ್ಲಿ ಸಂಸ್ಕೃತಪದಗಳನ್ನು ಒಪ್ಪಿಕೊಳ್ಳುತ್ತೇವೆ. ಆದರೆ ಇಂಗ್ಲಿಷ್ ಪದಗಳ ಬಗ್ಗೆ ಮಡಿವಂತಿಕೆ ತೋರುತ್ತೇವೆ. ಹೀಗೇಕೆ?
ಬರವಣಿಗೆಯ ಕನ್ನಡದಲ್ಲಿ ಇಂಗ್ಲಿಷ್ ಪದಗಳು ಬಂದರೆ ಅದು ಹಾಸ್ಯಕ್ಕಾಗಿ, ಅಥವ ತಾಂತ್ರಿಕ ವಿಷಯಗಳಲ್ಲಿ ಮಾತ್ರ ಎಂಬ ಮಡಿವಂತಿಕೆ ಏಕೆ?
ದಿನಬಳಕೆಯಲ್ಲಿ ಬಳಸುವ ವರ್ಡ್ಸ್ ಗಳನ್ನೆಲ್ಲ ನಮ್ಮ ರೈಟಿಂಗ್ ನಲ್ಲೂ ಯೂಸ್‌ಮಾಡಲು ಹೆಸಿಟೇಟ್ ಮಾಡುವುದೇಕೆ? ಆಡುಮಾತಿಗೆ ಇಲ್ಲದ ಮಡಿವಂತಿಕೆ ಬರವಣಿಗೆಗಷ್ಟೇ ಏಕೆ?
ಇಲ್ಲಿಟರೇಟ್ಸ್ ಎಂದು ಕರೆಯುತ್ತೇವಲ್ಲ ಅವರು ಕೂಡ ಇಂಗ್ಲಿಷ್ ಮಿಕ್ಸ್ ಮಾಡೇ ಮಾತಾಡುತ್ತಾರೆ. ಕನ್ನಡ ಬರವಣಿಗೆಗೆ ಯಾಕೆ ಈ ಅನ್‌ನೆಸೆಸರಿ ಕಟ್ಟುಪಾಡು?
ನಿಮಗೆ ಏನನ್ನಿಸುತ್ತದೆ? ಕಾರಣ ಏನಿರಬಹುದು? ಬರವಣಿಗೆ ಕೂಡ ಫ್ರೀಯಾಗಿ ಇರಬೇಕಲ್ಲವಾ?
ಓ.ಎಲ್.ಎನ್

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಮಾತುಗಳು ನೂರಕ್ಕೆ ನೂರು ಸತ್ಯ ಸಾರ್, ಭಾಷೆ ಬೆಳೆಯಬೇಕೆಂದರೆ ಅದು ಬೇರೆಯ ಭಾಷೆಗಳ ಪದಗಳನ್ನು ಅಳವಡಿಸಿಕೊಳ್ಳಲೇಬೇಕು. ಮಡಿವಂತಿಕೆ ತೋರಿಸುವುದರಿಂದ ಭಾಷೆ ಬೆಳೆಯುವುದಿಲ್ಲ. ಇಂಗ್ಲೀಷ್ ಬೆಳೆದದ್ದೇ ಹಾಗೆ. ಒಂದು ಕೋನದಿಂದ ನೋಡಿದರೆ ಇಂಗ್ಲೀಷ ಸ್ವಂತ ಭಾಷೆ ಅಲ್ಲವೇ ಅಲ್ಲ. ಅದೊಂದು ಖಿಚಡಿ ಭಾಷೆ. ಭಾರತ ಸರಕಾರದವರು ಹಿಂದಿಯನ್ನು ಸರಕಾರೀ ಕೆಲಸ ಕಾರ್ಯಗಳಲ್ಲಿ ಬೆಳೆಸಲು ರಾಜಭಾಷೆ ಅಂತ ೧೯೬೩ರಲ್ಲಿ ಪ್ರಾರಂಭಿಸಿದರು. ಅದರಲ್ಲಿ ಹೇಳಿಕೊಡುವ ಮೊದಲ ಪಾಠವೇ ಇದು. ಲಿಪಿ ಮಾತ್ರ ದೇವನಾಗರಿ ಇರಲಿ. ಇನ್ನು ಬರವನಣಿಗೆಯಲ್ಲಿ ಹಿಂದಿ ಉಪಯೋಗಿಸಿ, ತಕ್ಕ ಪದ ಗೊತ್ತಾಗದಿದ್ದರೆ ಇಂಗ್ಲೀಷೆನ್ನೇ ದೇವನಾಗರಿ ಲಿಪಿಯಲ್ಲಿ ಬರೆಯಿರಿ. ಹಾಗೆ ನೋಡಿದರೆ ಕನ್ನಡ ಭಾಷೆಯಲ್ಲಿ ಸಂಸ್ಕೃತದ ಸಂಬಂಧ ಇರುವುದರಿಂದ ಬಹಳ ಸುಲಭವಾಗಿ ಬೆಳೆಯಬಹುದು. ನನ್ನ ಅನಿಸಿಕೆ ಸರಿಯೇ ಸರ್! ತವಿಶ್ರೀನಿವಾಸ

Sir, I dont think that a Language will grow if it accepts other language words. I am SURE IT WILL DIE if it accepts other langauge words. Though the name of the language remains but without its own words. There are many languages in this world which dont have a lipi but which can only be spoken. if a language goes on accepting words then... that Language will be the first language which has only lipi and cannot be spoken. I dont think accepting and using other language words will guide us towards Globalisation. Knowing English is enough to guide us towards Globalisation.

ಹೊಸ ಪದಗಳನ್ನು ಆತ್ಮೀಯತೆಯಿಂದ ಸ್ವೀಕರಿಸುವ ದೊಡ್ಡತನವಿರಬೇಕು, ವಿನಯ್. ಇಂಗ್ಲಿಷ್ ವಿಶ್ವದಾದ್ಯಂತ ಹರಡಿಕೊಂಡು ಠೀವಿಯಿಂದ ಇಂದು ನಮ್ಮಲ್ಲಿ ನಿಮ್ಮಲ್ಲಿ ವಿಶ್ವದೆಲ್ಲೆಡೆ 'ಪ್ರೆಸ್ಟೀಜಿಯಸ್' ಭಾಷೆಯಾಗಿ ಮನೆಮಾಡಿಲ್ಲವೆ? (ನೀವೇ ನೋಡಿ, ಈಗ ನಡೆಯುತ್ತಿರುವಂತೆ ನಡೆದರೆ, ಕನ್ನಡ ಭಾಷೆ ಖಂಡಿತ ಸಾಯುತ್ತದೆಯೆಂದು ತಿಳಿಸುವುದಕ್ಕೆ ಸ್ವತಃ ಇಂಗ್ಲಿಷಿನಲ್ಲಿ ಮಾರುದ್ದ ಕಾಮೆಂಟ್ ಹಾಕಿದ್ದೀರ) ಇದಕ್ಕೆ ಕಾರಣ ಏನೆಂದು ನೀವೆಂದಾದರೂ ಆಲೋಚನೆ ಮಾಡಿದ್ದೀರಾ? ಆಂಗ್ಲ ಭಾಷೆಯಲ್ಲಿ, ಫ್ರೆಂಚ್, ಲ್ಯಾಟಿನ್, ಕೊನೆಗೆ ಸಂಸ್ಕೃತ ಮೂಲದ ಪದಗಳೂ ಇವೆ! ನಮ್ಮ ಭಾಷೆಯು 'ಪ್ಯೂರ್' ಆಗಿರಬೇಕು, ಅದನ್ನು ನಾಲ್ಕು ಗೋಡೆಗಳ ಮಧ್ಯೆ ಕೂಡಿಹಾಕಿ 'ಶುದ್ಧ ಕನ್ನಡ'ದ ಆನಂದ ಪಡೆಯಬೇಕು ಎನ್ನುವುದು ಭಾಷೆಯ ಬೆಳವಣಿಗೆಗೆ ಕಡಿವಾಣ ಹಾಕುವಂತದ್ದು.

ನಾನು ಹೇಳಿದ್ದು... ಕನ್ನಡದಲ್ಲಿ ಅನ್ಯ ಭಾಷೆಯ ಪದಗಳನ್ನು ಬಲವಂತವಾಗಿ ಸೇರಿಸುವುದಕ್ಕೆ. ಅನ್ಯ ಭಾಷೆಯನ್ನು ಉಪಯೋಗಿಸಬೇಡಿ ಎಂದಲ್ಲ. ಹೌದು ಇಂಗ್ಲೀಷ್ ವಿಶ್ವ ಭಾಷೆ. ಆದರೆ ಅದು ಯಾರ ಸ್ವಂತ ಭಾಷೆ ಆಗಿ ಉಳಿದಿಲ್ಲ. ಅದಕ್ಕೆ ನೋಡಿ.. ಇಂಗ್ಲೀಷ್ ತನ್ನ ಮೂಲ ಸ್ವರೂಪವನ್ನೆ ಕಳೆದುಕೊಳ್ಳುತ್ತಿದೆ. American English, Australian English, UK English ಅಂತ ಆಗಿರೋದು. ಹೆಸರಿಗೆ English, ಅಷ್ಟೆ.

"ಎಲ್ಲರೂ ಕನ್ನಡ ಪದಗಳ್ನ ಉಪಯೋಗ್ಸಕ್ಕೆ ಸ್ಟಾರ್ಟ್ (ಆರಂಭ ನ ಬಿಟ್ಟು ಜನ ಶುರು ಅಂತಾರೆ) ಮಾಡಿದ್ರೆ....."

ಮೇಲೆ ಹೇಳಿದಂತೆ ನಾವು ಕನ್ನಡ ಪದನ (ನಾನು ವರ್ಡ್ ಅನ್ನೋ ಪದನ ಉಪಯೋಗ್ಸೋದು ನಿಲ್ಸಿದ್ದು, ಪದ ಉಪಯೋಗಿಸಿ ಮಾತಾಡಕ್ಕೆ ಪ್ರಾರಂಭಿಸಿದ ಮೇಲೆ) ಉಪಯೋಗಿಸಿ ಮಾತಾಡಕ್ಕೆ ಆರಂಭಿಸಿದರೆ ಹಂಗೆ ಜನ ಮತ್ತೆ ನಮ್ಮ ಭಾಷೆನ ಉಪಯೋಗಿಸ್ತಾರೆ.... ಜಾಗತೀಕರಣ/ಗ್ಲೋಬಲೀಕರಣ ಅನ್ನೋ ಹೆಸ್ರಲ್ಲಿ ಸುಮಾರು ಕನ್ನಡ ಪದಗಳು ಕಳೆದು ಹೋಗ್ತಿವೆ...ಪ್ರೆಸ್ಟೀಜ್ (ಪ್ರತಿಷ್ಠೆ) ವಿಷಯ ಅಂದ್ಕೊಂಡು ಜನ ಆಂಗ್ಲ ಪದಗಳ ಬಳಕೆ ಪ್ರಾರಂಭಿಸಿದಾರೆ...ಅದನ್ನ ಕಮ್ಮಿ ಮಾಡ್ಬೇಕು....

ಹೊಸ ಆವಿಷ್ಕಾರ ಆದಾಗ, ಹೊಸ ಪದಗಳು (science(vignaana bariyoke ಬರಹ help nodilla) / technology) ಬಂದಾಗ ಅದನ್ನ ಒಪ್ಕೊಬಹುದು, ನಮ್ಮ ಭಾಷೆಗೆ ಸೇರ್ಸ್ಕೊಬಹುದು....ಇರೋ ಪದಗಳ್ನ ನುಂಗ್ತಾ ಹೋದ್ರೆ, ಕನ್ನಡ ಪದಗಳು ಹಾಗೆ ಆಡು ಭಾಷೆಯಿಂದ ಕಣ್ಮರೆ ಆಗಿ ಬರಿ ನಿಘಂಟಿನಲ್ಲಿ ಮಾತ್ರ ಉಳ್ಕೊಳ್ಳುತ್ತೆ ಅನ್ಸುತ್ತೆ....

~~~~~~~~~~~~~~~
"ನಾನು ಕನ್ನಡದ ಕಂದ"
~~~~~~~~~~~~~~~

ನಮಸ್ಕಾರ ಜಗದೀಶರೇ,

ನಿಮ್ಮ ಬರಹ ಚೆನ್ನಾಗಿದೆ. ಒಂದೇ ಒಂದು ಸರಿಪಡಿಕೆ ಸೂಚಿಸಬೇಕೆಂದಿರುವೆ. ತಪ್ಪು ತಿಳಿಯಬೇಡಿ. ವಿಜ್ಞಾನ ಎಂದು ಕನ್ನಡದಲ್ಲಿ ಕಾಣಿಸಲು ಇಂಗ್ಲೀಷಿನಲ್ಲಿ - vij~JAna ಎಂದು ಬರೆಯಬೇಕು.

ವಂದನೆಗಳೊಂದಿಗೆ
---
ತವಿಶ್ರೀನಿವಾಸ

ನಿನ್ನೆ ರಾತ್ರಿ ಮಳೆಯಿದ್ದ ಕಾರಣ, ಕಛೇರಿಯಲ್ಲಿ ಕೂತಿದ್ದೆ, ಆಗ ನನಗೆ ಬರಹ ಹೆಲ್ಪ್ (ಅದು ಇರೋದೆ ಹಾಗೆ, ಸಹಾಯ ಅನ್ನೋ ಪದ ಬಳಸಿಲ್ಲ) ನೋಡೊ ಅಷ್ಟು ತಾಳ್ಮೆ (ಕಣ್ಣು ನಿದ್ದೆ ಮಾಡಲು ಹಂಬಲಿಸುತ್ತಿತ್ತು) ಇರಲಿಲ್ಲ. ಅದಕ್ಕೆ ಹಾಗೆ ಬರೆದೆ (ಯಾರಾದರು ಅದನ್ನು ತಿಳಿಸುತ್ತಾರೆ ಎಂಬ ಯೋಚನೆಯಲ್ಲಿ, ಇಲ್ಲವಾದಲ್ಲಿ ಇವತ್ತು ನೋಡೋಣ ಅಂದುಕೊಂಡಿದ್ದೆ)...
ತುಂಬ ಧನ್ಯವಾದಗಳು...

~~~~~~~~~~~~~~~
"ನಾನು ಕನ್ನಡದ ಕಂದ"
~~~~~~~~~~~~~~~

ಮೊದಲಿಗೆ ಸಂಪದದ ನಿರ್ಮಾತೃಗಳಿಗೆ ನನ್ನ ವಂದನೆಗಳು, ಅಭಿನಂದನೆಗಳು. ಕನ್ನಡದಲ್ಲಿ ಈ ರೀತಿಯ ಒಂದು ತಾಣವೂ ಇರಲಿಲ್ಲ. ಈಗ ಬಂದಿದೆ. ನೋಡಿ ಆನಂದವಾಯ್ತು. ಈಗ ವಿಷಯಕ್ಕೆ ಬರೋಣ. ನನಗೆ ಕನ್ನಡದಲ್ಲೇ ಅಲ್ಲ, ಬೇರೆ ಯಾವ ವಿಷಯದಲ್ಲಿಯೂ ಮಡಿವಂತಿಕೆ ಇಷ್ಟವಿಲ್ಲ. ಒಂದು ಭಾಷೆ ಬೆಳೆಯುವುದು ಬೇರೆ ಭಾಷೆಗಳ ಸಂಪರ್ಕದಿಂದ. ಸಂಪರ್ಕವೆಂದ ಮಾತ್ರಕ್ಕೆ ಅದನ್ನು ಸಾರಾಸಗಟಾಗಿ ಆಮದು ಮಾಡುವುದೆಂದಲ್ಲ. ಬೇರೆ ಭಾಷೆಗಳು ನಮ್ಮ ಭಾಷೆಯ ಮೇಲೆ ಮೂಡಿಸುವ ಪ್ರಭಾವ ಹೆಚ್ಚು ಎಂದು ಹೇಳಿದೆ. ಆದರೆ ಎತನ್ಮಧ್ಯೆ ಭಾಷೆಯೊಂದಕ್ಕೆ ತನ್ನತನವೆಂಬುದು ಇರುತ್ತದೆ. ಆ ತನ್ನತನವನ್ನು ಕಳೆದುಕೊಳ್ಳದೆ ಏನು ಮಾಡಿದರೂ ಒಳ್ಳೆಯದೇ! ಈಗ ನನ್ನ father, ನಮ್ಮ mother ಎಂದು ಹೇಳುವಾಗ - ಕನ್ನಡದಲ್ಲಿ ಅಪ್ಪ, ಅಮ್ಮ ಪದಗಳು ಇರಲಿಲ್ಲವೇ ಎಂಬ ಪ್ರಶ್ನೆ ಏಳುತ್ತದೆ. ಇಲ್ಲಿ ಆಂಗ್ಲಪದದ ಉಪಯೋಗ ಅಷ್ಟು ಸರಿಕಾಣುವುದಿಲ್ಲ. ಆದರೆ ಕಾರಿಗೆ ನಾಲ್ಕುಚಕ್ರದವಾಹನ ಎಂದೋ ಚತುಶ್ಚಕ್ರಿಕೆಯೆಂದೋ ಕರೆದರೆ ಅದು ಹಾಸ್ಯಾಸ್ಪದವಾಗುತ್ತದೆ. ಇವೆರಡರ ಮಧ್ಯೆಯಲ್ಲಿದ್ದರೆ ಕನ್ನಡ ಭಾಷೆ ತನ್ನ ಸೊಗಡನ್ನೂ ಸೊಗಸನ್ನೂ ಉಳಿಸಿಕೊಳ್ಳುತ್ತದೆ. ಈ ಮಧ್ಯೆಯ ಗೆರೆ ಯಾವುದು ಎಂದು ಹೇಳುವರು ನಮ್ಮಲ್ಲಿರುವ ಸಾಹಿತಿಗಳು ಮತ್ತು ತಿಳಿದವರು. ಭಾಷೆಯ ಸರಿಯಾದ ಹದವೇನೆಂಬುದನ್ನು ನೋಡಿದಾಗ ನಮಗೇ ಗೊತ್ತಾಗುತ್ತದೆ. ಹೀಗೆ ನೋಡಿದಾಗ ನಿಸಾರ್ ಅಹಮದ್ ಅವರ ಭಾಷಾಪ್ರಯೋಗ ನಮಗೆ ಮಾದರಿಯಾಗಬಹುದು. ಹಿಂದೊಮ್ಮೆ ಒಂದು ಭಾಷಣದಲ್ಲಿ ಅವರು ಯಾರೋ "ಐಕ್ಯತೆ" ಎಂಬ ಪದವನ್ನುಪಯೋಗಿಸಿ ಪ್ರಶ್ನೆ ಬರೆದಿದ್ದರು. ಇವರು ಎಲ್ಲರ ಮುಂದೆಯೇ "ಇದೇನು ಐಕ್ಯತೆಯೇ? ಎಂಥ ತಪ್ಪು ಪ್ರಯೋಗ ಮಾಡಿದ್ದಾರೆ! ಕನ್ನಡ ಬರದವರ ಪ್ರಶ್ನೆಗೆ ನಾನು ಉತ್ತರಿಸುವುದಿಲ್ಲ" ಎಂದು ಮುಂದಿನ ಪ್ರಶ್ನೆಗೆ ಹೋದರು. (ಏಕತೆ ಅಥವಾ ಐಕ್ಯ ಸರಿಯಾದ ಪ್ರಯೋಗ). ಆದರೆ ಅದೇ ಭಾಷಣದಲ್ಲಿ - shaving brush - ಎಂಬ ಪದಕ್ಕೆ ಹಿಂದಿಯಲ್ಲಿ "ಮುಖಮಂಡನ ಝಾಡು" ಎಂಬ ಅನುವಾದ ಎಷ್ಟು ಹಾಸ್ಯಾಸ್ಪದವಾದುದು ಎಂದು ಸಭಿಕರನ್ನು ನಗಿಸಿದರು. ಸಂಸ್ಕೃತದ ಅತಿರೇಕದ ಪ್ರಯೋಗ ಕೂಡ ಒಳ್ಳೆಯದಲ್ಲ. ಕೆ.ಎಸ್.ನ ಅವರು ತಮ್ಮ ಒಂದು ಸುಂದರ ಕವನದಲ್ಲಿ ಇದೇ ಹೇಳಿದ್ದಾರೆ. "ಕನ್ನಡ ಮಾಧ್ಯಮವಾದರೆ ಸಾಲದು ಕೇವಲ ಮಕ್ಕಳಿಗೆ. ಮೊದಲಾಗಲಿ ಕವಿಗಳಿಗೆ" (ಸರಿಯಾದ ಸಾಲು ನೆನಪಿಲ್ಲ). ಅದೇ ಕವನದಲ್ಲಿ - "ಸಂಸ್ಕೃತ ಹಿತವಾಗಿ ಮಿತವಾಗಿ ಬೆರೆಯಲಿ" ಎಂದು ಹೇಳಿದ್ದಾರೆ. ಆದರೆ ಆಂಗ್ಲಭಾಷೆಯಷ್ಟು ಸಂಸ್ಕೃತಭಾಷೆ ನಮಗೆ ಪರಕೀಯವಲ್ಲ. ಆದ್ದರಿಂದ ಸಂಸ್ಕೃತವನ್ನು ಮಿತವಾಗಿ ಹಿತವಾಗಿ ಬೆರೆಸಿದರೆ ಒಳ್ಲೆಯದು. ಆದರೆ ತೀರ mummy daddy sister ಎಂದು ಅರಚುವುದು ನನ್ನ ಪ್ರಕಾರ ಕನ್ನಡಕ್ಕೆ ಮಾಡುವ ದ್ರೋಹವೇ ಸರಿ. ನನ್ನೆರಡು ಪೈಸೆ.

ನೀವು ನಿಸಾರ್ ಬಗ್ಗೆ ಬರೆದುದರಲ್ಲಿ ನನಗೆ ಸ್ವಲ್ಪ ಅನುಮಾನವಿದೆ. ಅವರ "ಸ್ವಯಂಸೇವೆಯ ಗಿಳಿಗಳು" ಕವನದಲ್ಲಿ "ಕುಚಾಯಿಸುವ" ಎಂಬ ಪದ ಇದೆ (ಕಿಚಾಯಿಸುವ ಅಲ್ಲ). ಇಲ್ಲಿ ಅವರು ಸಂಸ್ಕೃತದ ಕುಚ ಪದವನ್ನು ಕ್ರಿಯಾಪದವನ್ನಾಗಿಸಿ ಹೊಸ ಪ್ರಯೋಗ ಮಾಡಿದ್ದಾರೆ. ಈ ರೀತಿಯ ಹಲವು ಪ್ರಯೋಗಗಳನ್ನು ಅವರು ಮಾಡಿದ್ದಾರೆ. ಆದರೆ ಐಕ್ಯತೆ ತಪ್ಪು ಎಂಬುದನ್ನು ನಾನೂ ಒಪ್ಪುತ್ತೇನೆ. ಈ "ತೆ" ಯ ರೋಗ ಹಲವರಿಗೆ ಇದೆ. ಸಂಸ್ಕೃತದ ಪದಗಳಿಗೆ ವಿಶೇಷಣ ರೂಪ ಬೇಕಾದಾಗ ಈ "ತೆ" ಸೇರಿಸುತ್ತಾರೆ. ಆದರೆ ಅವರು ತಪ್ಪು ಮಾಡುವುದು ಈಗಾಗಲೇ ವಿಶೇಷಣದ ರೂಪದಲ್ಲಿರುವ ಪದಕ್ಕೆ ಮತ್ತೆ ಹೆಚ್ಚಿನ "ತೆ" ಸೇರಿಸುವ ಮೂಲಕ. ಕೆಲವು ಉದಾಹರಣೆಗಳು- ತಪ್ಪು ಒಪ್ಪು ಮೂಲ ರೂಪ ಪಾವಿತ್ರ್ಯತೆ ಪಾವಿತ್ರ್ಯ ಪವಿತ್ರ ಪ್ರಾಮುಖ್ಯತೆ ಪ್ರಾಮುಖ್ಯ ಪ್ರಮುಖ ಪ್ರಾವೀಣ್ಯತೆ ಪ್ರಾವೀಣ್ಯ ಪ್ರವೀಣ ಈ ಪದಗಳಿಗೆ "ತೆ" ಸೇರಿಸಲೇ ಬೇಕೆಂದುಕೊಂಡಿರುವವರು ಈ ರೀತಿ ಬರೆಯಬಹುದು- ಪವಿತ್ರತೆ ಪ್ರಮುಖತೆ ಪ್ರವೀಣತೆ ನನಗಂತೂ ಈ ಬಳಕೆ ಇಷ್ಟವಿಲ್ಲ. ಸಿಗೋಣ, ಪವನಜ

ನಾನು ನಿಸಾರರ ಕೆಲವು ಕವನಗಳನ್ನು ಮಾತ್ರ ಓದಿದ್ದೇನೆ. ಆದ್ದರಿಂದ ಅಲ್ಲಲ್ಲಿ ಅವರು "ತಪ್ಪು" ಮಾಡಿದ್ದರೆ ನನಗೆ ಗೊತ್ತಿಲ್ಲ. ನಾನು ಹೇಳಲು ಹೊರಟಿದ್ದು ಭಾಷೆಯಲ್ಲಿರಬೇಕಾದಂಥ ಹದದ ಬಗ್ಗೆ. ತೀರಾ ಸಂಸ್ಕೃತಭೂಯಿಷ್ಠವೂ ಆಗದೆ, ತೀರಾ ಆಂಗ್ಲಮಯವೂ ಆಗದೆ ಸರಿಯಾಗಿ ಸುಲಭವಾಗಿ ಮೂಡಿಬರುವ ಭಾಷೆಯ ಬಗ್ಗೆ ಹೇಳುತ್ತ ಅವರು ಮಾಡಿದ್ದ ಭಾಷಣ ನನಗೆ ನೆನಪಿಗೆ ಬಂದಿತ್ತು. ಅದನ್ನೇ ಇಲ್ಲಿ ಜ್ಞಾಪಿಸಿಕೊಂಡೆ. ಭಾಷಣದಲ್ಲಿ ಮೂಡಿಬಂದ ಈ ಅಂಶ ಅನುಕರಣೀಯವಲ್ಲವೇ? ಹೌದು, ಈ ತಪ್ಪು "ತೆ" ಪ್ರಯೋಗವೆಂಬ ರೋಗ ಕನ್ನಡದಲ್ಲಿ ಈ ನಡುವ ಹೆಚ್ಚು ಕಾಣಿಸುತ್ತಿದೆ. ನೀವು ಸೂಚಿಸಿರುವ ಉದಾಹರಣೆಗಳು ಸೂಕ್ತವಾಗಿವೆ. ನನ್ನ ಪ್ರಕಾರ ಹೊಸ ಪ್ರಯೋಗಗಳು ಲಘು ಬರವಣಿಗೆಗಳಲ್ಲಿ ಚೆನ್ನಾಗಿ ಕಾಣುತ್ತವೆ. ಗಂಭೀರ ಲೇಖನವೊಂದರಲ್ಲಿ ಈ ರೀತಿ "ಕುಚೇ"ಷ್ಟೆ ಮಾಡಿದರೆ ಅಷ್ಟು ಸಮಂಜಸವಾಗಿ ಕಾಣುವುದಿಲ್ಲ. ಆ ರೀತಿ ತಮಾಷೆಯ ಪ್ರಯೋಗಗಳು ಕೆಲವು ಸಂಸ್ಕೃತಪದ್ಯಗಳಲ್ಲಿಯೂ ಕಾಣಸಿಗುತ್ತವೆ. ಆದರೆ ಈ ಪದ್ಯಗಳು ಚಾಟು ಅಥವಾ ಹಾಸ್ಯಪದ್ಯಗಳು ಎಂದು ಗಮನಿಸಬೇಕಾಗಿದೆ. ಈಗ ಡಿ.ವಿ.ಜಿ ಯವರು ತಮಾಷೆಗೆಂದು ಆಶುವಾಗಿ ರಚಿಸಿದ "ವಯಂ ತು ಶ್ರೀಮದ್-ಬ್ಯಾಳೀಹುಳಿ-ಪಳದ್ಯ-ಕೋಸಂಬ್ರಿ-ರಸಿಕಾಃ" (ಸುಮಾರಾಗಿ) ಎಂಬ ಹಾಸ್ಯಶ್ಲೋಕದ ಪಾದವಿದೆ. ಇಲ್ಲಿ ಬ್ಯಾಳೀಹುಳಿ-ಪಳದ್ಯಗಳೆಲ್ಲವೂ ಕನ್ನಡಪದಗಳೇ. ಸುಮ್ಮನೆ ಸಂಸ್ಕೃತ ಛಂದಸ್ಸಿನಲ್ಲಿ ಸೇರಿಸಿದ್ದಾರೆ. ಇಲ್ಲಿ ಚೆನ್ನಾಗಿ ಕಂಡರೂ ತಮ್ಮ ಜೀವನಧರ್ಮಯೋಗದಲ್ಲಿ ಈ ರೀತಿಯ ಮಿಶ್ರಭಾಷೆಯ ಪದ್ಯ ಸೇರಿಸಿದ್ದರೆ ಸ್ವಲ್ಪವೂ ಚೆನ್ನಾಗಿರುತ್ತಿರಲಿಲ್ಲ. ಹಾಗೆಯೇ ನಿಸಾರರೂ ಮಾಡಿರಬಹುದಲ್ಲವೇ? ಅಂದ ಹಾಗೆ, "ಸ್ವಯಂಸೇವೆಯ ಗಿಳಿಗಳು" ಹಾಸ್ಯಪ್ರೇರಕ ಅಥವಾ ವಿಡಂಬನಾತ್ಮಕ ಪದ್ಯವೇ? ಹೆಸರು ನೋಡಿದರೆ ಹಾಗೆಯೇ ಕಾಣುತ್ತದೆ. ನೀವೇನಂತೀರಿ ? -ನೀಲಗ್ರೀವ

"ಸ್ವಯಂಸೇವೆಯ ಗಿಳಿಗಳು" ವಿಡಂಬನಾತ್ಮಕ ಕವನ. ಕಾಲೇಜುಗಳಲ್ಲಿ ಸ್ವಯಂಸೇವಿಕೆಯರಾಗಿ ದುಡಿಯುವ ಯುವತಿಯರ ಇತರೆ ಹವ್ಯಾಸಗಳನ್ನು ಅವರು ಇಲ್ಲಿ ವಿಡಂಬನಾತ್ಮಕವಾಗಿ ವಿವರಿಸಿದ್ದಾರೆ. ಸಿಗೋಣ, ಪವನಜ

ಹಾಗೆ ಬರೆದಿದ್ದರೂ ಮಾರ್ಕು ಕೊಡಿ ಸಾರ್..

ಪ್ರಾವಿಣ್ಯತೆ - ಐಕ್ಯತೆ ತರಹದ ಪದಗಳು ತಪ್ಪು ಅನ್ನೋದು ಬಹಳಷ್ಟು ಮಂದಿಗೆ ಗೊತ್ತಿಲ್ಲ. ಗೊತ್ತಿದ್ದೂ ಬಳಸುವವರು ಕೂಡ ಇದ್ದಾರೆ! ನಮ್ಮ ಶಿಕ್ಷಕ ಮಿತ್ರರೊಬ್ಬರ ಪ್ರಕಾರ ಎಸ್ ಎಸ್ ಎಲ್ ಸಿ ಕನ್ನಡ ಉತ್ತರ ಪತ್ರಿಕೆ ತಿದ್ದುವಾಗ ಇಂತಹ ತಪ್ಪುಗಳಿಗೆ ಏನು ಮಾಡಬೇಕು ಎಂದು ತಮ್ಮ ಸೂಪರ್ ವೈಸರ್ ರನ್ನು ಕೇಳಿದಾಗ ಅವರು ಹೇಳಿದ್ದು ಹೀಗೆ "ಹಾಗೆ ಬರೆದಿದ್ದರೂ ಮಾರ್ಕು ಕೊಡಿ ಸಾರ್.. ನಮ್ಮಲ್ಲಿ ಹೀಗೆ ಕೂಡಾ ಬರೆದು ಪ್ರಚಲಿತದಲ್ಲಿದೆ ತಾನೆ .."
ಪ್ರಚಲಿತ ಅನ್ನುವುದು ಅಸಾಧಾರಣ ಬಲವುಳ್ಳದ್ದು.. ಭಾಷೆಯನ್ನೇ ಬದಲಿಸಿ ಬಿಡುತ್ತೆ..
"ಡೋಂಟ್ ವರಿ ಮಾಡ್ಕೋಬೇಡಿ ಸಾರ್.." ಪ್ರಚಲಿತದಲ್ಲಿ don't worry sir ಅನ್ನುವುದರ ಶುದ್ಧ ಕನ್ನಡ ಭಾಷಾಂತರ ತಾನೆ!! ನನಗಂತೂ ತಪ್ಪು ಅಂತ ಗೊತ್ತಿದ್ದೂ ಹೀಗೆಯೇ ಬಳಸೋಣ ಅನ್ನಿಸುವಷ್ಟು ಹಿಡಿಸಿದೆ ಈ "ಡೋಂಟ್ ವರಿ ಮಾಡ್ಕೋಬೇಡಿ ಸಾರ್.." ಅನ್ನೋ Phrase!!!

- ಗೋಪೀನಾಥ ರಾವ್

ನೀವು ಹೇಳಿದ್ದು ಸರಿ. ಪ್ರಚಲಿತವೇ ಅಂತಿಮ. ಅದಕ್ಕೇ ಹೇಳುವುದು -ಸರಿ ಯಾವುದೆಂದು ಗೊತ್ತಿರುವವರು ಸರಿಯಾದುದನ್ನೇ ಬಳಸಿ ಮತ್ತು ಇತರರಿಗೆ ತಿಳಿಸಿ ಎಂದು. ಈಗಾಗಲೇ ಭಾಷೆ ತುಂಬ ಕುಲಗೆಟ್ಟು ಹೋಗಿದೆ. ಇರುವುದನ್ನಾದರೂ ಉಳಿಸಲು ಪ್ರಯತ್ನಿಸೋಣ.

ಕೆಲವು ತಪ್ಪು ಒಪ್ಪುಗಳನ್ನು ತಿಳಿಯೋಣ

ತಪ್ಪು ಒಪ್ಪು
ತಿಳುವಳಿಕೆ ತಿಳಿವಳಿಕೆ
ಜಿಗುಪ್ಸೆ ಜುಗುಪ್ಸೆ
ನಾಗರೀಕ ನಾಗರಿಕ
ರಸಾಯನಿಕ ರಾಸಾಯನಿಕ
ಜಾತ್ಯಾತೀತ ಜಾತ್ಯತೀತ
ಪೂರ್ವಾಗ್ರಹ ಪೂರ್ವಗ್ರಹ

ಭಾಷೆಯಲ್ಲಿ ಮಡಿವಂತಿಕೆ ಬೇಡ ಎಂಬುದನ್ನು ಒಪ್ಪೋಣ. ಹಾಗೆಂದು ಹೇಳಿ ಸರಿಯಾಗಿ ಗೊತ್ತಿರುವ ನಾವು ಸರಿಯಾಗಿ ಬಳಸುವುದನ್ನು ಮಾತ್ರ ನಿಲ್ಲಿಸುವುದು ಬೇಡ. ಕನಿಷ್ಠ ನಮ್ಮ ಕಾಲಕ್ಕಾದರೂ ಅದು ಸರಿಯಾಗಿರಲಿ.

ಸಿಗೋಣ,
ಪವನಜ
-----------
[http://www.vishvakannada.com/|Vishva Kannada]
Think globally, Act locally

ಉೞಿದದ್ದೆಲ್ಲ ಸರಿ. ತಿಳುವಳಿಕೆ ಅಥವಾ ತಿಳಿವಳಿಕೆಗೆ ’ತಿಳಿ’ಯೇ ಮೂಲವಾಗಿದ್ದರೂ ಪ್ರತ್ಯಯ ಸೇರುವಾಗ ಕೊನೆಯ ಹ್ರಸ್ವಸ್ವರ ಬದಲಾಗುವುದಱಿಂದ ತಿಳಿವಳಿಕೆ, ತಿಳುವಳಿಕೆ ಎರಡೂ ಸರಿ. ಇನ್ನಷ್ಟು ಉದಾಹರಣೆ ಬರೆ+ಪ(ಹ)=ಬರಹ/ಬರ‍ೆಹ, ಬರವಣಿಗೆ/ಬರೆವಣಿಗೆ ಮಱವು/ಮಱೆವು/ಮಱೆಹು. ನೆನೆ+ಪು(ಹು)=ನೆನೆವು/ನೆನಪು/ನೆನೆಹು ಎನ್ನಬಹುದಾದರೂ ನೆನಪು/ನೆನಹು/ನೆನವು ಬೞಕೆಯಲ್ಲಿರುವ ಶಬ್ದಗಳು. ನಡೆ+ತೆ=ನಡತೆ, ನಡೆ+ವಳಿಕೆ=ನಡವಳಿಕೆ ಕಡಿ+ಮೆ=ಕಡಮೆ/ಕಡಿಮೆ ಎರಡೂ ಇದೆ. ಹರಿ=ಹರಿವು/ಹರವು ಎರಡೂ ಇವೆ. ನಿಱಿ= ನಿಱತೆ/ನಿಱಿಗೆ ಹಾಗೆ ಇತ್ಯಾದಿ ಇತ್ಯಾದಿ ಹೇೞಲು ಬಹಳವೇ ಇದೆ. ನಲಿ+ವು=ನಲವು/ನಲಿವು, ಒಲಿ(ಪ್ರೀತಿಸು)+ಮೆ=ಒಲುಮೆ, ಒಲಿ+ವು=ಒಲವು. ಇಲ್ಲೆಲ್ಲ ಇಕಾರ ಅಕಾರ ಅಥವಾ ಉಕಾರವಾಗಿರುವುದಕ್ಕೆ ಉದಾಹರಣೆ. ಇನ್ನಷ್ಟು ಉದಾಹರಣೆಗಳು :- ಅಱಿಪು->ಅಱಿಹು->ಅಱುಹು=ತಿಳಿಸು (ತಿಳಿಯುವಂತೆ ಹೇೞು) ತಿಳಿಪು->ತಿಳಿಹು->ತಿಳುಹಿ (ಉದಾ:- ತಿಳುಹಿ(ತಿಳಿಹಿ) ಮತಿಯನು ಎನ್ನ ಜಿಹ್ವೆಗೆ) ಅೞಿಪು->ಅೞಿಪು->ಅೞುಪು=ಅೞಿ(ನಾಶವಾಗು)ಯುವಂತೆ ಮಾಡು (ಉದಾ:- ಪದವಿಟ್ಟೞು(ೞಿ)ಪದೊಂದಗ್ಗಳಿಕೆ ಅರ್ಥ:ಪದವಿಟ್ಟು ಅೞಿಸದಂತಿರುವುದೊಂದು ಹೆಚ್ಚುಗಾಱಿಕೆ (ಕುಮಾರವ್ಯಾಸನಿಗೆ))

ಮಾನ್ಯರೇ, ಅನುಮಾನವನ್ನು ಬಗೆಹರಿಸಿಕೊಳ್ಳಲು ಹೀಗೆ ಕೇಳುತ್ತಿರುವೆ. ಜಾತಿ+ ಅತೀತ = ಜಾತ್ಯತೀತ ಹಾಗೆಯೇ ಪೂರ್ವ + ಆಗ್ರಹ + ಪೂರ್ವಾಗ್ರಹ ಅಲ್ಲವೇ ? ದಯಮಾಡಿ ಇದು ಹೇಗೆ ತಪ್ಪು/ಸರಿ ತಿಳಿಸುವಿರಾ ?

ಆದರೆ ’ಜಾತ್ಯತೀತ’ ಎನ್ನಬೇಕಾದ್ದನ್ನು ’ಜಾತ್ಯಾತೀತ’, ’ಪೂರ್ವಾಗ್ರಹ’ವನ್ನು ’ಪೂರ್ವಗ್ರಹ’ ಹಾಗೆಯೇ ’ಜನಾರ್ದನ’ ವನ್ನು ’ಜನಾರ್ಧನ’ ಎನ್ನುವುದು ತಪ್ಪು ರೂಪಗಳು. ಜಾತ್ಯತೀತ, ಪೂರ್ವಾಗ್ರಹ ಹಾಗೂ ಜನಾರ್ದನಗಳು ಸರಿ ರೂಪಗಳು. ಹಾಗೆಯೇ ಜುಗುಪ್ಸೆ. ಜಿಗುಪ್ಸೆ ತಪ್ಪು ರೂಪ.

ನನ್ನ ಪ್ರಕಾರ ಎರಡೂ ಸರಿ. ಎಡೆಬಿಡದೆ ದೀರ್ಘಸ್ವರಗಳು ಬರುವ ಶಬ್ದಗಳಲ್ಲಿ ಕೆಲವನ್ನು ಹ್ರಸ್ವಗೊಳಿಸುವುದು ಕನ್ನಡದ ಜಾಯಮಾನ ಉದಾಹರಣೆಗೆ ಅನಾಹೂತ(ಸಂಸ್ಕೃತ)=ಅನಾಹುತ(ಕನ್ನಡ) ಸಮಾಧಾನ(ಸಂಸ್ಕೃತ)=ಸಮಧಾನ(ಕೆಲ ಕನ್ನಡಿಗರು). ಪಂಪನ ಪದ್ಯವೊಂದಱಲ್ಲಿಯೂ ಈ ತೆಱನ ಪ್ರಯೋಗವೊಂದಿದೆ. ಅದೀಗ ನೆನಪಿಗೆ ಬರುತ್ತಿಲ್ಲ. ನೆನಪಿಗೆ ಬಂದಾಗ ಉದಾಹರಿಸುತ್ತೇನೆ. ಆ ನಿಟ್ಟಿನಲ್ಲಿ ಪೂರ್ವಾಗ್ರಹ(ಸಂಸ್ಕೃತ)=ಪೂರ್ವಗ್ರಹ ಕೂಡ ಸರಿ.

ಪೂರ್ವಗ್ರಹ ಮತ್ತು ಪೂರ್ವಾಗ್ರಹ ಎರಡೂ ಸರಿ, ಆದರೆ ನೀವು ಹೇಳಿದ ಕಾರಣಕ್ಕೆ ಅಲ್ಲ. ನಿಮ್ಮ ಪ್ರಕಾರ ಪೂರ್ವಾಗ್ರಹ ಎಂಬ ಸಂಸ್ಕೃತ ಪದ ಅಪಭ್ರಂಶಗೊಂಡು ಪೂರ್ವಗ್ರಹವಾಗಿದೆ ಎಂದಾಗುತ್ತದೆ, ಆದರೆ ಅದು ಸರಿಯಲ್ಲ. ಎಡೆಬಿಡದೆ ದೀರ್ಘಸ್ವರಗಳು ಬರುವ ಶಬ್ದಗಳಲ್ಲಿ ಕೆಲವನ್ನು ಹ್ರಸ್ವಗೊಳಿಸುವುದು ಕನ್ನಡದ ಜಾಯಮಾನವಾದರೂ, ಈ ಉದಾಹರಣೆಗೆ ಅದು ಹೊಂದುವುದಲ್ಲ. ಪೂರ್ವಗ್ರಹ ಎಂಬ ಪದ ಸಂಸ್ಕೃತ ನಿಯಮಗಳ ರೀತಿ ಕೂಡ ಸಾಧು ಪ್ರಯೋಗವೇ. ಉತ್ತರ ಪದಗಳಾದ ಗ್ರಹ ಮತ್ತು ಆಗ್ರಹಕ್ಕೆ ಪ್ರೊ. ಜಿ. ವೆಂಕಟಸುಬ್ಬಯ್ಯ ಅವರ ಪ್ರಿಸಂ ಕನ್ನಡ-ಕನ್ನಡ (ಕ್ಲಿಷ್ಟಪದ) ನಿಘಂಟುವಿನ ಅರ್ಥ ಹೀಗಿವೆ: ಗ್ರಹ = (ಸಂ) ೧ ಹಿಡಿಯುವುದು, ಹಿಡಿತ ೨ ತೆಗೆದುಕೊಳ್ಳುವುದು, ಸ್ವೀಕರಿಸುವುದು ೩ ನವಗ್ರಹಗಳಲ್ಲೊಂದು ೪ ದುಷ್ಟಶಕ್ತಿ, ಭೂತ, ಪಿಶಾಚಿ ಇತ್ಯಾದಿ ಆಗ್ರಹ = (ಸಂ) ೧ ತೆಗೆದುಕೊಳ್ಳುವುದು ೨ ಆಕ್ರ ಮಣ ೩ ಬಲವಂತ ೪ ಆಸಕ್ತಿ ೫ ನೈತಿಕಶಕ್ತಿ ೬ ಕೋಪ ಅವುಗಳ ಕ್ರಿಯಾಸೂಚಕ ನಾಮಪದದ ಅರ್ಥವನ್ನು ಹಿಡಿದರೆ ಗ್ರಹ = ಹಿಡಿಯುವುದು, ಹಿಡಿತ ಎಂದಾಗುತ್ತದೆ. ಸಾಮಾನ್ಯವಾಗಿ ಸಂಸ್ಕೃತದಲ್ಲಿ "ಆ" ಎಂಬ ವಿಶೇಷಣವನ್ನು ಕ್ರಿಯೆಯ ಬಲ/ದಿಕ್ಕು/ವಿಸ್ತಾರ/ಎತ್ತರ/ಆಳಗಳನ್ನು ಸೂಚಿಸಲು ಬಳಸುತ್ತಾರೆ (ಆಚ್ಛಾದ, ಆವರಣ, ಆಗಮನ ಇತ್ಯಾದಿ). ಆದ್ದರಿಂದ ಆ’ಗ್ರಹ’ ಎಂಬುದರ ಅರ್ಥ ಬಲವಾಗಿ ಹಿಡಿದುಕೊಳ್ಳುವುದು ಎಂದಾಗುತ್ತದೆ. ಮೇಲಿನ ನಿಘಂಟು ಅರ್ಥ ಕೂಡ ಇದನ್ನೇ ಸೂಚಿಸುತ್ತದೆ (೧, ೨ ಮತ್ತು ೩ ನೋಡಿ). ಆದ್ದರಿಂದ ಪೂರ್ವಗ್ರಹ ಮತ್ತು ಪೂರ್ವಾಗ್ರಹ ಎರಡೂ ಸಂಸ್ಕೃತಸಾಧುವಾದ ಪ್ರಯೋಗಗಳೇ. ಆದ್ದರಿಂದ, ಪೂರ್ವಗ್ರಹ = ಮೊದಲೇ (ಅರ್ಥ/ಅಭಿಪ್ರಾಯವನ್ನು) ಹಿಡಿದುಕೊಳ್ಳುವುದು; ಪೂರ್ವಾಗ್ರಹ = ಅದೇ ಅರ್ಥ/ಅಭಿಪ್ರಾಯವನ್ನು ಬಲವಾಗಿ ಹಿಡಿಯುವುದು ಎಂದು ಸಾಧಿಸಬಹುದು. ಪೂರ್ವಗ್ರಹಕ್ಕೆ ನಿಘಂಟು ಅರ್ಥ (ಮೇಲಿನ ನಿಘಂಟಿನಲ್ಲಿಯೇ) "ಯಾವುದಾದರೊಂದು ವಸ್ತು, ವಿಷಯ ಯಾ ವ್ಯಕ್ತಿಯ ವಿಷಯಕವಾಗಿ ಪರಿಶೀಲನೆಗೆ ಮುಂಚಿತವಾಗಿಯೇ ಮಾಡಿಕೊಂಡ (ಅನುಕೂಲ ಯಾ ಪ್ರತಿಕೂಲ) ಅಭಿಪ್ರಾಯ" ಎಂದಿದೆ. ಪೂರ್ವಾಗ್ರಹ ಎನ್ನುವ ಪದ ನಿಘಂಟಿನಲ್ಲಿಲ್ಲ, ಆದರೆ ಅದು ಅಶುದ್ಧ ಪ್ರಯೋಗವಲ್ಲ. ಮೇಲೆ ಹೇಳಿದಂತೆ, ಪೂರ್ವಾಗ್ರಹವು ಪೂರ್ವಗ್ರಹಕ್ಕಿಂತ ಬಲವಾದ ಪೂರ್ವಾಭಿಪ್ರಾಯ ಅಷ್ಟೇ

ಅದೂ ಸರಿ. ಆ ನಿಟ್ಟಿನಲ್ಲಿ ಸಮ+ಧಾನ= ಸರಿಯಾಗಿ ಮನಸ್ಸನ್ನು ಹಿಡಿದಿಟ್ಟುಕೊಳ್ಳುವುದು ಎಂಬರ್ಥದಲ್ಲಿ ಸಮಧಾನ ಕೂಡ ಸರಿಯೇ.

:) ಕೇವಲ ಶಬ್ದಸಾಮ್ಯದಿಂದ ಪದಗಳನ್ನು ಒಡೆದರೆ ಅರ್ಥ ಉತ್ಪತ್ತಿಯಾಗುವುದಿಲ್ಲ, ಏಕೆಂದರೆ ಇವೆಲ್ಲಾ ಸಹಜ ಪದಗಳಲ್ಲ, ಸಾಧಿತ ಪದಗಳು (ಈಗಾಗಲೇ ಇರುವ ಬೇರೆಬೇರೆ ಪದ/ಪ್ರತ್ಯಯ/ಉಪಸರ್ಗಗಳನ್ನು ಸೇರಿಸಿ ಪಡೆದ ಪದಗಳು), ಆದ್ದರಿಂದ ಅವುಗಳನ್ನು ಸೇರಿಸಿದ ಕ್ರಮದಲ್ಲೇ ಬೇರ್ಪಡಿಸಬೇಕು. ಈ ಉದಾಹರಣೆಯಲ್ಲಿ ಸಮಾಧಾನ ಎನ್ನುವುದು ಸಮ+ಧಾನ ಆಗುವುದಿಲ್ಲ. ಆಧಾನ ಎಂಬ ನಾಮಪದಕ್ಕೆ "ಸಂ" (ಸಮ/ಸಮಾ ಅಲ್ಲ) ಎಂಬ ಉಪಸರ್ಗ ಸೇರಿ ಸಮಾಧಾನ ಆಗಿದೆ. ಆಧಾನ ಎಂದರೆ (ತನ್ನೊಳಗೆ) ತೆಗೆದುಕೊಳ್ಳುವುದು. ಸಂ ಎನ್ನುವ ಉಪಸರ್ಗಕ್ಕೆ ಸಾಮಾನ್ಯವಾಗಿ ಚೆನ್ನಾಗಿ/ತುಂಬಾ/ಪದೇಪದೇ ಇತ್ಯಾದಿ ಅರ್ಥಗಳು ಸಂದರ್ಭಕ್ಕನುಗುಣವಾಗಿ ಬರುತ್ತದೆ. ಆದ್ದರಿಂದ ಸಂ+ಆಧಾನ = ಸಮಾಧಾನ ಎಂದರೆ ಬಂದದ್ದನ್ನು ಪಡೆದು ಚೆನ್ನಾಗಿ ಅಡಗಿಸಿಟ್ಟುಕೊಳ್ಳುವುದು, ಬಂದದ್ದನ್ನು ನುಂಗಿಕೊಳ್ಳುವುದು, ಭಾವನೆಗಳನ್ನು ಅಡಗಿಸಿಟ್ಟುಕೊಳ್ಳುವುದು ಇತ್ಯಾದಿ ಅರ್ಥಗಳು ಉಂಟಾಗುತ್ತದೆ. ಇನ್ನು ಆಧಾನ ಎಂಬ ಪದವೇ ಆ ಎಂಬ ಉಪಸರ್ಗದಿಂದ ಆದದ್ದು. ಮೂಲ ಪದ ಧಾನ. ನೀವು ಹೇಳುವ ಪ್ರಕಾರ ಮಾಡಬೇಕೆಂದರೆ ಸಮ+ಧಾನ ಅಲ್ಲ, ಸಂ + ಧಾನ = ಸಂಧಾನ ಎಂದಾಗುತ್ತದೆ. ಇದಕ್ಕೆ ಸೇರಿಸುವುದು, (usually ಅಸ್ತ್ರವನ್ನು) ಗುರಿ"ಇಡುವುದು" ರಾಜಿ ಮಾಡುವುದು ಇತ್ಯಾದಿ ಅರ್ಥಗಳಿವೆ. ಎರಡೂ ಕಡೆಯವರನ್ನು ಕೂಡಿಸಿ ರಾಜಿ ಮಾಡುವುದಕ್ಕೆ ಸಂಧಾನ ಮತ್ತು ಸಮಾಧಾನಗಳೆರಡನ್ನೂ ಬಳಸಬಹುದೇನೋ, ಆದರೆ ಈ ಸೀಮಿತ ಸನ್ನಿವೇಶ ಬಿಟ್ಟರೆ ಎರಡೂ ಪದಗಳ ಅರ್ಥವ್ಯಾಪ್ತಿ ತೀರ ಬೇರೆಯದೇ. ಅದೇನೇ ಆಗಲಿ, ಸಮಧಾನವಂತು ಆಗುವುದಿಲ್ಲ :)

ಉತ್ತರ ನಿಮ್ಮ ಪ್ರಶ್ನೆಯಲ್ಲಿಯೇ ಇದೆ. ಜಾತಿ + ಅತೀತ ಎಂಬ ಪದದಲ್ಲಿ "ತಿ" ಎಂಬ ಅಕ್ಷರ "ಇ" ಎಂಬ ಸ್ವರದಿಂದ ಕೊನೆಗೊಳ್ಳುತ್ತದೆ. ಇ ಮತ್ತು ಅ ಕೂಡಿದರೆ ಅದು "ಯ" ಎಂದು ರೂಪಾಂತರಗೊಳ್ಳುತ್ತದೆಯೇ ಹೊರತು "ಯಾ" ಅಲ್ಲ (ಜಾತಿ + ಆತಿತ ಎಂದಿದ್ದರೆ ಅದು ಜಾತ್ಯಾತೀತ ಎಂದಾಗುತ್ತಿತ್ತು, ಆದರೆ ಇಲ್ಲಿರುವುದು ಅತೀತ, ಆತೀತ ಅಲ್ಲ) ಆದರೆ ಮುಂದಿನ ಪದ ಪೂರ್ವ + ಆಗ್ರಹ ಎಂಬಲ್ಲಿ ನೀವು ಗಮನಿಸಿರಬೇಕು, ಆ ಎಂಬ ಸ್ವರವಿದೆ. ಅ + ಆ ಸ್ವರಗಳು ಸಂಧಿಯಾದಾಗ ಅದು "ಆ" ಎಂಬ ರೂಪ ಪಡೆಯುತ್ತದೆ. ಮೇಲಿನ ಎರಡೂ ಉದಾಹರಣೆಗಳು ಸಂಸ್ಕೃತ ಪದಗಳು. ಮೊದಲನೆಯ ಉದಾಹರಣೆ "ಯಣ್ ಸಂಧಿ" ಮತ್ತು ಎರಡನೆಯದು "ಸವರ್ಣ ಧೀರ್ಘ ಸಂಧಿ. ಮತ್ತಷ್ಟು ಉದಾಹರಣೆಗಳು ಹರಿ + ಅಶ್ವ = ಹರ್ಯಶ್ವ (ಯಣ್ ಸಂಧಿ), ಕಾವ್ಯ + ಆಸ್ವಾದನೆ = ಕಾವ್ಯಾಸ್ವಾದನೆ (ಸವರ್ಣ ದೀರ್ಘ ಸಂಧಿ) ಮೇಲಿನ ಪದಗಳು ಕನ್ನಡ ಪದಗಳಾಗಿದ್ದರೆ ಅವಕ್ಕೆ ಕನ್ನಡದ ಸಂಧಿ ನಿಯಮಗಳು ಅನ್ವಯಿಸುತ್ತಿದ್ದುವು, ಮತ್ತು ಅವು ಕ್ರಮವಾಗಿ "ಆಗಮ ಸಂಧಿ" ಅಥವಾ "ಲೋಪ ಸಂಧಿ" ಆಗುತ್ತಿದ್ದುವು. ಉದಾಹರಣೆಗೆ ಕೋತಿ + ಆಟ = ಕೋತಿಯಾಟ (ಕೋತ್ಯಾಟ ಅಲ್ಲ). ಇದು ’ಯ’ಕಾರ ಆಗಮ ಸಂಧಿ; ಬಿಲ್ಲ + ಆಳು = ಬಿಲ್ಲಾಳು (’ಅ’ಕಾರ ಲೋಪ ಸಂಧಿ). ಹಾಗೆಯೇ ನಮ್ಮ + ಅಪ್ಪ = ನಮ್ಮಪ್ಪ (ಮತ್ತೆ ’ಅ’ಕಾರ ಲೋಪ ಸಂಧಿ. ಇದು ಸಂಸ್ಕೃತ ಪದವಾಗಿದ್ದರೆ ಸವರ್ಣದೀರ್ಘವಾಗಿ ನಮ್ಮಾಪ್ಪ ಆಗುತ್ತಿತ್ತು) ಮಂಜುನಾಥ http://nannabaraha.b...

>>ಸರಿ ಯಾವುದೆಂದು ಗೊತ್ತಿರುವವರು ಸರಿಯಾದುದನ್ನೇ ಬಳಸಿ ಮತ್ತು ಇತರರಿಗೆ ತಿಳಿಸಿ ಎಂದು. ಈಗಾಗಲೇ ಭಾಷೆ ತುಂಬ ಕುಲಗೆಟ್ಟು ಹೋಗಿದೆ. ಇರುವುದನ್ನಾದರೂ ಉಳಿಸಲು ಪ್ರಯತ್ನಿಸೋಣ...... ಹಾಗೆಂದು ಹೇಳಿ ಸರಿಯಾಗಿ ಗೊತ್ತಿರುವ ನಾವು ಸರಿಯಾಗಿ ಬಳಸುವುದನ್ನು ಮಾತ್ರ ನಿಲ್ಲಿಸುವುದು ಬೇಡ. ಕನಿಷ್ಠ ನಮ್ಮ ಕಾಲಕ್ಕಾದರೂ ಅದು ಸರಿಯಾಗಿರಲಿ. << ನಿಮ್ಮ ಈ ಮಾತುಗಳು ಹಿಡಿಸಿದವು.

>>>ಭಾಷೆ ಬೆಳೆಯಬೇಕೆಂದರೆ ಅದು ಬೇರೆಯ ಭಾಷೆಗಳ ಪದಗಳನ್ನು ಅಳವಡಿಸಿಕೊಳ್ಳಲೇಬೇಕು. ಮಡಿವಂತಿಕೆ ತೋರಿಸುವುದರಿಂದ ಭಾಷೆ ಬೆಳೆಯುವುದಿಲ್ಲ. ಇಂಗ್ಲೀಷ್ ಬೆಳೆದದ್ದೇ ಹಾಗೆ. ಒಂದು ಕೋನದಿಂದ ನೋಡಿದರೆ ಇಂಗ್ಲೀಷ ಸ್ವಂತ ಭಾಷೆ ಅಲ್ಲವೇ ಅಲ್ಲ. ಅದೊಂದು ಖಿಚಡಿ ಭಾಷೆ.<<< ಆಂಗ್ಲ ಭಾಷೆ "ಖಿಚಡಿ" ಭಾಷೆ ಅನ್ನುವುದನ್ನು ಒಪ್ಪಿಕೊಂಡವರು, ಈ ಕನ್ನಡವನ್ನೂ ಇನ್ನೊಂದು "ಖಿಚಡಿ" ಭಾಷೆ ಮಾಡಬೇಕೇಕೆ? ಒಂದು ಸಾಲಲ್ವೇ "ಖಿಚಡಿ" ಭಾಷೆ? ನಮ್ಮ ಭಾಷೆಯನ್ನೂ "ಖಿಚಡಿ" ಯನ್ನಾಗಿಸದೇ ಇದ್ದ ಹಾಗೇಯೇ ಉಳಿಸೋಣವೇ? ಹೀಗೆ ಉಳಿಸ್ಕೊಳ್ಳುವುದು ಸ್ವಲ್ಪ ಕಷ್ಟ, ಒಪ್ಪುತ್ತೇನೆ.ಆದರೆ ಅಸಾಧ್ಯ ಏನಲ್ಲ.

ಪುಟ್ಟದಾಗುತ್ತಿರುವ ಜಗತ್ತಿನಲ್ಲಿ ದಿನೇ ದಿನೇ ಉಳಿದವರೊಂದೆಗೆ, ಇತರ ಭಾಷೆಯವರೊಂದಿಗೆ interaction ಹೆಚ್ಚಾಗುತ್ತಿದ್ದಂತೆ, ಕನ್ನಡದಲ್ಲಿಲ್ಲದ ಪದಗಳು ಬಹುಶಃ ಬೇರೆ ಭಾಷೆಗಳಿಂದ ಬಂದೇ ಬರುತ್ತವೆ. ಹೊರಗಿನಿಂದ ಹೀಗೆ ಬಂದ ಪದಗಳ ಬಳಕೆ ಕನ್ನಡಕ್ಕೆ ದಕ್ಕೆಯೇನೂ ಉಂಟುಮಾಡುವುದಿಲ್ಲವೆಂಬುದು ನನ್ನ ಅಭಿಪ್ರಾಯ. ಇಂಗ್ಲಿಷ್ ಈಗ ಬೆಳೆದು ನಿಂತಿರುವುದೇ ಇತರ ಭಾಷೆಗಳ ಪದಗಳನ್ನು ಆತ್ಮೀಯತೆಯಿಂದ ಸ್ವೀಕರಿಸಿದ್ದಕ್ಕಾಗಿ. 'ಗುರು' ಎಂಬುವುದು ಈಗ ಇಂಗ್ಲಿಷಿನಲ್ಲಿ ಅಡಕವಾಗಿಯೇ ಹೋಗಿದೆ! ನನಗೆ ತಿಳಿದಂತೆ ನೀವು ಪ್ರಸ್ತಾಪಿಸಿರುವ ಅಭಿಪ್ರಾಯ ನಮ್ಮ ನಿಮ್ಮೆಲ್ಲರದಷ್ಟೆ ಅಲ್ಲ, ಹಿಂದಿದ್ದ ಹಲವು ಪ್ರಮುಖ ಸಾಹಿತಗಳದ್ದೂ ಕೂಡ. (ಬಿ ಜಿ ಎಲ್ ಸ್ವಾಮಿಯವರು ಅವರ 'ಮೈಸೂರು ಡೈರಿ'ಯಲ್ಲಿ ಕೂಡ ಇದೇ ವಿಷಯದ ಬಗ್ಗೆ ಪ್ರಸ್ತಾಪಸಿದ್ದದಿದೆ) ಸುತ್ತಮುತ್ತಲಾಗುವ ಬದಲಾವಣೆಗಳಿಗೆ ಅನುಗುಣವಾಗಿ ಭಾಷೆ ದೊಡ್ಡದಾಗಲೇಬೇಕು, ಹೊಸ ಪದಗಳು ಅಡಕವಾಗಲೇಬೇಕು - ಮಾತಿನಲ್ಲಿ ಮಾತ್ರವಲ್ಲ, ಸಾಹಿತ್ಯದಲ್ಲಿ ಕೂಡ :)

ಕನ್ನಡದಲ್ಲಿ ಪರಭಾಷೆಯ ಪದಗಳು ಬೇಕಾದಷ್ಟಿವೆ. ಅವುಗಳಲ್ಲಿ ಸಂಸ್ಕೃತದ ಪದಗಳೆ ಹೆಚ್ಚು. ಆಂಗ್ಲ ಭಾಷೆಯ ಪದಗಳೂ ಇವೆ. ಆದರೆ ನಾವಿಲ್ಲಿ ಗಮನಿಸಬೇಕಾದ ಅಂಶವೆಂದರೆ, ಕನ್ನಡದಲ್ಲಿ ಸರಿಯಾದ ಪದಗಳಿದ್ದರೂ ನಾವು ಸಂಸ್ಕೃತದ ಪದಗಳನ್ನೇಕೆ ಬಳಸಬೇಕು? ಉದಾಹರಣೆಗೆ, ನೇತ್ರಾಲಯ.... ಕನ್ನಡದಲ್ಲಿ ಕಣ್ಣಾಸ್ಪತ್ರೆ ಎಂದರೆ ಉತ್ತಮ ವಲ್ಲವೆ. ಇನ್ನೊಂದು.. ಮುಖ್ಯ ರಸ್ತೆ.. ಇದರ ಬದಲಿಗೆ.. ದೊಡ್ಡ ಬೀದಿ.. ಎಂದರೆ ಸರಿ. ನಾವು ಸಂಸ್ಕೃತ, ಉರ್ದು ಭಾಷೆಯ ಪದಗಳನ್ನು ಉಪಯೋಗಿಸಿದರೆ ಹೆಚ್ಚು ಘನತೆ ಎಂದುಕೊಂಡಿದ್ದೇವೆ. ಇದೇ ಕಾರಣದಿಂದ ಕನ್ನಡದಲ್ಲಿ ಇನ್ನೂ ಬೇರೆ ಭಾಷೆಯ ಪದಗಳು ನುಸುಳುತ್ತಿವೆ. ಆದರೆ ಆಂಗ್ಲ ಭಾಷೆಯ ವಿಚಾರದಲ್ಲಿ, ಆಧುನಿಕ ಯುಗದಲ್ಲಿ ಏಷ್ಟೋ ಪದಗಳು ಹುಟಿಕೊಂದಿವೆ. ಅವುಗಳ ಕನ್ನಡ ಸಮಾನಾಂತರ ಪದಗಳನ್ನು ರಚಿಸುವುದು ಅನಗತ್ಯ. ನಾವು ಕನ್ನಡದಲ್ಲಿ ಇರುವ ಪದಗಳನ್ನು ಬಳಸಿದರೆ ಕನ್ನಡದ ಜ್ಞಾನ ಹೆಚ್ಚುತ್ತದೆ

ನಿಮ್ಮ ಮಾತು ಸರಿ. ಆದರೆ ಎಲ್ಲ ಎಡೆಗಳಲ್ಲೂ ಕನ್ನಡ ಮಾತುಗಳನ್ನು ಹೊಸದಾಗಿ ರಚಿಸಿಕೊಳ್ಳುವುದು ಅನಗತ್ಯ. ನಮ್ಮ ದೃಷ್ಟಿಯಲ್ಲಿ ಆಗಬೇಕಾದ ಬದಲಾವಣೆ ಎಂದರೆ ಕನ್ನಡದಲ್ಲಿ ನಾವು ಬಳಸುತ್ತಿರುವ ಎಲ್ಲ ಪದಗಳೂ ಕನ್ನಡವೇ ಎಂಬ ತಿಳಿವಳಿಕೆ.

ಇದು ಇನ್ನೂ ನಮ್ಮಲ್ಲಿ ಮೂಡಿಲ್ಲ. ಕನ್ನಡಸಾಹಿತ್ಯ ಪರಿಷತ್ತಿನ ಕನ್ನಡ ಕನ್ನಡ ನಿಘಂಟಿನ ಶೇ ೬೦ ಭಾಗ ಸಂಸ್ಕೃತಪದಗಳೇ ಇವೆ. ಕನ್ನಡದ ಜನ ಮಾಮೂಲಾಗಿ ಬಳಸುತ್ತಿರುವ ಪಾಯಿಂಟು, ಕನ್ಸಿಡರು, ಅರ್ಜೆಂಟು, ಫೀಲಿಂಗು ಇಂಥ ಪದಗಳು ಕನ್ನಡ ಕನ್ನಡ ನಿಘಂಟುಗಳಲ್ಲಿ ಜಾಗ ಪಡೆದಿಲ್ಲ.

ಇಂಗ್ಲಿಷ್ ಮತ್ತು ಅರಾಬಿಕ್ ಮೂಲದ ಪದಗಳನ್ನು ಮಾತ್ರವೇ ಅನ್ಯಭಾಷೆಯ ಪದಗಳು ಎಂದು ಎಣಿಸುವುದೇಕೆ? ನಮ್ಮ ಭಾಷಾ ಮಡಿವಂತಿಕೆಗೆ ಅರ್ಥವಿಲ್ಲ. ಕನ್ನಡದ ಜನ ಬಳಸುತ್ತಿರುವ ಎಲ್ಲ ಪದಗಳೂ ಕನ್ನಡವೇ ಎಂದು ತಿಳಿದು ಬರವಣಿಗೆಯಲ್ಲೂ ಅವನ್ನು ಕನ್ನಡ ಲಿಪಿಯಲ್ಲಿ ಬಳಸೋಣ.

ನಾಗಭೂಷಣ

ಮಾರುಕಟ್ಟೆಯಲ್ಲಿ ಎರವಲು ಪದಕೋಶ ಎಂಬ ಹೆಸರಿನ ಪುಸ್ತಕ ಲಭ್ಯವಿದೆ. ನಾನು ಅದನ್ನು ಕೊಂಡುಕೊಂಡಿಲ್ಲ. ಆದುದರಿಂದ ಅದರಲ್ಲಿ ಇಂಗ್ಲೀಶ್ ಪದಗಳು ಸೇರಿಕೊಂಡಿವೆಯೇ ಎಂದು ತಿಳಿಸಲು ನನಗೆ ಸಾಧ್ಯವಿಲ್ಲ. ಸಿಗೋಣ, - ಪವನಜ

ಎರವಲು ಪದಕೋಶದಲ್ಲಿ ಸಂಸ್ಕೃತವನ್ನು ಹೊರತುಪಡಿಸಿ ಕನ್ನಡದಲ್ಲಿ ಬಳಕೆಯಾಗುತ್ತಿರುವ ಅನ್ಯಭಾಷಾ ಪದಗಳು ಇವೆ. ಇವನ್ನು ಎರವಲು ಪದಗಳು ಎಂದು ಕರೆದಿರುವ ಮನೋಧರ್ಮವನ್ನೇ ನಾನು ಪ್ರಶ್ನಿಸುತ್ತಿರುವುದು. ಕನ್ನಡದ ಜನ ಬಳಸುವ ಎಲ್ಲ ಪದಗಳು ಕನ್ನಡದ ಪದಗಳೇ ಎಂಬ ತಿಳಿವಳಿಕೆ ಮೂಡಬೇಕಲ್ಲವೆ? ಮನೆಗೆ ಬಂದ ಸೊಸೆ ಮನೆಯವಳೇ ಆಗುವುದಕ್ಕೆ ಎಷ್ಟು ಶತಮಾನ ಕಳೆಯಬೇಕು? ಕನ್ನಡವಲ್ಲದ ಸಂಸ್ಕೃತ ಮಿಶ್ರಿತ ಭಾಷೆ ಪ್ಯೂರ್ ಎಂದೂ ಇತರ ಭಾಷೆಯ ಪದಗಳ ಬಳಕೆಯಾದಾಗ ಶುದ್ಧತೆ ಇಲ್ಲವಾಯಿತೆಂದೂ ತಿಳಿಯುವುದು ಯಾಕೆ? ಅದೂ, ಈ ಸಂಗತಿ ಬರವಣಿಗೆಗೆ ಮಾತ್ರ ಅನ್ವಯಿಸುತ್ತದೆ, ಮಾತಿಗೆ ಅಲ್ಲ. ಇಂದು ಕನ್ನಡದ ಜನ ಬಳಸುತ್ತಿರುವ ಭಾಷೆಯ ಸ್ವರೂಪವನ್ನು ಕುರಿತು ಹೊಸ ವ್ಯಾಕರಣ, ಹೊಸ ವಿವರಣೆಗಳು ಅಗತ್ಯ ಅನ್ನಿಸುವುದಿಲ್ಲವೇ? ನಾಗಭೂಷಣ

ಹೌದು, ಈಗ ಹೊಸ ವ್ಯಾಕರಣ, ಹೊಸ ವಿವರಣೆಗಳ ಅಗತ್ಯವಿದೆ. ಈಗಿನ ವಿದ್ಯಾಭ್ಯಾಸ ಕ್ರಮ, ಚಿಂತನೆಗಳ ವೈಖರಿಗೆ ತಕ್ಕ ಹಾಗೆ ಆಡು ಭಾಷೆಯೂ ಬದಲಾಗುತ್ತಿದೆ. ಬರವಣಿಗೆಯೂ ಇದೇ ನಿಟ್ಟಿನಲ್ಲಿ ಸಾಗಬೇಕಾದ ಅನಿವಾರ್ಯತೆ ಇದೆ. ಇಲ್ಲದಿದ್ದಲ್ಲಿ ವಿಶ್ವದಲ್ಲಿ ನಮಗೆ ಸ್ಥಾನ ಮಾನ ಸಿಗಲಾರದು. ಬಾವಿಯೊಳಗಿನ ಕಪ್ಪೆಯಂತಾಗದೆ, ಪ್ರಪಂಚದಲ್ಲಿ ನಾವೂ ಒಂದಾಗಬೇಕು. ಜಗತ್ತಿನಲ್ಲಿ ನಮ್ಮ ಸ್ಥಾನವನ್ನು ಅರಿತು ಗ್ಲೋಬಲೀಕರಣವನ್ನು ಸ್ವಾಗತಿಸುವವರು, ಎರವಲು ಪದಗಳನ್ನು ಕನ್ನಡ ಪದಗಳೇ ಎಂದು ಸ್ವೀಕರಿಸಬೇಕು. ಹಾಗೇ ಸುಲಭವಾಗಿ ಅರ್ಥವಾಗುವ ಯಾವುದೇ ಭಾಷೆಯ ಪದಗಳನ್ನು ನಮ್ಮದಾಗಿಸಿಕೊಳ್ಳಬೇಕಿದೆ. ಮಸೂರ ಎನ್ನುವ ಪದ ತಲೆಯೊಳಗ ಸುಲಭವಾಗಿ ಸೇರುವುದಿಲ್ಲ. ಆದರೆ ಲೆನ್ಸ್ ಅಂದರೆ ಓದು ಬರದವನಿಗೂ ಅರ್ಥವಾಗುವ ಸನ್ನಿವೇಶದಲ್ಲಿ, ಲೆನ್ಸೇ ಕನ್ನಡ ಪದವೆಂದು ಸ್ವೀಕರಿಸುವ ಅವಶ್ಯಕತೆ ಇದೆ. ತವಿಶ್ರೀನಿವಾಸ

Sir, I totally oppose to the view of accepting other language words as Kannada Words. One example is the word used in your article 'Globalikarana'. Why should we use that word when there is kannada word 'Jagatikarana'. I accept that there are lot of words in Kannada which are from Sanskrit. But why should we use those when we have such a large number of words. many of us dont know even 25% of the words in Kannada ... why ? because we never mind to use kannada words. When ever we we want we use English, or Hindi. As I told in my previous article.. we think it is matter of prestige if we use English words. For example.. People say 'Nanna Brother..Nanna Sister' Why.. Cant we say Nanna tagi.. Nanna Anna.. Is it not nice to say like these. If we go on accepting other language words like this... I think Kannada will lose its Identity one day and will be called a 'Khichdi' Language with no own words and which only has a lipi.

ವಿನಯ್ ರವರೆ, ಸಾಧ್ಯವಾದಷ್ಟು ಕನ್ನಡದಲ್ಲಿ ಬರೆಯಿರಿ. ತಂತ್ರಜ್ಞಾನ ಇದ್ದೂ, ಕನ್ನಡವು ಗೊತ್ತಿದ್ದೂ, ಕನ್ನಡದಲ್ಲಿ ನಡೆಯುತ್ತಿರೋ ಮಾತುಕಥೆಯಲ್ಲಿ ಇಂಗ್ಲಿಷ್ ಏತಕ್ಕೆ?

ದಯವಿಟ್ಟು ಕ್ಷ್ಮಮಿಸಿ. ನಾನು ಲಿನಕ್ಸ್ ನಲ್ಲಿ ಇದ್ದೆ. ನನಗೆ ಬರಹ ಉಪಯೊಗಿಸುವುದಕ್ಕೆ ಗೊತ್ತು. ಕ ಗ ಪ ಕೀಲಿ ಮಣೆ ಗೊತ್ತಿಲ್ಲ. ತಕ್ಷಣ ಉತ್ತರಿಸಬೇಕೆಂದು ಇಂಗ್ಲೀಷ್ ನಲ್ಲಿ ಬರೆದೆ. ವಿಂಡೋಸ್ ನಲ್ಲಿ ಬಂದೇ ಉತ್ತರಿಸುತ್ತೇನೆ.

ನಾನೂ ಲಿನಕ್ಸ್ ನಲ್ಲೇ ಇರುವುದು, ಸ್ವಾಮಿ. ೨೪ ಘಂಟೆಗಳ ಕಾಲ ಲಿನಕ್ಸೇ ಉಪಯೋಗಿಸುವುದು. ಲಿನಕ್ಸಿನಲ್ಲೆ ಕನ್ನಡ ಸಪೋರ್ಟ್ ಸೇರಿಸಿಕೊಳ್ಳಿ. ಕಷ್ಟವಾದ ಕೆಲಸವೇನಲ್ಲ. ಮಾಹಿತಿಗೆ: http://kn.wikipedia.... ನೋಡಿ. ಲಿನಕ್ಸಿನಲ್ಲಿದ್ದೇನೆ, ಕನ್ನಡ ಬರೆಯುವುದಕ್ಕೆ ಆಗುವುದಿಲ್ಲವೆಂದು ಮಾತ್ರ ಕನ್ನಡದವರಿಗೆ ತಪ್ಪು ಮಾಹಿತಿ ನೀಡಬೇಡಿ :P

ಪ್ರಿಯ ವಿನಯ್, ನಿಮ್ಮ ಆತಂಕ ಅರ್ಥವಾಗುತ್ತದೆ. ಆದರೆ ನೋಡಿ ಯಾವುದೇ ಭಾಷೆ ದಿನ ನಿತ್ಯವೂ ಬಳಸುವ ಪದಗಳಲ್ಲಿ ಶೇ. ೭೦ ಅನ್ಯ ಭಾಷೆಯ ಪದಗಳೇ ಇರುತ್ತವೆ. ಈ ನಿಯಮಕ್ಕೆ ಯಾವ ಭಾಷೆಯೂ ಹೊರತಲ್ಲ. ಅನಕ್ಷರಸ್ಥರ ಮಾತಿನಲ್ಲೂ ಎಷ್ಟು ಇಂಗ್ಲಿಷ್ ಪದಗಳು ಬೆರೆತಿವೆ ಸ್ವಲ್ಪ ಗಮನಿಸಿ ನೋಡಿ. ಪದಗಳ ಸ್ವೀಕಾರ ಅಥವ ತಿರಸ್ಕಾರ ಕೇವಲ ಒಬ್ಬಿಬ್ಬರ ಅಥವ ಕೇವಲ ಅಭಿಮಾನದ ಧೋರಣೆಯಿಂದ ನಿರ್ಧಾರವಾಗುವುದಿಲ್ಲ. ಜೊತೆಗೇ ಭಾಷೆಯೊಡನೆ ಬೆರೆತಿರುವ ಸಾಮಾಜಿಕ ಧೋರಣೆಗಳೂ ಇರುತ್ತವೆ. ನಮ್ಮ ಬದುಕಿನಲ್ಲಿ ಇಂಗ್ಲಿಷ್ ಮೂಲದಿಂದ ಬಂದ ತಂತ್ರಜ್ಞಾನ, ಇಂಗ್ಲಿಷ್ ಮೂಲದಿಂದ ಬಂದ ತಿಳಿವಳಿಕೆ ಇವೆಲ್ಲ ಬೇರ್ಪಡಿಸಲಾಗದಂತೆ ಬೆರೆತಿವೆ. ನನ್ನ ಪ್ರಶ್ನೆ ಇಷ್ಟೇ-ಮಾತಿನಲ್ಲಿ ಇರದ ಮಡಿವಂತಿಕೆ ಬರಹದಲ್ಲಿ ಏಕಿರಬೇಕು? ಇನ್ನೊಂದು ಕುತೂಹಲದ ಸಂಗತಿ. ಕನ್ನಡವೂ ಸೇರಿದಂತೆ ಯಾವ ಭಾಷೆಯೂ ಕ್ರಿಯಾಪದಗಳನ್ನು ಎರವಲು ಪಡೆಯುವುದೇ ಇಲ್ಲ. ಹಾಗೆಯೇ ಪ್ರತ್ಯಯಗಳು, ಇಂಗ್ಲಿಷಿನಲ್ಲಿ ಸಫಿಕ್ಸ್ ಅನ್ನುತ್ತಾರಲ್ಲ ಅದೂ ಕೂಡ ಆಯಾ ಭಾಷೆಯ ಸ್ವಂತದ್ದೇ. ಜೊತೆಗೇ ಅರ್ಥ ನಿರ್ಮಾಣದ ನಿಯಮಗಳೂ ಆಯಾ ಭಾಷೆಗೇ ವಿಶಿಷ್ಟವಾದವು. ಇಂಗ್ಲಿಷಿನ ಕ್ರಿಯಾಪದಗಳು ಕನ್ನಡಕ್ಕೆ ಬಂದಾಗ ನಾಮಪದಗಳಾಗಿ ಬದಲಾಗುತ್ತವೆ. ಕ್ಯಾಚ್ ಇಂಗ್ಲಿಷಿನ ಕ್ರಿಯಾಪದ, ಕನ್ನಡದಲ್ಲಿ ಅದು ನಾಮಪದವಾಗಿ ಹಿಡಿ ಎಂಬ ಕ್ರಿಯಾಪದ ಸೇರಿದರೇ ಅರ್ಥಪೂಣF. ಈಕರಣ ಅನ್ನುವುದು ಕನ್ನಡ ಇತ್ತೀಚೆಗೆ ಬಳಸುತ್ತಿರುವ ಪ್ರತ್ಯಯ. ನೀವು ಉದಾಹರಿಸಿರುವ ಗ್ಲೋಬೀಕರಣ ಅನ್ನುವುದು ಗ್ಲೋಬ್ ಎಂಬ ಪದವನ್ನು ಕನ್ನಡವಾಗಿಸಿಕೊಳ್ಳುವ ಒಂದು ಉದಾಹರಣೆ. ಈ ಬಗ್ಗೆ ಮತ್ತೆ ಯಾವಾಗಲಾದರೂ ಬರೆಯುವೆ. ನಾಗಭೂಷಣ

ಲೆನ್ಸ್ ಗೆ ಕನ್ನಡದಲ್ಲಿ ನಾವು ರಾವುಗಾಜು ಎಂದು ಹೇಳುತ್ತೇವೆ. (ಧಾರವಾಡದಲ್ಲಿ) . ರಾವಾಗಿ ( ದೊಡ್ಡದಾಗಿ) ತೋರಿಸುವ ಗಾಜು . ಅದಕ್ಕೆ ನಾವು ಮಸೂರಕ್ಕಾಗಲೀ ಲೆನ್ಸ್‍ಗಾಗಲೀ ಮೊರೆ ಹೋಗಬೇಕಿಲ್ಲ. ಇಂಗ್ಲೀಷಿಗೆ ಕನ್ನಡಪದ ತೋಚದಿದ್ದಾಗ ನಮಗೆ ಒಂದು ಸುಲಭ ಉಪಾಯ ಇದೆ . ಏನೆಂದರೆ - ಆ ಶಬ್ದಕ್ಕೆ ಹಿಂದೆ ನಾವು ಏನನ್ನುತ್ತಿದ್ದಿವಿ, ನಮ್ಮ ಅಪ್ಪ ಅಮ್ಮ /ಅಜ್ಜ ಮುತ್ತಜ್ಜ ಏನನ್ನುತ್ತಿದ್ದರು? ಹಾಗೂ ಒಂದು ವೇಳೆ ಇಲ್ಲದಿದ್ದರೆ ಇಂಗ್ಲೀಷ್ ಅರಿಯದವ ಆ ವಸ್ತುವಿಗೆ ಯಾವ ಶಬ್ದ ಉಪಯೋಗಿಸಬಹುದು? - ಈ ಪ್ರಕ್ರಿಯೆಯಲ್ಲಿ ಮರೆತು ಹೋದ ಹಳೆಯ ಮಾತು ನೆನಪಾಗುವದು , ಅಥವಾ ಅಪ್ಪಟ ಕನ್ನಡದ್ದೇ ಶಬ್ದ ದೊರಕುವದು. ನಾವು ಈಗ news ಕೇಳಿದರೆ ಹಿಂದಿನವರು ವಾರ್ತೆ/ ಸುದ್ದಿ ಕೇಳುತ್ತಿದ್ದರು . ನಮ್ಮ morning , evening ಅವರಿಗೆ ಮುಂಜಾನೆ/ಬೆಳಿಗ್ಗೆ , ಸಂಜೆ/ಸಾಯಂಕಾಲ ಆಗಿದ್ದವಲ್ವೇ? ಇತ್ಯಾದಿ -ಪ್ರಾದೇಶಿಕ ವ್ಯತ್ಯಾಸಗಳಿರಬಹುದು ಅಷ್ಟೆ. ದಯವಿಟ್ಟು ನಾನು ಹಿಂದೆ ಬರೆದ ಈ ಲೇಖನ ನೋಡಿರಿ http://www.ourkarnataka.com/Articles/speak_kannada.htm ಇದು ಮೂರು-ನಾಲ್ಕು ವರ್ಷಗಳ ಹಿಂದೆ ಬರೆದಿದ್ದರೂ ಅದರ ಲಿಂಕ್ ಇನ್ನೂ www.ourkarnaTaka.com ಮುಖಪುಟದಲ್ಲೇ ಇದೆ.

ಸುಮ್ಮಸುಮ್ಮನೆ ಎಲ್ಲಾ ಪದಗಳನ್ನು ಅನಾಮತ್ತಾಗಿ ಸ್ವೀಕರಿಸಲು ಬರುವುದಿಲ್ಲ. ಸಾಮಾನ್ಯವಾಗಿ ಕ್ರಿಯಾಪದಗಳನ್ನು ಬೇಱೆ ಭಾಷೆಯಿಂದ ಸ್ವೀಕರಿಸುವುದಿಲ್ಲ. ನೀವು ತಿಳಿಸಿದ ಪಾಯಿಂಟು, ಕನ್ಸಿಡರ್, ಫೀಲಿಂಗು ಅನಾಮತ್ತಾಗಿ ತೆಗೆದುಕೊಂಡರೆ ಅದು ಕಂಗ್ಲಿಷ್ ಆಗುತ್ತದೆಯೇ ಹೊಱತು ಇನ್ನೇನಲ್ಲ. ಅದು ಅಸಹಜವಾಗುತ್ತದೆ. ಒಂದು ಪರಿಕಲ್ಪನೆ ಅಥವಾ ವಸ್ತು ನಮಗೆ ಸಹಜವಾಗಿಲ್ಲದಾಗ ಮಾತ್ರ ಅನ್ಯ ಭಾಷೆಯ ಶಬ್ದಗಳನ್ನು ಎರವಲು ಪಡೆಯಲು ಅಡ್ದಿಯೇನಿಲ್ಲ. ಉದಾಹರಣೆಗೆ ಸಿಂಹ ತೆನ್ನುಡಿಗರಿಗೆ ಅಪರಿಚಿತ ಪ್ರಾಣಿ(ಕನ್ನಡ, ತಮಿೞ್, ತೆಲುಗು, ಮಲಯಾಳಂ, ತುಳು). ಹಾಗಾಗಿ ಈ ಪ್ರಾಣಿ ಮತ್ತು ಪದವೆರಡೂ ಎರವಲು. ಹಾಗೆಯೇ ಬಸ್ಸು. ಆದರೆ ಮನಸ್ಸಿನಲ್ಲಾಗುವ ಭಾವನೆಗಳು(ಕ್ರಿಯೆಗಳು) ಎರವಲ್ಲ. ಅವು ನಮ್ಮ ಸ್ವಂತ ಅನಿಸಿಕೆ. ಹಾಗಾಗಿ ಅಂಶ, ವಿಷಯ (ಗುಱುತು), ಎಣಿಸು, ಲೆಕ್ಕಕ್ಕೆ ತಗೆದುಕೊ, ಪರಿಗಣಿಸು, ಅನಿಸುತ್ತೆ ಆನಿಸಿಕೆ ಅಥವಾ ಅಂದುಕೊಂಡೆ) ಇವು ಸಹಜವಾಗುತ್ತವೆ. ಈ ಭಾವನೆಗಳಿಗೆ ತೀರಾ ಹಿಂದೆ ನಮ್ಮದೇ ಪದಗಳಿದ್ದುವೇನೋ. ಆದರೆ ಕವಿಗಳ ಸಂಸ್ಕೃತಪ್ರೀತಿ, ರಾಜಕೀಯ ಬಲಾತ್ಕಾರ (ಮುಸಲ್ಮಾನರ ಅರಬ್ಬಿ, ಫಾರ್ಸಿ, ಇಂಗ್ಲಿಷರ ಇಂಗ್ಲಿಷ್ ಹೇಱಿಕೆ ಕೂಡ) ಕನ್ನಡವನ್ನು ದುರ್ಬಲಗೊಳಿಸುವಲ್ಲಿ ತಮ್ಮ ಪಾತ್ರ ವಹಿಸಿದವು. ಅದೇ ರೀತಿ ಜನಸಾಮಾನ್ಯರ ಸ್ವೋಪಜ್ಞತೆಯ ಕೊಱತೆ, ಸ್ವಾಭಿಮಾನಗಳ ಕೊಱತೆಯೂ ಕೂಡ ಕನ್ನಡತನವನ್ನು ಕಡೆಗಣಿಸುವಲ್ಲಿ ತಮ್ಮದೇ ಪಾತ್ರವಹಿಸಿದವು.

Kannada pada adu bhasheyalli sweet agi kelisutte anno matu nurrakke nuru sari.

Baravanigeyelli kannadada chanda irode adu bhase balasadiruvudu.

ಈಗ ಕನ್ನಡಿಗರಿಗೆ ಇಂಗ್ಲೀಶ್ ಭಾಷೆಯ ಪಿತ್ತ ಸ್ವಲ್ಪ ಜಾಸ್ತಿಯೇ ಇದೆ. ಕನ್ನಡ ಭಾಷೆಯಲ್ಲಿ ಲಭ್ಯವಿರುವ ಪದಗಳಿಗೂ ಇಂಗ್ಲೀಶ್ ಬಳಸುತ್ತಿದ್ದಾರೆ. ಉದಾಹರಣೆಗೆ ಅಪ್ಪ, ಅಮ್ಮ, ತಮ್ಮ, ಅಕ್ಕ, ಮಾವ, ಚಿಕ್ಕಮ್ಮ ಇತ್ಯಾದಿಗಳಿಗೆ ಬದಲಾಗಿ ಡ್ಯಾಡಿ, ಮಮ್ಮಿ, ಬ್ರದರ್, ಸಿಸ್ಟರ್, ಅಂಕಲ್, ಆಂಟಿ, ಇತ್ಯಾದಿ. ಬೆಂಗಳೂರಿನಲ್ಲಿ ಜನ ಬಳಸುವ ಕನ್ನಡ (?) ಭಾಷೆಯ ಒಂದು ಉದಾಹರಣೆ ನೋಡಿ -"ನಾನು ಸಂಡೇ ಇವ್‌ನಿಂಗ್ ಸಿಕ್ಸ್ ಥರ್ಟೀಗೆ ಬರುತ್ತೀನಿ". ಇದನ್ನು ಕನ್ನಡ ಮಿಶ್ರಿತ ಇಂಗ್ಲೀಶ್ ಎನ್ನಬೇಕೋ, ಇಂಗ್ಲೀಶ್ ಮಿಶ್ರಿತ ಕನ್ನಡ ಎನ್ನಬೇಕೋ ಅಥವಾ ಕಂಗ್ಲಿಶ್ ಎನ್ನಬೇಕೋ ನೀವೇ ಹೇಳಿ. ಸಿಗೋಣ, ಪವನಜ

ಒ. ಎಲ್. ಎನ್ ಸ್ವಾಮಿಯವರಿಗೆ ನಮಸ್ಕಾರ.
ನೀವು ಹೆಳುವುದು ಅಕ್ಶರ ಶಹ ನಿಜ. ಏಕೆ ಈ ಮಡಿವಂತಿಕೆ ? ನೋದಿ ನಮ್ಮ ಅನಂತಮೂರ್ಥಿಗಳು ಹೇಳಿದಂತೆ ಎಲ್ಲ ಜಗತ್ತಿನ ಭಾಶೆಗಳನ್ನೂ ನಾವು ಕನ್ನಡಿಕರಿಸ ಬಹದು. ಉದಾ ; ಕಾರು, ಪೆನ್ನು, ಕಪ್ಪು, ಪೇಪರ್ರು ಇತ್ಯಾದಿ.
ನೀವು ನೆನೆಪಿಸಿಕೊಳ್ಳಿ, ಕೈಲಸಂ ರವರ ಎಲ್ಲ ನಾಟಕದಲೂ ಈ ಮಡಿವಂತಿಕೆ ಯಿಂದ ಹೊರತಾದವುಗಳೆ ಅಲ್ಲವೆ ! ಉದಾ: 'ತಾಳಿ ಕಟ್ಟೋದ್ ಕೂಲಿನೇ ? ಹೋಮ್ ರೂಲು, ಇತ್ಯಾದಿ.
ನಾನು ನ್ಯಾಶನಲ್ ಕಾಲೇಜಿ ಹೋಗುತ್ತಿದ್ದಗ ಅವರ ಮ್ಯಾಗಜೈನ್ ನಲ್ಲಿ ಒಂದು ಪದ್ಯ ನೋದಿದ್ದೆ. ಅದು ಹೀಗೆ ಪ್ರರಂಭ ವಾಗುತ್ತೆ ನೋದಿ. " ಮಿದ್ ನೈಟ್ ಗಾಳಿ ಜೋರಗಿತ್ತು ರೂಮ್ ನಲಿ ಡಾರ್ಕ್ನೆಸ್ ತುಂಬಿತ್ತು.....ಇತ್ಯಾದಿ

No language can survive in isolation. ಈ ಮಾತು ಕನ್ನಡಕ್ಕೂ ಅನ್ವಯಿಸುತ್ತೆ. bus ಅನ್ನೋದು ಬಸ್ಸು ಅಂತಾ ಆಗ್ಲೇ ಕನ್ನಡಕ್ಕೆ ಬಂದಿದೆ.ಈಗ ಅದು ಇಂಗ್ಲಿಷ್, ಅದಕ್ಕೆ ಅದರ ಬದಲು ಕನ್ನಡದಲ್ಲಿ "೪ ಚಕ್ರದ ಸಾರಿಗೆ ವಾಹನ" ಅಂತೇನಾದ್ರೂ ಅನ್ನೋಕೆ ಹೊರಟ್ರೆ ಅಪಹಾಸ್ಯ ಆಗುತ್ತೆ. ಇದೇ ವಿಷಯದ ಬಗ್ಗೆ ನನ್ನ ಬ್ಲಾಗ್ ನಲ್ಲಿ ಒಂದು ಬರಹ ಹಾಕಿದ್ದೆ, ಪುರ್ಸೊತ್ ಆದ್ರೆ ನೋಡಿ. vasantabanda.blogspot.com

ವಸಂತ ಶೆಟ್ರೇ, >>>No language can survive in isolation.<<< ಈ ಮಾತು ಶುದ್ಧ ಸುಳ್ಳು ಅನ್ನೋದಿಕ್ಕೆ, ಆಂಗ್ಲ ಮತ್ತಿತರ ಪರದೇಶೀ ಭಾಷೆಗಳು ನಮ್ಮ ಕರವಾಳಿಯನ್ನು ತಟ್ಟುವುದಕ್ಕೂ ಮುಂಚೆ ನಮ್ಮ ಕನ್ನಡ ಮತ್ತಿತರ ಭಾಷೆಗಳು ಅಸ್ತಿತ್ವದಲ್ಲಿ ಇದ್ದವು ಅನುವುದಷ್ಟೇ ಪುರಾವೆ, ಅಲ್ಲವೇ. ಆಂಗ್ಲ ಭಾಷೆಯ ಅಸ್ತಿತ್ವವನ್ನು ಉಳಿಸಿಕೊಳ್ಳಲಾಗದವರು ಆಂಗ್ಲಭಾಷೆಯಲ್ಲಿ ಈ ರೀತಿಯ ಹೇಳಿಕೆ ನೀಡಿದುದರಲ್ಲಿ ಏನಿದೆ ವಿಶೇಷ. ಕನ್ನಡವನ್ನು ಕನ್ನಡವಾಗಿ ಉಳಿಸಿಕೊಳ್ಳಲಾಗೋಲ್ಲ ಎನ್ನುವುದು ಗೊತ್ತಿದೆ ಅಂತಾದ ಮೇಲೆ ಈ ವೇದಿಕೆಗಳು, ಚಳುವಳಿಗಾರರು, ಸಂಘ ಸಂಸ್ಥೆಗಳು ಹೋರಾಡುತ್ತಿರುವುದು ಏತಕ್ಕಾಗಿ? ಇನ್ನೊಂದು ವಿಷಯ: ಈ ಆಂಗ್ಲ ಭಾಷೆಗೆ ತಾಯಿ ನಮ್ಮೂರ ತುಳು ಭಾಷೆ ಅನ್ನುವುದು ೧೯೮೪ರಲ್ಲಿ ಚರ್ಚೆಯಲ್ಲಿದ್ದ ವಿಷಯ ಎನ್ನುವುದು ಎಷ್ಟು ಮಂದಿಗೆ ಎಷ್ಟರ ಮಟ್ಟಿಗೆ ತಿಳಿದಿದೆಯೋ ನಾನರಿಯೆ. ಶ್ರೀ ಶಿವಪ್ರಸಾದ ರೈ ಅನ್ನುವವರು ಈ ವಿಷಯದಲ್ಲಿ ಅಂತರಾಷ್ಟ್ರೀಯ ವೇದಿಕೆಗಳಲ್ಲಿ ವಾದ ಮಂಡನೆ ಮಾಡಿದ್ದರು.

ಸುರೇಶರೆ


"ಈ ಆಂಗ್ಲ ಭಾಷೆಗೆ ತಾಯಿ ನಮ್ಮೂರ ತುಳು ಭಾಷೆ ಅನ್ನುವುದು ೧೯೮೪ರಲ್ಲಿ ಚರ್ಚೆಯಲ್ಲಿದ್ದ ವಿಷಯ"


ಇದರ ಬಗ್ಗೆ ಹೆಚ್ಚಿನ ವಿವರ ಸೇರಿಸಲಾಗುತ್ತದಯೇ? ಸ್ವಲ್ಪ ಕುತೂಹಲ!

ದಿನ ಪತ್ರಿಕೆಯಲ್ಲಿ ಓದಿದ್ದ ಸುದ್ದಿಯನ್ನು ನಾನು ಕತ್ತರಿಸಿಟ್ಟಿದ್ದ ನೆನಪು. ಆ ಚೂರುಗಳು ಈ ಇಪ್ಪತ್ತೈದು ವರ್ಷಗಳಲ್ಲಿ ಇಲಿಗಳ ಪಾಲಾಗಿಲ್ಲದೇ ಉಳಿದಿದ್ದರೆ ಹುಡುಕಿ, ಚಿತ್ರ ತೆಗೆದು, ಇಲ್ಲಿ ಪ್ರಕಟಿಸುವ ಪ್ರಯತ್ನ ಮಾಡುತ್ತೇನೆ ಮುಂದಿನ ದಿನಗಳಲ್ಲಿ. :) ಆದರೂ ನಾನು ಓದಿರುವುದಂತೂ ಸತ್ಯ.

(ಪುಸ್ತಕನಿಧಿ - ’ಕನ್ನಡಿಗರು ಆಳಿದ ಅಮೇರಿಕ’ , ’ವಿಶ್ವ ಕನ್ನಡ ತಮಿಳು ಮೂಲದ ಇಂಗ್ಲೀಷ್’ ) http://sampada.net/b... ಇದನ್ನು ನೋಡಿ .

ಶ್ರೀಕಾಂತರೆ ನಿಮ್ಮ ಬರಹ ನೋಡಿದೆ. ಮಾಹಿತಿಗೆ / ಕೊಂಡಿಗೆ ಧನ್ಯವಾದಗಳು. ಈ ಕೊಂಡಿ ಸಧ್ಯಕ್ಕೆ ಕೆಲಸ ಮಾಡ್ತಾ ಇಲ್ಲ . ಒಮ್ಮೆ ಹುಡುಕಿ ಈ ಪುಸ್ತಕವನ್ನೊಮ್ಮೆ ತಿರುವಿ ಹಾಕಲು ಪ್ರಯತ್ನಿಸುತ್ತೇನೆ.

No language can survive in isolation. ಈ ಮಾತು ಕನ್ನಡಕ್ಕೂ ಅನ್ವಯಿಸುತ್ತೆ. bus ಅನ್ನೋದು ಬಸ್ಸು ಅಂತಾ ಆಗ್ಲೇ ಕನ್ನಡಕ್ಕೆ ಬಂದಿದೆ.ಈಗ ಅದು ಇಂಗ್ಲಿಷ್, ಅದಕ್ಕೆ ಅದರ ಬದಲು ಕನ್ನಡದಲ್ಲಿ "೪ ಚಕ್ರದ ಸಾರಿಗೆ ವಾಹನ" ಅಂತೇನಾದ್ರೂ ಅನ್ನೋಕೆ ಹೊರಟ್ರೆ ಅಪಹಾಸ್ಯ ಆಗುತ್ತೆ. ಇದೇ ವಿಷಯದ ಬಗ್ಗೆ ನನ್ನ ಬ್ಲಾಗ್ ನಲ್ಲಿ ಒಂದು ಬರಹ ಹಾಕಿದ್ದೆ, ಪುರ್ಸೊತ್ ಆದ್ರೆ ನೋಡಿ. vasantabanda.blogspot.com

ಯಾವುದೇ ಭಾಷೆಯ ಬೆಳವಣಿಗೆಯಲ್ಲಿ ಸಹಜತೆ ಬಹು ಮುಖ್ಯ. ನಮ್ಮ ಭಾಷೆಯಲ್ಲಿ ಹೇಳಲಾರದ (ಅಥವ ಅನುವಾದದ ಅಗತ್ಯವಿಲ್ಲದ) ಯಾವುದೋ ಹೊರಗಿನ concept ಇದೆಯೆನ್ನೋಣ. ಅದಕ್ಕೆ ಕಷ್ಟಬಿದ್ದು ಕನ್ನಡದಲ್ಲಿ ಹೊಸ ಪದವನ್ನು ಠಂಕಿಸುವ ಅಗತ್ಯವಿಲ್ಲವೆನ್ನಿಸುತ್ತದೆ (ಉದಾಹರಣೆಗೆ ಬಸ್ಸು, ಲೈಟು, ಕಾರು ಇತ್ಯಾದಿ). ಹಾಗೆಯೇ ನಮಗೆ ಚಿರಪರಿಚಿತವಾದ ವಸ್ತು/ಪರಿಕಲ್ಪನೆಗಳನ್ನು ಸೂಚಿಸಲು ಕನ್ನಡದಲ್ಲೇ ಸಹಜವಾದ ಪದಪುಂಜಗಳು ಇರುವಾಗಲೂ ಕನ್ನಡವನ್ನು ’ಬೆಳೆಸ’ಲೇಬೇಕೆಂಬ ಹಟಕ್ಕೆ ಬಿದ್ದು ಅಸಹಜವಾಗಿ ಇಂಗ್ಲಿಷ್ ಪದಗಳನ್ನು ತುಂಬುವುದೂ ಅಗತ್ಯವಿಲ್ಲ. ಆದ್ದರಿಂದಲೇ "ಚತುಷ್ಚಕ್ರೀಯ ವಾಹನ", "ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು" ಮುಂತಾದ ’ಅನುವಾದ’ಗಳಂತೆಯೇ "ಕನ್ನಡ ಮಾತ್ರ ಅತ್ಯಂತ ಪ್ಯೂರ್ ಆಗಿರಬೇಕು", "ದಿನಬಳಕೆಯಲ್ಲಿ ಬಳಸುವ ವರ್ಡ್ಸ್ ಗಳನ್ನೆಲ್ಲ ನಮ್ಮ ರೈಟಿಂಗ್ ನಲ್ಲೂ ಯೂಸ್‌ಮಾಡಲು ಹೆಸಿಟೇಟ್ ಮಾಡುವುದೇಕೆ?" "ಇಲ್ಲಿಟರೇಟ್ಸ್ ಎಂದು ಕರೆಯುತ್ತೇವಲ್ಲ ಅವರು ಕೂಡ ಇಂಗ್ಲಿಷ್ ಮಿಕ್ಸ್ ಮಾಡೇ ಮಾತಾಡುತ್ತಾರೆ. ಕನ್ನಡ ಬರವಣಿಗೆಗೆ ಯಾಕೆ ಈ ಅನ್‌ನೆಸೆಸರಿ ಕಟ್ಟುಪಾಡು?" ಇಂಥಾ ಪ್ರಯೋಗಗಳೂ ಹಾಸ್ಯಾಸ್ಪದವೆನ್ನಿಸುತ್ತದೆ. ಏಕೆಂದರೆ ಇವೆಲ್ಲಾ ನಮಗೆ ಚಿರಪರಿಚಿತವಾದ ಪರಿಕೆಲ್ಪನೆಗಳೇ ಅಲ್ಲವೇ, ಆಂಗ್ಲದ ಪ್ರವೇಶಕ್ಕೂ ಮೊದಲೇ ನಾವು ಇವುಗಳನ್ನು ಸಹಜವಾಗೇ ಬಳಸುತ್ತಿದ್ದೆವಲ್ಲವೇ? ಅದನ್ನೇ "ಕನ್ನಡ ಮಾತ್ರ ಅತ್ಯಂತ ಶುದ್ಧವಾಗಿರಬೇಕು", "ದಿನಬಳಕೆಯಲ್ಲಿ ಬಳಸುವ ಪದಗಳನ್ನೆಲ್ಲ ನಮ್ಮ ಬರವಣಿಗೆಯಲ್ಲೂ ಉಪಯೋಗಿಸಲು ಹಿಂದೆ ಮುಂದೆ ನೋಡೋದೇಕೆ?" "ಅನಕ್ಷರಸ್ಥರು ಎಂದು ಕರೆಯುತ್ತೇವಲ್ಲ ಅವರು ಕೂಡ ಇಂಗ್ಲಿಷ್ ಸೇರಿಸಿಯೇ ಮಾತಾಡುತ್ತಾರೆ. ಕನ್ನಡ ಬರವಣಿಗೆಗೆ ಯಾಕೆ ಈ ಅರ್ಥವಿಲ್ಲದ ಕಟ್ಟುಪಾಡು?" - ಹೀಗೆಂದರೆ ಹೇಗೆ? For your information, ನಾವು ಆಡುಮಾತಿನಲ್ಲೂ ಬಹುತೇಕ ಹೀಗೆಯೇ ಉಪಯೋಗಿಸುತ್ತೇವೆ (ಕಾನ್ವೆಂಟ್ ಕಲಿತ, ಅಥವ ಮನೆಯಲ್ಲಿ ಕನ್ನಡ ಮಾತಾಡದ, ಅಥವಾ ಮಾತಾಡಿದರೂ ಇಂಗ್ಲಿಷ್ ಉಪಯೋಗಿಸುವ ಚಟಕ್ಕೆ ಬಿದ್ದ educated ಸಮುದಾಯವನ್ನು ಹೊರತು ಪಡಿಸಿ)

Pages