ನಯಾಗರಾ ಫಾಲ್ಸ್ ಮತ್ತು ಮಸಾಲೆದೋಸೆ ಗಾಡಿ!

ನಯಾಗರಾ ಫಾಲ್ಸ್ ಮತ್ತು ಮಸಾಲೆದೋಸೆ ಗಾಡಿ!

  ಕಳೆದ ತಿಂಗಳು ಅಮೆರಿಕೆಯ ಪೂರ್ವ ಕರಾವಳಿಗೆ ನೆಂಟರ ಮದುವೆಗೆಂದು ಹೋಗಬೇಕಾಗಿತ್ತು. ಹೇಗೂ ಅಲ್ಲಿಯವರೆಗೆ ಹೋಗುವೆನಲ್ಲ, 
ಮತ್ತೆ ಐನೂರು ಮೈಲಿ ಯಾವ ಲೆಕ್ಕ ಎಂದು, ನಯಾಗರಾ ಫಾಲ್ಸ್ ಗೂ ಹೋಗುವ ಪ್ರೋಗ್ರಾಮ್ ಹಾಕಿದ್ದಾಯಿತು. 
 
ನಯಾಗರಾ ಫಾಲ್ಸ್ ಎರಡು ದೇಶಗಳಲ್ಲಿ ಹರಡಿಕೊಂಡಿರುವ ಜೋಡಿ-ನಗರ. ನಡುವೆ ನಯಾಗರ ನದಿ. ಬರೀ ೩೦-೨೫ ಮೈಲುದ್ದದ 
ಈ ನದಿಯಲ್ಲಿ ಉತ್ತರ ಅಮೆರಿಕೆಯ ೭೫% ನೀರು ಹಾದು ಹೋಗುತ್ತಂತೆ. ಈರೀ ಸರೋವರದಿಂದ ಆಂಟೋರಿಯೀ ಸರೋವರದ 
ನಡುವೆ ಇರುವ ಈ ಸಣ್ಣ ನದಿ, ಸುಮಾರಾಗಿ ಸಪಾಟಾಗಿರುವ ಈ ಭಾಗದಲ್ಲಿ, ಎತ್ತರ ಹೆಚ್ಚಿಲ್ಲದಿದ್ದರೂ, ಅದ್ಭುತವಾದ ಜಲಪಾತವನ್ನು 
ಸೃಷ್ಟಿಸಿರುವುದೊಂದು ಸೋಜಿಗ. ನದಿಯ ಪಶ್ಚಿಮಕ್ಕೆ ಕೆನಡ ಆದರೆ, ಪೂರ್ವಕ್ಕೆ ಯು.ಎಸ್.ಎ. ಊರಿನ ಕೇಂದ್ರ  ಬಿಂದು ಎಂದರೆ 
ನಯಾಗರ ಜಲಪಾತ. ಅದರಲ್ಲೂ ಎರಡು ಭಾಗ. ಸುಮಾರು ೯೦% ನೀರು ಹರಿಯುವ ಕೆನಡಿಯನ್ ಫಾಲ್ಸ್, ಮತ್ತು ಮಿಕ್ಕ ೧೦% 
ಹರಿಯುವ ಅಮೆರಿಕನ್  ಫಾಲ್ಸ್. ಎತ್ತರ ೨೦೦ ಅಡಿಗೂ ಕಮ್ಮಿ ಇದ್ದರೂ, ಅದರ ಅಗಲ ಜಲಪಾತಕ್ಕೆ ಅಪಾರ ಗಾಂಭೀರ್ಯ ತಂದು 
ಕೊಡುತ್ತದೆ.
 
ಇದು ಐದು ವರ್ಷಗಳಲ್ಲಿ ನಾನು ನಯಾಗರ ಫಾಲ್ಸ್ ಗೆ ಕೊಟ್ಟ ಎರಡನೇ ಭೇಟಿ. ಕಳೆದಬಾರಿ ನೇರವಾಗಿ ಅಲ್ಲಿಗೇ ಹಾರಿದ್ದೆ. ಈ ಸರ್ತಿ 
ವಾಷಿಂಗ್ಟನ್ ಇಂದ ಡ್ರೈವ್ ಮಾಡುವ  ಅವಕಾಶ. ಕ್ಯಾಲಿಫೋರ್ನಿಯದ ಅರೆ-ಮರುಭೂಮಿಯಲ್ಲಿರುವ ನನಗೆ ಪೂರ್ವಕರಾವಳಿಯ 
ರಾಜ್ಯಗಳಂತೂ ಬಹಳ ಹಸಿರಾಗಿವೆ ಎನಿಸಿತು.ಅಲ್ಲದೆ, ಸಿಲಿಕಾನ್ ಕಣಿವೆಯಲ್ಲಿ  ನನಗೆ ನೋಡಿ ಅಭ್ಯಾಸವಾಗಿರುವ ಭಾರತೀಯ 
ಮತ್ತೆ ಇತರ ಏಶ್ಯನ್ (ಚೈನಿ, ವಿಯಟ್ನಾಮಿ, ಫಿಲಿಪಿನೋ) ಮೊದಲಾದ ಮುಖಗಳೇ ಕಾಣವು. ಅಂತೂ ಇಷ್ಟುದಿನಗಳ ನಂತರ 
ನಾನು ಪರದೇಶದಲ್ಲಿದ್ದೇನೆ ಎನ್ನಿಸಿತು! 
 
ದಾರಿಯಲ್ಲಿ ಮೇರಿಲ್ಯಾಂಡ್,ಪೆನ್ಸಿಲ್ವೇನಿಯ ಮತ್ತೆ ನ್ಯೂಯಾರ್ಕ್ ರಾಜ್ಯಗಳಲ್ಲಿ ಸಾಗಿತ್ತು ಹಾದಿ. ಅಷ್ಟೇ ಅಲ್ಲದೆ, ಹೋಗುವಾಗ ಕಪ್ಪ 
ಕೊಟ್ಟು ಹೋಗಬೇಕಾದ ಟೋಲ್ ರಸ್ತೆಗಳೂ ನನಗೆ ಸ್ವಲ್ಪ ಹೊಸತೇ. ಅಲ್ಲಲ್ಲಿ ಕಾಫಿ ಬ್ರೇಕ್ ಗಳನ್ನು ಕೊಡುತ್ತ ಅಂತೂ ೮-೯ ಗಂಟೆಯ 
ದಾರಿ ಸವೆಸಿದ್ದಾಯಿತು. ನಮ್ಮ ಉದ್ದೇಶ ರಾತ್ರಿಯಲ್ಲಿ ಹಾಕುವ ಬಣ್ಣದ ಬೆಳಕಲ್ಲಿ  ಜಲಪಾತದ ಸೌಂದರ್ಯವನ್ನು ಸವಿಯಬೇಕೆನ್ನುವುದು. 
ಹಾಗಾಗಿ, ಗಡಿಬಿಡಿಯಲ್ಲೇ ಕೋಣೆಸೇರಿ, ಆದಷ್ಟೂ ಬೇಗ ಹೊರಟಿದ್ದಾಯಿತು.
 
ಕಳೆದ ಬಾರಿ ಕಲಿತ ಪಾಠದಿಂದ, ಈ ಸಲ ಕೋಣೆಯನ್ನು ಆದಷ್ಟೂ ಫಾಲ್ಸ್ ಗೆ ಹತ್ತಿರದಲ್ಲೇ ಮಾಡಿದ್ದೆ. ಹೊಟೆಲ್ ನಿಂದ ಹೊರ ಬಿದ್ದು 
ಒಂದು ೨೦೦ ಮೀಟರ್ ಉದ್ದದ ಬೀದಿ ದಾಟಿದರೆ ಸಾಕು - ಫಾಲ್ಸ್ ಪಾರ್ಕ್ ನ ಹೆಬ್ಬಾಗಿಲು. ಹೋದ ಬಾರಿ ಇಲ್ಲಿಗೆ ಬಂದಿದ್ದೆನೋ 
ಇಲ್ಲವೇ ನೆನಪಾಗಲಿಲ್ಲ - ಪೂರ್ತಿ ಬೆಂಗಳೂರಿನ ದೃಶ್ಯ - ರಸ್ತೆಯ ಎರಡೂ ಕಡೆ  ತಿಂಡಿ ತಿನಿಸು ಮಾರುವ ಗಾಡಿಗಳು !ಅದರಲ್ಲಿ 
ಸುಮಾರು ಅರ್ದದಷ್ಟು ಮಸಾಲೆದೋಸೆ-ಉತ್ತಪ್ಪ-ಸಮೋಸ-ಕಚೋರಿ ಮಾರುವವರು. ಇದಂತೂ ಈ ದೇಶದಲ್ಲಿ ನನಗೆ  ತೀರ 
ಹೊಸತು. ಆಗ  ರಾತ್ರಿ ೧೧ ಆಗಿದ್ದರಿಂದ, ಎಲ್ಲರೂ ಮುಚ್ಚುವ ಧಾವಂತದಲ್ಲಿದ್ದರು. (ಸೂರ್ಯಾಸ್ತವಾಗುವುದೇ ೯:೩೦ ಆದ್ದರಿಂದ, 
೧೦:೩೦ ಯವರೆಗೆ ಇನ್ನೂ  ಮುಸ್ಸಂಜೆ! ಈ ತಿಂಡಿ ಗಾಡಿಗಳ ಫೋಟೋ ತೆಗೆದುಕೊಳ್ಳದೆ ಹೋಗಿದ್ದು ತಪ್ಪೆಂದು ಈಗನಿಸುತ್ತಿದೆ. 
 
ಜಲಪಾತದ ಬಳಿ ಹೋದೆವು. ಆಗಲೇ ಜಲಪಾತ ಬಣ್ಣದ ಬೆಳಕಲ್ಲಿ ಮೀಯುತ್ತಿತ್ತು. ಈ ಭಾಗದಿಂದ ಬರೀ ಅಮೆರಿಕನ್ ಫಾಲ್ಸ್ ಅನ್ನು, 
ಅದೂ ಒಂದು ಬದಿಯಿಂದ  ನೋಡಲು ಅವಕಾಶವಿದೆ. ಎದುರುಗಡೆ ಕೆನಡ ಭಾಗದಲ್ಲಿಂದ ಬಿಡುವ ಬೆಳಕು ಕ್ಷಣಕ್ಷಣಕ್ಕೂ ಬದಲಾಗುತ್ತಿದ್ದು, 
ಬಿಟ್ಟೇ ಹೋಗಬಾರದೇನೋ ಎನ್ನಿಸುವ ಭಾವ.
 
 ರಾತ್ರಿಯಲ್ಲಿ ನಯಾಗರ ಜಲಪಾತ
 
 ರಾತ್ರಿಯ ಚೆಂಬೆಳಕಲ್ಲಿ ಮೀಯುತ್ತಿರುವ ಅಮೆರಿಕನ್ ಫಾಲ್ಸ್!
    
 ಮರುದಿನ ಎರಡೂ ಕಡೆಯ ಜಲಪಾತಗಳನ್ನು ನೋಡಿ, ದೋಣಿ ಯಾನ ಮಾಡಿ, ನಂತರ ಎರಡು ಜಲಪಾತಗಳ ನಡುವೆ ಇರುವ ಸಣ್ಣ ಕವಲಾದ Bridal veil 
ಫಾಲ್ಸ್ ಅಡಿಗೆ ಹೋಗಿ ತಲಿಯಿಟ್ಟು ಬಂದು ನಂತರ ನಯಾಗರ ಕ್ಕೆ ಟಾಟಾ ಹೇಳಿದ್ದಾಯಿತು. ಆಗ ತೆಗೆದ ಕೆಲವು ಚಿತ್ರಗಳು ಇಲ್ಲಿವೆ.
 http://www.sampada.net/image/5022 
http://www.sampada.net/image/5025
http://www.sampada.net/image/5026
http://www.sampada.net/image/5027
http://www.sampada.net/image/5028
http://www.sampada.net/image/5029
-ಹಂಸಾನಂದಿ

 

 
 

 
 
 
 
 
  
Rating
No votes yet

Comments