ಮೊದಲೇ ಹೇಳಿಬಿಡುತ್ತೇನೆ. ನಾನು ಆಸ್ತಿಕ. ನಾನು ಬರೆಯ ಹೊರಟಿರುವುದು ಆಸ್ತಿಕರೊಬ್ಬರು ಬರೆದ ಕಾದಂಬರಿ ರೂಪದ ಜಿಜ್ಞಾಸೆಯ ಬಗ್ಗೆ. ಹಾಗಾಗಿ ಇದೆಲ್ಲ ಕಸ ಅನ್ನುವವರು ಮುಂದೆ ಓದುವುದು ಬೇಡ.
ತುಳುನಾಡಿನ ದೈವಾರಾಧನೆ ನಮಗೆ ನಂಬಿಕೆಯ ಪ್ರಶ್ನೆ. ಹೊರಗಿನವರಿಗೆ ಕೌತುಕ, ತಮಾಷೆಯ ವಸ್ತು. ಈ ಪುಸ್ತಕದ ಕತೆ ಸರಳ. ಕಂಪೆನಿಯೊಂದು ಸ್ವಾಧೀನಪಡಿಸಿಕೊಂಡ ಜಾಗದ ವಿರುದ್ಧ ಅವರಿಗೆ ಪರಿಹಾರ ಕೊಡಿಸಲು ಹೋರಾಟ ಮಾಡುವ ಹೋರಾಟಗಾರನೊಬ್ಬ ಅಪಘಾತಕ್ಕೀಡಾಗಿ ಸಾವಿಗೀಡಾಗುತ್ತಾನೆ. ಸಾವಿನ ರಾತ್ರಿಯವರೆಗೆ ಅವನ ಜೊತೆ ಇದ್ದ ಗೆಳೆಯನಿಗೆ ಇದು ಕೊಲೆಯೆಂಬ ಸಂಶಯವಿದೆ. ಆದರೆ ಸಾಕ್ಷಿಗಳಿಲ್ಲ. ಸತ್ತವನ ಸಾವಿನ ವಿಧಿ ಜರುಗುವಾಗ ಒಬ್ಬ…