ಇಂಜಿನಿಯರಿಂಗ್ ಪದವೀಧರರಾದ ವಿವೇಕ ಶಾನಭಾಗರು ತಮ್ಮ ಸಣ್ಣ ಕತೆಗಳ ಮೂಲಕ ಹೆಸರು ಮಾಡಿದವರು. ಅವರು ಸಂಪಾದಕರಾಗಿದ್ದ “ದೇಶಕಾಲ" ಎಂಬ ವಿಶಿಷ್ಟ ತ್ರೈಮಾಸಿಕ ಪತ್ರಿಕೆಯ ಮೂಲಕವೂ ಕನ್ನಡಿಗರಿಗೆ ಪರಿಚಿತರು. "ಮತ್ತೊಬ್ಬನ ಸಂಸಾರ” ಎಂಬ ಈ ಸಂಕಲನದಲ್ಲಿವೆ ಅವರ ಒಂಭತ್ತು ಕತೆಗಳು.
ಇದಕ್ಕೆ ಅಕ್ಷರ ಕೆ. ವಿ. ಬರೆದಿರುವ ಬೆನ್ನುಡಿಯ ಮಾತುಗಳು ಇಲ್ಲಿನ ಕತೆಗಳ ಬಗ್ಗೆ ಕೆಲವು ಒಳನೋಟಗಳನ್ನು ಒದಗಿಸುತ್ತವೆ: "ಯಾವುದೇ ವಸ್ತುವನ್ನು ಕುರಿತು, ಹಲವು ರೀತಿಯ ಕಥನಗಳನ್ನು ಕಟ್ಟುವುದು ಸಾಧ್ಯ. ಆದರೆ, ಒಂದೇ ಕಥನದಲ್ಲಿ ಹಲವು ಕಥಾಸಾಧ್ಯತೆಗಳನ್ನು ಒಳಗೊಳ್ಳುವುದು ಕಷ್ಟದ ಹಾದಿ. ವಿವೇಕ ಶಾನಭಾಗ ಅವರ ಈಚಿನ ಕತೆಗಳು, ಈ ಎರಡನೆಯ ಜಾತಿಯ ದುರ್ಗಮ ದಾರಿಗಳನ್ನು ಹುಡುಕಲು ಹೊರಟಂತಿವೆ. ಉದಾಹರಣೆಗೆ, ಈ ಸಂಕಲನದ ಒಂದು ಕಥೆಯಲ್ಲಿ - "ಒಬ್ಬ"ನ ಸಾದಾ…