ಕನ್ನಡದ ಪ್ರಸಿದ್ಧ ಜನಪದ ಸಾಹಿತ್ಯ ಸಂಗ್ರಾಹಕರೂ ಕಾದಂಬರಿಕಾರರೂ ಆಗಿರುವ ಕೃಷ್ಣಮೂರ್ತಿ ಹನೂರು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ಸಂಗ್ರಹಿಸಿದ ಆರು ಜನಪದ ರಮ್ಯ ನೀಳ್ಗತೆಗಳು ಈ ಸಂಕಲನದಲ್ಲಿವೆ. ಇವು ಕನ್ನಡದ ಸಮೃದ್ಧ ಜನಪದ ಸಾಹಿತ್ಯದ ಸೂಚಿಯಾಗಿವೆ.
ಇದರಲ್ಲಿನ ಆರು ಕತೆಗಳನ್ನು ಮತ್ತು ಇದರಲ್ಲಿ ಪ್ರಕಟವಾಗದ ಇನ್ನು ನಾಲ್ಕು ಕತೆಗಳನ್ನು ಹೇಳಿದವರು ಕ್ಯಾತಗಾನಹಳ್ಳಿ ಗಿರಿಯಯ್ಯ. ಈ ಗೊಲ್ಲಗೌಡನನ್ನು ಹನೂರರ ಮಿತ್ರ ರಾಮಚಂದ್ರಪ್ಪ ಕರೆದುಕೊಂಡು ಬಂದಿದ್ದರು. ತನಗೆ ಯಾವುದೋ ಒಂದು “ಹೆಣ್ಣರಸಿಯರ ಪಟ್ಟಣದ ಕತೆ” ಬರುವುದೆಂದು ಹೇಳಲಿಕ್ಕೆ ಶುರು ಮಾಡಿದ ಗಿರಿಯಯ್ಯ ಹಗಲೆಲ್ಲ ಅದೊಂದೇ ಕತೆಯನ್ನು ಹೇಳುತ್ತಾ ಹೋದ! “ಕಥೆ ಹೇಳುವಾಗಿನ ಆತನ ಭಾಷಾಶೈಲಿ, ನಾಟಕೀಯವಾಗಿ ನಿರೂಪಿಸುವ ರೀತಿ ಇವು ಆ ಕಥೆಯನ್ನು ಕುತೂಹಲದಿಂದ ಕೇಳುವಂತೆ…