ಹುಲಿವೇಷ- ಕಥೆಗಳು ವಿಠಲ್ ಶೆಣೈ ಅವರ ಕಥಾ ಸಂಗ್ರಹ ಪುಸ್ತಕ. ಅವರೇ ಹೇಳಿಕೊಂಡಂತೆ ಹುಲಿವೇಷ ಎಂಬ ಕಥೆ ಕಾದಂಬರಿಯಷ್ಟು ದೊಡ್ಡದಾಗಿಲ್ಲದೇ, ಕಥೆಯಷ್ಟು ಸಣ್ಣದಾಗಿಯೂ ಇಲ್ಲ. ನೀಳ್ಗತೆ ಎಂದು ಕರೆಯಬಹುದೇನೋ? ಇಲ್ಲಿರುವ ಏಳೂ ಕಥೆಗಳು ಸರಾಗವಾಗಿ ಓದಿಸಿಕೊಂಡು ಹೋಗುತ್ತವೆ ಎನ್ನುವುದು ವಿಠಲ್ ಶೆಣೈ ಅವರ ಬರಹದ ವಿಶೇಷತೆ. ಸರಳವಾದ ವಾಕ್ಯಗಳು, ನಮಗೆ ಗೊತ್ತಿರುವ ಸುಲಭ ಪದಗಳು, ನಮ್ಮ ಸುತ್ತ ಮುತ್ತಲಿನಲ್ಲೇ ನಡೆಯುವಂಥಹ ಕಥಾ ಹಂದರ ಇವು ಈ ಕಥೆಗಳಿಗೆ ವಿಶೇಷ ಮೆರುಗನ್ನು ನೀಡಿವೆ.
ವಿಠಲ್ ಶೆಣೈ ಅವರು ‘ನನ್ನುಡಿ'ಯಲ್ಲಿ ಹುಲಿವೇಷದ ಕುರಿತು ಹೀಗೆ ಬರೆಯುತ್ತಾರೆ ‘ಮಂಗಳೂರಿನಲ್ಲಿ ೭೦ ಮತ್ತು ೮೦ ರ ದಶಕದಲ್ಲಿ ಹುಟ್ಟಿ ಬೆಳೆದ ಹುಡುಗರಿಗೆ ಹುಲಿವೇಷದ ವಾದ್ಯ ಕೇಳಿದರೆ ಮೈ ಜುಂ ಆಗುತ್ತದೆ. ನವರಾತ್ರಿಯ ಕೊನೆಯ ಆ ನಾಲ್ಕು-ಐದು ದಿನಗಳಲ್ಲಿ…