ಇದು ಯುನೆಸ್ಕೋದ ಏಷ್ಯಾ ಸಾಂಸ್ಕೃತಿಕ ಕೇಂದ್ರ ಪ್ರಾಯೋಜಿಸಿದ ಏಷ್ಯಾದ ಸಹ ಪ್ರಕಟಣಾ ಕಾರ್ಯಕ್ರಮದ ಅನುಸಾರ ಪ್ರಕಟಿಸಿದ ಏಷ್ಯಾದ 14 ದೇಶಗಳ ಸಮಕಾಲೀನ ಕತೆಗಳ ಸಂಕಲನ.
ಮೊದಲ ಕತೆ ಅಫಘಾನಿಸ್ತಾನದ್ದು: ಗಿಡುಗ ಮತ್ತು ಮರ. ಒಂದೂರಿನಲ್ಲೊಂದು ಮೋಚಿಯ ಸಣ್ಣ ಅಂಗಡಿ. ಆತ ಬೆಳಗ್ಗೆ ಅಂಗಡಿ ತೆರೆದರೆ ಸಂಜೆಯ ವರೆಗೆ ಕೂತಿರುತ್ತಿದ್ದ. ಅವನ ಅಂಗಡಿಗೆ ಪ್ರತಿ ದಿನ ಇಬ್ಬರು ಸೋಮಾರಿಗಳು ಬಂದು ಹರಟೆ ಹೊಡೆಯುತ್ತಾ ಇರುತ್ತಿದ್ದರು. ಅದೊಂದು ದಿನ ಮೋಚಿ ಖಿನ್ನನಾಗಿದ್ದ. ಯಾಕೆಂದು ಕೇಳಿದಾಗ “ನನ್ನ ಗಿಡುಗ ತಪ್ಪಿಸಿಕೊಂಡಿದೆ” ಎಂದ. ಮುಂದುವರಿದು ಅವನು ಹೇಳಿದ: “ಅದಕ್ಕೇನೋ ಸಾಯುವ ಕಾಲ ಬಂದಿದೆ. ಅದರ ಕಾಲಿಗೆ ಕಟ್ಟಿದ ಹಗ್ಗ ಹಾಗೇ ಇದೆ. ಆ ಅನಿಷ್ಟ ಗಿಡುಗ ಮರದ ಮೇಲೆ ಕುಳಿತೊಡನೆ ಆ ದಾರ ಕೊಂಬೆಗಳಿಗೆ ಸಿಕ್ಕಿಕೊಳ್ಳುತ್ತದೆ. ಅದು ಸಾಯುವ ವರೆಗೂ ಅಲ್ಲೇ…