ಗೊರೂರು ರಾಮಸ್ವಾಮಿ ಅಯ್ಯಂಗಾರರ ವೈವಿಧ್ಯಮಯವಾದ 10 ಕತೆಗಳು ಈ ಸಂಗ್ರಹದಲ್ಲಿವೆ. ಹಳ್ಳಿಯ ಬದುಕನ್ನು ತನ್ನ ಬರಹದಲ್ಲಿ ಸೊಗಸಾಗಿ ಚಿತ್ರಿಸಿದವರು ಇವರು. ಸುಲಲಿತವಾಗಿ ಓದಿಸಿಕೊಂಡು ಹೋಗುವುದೇ ಗೊರೂರರ ಕತೆಗಳ ವಿಶೇಷತೆ. ಜೊತೆಗೆ ಇವು ಸುಮಾರು 60 ವರುಷಗಳ ಮುಂಚೆ ಬರೆದ ಕಥೆಗಳಾದರೂ ಇವೆಲ್ಲದರ ಸಂದೇಶಗಳು ಇಂದಿಗೂ ಪ್ರಸ್ತುತ.
ಮೊದಲನೆಯ ಕತೆ “ಕನ್ಯಾಕುಮಾರಿ”. ಚಂದ್ರವಳ್ಳಿಯ ಶ್ರೀಧರ ಬೆಂಗಳೂರಿನಲ್ಲಿ ಬಿ.ಎ. ಓದುತ್ತಿದ್ದ. ಅವನಿಗೆ ಸಂಗೀತ ಒಲಿದಿತ್ತು. ರಜೆಯಲ್ಲಿ ಹಳ್ಳಿಗೆ ಬಂದಾಗ ಅಲ್ಲಿನ ಶಾಲೆಯ ಹೆಣ್ಣುಮಕ್ಕಳಿಗೆ ಸಂಗೀತ ಕಲಿಸುತ್ತಿದ್ದ. ಅವರಲ್ಲಿ ಒಬ್ಬಾಕೆ ಕಲ್ಯಾಣಿ. ರೂಪದಲ್ಲಿ ಅಪ್ಸರೆ. ಅವಳ ಕಂಠವೂ ಚೆನ್ನಾಗಿತ್ತು. ಶ್ರೀಧರನಿಗೆ ಅವಳಲ್ಲಿ ಅನುರಾಗ ಮೂಡಿತು. ಆಕೆಯ ತಂದೆ ತೀರಿಕೊಂಡಿದ್ದು, ಮಗಳನ್ನು ತಾಯಿ ಕಷ್ಟದಿಂದ…