ವಿದ್ಯಾ ಭರತನಹಳ್ಳಿ ಬರೆದ ‘ಬೇಸೂರ್’ ಎನ್ನುವ ಚೊಚ್ಚಲ ಕಥಾ ಸಂಕಲನ ಇತ್ತೀಚೆಗೆ ಬಿಡುಗಡೆಯಾಗಿದೆ. ತಮ್ಮ ಈ ಕಥಾ ಸಂಕಲನದ ಕುರಿತಾಗಿ ಲೇಖಕಿ ಹೇಳುವುದು ಹೀಗೆ…
“ನಾನು ನನ್ನೊಳಗೇ ಕಥೆ ಬರೆದುಕೊಳ್ಳುತ್ತಿದ್ದೆ. ಮನೆಯ ಬಾಗಿಲಲ್ಲಿ ಗೇಟಿಗೆ ತಲೆಯಾನಿಸಿ ಮಗಳು ಬರುವುದನ್ನು ಕಾಯುತ್ತ ಇರುವಾಗ, ಗಂಡನೊಂದಿಗೆ ವಾಕಿಂಗ್ ಮಾಡುವಾಗ, ಅರಳಿದ ಹೂವಿನೊಳಗೆ ಕಣ್ಣಿಗೆ ಕಾಣಿಸದ ಹುಳ ಹೊಕ್ಕಿದ್ದನ್ನು ತೆಗೆಯುವಾಗ, ಫಕ್ಕನೆ ಯಾವುದೋ ನೆನಪಾಗಿ ಕಣ್ಣು ತುಂಬಿ ತುಳುಕುವಾಗ. ಸುತ್ತೆಲ್ಲ ಹರವಿಕೊಂಡ ಇತಿಹಾಸ, ವರ್ತಮಾನ, ಭವಿಷ್ಯ ಮೌನ ಮಾತಿಗೂ, ಮಾತು ಅಕ್ಷರಕ್ಕೂ ಕಾಯುತ್ತಿತ್ತು. ಅವಮಾನ, ಯಾರದೋ ಸಂಕಟ, ಕೋಪ, ಪ್ರೀತಿ, ನೀತಿ, ಒಂದು ಸುಂದರ ಗೀತೆ, ಕಥೆ ಎಲ್ಲವೂ ಕಥೆಗಳಾಗಿ ಹೊರಹೊಮ್ಮುವ ಕಾಲ…