ನಮ್ಮ ನಾಡು
ಹಸಿರ ರಾಶಿ ಚೆಲ್ಲಿರುವ ಗಿರಿವನ,
ಪ್ರಕೃತಿಯ ರಂಗೇರಿಸಿಹ ಜಲಪಾತಗಳ ಮಿಶ್ರಣ,
ಭೂಸ್ವರ್ಗವಾಗಿಸಿಹ ಮಲೆನಾಡ ಚಿತ್ರಣ,
ಪಾವನವಾಗಿಸಿವೆ ಈ ಐಸಿರಿ ತುಂಬಿಸಿ, ನಮ್ಮ ಕಣ್ಮನ.
ಮಕ್ಕಳ ತೊದಲಲಿ ಸರಿಗಮ ಗಾನ,
ತಾಯಿಯ ನುಡಿಯಲಿ ಜೋಗುಳ ಗಾನ,
ಮಂದಿಯ ನುಡಿಯಲಿ ಜನಪದ ಗಾನ,
ನುಡಿ ಇದು ನುಡಿದರೆ, ಅಮೃತಪಾನ.
ಕವಿತಾಲೋಕಕೆ ಎಲ್ಲರ ಕೊಂಡೊಯ್ಯುತ,
ಕಾವ್ಯರಸಧಾರೆಯ ಹೊನಲನು ಹರಿಸುತ,
ನುಡಿಯನು ಕಾವ್ಯಮಾಲೆಯಿಂದಲಂಕರಿಸಿ ಶ್ರೀಮಂತವಾಗಿಸಿಹ,
ಶಾರದೆ ಪೀಠವಿದು, ಕವಿಗಳ ತಾಣ.
ನೀತಿಗಳ ಸಾರುವ ವಚನಾಮೃತವು,
ಭಕ್ತಿಯ ಪಾಡುವ ದಾಸರ ಪದವು,
ಸಂತರು ತೋರಿದ ಮುಕ್ತಿಯ ನಿಲುವು,
ಮಾರ್ಗವ ತೋರಿದವು ಗುರಿ ಸೇರಲು ಮನವು.
- Read more about ನಮ್ಮ ನಾಡು
- Log in or register to post comments