ಆಕರ್ಷಕವಾದ ಹೆಸರನ್ನು ಹೊಂದಿರುವ ೫ ಪೈಸೆ ವರದಕ್ಷಿಣೆ ಎಂಬ ಪುಸ್ತಕವು ವಸುಧೇಂದ್ರ ಇವರ ಸುಲಲಿತ ಪ್ರಬಂಧಗಳ ಸಂಗ್ರಹ. ಸುಲಲಿತ ಪ್ರಬಂಧಗಳನ್ನು ಬರೆಯುವುದರಲ್ಲಿ ವಸುಧೇಂದ್ರ ಇವರದ್ದು ಎತ್ತಿದ ಕೈ. ಈ ಪುಸ್ತಕದಲ್ಲಿ ೨೪ ಪುಟ್ಟ ಪುಟ್ಟ ಪ್ರಬಂಧಗಳಿವೆ. ಚೆನ್ನಾಗಿ ಓದಿಸಿಕೊಂಡೂ ಹೋಗುತ್ತದೆ. ೫ ಪೈಸೆಯನ್ನು ಒಂದೊಂದು ಪೈಸೆಯಾಗಿ ವಿಂಗಡಿಸಿ ಒಂದೊಂದರ ಅಡಿಯಲ್ಲಿ ೪-೬ ಪ್ರಬಂಧಗಳು ಬರುವಂತೆ ಮಾಡಿದ್ದಾರೆ.
ಪ್ರತಿಯೊಬ್ಬರ ಜೀವನದಲ್ಲಿ ಬರುವ ಘಟನೆಗಳನ್ನೇ ಕೆಲವು ಪ್ರಬಂಧಗಳಾಗಿ ಬರೆದಿದ್ದಾರೆ. 'ಚುಕ್ಕಿ ಬಾಳೆಹಣ್ಣು' ಎಂಬುದು ಮೊದಲ ಪ್ರಬಂಧ. ಮಾಮೂಲಿ ಹಸಿರು ಬಾಳೆಹಣ್ಣು ಅಥವಾ ಕ್ಯಾವಂಡೀಶ್ ಹಣ್ಣು ಸ್ವಲ್ಪ ಅಧಿಕ ಹಣ್ಣಾದ ನಂತರ ಅದರ ಹೊರ ಮೈ ಮೇಲೆ ಕಪ್ಪಾದ ಸಣ್ಣ ಸಣ್ಣ ಚುಕ್ಕಿಗಳು ಕಂಡು ಬರುತ್ತವೆ. ಅವನ್ನೇ ಚುಕ್ಕಿ ಬಾಳೆ ಹಣ್ಣು…