ವಿಧ: ಬ್ಲಾಗ್ ಬರಹ
May 20, 2018
ಅಂದ ಚಂದದ ಬಂಡಿ ನವರಸದ ಬಂಡಿ
ಮೈಮರೆಸಿ ಕಣ್ತಣಿಸಿ ಚಿಮ್ಮಿ ಹಾರುವ ಬಂಡಿ |
ಬಂಡಿ ತಾ ಓಡುವುದು ತನ್ನಿಚ್ಛೆಯಿಂದಲ್ಲ
ಬಂಡಿಯೋಡುವುದು ನಿನಗಾಗಿ ಮೂಢ ||
ವಿಧ: ಬ್ಲಾಗ್ ಬರಹ
May 16, 2018
ಕುಜನ ಮರ್ದನಕಾಗಿ ಸುಜನ ರಕ್ಷಣೆಗಾಗಿ
ದೇವ ಬಂದಾನೆಂದು ಕಾತರಿಸಿ ಕಾಯುವರು |
ಎಂದೆಂದು ಇರುವವನು ಹೊಸದಾಗಿ ಬರುವನೆ
ಅವನೆ ನಿನ್ನೊಳಗಿಹನು ಕಾಣು ಮೂಢ ||
ವಿಧ: ಬ್ಲಾಗ್ ಬರಹ
May 14, 2018
ಸಮಾಧಾನದಲಿ ತಿಳಿಯಹೇಳಲು ಬೇಕು
ದಾನವನು ನೀಡಿ ದಾರಿಗೆಳೆತರಲು ಬೇಕು |
ಮಂತ್ರ ತಂತ್ರವ ಹೂಡಿ ಬಗ್ಗಿಸಲು ಬೇಕು
ಜಗ್ಗದಿರೆ ದಂಡವಿದೆ ಎತ್ತಿಕೋ ಮೂಢ ||
ವಿಧ: ಬ್ಲಾಗ್ ಬರಹ
May 09, 2018
ಸಿಕ್ಕಿರುವ ಬಂಡಿಯನು ಸೊಗದಿಂದ ಬಳಸಿರಲು
ತಲುಪಬೇಕಿರುವೆಡೆಗೆ ತಲುಪುವೆಯೊ ನೀನು |
ಬಂಡಿ ಹೋದೆಡೆಯಲ್ಲಿ ಹೋದೆಯಾದರೆ ಕೆಟ್ಟೆ
ಬಿದ್ದರೆದ್ದೇಳುವುದು ಕಷ್ಟವೋ ಮೂಢ ||
ವಿಧ: ಬ್ಲಾಗ್ ಬರಹ
May 07, 2018
ಕೊಟ್ಟಿಹನು ಪರಮಾತ್ಮ ಬಣ್ಣ ಬಣ್ಣದ ಬಂಡಿ
ಚಣಚಣಕು ಹೊಸ ಮಿರುಗು ಮೆರುಗಿನಾ ಬಂಡಿ |
ಬಂಡಿಗೊಡೆಯನೆ ನೀನು ಬಂಡಿ ನೀನಲ್ಲ
ದಿಕ್ಕು ದೆಸೆಯಿರದೆ ಓಡದಿರು ಮೂಢ ||
ವಿಧ: ಬ್ಲಾಗ್ ಬರಹ
May 04, 2018
ಗೊತ್ತು ಗುರಿಯಿರದೆ ನಡೆದಿರಲು ಬಂಡಿ
ಗುರಿಯು ಮರೆಯಾಗಿ ಕೊರಗುವೆಯೊ ಕೊನೆಗೆ |
ಒಡೆಯ ತಾ ಮಲಗಿರಲು ಬಂಡಿ ಮಾಡೀತೇನು
ಗುಂಡಿಗೊಟರಲಿ ಬಿದ್ದು ನರಳುವೆಯೊ ಮೂಢ ||
ವಿಧ: ಬ್ಲಾಗ್ ಬರಹ
May 02, 2018
ತಿಳಿದಿರದ ಹಾದಿಯಲಿ ಸಾಗಿಹುದು ಬಂಡಿ
ಹಿಂದೆನಿತು ಬಂಡಿಗಳೊ ಲೆಕ್ಕವಿಟ್ಟವರ್ಯಾರು |
ಪಯಣವದು ಮುಗಿಯದಿರೆ ಮುಂದೆನಿತೊ ಬಂಡಿಗಳು
ಒಳ್ಳೆಯ ಹಾದಿಯಲಿ ಸಾಗು ನೀ ಮೂಢ ||
ವಿಧ: ಬ್ಲಾಗ್ ಬರಹ
May 01, 2018
ಅರಮನೆಯ ಅಂಗಳದವನು
ಕೆಸರ ಹೊಲಕ್ಕೆ ಕಾಲಿಡುವನೆ!
ನಳನಳಿಸುವ ಕಳೆಯ ಕಿತ್ತು
ಪೈರುಗಳಾರೈಕೆ ಮಾಡುವನೆ!
ಬೆಳೆದ ಬೆಳೆಯ ಚೈತನ್ಯ ಹೀರುವನೆ!
ಆದರಿವನೋ...
ಅಮೃತ ಮಹಲಿನಿಂದ ನಿವೃತ್ತಿಗೊಂಡು
ತನ್ನೊಳಗ ಹೊಲದಲ್ಲೆ ಕೃಷಿಮಾಡಿದವನು?!
ಹೆಪ್ಪುಗಟ್ಟಿದ್ದ ನಂಬಿಕೆಗಳ
ದ್ರವಿಸಿ ದೂರಿಸಿ
ಮೌಢ್ಯ ಕಳೆಗಳ ಬೇರ ಕಳಚಿ
ಕಳೆತು ರೈತನಾದವನು!
ಚಿತ್ತಕ್ಕೆ ಚಿಂತನೆಯ ನೀರ
ನಿರಂತರ ಹನಿಸಿ
ಬಿಸಿಯುಣಿಸಿ ನಿಷ್ಠುರ ಸತ್ಯ
ಬೆಳೆವ ಕೃಷಿಕನಾದವನು
ಬೆಳೆದ ಚಿಂತನೆಯ ಬೆಳೆಯ
ಬಳಿ ಬಂದವರ ಹೊಲಗಳಿಗೆರಚಿ
ವಿಸ್ತರದ ಬಿತ್ತನೆಗೆ…
ವಿಧ: ಬ್ಲಾಗ್ ಬರಹ
April 30, 2018
ಎಲ್ಲಿಂದ ಹೊರಟಿಹುದೊ ತಲುಪುವುದು ಎಲ್ಲಿಗೋ
ಅನವರತ ಸಾಗಿರುವ ಗೊತ್ತಿರದ ಪಯಣ |
ನಿಲ್ಲದೀ ಪಯಣಕೆ ಬಂಡಿಗಳು ಹಲವು
ಬಂಡವಾಳಕೆ ತಕ್ಕ ಬಂಡಿಯಿದೆ ಮೂಢ ||
ವಿಧ: ಬ್ಲಾಗ್ ಬರಹ
April 28, 2018
ನಾವು ಹೆಣೆಯುವ ಕಥೆಗೆ ನಾವೆ ನಾಯಕರು
ನಮಗಿಂತ ಉತ್ತಮರು ಬೇರಾರು ಇಹರು |
ಹೊಗಳಿಕೊಳ್ಳುವ ರೋಗಕೆಲ್ಲಿಹುದು ಮದ್ದು
ನಗುವವರ ಎದುರಿನಲಿ ಬೀಳದಿರು ಮೂಢ ||
-ಕ.ವೆಂ.ನಾ.